ಕೈಯಲ್ಲಿದ್ದ ಫೈಲ್ ತೆಗೆದುಕೊಂಡು ಹೊರಗೆ ಬಂದಾಗ ಸೋಫಾದ ಮೇಲೆ ಅಲ್ಲೆಲ್ಲೋ ಮುಖ ಮಾಡಿ ಕೂತಿರುವ ಅಮ್ಮನನ್ನು ನೋಡಲು, ಮನದೊಳಗೆ ಸಂಕಟ, ನನ್ನ ನೋವಿನ ಮಧ್ಯೆ ಅಮ್ಮನನ್ನು ಮರೆತೆ ಬಿಟ್ಟಿದ್ದೆ ಎನ್ನುವ ಭಾವ ರಚನಾಳಿಗೆ ತಪ್ಪಿತಸ್ಥ ಭಾವ ತುಂಬಾ ಕಾಡಿತು. ಅರ್ಚನಾ ರವಿ ಅವರ ಅಪ್ಪಾ… ಅಪ್ಪಾ… ನೀನು ಬೇಕಪ್ಪಾ ಮುಂದುವರಿದ ಭಾಗ, ತಪ್ಪದೆ ಮುಂದೆ ಓದಿ…
ಹಣೆಯಲ್ಲಿ ಮೊದಲಿದ್ದ ಹಾಗೇ ದೊಡ್ಡ ಕುಂಕುಮವಿಲ್ಲ, ಕೈ ತುಂಬಾ ಬಳೆ ಅದರ ನಾದ ನೀನಾದವಿಲ್ಲ. ಅವಳ ಮುಖದಲ್ಲಿ ಯಾವಾಗಲೂ ಇರುತ್ತಿದ್ದ ಮಾಸದ ಮುಗುಳ್ನಗೆ ಮರೆಯಾಗಿದ್ದು ಗಮನಿಸಿದ ಮರುಕ್ಷಣ ರಚನಾಳಿಗೆ ಅನಿಸಿದ್ದು.
“ನಾನು ನನ್ನದೇ ಯೋಚನೆಯಲ್ಲಿ ಇದು ಹೇಗೆ ಮರೆತುಬಿಟ್ಟೆ. ಅಮ್ಮನಿಗೆ ಅಪ್ಪ ಬದುಕಿನ ಸರ್ವಸ್ವ, ಅವಳ ಅಸ್ತಿತ್ವ ಅಪ್ಪಾ, ಅವಳ ಅಸ್ತಿತ್ವವೇ ಅವಳಿಂದ ದೂರ ಹೋಗಿ, ಈಗ ಬದುಕೇ ಅಂಧಕಾರದಲ್ಲಿ ಧೂಡುವಂತಾಗಿದೆ. ಬರಿ ಅಪ್ಪನ ಬಗ್ಗೆ ಯೋಚಿಸುತ, ಅಮ್ಮನನ್ನು ಮರೆತಿದ್ದು ದೊಡ್ಡ ತಪ್ಪು. ಅಮ್ಮನನ್ನು ಪ್ರೀತಿಯಿಂದ ನೋಡಿಕೊಳ್ಳುವುದು ನನ್ನ ಕರ್ತವ್ಯ ಅಲ್ಲ. ಅಲ್ಲ ಯಾವಾಗಲೂ ಅಪ್ಪ ಅಮ್ಮನ ನೋಡಿಕೊಳ್ಳುವುದು ಕರ್ತವ್ಯ ಅಂದುಕೊಳ್ಳಬಾರದು ಅದೊಂದು ಭಾವ. ಕರುಳಿನ ಸಂಬಂಧ ಕರ್ತವ್ಯ ಅನ್ನುವುದಕ್ಕಿಂತ ನಮ್ಮದೇ ಬದುಕನ್ನು ಮತ್ತೆ ಪ್ರೀತಿಸುವುದು ಆ ಬದುಕು ನನ್ನ ತಂದೆ ತಾಯಿ ಇನ್ನು ಮುಂದೆ ಅಮ್ಮ…”ಅಲ್ಲೇ ಬಾಗಿಲ ಬಳಿ ನಿಂತುಕೊಂಡು ಅವಳ ಮುಂದಿನ ಬದುಕಿನ ಮಂಥನ ಮಾಡುತ್ತಲೇ ಇದ್ದಳು. ಅವಳಿಗೂ ಅಷ್ಟು ಸುಲಭವಲ್ಲ ಜೀವ ಜೀವನ ಎಂದುಕೊಂಡಿರುವ ಅಪ್ಪನನ್ನು ಮರೆಯುವುದು.
ಒಂದೊಂದು ಹೆಜ್ಜೆ ನಡೆಯುವಾಗಲು ನೆನಪಾಗಿದ್ದು ಅಪ್ಪ ಅಮ್ಮನ ಸುಂದರ ಪ್ರೇಮ ಕಾವ್ಯ”ಎಲ್ಲರೂ ಹೇಳುತ್ತಾರೆ ಪ್ರೀತಿ ಅಂದ್ರೆ ಲೈಲಾ ಮಜ್ನು, ರೋಮಿಯೋ ಜೂಲಿಯೆಟ್, ಪಾರು ದೇವದಾಸ್. ಆದರೆ ಅವರೆಲ್ಲರೂ ನಮ್ಮ ಕಾಲ್ಪನಿಕ ಕಥೆಯಲ್ಲಿ ಅಷ್ಟೇ..!! ಆದ್ರೆ ನಿಜವಾದ ಪ್ರೇಮ ನಮ್ಮ ಕಣ್ಣ ಮುಂದೆ ಇರುತ್ತದೆ ಅದೇ ಅಪ್ಪ ಅಮ್ಮನ ಅಪರಿಮಿತ ಪ್ರೀತಿ.
ಯಾವ ಪ್ರೀತಿ ಕೂಡ ಅವರಿಬ್ಬರ ಪ್ರೀತಿ ಮುಂದೆ ದೊಡ್ಡದಲ್ಲ. ಯಾರಾದರೂ ನಿನಗೆ ನಿಜವಾಗಲೂ ಅದ್ಭುತ ಪ್ರೇಮಿಗಳು ಯಾರಾದರೂ ಈ ಭೂಮಿ ಮೇಲಿದ್ದಾರ ಅಂತ ಕೇಳಿದ್ರೆ ನಾನು ಹೇಳೋದು ವಿಶ್ವನಾಥ್ ಜಾನಕಿ ಅಂತನೇ.
ಅಮ್ಮನ ಹುಟ್ಟಿದ ಹಬ್ಬಕ್ಕೆ ಅಪ್ಪ ಅದೆಷ್ಟು ಆಸೆಯಿಂದ ಸ್ವೀಟ್ ತಯಾರಿ ಮಾಡ್ತಾ ಇದ್ರು. ಅಮ್ಮನಿಗೆ ಬೆಲ್ಲದಮಣಿ ತುಂಬಾ ಇಷ್ಟ ಅಂತ ಅದೆನೇ ಕೆಲಸ ಇದ್ರು ಅದೆಲ್ಲಾ ಕೆಲಸ ಅವತ್ತು ಒಂದು ದಿನ ಮಟ್ಟಿಗೆ ಬದಿಗೆ ಒತ್ತಿ ಆ ದಿನ ಬರಿ ಅಮ್ಮನಿಗಾಗಿ ಮೀಸಲು ಇದೆಲ್ಲಾ ತಿಳಿದಿದ್ದು ನನಗೆ ಸ್ವಲ್ಪ ಬುದ್ಧಿ ಬಂದಮೇಲೆ…”ನಿಧಾನವಾಗಿ ಅಮ್ಮನ ಪಕ್ಕ ಕೂತು ಅಮ್ಮನ ಹೆಗ್ಗಲ ಮೇಲೆ ಕೈ ಇಟ್ಟಿದ್ದಳು.
ಅಲ್ಲಿ ತನಕ ಎಲ್ಲೋ ಕಳೆದೆ ಹೋಗಿದ್ದ ಜಾನಕಿಯವರು ವಾಸ್ತವಕ್ಕೆ ಬಂದಿದ್ದರು. ಸ್ವಲ್ಪ ನಿಮಿಷದ ಕೆಳಗೆ ಜಾನಕಿಯವರು ರೂಮಿಗೆ ಬಂದಾಗ ಅಪ್ಪನ ಶರ್ಟ್ ಹಾಕಿಕೊಂಡು ಮಲಗಿರುವ ಮಗಳನ್ನು ನೋಡಿ ಸಂಕಟ ಅಲ್ಲಿಂದ ಅಳುತ್ತಲೇ ಹೊರಗೆ ಬಂದಿದ್ದರು…
ಒಮ್ಮೆ ಪ್ರೀತಿಯಿಂದ “ಏನಾಯ್ತು ಪುಟ್ಟಮ್ಮ…?”ಅಂದಾಗ ಜಾನಕಿಯವರು ಹೇಳಿದ ಮಾತು ಕೇಳಲಿಲ್ಲ.
ಅರ್ಥವಾಗದೆ ಅಮ್ಮನ ಮುಖ ನೋಡುವುದು ನೋಡಿ ಅವಳ ಕಿವಿ ಹತ್ತಿರ ಬಾಗಿ ನೋಡಿದರು ಇಯರ್ ಮಿಷಿನ್ ಹಾಕಿಕೊಂಡಿರಲಿಲ್ಲ. ಒಮ್ಮೆ ಹಣೆ ಒತ್ತಿಕೊಂಡು, ರೂಮಿಗೆ ಹೋಗಿ ಅಲ್ಲಿದ ಮಿಷೀನ್ ತಂದು ಅವಳ ಕಿವಿಗೆ ಹಾಕಿ…
“ನಾ ಮಾತಾಡೋದು ಕೇಳಿಸ್ತಿದ್ಯಾ, ಪುಟ್ಟಮ್ಮ…?” ಅಂದ ಮರುಕ್ಷಣವೇ ಅಮ್ಮನನ್ನು ತಬ್ಬಿಕೊಂಡು ಜೋರಾಗಿ ಅಳಲು ಶುರು ಮಾಡಿದಳು.
“ನೋಡು ಪುಟ್ಟಮ್ಮ ಇಲ್ಲಿ ಇದು ವಾಸ್ತವ ಕಹಿ ಸತ್ಯ ನಿನ್ನ ಅಪ್ಪ ಹೇಳಿದ ಹಾಗೆ ನನಗೆ ಬುದ್ಧಿ ಹೇಳೋಕೆ ಬರಲ್ಲ. ಈ ವಾಸ್ತವನ ಒಪ್ಪಿಕೋ. ಮುಂದೆ ನಿನ್ನ ಬದುಕು ಈ ಜಗದ ಧ್ವನಿ ನಿಂತಿರುವುದೇ ಈ ಮಿಷೀನ್ ಮೇಲೆ ಅಮ್ಮನ ಮಾತು ಕೇಳಿಸ್ಕೊಂಬೇಕು ಅಲ್ವಾ…? ನಿನ್ನ ಸ್ವಲ್ಪ ನಿರ್ಲಕ್ಷ ಪೂರ್ತಿ ಕಿವಿ ನಿನ್ನಿಂದ ದೂರ ಹೋಗುತ್ತೆ ಆಗ ಅಮ್ಮನ ಧ್ವನಿ ಕೇಳಕ್ಕಾಗಲ್ಲ…”
“ಇಲ್ಲ ನನಗೆ ಮರೆತೆ ಹೋಯ್ತು ಇನ್ಮೇಲೆ ದಿನ ಹಾಕೊಂತೀನಿ.”
“ನಿನ್ನ ಕಿವಿಯಲ್ಲಿ ಟಿನ್ ಶೂಸ್ (ಕಿವಿಯೊಳಗೆ ಶಬ್ದ) ಕಮ್ಮಿ ಆಗಬೇಕು ಅಂದ್ರು ಇದನ್ನ ಹಾಕ್ಕೊಂಡೆ ಇರ್ಬೇಕು.”ಅಮ್ಮನ ಎಲ್ಲ ಮಾತಿಗೂ ತಲೆ ಆಡಿಸಿದ್ದಳು.
“ಅಮ್ಮ ಅಪ್ಪನ ರೂಮಲ್ಲಿ ಈ ಫೈಲ್ ಇತ್ತು..”ಜಾನಕಿ ಅವರ ಕೈಗೆ ಕೊಟ್ಟಾಗ ವಿಶ್ವನಾಥ್ ಅವರು ಮತ್ತೆ ನೆನಪಾದರು. ಅದೆಷ್ಟು ಮುಂದಾಲೋಚನೆ ಅವರಲ್ಲಿ ಭವಿಷ್ಯದ ಕನಸುಗಳು ತುಂಬಾ ಕಟ್ಟಿದರು.
ಆ ಫೈಲ್ ಓಪನ್ ಮಾಡಿದಾಗ ಅವರ ಮನೆ ಕಂದಾಯದ ಬಿಲ್, ವಾಟರ್ ಬಿಲ್, ಮನೆ ಪತ್ರ ಅಂಗಡಿ ಪತ್ರ, ಹೆಚ್ಚು ಕಮ್ಮಿ 20 ವರ್ಷದಿಂದ ಕಟ್ಟುತ್ತಾ ಬಂದ ಇನ್ಸೂರೆನ್ಸ್. ಬ್ಯಾಂಕಲ್ಲಿ 5 ಲಕ್ಷದ ಎರಡು ಎಫ್ ಡಿ… ಅದನ್ನೆಲ್ಲ ನೋಡಿ ಆ ಫೈಲ್ ಅನ್ನು ಎದೆಗೆ ಒತ್ತಿಕೊಂಡು ಜೋರಾಗಿ ಅಳಲು ಶುರು ಮಾಡಿದರೂ ಜಾನಕಿಯವರು ಸಿಟ್ಟು ಬಂದಾಗೆಲ್ಲ “ಕಂಜೂಸ್ ವಿಶ್ವ”ಹೀಗೆ ಕರೆದು ಗೋಳು ಹೊಯ್ದುಕೊಳ್ಳುತ್ತಿದ್ದು ನೆನಪಾಗಿತ್ತು.
ವಿಶ್ವನಾಥ್ ಅವರು ಒಂದು ಬೈಕ್ ಕೂಡ ತೆಗೆದುಕೊಂಡಿರಲಿಲ್ಲ. ಅದೆಷ್ಟೋ ಬಾರಿ ಆತ್ಮೀಯರಿಂದ ಅಪಹಸ್ಯಕ್ಕೂ ಗುರಿಯಾಗಿದ್ದರು ಕಂಜೂಸ್ ಎಂದು. ಆದರೆ ಅವರಿಗೆ ಭವಿಷ್ಯದ ಭದ್ರ ಬುನಾದಿ ಹಾಕುವ ಯೋಚನೆ…
ಅಪ್ಪನ ಪ್ರೀತಿಯೇ ಹಾಗೆ ಅಪರಿಮಿತ ಎಲ್ಲೂ ತೋರ್ಪಡಿಸುವುದಿಲ್ಲ ಆದರೆ ಪ್ರತಿದಿನ ನಮ್ಮ ಬದುಕಿನ ಬುನಾದಿ ನಮಗಾಗಿ ಭವಿಷ್ಯಕ್ಕಾಗಿ ಹೋರಾಟ ಮಾಡುತ್ತಲೇ ಇರುತ್ತಾರೆ..
ಹಿಂದಿನ ಸಂಚಿಕೆಗಳು :
- ಅಪ್ಪಾ… ಅಪ್ಪಾ… ನೀನು ಬೇಕಪ್ಪಾ (ಭಾಗ-೧)
- ಅಪ್ಪಾ… ಅಪ್ಪಾ… ನೀನು ಬೇಕಪ್ಪಾ (ಭಾಗ-೨)
- ಅಪ್ಪಾ… ಅಪ್ಪಾ… ನೀನು ಬೇಕಪ್ಪಾ (ಭಾಗ-೩)
- ಅರ್ಚನಾ ರವಿ
