‘ದಕ್ಷಿಣ ಕಾಶಿ’ ಎಂದು ಕರೆಯಲ್ಪಡುವ ಕಳಸೇಶ್ವರ ದೇವಾಲಯವು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕಳಸ ರಸ್ತೆಯಲ್ಲಿದೆ.ಪ್ರಕೃತಿಯ ಮಡಿಲಲ್ಲಿ ನೆಲೆಸಿರುವ ಸುಂದರವಾದ ಚಿಕ್ಕಮಗಳೂರು ಪಟ್ಟಣದಲ್ಲಿನ ಕಳಸ ದೇವಾಲಯವು ಭದ್ರಾ ನದಿಯ ದಡದಲ್ಲಿದ್ದು, ಶಿವನನ್ನು ಕಳಸೇಶ್ವರನಾಗಿ ಆರಾಧಿಸಲ್ಪಡುವ ಪ್ರಮುಖ ಸ್ಥಳವಾಗಿದೆ. ಈ ಪುಣ್ಯ ಕ್ಷೇತ್ರದ ಮಹಿಮೆಯ ಕುರಿತು ಸೌಮ್ಯ ಸನತ್ ಅವರು ‘ಕ್ಷೇತ್ರದೊಳ್ ಸಾನಿಧ್ಯದೊಳ್’ ಅಂಕಣದಲ್ಲಿ ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕಾಫಿನಾಡು ಚಿಕ್ಕಮಗಳೂರು ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾದ ಸ್ಥಳ. ಕಲಾವಿದನ ಕುಂಚದಲ್ಲಿ ಮೂಡಿದಂತೆ ಕಾಣಿಸುವ ಕಾಫಿ ಹಾಗೂ ಟೀ ತೋಟಗಳು. ಆಕರ್ಷಕ ದಟ್ಟ ಅರಣ್ಯ ಸಣ್ಣ ಸಣ್ಣ ಜಲಪಾತಗಳು ಮತ್ತು ಗಿರಿ ಶಿಖರಗಳು ಆಹಾ… ಕಣ್ಣಿಗೆ ಹಬ್ಬ ನೀಡುತ್ತವೆ.
ಮಲೆನಾಡಿನ ಎಸ್ಟೇಟಿನ ತಿರುವು ದಾರಿಗಳಲ್ಲಿ ಹಸಿರು ಕಣ್ತುಂಬಿಕೊಳ್ಳುತ್ತಾ, ಚಿಕ್ಕಮಗಳೂರಿನ ವಿಶೇಷತೆಗಳಾದ ಕಾಫಿ ಮತ್ತು ಏಲಕ್ಕಿ ತೋಟಗಳ ಸುವಾಸನೆ ಆಸ್ವಾದಿಸುತ್ತಾ,
ಸಿಗುವ ತಾಜಾ ಕಾಫಿಯಂಗಡಿಗಳಲ್ಲಿ ಮಲೆನಾಡಿನ ಕಾಫಿ/ ಟೀ ಗುಟುಕರಿಸುತ್ತಾ… ಪ್ರಯಾಣ ಮಾಡುತ್ತಾ ಸಾಗುವುದೇ ಒಂದು ಅದ್ಭುತ ಅನುಭವ….!
‘ದಕ್ಷಿಣ ಕಾಶಿ’ ಎಂದು ಕರೆಯಲ್ಪಡುವ ಕಳಸೇಶ್ವರ ದೇವಾಲಯವು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕಳಸ ರಸ್ತೆಯಲ್ಲಿದೆ. ಪ್ರಕೃತಿಯ ಮಡಿಲಲ್ಲಿ ನೆಲೆಸಿರುವ ಸುಂದರವಾದ ಚಿಕ್ಕಮಗಳೂರು ಪಟ್ಟಣದಲ್ಲಿನ ಕಳಸ ದೇವಾಲಯವು ಭದ್ರಾ ನದಿಯ ದಡದಲ್ಲಿದ್ದು, ಶಿವನನ್ನು ಕಳಸೇಶ್ವರನಾಗಿ ಆರಾಧಿಸಲ್ಪಡುವ ಪ್ರಮುಖ ಸ್ಥಳವಾಗಿದೆ.
“ಕಳಸ” ಎಂಬ ಪದವು ಸಂಸ್ಕೃತ ಮೂಲವಾದ ‘ಕಲಶ’ದಿಂದ ಬಂದಿರಬಹುದೆಂದು ಹೇಳಲಾಗುತ್ತದೆ. ಕಲಶವೆಂದರೆ ಹಿಂದೂ ಸಂಪ್ರದಾಯದ ಪ್ರಕಾರ ದೇಗುಲಗಳ ವಾಸ್ತುಶಿಲ್ಪದಲ್ಲಿ ಗರ್ಭಗುಡಿಯ ಮೇಲಿರುವುದು. ಸಾಮಾನ್ಯ ಅರ್ಥದಲ್ಲಿ ಕಲಶವೆಂದರೆ ಪವಿತ್ರ ಪಾತ್ರೆ ಎನ್ನಬಹುದು. ಮೂರು ಕಡೆಯಿಂದ ಆವರಿಸಿರುವ ಭದ್ರೆ ಮತ್ತು ದಕ್ಷಿಣದಲ್ಲಿರುವ ಕಳಸದ ದುಗ್ಗಪ್ಪನ ಕಟ್ಟೆಯಿಂದಾಗಿ ಎತ್ತರದಿಂದ ನೋಡಿದಾಗ ಪಟ್ಟಣವು ಮಡಕೆಯನ್ನು ಹೋಲುವಂತಿರುವುದರಿಂದ ಕಳಸವೆಂಬ ಹೆಸರು ಬಂತು ಎಂಬ ಪ್ರತೀತಿ ಇದೆ.

ಫೋಟೋ ಕೃಪೆ : GOOGLE
ಬೆಟ್ಟದ ತಳದಲ್ಲಿ ಋಷಿ ಅಗಸ್ತ್ಯರಿಂದ ನಿರ್ಮಿಸಲ್ಪಟ್ಟ ಶ್ರೀ ಕಳಸೇಶ್ವರ ಸ್ವಾಮಿಯ ದೇವಾಲಯವಿದೆ. ದೇವಾಲಯದ ಮೆಟ್ಟಿಲುಗಳನ್ನು ಹತ್ತಿ ದೇವಾಲಯವನ್ನು ಪ್ರವೇಶಿಸುವ ಮೊದಲು ನಮಗೆ ಮಲೆನಾಡಿನ ಉಪ್ಪರಿಗೆಯ ಮನೆಯಂತ ಕಟ್ಟಡವು ಸಿಗುತ್ತದೆ. ಇದರ ಆವರಣದ ಬಲಕ್ಕೆ ತಿರುಗಿ, ದೇವಸ್ಥಾನಕ್ಕೆ ಹೋಗುವ ಹಾದಿಯಲ್ಲಿರುವ ಕಂಬಗಳಿಗೆ ಅಡ್ಡಲಾಗಿ ಜೋಡಿಸಲಾದ ಮರದ ತೊಲೆಗಳ ಮೇಲೆ ನಾಣ್ಣುಡಿಗಳನ್ನೂ, ಶ್ಲೋಕಗಳನ್ನೂ ನಾವು ಕಾಣಬಹುದು.
ಇಲ್ಲಿಯ ಕಳಸನಾಥ ಅಥವಾ ಕಳಸೇಶ್ವರ ದೇವಾಲಯ ಈಗಿನ ಸ್ಥಿತಿಯಲ್ಲಿ ನಾಯಕರ ಕಾಲಕ್ಕೆ ನಿರ್ದೇಶಿತವಾಗಿದಂತೆ ಕಾಣುವುದು ಆದರೆ ಅಕ್ಕಪಕ್ಕಗಳಲ್ಲಿ ದೊರಕುವ ವಾಸ್ತುಶಿಲ್ಪದ ಅವಶೇಷಗಳೂ ಇನ್ನು ಕೆಲವು ಶಿಲ್ಪಗಳೂ ನಿರ್ದಿಷ್ಟವಾಗಿ ಹೊಯ್ಸಳ ಶೈಲಿಗೆ ಸೇರತಕ್ಕವುಗಳಾದುದರಿಂದ ಇಲ್ಲಿ ಮೊದಲಿಗೆ ಹೊಯ್ಸಳ ದೇವಾಲಯವಿದ್ದು ಪಾಳುಬಿದ್ದ ಅನಂತರ ನಾಯಕರ ಕಾಲದಲ್ಲಿ ಈಗಿನ ಕಟ್ಟಡಗಳು ನಿರ್ಮಿತವಾಗಿರಬಹುದೆಂದು ಹೇಳಬಹುದು. ಈ ದೇವಾಲಯದ ಗರ್ಭಗುಡಿಯಲ್ಲಿರುವ 9 ಅಂಗುಲ ಎತ್ತರದ ಲಿಂಗ ಉತ್ತರಕ್ಕೆ ಬಾಗಿದೆ. ಗರ್ಭಗುಡಿಯ ಮೇಲಿನ ಶಿಖರಕ್ಕೆ ಲೋಹದ ಕಲಶವಿದೆ. 16 ಕಲ್ಲಿನ ಕಂಬಗಳಿರುವ ನವರಂಗಕ್ಕೆ ಉತ್ತರ ಮತ್ತು ದಕ್ಷಿಣ ದಿಕ್ಕುಗಳಲ್ಲಿ ದ್ವಾರಗಳಿವೆ. ಮುಖಮಂಟಪದ ಒಳಪಕ್ಕದಲ್ಲಿ ನಾಲ್ಕು ಕಂಬಗಳೂ ಮುಂಭಾಗದಲ್ಲಿ ದ್ರಾವಿಡ ಶೈಲಿಯ, ಅಡಿಯಲ್ಲಿ ಸಿಂಹಗಳಿರುವ ಎರಡು ಕಂಬಗಳೂ ಇವೆ. ಪಕ್ಕದಲ್ಲಿರುವ ದೇವೀಮಂದಿರವೂ ನಾಯಕರ ಕಾಲಕ್ಕೆ ಸೇರಿದುದು. ಅಲ್ಲೇ ಆನೆ ಗಣಪತಿ ಇದೆ. ಕಾಳಾಸುರನನ್ನು ಸಂಹರಿಸಿದಂತಹ ಗಣಪತಿ ಇದಾಗಿದೆ. ಇಲ್ಲಿ ಗಂಡು ಆನೆ ಗಣಪತಿ ಹಾಗು ಹೆಣ್ಣು ಆನೆ ಗಣಪತಿ ಇದೆ. ಇವೆರಡನ್ನೂ ಪೂಜಿಸಲಾಗುತ್ತದೆ. ಈ ಮಂದಿರದ ಮಹಾದ್ವಾರದ ಇಕ್ಕೆಲಗಳಲ್ಲಿ ಸಿಂಹವಾಹಿನಿಯರಾದ ಸ್ತ್ರೀದ್ವಾರಪಾಲಕರಿದ್ದಾರೆ ಗಜಪತಿಯ, ತುಘಲಖನ ಮತ್ತು ವಿಜಯನಗರದ ಕೆಲವು ನಾಣ್ಯಗಳು ಇಲ್ಲಿ ದೊರಕಿವೆ. ಈ ದೇವಾಲಯವು ಇನ್ನೂ ಅನೇಕ ಸಣ್ಣ ದೇವಾಲಯಗಳು ಮತ್ತು ಪವಿತ್ರ ಜಲಮೂಲಗಳನ್ನು ಹೊಂದಿದ್ದು, ದೇವಾಲಯದ ಪ್ರಶಾಂತತೆಗೆ ಮೌಲ್ಯವನ್ನು ತುಂಬುತ್ತವೆ.
ಸಂಶೋಧಕರ ಪ್ರಕಾರ, ಈ ದೇವಾಲಯವು ಸಾ.ಶ 1154 ಕ್ಕೆ ಸೇರಿದ ಕೆಲವು ಶಾಸನಗಳನ್ನು ಹೊಂದಿದೆ. ಈ ಗರ್ಭಗುಡಿಯನ್ನು ವಿದರ್ಭದ ರಾಜನಾದ ಶೃತಬಿಂದು ನಿರ್ಮಿಸಿದನೆಂದು ಸಹ ನಂಬಲಾಗಿದೆ. ನಂತರ 16ನೇ ಶತಮಾನದಲ್ಲಿ ಕೆಳದಿ ಮತ್ತು ಕಾರ್ಕಳದ ನಾಯಕರು ಮತ್ತು ರಾಜರು ಈ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿದರು. ಬಹುಕಾಲದ ನಂತರ ಮೈಸೂರು ಮಹಾರಾಜರು ಸೂಕ್ಷ್ಮ ಕೆತ್ತನೆಗಳುಳ್ಳ ಬೆಳ್ಳಿಯ ಬಾಗಿಲನ್ನು ಕೊಡುಗೆಯಾಗಿ ನೀಡಿದರಂತೆ ಹಾಗೂ ಈ ದೇವಾಲಯಕ್ಕೆ ಸೋಮಶೇಖರ ನಾಯಕರು ಚಿನ್ನದ ಕಿರೀಟವನ್ನು ಸಮರ್ಪಿಸಿದರ ಬಗೆಗಿನ ಉಲ್ಲೇಖನವನ್ನು ಕಾಣಬಹುದಾಗಿದೆ.

ಫೋಟೋ ಕೃಪೆ : GOOGLE
ಈ ದೇವಾಲಯದವು ಪವಿತ್ರವಾದ ಪಂಚ ತೀರ್ಥಗಳು ಹಾಗೂ ದುಗ್ಗಪ್ಪನ ಕಟ್ಟೆ ಹೆಸರುವಾಸಿಯಾದ ಸ್ಥಳವಾಗಿದೆ. ದುಗ್ಗಪನ ಕಟ್ಟೆಯು ವಿಶಾಲವಾದ ಕಳಸ ಪಟ್ಟಣವನ್ನು ನೋಡಬಹುದಾದ ವೀಕ್ಷಣಾ ಸ್ಥಳ. ಪಂಚ ತೀರ್ಥವು ದೇವಾಲಯದ ಆವರಣದಲ್ಲಿರುವ 5 ಪವಿತ್ರ ಜಲಮೂಲಗಳಾಗಿವೆ. ವಸಿಷ್ಠ, ನಾಗ, ಕೋಟಿ, ರುದ್ರ ಮತ್ತು ಅಂಬಾ ತೀರ್ಥಗಳು ಕ್ರಮವಾಗಿ ವಸಿಷ್ಠ, ನಾಗ ದೋಷ, ಕೋಟಿ ದೇವ, ವಿಷ್ಣು ಮತ್ತು ಪಾರ್ವತಿ ದೇವಿಯನ್ನು ಪ್ರತಿನಿಧಿಸುತ್ತವೆ.
• ವಸಿಷ್ಠ ತೀರ್ಥ – ಈ ತೀರ್ಥವು ವಸಿಷ್ಠರು ಬಳಸಿದ್ದರು ಎಂಬ ನಂಬಿಕೆಯಿದೆ.
• ನಾಗ ತೀರ್ಥ – ಇದು ವಿಶೇಷವಾಗಿದೆ ಏಕೆಂದರೆ ಇಲ್ಲಿ ಸ್ನಾನ ಮಾಡುವುದರಿಂದ ನಾಗದೋಷ ನಿವಾರಣೆಯಾಗಿದೆ ಎಂದು ನಂಬಲಾಗಿದೆ.
• ಕೋಟಿ ತೀರ್ಥ — ಗಿರಿಜಾ ಕಲ್ಯಾಣದ ಸಮಯದಲ್ಲಿ ಅಗಸ್ತ್ಯ ಋಷಿಯ ಕೋರಿಕೆಯ ಕೋಟಿ ದೇವತೆ ಇಲ್ಲಿಯೇ ಉಳಿದಿದ್ದರು ಎಂಬ ಪ್ರತೀತಿಯಿದೆ.
• ರುದ್ರ ತೀರ್ಥ – ಇಲ್ಲಿ ಪಿಂಡವನ್ನು ಅರ್ಪಿಸುವುದು ವಿಷ್ಣು ಪಾದ ಅಥವಾ ಗಯಾದಲ್ಲಿ ಪಿಂಡವನ್ನು ಅರ್ಪಿಸಿದಷ್ಟೇ ಮಂಗಳಕರ ಎಂದು ನಂಬಲಾಗಿದೆ.
• ಅಂಬಾ ತೀರ್ಥ – ಪಾರ್ವತಿ ದೇವಿಯ ಪವಿತ್ರ ಜಲ ತಾಣ
• ದುಗ್ಗಪನ ಕಟ್ಟೆ —ಈ ಸ್ಥಳದಿಂದ ಇಡೀ ಕಳಸ ಪಟ್ಟಣವನ್ನು ಕಾಣಬಹುದು.

ಫೋಟೋ ಕೃಪೆ : GOOGLE
ಐತಿಹ್ಯ :
ಕಾಶಿಯಲ್ಲಿ ಪಾರ್ವತಿ ಮತ್ತು ಪರಮೇಶ್ವರರ ವಿವಾಹ ನಡೆಯುವ ಸಂದರ್ಭದಲ್ಲಿ ಎಲ್ಲಾ ದೇವಾನು ದೇವತೆಗಳು ಒಂದಡೆ ಸೇರಿದಾಗ ಭೂಮಿಯ ಸಮತೋಲನ ತಪ್ಪಿ ಸೃಷ್ಟಿಯಲ್ಲಿ ಕೆಲವೊಂದು ಬದಲಾವಣೆಯಾಯಿತಂತೆ. ಆಗ ಶಕ್ತಿಯುತರಾದ ಹಾಗೂ ಪ್ರಬಲರಾದ ಅಗಸ್ತ್ಯ ಮುನಿಯ ಬಳಿ ಸೃಷ್ಟಿ ಸಮತೋಲನಕ್ಕಾಗಿ ನೀವು ದಕ್ಷಿಣಕ್ಕೆ ಹೋಗಿ ನಿಂತಾಗ ಭೂಮಿಯು ಸಮತೋಲನ ಸ್ಥಿತಿಗೆ ತಲುಪುತ್ತದೆ ಎಂದೂ ಶಿವನು ವಿನಿಂತಿಸಿಕೊಂಡನಂತೆ. ಋಷಿ ಅಗಸ್ತ್ಯರು ಇದಕ್ಕೆ ಒಪ್ಪಿಗೆಯನ್ನು ನೀಡಿದರಾದರೂ ತಾನು ಕೂಡ ಇತರರಂತೆ ನಿಮ್ಮ ವಿವಾಹದಲ್ಲಿ ಭಾಗಿಯಾಗಬೇಕೆಂಬ ಆಸೆಯನ್ನು ವ್ಯಕ್ತ ಪಡಿಸುತ್ತಾರೆ. ಆಗ ಶಿವನು ನೀನು ಎಲ್ಲಿ ನಿಲ್ಲುತ್ತೀಯೋ ಅಲ್ಲಿಂದ ನೀನು ನನ್ನ ವಿವಾಹವನ್ನು ನೋಡಬಹುದೆಂಬ ವರವನ್ನು ನೀಡುತ್ತಾನೆ. ನಂತರ ಋಷಿ ಅಗಸ್ತ್ಯರು ದಕ್ಷಿಣಕ್ಕೆ ಹೋಗಿ ಅಲ್ಲಿ ಸೃಷ್ಟಿಯನ್ನು ಸಮತೋಲನಗೊಳಿಸಿದ ಜಾಗವೇ ಶ್ರೀ ಕ್ಷೇತ್ರ ಕಳಸ ಎಂಬುದು ಸ್ಥಳ ಪುರಾಣದಿಂದ ತಿಳಿದು ಬರುತ್ತದೆ.
ಸ್ಥಳೀಯ ಸಂಪ್ರದಾಯದ ಪ್ರಕಾರ, ಅಗಸ್ತ್ಯ ಋಷಿಗೆ ಆತನ ಕಮಂಡಲದಲ್ಲಿ ಶಿವಲಿಂಗವು ಕಾಣಿಸಿದ ಕಾರಣ ಈ ದೇವಾಲಯವನ್ನು ಮತ್ತು ಅದರಲ್ಲಿ ಲಿಂಗವನ್ನು ಸ್ಥಾಪಿಸಿದರು ಎಂಬ ಉಲ್ಲೇಖನವಿದೆ ಬೆಳ್ಳಿಯ ಮಂಟಪದಲ್ಲಿ ಲಿಂಗವನ್ನು ಪ್ರತಿಷ್ಠಾಪಿಸಿದ ಕಾರಣ ಪರಮ ಶಿವನು ಕಳಸೇಶ್ವರನಾಗಿ ಇಂದಿಗೂ ಪೂಜೆಗೊಳುತ್ತಿದ್ದಾನೆ. ಇಲ್ಲಿನ ದೇವಾಲಯದಲ್ಲಿರುವ ಪಾರ್ವತೀ ದೇವಿಯನ್ನು ಸರ್ವಾಂಗ ಸುಂದರಿ ಎಂದು ಕರೆಯಲಾಗುತ್ತದೆ.
ವಸ್ತ್ರ ಸಂಹಿತೆ:
ದೇವಾಲಯದ ಮೌಲ್ಯಗಳು ಮತ್ತು ಸಂಸ್ಕೃತಿಯನ್ನು ಗೌರವಿಸುವ ಹಾಗೂ ಪಾಲಿಸುವ ಸಲುವಾಗಿ ದೇವಾಲಯಕ್ಕೆ ಭೇಟಿ ನೀಡುವಾಗ ಗೌರವಯುತವಾಗಿ ಕಾಣುವ ಮಹಿಳೆಯರಿಗೆ ಸಂಪ್ರದಾಯ ಬಟ್ಟೆ ಹಾಗೂ ಪುರುಷರಿಗೆ ಧೋತಿ ಧರಿಸಲು ಹಾಗೂ ಶರ್ಟ್ ಇಲ್ಲದೆ ಒಳ ಪ್ರವೇಶಿಸಲು ಅನುಮತಿಸಲಾಗುತ್ತದೆ.
ಭೇಟಿ ನೀಡುವ ಸಮಯಗಳು :
7:30 AM – 1:00 PM, 3:30 PM – 8:30 PM
ಪೂಜಾ ವಿವರಗಳು :
ದೇವಾಲಯದ ತೆರೆಯುವ ಸಮಯ 7:30 AM
ಏಕಾದಶಿ ರುದ್ರ ಹೋಮ
ಸತ್ಯನಾರಾಯಣ ಪೂಜಾ: 8:00 AM
ಕ್ಷೀರಾಭಿಷೇಕ :11:30 AM
ತುಲಾಭಾರ ಸೇವೆ :12:00 PM
ದೇವಾಲಯ ಮತ್ತೆ ತೆರೆಯುವ ಸಮಯ : 3:30 PM
ಏಕಾವರ ರುದ್ರಾಭಿಷೇಕ : 7:00 PM
ಚಿಕ್ಕರಂಗ ಪೂಜೆ : 7:30 PM
ಪ್ರಾಕಾರೋತ್ಸವ : 8:00 PM
ದೀಪೋತ್ಸವ : 8:30 PM
ದೇವಾಲಯದ ಹಬ್ಬಗಳು :
ಅಂಬಾ ತೀರ್ಥ ಉತ್ಸವ : ಚಿತ್ರ ಬಹುಳ ಅಮಾವಾಸ್ಯೆ
ನಾಗತೀರ್ಥೋತ್ಸವ : ವೈಶಾಕ ಶುದ್ಧ ಅಷ್ಟಮಿ
ಶತರುದ್ರಾಭಿಷೇಕ : ಶ್ರಾವಣ ಮಾಸ
ಗೋಕುಲಾಷ್ಟಮಿ : ಶ್ರಾವಣ ಬಹುಳ ಅಷ್ಟಮಿ
ಶ್ರೀ ದೇವಿ ಸಪ್ತಶತಿ ಪಾರಾಯಣ : ನವರಾತ್ರಿ
ಗಿರಿಜಾ ಕಲ್ಯಾಣ : ಕಾರ್ತಿಕ ಶುದ್ಧ ಏಕಾದಶಿ
ಲಕ್ಷ ದೀಪೋತ್ಸವ : ಕಾರ್ತಿಕ ಅಮಾವಾಸ್ಯೆ
ಪ್ರಾತಃ ಪೂಜೆ : ಧನುರ್ಮಾಸ
ಚಿಕ್ಕ ರಥೋತ್ಸವ : ಧನು ಸಂಕ್ರಮಣದಲ್ಲಿ 2 ದಿನಗಳು
ರಥೋತ್ಸವ : ಮಾಘ ಮಾಸದಲ್ಲಿ ಆರಿದ್ರಾ
ಶಿವರಾತ್ರಿಯಲ್ಲಿ ವಿಶೇಷ ಪೂಜೆ : ಶಿವರಾತ್ರಿ

ಫೋಟೋ ಕೃಪೆ : GOOGLE
ಎಲ್ಲಾ ದಿನಗಳಲ್ಲಿ ಎಲ್ಲಾ ಸಂದರ್ಶಕರು ಮತ್ತು ಭಕ್ತರಿಗೆ ಅನ್ನಪ್ರಸಾದ ಲಭ್ಯವಿದೆ. ಈ ದೇವಾಲಯವು ಶಿವರಾತ್ರಿಯ ದಿನ, ಜಾತ್ರೆಯ ದಿನಗಳಲ್ಲಿ ಮತ್ತು ಗಿರಿಜಾ ಕಲ್ಯಾಣ ಉತ್ಸವದ ಸಮಯದಲ್ಲಿ ದೀರ್ಘಕಾಲದವರೆಗೆ ತೆರೆದಿರುತ್ತದೆ. ಗಿರಿಜಾ ಕಲ್ಯಾಣವನ್ನು
ಸುತ್ತಮುತ್ತಲಿನ ದೇವಸ್ಥಾನಗಳು :
ಹೊರನಾಡು – ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ – ಈ ದೇವಸ್ಥಾನ ಕಳಸದಿಂದ 8 ಕಿ.ಮೀ ದೂರದಲ್ಲಿದೆ.
ಹಳುವಳ್ಳಿ – ಶ್ರೀ ಸುಬ್ರಹ್ಮಣ್ಯ ದೇವಸ್ಥಾನ – ಇದು ಕಳಸದಿಂದ 5 ಕಿ.ಮೀ ದೂರದಲ್ಲಿದೆ.
ಬಾಳೆಹೊಳೆ – ಶ್ರೀ ಚೆನ್ನಕೇಶವ ದೇವಸ್ಥಾನ – ಇದು ಕಳಸದಿಂದ 12 ಕಿ.ಮೀ ದೂರದಲ್ಲಿದೆ.
ಶೃಂಗೇರಿ – ಶ್ರೀ ಶಾರದಾ ಪೀಠ ಕಳಸಿದಿಂದ 53 ಕಿ.ಮೀ ದೂರದಲ್ಲಿದೆ.
ಈ ದೇವಾಲಯವು ಚಿಕ್ಕಮಗಳೂರು ಪಟ್ಟಣದಿಂದ 84 ಕಿ.ಮೀ ದೂರದಲ್ಲಿದ್ದು, ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು.
ವಾಯುಮಾರ್ಗ: ಇಲ್ಲಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ 120 ಕಿ.ಮೀ ದೂರದಲ್ಲಿರುವ ಮಂಗಳೂರು ವಿಮಾನ ನಿಲ್ದಾಣ. ರಸ್ತೆಯ ಮೂಲಕ ಕಳಸೇಶ್ವರ ದೇವಸ್ಥಾನವನ್ನು ತಲುಪಲು ಸುಮಾರು 3 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿಗಳು ಸುಲಭವಾಗಿ ಲಭ್ಯವಿವೆ.
ರೈಲಿನ ಮೂಲಕ: ಇಲ್ಲಿಗೆ ಹತ್ತಿರದ ರೈಲು ನಿಲ್ದಾಣವೆಂದರೆ ಶಿವಮೊಗ್ಗ.
ರಸ್ತೆ ಮೂಲಕ: ಚಿಕ್ಕಮಗಳೂರು ಮತ್ತು ಶೃಂಗೇರಿಯಿಂದ ಡೈರೆಕ್ಟ್ ಬಸ್ಸುಗಳ ಮೂಲಕ ಕಳಸವನ್ನು ಸುಲಭವಾಗಿ ತಲುಪಬಹುದು.
ವಿಳಾಸ :
ಶ್ರೀ ಕಲಶೇಶ್ವರ ಸ್ವಾಮಿ ದೇವಸ್ಥಾನ, ಕಳಸ, ಚಿಕ್ಕಮಂಗಳೂರು ಜಿಲ್ಲೆ. 577124, ಕರ್ನಾಟಕ.

‘ಕ್ಷೇತ್ರದೊಳ್ ಸಾನಿಧ್ಯದೊಳ್’ ಅಂಕಣದ ಹಿಂದಿನ ಸಂಚಿಕೆಗಳು :
- ನಾಗಲ ಮಡಿಕೆ ವರಪ್ರದ ಶ್ರೀ ಸುಬ್ರಹ್ಮಣ್ಯ ಸ್ವಾಮಿ
- ಪರಮಶಿವನು ನೆಲೆಸಿರುವ ಅಮರನಾಥ ದೇವಾಲಯ
- ಗುರುರಾಯರು ನೆಲೆಸಿಹ ಮಂತ್ರಾಲಯ
- ಶ್ರೀ ಶರಭೇಶ್ವರ ದೇವಾಲಯ
- ಶ್ರೀ ಮಹಾಗಣಪತಿ ಕ್ಷೇತ್ರ : ಕುರುಡು ಮಲೆ
- ಶ್ರೀಕ್ಷೇತ್ರ ಕುಡುಪು ಅನಂತ ಪದ್ಮನಾಭ ದೇವಸ್ಥಾನ
- ಸೌಮ್ಯ ಸನತ್
