ದೇಶ ಸುತ್ತಿ ನೋಡು ಕೋಶ ಓದಿ ನೋಡುವ ಜನ ನಾನು…ಕರ್ನಾಟಕದ ಇಂಚಿಂಚು ಸ್ಥಳಗಳನ್ನು ನೋಡುವ ಹಂಬಲ ನನ್ನಲಿದೆ. ಆ ನನ್ನ ಪುಟ್ಟ ಆಸೆಗೆ ನನ್ನ ಗಂಡ, ಮಕ್ಕಳು ಯಾವಾಗಲೂ ಜೊತೆಗಾರರು. ನಾನು ಇತ್ತೀಚಿಗೆ ಬಾದಾಮಿಗೆ ಭೇಟಿ ನೀಡಿದ್ದೆ, ಅದರ ಸೌಂದರ್ಯ ನನ್ನ ಪದಗಳಲ್ಲಿ ನಿಲುಕುವುದಿಲ್ಲ, ಆದರೆ ನನ್ನ ಅನುಭವವನ್ನು ಮಾತ್ರ ನನ್ನ ಪ್ರವಾಸ ಕಥನದಲ್ಲಿ ಹಂಚಿಕೊಳ್ಳುತ್ತಿದ್ದೇನೆ ತಪ್ಪದೆ ಓದಿ…

ಮೊದಲನೆಯ ಗುಹೆ ಮಂಗ್ಯಾನ ಕತೆ ಆದ್ರೆ ಎರಡನೆಯದು ಬೇರೆ ಕತೆ.
ಪದ್ದಣ್ಣ, ಮಕ್ಕಳು ಗುಹೆ ಸುತ್ತು ಹಾಕಿ ಬಂದ ಮೇಲೆ ಅವರಿಗೆ ನನ್ನ ಚಪ್ಪಲನ್ನು ಕಾಯೋಕೆ ಹಚ್ಚಿ ಗುಹೆಯೊಳಗೆ ನಾನು ಹೋದೆ. ನೆಲದಿಂದ ೫೯ ಅಡಿ ಎತ್ತರದಲ್ಲಿ ಮೊದಲನೆಯ ಗುಹೆಯಲ್ಲಿ ನಾನಿದ್ದೆ. ಆ ಗುಹೆಯ ವಿಶೇಷತೆ ಎಂದರೆ ೧೮ ಕೈಗಳಿರುವ ನಟರಾಜನ ವಿಗ್ರಹ ಮೊದಲೇ ಕಾಣಿಸಿತು, ನಟರಾಜ ನೃತ್ಯ ಭಂಗಿಯಲ್ಲಿರುವುದು ನೋಡುವಾಗ ವಿಭಿನ್ನವೆನಿಸಿತು. ಇದು ಸುಮಾರು ೫ ಅಡಿ ಎತ್ತರವಿರಬಹುದು. ಭರತನಾಟ್ಯ ಭಂಗಿಯಲ್ಲಿರುವ ನಟರಾಜ ನೋಡಲು ಸಂತೋಷವಾಯಿತು. ಅದರ ಇನ್ನೊಂದು ದಿಕ್ಕಿಗೆ ನಾಲ್ಕು ಕೈಗಳಿರುವ ಮಹಿಷಾಸುರ ಮರ್ಧಿನಿ ಶಿಲ್ಪಕಲೆ ಕೂಡಾ ವಿಶೇಷ ಗಮನ ಸೆಳೆಯಿತು. ಇನ್ನು ಹಾಗೆ ಗುಹೆ ಒಳಕ್ಕೆ ಹೋದಂತೆ ಕಣ್ಣಿಗೆ ಕಂಡದ್ದು ಹರಿಹರ ವಾಸ್ತುಶಿಲ್ಪಕಲೆ. ಅದು ೭.೭೫ ಅಡಿ ಎತ್ತರದ ಅರ್ಧ ಶಿವಾ, ಅರ್ಧ ವಿಷ್ಣುವನ್ನು ನೋಡಿದೆ. ಪಾರ್ವತಿ ಶಿವ ಇರುವ ಅರ್ಧನಾರೇಶ್ವರ ಶಿಲ್ಪಕಲೆ ಮನಮೋಹಕವೆನಿಸಿತು. ಶಿವ, ಗಣೇಶ ಮತ್ತು ಕಾರ್ತಿಕೇಯ ವಾಸ್ತುಶಿಲ್ಪ ವನ್ನು ನೋಡಿ ಪ್ರಫುಲ್ಲಲಾಗಿದ್ದೆ. ಮೊದಲನೆಯ ಗುಹೆಯ ವಾಸ್ತುಶಿಲ್ಪವನ್ನು ನೋಡಿ ಮನಸ್ಸು ಮೊದಲನೆಯ ಗುಹೆಯೇ ಇಷ್ಟು ಅದ್ಭುತವಾಗಿರುವಾಗ ಇನ್ನುಳಿದ ಮೂರೂ ಗುಹೆಗಳು ನನ್ನನ್ನು ಸಾಕಷ್ಟು ಖುಷಿಪಡಿಸಬಲ್ಲದು ಅಂದುಕೊಂಡು ಮುಂದಿನ ಗುಹೆಯತ್ತ ಸಾಗೋಣ ಅಂತ ಗುಹೆ ನೋಡಿ ಹೊರಕ್ಕೆ ಬಂದೆ.
‘ಪದ್ದಣ್ಣ…. ಎಷ್ಟು ಚಂದನ ಗುಹೆ ಅಲ್ವಾ?…ನೋಡೋಕೆ ಖುಷಿ ಆಗುತ್ತೆ’ …ಅಂತ ಉತ್ಸಾಹದಿಂದ ಹೇಳಿದೆ. ‘ಹೌದು ಚಂದ ಇದೆ…ಆದ್ರೆ ಗರ್ಭಗುಡಿಯೊಳಗೆ ತುಂಬಾ ಕತ್ತಲು, ಏನು ಸರಿಯಾಗಿ ಕಾಣಲಿಲ್ಲ. ಜೊತೆಗೆ ಬಾವುಲಿ ಗಲೀಜು ವಾಸನೆ…ನಿಲ್ಲೋಕೆ ಕಷ್ಟ ಆಯ್ತು, ಅದು ಸ್ವಲ್ಪ ಸ್ವಚ್ಛ ಆಗಿದ್ದರೆ, ಸೂಪರ್ ಅಲ್ವಾ’… ಅಂದ. ದೊಡ್ಡ ದೊಡ್ಡ ಹೋಟೆಲ್ ನಲ್ಲಿ ಇರೋರಿಗೆ ಎಲ್ಲಿ ಹೋದ್ರು ಒಂದಲ್ಲ ಒಂದು ಸಮಸ್ಯೆ ಕಾಣುತ್ತೆ ಅನ್ಕೊಂಡು ಸರಿ ಮುಂದಿನ ಗುಹೆ ನೋಡೋಕೆ ಹೋಗೋಣವೇ… ಅಂದೆ.

‘ನೋಡು ದೇವಿ… ನಾವು ಮಾತ್ರ ಹೀಗೆ ಹೊರಗೆ ಚಪ್ಪಲಿ ಬಿಟ್ಟು ಹೋಗಿದ್ದು, ನಮ್ಮ ಪ್ರವಾಸಿಗರಲ್ಲಿ ಒಂದು ಕೆಟ್ಟ ಚಾಳಿ ಇದೆ. ಚಪ್ಪಲಿ ತಗೆದಿಟ್ಟು ಒಳಗೆ ಹೋಗಿ ಅಂತ ಬೋರ್ಡ್ ಹಾಕಿದ್ರೂ ಚಪ್ಪಲಿ ಹಾಕೊಂಡೆ ಹೋಗೋ ಜನ ಇದ್ದಾರೆ. ಇನ್ನು ಬೋರ್ಡ್ ಇಲ್ಲಾದ್ರೆ ಚಪ್ಪಲಿ ಬಿಟ್ಟು ಹೋಗ್ತಾರಾ?… ಹೋಗೋಲ್ಲ… ನೋಡಲ್ಲಿ… ಎಲ್ರು ಹೇಗೆ ಚಪ್ಪಲಿ, ಶೂ ಹಾಕೊಂಡು ಆ ಸುಂದರ ಸ್ಥಳವನ್ನು ಹೇಗೆಲ್ಲ ಗಲೀಜು ಮಾಡುತ್ತಿದ್ದಾರೆ’… ಅಂತ ಅಲ್ಲಿ ಯರ್ರಾ ಬಿರ್ರಿ ಓಡಾಡ್ತಿದ್ದ ಪ್ರವಾಸಿಗರತ್ತ ತೋರಿಸಿದ. ಅದು ನಿಜ ಅನಸ್ತು. ಪವಿತ್ರ ಇತಿಹಾಸ ಇರುವ ಸ್ಥಳದಲ್ಲಿ ಚಪ್ಪಲಿ ಹಾಕ್ಬೇಕಾ…ಬೇಡ್ವಾ ಅನ್ನೋದು ಅವರವರ ವಿವೇಚನೆಗೆ ಬಿಟ್ಟದ್ದು ಅನ್ಕೊಂಡು ನಾನು, ಪದ್ದಣ್ಣನ ಹಿಂಬಾಲಿಸುತ್ತಾ ಮುಂದಿನ ಗುಹೆಯತ್ತ ನಡೆದೆ.
“ದೇವಿ… ಗೈಡ್ ಗೆ ಸುಮ್ನೆ 700 ರೂಪಾಯಿ ಕೊಟ್ಟಿದ್ರೆ…ಈ ಜಾಗದ ಮಹಿಮೆ ಏನು… ಎತ್ತ… ಅಂತ ವಿವರವಾಗಿ ತಿಳ್ಕೊಬಹುದಿತ್ತು. ನೀನು ಕಡಲೆಕಾಯಿ ತರ ಚೌಕಾಸಿ ಮಾಡಿಬಿಟ್ಟೆ”… ಅಂತ ಲೋಚ ಪಚ್ ಅಂತಿದ್ದ. ನನ್ನ ಮಗ ಬೇರೆ ‘ಅಮ್ಮಾ…ನೀನು ಯಾಕೆ ಬಾರ್ಗೇನ್ ಮಾಡ್ತಿಯಾ..ಪಾಪ ಅವರು ಇದರಲ್ಲೇ ಜೀವನ ಮಾಡಬೇಕು ಅಲ್ವಾ…ವೆರಿ ಬ್ಯಾಡ್ ಅಮ್ಮಾ’ …ಅಂತ ಅಪ್ಪನಿಗೆ ತಾಳ ಹಾಕಿದ. ಅಪ್ಪ ಮಕ್ಕಳು ಲೊಚಗುಡುವುದನ್ನು ನೋಡಿ ಇನ್ನೂ ಬೆಂಗಳೂರು ಬರೋವರೆಗೂ “ಗೈಡ್ ಇದ್ದಿದ್ರೆ”… ಅಂತ ಹೇಳಿ ಹೇಳಿ… ನನ್ನ ನೆಮ್ಮದಿ ಹಾಳು ಮಾಡ್ತಾರೆ, ಹೇಗಾದ್ರು ಗೈಡ್ ಹುಡುಕಲೇ ಬೇಕು ಅಂತ ನಿರ್ಧಾರ ಮಾಡಿದೆ.
ಪ್ರವಾಸಿಗರ ಮಧ್ಯೆ ನಿಂತಿದ್ದ ಗೈಡ್ ಹತ್ತಿರ ಹೋಗಿ ಕೇಳಿದೆ “ನಮಗೂ ಗೈಡ್ ಮಾಡ್ತೀರಾ”… ಅಂತ. ಪ್ರವಾಸಿಗರು ಹೆಚ್ಚಾದಂತೆ ಗೈಡ್ ಗಳ ಬೆಲೆ ಹೆಚ್ಚಾಗಿತ್ತು. 700 ರೂಪಾಯಿ ಇದ್ದದ್ದು…1000 ರೂಪಾಯಿ ಆಗಿತ್ತು. ಗೈಡ್ “ನಿಮಗೆ ಗೈಡ್ ಬೇಕಿದ್ರೆ ಇವರಗಳ ಜೊತೆಗೆ ಸೇರಿಕೊಳ್ರಿ”…ಅಂದ. 700 ರೂಪಾಯಿಗೆ ಅಷ್ಟೂದ್ದ ಬಾಯಿ ತೆರೆದಿದ್ದೆ, ಇನ್ನೂ 1000 ರೂಪಾಯಿಗೆ ನನ್ನ ಬಾಯಿ ಮುಚ್ಚುತ್ತಾ…ಸಾಧ್ಯನೇ ಇಲ್ಲಾ. ಆಗಿದ್ದಾಗಲಿ ಪದ್ದಣ್ಣ, ಮಕ್ಕಳು ಬೈದ್ರು ಪರವಾಗಿಲ್ಲ…ಗೈಡ್ ಬೇಡಾ ಅಂತ ನಿರ್ಧಾರ ಮಾಡಿ ಸುತ್ತಲೂ ಅಲ್ಲಿ ಸೂಕ್ಷ್ಮವಾಗಿ ಕೆತ್ತಿದ್ದ ವಿಗ್ರಹಗಳ ಕೆತ್ತನೆಯನ್ನು ನೋಡುತ್ತಾ ನಿಂತಿದ್ದೆ. ಅಷ್ಟೋತ್ತಿಗೆ ಸರಿಯಾಗಿ ಬಾದಾಮಿಯ ಸರ್ಕಾರಿ ಕಾಲೇಜಿನ ಎರಡು ಹುಡುಗುರು ಎದುರಿಗೆ ಬಂದರು.

“ಹೇಯ್… ಹುಡುಗುರಾ ಬರ್ರಿ ಇಲ್ಲೇ”… ಅಂದಾಕ್ಷಣ ಹುಡುಗುರು ಪುಟು ಪುಟಾ ಅಂತ ನನ್ನತ್ತ ಓಡಿ ಬಂದರು.
‘ಏನ್ರಿ’… ಅಂದರು.
” ನೀವು ಎಲ್ಲಿಯವರು?”….
“ಇದೇ ಬಾದಾಮಿಯವರ್ರಿ”…
“ಹಂಗಿದ್ರ ನಿಮ್ಮ ಊರಿನ ಮಹಿಮಾ ತಿಳಸ್ರಲ್ಲ… ಎಷ್ಟು ತಿಳ್ಕೊಂಡಿರಿ ನೋಡ್ತೀನಿ”….ಅಂತ ಕೇಳಿದೆ.ಅವರಲ್ಲಿ ಗೈಡ್ ಹುಡುಕಿದೆ. ಅವರು ಹಲ್ಲು ಕಿರಿಯುತ್ತಾ…
“ಇಲ್ರಿ… ನಮ್ದು ಕಾಲೇಜ್ ಟೈಮ್ ಆಗೈತಿ… ರೀ… ಈಗ ಹೋಗ್ಬೇಕು… ಹಂಗ ಸ್ವಲ್ಪಹೊತ್ತ್ ಅಡ್ಡಾಡಕೊಂಡು ಹೋಗೋನೂ ಅಂತ ಇಲ್ಲಿಗೆ ಬಂದಿದ್ವಿ ರೀ… ನೀವು ಒಂದು ಕೆಲಸ ಮಾಡ್ರಿ…ಅಲ್ಲಿ ಗೈಡ್ ನಿಂತಾನ ಅಲ್ಲ.. ಅವರನ್ನ ಕೇಳ್ರಿ.. ನಮಗಿಂತ ಛಲೋ ಹೇಳ್ತಾರ”… ಅಲ್ಲಿಗೆ ಅವರ ತಲೆಯ ಕ್ಯಾಪಾಸಿಟಿ ಅರ್ಥಯಿತು. ಜೊತೆಗೆ ನಾನೇ ಬುದ್ದಿವಂತೇ ಅಂದುಕೊoಡವಳಿಗೆ ನನಗಿಂತ ಸವಾ ಶೇರ್ ಹುಡುಗೂರು ಇವರು ಅಂತ ಗೊತ್ತಾಯ್ತು.
‘ಅದ… ಗೈಡ್ ಬೇಕಿದ್ರ ನಿಮ್ಮನ್ನ ಯಾಕ್ ಕರೀತಿದ್ದೆ ನಡೀರಿ, ಅತ್ತಾಗ’… ಹುಡುಗುರು ನಗತೊಡಗಿದರು. ‘ಏನ್ ಹುಡುಗುರಾ…ಕಾಲೇಜ್ ನಾಗ ಓದತಿರಿ ಅಂತೀರಿ…ಬಾಯಿ ಈ ಪಾಟಿ ಕೆಂಪು ಮಾಡ್ಕೊದಾ’…ಅಂತ ಗುಟ್ಕಾ ಹಾಕಬೆಡ್ರೋ ಅಂತ ಕಾಳಜಿಯಿಂದ ನಮಗೆ ತಿಳಿದಷ್ಟು ಬುದ್ದಿ ಹೇಳಿದೆ.
ಅಷ್ಟೋತ್ತಿಗೆ ‘ಬರ್ರೆ ಇಲ್ಲೇ ಹುಡುಗುರಾ ‘… ಅಂತ ಮಧ್ಯಮ ವಯಸ್ಸಿನ ವ್ಯಕ್ತಿಯೊಬ್ಬ ಕರೆದ. ಹುಡುಗುರು ಮಾಸ್ತರ ಕರಿಯಕ್ಕತ್ತಾರ ನಡಿಲೇ…ಅಂತ ಇಬ್ಬರು ಮಾಸ್ಟರ್ ರತ್ತ ಓಡಿದರು. ದೂರದಿಂದ ಅವರ ಮಾಸ್ತರನ್ನು ನೋಡಿದೆ. ತಮಾಷೆ ಅಂದ್ರೆ ಮಾಸ್ಟರ್ ಬಾಯಿಕೂಡಾ ಕೆಂಪಾಗಿತ್ತು. ಆಗ ಸರಿ ಹೋಯ್ತು…ಯಾತ ರಾಜಾ, ತತ್ತಾ ಪ್ರಜಾ…ನಕ್ಕು ಸುಮ್ಮನಾದೆ.
ಇನ್ನೊಂದು ಕಡೆಯಿಂದ ಗೈಡ್ ಬುಕ್ ಹಿಡಿದ ವ್ಯಕ್ತಿಯೊಬ್ಬ ನನ್ನ ಬಳಿ ಬಂದು ‘ಗೈಡ್ ಪುಸ್ತಕ ತಗೋಳ್ರಿ… ಗೈಡಗಳು ಬಾಳ ರೇಟ್ ರೀ…ಈ ಪುಸ್ತಕದಲ್ಲಿ ಎಲ್ಲ ಮಾಹಿತಿ ಐತಿ… ಓದಿ ನೀವ್ ಓಡಾಡಿ ನೋಡಬಹುದು’… ಅಂತ ಬುಕ್ ಮುಂದೆ ಹಿಡಿದ. ಸಮಯಕ್ಕೆ ಸರಿಯಾಗಿ ನೀನು ಸಿಕ್ಕೇ ಅಂದುಕೊಂಡು ‘ಬುಕ್ ಎಷ್ಟ?’…

‘ಜಾಸ್ತಿ ಇಲ್ರಿ… ಬರಿ 60 ರೂಪಾಯಿ ತಗೋಳ್ರಿ’.. ಅದನ್ನ ನೋಡಿ ಇದೆ ಬೆಸ್ಟ್ ಅನ್ಕೊಂಡು ಬುಕ್ ತಗೊಂಡು ಮಗನಿಗೆ ಓದೋಕೆ ಕೊಟ್ಟು ಹೇಳಿದೆ ‘ಇದನ್ನ ಓದಿ ನಮಗೆ ಗೈಡ್ ಆಗ್ಬೇಕು ನೋಡು” ಅಂದೆ … ಅದಕ್ಕೆ ನನ್ನ ಮಗ “ನಾನು 800 ರೂಪಾಯಿ ತಗೋತೀನಿ” ಅಂದ. ಎಲ್ಲರೂ ನಮ್ಮನ್ನ ಲೂಟಿ ಮಾಡೋರೇ ನೋಡು… ಅಂತ ಬೈಕೊಂಡು ನಿಂತಿದ್ದೆ ಅಷ್ಟೋತ್ತಿಗೆ ಯಾರೋ ಒಬ್ಬ ಪುಣ್ಯಾತ್ಮ ಬಂದು “ನಂಗ ಬರೀ 200 ರೂಪಾಯಿ ಕೊಡ್ರಿ ಸಾಕು… ಇಲ್ಲಿದು ಕತಿ ಹೇಳ್ತಿನಿ” ಅಂದ. ಅಷ್ಟು ಕಡಿಮೆಗೆ ಯಾಕೆ ಹೇಳೋಕೆ ಅವನು ರೆಡಿ ಇದ್ದಾ ಅಂದ್ರೆ ಅವನಿಗೆ ಕುಡಿಯೋ ಚಟ ಇತ್ತು. ಎಷ್ಟು ಬರುತ್ತೋ ಅಷ್ಟು ತಗೊಂಡು ಕುಡಿದು ಗಪ್ಪನೇ ಮಲಗೋನು ಅನ್ನೋ ಯೋಚ್ನೆ ಅವನದು . ‘ಅವನು ನಾನು ಸರಿಯಾಗಿ ಹೇಳ್ತಿನಿ ರೀ… ನನ್ನ ನಂಬ್ರಿ’… ಅಂತ ತುಂಬಾನೇ ಬಲವಂತ ಮಾಡಿದ. ಅದಕ್ಕೆ ನಾನು ಆಯ್ತು… ಅಂತ ಒಪ್ಪಿಕೊಂಡೆ.
ನಮ್ಮ ಗೈಡ್ ಕುಡುಕಪ್ಪ ಕತಿ ಹೇಳೋಕೆ ಶುರು ಮಾಡಿದ. ಬಾದಾಮಿ ಕೋಟೆಗೆ ಎದುರಾಗಿಯೇ ಈ ಗುಹೆಯ ದೇವಾಲಯಗಳನ್ನು ಕೆತ್ತನೆ ಮಾಡಲಾಗಿದೆ ರೀ. ಇದು ಪೂರ್ತಿ ಒಂದೇ ಗುಡ್ಡ ರೀ… ಚಾಲುಕ್ಯರ ರಾಜ ಮಂಗಲೇಸಾ (598-610) ಕ್ರಿ.ಶ.) ಈ ಗುಹೆಯ ದೇವಾಲಯಗಳನ್ನು ಪೂರ್ಣಗೊಳಿಸಿದ ರೀ..
ಮೊದಲನೆಯ ಗುಹೆಯಲ್ಲಿ :
ಇದನ್ನು ಶೈವ ಗುಹೆ ಎನ್ನುತ್ತಾರೆ. ಈ ಗುಹೆಯಲ್ಲಿರುವ ಪ್ರಮುಖ ಕೆತ್ತನೆಯಲ್ಲಿ ಶಿವನ ನೃತ್ಯದ ಭಂಗಿ , ಎರಡು ಕೈಗಳ ಗಣೇಶ, ಮಹಿಷಾಸುರ ಮರ್ದಿನಿ, ಅರ್ಧನಾರೇಶ್ವರ ಮತ್ತು ಶಂಕರ ನಾರಾಯಣರನ್ನು ಕಾಣಬಹುದು. ಚಾವಣಿಯಲ್ಲಿ ಒಂದು ಹಾವು ಮತ್ತು ಇತರೆ ಕಲಾಕೃತಿಯನ್ನು ಕಾಣಬಹುದು ರೀ.
ಎರಡನೆಯ ಗುಹೆ :
ಎರಡನೆಯ ಗುಹೆಯು ವೈಷ್ಣವ ಪ್ರಭಾವವನ್ನು ತ್ರಿವಿಕ್ರಮ ಮತ್ತು ಭುವರಾಹದ ಫಲಕಗಳೊಂದಿಗೆ ಹೊಂದಿದೆ. ಛಾವಣಿಗಳ ಮೇಲೆ ಅನಂತಶಯನ, ಬ್ರಹ್ಮ, ವಿಷ್ಣು, ಶಿವ ಮತ್ತು ಇತರ ಕೆತ್ತನೆಗಳಿವೆ ರೀ.
ಮೂರನೇಯ ಗುಹೆ :
ಇದು ಅತ್ಯಂತ ದೊಡ್ಡದಾಗಿದ್ದು, ನೋಡಲು ಸುಂದರವಾಗಿದೆ. ವಿಷ್ಣುವು ಸುರುಳಿಯಾಕಾರದ ಸರ್ಪದ ಮೇಲೆ ಕುಳಿತಿರುವ ಅನಂತನಂತೆ, ಭೂದೇವಿಯೊಂದಿಗೆ ವರಾಹ, ಹರಿಹರ, ನಿಂತಿರುವ ಭಂಗಿಯಲ್ಲಿ ನರಸಿಂಹ, ತ್ರಿವಿಕ್ರಮ ಮತ್ತು ವಿರಾಟ ವಿಷ್ಣುವಿನ ಶ್ರೇಷ್ಠ ಚಿತ್ರಣವನ್ನು ಒಳಗೊಂಡಿದೆ. ಗುಹೆಯು ಕರ್ನಾಟಕ ಪ್ರಾಚೀನ ಕಲೆಯ ಪ್ರಬುದ್ಧ ಹಂತವನ್ನು ಪ್ರದರ್ಶಿಸುವ ಉತ್ತಮ ಕೆತ್ತನೆಗಳನ್ನು ಕಾಣಬಹುದು ರೀ. ಈ ಗುಹೆಯ ಕಂಬಗಳ ಮೇಲೆ ಕೆಲವು ಉತ್ತಮವಾದ ಬ್ರಾಕೆಟ್ ಅಂಕಿಅಂಶಗಳಿವೆ ರೀ.
ನಾಲ್ಕನೇಯ ಹಾಗೂ ಕೊನೆಯ ಗುಹೆ:
ಈ ಗುಹೆಯಲ್ಲಿ ಮಹಾವೀರ ಚಿತ್ರವಿದೆ. ಇಲ್ಲಿನ ಇತರ ಕೆತ್ತನೆಗಳು ಪದ್ಮಾವತಿ ಮತ್ತು ಇತರೆ ತೀರ್ಥಂಕರಗಳದ್ದು ರೀ. ಅವನು ಇತಿಹಾಸ ಸರಿಯಾಗಿ ಹೇಳಿದನೋ ಇಲ್ವೋ…ಆದರೆ ಅವನು ರಾಗವಾಗಿ ಹೇಳುತ್ತಿದ್ದ ರೀತಿ ಮಾತ್ರ ಆಕರ್ಷಣೆಯಾಗಿತ್ತು.

ಪದ್ದಣ್ಣ ‘ಎಲ್ಲಿ ಹೋದ್ರು ಯಾರನ್ನು ಬಿಡೋಲ್ಲ. ಆದರು ಒಳ್ಳೆ ಗೈಡ್ ಹುಡುಕಿದಿ ಬಿಡು…ಏನೋ ಒಂದು ವಿಷಯ ತಿಳ್ಕೊಂಡ ಹಾಗೆ ಆಯ್ತು…ಸರಿ ಈ ದುಡ್ಡು ಕೊಟ್ಟು ಬಿಡು’… ಅಂತ ಕೈಗೆ ೨೦೦ ರೂಪಾಯಿ ಕೊಟ್ಟ, ನಾನು ಆ ದುಡ್ಡನ್ನು ನಮ್ಮ ಕುಡಕಪ್ಪ ಗೈಡ್ ಗೆ ಇಟ್ಟು ನಗುತ್ತಾ ಮುಂದೆ ನಡದೆ.
- ಶಾಲಿನಿ ಹೂಲಿ ಪ್ರದೀಪ್
