ನನ್ನ ಉಸಿರುವವರೆಗೂ ನಾನು ಪತ್ರಿಕೋದ್ಯಮ ಸೇವೆ ಮಾಡಬೇಕೆಂಬುದು ನನ್ನಿಚ್ಚೆ ಎನ್ನುವ ಪತ್ರಕರ್ತರಾದ ಬಿ.ವಿ.ಅನುರಾಧ ಅವರ ಪರಿಚಯ ಮತ್ತು ಅವರ ಅನುಭವದ ಮಾತನ್ನು ತಪ್ಪದೆ ಮುಂದೆ ಓದಿ…
ನನಗೂ ಪತ್ರಿಕೋದ್ಯಮಕ್ಕೂ ಯಾವುದೋ ನಂಟಿತ್ತು. ನಾನು 5ನೇ ತರಗತಿಯಲ್ಲಿದ್ದಾಗ ಒಂದು ಮಗುವಿನ ಬಗ್ಗೆ ಕವನ ಬರೆದಿದ್ದೆ. ಆ ನಂತರ 9ನೇ ತರಗತಿಯಲ್ಲಿದ್ದಾಗ ಕತೆ ಬರೆಯಲು ಶುರು ಮಾಡಿದೆ. ಅದ್ಯಾವುದು ಪ್ರಕಟವಾಗಲಿಲ್ಲ. ಅದು ಹೇಗೆ, ಎಲ್ಲಿಗೆ ಕಳಿಸಬೇಕೆಂಬುದು ಗೊತ್ತಿಲ್ಲದೆಯೊ, ಮತ್ತೇನೋ ಬಿಡಿ. ಆನಂತರ ದ್ವಿತೀಯ ಪಿಯುಸಿಯಲ್ಲಿ ಕಾದಂಬರಿ ಒಂದು ಬರೆದಿಟ್ಟಿದ್ದೆ. ಅದು ನಾನು ಎರಡನೇ ಪದವಿ ಮಾಡುವಾಗ ಆಕಸ್ಮಿಕವಾಗಿ ಪ್ರಕಾಶಕರೊಬ್ಬರು ಪರಿಚಯವಾದರು. ಅವರು ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡಲು ಬಂದವರು ನನ್ನೊಂದಿಗೆ ಮಾತಿಗೆ ಸಿಕ್ಕಿ ಹೀಗೆ ಪುಸ್ತಕಗಳ ಬಗ್ಗೆ ಮಾತಾಡುವಾಗ ನಾನು ಬರೆದಿಟ್ಟಿದ್ದ ಕಾದಂಬರಿ ಕುರಿತು ಹೇಳಿದೆ. ಅದನ್ನು ನಾನು ಕೊಂಡೊಯ್ಯುವೆ. ಓದಿ ಅದು ಪ್ರಕಟಣೆಗೆ ಸೂಕ್ತವಾ ಅಂತ ಹೇಳ್ತೀನಿ ಅಂದವರು, ನನಗೆ ಆ ಪ್ರತಿಯನ್ನು ಎರಡನೇ ಬಾರಿ ಮತ್ತೊಮ್ಮೆ ಓದಿ ತಿದ್ದಿಕೊಡಲು ಅವಕಾಶ ಕೊಡದೆ ಪ್ರಕಟಿಸಿಯೇಬಿಟ್ಟರು. ನನಗೆ ಸಂತಸವಾದರೂ, ಆಗ ನನಗೆ ಓದುವುದು ಬಿಟ್ಟರೆ ಬರವಣಿಗೆ ಹೀಗಿರಬೇಕು, ಹಾಗಿರಬಾರದು ಅಂತೆಲ್ಲಾ ಏನೂ ಗೊತ್ತಿಲ್ಲದ ಕಾಲ. ಅಂತೂ ಪುಸ್ತಕ ಬಂತಲ್ಲ ಒಂದು ಖುಷಿ ಬಿಟ್ಟರೆ ಮತ್ತೇನು ಗೊತ್ತಿಲ್ಲ. ಅದು ಅಲ್ಲಿಗೆ ನಿಂತಿತು.
ಆ ಮೇಲೆ ಸಣ್ಣಪುಟ್ಟ ಕವನಗಳು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಬಿಟ್ಟರೆ ಆ ಮೇಲೆ ಬರವಣಿಗೆಯಲ್ಲಿ ಬರೆದು ದೊಡ್ಡ ಸಾಧನೆ ಏನು ಮಾಡಲಿಲ್ಲ ಅದು ಬೇರೆ ವಿಚಾರ. ನನ್ನ ಬರವಣಿಗೆಗೆ ಅಲ್ಲಿಗೆ ಮುಕ್ತಾಯ ಬಿತ್ತು. ಮತ್ತೆಂದು ಬರೆಯುವ ಗೋಜಿಗೆ ನಾನು ಹೋಗಲಿಲ್ಲ. ಓದು, ಕೆಲಸ, ಮದುವೆ, ಆ ಊರು, ಈ ಊರು ಸುತ್ತಾಡಿ, ಬೆಂಗಳೂರಿಗೆ ಬಂದು ನೆಲೆಸಿದ ಮೇಲೆ ಕೆಲಸ ಮಾಡುವುದು ಅನಿವಾರ್ಯವಾಯಿತು. ಆಗ ಕೆಲಸದ ಬೇಟೆ ಶುರುವಿಟ್ಟುಕೊಂಡೆ.

ಪತ್ರಿಕೋದ್ಯಮದ ಕದ ತೆರೆಯಿತು. ಒಳಹೊಕ್ಕೆ. ಮೊದಲಿಗೊಂದು ಕರ್ನಾಟಕ ನ್ಯೂಸ್‌ನೆಟ್ ಎಂಬ ಸುದ್ದಿ ಸಂಸ್ಥೆಯಲ್ಲಿ ಉಪಸಂಪಾದಕಿಯಾಗಿ ಆಯ್ಕೆಯಾದೆ. ಅಲ್ಲಿ ನನಗೆ ಬರೆಯಲು ಒಳ್ಳೆಯ ಅವಕಾಶಗಳು ಸಿಕ್ಕಿತು. ನಾವು ಸುದ್ದಿ, ಲೇಖನ, ಅಂಕಣಗಳು ಬರೆದು ರಾಜ್ಯದ ವಿವಿಧ ಸ್ಥಳೀಯ ಪತ್ರಿಕೆಗಳಿಗೆ ಕಳಿಸಿಕೊಡ್ತಿದ್ದೆವು. ಆ ನಿಟ್ಟಿನಲ್ಲಿ ನಾನು ಮಕ್ಕಳ ಕತೆಗಳನ್ನು ಅಂಕಣರೂಪದಲ್ಲಿ ಬರೆದೆ. ನಡುನಡುವೆ ಲೇಖನಗಳು ಬರೆದೆ. ಅಲ್ಲಿಂದ ಸಂಯುಕ್ತ ಕರ್ನಾಟಕದಲ್ಲಿ ಉಪ ಸಂಪಾದಕಿಯಾಗಿ ಅವಕಾಶ ಸಿಕ್ಕಿತು. ಅಲ್ಲಿಗೆ ಶಿಫ್ಟ್ ಆದೆ. ಅಲ್ಲಿ 2 ವರ್ಷ ಕೆಲಸ ಮಾಡಿದೆ. 2 ವರ್ಷದ ನನ್ನ ಮಗನ ಟೈಫಾಯಿಡ್‌ನಿಂದ ಅಲ್ಲಿ ರಿಸೈನ್ ಮಾಡಬೇಕಾಗಿ ಬಂತು. ಮಗನನ್ನು ಸುಧಾರಿಸಿ, ಫ್ರೀಲ್ಯಾನ್ಸ್ ಆಗಿ ಬರೆಯುವ ಆಯೋಚನೆಯಲ್ಲಿದ್ದೆ. ಆದರೆ, ಉದಯವಾಣಿಯಲ್ಲಿ ಮತ್ತೊಂದು ಅವಕಾಶ ದೊರೆಯಿತು. ಅಲ್ಲಿಯೇ ನಾನು ಹೆಚ್ಚು ಬರೆಯಲು ಕಲಿತದ್ದು, ಬರೆದದ್ದು. ಉದಯವಾಣಿಯಲ್ಲಿ 20 ವರ್ಷಗಳ ಸುಧೀರ್ಫ ಪಯಣದಲ್ಲಿ ಕೊರೊನಾ ಸಾಂಕ್ರಾಮಿಕ ನನ್ನ ವೃತ್ತಿ ಜೀವನದ ಸಂತ್ರಸ್ತೆಯನ್ನಾಗಿಸಿತು.
ಆಗ ಮತ್ತೊಮ್ಮೆ ಕೆಲಸದ ಬೇಟೆಗೆ ಅಣಿಯಾದೆ. ಆ ಸಮಯದಲ್ಲಿ ಆಕಾಶವಾಣಿಗೆ ಅವಲೋಕನ, ಚಿಂತನ ಬರೆಯುತ್ತಿದ್ದೆ. ನನಗೆ ಕೆಲಸ ದೊಡ್ಡದಾ, ಚಿಕ್ಕದಾ, ಅಧಿಕ ಸಂಬಳಕ್ಕಿಂತ ನಾನು ಕಾರ್ಯನಿರತ ಪತ್ರಕರ್ತಳಾಗಿರುವುದು ಮುಖ್ಯವಾಗಿತ್ತು. ಸಂಜೆವಾಣಿಯಲ್ಲಿ ಒಂದು ಅವಕಾಶ ಸಿಕ್ಕಿತು. 6 ತಿಂಗಳು ಅಲ್ಲಿ ಕೆಲಸ ಮಾಡಿದೆ. ಮತ್ತೆ ಅಲ್ಲಿಂದ ಸಂಯುಕ್ತ ಕರ್ನಾಟಕ ಅಂಗಳ ಕೈಬೀಸಿತು. ಅಲ್ಲಿಗೆ ಬಂದೆ, ಅಲ್ಲಿಂದ ಕನ್ನಡಪ್ರಭದಲ್ಲಿ ಕರೆ ಬಂತು ಅಲ್ಲಿಗೆ ಹಾರಿದೆ. ಹೀಗೆ ನನ್ನ ಪತ್ರಿಕೋದ್ದಯಮದ ಪಯಣ ಸಾಗಿ ಬಂದ ಹಾದಿ. ಪತ್ರಿಕೋದ್ಯಮ ಬಿಟ್ಟು ಬೇರೆ ಕೆಲಸ ಊಹಿಸಿಕೊಳ್ಳಲೂ ನನ್ನಿಂದ ಸಾಧ್ಯವಾಗದಷ್ಟು ನಾನು ಅದರಲ್ಲಿ ಊರಿಬಿಟ್ಟಿದ್ದೀನಿ. ಆದರೆ ಈಗೀಗ ಆಗಾಗ ನನ್ನ ಆರೋಗ್ಯ ಕೈಕೊಡುತ್ತಿದೆ. ಅದೊಂದು ಭಯ ನನ್ನನ್ನು ಕಾಡುತ್ತಿದೆ. ಅಂದರೆ, ಎಲ್ಲಿ ನಾನು ಫೀಲ್ಡ್‌ನಿಂದ ದೂರಾಬೇಕಾಗುತ್ತೋ ಎಂಬ ಆತಂಕ ಅಷ್ಟೆ. ನನ್ನ ಉಸಿರುವವರೆಗೂ ನಾನು ಪತ್ರಿಕೋದ್ಯಮ ಸೇವೆ ಮಾಡಬೇಕೆಂಬುದು ನನ್ನಿಚ್ಚೆ ಅಷ್ಟೆ.
ನಾನು ನಿಮ್ಮ ಅನುರಾಧ,
- ಬಿ.ವಿ.ಅನುರಾಧ – ಪತ್ರಕರ್ತರು
