ರಾತ್ರಿ ೧:೨೪ ಆಗಿತ್ತು. ತಲೆ ಎತ್ತಿ ಸುತ್ತಲೂ ನೋಡಿ ಅಮ್ಮನ ಕಡೆ ನೋಡಿದೆ. ಅಮ್ಮ ಗಾಢ ನಿದ್ದೆಯಲ್ಲಿದ್ದಳು. ಎಬ್ಬಿಸಲು ಹೋಗಲಿಲ್ಲ. ಅಷ್ಟು ಹೊತ್ತಿನಲ್ಲಿ ದೂರದಲ್ಲಿ ಮಗು ಅಳುವ ಶಬ್ದ ಕೇಳಿಸಿತು. ವಾಷ್ ರೂಮ್ ಹೋಗಬೇಕೆನ್ನಿಸಿತು. ಎದ್ದು ಹೊರಟೆ ಹಿಂದೆ ಯಾರೋ ಬಂದ ಹಾಗೆ ಅನಿಸಿತು. ತಿರುಗಿ ನೋಡಿದಾಗ ಯಾರು ಇರಲಿಲ್ಲ. ಮುಂದೇನಾಯಿತು ತಪ್ಪದೆ ಮುಂದೆ ಓದಿ…
ಕತ್ತಲು ಆವರಿಸಿತೊಡಗಿತು. ಸಮಯಕ್ಕೆ ತಕ್ಕಂತೆ ಆಸ್ಪತ್ರೆಯ ಕ್ಯಾಂಟೀನ್ ನಿಂದಲೇ ರೋಗಿಗಳಿಗೆ ಊಟ ಬಂತು. ನನ್ನ ಹೆಸರೂ ರೋಗಿಗಳ ಲಿಸ್ಟ್ ನಲ್ಲಿ ಇದ್ದುದರಿಂದ ನನಗೂ ಪ್ರತ್ಯೇಕ ಕಂಟೈನರ್ ಒಂದನ್ನು ಕೊಟ್ಟರು. ಅದರಲ್ಲಿ ಒಂದು ತರದ ಕೋಸಿನ ಪಲ್ಯ, ರಸಂ, ಮೂಲಂಗಿ ಸಾಂಬಾರ್ ಹಾಗೂ ರೈಸ್ ಇತ್ತು. ಅಮ್ಮ ಹೊರಗಿನ ಕ್ಯಾಂಟಿನ್ ನಲ್ಲಿ ಊಟ ಮಾಡಿ ಬಂದರು. ನನಗೆ ನಾಳಿನ ಆಪರೇಷನ್ ಗಾಗಿ ಪ್ರಥಮ ಚಿಕಿತ್ಸೆಯಂತೆ ಒಂದೆರಡು ಇಂಜೆಕ್ಷನ್ ಗಳನ್ನ ಕೊಟ್ಟು, ಆಪರೇಷನ್ ನಂತರ ಗ್ಲೂಕೋಸ್ ಹಾಕಲು Intravenous Needle ಕೈ ಮೇಲಿನ ನರಕ್ಕೆ ಚುಚ್ಚಿ ಸುತ್ತ ಪ್ಲಾಸ್ಟರ್ ಅಂಟಿಸಿದರು. ಇದು ಆಪರೇಷನ್ ಗೆಂದು ಬಂದವರಿಗೆ ಅದರ ಹಿಂದಿನ ದಿನ ಶುಶ್ರೂಷಕರು ತಪ್ಪದೇ ಮಾಡುವ ವೈದ್ಯಕೀಯ ವಿಧಾನ.
ಒಂದಕ್ಕೊಂದು ಬೆಡ್ ಗಳ ನಡುವೆ ಇರುವ ಖಾಲಿ ಜಾಗದ ನೆಲದಲ್ಲಿ ಪೇಷೆಂಟ್ ಗಳ ಜೊತೆ ಬಂದವರು ಮಲಗಬೇಕು. ಅವರಿಗೆ ಮಲಗಲು ಪ್ರತ್ಯೇಕ ಜಾಗವಾಗಲಿ, ನೆಲಕ್ಕೆ ಹಾಸಿ ಮಲಗಲು ಮನೆಯಿಂದ ಚಾಪೆ ತರುವ ಅವಕಾಶವಾಗಲೀ ಇರಲಿಲ್ಲ. ತಂದಿದ್ದ ಸಣ್ಣ ಬೆಡ್ಶೀಟ್ ಅನ್ನೇ ಆಗೋಹೀಗೋ ಅಡ್ಜಸ್ಟ್ ಮಾಡಿಕೊಂಡು ಮಲಗಬೇಕಿತ್ತು.
ತಂದಿದ್ದ ಪುಸ್ತಕದ ಒಂದೆರಡು ಪುಟಗಳನ್ನ ಓದುವಷ್ಟರಲ್ಲಿ ಅಮ್ಮ ನಿದ್ರೆಗೆ ಜಾರಿದ್ದರು. ಎಲ್ಲರ ಸದ್ದಡಗಿತ್ತು, ಅಲ್ಲೋ ಇಲ್ಲೋ ಒಬ್ಬೊಬ್ಬರು ಕೆಮ್ಮುವುದು, ಗೊರಕೆ ಹೊಡಿಯುವುದು ಮೆಲ್ಲಗೆ ಕೇಳಿಸುತ್ತಿತ್ತು.
ಬೆಳಗ್ಗೆಯಿಂದ ಆಡ್ಮಿಟ್ ಆಗಲು ಅಲ್ಲಿ ಇಲ್ಲಿ ಓಡಾಡಿದ್ದು, ಜೆರಾಕ್ಸ್, ಸೈನ್, ರಿಪೋರ್ಟ್ಸ್, ಡಾಕ್ಟರ್, ನರ್ಸ್, ಬೆಡ್, ನಾಳಿನ ಆಪರೇಷನ್, ಆಸ್ಪತ್ರೆಯ ನಿದ್ರೆ, ಸಂಜೆ ಆ ಇಬ್ಬರು ಆಸಾಮಿಗಳು ದೆವ್ವಗಳ ಬಗ್ಗೆ ಮಾತಾಡಿಕೊಂಡದ್ದು ಎಲ್ಲವೂ ಒಂದು ಕ್ಷಣ ಕಣ್ಣಮುಂದೆ ಬಂದು ಹೋದವು. ನಾನೂ ನಿದ್ರೆಗೆ ಜಾರಿದೆ.
ಇದ್ದಕ್ಕಿದ್ದಂತೆ ಎಚ್ಚರವಾಯಿತು, ಮೊಬೈಲ್ನಲ್ಲಿ ಸಮಯ 1:24 ಆಗಿತ್ತು. ತಲೆ ಎತ್ತಿ ಸುತ್ತಲೂ ನೋಡಿ ಅಮ್ಮನ ಕಡೆ ನೋಡಿದೆ. ಆ ಸಣ್ಣ ಬೆಡ್ಶೀಟ್ ಗೆ ತಕ್ಕಂತೆ ತಮ್ಮ ದೇಹವನ್ನ ಮುದುರಿಕೊಂಡು ಮಲಗಿದ್ದರು. ನೀನು ಎಷ್ಟು ಜನ ಸಂಪಾದಿಸಿದ್ದೀಯ ಅನ್ನೋದು ಮುಖ್ಯವಲ್ಲ, ಆಸ್ಪತ್ರೆಯ ಬೆಂಚುಗಳಲ್ಲಿ ನಿನಗಾಗಿ ಕೂತು ಯಾರು ಕಾಯುತ್ತಿರುತ್ತಾರೆ ಅನ್ನೋದು ಮುಖ್ಯ ಎಂಬುದಾಗಿ ಯಾರೋ ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದ್ದು ನೆನಪಿಗೆ ಬಂತು. ಅಲ್ಲಿ ನಾನು “ನನ್ನ ಅಮ್ಮ” ಎಂದು ಕಮೆಂಟ್ ಹಾಕಿದ್ದು ನೆನೆಸಿಕೊಂಡು ಭಾವುಕನಾದೆ.
ಸ್ವಲ್ಪ ಹೊತ್ತಿನ ನಂತರ ದೂರದಲ್ಲಿ ಎಲ್ಲೋ ಮಗು ಅಳುವ ಶಬ್ದ ಕೇಳಿಸುತ್ತಿತ್ತು. ಮಹೇಶ್ ಸಂಜೆ ಸುಬ್ಬಯ್ಯನ ಹತ್ತಿರ ನೆನ್ನೆ ರಾತ್ರಿ ಮಗು ಅಳುವ ಶಬ್ದ ಕೇಳಿಸಿತು ಎಂಬುದಾಗಿಯೂ, ಈ ಆಸ್ಪತ್ರೆಯಲ್ಲಿ ರಾತ್ರಿ ಸಮಯದಲ್ಲಿ ಸಣ್ಣಮಕ್ಕಳನ್ನ ತಂಗಲು ಬಿಡುವುದಿಲ್ಲ ಎಂಬುದಾಗಿಯೂ ಹೇಳಿದ್ದು ನೆನಪಿಗೆ ಬಂತು. ಈ ಶಬ್ದ ಹಾಗೇ ನನ್ನ ಕಿವಿಗೆ ಎಲ್ಲೋ ಆಸ್ಪತ್ರೆಯ ಒಳಗೆಯೇ ಅಳುತ್ತಿರುವಂತೆ ಕೇಳಿಸುತ್ತಿತ್ತು.
ಜಾಗ ಹೊಸದಾಗಿರುವುದರಿಂದ ನಿದ್ರೆಯಿಂದ ಅರ್ಧದಲ್ಲೇ ಎಚ್ಚರವಾಗಿರಬೇಕೆಂದುಕೊಂಡು ಎದ್ದು ವಾಷ್ ರೂಮ್ ನತ್ತ ಸಾಗಿದೆ. ಎಲ್ಲಾ ಲೈಟ್ ಗಳು ಆಫ್ ಆಗಿ, ಅಲ್ಲಲ್ಲಿ ಸಣ್ಣ ಸಣ್ಣ ಲೈಟ್ ಗಳು ವಾಷ್ ರೂಮ್ ಗೆ ಹೋಗುವ ದಾರಿಯಲ್ಲಿ ಆನ್ ಆಗಿದ್ದವು. ರಾತ್ರಿ ಡ್ಯುಟಿಯ ನರ್ಸ್ಗಳು ತಾವು ಕೂರುವ ಕೌಂಟರ್ ನ ಹಿಂದೆ ಇರುವ ಖಾಲಿ ಜಾಗದ ನೆಲದಲ್ಲಿ ಬೆಡ್ಶಿಟ್ ನ್ನು ಮೈಗೆ ಸುತ್ತಿಕೊಂಡು ಒಬ್ಬೊಬ್ಬರು ಒಂದೊಂದು ಆಕೃತಿಯಲ್ಲಿ ಮುದುರಿಕೊಂಡು ಮಲಗಿದ್ದರು. ಅದನ್ನ ನೋಡಿ ರಾತ್ರಿ ಪಾಳಿಯಲ್ಲಿ ನಿದ್ದೆಗೆಟ್ಟು ಕೆಲಸ ಮಾಡುವವರ ಕಷ್ಟ ಎಷ್ಟಿರಬಹುದೆಂದು ನೆನೆಸಿಕೊಳ್ಳುತ್ತ ಮುಂದೆ ಸಾಗಿದೆ.
ಈ ಇಂಗ್ಲೀಷ್ horror ಮೂವೀಗಳಲ್ಲಿ Tubelight ಗಳು ಆನ್ ಅಂಡ್ ಆಫ್ ಆನ್ ಅಂಡ್ ಆಫ್ ಆಗೋ ರೀತಿಯಲ್ಲಿ ವಾಷ್ ರೂಮ್ ಬಾಗಿಲಿನ ಹತ್ತಿರವಿದ್ದ ಲೈಟ್ ಆನ್ ಅಂಡ್ ಆಫ್ ಆನ್ ಅಂಡ್ ಆಫ್ ಆಗುತ್ತಿರುವುದು ಅತ್ತಕಡೆಯೇ ಸಾಗುತ್ತಿದ್ದ ನನಗೆ ದೂರದಿಂದಲೇ ಕಾಣುತ್ತಿತ್ತು. ಬಹುಶಃ ಇಂತಹ ಸಣ್ಣಪುಟ್ಟ ಸಂಗತಿಗಳೇ ಇಂತಹ ಸ್ಥಳಗಳಲ್ಲಿ ರಾತ್ರಿ ಸಮಯದಲ್ಲಿ ಜನರು ಹೆಚ್ಚಾಗಿ ಹೆದರಲು ಕಾರಣವಾಗಿರಬಹುದು.
ಮುಂದೆ ನಡೆದಂತೆಲ್ಲಾ ಆ ಮಗು ಅಳುತ್ತಿರುವ ಶಬ್ದ ಹತ್ತಿರವಾದಂತೆ ಕೇಳಿಸುತ್ತಿತ್ತು. ಅಲ್ಲಿಯವರೆಗೂ ಅದನ್ನು ಹಗುರವಾಗಿ ನೆನೆಸಿದ್ದ ನನಗೆ ಆ ಶಬ್ದ ಹತ್ತಿರವಾಗುತ್ತಿದ್ದಂತೆ ಆ ಶಬ್ದ ವಾಷ್ ರೂಮ್ ಒಳಗಡೆಯಿಂದ ಬರುತ್ತಿರಬಹುದೆಂಬ ಅನುಮಾನ ಶುರುವಾಯಿತು. ಆಸ್ಪತ್ರೆಯ ಯಾವುದಾದರೂ ವಾರ್ಡ್ ಅಥವಾ ಅಲ್ಲೆಲ್ಲೋ ಬೆಡ್ ಪಕ್ಕದಿಂದ ಆ ಶಬ್ದ ಬರುತ್ತಿದ್ದರೆ ಯಾರೋ ಪೇಷೆಂಟ್ ಜೊತೆ ಬಂದಿರುವ ಅದರ ತಾಯಿ ಮಗುವನ್ನ ಕರೆತಂದಿರಬೇಕೆಂದು ಊಹಿಸಬಹುದಿತ್ತು. ಆದರೆ ಇಲ್ಲಿ ಶಬ್ದ ಬರುತ್ತಿರುವುದು ವಾಷ್ ರೂಮ್ ಕಡೆಯಿಂದ. ಅಲ್ಲಿಗೆ ಟಾಯ್ಲೆಟ್ ಮಾಡಿಸಲು ಕರೆದುಕೊಂಡು ಬಂದಿರಬಹುದೆಂದು ಸ್ವಲ್ಪ ಸಕಾರಾತ್ಮಕವಾಗಿ ಚಿಂತಿಸಿ ಹೆಜ್ಜೆಗಳನ್ನು ಮುಂದಿಡುತ್ತಾ ನಡೆದೆ.
ಎಷ್ಟೇ ಧೈರ್ಯವಿದ್ದರೂ ತಕ್ಷಣಕ್ಕೆ ಬೆಚ್ಚುವ ಮನುಷ್ಯನ ಸಾಮಾನ್ಯ ಸ್ವಭಾವ ಇದಿಯಲ್ಲ ನೋಡಿ, ನಡೆಯುತ್ತಾ ನನ್ನ ಬಲಗಡೆಗೆ ಮತ್ತೊಂದು ವಾರ್ಡ್ ಗೆ ಹೋಗುವ ಕಡೆಗೆ ಸುಮ್ಮನೆ ತಿರುಗಿ ನೋಡಿದೆ. ಯಾವುದೋ ಕಪ್ಪು ಆಕೃತಿ ನನ್ನತ್ತಲೇ ನೋಡುತ್ತಿರುವಂತೆ ದೂರದಲ್ಲಿದ್ದ ಆ ವಾರ್ಡ್ ನ ಬೆಡ್ ನ ಸೈಡಲ್ಲಿ ಕಾಣಿಸಿದ ತಕ್ಷಣ ಮೈ ಜುಮ್ ಅಂತು. ಈ ಕಡೆ ತಿರುಗಿ ಮತ್ತೆ ಆ ಬೆಡ್ ಕಡೆ ನೋಡುವಷ್ಟರಲ್ಲಿ ಅಲ್ಲಿ ಏನೂ ಇರಲಿಲ್ಲ. ಅದು ಅದೇ ಆಲೋಚನೆಯಲ್ಲಿ ಇದ್ದ ನನ್ನ ಸ್ವಕಲ್ಪಿತ ಭ್ರಮೆಯೋ ಅಥವಾ ನಿಜವಾಗಿ ಅಲ್ಲಿ ಏನಾದರು ಇತ್ತೋ ದೃಢವಾಗಿ ನಿರ್ಧರಿಸಲು ಆಗಲಿಲ್ಲ.
ಅಷ್ಟಕ್ಕೆಲ್ಲಾ ಹೆದರಿ ಹಿಂದೆ ಸರಿಯುವ ಸ್ವಭಾವವೂ ನನ್ನದಾಗಿರಲಿಲ್ಲ. ಮಗುವಿನ ಶಬ್ದ ಹಾಗೆಯೇ ಕೇಳಿಸುತ್ತಿತ್ತು. ಅಲ್ಲಿ ಹೋದರೆ ಮಾತ್ರ ನನ್ನ ಅನುಮಾನ ಬಗೆಹರಿಯಲು ಸಾಧ್ಯ, ಇಲ್ಲದಿದ್ದರೆ ದೆವ್ವ ಇದಿಯೋ ಇಲ್ಲವೋ ಅದನ್ನ ಪರೀಕ್ಷಿಸಿ ತಿಳಿದುಕೊಳ್ಳುವ ಇಂತಹ ಒಳ್ಳೆಯ ಸಂದರ್ಭ ಕೈತಪ್ಪಿ ಹೋಗುತ್ತದೆ ಎಂದುಕೊಂಡು ವಾಷ್ ರೂಮ್ ನತ್ತ ಸಾಗಿದೆ. ನಡೆಯುತ್ತಿದವನಿಗೆ ನನ್ನನ್ನು ಯಾರೋ ಹಿಂಬಾಲಿಸಿದಂತೆ ಭಾಸವಾದರೂ ಹಿಂದೆ ತಿರುಗಿ ನೋಡಲಿಲ್ಲ. ನನ್ನ ಗುರಿ ವಾಷ್ ರೂಮ್ ಮಾತ್ರ ಆಗಿತ್ತು. ಒಂದು ವೇಳೆ ದೆವ್ವವೇ ಅಲ್ಲಿ ಕುಳಿತು ಅಳುತ್ತಿದ್ದರೂ, ಹಿಂದೆ ಹಿಂಬಾಲಿಸುತ್ತಿರುವ ದೆವ್ವ ನನ್ನನ್ನ ವಾಷ್ ರೂಮ್ ಒಳಗಡೆಯೇ ಮುಖಾಮುಖಿಯಾದರೂ ಸರಿಯೇ, ಅದನ್ನು ಕಣ್ಣಾರೆ ನೋಡಿ ಅನುಭವಿಸಿಯೇ ತೀರಬೇಕೆಂದು ದೃಢ ನಿಶ್ಚಯದಿಂದ ವಾಷ್ ರೂಮ್ ಬಾಗಿಲು ಸಮೀಪಿಸಿದೆ.
ಬಾಗಿಲು ಲಾಕ್ ಆದಂತಿತ್ತು. ಒಂದೆರಡು ಬಾರಿ ಜೋರಾಗಿ ನೂಕಿದ ಮೇಲೆ ಓಪನ್ ಆಯಿತು. ಒಳಗೆ ಹೋದವನಿಗೆ ಯಾರೂ ಕಾಣಿಸಲಿಲ್ಲ. ಯಾವುದೋ ಒಂದು ಟಾಯ್ಲೆಟ್ ರೂಮಿನ ಒಳಗಡೆಯಿಂದ ನೀರು ತೊಟ್ಟಿಕ್ಕುವ ಶಬ್ದ ಕೇಳಿಸುತ್ತಿತ್ತು. ಅಲ್ಲಿಗೆ ಹೋದ ತಕ್ಷಣ ಮೊದಲು ನಾನು ಮಾಡಿದ ಕೆಲಸ ಪ್ರತೀ ಟಾಯ್ಲೆಟ್ ರೂಮಿನ ಬಾಗಿಲು ತೆರೆದು ಯಾರಾದರೂ ಇದ್ದಾರಾ ಎಂಬುದನ್ನು ಧೃಡಪಡಿಸಿಕೊಂಡದ್ದು. ನಂತರ ಸುತ್ತಲೂ ನೋಡಿ ಸ್ವಲ್ಪ ನಿಟ್ಟುಸಿರು ಬಿಟ್ಟೆ. ಅಲ್ಲಿ ಯಾರ ಅಸ್ತಿತ್ವವೂ ಕಾಣಿಸಲಿಲ್ಲ. ಮಗು ಅಳುವಿನ ಶಬ್ದ ನಾನು ವಾಷ್ ರೂಮ್ ನ ಬಾಗಿಲನ್ನು ಜೋರಾಗಿ ಒಂದೆರಡು ಬಾರಿ ನೂಕಿದಾಗಲೇ ಇಲ್ಲದಂತಾಗಿತ್ತು.
ಇಷ್ಟು ಹೊತ್ತು ಇಲ್ಲಿಂದಲೇ ಬರುತ್ತಿದ್ದ ಶಬ್ದ ಎಲ್ಲಿ ಹೋಯಿತು, ಅಲ್ಲಿಂದಲೂ ನಾನು ಶಬ್ದ ಬರುತ್ತಿರುವ ಕಡೆಗೆ ಬಾಗಿಲನ್ನೇ ದೃಷ್ಟಿಸುತ್ತಾ ಬಂದಿದ್ದೆ. ನನ್ನ ಕಣ್ತಪ್ಪಿಸಿ ಯಾರೂ ಇದರಿಂದ ಆಚೆ ಬಂದಿಲ್ಲ. ಬಾಗಿಲೂ ಸಹ ಒಳಗಡೆಯಿಂದ ಲಾಕ್ ಆದಂತಿತ್ತು. ಒಂದೆರಡು ಬಾರಿ ನೂಕಿದ ತಕ್ಷಣ ಸಲೀಸಾಗಿ ಓಪನ್ ಆಯಿತು. ನಾನು ಅಷ್ಟೇನು ಅದರ ಮೇಲೆ ಬಲ ಪ್ರಯೋಗ ಮಾಡಿರಲಿಲ್ಲ. ಎಲ್ಲವೂ ಆಶ್ಚರ್ಯದಂತೆಯೂ, ರಾತ್ರಿ ಕನಸಿನಲ್ಲಿ ಸಂಭವಿಸುವ ಘಟನೆಗಳಂತೆಯೂ ಭಾಸವಾಗುತ್ತಿತ್ತು.
ಆದರೆ ಇಲ್ಲಿ ಎಲ್ಲವೂ ನೈಜ ಅನುಭವ. ಹಿಂದೆಯೇ ಹಿಂಬಾಲಿಸಿ ಬಂದಿದ್ದ ಅದೃಶ್ಯ ಸಂಗತಿ ಸಹ ನಾನು ಒಳಗೆ ಹೋಗಿ ಅಲ್ಲೆಲ್ಲಾ ಹುಡುಕಾಡುತ್ತಿರುವಾಗ ಆಗಲಿ, ಅಲ್ಲಿ ನಿಂತು ಚಿಂತಾಕ್ರಾಂತನಾಗಿ ಯೋಚಿಸುತ್ತಿರುವಾಗ ಆಗಲಿ ನನ್ನ ಎದುರಿಗೆ ಬರಲಿಲ್ಲ. ನನ್ನ ತಲೆಯ ಕೂದಲುಗಳೂ ಸಹ ಅದೃಶ್ಯ ಸಂಗತಿಯ ಸ್ಪರ್ಶವನ್ನು ಅನುಭವಿಸಲಿಲ್ಲ. ಅಲ್ಲಿ ನನ್ನನ್ನು ಎಳೆಯುವ, ತಳ್ಳುವ, ನನ್ನ ಮೇಲೆ ಏನಾದರೂ ಬಿಸಾಡುವ, ಏನಾದರೂ ಶಬ್ದ ಮಾಡುವ ಯಾವ ಅದೃಶ್ಯ ಸಂಗತಿಯ ಚಲನವಲನಗಳೂ ನನ್ನ ಅರಿವಿಗೆ ಬರಲಿಲ್ಲ.
ನೋಡಲೇಬೇಕೆಂದು ಕಾತುರದಿಂದ ಬಂದವನಿಗೆ ನಿರಾಸೆಯಾಯಿತು. ಒಂದು ವೇಳೆ ಕಣ್ಣಾರೆ ಕಂಡಿದ್ದರೂ ಮುಂದೆ ಆಗಬಹುದಾಗಿದ್ದಂತ ದುಷ್ಪರಿಣಾಮಗಳು, ಆ ಕ್ಷಣದ ನನ್ನ ವರ್ತನೆ, ಮುಂದಿನ ನನ್ನ ಪರಿಸ್ಥಿತಿ, ದೆವ್ವವನ್ನು ಮುಖಾಮುಖಿಯಾಗಿ ಭೇಟಿಯಾದಾಗ ಅದರ ಪ್ರತಿಕ್ರಿಯೆ ಎಲ್ಲವನ್ನ ಒಂದುಕ್ಷಣ ಯೋಚಿಸಿಕೊಂಡೆ. ಒಂದು ಕ್ಷಣ ಮೈಯೆಲ್ಲಾ ಜುಮ್ ಎಂದಂತೆ ನನ್ನ ಮೈ ರೋಮಗಳೆಲ್ಲಾ ಎದ್ದು ನಿಂತವು.
ಈ ಅನುಭವವನ್ನು ನಾನು ಏನೆಂದು ಇತರರಿಗೆ ಹೇಳಿಕೊಳ್ಳಬಹುದು? ಮಗುವಿನ ಅಳುವ ಶಬ್ದ ಬಂದದ್ದು ನಿಜ, ಆ ವಾರ್ಡ್ ನ ಬೆಡ್ ಸೈಡಿನಿಂದ ಯಾವುದೋ ಕಪ್ಪು ಆಕೃತಿ ನನ್ನತ್ತ ನೋಡಿದ್ದು ನಿಜ, ನನ್ನನ್ನು ಅದೃಶ್ಯ ಸಂಗತಿಯು ಹಿಂಬಾಲಿಸಿದ್ದು ನಿಜ, ಬಾಗಿಲನ್ನು ಒಳಗಡೆಯಿಂದ ಯಾವುದೋ ಕಾಣದ ಕೈಗಳು ಬಂಧಿಸಿದ್ದು ನಿಜ. ಆದರೆ ಒಳಗೆ ಹೋದ ತಕ್ಷಣ ಯಾವುದೇ ಶಬ್ದವಿಲ್ಲ, ಯಾರ ಸುಳಿವಿಲ್ಲ.
ಇದನ್ನೆಲ್ಲಾ ಯೋಚಿಸುತ್ತಾ ನಿಂತಿದ್ದ ನನಗೆ ನನ್ನ ಪಕ್ಕದ ಬೆಡ್ ನಲ್ಲಿದ್ದ ಮಹೇಶ್ ಹೇಳಿದ್ದೆಲ್ಲಾ ನೆನಪಿಗೆ ಬಂತು. ಆತನೂ ಅಷ್ಟೇ ಆ ಮರದ ಹಿಂದಿನಿಂದ ಅವಿತು ತನ್ನತ್ತಲೇ ನೋಡುತ್ತಿದ್ದ ಆ ಎರಡು ಕಣ್ಣುಗಳನ್ನು ನೋಡಿದನೇ ವಿನಹ ಬೇರಾವುದೂ ಆತನಿಗೆ ಕಾಣಿಸಲಿಲ್ಲ. ಆತನ ಸ್ಪರ್ಶಕ್ಕೂ ಸಿಗಲಿಲ್ಲ. ಕಾಣದ ಕೈಗಳು ಆತನ ಬೈಕನ್ನು ಮುಂದೆ ಹೋಗದಂತೆ ನಿಲ್ಲಿಸಿಕೊಂಡಿದ್ದವು, ಹಾಗೂ ಆತನಿಗೆ ವಿರುದ್ಧವಾಗಿ ಬಲಕ್ಕೆ ಎಳೆಯುತ್ತಿರುವುದು ಆತನಿಗೆ ಅನುಭವವಾಗುತ್ತಿತ್ತು. ಇಲ್ಲಿಯಂತೆಯೇ ಅದೃಶ್ಯ ಸಂಗತಿಯ ಶಬ್ದ ಆತನೂ ಕೇಳಿಸಿಕೊಂಡಿದ್ದನು.
ಇದರಿಂದಾಗಿ ನನ್ನಲ್ಲಿ ಮೂಡಿದ ಪ್ರಶ್ನೆ ಏನೆಂದರೆ, ದೇವರು ತನ್ನಿಷ್ಟ ಬಂದವರಿಗೆ ತನ್ನ ದರ್ಶನವಾಗಲೀ, ಆಶೀರ್ವಾದವಾಗಲೀ ಕೊಡುವಂತೆ ಈ ದೆವ್ವಗಳೂ ಸಹ ಒಬ್ಬೊಬ್ಬರಿಗೆ ಒಂದೊಂದು ತರದ ದರ್ಶನಗಳನ್ನೂ, ಅನುಭವಗಳನ್ನೂ, ಕಾಟಗಳನ್ನೂ ಕೊಡಬಹುದೇನೋ. ಆದರೆ ಆ ಸಂದರ್ಭಗಳಲ್ಲಿ ವ್ಯಕ್ತಿಯಲ್ಲಿರುವ ಭಯ ಮತ್ತು ಧೈರ್ಯಗಳಿಗೆ ತಕ್ಕಂತೆ ಈ ದೆವ್ವಗಳು ಅವರೊಟ್ಟಿಗೆ ವರ್ತಿಸಬಹುದು ಎಂಬುದು ಈ ನನ್ನ ಅನುಭವದಿಂದ ನನ್ನ ಅರಿವಿಗೆ ಬಂತು. ಆದರೆ ನನ್ನ ಪಾಲಿಗೆ ಇದ್ದದ್ದು ಇಷ್ಟೇ.
ನಾನು ಬಂದಿದ್ದ ಕೆಲಸ ಮುಗಿಸಿ ಕೈತೊಳೆದು ಮತ್ತೊಮ್ಮೆ ವಾಷ್ ರೂಮ್ ಸುತ್ತ ಕಣ್ಣಾಡಿಸಿ ಅಲ್ಲಿಂದ ಹೊರನಡೆದೆ. ಆಗಾಗ ಹಿಂದೆ ತಿರುಗಿ ನೋಡುತ್ತಾ ಮುಂದೆ ಸಾಗಿದೆ. ಯಾರೂ ಹಿಂಬಾಲಿಸಿದಂತೆ ಭಾಸವಾಗಲಿಲ್ಲ. ಮತ್ತೆ ವಾರ್ಡ್ ನತ್ತ ನೋಡಿದೆ, ಆ ಬೆಡ್ ಸೈಡ್ ನಲ್ಲಿ ಖಾಲಿ ಜಾಗವಿತ್ತು. ಸ್ವಲ್ಪ ಹೊತ್ತು ನಿಂತು ಅದನ್ನೇ ದೃಷ್ಟಿಸಿದೆ. ಏನೂ ಕಾಣಿಸಲಿಲ್ಲ.
ಹಾಗೇ ಮುಂದೆ ನಡೆದು ಬರುವಾಗ ಕೆಮ್ಮುವವರು, ಗೊರಕೆ ಹೊಡೆಯುತ್ತಿರುವವರು, ನೋವಿನಿಂದ ನಿದ್ರೆಯಲ್ಲಿಯೂ ನರಳಾಡುತ್ತಿವವರು, ಮಲಗಲು ಸರಿಯಾಗಿ ಅನುಕೂಲವಿಲ್ಲದೆ ಬೆಡ್ ಗಳ ಕೆಳಗೆ ಮುದುರಿಕೊಂಡು ಮಲಗಿದ್ದವರು, ಎಲ್ಲರೂ ನನ್ನ ಗಮನಕ್ಕೆ ಬಂದರು. ಎಲ್ಲರ ಸ್ಥಿತಿಗಳನ್ನ ನೆನೆಸಿಕೊಂಡು ಈ ದೇವರು ದೆವ್ವಗಳೆಂಬ ಅದೃಶ್ಯ ಶಕ್ತಿಗಳ ಪರಾಕ್ರಮ ಏನಿದ್ದರೂ ಭಯವಿರುವವರ ಮತ್ತು ದುರ್ಬಲ ಮನಸ್ಥಿತಿಯುಳ್ಳವರ ಮೇಲೆ ಮಾತ್ರ ಎಂಬುದು ಅರಿವಿಗೆ ಬಂತು.
ಅತಿಯಾದ ಭಕ್ತಿಯಾಗಲೀ ಭಯವಾಗಲೀ ನಮ್ಮನ್ನು ದುರ್ಬಲರಾಗಿಸುತ್ತವೆಯೇ ಹೊರತು ಅವುಗಳಿಂದ ನಮಗೆ ಯಾವುದೇ ಪ್ರಯೋಜನಗಳಿಲ್ಲ. ಜೊತೆಗೆ ನಮ್ಮ ಮನಶ್ಮಾಂತಿಯನ್ನೂ ಸಹ ಹಾಳುಮಾಡುತ್ತವೆ. ಎಲ್ಲರೂ ಹೆದರುವವರಾದರೇ ಸತ್ತ ಹೆಣದ ಪೋಸ್ಟ್ ಮಾರ್ಟಮ್ ಮಾಡುವವರು ಯಾರು? ಸತ್ತವರನ್ನ ಹೂಣುವವರು ಯಾರು? ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ, ಫ್ಯಾಕ್ಟರಿಗಳಲ್ಲಿ, ಕಂಪನಿಗಳಲ್ಲಿ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು ಯಾರು? ಇವರೆಲ್ಲರೂ ದೇವಮಾನವರಾ? ನಮ್ಮಂತೆಯೇ ನರ ಮನುಷ್ಯರು. ಇವರಿಗೂ ಭಯ ಅನ್ನೋದು ಇದ್ದೇ ಇರುತ್ತದೆ. ಆದರೆ ಅವರ ಜೀವನದ ಕಮಿಟ್ಮೆಂಟ್ಸ್, ಜವಾಬ್ದಾರಿಗಳ ಮುಂದೆ ಈ ಭಯ ಅನ್ನೋದೆಲ್ಲಾ ಬೆಲೆ ಕಳೆದುಕೊಂಡು ಮೂಲೆ ಗುಂಪಾಗುತ್ತದೆ.
ಹೀಗೆ ಚಿಂತಿಸುತ್ತಾ ಬೆಡ್ ಮೇಲೆ ಕುಳಿತಿದ್ದ ನನಗೆ ಬೆಳಗ್ಗೆ ಆಪರೇಷನ್ ಇರುವುದು ನೆನಪಿಗೆ ಬಂತು. ಅಮ್ಮ ಮಲಗಿದ್ದ ಕಡೆ ಮತ್ತೊಮ್ಮೆ ನೋಡಿ ಬೆಡ್ಶೀಟ್ ಹೊದ್ದು ಮಲಗಿದೆ.
- ಶಿವ