ಹಸಿವು ಮುಕ್ತ ಭಾರತ ಆಗುವುದೇ?… – ಡಾ.ಗುರುಪ್ರಸಾದ್ ರಾವ್ ಹವಲ್ದಾರ್

ಇತ್ತೀಚೆಗೆ ಬಿಡುಗಡೆಯಾದ ಜಾಗತಿಕ ಹಸಿವು ಸೂಚ್ಯಂಕ ( ಜಿಎಚ್ಐ ) ರಾಷ್ಟ್ರಗಳಲ್ಲಿನ ಹಸಿವಿನ ಮತ್ತು ಅಪೌಷ್ಟಿಕತೆಯ ಪ್ರಮಾಣವನ್ನು ಅಧ್ಯಯನ ಮಾಡಿ ಅಂಕ ನೀಡುತ್ತಿದೆ.ಜಾಗತಿಕ ಸೂಚ್ಯಂಕವು ಭಾರತವನ್ನು “ಗಂಭೀರ”ವಾದ ಸಮಸ್ಯೆಗಳನ್ನು ಎದುರಿಸುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಸೇರಿಸಿದೆ. ಈ ಹಿನ್ನೆಲೆಯಲ್ಲಿ ಹಸಿವು ಮತ್ತು ಭಾರತ ಒಳನೋಟದ ವಿಶ್ಲೇಷಣೆ ಕುರಿತು ಡಾ.ಗುರುಪ್ರಸಾದ್ ರಾವ್ ಹವಲ್ದಾರ್ ಅವರು ಬರೆದಿರುವ ಲೇಖನವನ್ನು ತಪ್ಪದೆ ಮುಂದೆ ಓದಿ…

140 ಕೋಟಿ ಜನಸಂಖ್ಯೆ ಹೊಂದಿರುವ, ಭವಿಷ್ಯದಲ್ಲಿ ಬಲಿಷ್ಠ ಆರ್ಥಿಕತೆಯನ್ನು ಹೊಂದುವತ್ತಾ ಹೆಜ್ಜೆ ಇಟ್ಟಿರುವ ಭಾರತ ಆಗುವುದೇ ಹಸಿವು ಮುಕ್ತ….? ಈಗಾಗಲೇ ಹಸಿರುಕ್ರಾಂತಿ,ಕ್ಷೀರ ಕ್ರಾಂತಿ, ಬಾಹ್ಯಾಕಾಶ ಮೇಲುಗೈ ಸಾಧಿಸಿದ ನಂತರ ಡಿಜಿಟಲ್ ಕ್ರಾಂತಿಯತ್ತ ಸಾಗುತ್ತಿರುವ ಭಾರತ, ಅದರೆ ವಿಶ್ವದ ಕಣ್ಣಿನಲ್ಲಿ ಹಸಿವಿನಿಂದ ಬಳಲುತಿದೆಯಂತೆ…

ಇತ್ತೀಚೆಗೆ ಬಿಡುಗಡೆಯಾದ ಜಾಗತಿಕ ಹಸಿವು ಸೂಚ್ಯಂಕ (ಜಿಎಚ್ಐ) ರಾಷ್ಟ್ರಗಳಲ್ಲಿನ ಹಸಿವಿನ ಮತ್ತು ಅಪೌಷ್ಟಿಕತೆಯ ಪ್ರಮಾಣವನ್ನು ಅಧ್ಯಯನ ಮಾಡಿ ಅಂಕ ನೀಡುತ್ತಿದೆ.ಜಾಗತಿಕ ಸೂಚ್ಯಂಕವು ಭಾರತವನ್ನು “ಗಂಭೀರ”ವಾದ ಹಸಿವಿನ ಸಮಸ್ಯೆಗಳನ್ನು ಎದುರಿಸುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಸೇರಿಸಿದೆ.ಈ ಹಿನ್ನೆಲೆಯಲ್ಲಿ ಹಸಿವು ಮತ್ತು ಭಾರತ ಒಳನೋಟದ ವಿಶ್ಲೇಷಣೆ ಹಸಿವು ಮುಕ್ತ ಸಮಾಜವನ್ನು ಮಾಡಲು ಇಡೀ ಜಗತ್ತಿನಾದ್ಯಂತ ಹಲವಾರು ಸಂಘ ಸಂಸ್ಥೆಗಳು, ಸರ್ಕಾರಗಳು  ಶ್ರಮಿಸುತ್ತಲೇ ಇವೆ ಅದರೆ ಇಂದಿಗೂ ಕೋಟ್ಯಾಂತರ ಜನ ಹಸಿವಿನಿಂದ ಬಳಲುವುದನ್ನು ಸಮಾಜ ನಾವುಗಳು ಸಾಕ್ಷಿ ಆಗಿ ನಿಂತಿದ್ದೇವೆ,

ಅನ್ನ ಪರಬ್ರಹ್ಮ ಎಂಬ ನುಡಿಯನ್ನು ಶತಮಾನದಿಂದಲೂ ಪಾಲಿಸಿಕೊಂಡು ಬಂದವರು ನಾವು, ನಾವು ಆಹಾರ ಸೇವಿಸುವ ಸಂದರ್ಭದಲ್ಲಿ ಯಾರದರೂ ಬಂದರೆ ಅವರಿಗೆ ಕೊಟ್ಟು ತಿನ್ನುವ ಪರಂಪರೆಯು ನಮ್ಮದು, ಅಂತಹ ಸಂಸ್ಕೃತಿಯು ನಮ್ಮದು ಆಗಿದ್ದರೂ ಭಾರತದಲ್ಲಿ ಹಸಿವಿನಿಂದ ನರಳುವವರ ಸಂಖ್ಯೆ ಕಡಿಮೆ ಏನಿಲ್ಲ ಮಕ್ಕಳ, ಮಹಿಳೆಯರ ಮತ್ತು ವಂಚಿತ ಸಮುದಾಯಗಳ ಜೀವ ಮತ್ತು ಆರೋಗ್ಯಗಳನ್ನು ಅಪಾಯಕ್ಕೀಡುಮಾಡುತ್ತಿರುವ ಹಸಿವು ಮತ್ತು ಅಪೌಷ್ಟಿಕತೆಯ ಸಮಸ್ಯೆಗಳಿಂದ ಮುಕ್ತಗೊಳಿಸಲು ಆಗಿಲ್ಲವೆಂಬುದು ನಾಚಿಕೆಗೇಡಿನ ಸಂಗತಿಯಾಗಿದೆ. ಈ ವರ್ಷ ಪ್ರಕಟವಾಗಿರುವ ಜಾಗತಿಕ ಹಸಿವು ಸೂಚ್ಯಂಕ – ಗ್ಲೋಬಲ್ ಹಂಗರ್ ಇಂಡೆಕ್ಸ್- ಹಸಿವಿನ ಸಮಸ್ಯೆಯನ್ನು ನೀಗಿಸಲು ಆಯಾ ದೇಶಗಳು ಕೈಗೊಂಡಿರುವ ಕ್ರಮಗಳನ್ನು ಮಾಪನ ಮಾಡಲು – ಪೌಷ್ಟಿಕತೆಯ ಕೊರತೆ, ಮಕ್ಕಳ ತೂಕ ಮತ್ತು ಎತ್ತರಗಳ ಅಸಮರ್ಪಕ ಅನುಪಾತ (ಚೈಲ್ಡ್ ವೇಸ್ಟಿಂಗ್), ಮಕ್ಕಳು ವಯಸ್ಸಿಗೆ ತಕ್ಕಷ್ಟು ಎತ್ತರಕ್ಕೆ ಬೆಳಯದಿರುವುದು (ಚೈಲ್ಡ್ ಸ್ಟಂಟಿಂಗ್) ಮತ್ತು ಮಕ್ಕಳ ಮರಣ-ಗಳೆಂಬ ನಾಲ್ಕು ಮಾನದಂಡಗಳನ್ನು ಬಳಸಿದೆ. ಈ ಮಾನದಂಡಗಳನ್ನು ಆಧರಿಸಿ ಜಾಗತಿಕ ಹಸಿವು ಸೂಚ್ಯಂಕ (ಜಿಎಚ್ಐ) ರಾಷ್ಟ್ರಗಳಲ್ಲಿನ ಹಸಿವಿನ ಮತ್ತು ಅಪೌಷ್ಟಿಕತೆಯ ಪ್ರಮಾಣವನ್ನು ಅಧ್ಯಯನ ಮಾಡಿ ಅಂಕ ನೀಡುತ್ತಿದೆ.ಜಾಗತಿಕ ಸೂಚ್ಯಂಕವು ಭಾರತವನ್ನು “ಗಂಭೀರ”ವಾದ ಹಸಿವಿನ ಸಮಸ್ಯೆಗಳನ್ನು ಎದುರಿಸುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಸೇರಿಸಿದೆ.

ಫೋಟೋ ಕೃಪೆ : google

ಅಕ್ಟೋಬರ್ 16 ಹಸಿವಿನ ವಿರುದ್ಧ ಹೋರಾಡಲು ಇರುವ ದಿನ. 1945 ರಲ್ಲಿ ವಿಶ್ವಸಂಸ್ಥೆಯು ಈ ದಿನವನ್ನು ಕೃಷಿ ಸಂಸ್ಥೆಯ ಸ್ಥಾಪನೆಯ ದಿನಾಂಕದ ಗೌರವಾರ್ಥವಾಗಿ ಆಹಾರ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ವಿಶ್ವದಾದ್ಯಂತ ಹಸಿವಿನ ಮಟ್ಟ ಮತ್ತು ಅಪೌಷ್ಟಿಕತೆ ಲೆಕ್ಕಹಾಕುವ ಸೂಚ್ಯಂಕವು , ಅಪೌಷ್ಟಿಕತೆ ನಿವಾರಣೆಗಾಗಿ ಶ್ರಮಿಸುತ್ತಿರುವ 116 ರಾಷ್ಟ್ರಗಳ ಕುರಿತ ಸೂಚ್ಯಂಕವನ್ನು ಪ್ರತಿ ವರ್ಷವೂ ನೀಡುತ್ತಿದೆ, ಈ ಬಾರಿಯ ಸೂಚ್ಯಂಕದಲ್ಲಿ ಭಾರತದ  ಸ್ಥಾನವು 111ಕ್ಕೆ ಕುಸಿದಿದೆ. ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ರಾಷ್ಟ್ರಗಳಕ್ಕಿಂತಲೂ ಹಿಂದುಳಿದಿದೆ.

ಜಾಗತಿಕ ಹಸಿವು ಸೂಚ್ಯಂಕ 2023 ರ ಪಟ್ಟಿ ಬಿಡುಗಡೆಯಾಗಿದ್ದು, ಜಾಗತಿಕವಾಗಿ ಅಪೌಷ್ಟಿಕತೆ ಹೊಂದಿರುವ ಜನರ ಪಾಲು, ಸೂಚ್ಯಂಕದಲ್ಲಿ ಬಳಸಲಾದ ಸೂಚಕಗಳಲ್ಲಿ ಒಂದಾಗಿದೆ. ವಾಸ್ತವವಾಗಿ 2017 ರಲ್ಲಿ 7.5 ಶೇಕಡಾ ಇದ್ದದ್ದು 2022 ರಲ್ಲಿ 9.2 ಶೇಕಡಾಕ್ಕೆ ಏರಿತು, ಸುಮಾರು 735 ಮಿಲಿಯನ್ ತಲುಪಿದೆ.

ಜಾಗತಿಕ ಹಸಿವು ಸೂಚ್ಯಂಕ 2023 (Global Hunger Index 2023) ಗುರುವಾರ ಬಿಡುಗಡೆಯಾಗಿದೆ. ಗ್ಲೋಬಲ್ ಹಂಗರ್ ಇಂಡೆಕ್ಸ್ (ಜಿಎಚ್ಐ) ಜಾಗತಿಕ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹಸಿವಿನ ಪ್ರಮಾಣವನ್ನು ಸಮಗ್ರವಾಗಿ ಅಳೆಯುವ ಮತ್ತು ಟ್ರ್ಯಾಕ್ ಮಾಡುವ ವಿಧಾನವಾಗಿದೆ.

ಜಾಗತಿಕ ಹಸಿವಿನ ಸೂಚ್ಯಂಕ-2023 ರಲ್ಲಿ ಭಾರತವು 125 ದೇಶಗಳ ಪೈಕಿ 111 ನೇ ಸ್ಥಾನದಲ್ಲಿದೆ. ಭಾರತದಲ್ಲಿ ಮಕ್ಕಳ ಅಪೌಷ್ಟಿಕತೆ ಪ್ರಮಾಣ ಶೇಕಡಾ 18.7 ರಷ್ಟಿದೆ ಎಂದು ವರದಿ ಮಾಡಿದೆ. 2022 ರಲ್ಲಿ ಈ ಸೂಚ್ಯಂಕದ ಸ್ಕೋರ್ ಪ್ರಕಾರ, ಭಾರತವು 121 ದೇಶಗಳಲ್ಲಿ 107 ನೇ ಸ್ಥಾನದಲ್ಲಿತ್ತು. ಜಾಗತಿಕ ಹಸಿವು ಸೂಚ್ಯಂಕ-2023 ರಲ್ಲಿ 28.7 ಅಂಕಗಳೊಂದಿಗೆ, ಭಾರತವು ಹಸಿವಿನ ಮಟ್ಟ ಗಂಭೀರವಾಗಿದೆ ಎಂದು ಸೂಚ್ಯಂಕದ ಆಧಾರದ ಮೇಲೆ ವರದಿ ಮಾಡಿದೆ.

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಮಕ್ಕಳ ಅಪೌಷ್ಠಿಕ ಪ್ರಮಾಣವನ್ನು ಹೊಂದಿದೆ. ಶೇಕಡಾ 18.7 ರ ಅಪೌಷ್ಟಿಕತೆಯು ತೀವ್ರತೆಯನ್ನು ಪ್ರತಿಬಿಂಬಿಸುತ್ತದೆ. ಭಾರತದಲ್ಲಿ ಅಪೌಷ್ಟಿಕತೆಯ ಪ್ರಮಾಣವು ಶೇಕಡಾ 16.6 ರಷ್ಟಿದೆ. ಐದು ವರ್ಷದೊಳಗಿನ ಮರಣ ಪ್ರಮಾಣವು ಶೇಕಡಾ 3.1 ರಷ್ಟಿದೆ. 15 ರಿಂದ 24 ವರ್ಷ ವಯಸ್ಸಿನ ಮಹಿಳೆಯರಲ್ಲಿ ರಕ್ತಹೀನತೆಯ ಪ್ರಮಾಣವು ಶೇಕಡಾ 58.1 ರಷ್ಟಿದೆ ಎಂದು ಸೂಚ್ಯಂಕದ ಆಧಾರದ ಮೇಲೆ ವರದಿ ಹೇಳಿದೆ.

ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ (102ನೇ), ಬಾಂಗ್ಲಾದೇಶ (81ನೇ), ನೇಪಾಳ (69ನೇ) ಮತ್ತು ಶ್ರೀಲಂಕಾ (60ನೇ) ಸೂಚ್ಯಂಕದಲ್ಲಿ ಭಾರತಕ್ಕಿಂತ ಉತ್ತಮ ಸಾಧನೆ ತೋರಿವೆ.
ವಿಶ್ವದಲ್ಲೇ ಅತಿ ಹೆಚ್ಚು ಹಸಿವಿನ ಮಟ್ಟವನ್ನು ಹೊಂದಿರುವ ಪ್ರದೇಶಗಳಾಗಿ ದಕ್ಷಿಣ ಏಷ್ಯಾ ಮತ್ತು ಸಹಾರಾದ ಆಫ್ರಿಕಾ ದಕ್ಷಿಣ ಪ್ರದೇಶಗಳು ಕಾಣಿಸಿಕೊಂಡಿವೆ. ಈ ಪ್ರದೇಶದ ಜಿಎಚ್ಐ ಸ್ಕೋರ್ ತಲಾ 27 ಇದೆ. ಈ ಪ್ರಮಾಣವು ಗಂಭೀರ ಹಸಿವನ್ನು ಸೂಚಿಸುತ್ತದೆ.

2023 ರ ಜಾಗತಿಕ ಹಸಿವು ಸೂಚ್ಯಂಕವು (GHI) 2015 ರವರೆಗಿನ ಹಲವು ವರ್ಷಗಳ ಪ್ರಗತಿಯ ನಂತರ, ಪ್ರಪಂಚದಾದ್ಯಂತ ಹಸಿವಿನ ವಿರುದ್ಧದ ಪ್ರಗತಿಯು ಬಹುಮಟ್ಟಿಗೆ ಕಡಿಮೆ ಆಗಿರುವುದನ್ನು ತೋರಿಸುತ್ತದೆ. ಪ್ರಪಂಚದ 2023ರ ಜಿಎಚ್ಐ ಸ್ಕೋರ್ 18.3 ಆಗಿದೆ. ಇದನ್ನು 2015 GHI ಸ್ಕೋರ್ 19.1ಕ್ಕೆ ಹೋಲಿಸಿದರೆ, ಮಧ್ಯಮ ಮತ್ತು ಒಂದು ಅಂಕಕ್ಕಿಂತ ಕಡಿಮೆ ಎಂದು ಪರಿಗಣಿಸಲಾಗಿದೆ .

ಇದಲ್ಲದೆ, 2017 ರಿಂದ, ಜಾಗತಿಕ ಹಸಿವು ಸೂಚ್ಯಂಕ ಸ್ಕೋರ್ಗಳ ಲೆಕ್ಕಾಚಾರದಲ್ಲಿ ಬಳಸುವ ಸೂಚಕಗಳಲ್ಲಿ ಒಂದಾದ ಅಪೌಷ್ಟಿಕತೆಯ ಹರಡುವಿಕೆಯು ಹೆಚ್ಚುತ್ತಿದೆ. ಅಪೌಷ್ಟಿಕತೆಯ ಸಂಖ್ಯೆಯು 572 ಮಿಲಿಯನ್ನಿಂದ ಸುಮಾರು 735 ಮಿಲಿಯನ್ಗೆ ಏರಿದೆ ಎಂದು ಸೂಚ್ಯಂಕ ವರದಿ ಹೇಳಿದೆ. ಅದರೆ ಈ ವರದಿಯನ್ನು ಕೇಂದ್ರ ಸರ್ಕಾರ” ಗ್ಲೋಬಲ್ ಹಂಗರ್ ಇಂಡೆಕ್ಸ್ ‘ಗಂಭೀರ ಕ್ರಮಶಾಸ್ತ್ರೀಯ ಸಮಸ್ಯೆಗಳಿಂದ ಬಳಲುತ್ತಿದೆ ಮತ್ತು ದುರುದ್ದೇಶಪೂರಿತ ಉದ್ದೇಶವನ್ನು ಪ್ರತಿಬಿಂಬಿಸುತ್ತದೆ, ನಾಲ್ಕು ಸೂಚಕಗಳಲ್ಲಿ ಮೂರು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿವೆ ಮತ್ತು ಸಂಪೂರ್ಣ ಜನಸಂಖ್ಯೆಯನ್ನು ಪ್ರತಿನಿಧಿಸುವುದಿಲ್ಲ. ನಾಲ್ಕನೇ ಪ್ರಮುಖ ಸೂಚಕ ‘ಜನಸಂಖ್ಯೆಯಲ್ಲಿ ಅಪೌಷ್ಟಿಕತೆಯ ಜನರ ಪ್ರಮಾಣ’ ಕೇವಲ 3000 ಮಾದರಿಗಳ ಆಧಾರದ ಮೇಲೆ ನಡೆಸಿದ ಅಭಿಪ್ರಾಯ ಸಂಗ್ರಹವನ್ನು ಆಧರಿಸಿದೆ ಎಂದು ಹೇಳಿ ಎಂದು ತಿರಸ್ಕರಿಸಿದೆ.

ಫೋಟೋ ಕೃಪೆ : google

ಭಾರತದಲ್ಲಿ ಆಹಾರ ವ್ಯರ್ಥ ಎಷ್ಟು?:

ಭಾರತದಲ್ಲಿ ಪ್ರತಿ ವರ್ಷ ಒಬ್ಬ ವ್ಯಕ್ತಿ 50 ಕೆಜಿ ಆಹಾರ ವ್ಯರ್ಥ ಮಾಡುತ್ತಾನೆ. ಭಾರತದ 2011ರ ಜನಗಣತಿಯ ಪ್ರಕಾರ, ಜನಸಂಖ್ಯೆಯ 14 ಪ್ರತಿಶತದಷ್ಟು ಅಂದರೆ 169.4 ಮಿಲಿಯನ್ ಜನರಲ್ಲಿ ಅಪೌಷ್ಟಿಕತೆ ಇದೆ. ಇದರ ಹೊರತಾಗಿಯೂ ಭಾರತದಲ್ಲಿ ನಾಲ್ಕು ವರ್ಷಗಳಲ್ಲಿ ಸುಮಾರು 11,520 ಟನ್ ಆಹಾರ ಧಾನ್ಯಗಳು ವ್ಯರ್ಥವಾಗಿವೆ ಎಂದು ವರದಿಯೊಂದು ತಿಳಿಸಿದೆ. ದಕ್ಷಿಣ ಏಷ್ಯಾದ ದೇಶಗಳಲ್ಲಿ ಅಫ್ಘಾನಿಸ್ತಾನವು ಅತಿ ಹೆಚ್ಚು ಆಹಾರ ವ್ಯರ್ಥವನ್ನು ಮಾಡುತ್ತಿದೆ (ವರ್ಷಕ್ಕೆ 82 ಕೆಜಿ). ನೇಪಾಳದಲ್ಲಿ 79 ಕೆಜಿ, ಶ್ರೀಲಂಕಾದಲ್ಲಿ 76 ಕೆಜಿ, ಪಾಕಿಸ್ತಾನದಲ್ಲಿ 74 ಕೆಜಿ ಮತ್ತು ಬಾಂಗ್ಲಾದೇಶದಲ್ಲಿ 65 ಕೆಜಿ ನಂತರದ ಸ್ಥಾನದಲ್ಲಿದೆ. ಆಹಾರ ಪೋಲು ಮಾಡುವ ವಿಷಯದಲ್ಲಿ ಈ ರಾಷ್ಟ್ರಗಳಿಗೆ ಹೊಲಿಸಿಕೊಂಡರೆ ಭಾರತ ಆಹಾರ ವ್ಯರ್ಥ ಮಾಡುವ ವಿಷಯದಲ್ಲಿ ಉತ್ತಮವಾಗಿದೆ.

ಅಪೌಷ್ಟಿಕತೆಗೆ ಹಲವಾರು ಕಾರಣ :

ಅಪೌಷ್ಟಿಕತೆಯು ಹಲವಾರು ಕಾರಣಗಳಿಂದ ಸಂಭವಿಸುತ್ತದೆ. ಮತ್ತು ಅದರಲ್ಲಿ ರಾಜ್ಯ-ರಾಜ್ಯಗಳ ನಡುವೆ ಮತ್ತು ರಾಜ್ಯದೊಳಗಡೆಯೂ ಹಲವಾರು ವ್ಯತ್ಯಾಸಗಳು ಕಂಡುಬರುತ್ತವೆ. ಬಡತನ, ಆಹಾರ ಧಾನ್ಯಗಳ ಮತ್ತು ಬೇಳೆಕಾಳುಗಳ ಅಲಭ್ಯತೆ, ಬಳಸುವ ಅಹಾರದಲ್ಲಿ ಪ್ರಮುಖ ಪೌಷ್ಟಿಕಾಂಶಗಳ ಕೊರತೆ, ಸಾರ್ವಜನಿಕ ಪಡಿತರದ ಅವ್ಯವಸ್ಥೆ ಮತ್ತು ಅಸಮಾನ ವಿತರಣೆ, ಕುಟುಂಬದಲ್ಲಿ ಮಹಿಳೆಯ ಸಾಪೇಕ್ಷ ಸ್ಥಾನಮಾನ, ಸ್ವಚ್ಚ ಕುಡಿಯುವ ನೀರಿನ ಅಲಭ್ಯತೆ ಮತ್ತು ನೈರ್ಮಲ್ಯದ ಕೊರತೆ ಮತ್ತು ಹಲವಾರು ಅನುವಂಶೀಯ ಹಾಗೂ ಪರಿಸರ ಸಂಬಂಧೀ ಕಾರಣಗಳೂ ಇದರಲ್ಲಿ ಸೇರಿಕೊಂಡಿವೆ. ಇಂದಿನ ಈ ಪರಿಸ್ಥಿತಿಗೆ ಆಳಿಕೊಂಡು ಬಂದ ಸರ್ಕಾರಗಳಲ್ಲಿ ರಾಜಕೀಯ ಬದ್ಧತೆಯ ಕೊರತೆ ಮತ್ತು ಫಲಿತಾಂಶಗಳನ್ನು ಪರಿಣಾಮಕಾರಿಯಾಗಿ ತಂದುಕೊಡುವಲ್ಲಿ ಅಸಮರ್ಥವಾಗಿರುವ ಹಾಲಿ ವ್ಯವಸ್ಥೆ ಮತ್ತು ನೀತಿಗಳೆರಡೂ ಕಾರಣವಾಗಿವೆ.

ಆಹಾರ ಸೇವಿಸುವುದು ಮಾನವನ ಮೂಲಭೂತ ಹಕ್ಕುಗಳಲ್ಲಿ ಒಂದು. ಭೂಮಿಯ ಮೇಲಿನ ಪ್ರತಿಯೊಬ್ಬರಿಗೂ ಸಾಕಷ್ಟು ಆಹಾರ ಸೇವಿಸುವ ಹಕ್ಕು ಇದೆ. ಸಮೀಕ್ಷೆಯೊಂದರ ಪ್ರಕಾರ ಜಗತ್ತಿನಲ್ಲಿ ಪ್ರತಿ ವರ್ಷ 5 ದಶಲಕ್ಷ ಮಕ್ಕಳು ಹಸಿವಿನಿಂದ ಸಾವಿಗೀಡಾಗುತ್ತಿದ್ದಾರೆ. ಈ ಪೈಕಿ 5 ವರ್ಷದ ಒಳಗಿನ ಮಕ್ಕಳೇ ಹೆಚ್ಚು. ಬಡ ರಾಷ್ಟ್ರಗಳಲ್ಲಿ ಶೇ.50 ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ವಿಶ್ವ ಆಹಾರ ದಿನದಡಿಯಲ್ಲಿ 40 ದೇಶಗಳಲ್ಲಿ ಹಸಿವಿನಿಂದ ಬಳಲುವವರ ಸಂಖ್ಯೆಯನ್ನು ಕಡಿಮೆ ಮಾಡಲು ಪಣ ತೊಡಲಾಗಿದೆ.

ನಿತ್ಯ ಕೋಟ್ಯಂತರ ಭಾರತೀಯರು ಹಸಿದ ಹೊಟ್ಟೆಯಲ್ಲಿ ಮಲಗುತ್ತಿದ್ದಾರೆ. ಶ್ರೀಲಂಕಾ, ಮ್ಯಾನ್ಮಾರ್ಗಳಿಗಿಂತಲೂ ನಾವು ಹೀನ ಸ್ಥಿತಿಯಲ್ಲಿದ್ದೇವೆ. ವಿಶ್ವದ ಮೂರನೇ ಆರ್ಥಿಕ ಶಕ್ತಿ ಎಂದು ಬೀಗುವ, ಅಭಿವೃದ್ಧಿ ಎನ್ನುವ ಮಂತ್ರ ಪಠಣವನ್ನು‘ಹಸಿವಿನ ಸೂಚ್ಯಂಕ’ ಅಣಕಿಸುವಂತಿದೆ.  ಭಾರತ ಜನರು ಬಡತನದ ವಿರುದ್ಧದ ಹೋರಾಟದಲ್ಲಿ ತಾವು ಕಷ್ಟಪಟ್ಟು ಗಳಿಸಿದ ಲಾಭಗಳನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ, ಮತ್ತು ಮೊದಲೇ ಅಸ್ತಿತ್ವದಲ್ಲಿರುವ ಆರ್ಥಿಕ ಅಸಮಾನತೆಗಳು ಇನ್ನೂ ವಿಸ್ತಾರಗೊಳ್ಳುತ್ತವೆ ಎಂದು ವರ್ಲ್ಡ್ ಬ್ಯಾಂಕ್ ಹೇಳಿದೆ. ಭಾರತದ ಅರ್ಧ ಜನಸಂಖ್ಯೆಯ ಬಳಕೆಯ ಮಟ್ಟಗಳು ಬಡತನದ ರೇಖೆಗೆ ನಿಖರವಾಗಿ ಹತ್ತಿರದಲ್ಲಿದೆ ಎಂದು ಅದು ತಿಳಿಸಿದೆ.

ಫೋಟೋ ಕೃಪೆ : google

80% ಭಾರತೀಯ ಉದ್ಯೋಗಿಗಳು ಅಸಂಘಟಿತ ವಲಯದಲ್ಲಿದ್ದಾರೆ ಎಂದೂ ಕರಡು ಉಲ್ಲೇಖಿಸಿದೆ. ಕುಗ್ಗುತ್ತಿರುವ ಆರ್ಥಿಕ ಚಟುವಟಿಕೆಗಳು, ಸರ್ಕಾರ ಹೇರಿದ ಲಾಕ್ಡೌನ್ ಮತ್ತು ಸಾಮಾಜಿಕ ಅಂತರದ ಶಿಷ್ಟಾಚಾರದಿಂದ ಉಂಟಾಗುವ ವೇತನ ಮತ್ತು ಜೀವನೋಪಾಯದ ನಷ್ಟದಿಂದಾಗಿ ಈ ಅಸಂಘಟಿತ ಕಾರ್ಮಿಕರು ಬಡತನಕ್ಕೆ ಸಿಲುಕುವ ಅಪಾಯವಿದೆ. ಭಾರತದಲ್ಲಿ ಸ್ಥಿರವಾದ ಸಾಮಾಜಿಕ ಸಂರಕ್ಷಣಾ ವ್ಯವಸ್ಥೆಯಿಂದಾಗಿ ವಲಸಿಗರು ಆಗಾಧವಾದ ಅಪಾಯಗಳನ್ನು ಎದುರಿಸುತ್ತಾರೆ, ಅಂತರರಾಜ್ಯ ವಲಸಿಗರು ಬಡತನ ಮತ್ತು ನಿರ್ಗತಿಕತೆಯ ಅಪಾಯದಲ್ಲಿದ್ದಾರೆ ,  ಪ್ರತಿ ಏಳು ಮಂದಿ ಭಾರತೀಯರಲ್ಲಿ ಒಬ್ಬ ಹಸಿವಿನಿಂದ ಬಳಲುತ್ತಿದ್ದು, 2030ರ ವೇಳೆಗೆ ದೇಶದಲ್ಲಿನ ಹಸಿವಿನ ಸಮಸ್ಯೆ ಮತ್ತಷ್ಟು ಉಲ್ಬಣಿಸಲಿದೆ. ಶಿಶುಮರಣ ಸಂಖ್ಯೆ, ಅಪೌಷ್ಟಿಕತೆ, ಕಡಿಮೆ ತೂಕ ಹಾಗೂ ಬೆಳವಣಿಗೆ ಕುಂಠಿತ ಮಕ್ಕಳನ್ನು ಹಸಿವಿನ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಪರಿಗಣಿಸಲಾಗಿದೆ. 18 ಕೋಟಿಗೂ ಹೆಚ್ಚು ಭಾರತೀಯರು ಹಸಿವಿನ ದವಡೆಗೆ ಸಿಲುಕಿದ್ದರೆ, ನೂರರಲ್ಲಿ ಹದಿನೈದು ಮಂದಿ ಪೌಷ್ಟಿಕ ಆಹಾರದಿಂದ ವಂಚಿತರಾಗಿದ್ದಾರೆ. ಜನಸಂಖ್ಯಾ ಸ್ಫೋಟ ಈಗಿರುವಂತೆಯೇ ಮುಂದುವರಿದಲ್ಲಿ ಅನ್ನದ ಸಮಸ್ಯೆ ಮತ್ತಷ್ಟು ವಿಷಮಿಸಲಿದೆ ಎಂದು ವರದಿ ಎಚ್ಚರಿಸಿದೆ.  ಹಸಿವಿನ ಸಮಸ್ಯೆಯ ಹಿನ್ನೆಲೆಯಲ್ಲಿ ದೇಶದಲ್ಲಿ ಆಹಾರದ ಕೊರತೆ ಇದೆ ಎಂದು ಭಾವಿಸಬೇಕಿಲ್ಲ. ಎಲ್ಲ ಭಾರತೀಯರಿಗೂ ಸಾಕಾಗುವಷ್ಟು ಆಹಾರಧಾನ್ಯಗಳನ್ನು ನಮ್ಮಲ್ಲಿ ಬೆಳೆಯಲಾಗುತ್ತಿದೆ. ಸಮಸ್ಯೆ ಇರುವುದು ಅವುಗಳನ್ನು ತಲುಪಿಸುವ ವ್ಯವಸ್ಥೆಯಲ್ಲಿ. ಜನರ ಅನ್ನ–ಹಸಿವಿನಲ್ಲೂ ಲಾಭ ಮಾಡಿಕೊಳ್ಳುವ ಭ್ರಷ್ಟರಿಂದಾಗಿ ಈ ಅವ್ಯವಸ್ಥೆ ತಲೆದೋರಿದೆ. ಎಲ್ಲ ನಾಗರಿಕರಿಗೂ ಕನಿಷ್ಠ ಆಹಾರ ಹಾಗೂ ಪೌಷ್ಟಿಕಾಂಶಗಳನ್ನು ಒದಗಿಸುವ ಉದ್ದೇಶದಿಂದ 2013ರಲ್ಲಿ ಅನುಷ್ಠಾನಗೊಂಡ ‘ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ’ಯ ಮೂಲ ಆಶಯವೇ ವಿಫಲವಾಗಿದೆ. ಸರ್ಕಾರದ ವಿವಿಧ ಇಲಾಖೆಗಳ ನಡುವಣ ಹೊಂದಾಣಿಕೆಯ ಕೊರತೆ ಫಲಾನುಭವಿಗಳಿಗೆ ದವಸ–ಧಾನ್ಯಗಳು ಸರಿಯಾಗಿ ತಲುಪಲು ಅಡ್ಡಿಯಾಗಿದೆ. ಶಾಲಾಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಮಕ್ಕಳು ಹಾಗೂ ಗರ್ಭಿಣಿ ಮಹಿಳೆಯರಿಗೆ ಪೌಷ್ಟಿಕ ಆಹಾರ ನೀಡುವ ಯೋಜನೆಗಳು ವಿವಿಧ ರಾಜ್ಯಗಳಲ್ಲಿ ಜಾರಿಯಲ್ಲಿವೆ. ಆದರೆ, ಎಷ್ಟೋ ಮಕ್ಕಳು ಶಿಕ್ಷಣದ ಹಕ್ಕಿನಿಂದ ವಂಚಿತರಾಗಿ ಬಯಲಿನಲ್ಲೇ ಉಳಿದಿರುವಾಗ, ಅವರಿಗೆ ಈ ಯೋಜನೆಗಳು ತಲುಪುವುದಾದರೂ ಹೇಗೆ? ಮಕ್ಕಳ ಅಪೌಷ್ಟಿಕತೆ ಹಾಗೂ ಕುಂಠಿತ ಬೆಳವಣಿಗೆ ರೀತಿಯ ಸಮಸ್ಯೆಗಳಿಗೂ ಶಿಕ್ಷಣ ಕ್ಷೇತ್ರದ ವೈಫಲ್ಯ, ನೈರ್ಮಲ್ಯದ ಕೊರತೆ ಹಾಗೂ ಮಾಲಿನ್ಯ ಹೆಚ್ಚಳದಂತಹ ಸಂಗತಿಗಳಿಗೂ ಸೂಕ್ಷ್ಮ ಸಂಬಂಧ ಇರುವುದನ್ನು ಗಮನಿಸಬೇಕು. ಕರ್ನಾಟಕದಲ್ಲಿ ‘ಬಿಪಿಎಲ್’ ಕುಟುಂಬಗಳಿಗೆ ಉಚಿತವಾಗಿ ಆಹಾರಧಾನ್ಯ ನೀಡುವ ಯೋಜನೆ ಜಾರಿಯಲ್ಲಿದೆ. ಆದರೆ, ಈ ಯೋಜನೆಗಳೆಲ್ಲ ಪರಿಣಾಮಕಾರಿಯಾಗಿ ಜಾರಿಯಾಗದೆ ಹಸಿವಿನ ಸಮಸ್ಯೆ ಉಲ್ಬಣಿಸುತ್ತಲೇ ಇದೆ.

ವಿಶ್ವದ ಮೂರನೇ ಆರ್ಥಿಕ ಶಕ್ತಿ ಎಂದು ಬೀಗುವ ಭಾರತದಲ್ಲಿ ಬಡವರು ಹೇಗೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ ಎನ್ನುವುದಕ್ಕೆ ‘ಹಸಿವಿನ ಸೂಚ್ಯಂಕ’ ಒಂದು ಉದಾಹರಣೆ. ಭ್ರಷ್ಟಾಚಾರ ಹಾಗೂ ಯೋಜನೆಗಳ ನಿರ್ವಹಣೆಯ ಅಸಮರ್ಪಕತೆ ಆಹಾರ ಪೂರೈಕೆ ವ್ಯವಸ್ಥೆ ಹಳಿತಪ್ಪಲು ಪ್ರಮುಖ ಕಾರಣಗಳು. ‘ಭಾಗ್ಯ- ಗ್ಯಾರಂಟಿ’ಯಂತಹ ಯೋಜನೆಗಳು ಜನರನ್ನು ಸೋಮಾರಿಗಳನ್ನಾಗಿಸುತ್ತವೆ ಎನ್ನುವ ಟೀಕೆಗಳ ಮಧ್ಯೆ , ನಮ್ಮ ನಡುವೆಯೇ ಇರುವ ಜನರ ಬಡತನದ ಬಿಸಿ ಸಮಾಜದ ಮುಖ್ಯವಾಹಿನಿಗೆ ತಾಕುತ್ತಿಲ್ಲ ಎನ್ನುವುದು ಆತಂಕ ಹುಟ್ಟಿಸುವಂತಿದೆ. ಅಭಿವೃದ್ಧಿಯ ನಿಜವಾದ ಸೂಚ್ಯಂಕಗಳು ಸಮಾಜದ ಕಟ್ಟಕಡೆಯ ವ್ಯಕ್ತಿಯ ಮುಖದಲ್ಲಿ ಪ್ರತಿಫಲಿಸಬೇಕೆ ಹೊರತು ಅಂಕಿಅಂಶಗಳಿಂದಲ್ಲ.

ಒಂದೆಡೆ ಆಹಾರೋದ್ಯಮ ಬೆಳೆಯುತ್ತಿದ್ದರೆ ಇನ್ನೊಂದೆಡೆ ಜನರು ಹಸಿವಿನಿಂದ ಸಾಯುತ್ತಿರುವ ಘಟನೆಗಳೂ ಹೆಚ್ಚುತ್ತಿದೆ. ಇದರ ಜೊತೆಗೆ ಆಹಾರವನ್ನು ರಕ್ಷಣೆ ಮಾಡುವ ಒಂದು ವ್ಯವಸ್ಥೆ ನಮ್ಮಲ್ಲಿ ಸಾಕಷ್ಟಿಲ್ಲ. ಹಸಿವು ಮತ್ತು ಬಡತನದಿಂದ ನರಳುತ್ತಿರುವ ಜನರಿಗೆ ಸೂಕ್ತ ಆಹಾರ ನೀಡಬೇಕು. ನಮ್ಮಲ್ಲಿ ಯಾರೂ ಹಸಿವಿನಿಂದ ಸಾಯಬಾರದು ಎಂಬ ಉದ್ದೇಶದಿಂದ ಕೂಡ ವಿಶ್ವ ಆಹಾರ ದಿನವನ್ನು ಆಚರಿಸಲಾಗುತ್ತದೆ.ಅಭಿವೃದ್ಧಿ ಮಂತ್ರವನ್ನು ಜಪಿಸುತ್ತಿರುವ ಸರ್ಕಾರ, ದೇಶದ ಎಲ್ಲ ನಾಗರಿಕರಿಗೂ ಆಹಾರ ತಲುಪಿಸುವುದನ್ನು ಆದ್ಯತೆಯ ಸಂಗತಿಯಾಗಿ ಪರಿಗಣಿಸಬೇಕು. ಈ ನಿಟ್ಟಿನಲ್ಲಿ ಯೋಜನೆಗಳನ್ನು ಪ್ರಕಟಿಸಿದರಷ್ಟೇ ಸಾಲದು,ಆ ಸವಲತ್ತುಗಳು ಜನರಿಗೆ ತಲುಪುವ ನಿಟ್ಟಿನಲ್ಲಿ ಪ್ರಾಮಾಣಿಕ,ಪರದರ್ಶಕ ಪ್ರಯತ್ನಗಳೂ ಬೇಕಾಗಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅನ್ನ ಸಿಗುವಂತೆ ಆಗಲಿ, ಈ ಜಗತ್ತು ಹಸಿವು ಮುಕ್ತ ವಾಗಲಿ ಎಂಬುದಷ್ಟೇ ಲೇಖನದ ಆಶಯ.


  • ಡಾ.ಗುರುಪ್ರಸಾದ್ ರಾವ್ ಹವಲ್ದಾರ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading