‘ಸಾವು’ ಪುಸ್ತಕ ಪರಿಚಯ – ಮಾಕೋನಹಳ್ಳಿ ವಿನಯ್‌ ಮಾಧವ

‘ಆಂಬ್ಯುಲೆನ್ಸ್‌ ಹೊರಡುವ ಸಮಯ, ಕೊನೆ ಬಾರಿಗೆ ವಿನಯ್‌ ನನ್ನು ಒಳಗೆ ಹೋಗಿ ಮಾತನಾಡಿಸಿದೆ. ನಾನು ಇಳಿದು ಆಂಬುಲೆನ್ಸ್‌ ಬಾಗಿಲು ಹಾಕುವ ಸಮಯದಲ್ಲಿ ವಿನಯ್‌ ಕಣ್ಣಿನಲ್ಲಿ ಕರೆದಂತೆ ಭಾಸವಾಯಿತು. ಮತ್ತೆ ನೋಡಿದರೆ, ನನ್ನನ್ನೇ ನೋಡುತ್ತಾ ಏನೋ ಸನ್ನೆ ಮಾಡುತ್ತಿದ್ದ. ಇನ್ನು ನೋಡಲಾಗದೆ, ತಿರುಗಿ ನಿಂತೆ. ಮಾರನೇ ದಿನ ಗೊತ್ತಾಯಿತು… ವಿನಯ್‌ ಊರು ತಲುಪುವವರೆಗೆ ಬದುಕಿರಲಿಲ್ಲ ಅಂತ’….ಕಾದಂಬರಿಕಾರ ಜೋಗಿ ಅವರ ಹೊಸ ಕಾದಂಬರಿ ‘ಸಾವು’ ಪುಸ್ತಕದ ಕುರಿತು ಲೇಖಕ, ಪತ್ರಕರ್ತ ಮಾಕೋನಹಳ್ಳಿ ವಿನಯ್‌ ಮಾಧವ ಅವರು ಬರೆದ ಪರಿಚಯ ತಪ್ಪದೆ ಓದಿ…

ಸಾವೆಂಬ ಜಿಜ್ಞಾಸೆ, ತತ್ವಜ್ಞಾನ, ಶೃಂಗಾರ ಕಾವ್ಯ ಹಾಗೂ THE ART OF DYING

ʻನಿನ್ನ ಆಯಸ್ಸು ಮೂವತ್ತು ವರ್ಷ ಮಾತ್ರ ಕಣೋ. ಮೂವತ್ತನೇ ಬರ್ತ್‌ ಡೇ ದಿನ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ಬಿದ್ದಿರ್ತೀಯಾ. ಸೇದಿ, ಸೇದಿ ಸಾಯ್ತಿಯ,ʼ ಅಂತ ಪಕ್ಕದಲ್ಲಿ ಮಲಗಿದ್ದ ವಿನಯ್‌ ಹೇಳಿದಾಗ, ಇನ್ನೊಂದು ದಮ್‌ ಜೋರಾಗಿ ಎಳೆದು ಹೊಗೆ ಹೊರಗೆ ಬಿಟ್ಟೆ.

ʻನೋಡಲ್ಲಿ… ಒಂದು ಚೂರಾದ್ರೂ ಹೊಗೆ ಹೊರಗೆ ಬಂತಾ ಮಾರಾಯ? ಇವನು ಸೇದೋದು ನೋಡಿದ್ರೆ, ನನಗೂ ಸೇದಬೇಕು ಅಂತ ಅನ್ನಿಸುತ್ತೆ. ಅಷ್ಟು ಎಂಜಾಯ್‌ ಮಾಡ್ತಾನೆ. ನೀನು ಸಾಯ್ತಿಯ ಕಣೋ,ʼ ಎಂದಾಗ ನಾನು ಮುಸಿ ಮುಸಿ ನಕ್ಕೆ.

ತೊಂಬತ್ತರ ದಶಕದ ಆದಿ. ಬೆಂಗಳೂರಿಗೆ ಬಂದ ಹೊಸತು. ಹೆಬ್ಬಾಳದ ಸಮೀಪದ ಚೋಳನಾಯಕನ ಹಳ್ಳಿಯಲ್ಲಿ ನಾನು, ವಿನಯ್‌ ಸೇರಿದಂತೆ ಹಲವರು ಒಂದೇ ಮನೆಯಲ್ಲಿದ್ದೆವು. ಸಕಲೇಶಪುರದ ಹತ್ತಿರ ಮದನಾಪುರದ ವಿನಯ್‌ ಮತ್ತು ನಾನು ಕಾರ್ಕಳದಲ್ಲಿ ಒಟ್ಟಿಗೇ ಓದಿದವರು. ಅಲ್ಲಿಂದ ವಿನಯ್‌ ಮಂಗಳೂರಿಗೆ ಹೋದರೆ, ನಾನು ಉಡುಪಿಗೆ ಹೋಗಿದ್ದೆ. ಸ್ನೇಹ ಮುಂದುವರೆದಿತ್ತು. ಬೆಂಗಳೂರಿಗೆ ಬಂದಾಗದ, ವಿನಯ್‌ ಇದ್ದ ಮನೆಗೆ ಹೋಗಿ ಸೇರಿಕೊಂಡೆ.

ಎಲ್ಲರೂ ಅವನನ್ನು ಲಂಬೂ ವಿನಯ್‌ ಎಂದೂ, ನನ್ನನ್ನು ಕುಳ್ಳ ವಿನಯ್‌ ಎಂದೂ ಕರೆಯುತ್ತಿದ್ದರು. ವಿನಯ್‌ ನನಗಿಂತ ಎರಡು ಇಂಚು ಎತ್ತರವಿದ್ದು, ಆರಡಿಯ ಸಧೃಡ ಆಳು. ವಯಸ್ಸಿನಲ್ಲೂ ಎರಡು-ಮೂರು ವರ್ಷ ದೊಡ್ಡವನು. ನಾನು ಬೆಂಗಳೂರಿಗೆ ಬಂದ ಎರಡೇ ವರ್ಷದಲ್ಲಿ ವಿನಯ್‌ ಊರಿಗೆ ಹೋಗಲೇ ಬೇಕಾಯಿತು. ಆದರೆ ಇಬ್ಬರ ಸಂಬಂಧ ಹಾಗೆಯೇ ಇತ್ತು. ಅವನ ಚಿಕ್ಕಮ್ಮನ ಮಕ್ಕಳಾದ ಸಚಿನ್‌ ಮತ್ತು ಸಂತೋಷ್‌ ನನಗೆ ಪರಿಚಯವಾದ್ದರಿಂದ, ಮೊಬೈಲ್‌ ಇಲ್ಲದ ಕಾಲದಲ್ಲಿ ನಮ್ಮಿಬ್ಬರ ಸಂಪರ್ಕ ನಿರಾಂತಕವಾಗಿ ಮುಂದುವರೆದಿತ್ತು.
ನಾನು ಬೆಂಗಳೂರಿನಲ್ಲೇ ಇದ್ದುಕೊಂಡು, ಪತ್ರಿಕೋದ್ಯಮಕ್ಕೆ ಕಾಲಿಡಲು ತಯಾರಿ ನಡೆಸುವ ಕಾಲ. ಒಂದು ದಿನ ರಾತ್ರಿ ಮನೆಯ ಹತ್ತಿರ ಅಂಗಡಿ ಇಟ್ಟಿದ್ದ ಕನಕರಾಜ್‌ ಬಂದು, ʻನಿಮಗೆ ಸಂತೋಷ್‌ ಎನ್ನುವವರ ಫೋನ್‌ ಇತ್ತು. ಯಾರೋ ಸಕಲೇಶಪುರದ ವಿನಯ್‌ ಅಂತೆ. ಮಣಿಪಾಲ್‌ ಆಸ್ಪತ್ರೆಯಲ್ಲಿ ಅಡ್ಮಿಟ್‌ ಆಗಿದ್ದಾರಂತೆ,ʼ ಎಂದು ಹೇಳಿದರು.

ಅಂದು ಸಾಯಂಕಾಲ ನ್ಯೂಸ್‌ ಕೇಳುವಾಗ, ಸಕಲೇಶಪುರದಲ್ಲಿ ಗೋಲಿಬಾರ್‌ ಆಗಿ, ಒಂದಿಬ್ಬರು ಸತ್ತು ಹೋಗಿದ್ದರು ಅಂತ ಕೇಳಿದ್ದೆ. ಅದರ ಮಧ್ಯೆ ಇವನಿಗೇನಾದರೂ ಗುಂಡು ತಾಗಿತ್ತೇ? ಎನ್ನುವ ಅನುಮಾನ ಕಾಡತೊಡಗಿತು. ತಕ್ಷಣವೇ ಕನಕರಾಜ್‌ ಅಂಗಡಿಗೆ ಹೋಗಿ, ಮಣಿಪಾಲ್‌ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಡಾ ದಿನೇಶ್‌ ಅವರಿಗೆ ಫೋನ್‌ ಮಾಡಿದೆ. ಅವರು ರಾತ್ರಿ ಪಾಳಿಯಲ್ಲಿದ್ದಾರೆ ಎಂದು ಮನೆಯಲ್ಲಿ ಹೇಳಿದರಿಂದ, ಒಳ್ಳೆಯದೇ ಆಯಿತು ಎಂದುಕೊಂಡು ಆಸ್ಪತ್ರೆಗೆ ಹೋಗಿ ಅವರನ್ನು ಸಂಪರ್ಕಿಸಿದೆ. ಅವರು ನನ್ನನ್ನು ವಿನಯ್‌ ಇದ್ದ ವಾರ್ಡಿಗೆ ಕರೆದುಕೊಂಡು ಹೋದರು.

ಒಳಗೆ ಹೋದ ನಾನು, ವಿನಯ್‌ ನನ್ನು ಮಾತನಾಡಿಸಿ, ʻಏನಾಯ್ತು?ʼ ಅಂತ ಸಂತೋಷ್‌ ನನ್ನು ಕೇಳಿದೆ. ʻಅಲ್ಸರ್‌, ಆಪರೇಷನ್‌ ಆಗಿದೆ,ʼ ಎಂದ ಸಂತೋಷ್. ಅಷ್ಟರಲ್ಲಿ, ವಿನಯ್‌ ಮೆಡಿಕಲ್‌ ರಿಪೋರ್ಟ್‌ ನೋಡುತ್ತಿದ್ದ ಡಾ ದಿನೇಶ್‌ ಗಂಭೀರವಾಗಿ ನನ್ನ ಮುಖ ನೋಡುತ್ತಿದ್ದರು.

ಏನು? ಎನ್ನುವಂತೆ ಅವರ ಮುಖ ನೋಡಿದೆ. ಸಂತೋಷ್‌ ಮುಖವನ್ನೊಮ್ಮೆ ನೋಡಿದ ಡಾ ದಿನೇಶ್‌, ʻಕ್ಯಾನ್ಸರ್. ಅವನ ಜಠರ ತೆಗೆದಿದ್ದಾರೆ,ʼ ಎಂದು ತಣ್ಣಗೆ ಹೇಳಿದರು. ಅಲ್ಲೇ ಪಕ್ಕದ ಕುರ್ಚಿ ಮೇಲೆ ಕುಸಿದು ಕುಳಿತೆ. ಹದಿನೈದು ವರ್ಷದ ಸ್ನೇಹ. ಅಷ್ಟು ವರ್ಷಗಳ ತುಂಟಾಟ, ನಗು, ಜಗಳ ಎಲ್ಲಾ ಒಟ್ಟಿಗೆ ನೆನಪಾಯಿತು.

ಸುಧಾರಿಸಿಕೊಂಡು, ʻಈಗ ತೊಂದರೆ ಇಲ್ಲವಾ?ʼ ಎಂದು ಡಾ ದಿನೇಶ್‌ ಅವರನ್ನು ಕೇಳಿದೆ.

ನಕಾರಾತ್ಮಕವಾಗಿ ತಲೆ ಅಲ್ಲಾಡಿಸಿದ ಡಾ ದಿನೇಶ್‌, ʻಕಿದ್ವಾಯಿಯಲ್ಲಿ ಡಾ ಶೇಕೋನ್‌ ಅಂತ ಇದ್ದಾರೆ. ಆಕೆ ಈ ಕ್ಯಾನ್ಸರ್‌ ನ ಸ್ಪೆಷಲಿಸ್ಟ್. ನಾಳೆ ಈ ರಿಪೋರ್ಟ್‌ ತೆಗೆದುಕೊಂಡು ಹೋಗಿ ಅವರಿಗೆ ತೋರಿಸು. ನಾನು ಹೇಳಿರುತ್ತೇನೆ,ʼ ಎಂದರು. ಮುಂದೆ ನಡೆದದ್ದು ಒಂದು ಕನಸಿನಂತಿತ್ತು. ʻಜಠರವನ್ನೇ ಕತ್ತರಿಸಿದ ಮೇಲೆ, ಪಚನ ಕ್ರಿಯೆ ಹೇಗೆ ನಡೆಯುತ್ತದೆ? ಮೊದಲೇ ಇಲ್ಲಿಗೆ ಕರೆದುಕೊಂಡು ಬಂದಿದ್ದರೆ, ಏನು ಮಾಡುವುದು ಎಂದು ಯೋಚಿಸಬಹುದಿತ್ತು. ಆದರೂ ಕಷ್ಟ,ʼಎಂದು ಡಾ ಶೆಕೋನ್‌ ಹೇಳಿದರು. ಇನ್ಯಾರೋ ಹೇಳಿದ್ದನ್ನು ಕೇಳಿ, ಮೈಸೂರಿನಲ್ಲಿದ್ದ ಒಂದು ಆಯುರ್ವೇದ ಆಸ್ಪತ್ರೆಗೂ ಹೋಗಿ ಬಂದೆ.

ಅಂದು ರಾತ್ರಿ ಸಂತೋಷ್‌ ಜೊತೆ ಮಾತನಾಡುವಾಗ ಅವನು ಮೆಲ್ಲಗೆ ಹೇಳಿದ: ʻನಾಳೆ ವಿನಯ್‌ ಬರ್ತ್‌ ಡೇ,ʼ ಅಂತ. ತಕ್ಷಣ ನೆನಪಾಯಿತು. ವಿನಯ್‌ ಗೆ ನಾಳೆ ಮೂವತ್ತು ವರ್ಷ ತುಂಬುತ್ತದೆ ಎಂದು. ಜೀವನದಲ್ಲಿ ಒಂದೂ ಸಿಗರೇಟ್‌ ಸೇದದ, ಅಪರೂಪಕೊಮ್ಮೆ ಬಿಯರ್‌ ಕುಡಿಯುತ್ತಿದ್ದ ವಿನಯ್‌, ತನ್ನ ಮೂವತ್ತನೇ ಹುಟ್ಟಿದ ಹಬ್ಬದ ದಿನ ಕ್ಯಾನ್ಸರ್‌ ಜೊತೆ ಹೋರಾಡುತ್ತಿದ್ದ. ನವ್ಯಾರೂ ಹೇಳದಿದ್ದರೂ, ವಿನಯ್‌ ಗೂ ತನ್ನ ಸಾವಿನ ಸುಳಿವು ಸಿಕ್ಕಿತು ಅಂತ ಕಾಣುತ್ತೆ.

ಒಂದೆರೆಡು ದಿನಗಳಲ್ಲಿ, ʻನನ್ನನ್ನು ಮನೆಗೆ ಕರೆದುಕೊಂಡು ಹೋಗಿ. ನಾನು ಇಲ್ಲಿ ಸಾಯುವುದಿಲ್ಲ,ʼ ಎಂದು ಹಠ ಹಿಡಿದ. ಇಷ್ಟು ವರ್ಷ ಜೊತೆಯಲ್ಲಿದ್ದ ವಿನಯ್‌ ನನ್ನು ಕೊನೆ ಗಳಿಗೆಯಲ್ಲಿ ನೋಡುವ ಧೈರ್ಯ ನನಗೆ ಉಳಿದಿರಲಿಲ್ಲ. ನಾನು ಊರಿಗೆ ಬರುವುದಿಲ್ಲ ಎಂದು ಸಂತೋಷ್‌ ಜೊತೆ ಹೇಳಿದೆ.

ಆಂಬ್ಯುಲೆನ್ಸ್‌ ಹೊರಡುವ ಸಮಯ, ಕೊನೆ ಬಾರಿಗೆ ವಿನಯ್‌ ನನ್ನು ಒಳಗೆ ಹೋಗಿ ಮಾತನಾಡಿಸಿದೆ. ನಾನು ಇಳಿದು ಆಂಬುಲೆನ್ಸ್‌ ಬಾಗಿಲು ಹಾಕುವ ಸಮಯದಲ್ಲಿ ವಿನಯ್‌ ಕಣ್ಣಿನಲ್ಲಿ ಕರೆದಂತೆ ಭಾಸವಾಯಿತು. ಮತ್ತೆ ನೋಡಿದರೆ, ನನ್ನನ್ನೇ ನೋಡುತ್ತಾ ಏನೋ ಸನ್ನೆ ಮಾಡುತ್ತಿದ್ದ. ಇನ್ನು ನೋಡಲಾಗದೆ, ತಿರುಗಿ ನಿಂತೆ. ಮಾರನೇ ದಿನ ಗೊತ್ತಾಯಿತು… ವಿನಯ್‌ ಊರು ತಲುಪುವವರೆಗೆ ಬದುಕಿರಲಿಲ್ಲ ಅಂತ….

ಏಳೆಂಟು ವರ್ಷಗಳ ಕೆಳಗೆ, ಬೆಳಗಾವಿಯಲ್ಲಿ ನಡೆಯುವ ಅಧಿವೇಶನದ ವರದಿಗೆ ನಾನೂ ಹೋಗಿದ್ದೆ. ಬೆಳಗ್ಗೆ ವಾಕಿಂಗ್‌ ಮುಗಿಸಿ ಹೋಟೆಲ್‌ ಗೆ ಬಂದಾಗ, ನಿರಂಜನ್‌ ಕಗ್ಗೆರೆ ಎಳನೀರು ಹಿಡಿದುಕೊಂಡು ಬರುತ್ತಿದ್ದ. ʻಯಾರಿಗೆ?ʼ ಎಂದು ಕೇಳಿದಾಗ, ʻಶಿವುಗೆ (ಎನ್‌ ಡಿ ಶಿವಕುಮಾರ್) ಸರ್. ರಾತ್ರಿಯಿಂದ ಹುಶಾರಿಲ್ಲ. ಆಸ್ಪತ್ರೆಯಲ್ಲಿ ಡ್ರಿಪ್‌ ಹಾಕಿಸಿಕೊಂಡು, ರಾತ್ರಿಯೇ ವಾಪಾಸ್‌ ಬಂದ. ಡಾಕ್ಟರ್‌ ಇರೋಕೆ ಹೇಳಿದ್ರೂ ಕೇಳಲಿಲ್ಲ,ʼ ಎಂದು ಹೇಳಿದ.

ಅವನ ರೂಮಿಗೆ ಹೋಗಿ ನೋಡಿದಾಗ, ಶಿವು ಹೊಟ್ಟೆ ಹಿಡಿದುಕೊಂಡು ನರಳುತ್ತಿದ್ದ. ʻಗ್ಯಾಸ್ಟ್ರಿಕ್‌ ಕಣೋ,ʼ ಎಂದ. ʻಡಾಕ್ಟರ್‌ ಹೇಳಿದ ಮೇಲೆ ರಾತ್ರಿ ಅಲ್ಲೇ ಉಳಿಯೋಕೆ ಏನಾಗಿತ್ತು? ಬರೀ ಆಟ ಆಡ್ತೀರಲ್ಲೋ. ಹತ್ತು ನಿಮಿಷ ಇರು. ಸ್ನಾನ ಮಾಡಿಕೊಂಡು ಬರ್ತೀನಿ. ಆಸ್ಪತ್ರೆಗೆ ಹೋಗೋಣ,ʼ ಎಂದು ಹೇಳಿ ನನ್ನ ರೂಮಿಗೆ ಹೋದೆ. ನಾನು ಸ್ನಾನ ಮಾಡಿ ತಯಾರಾಗುವ ಹೊತ್ತಿಗೆ ಇಪ್ಪತ್ತು ನಿಮಿಷಕ್ಕಿಂತ ಹೆಚ್ಚಾಗಿತ್ತು. ಶಿವು ನರಳಾಟ ಹೆಚ್ಚಾಗಿತ್ತು. ತಕ್ಷಣ ಆಟೋ ತಗೊಂಡು ಬಾ ಅಂತ ನಿರಂಜನ್‌ ಗೆ ಹೇಳಿ, ಶಿವುವನ್ನು ಕರೆದುಕೊಂಡು ಹೊರಟೆ. ಅಷ್ಟರಲ್ಲಿ ವಾರ್ತಾ ಇಲಾಖೆಯ ಪುಟ್ಟಸ್ವಾಮಿಯವರು ಜೀಪ್‌ ತರಿಸಿದ್ದರು.

ಶಿವುವನನ್ನು ಲಿಫ್ಟ್‌ ಗೆ ಕರೆದುಕೊಂಡು ಹೋಗುವುದರಲ್ಲಿ, ನನ್ನ ಕೈಯಿಂದ ಕುಸಿಯಲಾರಂಭಿಸಿದ. ನಾನು ಹಿಡಿದುಕೊಳ್ಳುವುದರೊಳಗೆ ತೇಗಿದಂತ ಶಬ್ದ ಬಂದು, ಶಿವು ಕುಸಿದೇ ಹೋದ.
ಲಿಫ್ಟ್‌ ಕೆಳಗೆ ನಿಂತಾಗ, ಶಿವುವನ್ನು ಒಂದು ಸೋಫಾ ಮೇಲೆ ಮಲಗಿಸಿ, ಎಬ್ಬಿಸಲು ಪ್ರಯತ್ನಿಸಿದೆ. ಅವನು ಪ್ರತಿಕ್ರಿಯೆ ನೀಡದಿದ್ದಾಗ, ನಾವು ಮೂವರೂ ಸೇರಿ ಎತ್ತಿಕೊಂಡು, ಜೀಪಿನಲ್ಲಿ ಹಾಕಿಕೊಂಡು, ಆಸ್ಪತ್ರೆಗೆ ದೌಡಾಯಿಸಿದೆವು. ಇಸಿಜಿ ಹಾಕಿದಾಗಲೇ ಗೊತ್ತಾಯಿತು, ಶಿವು ಇನ್ನಿಲ್ಲ ಎಂದು.

ಈ ಎರಡೂ ಸಾವುಗಳು ನನ್ನನ್ನು ಕಾಡಬೇಕೆಂದು ಇರಲಿಲ್ಲ. ಏಕೆಂದರೆ, ನಾನು ತುಂಬಾ ಇಷ್ಟ ಪಡುತ್ತಿದ್ದ ಹದಿಮೂರು, ಹದಿನೈದು, ಇಪ್ಪತ್ತು ವರ್ಷಗಳ ಹತ್ತಿರದ ಸಂಬಂಧಿಗಳ ಸಾವು ನನಗೆ ಬಹಳ ನೋವು ಉಂಟು ಮಾಡಿತ್ತು. ಸ್ವಲ್ಪ ಕೊರಗಿದ್ದು ನಿಜ, ಆದರೆ ಆ ಸಾವುಗಳು ನನ್ನನ್ನು ಕಾಡಲಿಲ್ಲ. ಅದಕ್ಕಿಂತ ಹೆಚ್ಚಾಗಿ, ಒಂದೆರೆಡು ಬಾರಿ ಸಾವಿನ ಹತ್ತಿರಕ್ಕೆ ಹೋದಂತ ಅನುಭವಗಳಾಗಿವೆ. ಆಗೆಲ್ಲ ಜೂಲಿಯಸ್‌ ಸೀಸರ್‌ ನ ಒಂದು ಸಂಭಾಷಣೆಯನ್ನು ಹೇಳಿಕೊಂಡು ನಕ್ಕಿದ್ದೆ: Death always follows me and when I turn around, it vanishes.

ಅದೂ ಅಲ್ಲದೆ, ನಾನು ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಓದುವಾಗ, ಮೂರು ವರ್ಷ ಸ್ವಾಮಿ ಜಗದಾತ್ಮಾನಂದರು ಅಲ್ಲಿಯೇ ಇದ್ದರು. ಅವರ ಪ್ರಸಿದ್ದವಾದ ಬದುಕಲು ಕಲಿಯಿರಿ ಪುಸ್ತಕದಲ್ಲಿ ಬರೆದಿರುವ ಹೆಚ್ಚಿನ ಅಂಶಗಳು ನಮಗೆ ರಾತ್ರಿ ಮಲಗುವ ಮುನ್ನ ಅವರು ಹೇಳುತ್ತಿದ್ದ ಕಥೆಗಳಾಗಿದ್ದವು. ಮುಂದೆ ಆ ಪುಸ್ತಕ ನನ್ನ ಸಂಗಾತಿಯಾಗಿದ್ದೂ ಹೌದು. ಆ ಪುಸ್ತಕದಲ್ಲಿ ಸಾವು ಮತ್ತು ಪುನರ್ಜನ್ಮದ ವಿಷಯವನ್ನು ಸ್ವಾಮಿ ಜಗದಾತ್ಮಾನಂದರು ಈ ಪುಸ್ತಕದಲ್ಲಿ ವಿವರವಾಗಿ ಚರ್ಚಿಸಿದ್ದಾರೆ. ಸಾವು ಮತ್ತು ಪುನರ್ಜನ್ಮದ ವಿಷಯಗಳ ವೈಜ್ಞಾನಿಕ ಸಂಶೋಧನೆ ಮತ್ತು ವಿಶ್ಲೇಷನೆಗಳ ಬಗ್ಗೆ ಬರೆದಿದ್ದಾರೆ.

ಅದು ದ್ವೈತ ತತ್ವದ ತಳಹದಿಲ್ಲಿದೆ. ತಮ್ಮ ಈ ನಿಲುವಿಗೆ ಕಾರಣವಾದ, ಶ್ರೀ ಅರಬಿಂದೋ ಘೋಷ್‌ ಬರೆದ ಪುಸ್ತಕ ಸೇರಿದಂತೆ, ಇಪ್ಪತ್ತೊಂದು ಅಂತರಾಷ್ಟ್ರೀಯ ಪುಸ್ತಕಗಳನ್ನು ಉಲ್ಲೇಖಿಸಿದ್ದಾರೆ. ಹಾಗಾಗಿ, ಈ ಪುಸ್ತಕದಲ್ಲಿ ಪ್ರಪಂಚದ ಭವಿಷ್ಯ ಬರೆದ ನಾಸ್ಟ್ರೋಡಾಮಸ್‌ ಹೆಸರಿಲ್ಲ. ಆದರೆ, ನಿದ್ರಿಸುವ ಅವಧೂತ ಎಂದೇ ಪ್ರಸಿದ್ದನಾಗಿದ್ದ ಎಡ್ಗರ್‌ ಕೇಸಿಯ ಬಗ್ಗೆ ಬಹಳಷ್ಟು ವಿವರಗಳಿವೆ.

ಮುಂದೆ ಅದ್ವೈತ ತತ್ವಗಳನ್ನು ಓದುವಾಗ ನನಗೆ ಸಾವು ಮತ್ತು ಪುನರ್ಜನ್ಮದ ಬಗ್ಗೆ ಬಹಳಷ್ಟು ಜಿಜ್ಞಾಸೆಗಳು ಉಂಟಾದವು. ಅದ್ವೈತ ವಾಸ್ತವಕ್ಕೆ ಬಹಳ ಹತ್ತಿರವಾದದ್ದು ಅಂತ ಅನ್ನಿಸಿದರೂ ಸಹ, ಸ್ವಾಮಿ ಜಗದಾತ್ಮಾನಂದರ ಬರವಣಿಗೆ ಅಲ್ಲಗಳೆಯಲು ಸಾಧ್ಯವಿಲ್ಲದಷ್ಟು ಪುರಾವೆಗಳನ್ನು ಬದುಕಲು ಕಲಿಯಿರಿ ಒದಗಿಸಿತ್ತು. ದ್ವೈತ ಮತ್ತು ಅದ್ವೈತಗಳನ್ನು ಮುಕ್ತ ಮನಸ್ಸಿನಿಂದ ಅಭ್ಯಸಿದರೆ ಆಗುವ ಅನಾಹುತ ಇದೇ.

ಮುಂದೆ ಏಷ್ಯಾ ಖಂಡದ ಎಲ್ಲಾ ದೇಶಗಳ ಪುರಾಣ ಚರಿತ್ರೆಗಳನ್ನು ಓದುವಾಗ, ಈ ಜಿಜ್ಞಾಸೆ ಎಲ್ಲಾ ಕಡೆ ಇತ್ತು ಎನ್ನುವ ಸತ್ಯ ತಿಳಿಯಿತು. ಹೋಮರ್‌ ನ ಇಲಿಯಾಡ್‌ ನಲ್ಲಿ ಬರುವ ಅಖಿಲಿಸ್‌, ತಾತ್ವಿಕವಾಗಿ ಈ ಜಿಜ್ಞಾಸೆಯಲ್ಲಿಯೇ ಇರುತ್ತಾನೆ. ಯುದ್ದ ಕೈದಿಯಾದ ಅವನ ಪ್ರೇಯಸಿ ಬ್ರಿಸೇಸ್‌ ಜೊತೆ ಮಾತನಾಡುವಾಗ, ʻಯಾವ ಕ್ಷಣದಲ್ಲಾದರೂ ನಾವು ಇಲ್ಲಿಂದ ಹೋಗಬಹುದು. ನಾವು ಮತ್ತೆ ಇಲ್ಲಿಗೆ ಬರುವುದಿಲ್ಲ,ʼ ಎಂದು ಹೇಳುತ್ತಾನೆ. ಇದು ವೈದಿಕ ಧರ್ಮದ ವಿಕಾಸ ಪೂರ್ವದಲ್ಲಿ ಭರತ ಖಂಡದ ನಂಬಿಕೆ ಮತ್ತು ಇದನ್ನು ಬಹಳಷ್ಟು ಜನ ಇನ್ನೂ ನಂಬುತ್ತಾರೆ.

ಆದರೆ, ತನ್ನ ಚಿಕ್ಕಮ್ಮನ ಮಗ ಪ್ಯಾಟ್ರಿಕಲೋಸ್‌ ಜೊತೆ ಮಾತನಾಡುವಾಗ ಮತ್ತು ಅವನನ್ನು ಕೊಂದ ಹೆಕ್ಟರ್‌ ಮೇಲೆ ಸೇಡು ತೀರಿಸಿಕೊಳ್ಳಲು ಹೋದಾಗ ಮಾತ್ರ, ಆತ್ಮ, ಸ್ವರ್ಗ ಮತ್ತು ನರಕದ ವಿಷಯ ಮಾತನಾಡುತ್ತಾನೆ. ಇದು ದ್ವೈತ ಸಿದ್ದಾಂತದ ನಂಬಿಕೆ. ಇಂತಹ ಬಹಳಷ್ಟು ಸಂಭಾಷಣೆಗಳು ಈಪಿಪ್ಟ್‌, ಪರ್ಶಿಯಾ ಮುಂತಾದ ದೇಶಗಳ ಕಥೆಗಳಲ್ಲಿ ಕಾಣಬಹುದು. ಈಜಿಪ್ಟಿನ ಪುರಾಣದಲ್ಲಿ ಸೂರ್ಯದೇವನಾದ ರಾ ಮತ್ತು ಅವನ ಮೊಮ್ಮಗನ ನಡುವೆ ನಡೆಯುವ ಸಂಭಾಷಣೆಯಲ್ಲಿಯೂ ಅಷ್ಟೆ, ದ್ವೈತ ನಂಬಿಕೆಯ ಮಧ್ಯೆ, ಅದ್ವೈತದ ಛಾಯೆ ಡಾಳಾಗಿ ಗೋಚರಿಸುತ್ತದೆ. ಹಾಗಾಗಿ, ಎಲ್ಲಾ ಪುರಾಣಗಳೂ ಸಹ ಸಾವಿನ ಹಿನ್ನೆಲೆಯಲ್ಲೇ ನಂಬಿಕೆಗಳನ್ನು ಪೋಷಿಸಿವೆ. ಹಾಗಾಗಿ, ಸಾವಿನ ಬಗ್ಗೆ ಚಿಂತನೆ ಐದು ಸಾವಿರ ವರ್ಷಗಳಿಂದ ನಡೆದುಕೊಂಡೇ ಬಂದಿದೆ.

ಮುಂದೆ, ಅವಧೂತರ ಸ್ಥಾಪಿಸಿದ ಧರ್ಮಗಳ ಪರ್ವ ಆರಂಭವಾದವು. ಅದು ಜೈನ, ಬುದ್ದ, ನಂತರದ ಕ್ರಿಸ್ತ, ಇಸ್ಲಾಂ ಮುಂತಾದ ಧರ್ಮಗಳು ಪ್ರತಿಷ್ಠಾಪಿತವಾದವು. ಹೆಚ್ಚಿನ ಧರ್ಮಗಳು ದೇವರು ಒಬ್ಬನೇ ಎಂದರೂ ಸಹ, ದ್ವೈತ ಸಂಸ್ಕೃತಿಯ ಸ್ವರ್ಗ ಮತ್ತು ಆತ್ಮ ಎನ್ನುವ ಎರಡು ನೆರಳುಗಳಿಂದ ಹೊರ ಬರಲು ಸಾಧ್ಯವಾಗಲೇ ಇಲ್ಲ. ಬೌದ್ಧ ಧರ್ಮ ಮಾತ್ರ ಸ್ವರ್ಗ ಎನ್ನುವ ವಿಷಯವನ್ನು ಮಾತನಾಡದೆ, ಅದ್ವೈತ ತತ್ವದಂತೆ ಕಾಣುತ್ತದೆ. ಆದರೂ, ಸಾವು ಎನ್ನುವುದರ ಅಡಿಪಾಯದಿಂದ ಈ ಧರ್ಮ ಕೂಡ ಹೊರಗುಳಿದಿಲ್ಲ. ಹಾಗೆ ನೋಡಿದರೆ, ಇತ್ತೀಚಿನ ದಿನಗಳಲ್ಲಿ ಬಂದ ಓಶೋ ಮಾತ್ರ ಅದ್ಭುತವಾದ ಅದ್ವೈತಿ ಮತ್ತು ವಾಸ್ತವವಾದಿ ಎಂದು ಅನ್ನಿಸುತ್ತದೆ.

ಇದೆಲ್ಲದರ ಮಧ್ಯೆ ನನ್ನನ್ನು ಕಾಡಿದ್ದು ವಿನಯ್‌ ಮತ್ತು ಶಿವು ಅವರ ಸಾವು. ಅಂದು ನಾನು ವಿನಯ್‌ ಜೊತೆ ಆಂಬುಲೆನ್ಸ್‌ ನಲ್ಲಿ ಹೋಗಬೇಕಿತ್ತೇ? ಅದನ್ನು ಅವನು ಕೇಳುತ್ತಿದ್ದನೇ? ಮೂವತ್ತನೇ ವರ್ಷದ ಹುಟ್ಟು ಹಬ್ಬದಲ್ಲಿ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ಇರುವ ಬಗ್ಗೆ ಐದು ವರ್ಷಗಳ ಮುಂಚೆಯೇ ಏಕೆ ಮಾತನಾಡಿದ್ದ? ಇವುಗಳಿಗೆ ಉತ್ತರವಿಲ್ಲ. ಹಾಗೆಯೇ, ಅಂದು ಶಿವುಗೆ ಹೃದಯಾಘಾತವಾಗುತ್ತದೆ ಎನ್ನುವ ಯಾವುದೇ ಸುಳಿವು ನನಗೆ ಸಿಗಲಿಲ್ಲ. ಆತ ನರಳುತ್ತಿದ್ದಾಗಲೂ, ಸ್ನಾನ ಮಾಡುವುದು ನನಗೆ ಅಷ್ಟೊಂದು ಮುಖ್ಯವಾಗಿತ್ತೇ? ಆ ಇಪ್ಪತ್ತು ನಿಮಿಷದಲ್ಲಿ ಅವನನ್ನು ಉಳಿಸಿಕೊಳ್ಳಬಹುದಿತ್ತೇ? ಈ ಪ್ರಶ್ನೆಗಳಿಗೂ ಉತ್ತರವಿಲ್ಲ. ಇದು ಸಾವು ಮತ್ತು ಬದುಕಿನ ನಡುವೆ ಇದ್ದ ಸಮಯದ ಸಮಸ್ಯೆ.

ಸಾವನ್ನು ನಾವು ಹೇಗೆ ಬೇಕಾದರೂ ತೆಗೆದುಕೊಳ್ಳಬಹುದು. ನಾನು ಸತ್ತ ನಂತರ, ನನ್ನ ನಂಬಿದವರ ಕಥೆ ಏನು? ಎಂಬ ಹೆದರಿಕೆಯಲ್ಲೇ, ನಾವು ನಿತ್ಯವೂ ಸಾಯಬಹುದು. ಇಲ್ಲದೇ ಹೋದರೆ, ನಮ್ಮನ್ನು ನಂಬಿರುವವರನ್ನು ನಮ್ಮ ಸಾವಿನ ನಂತರದ ಜೀವನಕ್ಕೆ ತಯಾರು ಮಾಡುತ್ತಾ, ಎಲ್ಲರೂ ನೆಮ್ಮದಿಯಿಂದ ಬದುಕಬಹುದು. ಆಯ್ಕೆ ನಮ್ಮದು.
ಸತ್ತ ಮೇಲೆ ಮತ್ತೇನು? ಭಾನುವಾರ ಬಿಡುಗಡೆಯಾದ ಜೋಗಿಯವರ ʻಸಾವುʼ ಪುಸ್ತಕದಲ್ಲಿ ದ್ವೈತ ಮತ್ತು ಅದ್ವೈತ ಚಿಂತನೆಗಳ ಸತ್ಯಾಸತ್ಯತೆಗಳನ್ನು ಸಮಗ್ರವಾಗಿ ಚರ್ಚಿಸಿದ್ದಾರೆ. ಅದರಲ್ಲಿ ನಮ್ಮ ಪುರಾಣ ಕಥೆಗಳನ್ನೆಲ್ಲ ಒರೆ ಹಚ್ಚಿ, ತಿಕ್ಕಿ ತಿಕ್ಕಿ ಪ್ರಶ್ನಿಸಿದ್ದಾರೆ. ಒಂದು ವಿಷಯವನ್ನು ನಂಬಬೇಕಾದರೆ, ಎಷ್ಟು ಬಾರಿ ಅದನ್ನು ಪ್ರಶ್ನಿಸಬೇಕು ಎನ್ನುವುದು ಈ ಪುಸ್ತಕದಲ್ಲಿ ಅದ್ಭುತವಾಗಿ ಮೂಡಿ ಬಂದಿದೆ.

ಪುರಾಣಗಳಷ್ಟೇ ಅಲ್ಲದೆ, ಅವರ ನೆನಪುಗಳು, ಗರುಡ ಪುರಾಣದ ಭಯಾನಕ ಚಿತ್ರಣ, ಉಳಿದ ಪುರಾಣಗಳ ಚಿತ್ರಣ ಮತ್ತು ಅವರ ಅಂತರಂಗದ ನೆನಪುಗಳಿಂದ ಸಾವಿನ ಬಗ್ಗೆ ಒಂದು ಯೋಚನಾ ಲಹರಿ ಹುಟ್ಟುಹಾಕುತ್ತಾರೆ. ಎಲ್ಲಕ್ಕಿಂತ ಮುದ ಕೊಟ್ಟದ್ದು ಮಾತ್ರ, ಸಾಹಿತ್ಯ ಪುಟಗಳಿಂದ ಅವರು ಸಾವಿನ ಬಗ್ಗೆ ಅವರು ಹೆಕ್ಕಿ ತೆಗೆದಿರುವ ವಿಭಾಗ. ಅದು ಜೋಗಿಯ ಸ್ಪೆಷಾಲಿಟಿ ಅಂತಾನೇ ಹೇಳಬಹುದು. ಅದಕ್ಕೊಂದು ಮ್ಯಾಜಿಕಲ್‌ ಟಚ್‌ ಇದೆ. ಆದರೇನು ಮಾಡುವುದು? ʻಸಾವು ಸಾವಿರವಾಗಲಿʼ ಅಂತ ಆಶೀರ್ವದಿಸಲು ಆಗುವುದಿಲ್ಲವಲ್ಲ.
ಈ ಪುಸ್ತಕ ಓದಿ ಮುಗಿಸುವ ಹೊತ್ತಿಗೆ, ಬದುಕಲು ಕಲಿಯಿರಿ ಜೊತೆಯಲ್ಲಿ ಸದಾ ಇಟ್ಟುಕೊಂಡಿರಬೇಕಾದ ಇನ್ನೊಂದು ಪುಸ್ತಕ ನನಗೆ ಸಿಕ್ಕಿದೆ ಅನಿಸಿತು. ಒಂದು, `Learn to live’ ಮತ್ತೊಂದು `Art of Dying’.


  • ಮಾಕೋನಹಳ್ಳಿ ವಿನಯ್‌ ಮಾಧವ, ಪತ್ರಕರ್ತರು,ಲೇಖಕರು, ವಿಮರ್ಶಕರು, ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW