ಬಾದಾಮಿ ಪ್ರವಾಸ ಕಥನ (ಭಾಗ – ೨)

ದೇಶ ಸುತ್ತಿ ನೋಡು ಕೋಶ ಓದಿ ನೋಡುವ ಜನ ನಾನು…ಕರ್ನಾಟಕದ ಇಂಚಿಂಚು ಸ್ಥಳಗಳನ್ನು ನೋಡುವ ಹಂಬಲ ನನ್ನಲಿದೆ. ಆ ನನ್ನ ಪುಟ್ಟ ಆಸೆಗೆ ನನ್ನ ಗಂಡ, ಮಕ್ಕಳು ಯಾವಾಗಲೂ ಜೊತೆಗಾರರು. ನಾನು ಇತ್ತೀಚಿಗೆ ಬಾದಾಮಿಗೆ ಭೇಟಿ ನೀಡಿದ್ದೆ, ಅದರ ಸೌಂದರ್ಯ ನನ್ನ ಪದಗಳಲ್ಲಿ ನಿಲುಕುವುದಿಲ್ಲ, ಆದರೆ ನನ್ನ ಅನುಭವವನ್ನು ಮಾತ್ರ ನನ್ನ ಪ್ರವಾಸ ಕಥನದಲ್ಲಿ ಹಂಚಿಕೊಳ್ಳುತ್ತಿದ್ದೇನೆ ತಪ್ಪದೆ ಓದಿ…

ನಮ್ಮ ರೂಮ್ ನಿಂದ ಬಾದಾಮಿ ಗುಹೆ ದೂರದಿಂದ ಕಾಣುತ್ತಿತ್ತು. ಎಷ್ಟು ಬೇಗ ಆಗುತ್ತೋ ಅಷ್ಟು ಬೇಗ ಗುಹೆಯನ್ನು ಹತ್ತಿರದಿಂದ ದರ್ಶನ ಮಾಡಬೇಕು ಅಂತ ಕಾತುರಳಾಗಿದ್ದೆ. ಬೇಗ ಎದ್ದು ಕಿಟಕಿಯಿಂದ ದೂರದಲ್ಲಿ ಕಾಣುತ್ತಿದ್ದ ಗುಹೆ ನೋಡುತ್ತಾ “ಪದ್ದಣ್ಣ ಎದ್ದೇಳು… ಗುಹೆ ನೋಡೋಕೆ ಬೇಗ ಹೋಗೋಣ. ಬೆಟ್ಟ ದೊಡ್ಡದು ಇದ್ದ ಹಾಗೆ ಇದೆ. ಬಿಸಿಲು ಬಂದ್ರೆ ಬೆಟ್ಟ ಹತ್ತೋಕೆ ಕಷ್ಟ ಆಗುತ್ತೆ. ಬೇಗ ಎದ್ದೇಳ್ರಿ”… ಅಂತ ಎಲ್ಲರಿಗೂ ಅಲಾರಾಂ ತರ ಹೊಡ್ಕೊಂಡೇ.. ಅಲಾರಾಂನ ತಲೆಗೆ ಕುಟ್ಟದ ಹಾಗೆ ಅಪ್ಪ ಮಕ್ಕ್ಳು ಎಲ್ಲಿ ಹೋದ್ರು ಗೊಳೋ ತಪ್ಪೋಲ್ಲ. ರಜೆ ಇದ್ದಾಗ್ಲೂ ನಿನ್ನ ಕಿರಿ ಕಿರಿ ತಪ್ಪೋಲ್ಲ…ಅಂತ ನನ್ನ ಮಾತು ಕಿವಿ ಒಳಕ್ಕೆ ಇಳಿಯದಂತೆ ತಲೆ ದಿಂಬನ್ನು ಕಿವಿಗೆ ಒತ್ತಕ್ಕೊಂಡು ಮಲಗಿದರು. ಬೆಳಗ್ಗೆ ಬೇಗ ಎದ್ದಿದ್ದು ಅಲ್ಲದೆ ಕಿರಿ ಕಿರಿ ಅನ್ನೋ ಮಾತು ಕೇಳೋಕೆ ಬಾದಾಮಿಗೆ ಬರಬೇಕಿತ್ತಾ ಅಂತ ಟಿವಿ ಹಾಕೊಂಡು ಸುಮ್ನೆ ನೋಡ್ತಾ ಕೂತೆ.

ಸ್ವಲ್ಪ ಹೊತ್ತಾದ್ಮೇಲೆ ಒಬ್ಬೊಬ್ಬರೇ ಎದ್ದು ಬ್ರೆಶ್ ಎಲ್ಲಿ?…ಟಾವೆಲ್ ಎಲ್ಲಿ?… ನನ್ನ ಬಟ್ಟೆ ಎಲ್ಲಿ?… ಅಂತ ಒಂದೊಂದೆ ಕೇಳೋಕೆ ಶುರು ಮಾಡಿದ್ರು. ನಂಗೆ ರೂಮ್ ನಲ್ಲಿ ಅಡುಗೆ ಮನೆ ಒಂದಿರಲಿಲ್ಲ ಅನ್ನೋದು ಬಿಟ್ರೆ ನನ್ನ ನಿತ್ಯದ ಬದುಕಿನ ಯಾವ ಕೆಲಸನೂ ಬದಲಾಗಿರಲಿಲ್ಲ. ಎಲ್ಲರನ್ನು ರೆಡಿ ಮಾಡ್ಕೊಂಡು ತಿಂಡಿ ತಿಂದು ಕಾರ್ ಹತ್ತುವಷ್ಟರಲ್ಲಿ ಒಂಬತ್ತು ಗಂಟೆಯಾಗಿತ್ತು. ಕಾರ್ ಹತ್ತುವ ಮುಂಚೆ ಹೋಟೆಲ್ ಸೆಕ್ಯೂರಿಟಿಗೆ “ಬೆಟ್ಟಕ್ಕ್ ಹೆಂಗ್ ಹೋಗೋದ್ರಿ”…ಅಂತ ಪದ್ದಣ್ಣ ಕೇಳಿದ. ಅವರು ಕೈಯಲ್ಲಿಯೇ ಬೆಟ್ಟ ಹತ್ತಿಸಿ ಬಿಟ್ರು. ಹಿಂಗ್ ಹೋಗ್ರಿ… ಅಲ್ಲಿ ಹೊಳ್ರಿ… ಹಂಗ್ ಮುಂದ್ ಹೋಗ್ರಿ ಅಂತೇಲ್ಲ ಹೇಳಿದ್ರು.

ನಾವು ಅದೇ ಆತ್ಮವಿಶ್ವಾಸದಲ್ಲಿ ಬೆಟ್ಟದ ದಾರಿ ಹಿಡಿದ್ವಿ. ರಸ್ತೆಯಲ್ಲಿ ಸ್ವಲ್ಪ ಗೊಂದಲಗಳು ಇದ್ದರಿಂದ ರಸ್ತೆ ಮಧ್ಯೆ ದಾಟುತ್ತಿದ್ದ ಅಜ್ಜನನ್ನು ಕೇಳ್ತೀನಿ ಅಂತ ಪದ್ದಣ್ಣ ಕಾರ್ ನ ಗ್ಲಾಸ್ ಇಳಿಸಿದ. “ಪದ್ದಣ್ಣ…ಇದು ನಮ್ಮ ಏರಿಯಾ… ಇಲ್ಲಿ ಜನಕ್ಕ ನನ್ನ ಭಾಷೆ ಅರ್ಥಾಗುತ್ತೆ ಸುಮ್ನಿರು” ಅಂತ ಪದ್ದಣ್ಣನಿಗೆ ಸುಮ್ನೆ ಕೂರಿಸಿ ನಾನು “ಅಜ್ಜಾರ್… ಬೆಟ್ಟಕ್ಕ್ ಹೋಗೋ ದಾರಿ ಇದೇನ್ ರೀ”… ಅಂದೆ. ಅಜ್ಜ ಕಿವಿ ಕೇಳದೆ ದಾಟಿ ಹೋದ. ಮಕ್ಕಳು ಕಿಸಕ್ಕನೆ ನಕ್ಕರು. “ಪಾಪ ಅಜ್ಜಾರ್ ದು ವಯಸ್ಸಿನ ಪ್ರಾಬ್ಲಮ್. ಕಿವಿ ಕೇಳಸಿರಕ್ಕಿಲ್ಲ. ಮುಂದೆ ನಿಂತಾರಲ್ಲ ಹುಡುಗುರು ಗ್ಯಾಂಗ್ ಗೆ ಕೇಳೋಣ ಬಾ ಪದ್ದಣ್ಣ”… ಅಂದೆ. ಪದ್ದಣ್ಣ ನನ್ನನ್ನೇ ನೋಡ್ತಾ “ಬೆಂಗಳೂರು ಬಂದ್ರೆ ಬೆಂಗಳೂರು ನಮ್ಮೂರು ಅಂತೀಯಾ… ಉತ್ತರ ಕರ್ನಾಟಕಕ್ಕೆ ಬಂದ್ರೆ ನಾನು ಉತ್ತರ ಕರ್ನಾಟಕದವಳು ಅಂತೀಯಾ… ದಕ್ಷಿಣ ಕನ್ನಡಕ್ಕೆ ಹೋದ್ರೆ ಅದು ನನ್ನದೆ ಊರು ಅಂತೀಯಾ… ನಿಂದು ನಿಜವಾದ ಊರು ಯಾವುದು”… ಅಂತ ಪದ್ದಣ್ಣ ತಲೆ ಕೆಟ್ಟಿ ಕೇಳಿದ. ನೋಡು.. ಹುಟ್ಟಿ ಬೆಳೆದದ್ದು ಉತ್ತರ ಕರ್ನಾಟಕದಲ್ಲಿ ಅಂದ್ಮೇಲೆ ನಾನು ಉತ್ತರ ಕರ್ನಾಟಕದವಳು ಹೌದು… ಬದುಕು ಕಟ್ಟಿಕೊಂಡದ್ದು ಬೆಂಗಳೂರಲ್ಲಿ ಅದ್ಮೇಲೆ ಬೆಂಗಳೂರು ನಮ್ಮೂರೇ…ನಿನ್ನ ಕಟ್ಟಕೊಂಡಿದ್ದೀನಿ ಅದ್ಮೇಲೆ ದಕ್ಷಿಣ ಕನ್ನಡನೂ ನನ್ನದೇ”… ಅಂದೆ. ಪದ್ದಣ್ಣನಿಗೆ ನನ್ನ ಮಾತುಗಳು ಗಿರಗಿಟ್ಟಲೇ ತರ ಆಡಸೋಕೆ ಶುರು ಮಾಡಿತು. ಇವಳ ಜೊತೆ ಹೆಚ್ಚು ಮಾತಾಡಿದ್ರೆ ಇಡಿ ಊರೇ ನಂದು ಅಂತಾಳೆ ಅಂತ ಹೆಚ್ಚು ಮಾತನಾಡದೆ ಹುಡುಗುರ ಗ್ಯಾಂಗ್ ಕಡೆಗೆ ನಡೆದ. “ಹುಡುಗುರಾ… ಬೆಟ್ಟದ ದಾರಿ ಇದೆಯೇನು”.. ಅಂತ ಕೇಳಿದೆ… “ಹುಡುಗುರು ಹು ರೀ ಹಿಂಗ್ ಹೋಗ್ರಿ… ಮುಂದ ಎಡಕ್ಕ್ ತೀರಗ್ರಿ ಅಲ್ಲೇ ಮಗ್ಗಲಕ್ಕ ಐತೀರಿ”… ಅಂದರು. ಥ್ಯಾಂಕ್ಸ್ ಪಾ ಅಂತ ಹೇಳಿ ಸೀದಾ ಬೆಟ್ಟದ ಕೆಳಗೆ ಹೋಗಿ ನಿಂತ್ವಿ…

ಬೆಟ್ಟದ ಕೆಳಗೆ ಮೊದಲು ಕಣ್ಣಿಗೆ ಬಿದ್ದದ್ದು ತುಂಟ ಕೋತಿಗಳಿವೆ ಹುಷಾರು…ಎನ್ನುವ ಫಲಕವಿತ್ತು. ಅದನ್ನು ನೋಡಿ ನಮ್ಮನೆಯ ಎರಡು ಕೋತಿಗಳಷ್ಟು ಇವು ಘಾಟಿ ಇರೋಲ್ಲ. ನಮ್ಮನೆಯ ಎರಡು ಮಂಗ್ಯಾಗಳನ್ನ ಹಿಡಿದವರಿಗೆ ಬಾದಾಮಿ ಮಂಗ್ಯಾಗಳು ಏನು ಅಲ್ಲ ಅನ್ನೋ ಉಡಾಫೆಯಲ್ಲಿ ನಾನು ಬೆಟ್ಟ ಹತ್ತೋಕೆ ಶುರು ಮಾಡಿದೆ.

ಬಾದಾಮಿ ಸೌಂದರ್ಯವೇ ಬೆಟ್ಟದಲ್ಲಿ ಹಿಡಿದಿಡಲಾಗಿತ್ತು. ಅಷ್ಟು ಸುಂದರ ಮನಮೋಹಕ ದೃಶ್ಯವನ್ನ ಬೆಟ್ಟದಲ್ಲಿ ನೋಡಿದೆ. ಬೆಟ್ಟದಲ್ಲಿದ್ದ ನಾಲ್ಕು ಗುಹೆಗಳು ಒಂದೊಂದು ಕತೆಗಳನ್ನ ಹೇಳುತ್ತಿತ್ತು. ಆ ಕತೆಗಳನ್ನು ಕೇಳೋಣ ಅಂತ ಗೈಡ್ ಕಡೆಗೆ ನೋಡ್ತಿದ್ದೆ. ಅಷ್ಟೋತ್ತಿಗೆ ಗೈಡ್ ಬಂದು

“ಇಲ್ಲಿ ಜಾಗದ ಮಹತ್ವ ತಿಳಿಸೋಕ 800 ರೂಪಾಯಿ ತಗೋತೀನಿ”… ಅಂತ ಹಿಂದಿಯಲ್ಲಿ ಹೇಳಿದ. ನಾನು ಅಚ್ಚರಿಯಿಂದ ನನ್ನ ಮಗನಿಗೆ ಕೇಳಿದೆ” ಇವರಿಗೆ ಕನ್ನಡ ಬರಲ್ವೊ ಅಥವಾ ನಂಗೆ ಕನ್ನಡ ಬರಲ್ಲಾ ಅನ್ಕೊಂಡಿದ್ದಾರೋ ಕೇಳು ನೋಡೋಣ”… ಅಂದೆ. ನನ್ನ ಮಗ ನಗುತ್ತಾ ಕಿವಿಯಲ್ಲಿ ಹೇಳಿದ “ಅಮ್ಮ…ನಿನ್ನ ನಾರ್ಥ್ ಇಂಡಿಯನ್ ಅನ್ಕೊಂಡಿರಬೇಕು ಅದಕ್ಕೆ ಹಿಂದಿಲ್ಲಿ ಮಾತಾಡ್ತಿದ್ದಾರೆ”… ಅಂದ.

ನಾನು ಯಾವ ಕಡೆಯಿಂದ ಹಿಂದಿಯವಳ ತರ ಕಾಣ್ತಿನಿ. ಕರೀ ಗೈಡ್ ಗೆ ಅಂತ ನಾನೇ ಗೈಡ್ ಗೆ ಕರದು “ಯಾಕ್ರೀ… ಕನ್ನಡ ಬರೋಲ್ಲ ನಿಮಗ” ಅಂದೆ.
“ಹೋಗ್ಗೋ… ಮೇಡಂ, ನೀವು ನಮ್ಮ ಕಡೆಯವರೆಂನ್ರೀ…ಇಲ್ಲಿ ಕನ್ನಡದವರು ಅಗದ್ದೀ ಕಮ್, ಅದಕ್ಕ್ ನಿಮ್ಮನ್ನು ಹಿಂದಿಯರನ್ನೇ ಮಾಡಿದ್ದೆ. ಛಲೋ ಆತು ತಗೋರಿ…ನಮ್ಮ ಕಡೆಯವರು ಅಂತ 700 ರೂಪಾಯಿ ಮಾಡ್ತೀನಿ ನೋಡ್ರಿ ಲಾಸ್ಟ “… ಅಂದ ಗೈಡ್ ಪಾ…ಯಾಕೋ ದುಬಾರಿ ಅನಸ್ತು. ಬೇಡಾ ಬಿಡ್ರಿ ಅಂದೆ. ಅಷ್ಟೋತ್ತಿಗೆ ಗೈಡ್ ಪ್ಪನಿಗೆ ಹಿಂದಿಯವರೇ ತಗಲಿ ಹಾಕೋಡ್ರು.. ಮಗ ಬೈದ “ಸುಮ್ನೆ 700 ರೂಪಾಯಿ ಕೊಟ್ಟಿದ್ರೆ ಸ್ಟೋರಿ ಕೇಳಬಹುದಿತ್ತು” ಅಂದ. ನಾನು ಸುಮ್ನೆ ಆದೆ.

ಹೋಗ್ಲಿ ಅಂತ ಮೊದಲನೆಯ ಗುಹೆಯ ಹತ್ತಿರ ಹೋಗಿ ಸೆಕ್ಯೂರಿಟಿಗೆ ಕೇಳಿದೆ “ಚಪ್ಪಲಿ ಹೊರಗ್ ಬಿಟ್ರ್… ಮಂಗ್ಯಾ ತಗೊಂಡು ಹೋಗೋಲ್ಲ ಅಲ್ಲ ಮತ್ತ್”…ಅಂದೆ .

ಸೆಕ್ಯೂರಿಟಿ ನಗುತ್ತಾ “ಚಪ್ಪಲ್ ಹಾಕೊಂಡ್ ಒಳಕ್ಕ್ ಹೋಗ್ರಿ… ನಡೀತದ” ಅಂದರು.

ದೇವರ ಗುಡಿ ತರ ಇರೋ ಗರ್ಭಗುಡಿಯೊಳಗೆ ಚಪ್ಪಲಿ ಹಾಕೊಂಡು ಹೋಗೋಕೆ ಮನಸ್ಸಾಗಲಿಲ್ಲ. ಹೊರಗೆ ನಿಂತು ಸೆಲ್ಫಿ ತಕ್ಕೋಳ್ಳೋಣ ಅಂತ ಮೊಬೈಲ್ ತಗದೆ ಅಷ್ಟೋತ್ತಿಗೆ ನನ್ನ ಮಕ್ಕಳು, ಪದ್ದಣ್ಣ ಚಪ್ಪಲಿ ನೋಡ್ತೀಯಾ ಸ್ವಲ್ಪ.. ಒಳಕ್ಕೆ ಹೋಗಿ ಬರತೀನಿ ಅಂದ್ರು. ಎಲ್ಲೇ ಹೋದ್ರು ಸಂಸಾರದ ಬಂಡಿ ನಮಗ್ ಅಂತ ಚಪ್ಪಲ ಗುಡ್ಡೆ ಹಾಕೊಂಡು ಹೊರಕ್ಕೆ ನಿಂತೆ.

ಎಲ್ಲೇ ಇದ್ರೂ ಸೆಲ್ಫಿ ಹುಚ್ಚು ಬಿಡಬೇಕಲ್ಲ, ಕೈ ಕೇರಿಯೋಕೆ ಶುರು ಮಾಡಿತ್ತು. ಅದರಲ್ಲೂ ಅಂತ ಅದ್ಭುತ ಜಾಗದಲ್ಲಿ ನಿಂತ ಮೇಲೆ ಎರಡು ಮೂರು, ಪಟ ತಗಿಲಿಲ್ಲ ಅಂದ್ರೆ ನನ್ನ ಮೊಬೈಲ್ ಮನಸ್ಸಿಗೂ ಬೇಸರ ಅಂತ ನಿಂತಲ್ಲೇ ಫೋಟೋ ತಗಿಯುತ್ತಾ ನಿಂತೆ. ಫೋಟೋ ತಗದ್ಮೇಲೆ ಸುತ್ತಲೂ ನೋಡಿದೆ ಮಂಗ್ಯಾಗಳ ಸೈನ್ಯ ನಿಧಾನಕ್ಕೆ ಮೆಟ್ಟಿಲು ಇಳಿದು ನನ್ನತ್ತ ಬರ ತೊಡಗಿತು.

ಮುಂದೆವರೆಯುವುದು…


  • ಶಾಲಿನಿ ಹೂಲಿ ಪ್ರದೀಪ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading