ಅಜ್ಞಾನದಿಂದ ಜ್ಞಾನದತ್ತ ಮತ್ತು ಅಂಧಕಾರದಿಂದ ಬೆಳಕಿನತ್ತ ಸಾಗುವಂತೆ ಮಾಡುವುದು ಅಧ್ಯಾತ್ಮ, ಅಂಕಣಗಾರ್ತಿ ಚಂಪಾ ಚಿನಿವಾರ್ ಅವರ ‘ಕಾರ್ತಿಕ ಮಾಸದ ತತ್ವ ದೀಪದ ಮಹತ್ವ’ ದ ಕುರಿತು ತಪ್ಪದೆ ಮುಂದೆ ಓದಿ…
ಕಾರ್ತಿಕ ಮಾಸವು ಹಿಂದೂ ಪಂಚಾಂಗದಲ್ಲಿ ಅತ್ಯಂತ ಪವಿತ್ರ ಮತ್ತು ಮಹತ್ವದ ಮಾಸವೆಂದು ಪರಿಗಣಿಸಲಾಗಿದೆ. ಈ ಮಾಸವು ದೀಪಾವಳಿ, ತುಳಸಿ ವಿವಾಹ, ಕಾರ್ತಿಕ ಪೂರ್ಣಿಮೆ ಹಾಗೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರಸಿದ್ಧವಾಗಿದೆ. ಕಾರ್ತಿಕ ಮಾಸವು ಶರದೃತುವಿನ ಮಾಸವಾಗಿದ್ದು, ದೇವರುಗಳ ಅನುಗ್ರಹ ಪಡೆದುಕೊಳ್ಳಲು ಮತ್ತು ಧಾರ್ಮಿಕ ಕಾರ್ಯಗಳನ್ನು ಮಾಡುವಲ್ಲಿ ಈ ಕಾಲವನ್ನು ಅತ್ಯಂತ ಶುಭಕರವೆಂದು ಭಾವಿಸಲಾಗಿದೆ.
ಕಾರ್ತಿಕ ಮಾಸದಲ್ಲಿ ನದೀ ಸ್ನಾನ, ಉಪವಾಸ ಮತ್ತು ಪ್ರಾರ್ಥನೆಗಳು ವಿಶೇಷ ಮಹತ್ವ ಹೊಂದಿವೆ. ದೇವತೆಗಳಾದ ವಿಷ್ಣು ಮತ್ತು ಶಿವನ ಪೂಜೆ ಮುಖ್ಯವಾಗಿದ್ದು, ಎಲ್ಲಾ ದೇವಸ್ಥಾನಗಳಲ್ಲಿ ದೀಪ ಹಚ್ಚಿ ದೇವರ ಅನುಗ್ರಹ ಪಡೆಯುತ್ತಾರೆ.
ಕಾರ್ತಿಕ ಮಾಸದಲ್ಲಿ ದೀಪ ಹಚ್ಚುವುದು ಹಿಂದೂ ಧಾರ್ಮಿಕ ಆಚಾರಗಳಲ್ಲಿ ಅತ್ಯಂತ ಮಹತ್ವ ಹೊಂದಿದೆ. ಈ ದೀಪ ಹಚ್ಚುವ ಪರಂಪರೆ ದೀಪಾವಳಿಯ ನಂತರ ಕಾರ್ತಿಕ ಮಾಸದ ಎಲ್ಲಾ ದಿನಗಳಲ್ಲಿಯೂ ಅನುಸರಿಸಲಾಗುತ್ತದೆ. ದೀಪ ಹಚ್ಚುವುದಕ್ಕೆ ಹಲವು ಆಧ್ಯಾತ್ಮಿಕ ಮತ್ತು ಪೌರಾಣಿಕ ಮಹತ್ವಗಳಿವೆ.
ದೀಪ ಹಚ್ಚುವುದು ಜ್ಞಾನ, ಶಾಂತಿ ಮತ್ತು ಶುದ್ಧತೆಯ ಪ್ರತೀಕವಾಗಿದೆ. ಇದು ಅಜ್ಞಾನದಿಂದ ಜ್ಞಾನದತ್ತ ಮತ್ತು ಅಂಧಕಾರದಿಂದ ಬೆಳಕಿನತ್ತ ಸಾಗುವುದನ್ನು ಸೂಚಿಸುತ್ತದೆ.

ಫೋಟೋ ಕೃಪೆ : ಅಂತರ್ಜಾಲ
ಕಾರ್ತಿಕ ಮಾಸದಲ್ಲಿ ದೀಪ ಹಚ್ಚುವುದರಿಂದ ಪಾಪಗಳು ಪರಿಹಾರವಾಗುತ್ತವೆ ಮತ್ತು ದೇವರ ಮೇಲೆ ಭಕ್ತರಿಗೆ ಅನಂತ ಭಕ್ತಿ ಭಾವ ಮೂಡುತ್ತದೆ. ವಿಶೇಷವಾಗಿ, ವಿಷ್ಣು ಮತ್ತು ಶಿವನ ಕೃಪಾಕಟಾಕ್ಷ ಪಡೆಯಲು, ಈ ದೀಪವು ಬಹಳ ಮಹತ್ವ ಉಳ್ಳದ್ದು.
ಈ ಮಾಸದಲ್ಲಿ ಹಚ್ಚಿದ ದೀಪಗಳಿಂದ ದೇವತೆಗಳ ಅನುಗ್ರಹ ಸಿದ್ಧಿಸುತ್ತದೆ. ಮನೆ, ದೇವಾಲಯ ಅಥವಾ ನದಿಯ ತೀರದಲ್ಲಿ ದೀಪ ಹಚ್ಚುವುದರಿಂದ ವಿಶೇಷವಾಗಿ ಮನಸಿಗೂ ಹಿತಕರವಾಗಿರುತ್ತದೆ ಹಾಗೂ ವಾತಾವರಣವೂ ಸುಂದರವಾಗಿರುತ್ತದೆ. ನದಿಗಳ ತೀರದಲ್ಲಿ ದೀಪ ಹಚ್ಚುವುದು ಪವಿತ್ರವೆಂದು ಪರಿಗಣಿಸಲ್ಪಡುತ್ತದೆ. ಇದು ಮುಕ್ತಿ ಮಾರ್ಗಕ್ಕೆ ದಾರಿ ಎಂದು ಭಾವಿಸಲಾಗುತ್ತದೆ.
ತ್ವಮೇವ ಮಾತಾ ಚ ಪಿತಾ ತ್ವಮೇವ
ತ್ವಮೇವ ಬಂಧುಶ್ ಚ ಸಖಾ ತ್ವಮೇವ
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ
ತ್ವಮೇವ ಸರ್ವಂ ಮಮ ದೇವದೇವ.
ಅರ್ಥ… ಯಾವುದೇ ಓರ್ವ ವ್ಯಕ್ತಿ ಸಮಸ್ಯೆಯಲ್ಲಿದ್ದಾಗ ಅಥವಾ ಗುರು – ಹಿರಿಯರ, ತಂದೆ – ತಾಯಿಗಳ ಮಾರ್ಗದರ್ಶನದ ಅವಶ್ಯಕತೆಯಿದ್ದಲ್ಲಿ ಈ ಮಂತ್ರವನ್ನು ಪಠಿಸಬೇಕು. ಶ್ರೀ ವಿಷ್ಣು ಮಂತ್ರವನ್ನು ಪಠಿಸುವುದರಿಂದ ಒಬ್ಬ ವ್ಯಕ್ತಿಯು ಹೆಚ್ಚಿನ ಏಕಾಗ್ರತೆಯನ್ನು ಗಳಿಸುತ್ತಾನೆ ಮತ್ತು ವಿಷ್ಣು ಆತನ ಜೀವನದ ಪ್ರತಿಯೊಂದು ಕಷ್ಟದ ಹಾದಿಯಲ್ಲೂ ಮಾರ್ಗದರ್ಶನ ನೀಡುತ್ತಾರೆಂದು ಋಷಿಮುನಿಗಳು ನಂಬಿದ್ದರು.
ಹೀಗೆ ಕಾರ್ತಿಕ ದೀಪದ ಹಚ್ಚುವು ಶ್ರದ್ಧೆ, ಪವಿತ್ರತೆ ಮತ್ತು ಧಾರ್ಮಿಕ ನಿಷ್ಠೆಗಳ ಸಂಕೇತವಾಗಿದೆ. ಕಾರ್ತಿಕ ಮಾಸದ ಹಬ್ಬಗಳ ಆಚರಣೆಯು ಹಿಂದೂ ಧಾರ್ಮಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ಅನೇಕ ವಿಶೇಷಗಳನ್ನು ಒಳಗೊಂಡಿದೆ. ಈ ಮಾಸದಲ್ಲಿ ಆಚರಿಸುವ ಪ್ರಮುಖ ಹಬ್ಬಗಳು ಮತ್ತು ಅವರ ವಿಶೇಷತೆಯನ್ನು ಗಮನಿಸಿದರೆ.
ದೀಪಾವಳಿ ಹಬ್ಬವು ಕಾರ್ತಿಕ ಮಾಸದ ಅಮಾವಾಸ್ಯೆಯ ದಿನದಲ್ಲಿ ಆಚರಿಸಲಾಗುತ್ತದೆ. ಇದು ಅಜ್ಞಾನದಿಂದ ಜ್ಞಾನದತ್ತ ಸಾಗುವ ಹಬ್ಬ. ಇದನ್ನು ಕೇವಲ ಒಂದು ಬೆಳಕಿನ ಹಬ್ಬವಾಗಿ ಮಾತ್ರವಲ್ಲದೆ, ಶ್ರೀರಾಮನು ರಾವಣನ ಅಟ್ಟಹಾಸವನ್ನು ಸಂಹರಿಸಿದ ಸಂತಸಕ್ಕಾಗಿ ಆಚರಿಸುವ ಹಬ್ಬವಾಗಿದೆ. ಬಲಿ ಚಕ್ರವರ್ತಿ ತನ್ನ ರಾಜ್ಯವನ್ನೆಲ್ಲಾ ವಾಮನಿಗೆ ಕೊಟ್ಟು, ವಾಮನನಿಂದ ವರವನ್ನು ಪಡೆದು ಬಲಿಪಾಡ್ಯಮಿ ಎಂಬ ಹೆಸರಿನಲ್ಲಿ ದೀಪಾವಳಿ ಆಚರಿಸುವ ಪದ್ದತಿ ಇದೆ.
ತುಳಸಿ ವಿವಾಹವು ಕಾರ್ತಿಕ ಮಾಸದಲ್ಲಿ ನಡೆಯುತ್ತದೆ. ತುಳಸಿಯನ್ನು ಶ್ರೀಮಹಾವಿಷ್ಣುವಿನ ಅವತಾರವಾದ ಶ್ರೀಕೃಷ್ಣನಿಗೆ ಮದುವೆ ಮಾಡುವುದು ಈ ಹಬ್ಬದ ಮುಖ್ಯ ಆಚರಣೆ. ಇದು ವಿವಾಹದ ಶುಭಕಾರ್ಯಗಳ ಆರಂಭದ ಸಂಕೇತವಾಗಿದ್ದು, ಜನರು ಧಾರ್ಮಿಕ ಪೂಜೆಯ ಮೂಲಕ ತುಳಸಿ ಮತ್ತು ವಿಷ್ಣುವಿಗೆ ಅರ್ಪಣೆ ಮಾಡುತ್ತಾರೆ.

ಫೋಟೋ ಕೃಪೆ : ಅಂತರ್ಜಾಲ
ದೀಪಾವಳಿ ನಂತರ ಬರುವ “ಯಮದ್ವಿತೀಯೆ” ಅಥವಾ “ಭ್ರಾತೃ ದ್ವಿತೀಯೆ” ದಿನದಂದು ಅಣ್ಣ ತಂಗಿಯರ, ಅಕ್ಕ ತಮ್ಮಂದಿರ ಬಾಂಧವ್ಯದ ಹಬ್ಬವಾಗಿದೆ. ಅಣ್ಣ ತಮ್ಮಂದಿರ ಶ್ರೇಯಸ್ಸಿಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ, ಹಬ್ಬದಡಿಗೆ ಊಟ ಬಡಿಸಿ, ಅವರ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಸಂತಸ ಪಡುತ್ತಾರೆ.
ಕಾರ್ತಿಕ ಮಾಸದ ಪೂರ್ಣಿಮೆಯ ದಿನವನ್ನು “ದೇವ ದೀಪಾವಳಿ” ಎಂದೂ ಕರೆಯಲಾಗುತ್ತದೆ. ದೀಪಗಳು ಹಚ್ಚಿ ನದೀ ತೀರಗಳಲ್ಲಿ ಪುಣ್ಯಸ್ನಾನ ಮಾಡುವ ಪರಂಪರೆಯಿದೆ. ಸಾಂಪ್ರದಾಯಿಕವಾಗಿ ದೇವತೆಗಳು ತಮ್ಮ ಲೋಕದಲ್ಲಿ ದೀಪ ಹಚ್ಚುವ ಹಬ್ಬವೆಂದು ಪುರಾಣಗಳಲ್ಲಿ ಹೇಳಲಾಗಿದೆ.
ಕಾರ್ತಿಕ ಮಾಸವು ಶಿವನಿಗೆ ಅತ್ಯಂತ ಪ್ರಿಯವಾದ ಮಾಸವೆಂದು ಪರಿಗಣಿಸಲಾಗುತ್ತದೆ. ಈ ಮಾಸದಲ್ಲಿ ಶಿವನಿಗೆ ನಿತ್ಯ ಪೂಜೆ ಮಾಡುವುದು ಮಹತ್ತರವಾದ ಧಾರ್ಮಿಕ ಕರ್ಮವೆಂದು ನಂಬಲಾಗುತ್ತದೆ. ಕಾರ್ತಿಕ ಮಾಸದಲ್ಲಿ ಬರುವ ನಾಲ್ಕು ಅಥವಾ ಐದು ಸೋಮವಾರವನ್ನು “ಕಾರ್ತಿಕ ಸೋಮವಾರ” ಎಂದು ವಿಶೇಷ ಪೂಜಾ ವಿಧಿಗಳನ್ನು ನಡೆಸಲಾಗುತ್ತದೆ. ಈ ಮಾಸದಲ್ಲಿ ಯಾವುದಾದರೂ ಒಂದು ಸೋಮವಾರ ಶಿವನ ದರ್ಶನ ಮಾಡಲೇಬೇಕು ಎಂಬ ಪದ್ಧತಿಯಲ್ಲಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಎಣ್ಣೆ ದಾನ, ಬತ್ತಿ ದಾನ ಕೊಟ್ಟು ತಮ್ಮ ಇಷ್ಟಾರ್ಥಗಳು ನೆರವೇರುವಂತೆ ಶಿವನಲ್ಲಿ ಪ್ರಾರ್ಥಿಸುತ್ತಾರೆ.
ಕೊನೆಯ ಸೋಮವಾರದಂದು ಎಲ್ಲಾ ಶಿವನ ದೇಗುಲಗಳಲ್ಲಿ ಲಕ್ಷ ದೀಪೋತ್ಸವ ಮಾಡುತ್ತಾರೆ. ಪ್ರತಿಯೊಬ್ಬ ಭಕ್ತನೂ ದೀಪ ಹಚ್ಚಿ ದೇವರ ಕೃಪೆಗೆ ಪಾತ್ರನಾಗುತ್ತಾನೆ.
ಕರಚರಣ ಕೃತಂ ವಾ ಕಾಯ ಜಂ ಕರ್ಮಜಂ ವಾ ಶ್ರವನ್ನಾಯಂಜಂ ವಾ ಮಾಂಸಂ ವಾ ಪರದಂ ವಿಹಿತಂ ವಿಹಿತಂ ವಾ ಸರ್ವ ಮೇತತ್ ಕ್ಷಮಸ್ವ ಜಯ್ ಕರುಣಾಬ್ಧೇ ಶ್ರೀ ಮಹಾದೇವ ಶಂಭೋ..!!
ಅರ್ಥ – ಒತ್ತಡ, ನಿರಾಕರಣೆ, ವೈಫಲ್ಯ, ಖಿನ್ನತೆ ಮತ್ತು ಇತರ ನಕಾರಾತ್ಮಕ ಶಕ್ತಿಗಳ ಹೊರೆಯಿಂದ ದೇಹ, ಮನಸ್ಸು ಮತ್ತು ಆತ್ಮವನ್ನು ಶುದ್ಧೀಕರಿಸುವುದಕ್ಕಾಗಿ ಸರ್ವಶಕ್ತನನ್ನು ಸ್ತುತಿಸಬೇಕು.
ಈ ಹಬ್ಬಗಳು ಮತ್ತು ಆಚರಣೆಗಳು ಜೀವನದಲ್ಲಿ ಶ್ರದ್ಧೆ, ಶಾಂತಿ, ಪವಿತ್ರತೆ ಮತ್ತು ಧಾರ್ಮಿಕ ನಿಷ್ಠೆಯನ್ನು ಹೆಚ್ಚಿಸಲು ಪ್ರಮುಖ ಪಾತ್ರವನ್ನು ವಹಿಸುತ್ತವೆ.
ಕಾರ್ತಿಕ ಮಾಸದಲ್ಲಿ ದೀಪಗಳ ದಾನವನ್ನು ಬಹಳ ಶ್ರೇಷ್ಠ ಮತ್ತು ಪುಣ್ಯದ ಕಾರ್ಯವೆಂದು ಪರಿಗಣಿಸಲಾಗುತ್ತದೆ. ದೀಪದ ದಾನವು ಜ್ಞಾನ, ಶುದ್ಧತೆ, ಧರ್ಮ ಮತ್ತು ಪವಿತ್ರತೆಯನ್ನು ಪ್ರತಿನಿಧಿಸುತ್ತದೆ. ಇದಕ್ಕೆ ಹಲವು ಪುರಾಣಿಕ ಮತ್ತು ಆಧ್ಯಾತ್ಮಿಕ ಮಹತ್ವಗಳಿವೆ:
ದೀಪವು ಅಜ್ಞಾನ (ಅಂಧಕಾರ)ದ ಪ್ರತೀತಿಯಾಗಿದ್ದು, ದೀಪದ ದಾನದಿಂದ ಜ್ಞಾನ ಮತ್ತು ಆತ್ಮಶುದ್ಧಿಯ ಬೆಳಕು ಹರಡುತ್ತದೆ ಎಂದು ನಂಬಲಾಗುತ್ತದೆ. ಇದನ್ನು ದೈವೀಕ ಜ್ಞಾನವನ್ನಾಗಿ ಪರಿಗಣಿಸಲಾಗಿದೆ, ಅದರಿಂದ ಮೂಢನಂಬಿಕೆ ಮತ್ತು ತಪ್ಪು ಮಾರ್ಗಗಳಿಂದ ದೂರ ಹೋಗಲು ಸಹಕಾರಿಯಾಗುತ್ತದೆ.
ಪುರಾಣಗಳಲ್ಲಿ, ಕಾರ್ತಿಕ ಮಾಸದಲ್ಲಿ ದೀಪದ ದಾನ ಮಾಡುವುದು ಪುಣ್ಯದ ಕಾರ್ಯವೆಂದು ವರ್ಣಿಸಲಾಗಿದೆ. ವಿಷ್ಣು ಮತ್ತು ಶಿವನಿಗೆ ನಮನ ಸಲ್ಲಿಸುವಂತೆ, ದೀಪದ ದಾನದಿಂದ ದೇವತೆಗಳ ಅನುಗ್ರಹವೂ ಸಹ ಲಭಿಸುತ್ತದೆ. “ಪ್ರತಿ ದೀಪದ ಜ್ಯೋತಿಯು ಸಾವಿರ ವರ್ಷಗಳ ಪಾಪವನ್ನು ನಿವಾರಿಸುತ್ತವೆ” ಎಂಬ ನಂಬಿಕೆಯಿಂದ, ನಿರಂತರ ಪುಣ್ಯ ಸಂಪಾದಿಸಲು ಹಾಗು ಜೀವನದಲ್ಲಿ ಅಂಧಕಾರ ಹೋಗಿ ಬೆಳಕು ನೀಡುತ್ತದೆ.
ದೀಪದ ದಾನವು ಮೋಕ್ಷದ ಮಾರ್ಗಕ್ಕೂ ದಾರಿಯಾಗಿದೆ. ವಿಶೇಷವಾಗಿ ಕಾರ್ತಿಕ ಮಾಸದಲ್ಲಿ ದೀಪದ ದಾನ ಮಾಡುವವರನ್ನು ಭಗವಂತನು ವೈಕುಂಠದಲ್ಲಿ ಅವನ ನಿವಾಸದಲ್ಲಿಯೇ ಮುಕ್ತಿ ಕೊಡುತ್ತಾನೆ ಎಂಬ ಪುರಾಣಿಕ ಕಥೆಗಳಿವೆ. ದೀಪದ ದಾನವು ಮಹರ್ಷಿಗಳ (ಆಧ್ಯಾತ್ಮಿಕ ತಪಸ್ವಿಗಳ) ಪರಂಪರೆಯಲ್ಲಿ ತುಂಬಾ ಮುಖ್ಯವಾಗಿದೆ. ತಪಸ್ಸು ಮತ್ತು ಧಾರ್ಮಿಕ ಕಾರ್ಯಗಳಲ್ಲಿ ದೀಪದ ಮಹತ್ವವನ್ನು ಈ ಮಾಸದಲ್ಲಿ ಜೋರಾಗಿ ವಿವರಿಸಲಾಗಿದೆ. ದೇವಾಲಯ, ನದಿತೀರಗಳು ಅಥವಾ ತೀರ್ಥಕ್ಷೇತ್ರಗಳಲ್ಲಿ ದೀಪದ ದಾನದಿಂದ ವಿಶೇಷ ಪುಣ್ಯ ದಕ್ಕುತ್ತದೆ.
ದೀಪದ ದಾನವು ಕುಟುಂಬದ ಸಮೃದ್ಧಿ, ಶಾಂತಿ ಮತ್ತು ನೆಮ್ಮದಿ ತರಲು ಸಹಾಯಕವಾಗುತ್ತದೆ. ದೀಪವು ಮನೆಯಲ್ಲಿ ಧನ, ಧರ್ಮ ಮತ್ತು ಆಧ್ಯಾತ್ಮಿಕ ಬೆಳಕನ್ನು ತರಲು ಮುಖ್ಯವಾಗುತ್ತದೆ. ದೀಪದ ದಾನವು ದಾರಿದ್ರ್ಯ, ರೋಗ ಮತ್ತು ಇತರ ಕಷ್ಟಗಳಿಂದ ದೂರವಿರುವ ಪ್ರತೀಕವಾಗಿದೆ. ಹೀಗೆ, ಕಾರ್ತಿಕ ಮಾಸದಲ್ಲಿ ದೀಪದ ದಾನವು ಆಧ್ಯಾತ್ಮಿಕ ಶ್ರದ್ಧೆ, ಪುಣ್ಯ, ಮತ್ತು ಧರ್ಮದ ಸಂಕೇತವಾಗಿ ಪರಿಗಣಿಸಲ್ಪಟ್ಟಿದ್ದು, ಮೋಕ್ಷದ ಕಡೆಗೆ ಒಯ್ಯುವ ಶ್ರೇಷ್ಠ ಕರ್ಮವೆಂದು ಭಾವಿಸಲಾಗಿದೆ.
ಈ ಮಾಸದಲ್ಲಿ ತುಲಾ ಸಂಕ್ರಮಣದ ಪ್ರಯುಕ್ತ ಕಾವೇರಿ ನದಿಯಲ್ಲಿ ಸ್ನಾನ ಮಾಡುತ್ತಾರೆ. ನದಿಯ ಸ್ನಾನ ತಮ್ಮ ಪಾಪಗಳನ್ನು ತೊಳೆದು ಹಾಕುತ್ತದೆ ಎಂದು ನಂಬಿದ ಭಕ್ತರು ಈ ಮಾಸದಲ್ಲಿ ತೀರ್ಥ ಸ್ನಾನ ಮಾಡಿ ಪುನೀತರಾಗುತ್ತಾರೆ. ಚಾತುರ್ಮಾಸ ಮಾಡಿದವರು ಕಾರ್ತಿಕ ಮಾಸದಲ್ಲಿ ತಮ್ಮ ಬಂಧುಗಳೊಂದಿಗೆ ಧಾತ್ರಿ ಹವನ ಮಾಡಿ, ವನಭೋಜನ ಮಾಡಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಚಾತುರ್ಮಾಸದಲ್ಲಿ ಪಥ್ಯದ ಆಹಾರ ಸೇವನೆಯಿಂದ ದೇಹದಲ್ಲಿ ವ್ಯತ್ಯಾಸವಾಗಿದ್ದರೆ ಧಾತ್ರಿ ಹವನದ ಸೇವನೆಯಿಂದಲೇ ಅವರ ಆರೋಗ್ಯ ಸಮಸ್ಯೆ ಪರಿಹಾರವಾಗುತ್ತದೆ ಎಂದು ಹೋಮ ಹವನ ಮಾಡುವ ಪದ್ಧತಿ ಇದೆ.
ಕಾರ್ತಿಕ ಮಾಸವು ಸಾಂಪ್ರದಾಯಿಕ ಹಿಂದೂ ಕನ್ನಡ ಕ್ಯಾಲೆಂಡರ್‌ನಲ್ಲಿ ಎಂಟನೇ ತಿಂಗಳಾಗಿದೆ. ವಿಷ್ಣು ಮತ್ತು ಶಿವನ ದೇವಸ್ಥಾನಗಳಿಗೆ ಭಕ್ತಾದಿಗಳು ಹೋಗುತ್ತಾರೆ. ಕಾರ್ತಿಕ ಸೋಮವಾರದ ದಿನಗಳಲ್ಲಿ ಉಪವಾಸ ಮತ್ತು ಕಾರ್ತಿಕ ಮಾಸ ವ್ರತಗಳನ್ನು ಆಚರಿಸುತ್ತಾರೆ. ಈ ಮಾಸದಿಂದಲೇ ಅನೇಕ ಭಕ್ತರು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು ಪಾದಯಾತ್ರೆ ಕೈಗೊಳ್ಳುತ್ತಾರೆ. ಪಾದಯಾತ್ರೆಯ ಸಮಯದಲ್ಲಿ ಯಾತ್ರಿಗಳು ನಡೆದು ಹೋಗುವ ಪ್ರತಿಯೊಂದು ಹಳ್ಳಿ, ಪಟ್ಟಣ, ಊರೂರುಗಳ ದಾರಿಯಲ್ಲಿ ದೀಪ ಹಚ್ಚಿ ಯಾತ್ರಾರ್ಥಿಗಿಳಿಗೆ ಸ್ವಾಗತ ಕೋರುತ್ತಾರೆ. ಕತ್ತಲಾದ ಕಾರಣ ಒಂದು ರಾತ್ರಿ ಊರಿನಲ್ಲಿ ತಂಗಿದ್ದು ಅಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ, ದೇವರ ಉತ್ಸವ, ಜಾತ್ರೆಗಳಲ್ಲಿ ಪಾಲ್ಗೊಳ್ಳುತ್ತಾರೆ.
ಹೀಗೆ ನಮ್ಮ ಸನಾತನ ಧರ್ಮವನ್ನು ಪ್ರತಿ ಹಬ್ಬ ಆಚರಿಸುವಾಗಲೂ ವೈಜ್ಞಾನಿಕವಾಗಿಯೂ, ಧಾರ್ಮಿಕವಾಗಿಯೂ ಒಂದು ಅರ್ಥದಿಂದ ಆಚರಿಸಿಕೊಂಡು ಬರುವ ಭಕ್ತರೆಲ್ಲರಿಗೂ ಭಗವಂತನ ಕೃಪಾಕಟಾಕ್ಷ ಲಭಿಸುತ್ತದೆ.
- ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ.
