ಅಷ್ಟಾದಶ ಶಕ್ತಿ ಪೀಠಗಳು ಹಿಂದೂ ಧರ್ಮದಲ್ಲಿ ಬಹು ಮಹತ್ವದ ಪವಿತ್ರ ದೇವಾಲಯಗಳು. ಈ ಪೀಠಗಳನ್ನು ನಮ್ಮ ಹಿಂದೂ ಧರ್ಮದಲ್ಲಿ ಅತ್ಯಂತ ಭಕ್ತಿ-ಭಾವದಿಂದ ಪೂಜಿಸುತ್ತಾರೆ. ಸಾಕ್ಷಾತ್ ಆ ಆದಿಪರಾಶಕ್ತಿಯ ಶಕ್ತಿ ರೂಪಗಳೇ ಈ ಅಷ್ಟಾದಶ ಶಕ್ತಿ ಪೀಠಗಳೆಂದು ಕರೆಯುತ್ತಾರೆ . ಈ ಶಕ್ತಿ ಪೀಠಗಳ ಉದ್ಭವಕ್ಕೆ ಕಾರಣವಾದ ಒಂದು ಪುರಾಣ ಕಥೆಯೊಂದಿದೆ. ಅದರ ಪ್ರಕಾರ ನಮ್ಮ ಅಖಂಡ ಭಾರತ ದೇಶದಲ್ಲಿ ವ್ಯಾಪಿಸಿರುವ ಅಷ್ಟಾದಶ ಪೀಠಗಳು ಸಾಕ್ಷಾತ್ ಸತಿ ದೇವಿಯ ಶರೀರ ಭಾಗಗಳು ಎಂದು ಪುರಾಣಗಳು ಹೇಳುತ್ತವೆ. ಅಷ್ಟಾದಶ ಪೀಠಗಳ ಕುರಿತು ಸೌಮ್ಯ ಸನತ್ ಅವರು ‘ಕ್ಷೇತ್ರದೊಳ್ ಸಾನಿಧ್ಯದೊಳ್’ ಅಂಕಣದಲ್ಲಿ ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಬ್ರಹ್ಮದೇವನ ಪುತ್ರರಲ್ಲಿ ಒಬ್ಬನಾದ ದಕ್ಷ ಪ್ರಜಾಪತಿಗೆ 53 ಕುಮಾರಿಯರಿದ್ದರು. ಅವರಲ್ಲಿ 28 ಮಂದಿಯರನ್ನು ಚಂದ್ರನಿಗೆ, 13 ಮಂದಿಯನ್ನು ಕಶ್ಯಪ ಮಹರ್ಷಿಗೆ, 10 ಮಂದಿಗೆ ಧರ್ಮಕ್ಕೆ, ಒಬ್ಬಳನ್ನು ಪಿತ್ರರಿಗೆ, ಮತ್ತೊಬ್ಬಳಿಗೆ ಅಗ್ನಿಗೆ ನೀಡಿ ಮದುವೆಯನ್ನು ಮಾಡಿದನು. ಉಳಿದ ಮಗಳೇ ಸತಿ ದೇವಿ. ಈಕೆ ಸಾಕ್ಷಾತ್ ಆ ಆದಿಪರಾಶಕ್ತಿ ಅಂಶವಾಗಿದ್ದಳು.
ಆಕೆಗೆ ಚಿಕ್ಕ ವಯಸ್ಸಿನಿಂದಲೂ ಶಿವನ ಮೇಲೆ ಇದ್ದ ಪ್ರೇಮದಿಂದಾಗಿ ಆಕೆಯನ್ನು ಚಂದ್ರನಿಗೆ ನೀಡಿ ವಿವಾಹವನ್ನು ಮಾಡಲಿಲ್ಲ. ಶಿವನನ್ನು ವಿವಾಹ ಮಾಡಿಕೊಂಡಿದ್ದು ದಕ್ಷನಿಗೆ ಇಷ್ಟವಿರಲಿಲ್ಲ. ಯಜ್ಞಕ್ಕೆ ತನ್ನ ಪತಿಯನ್ನು ಕರೆದಿಲ್ಲ ಎಂದು ಪಾರ್ವತಿಯು ತಂದೆಗೆ ಕೇಳಿದಾಗ ಎಲ್ಲರ ಮುಂದೆ ಅವಮಾನ ಮಾಡುತ್ತಾನೆ. ಇದನ್ನು ಸಹಿಸಿಕೊಳ್ಳಲಾರದ ಪಾರ್ವತಿ ದೇವಿ (ಸತಿ ದೇವಿ) ಯಜ್ಞದಲ್ಲಿ ಬಿದ್ದು ಪ್ರಾಣ ಅರ್ಪಣೆ ಮಾಡುತ್ತಾಳೆ. ಇದರಿಂದ ಮನನೊಂದ ಶಿವನು ಸತಿಯ ದೇಹವನ್ನು ಹಿಡಿದುಕೊಂಡು ದುಃಖ , ವೈರಾಗ್ಯಗಳಿಂದ ನರ್ತಿಸತೊಡಗುತ್ತಾನೆ.

ಹೀಗೆ ಸತಿಯ ದೇಹ ಶಿವನ ಕೈಗಳಲ್ಲಿರುವವರೆಗೂ ಶಿವನ ಕೋಪ, ದುಃಖ ತಣಿಯಲಾರದೆ ಲೋಕವೆ ಸಂಕಷ್ಟಕ್ಕೆ ಸಿಲುಕಬಹುದೆಂದು ದೇವತೆಗಳೆಲ್ಲರು ಅರಿತು ವಿಷ್ಣುವಿನ ಮೊರೆ ಹೋಗುತ್ತಾರೆ. ಇದರ ಬಾಧ್ಯತೆಗಳನ್ನರಿತ ವಿಷ್ಣುವು, ಸತಿಯ ದೇಹವನ್ನೆ ಅದೃಶ್ಯಮಾಡುವ ಉದ್ದೇಶದಿಂದ ತನ್ನ ಸುದರ್ಶನ ಚಕ್ರಕ್ಕೆ ಸತಿಯ ದೇಹಗಳನ್ನು ಒಂದೊಂದು ಭಾಗಗಳಲ್ಲಿ ತುಂಡರಿಸಿ ವಿಸರ್ಜಿಸಲು ಆಜ್ಞಾಪಿಸುತ್ತಾನೆ. ಈ ರೀತಿ ನರ್ತಿಸುತ್ತಿರುವಾಗ ಸತಿಯ ದೇಹದ ಒಂದೊಂದು ಭಾಗಗಳು ಒಂದೊಂದು ಸ್ಥಳಗಳಲ್ಲಿ ಕಳಚಿ ಬೀಳಲಾರಂಭಿಸುತ್ತವೆ.
ಹೀಗೆ ಸತಿಯ ದೇಹದ ನಾನಾ ಭಾಗಗಳು ಬಿದ್ದ ಸ್ಥಳಗಳೆಲ್ಲವು ಇಂದು ಶಕ್ತಿ ಪೀಠಗಳಾಗಿ, ಶಕ್ತಿ ದೇವಿಯು ಉಪಸ್ಥಿತಿ ಅಲ್ಲಿದ್ದು ಭಕ್ತಿಯಿಂದ ಬೇಡಿ ಬಂದವರ ಬಯಕೆಯನ್ನು ತೀರಿಸುತ್ತಿರುವ ಪುಣ್ಯ ಕ್ಷೇತ್ರಗಳಾಗಿವೆ. ಹಿಂದೂ ಸಂಪ್ರದಾಯದಲ್ಲಿ ಹಲವಾರು ಗ್ರಂಥ, ಪುರಾಣಗಳಿಗನುಸಾರವಾಗಿ 4, 64, 52, 51 ಪೀಠಗಳಿವೆ ಎಂದು ಹೇಳಲಾಗುತ್ತದೆ. ಅಲ್ಲದೆ ಈ ಪೀಠಗಳು ಭಾರತ, ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಶ್ರೀಲಂಕಾ ಮುಂತಾದ ಸ್ಥಳಗಳಲ್ಲಿವೆ ಎಂದು ಹೇಳಲಾಗುತ್ತಿದೆ.
ಪುರಾಣಗಳ ಪ್ರಕಾರ, ಪ್ರಾಣ ತ್ಯಾಗ ಮಾಡಿದ ಸತಿಯ ದೇಹವನ್ನು ಶಿವನು ಎತ್ತಿಕೊಂಡು ವೈರಾಗ್ಯ, ದುಃಖಗಳಿಂದ ನರ್ತಿಸುತ್ತಿರುವಾಗ ದೇಹದ ಒಂದೊಂದು ಭಾಗಗಳು ಒಂದೊಂದು ದಿಕ್ಕುಗಳಲ್ಲಿ ಕಳಚಿ ಬಿದ್ದು ಆ ಸ್ಥಳಗಳು ಪ್ರಭಾವಶಾಲಿಯಾದ ಶಕ್ತಿಪೀಠಗಳಾಗಿ ರೂಪಗೊಂಡಿವೆ.
ಆದಿಗುರು ಶ್ರೀ ಶಂಕರಾಚಾರ್ಯರು ತಾವು ರಚಿಸಿದ ಅಷ್ಟಾದಶ ಶಕ್ತಿ ಪೀಠ ಸ್ತೋತ್ರದಲ್ಲಿ 18 ಶಕ್ತಿ ಪೀಠಗಳ ಕುರಿತು ಸುಂದರವಾಗಿ ವಿವರಿಸಿದ್ದಾರೆ.
ಅಷ್ಟಾದಶ ಶಕ್ತಿಪೀಠ ಸ್ತೋತ್ರಂ :
ಲಂಕಾಯಾಂ ಶಂಕರೀದೇವೀ ಕಾಮಾಕ್ಷೀ ಕಾಂಚಿಕಾಪುರೇ
ಪ್ರದ್ಯುಮ್ನೇ ಶೃಂಖಳಾದೇವೀ ಚಾಮುಂಡೀ ಕ್ರೌಂಚಪಟ್ಟಣೇ
ಅಲಂಪುರೇ ಜೋಗುಳಾಂಬಾ ಶ್ರೀಶೈಲೇ ಭ್ರಮರಾಂಬಿಕಾ
ಕೊಲ್ಹಾಪುರೇ ಮಹಾಲಕ್ಷ್ಮೀ ಮುಹುರ್ಯೇ ಏಕವೀರಾ
ಉಜ್ಜಿನ್ಯಾಂ ಮಹಾಕಾಳೀ ಪೀಠಿಕಾಯಾಂ ಪುರುಹೂತಿಕಾ
ಓಢ್ಯಾಯಾಂ ಗಿರಿಜಾದೇವೀ ಮಾಣಿಕ್ಯಾ ದಕ್ಷವಾಟಿಕೇ
ಹರಿಕ್ಷೇತ್ರೇ ಕಾಮರೂಪೀ ಪ್ರಯಾಗೇ ಮಾಧವೇಶ್ವರೀ
ಜ್ವಾಲಾಯಾಂ ವೈಷ್ಣವೀದೇವೀ ಗಯಾ ಮಾಂಗಳ್ಯಗೌರಿಕಾ
ವಾರಣಾಶ್ಯಾಂ ವಿಶಾಲಾಕ್ಷೀ ಕಾಶ್ಮೀರೇತು ಸರಸ್ವತೀ
ಅಷ್ಟಾದಶ ಸುಪೀಠಾನಿ ಯೋಗಿನಾಮಪಿ ದುರ್ಲಭಂ
ಸಾಯಂಕಾಲೇ ಪಠೇನ್ನಿತ್ಯಂ ಸರ್ವಶತ್ರುವಿನಾಶನಂ
ಸರ್ವರೋಗಹರಂ ದಿವ್ಯಂ ಸರ್ವಸಂಪತ್ಕರಂ ಶುಭಂ
ಪ್ರಸ್ತುತ ಲೇಖನದ ಮೂಲಕ ಶಂಕರರು ಹೇಳಿದ ಆ 18 ಶಕ್ತಿ ಪೀಠಗಳು ಯಾವುವು ಹಾಗೂ ಅವುಗಳಿರುವುದು ಎಲ್ಲೆಲ್ಲಿ ಎಂಬುದನ್ನು ತಿಳಿಯೋಣ….
ಶ್ರೀ ಕ್ಷೇತ್ರಗಳ ಬಗ್ಗೆ ವಿವರಗಳು –

- ಶಾಂಕರಿ ದೇವಾಲಯ :
ಶಾಂಕರಿ ದೇವಿ ದೇವಾಲಯವು ಶ್ರೀಲಂಕಾ ದೇಶದ ಟ್ರಿಂಕೋಮಲಿ ಎಂಬ ಪಟ್ಟಣದಲ್ಲಿದ್ದು ಮೊದಲನೇ ಶಕ್ತಿ ಪೀಠವಾಗಿದೆ. ಇಲ್ಲಿ ಸತಿ ದೇವಿಯ ಕೆಳಭಾಗವು ಬಿದ್ದಿರುವುದಾಗಿ ಪುರಾಣಗಳು ಹೇಳುತ್ತದೆ. ಪ್ರಾಚೀನರ ಲೆಕ್ಕಾಚಾರದ ಪ್ರಕಾರ ಈ ಕ್ಷೇತ್ರ ಶ್ರೀಲಂಕಾದಲ್ಲಿರಲಿಲ್ಲ, ಒಂದು ಕಾಲದಲ್ಲಿ ಭೂಮಧ್ಯರೇಖೆಯ ಶೂನ್ಯ ಡಿಗ್ರಿಯಲ್ಲಿತ್ತು. ಪ್ರಸ್ತುತ, ಟ್ರಿಂಕೋಮಲಿ (ಶ್ರೀಲಂಕಾ) ದ ಬೆಟ್ಟದ ಮೇಲಿರುವ ಪಾಳುಬಿದ್ದ ದೇವಾಲಯವು ಶಾಂಕರಿ ದೇವಿಯ ದೇವಾಲಯ ಎಂದು ಹೇಳಲಾಗುತ್ತದೆ. ಚೋಳರು, ಪಲ್ಲವರು, ಪಾಂಡ್ಯ ರಾಜರ ಕೈಯಲ್ಲಿ ಅಭಿವೃದ್ಧಿ ಪಡೆದ ಈ ತಾಯಿಯ ದೇವಾಲಯ ಆ ಕಾಲದಲ್ಲಿ ಅತ್ಯಂತ ಪ್ರಸಿದ್ಧಿಯನ್ನು ಪಡೆದಿತ್ತು. ಆದರೆ 1622 ರಲ್ಲಿ ಈ ಪ್ರದೇಶವನ್ನು ಆಕ್ರಮಿಸಿಕೊಳ್ಳಲು ಪ್ರಯತ್ನ ಮಾಡಿದ ಪೋರ್ಚುಗೀಸರು ಪುರಾತನವಾದ ದೇವಾಲಯವನ್ನು ಧ್ವಂಸ ಮಾಡಿದರು. ಆದರೆ ಆ ದೇವಿ ವಿಗ್ರಹ ಮಾತ್ರ ಏನು ಆಗದೇ ಇದ್ದಿದ್ದರಿಂದ ತದನಂತರ ಹಳೆಯ ದೇವಾಲಯದಂತೆಯೇ ಮತ್ತೊಂದು ದೇವಾಲಯವನ್ನು ನಿರ್ಮಾಣ ಮಾಡಿದರು.

- ಕಾಮಾಕ್ಷಿ ದೇವಿ ದೇವಾಲಯ :
ಇದು ಎರಡನೇ ಶಕ್ತಿಪೀಠವಾಗಿದ್ದು, ನಮ್ಮ ದಕ್ಷಿಣ ಭಾರತ ದೇಶದಲ್ಲಿನ ತಮಿಳು ನಾಡು ರಾಜ್ಯದ ಕಂಚಿಯಲ್ಲಿದೆ. ಭಕ್ತರು ಈ ದೇವಿಯನ್ನು ಕಂಚಿ ಕಾಮಾಕ್ಷಿ ಮಾತೆಯಾಗಿ ಕರೆಯುತ್ತಾರೆ. ಕೆಲವು ಶಾಸನದಲ್ಲಿ ಈ ಪಟ್ಟಣವನ್ನು ಕಾಂಚಿವರಂ, ಕಂಚಿ ಪುರಂ ಎಂದು ಕರೆಯುತ್ತಿದ್ದರೆಂದು ಉಲ್ಲೇಖಿಸಲಾಗಿದೆ. ಸತಿದೇವಿಯ ಬೆನ್ನು ಬಿದ್ದ ಸ್ಥಳವೇ ಈ ಕಾಂಚೀಪುರಂ ಕೇತ್ರ . ಇಲ್ಲಿನ ಶಕ್ತಿ ಪೀಠವನ್ನು ಕಂಚಿ ಕಾಮ ಕೋಟಿ ಪೀಠವೆಂದು, ಹಾಗೂ ಅಮ್ಮನವರನ್ನು ಕಾಮಾಕ್ಷಿ ದೇವಿಯೆಂದು ಪೂಜಿಸಲಾಗುತ್ತದೆ. ಪದ್ಮಾಸನದ ಮೇಲೆ ಆಸೀನಾಳಾದ ಹಾಗೂ, ಭುಜದ ಮೇಲೆ ಗಿಳಿಯಿರುವ ಈ ದೇವಿಯನ್ನು ಪೂಜಿಸಿದರೆ ಸಕಲ ಐಶ್ವರ್ಯಗಳು ಲಭಿಸುತ್ತದೆ ಎಂಬ ನಂಬಿಕೆ ಇದೆ. ಸ್ಥಳಪುರಾಣದ ಪ್ರಕಾರ… ಮಹಿಷಾಸುರನನ್ನು ಕೊಂದ ದೇವಿ ಚಾಮುಂಡೇಶ್ವರಿಯು ಆ ಪಾಪವನ್ನು ಹೋಗಲಾಡಿಸಲು ಏನು ಮಾಡಬೇಕೆಂದು ಶಿವನನ್ನು ಕೇಳಿದಾಗ ಇಂದಿನ ಕಂಚಿ ಕ್ಷೇತ್ರದಲ್ಲಿ ನೆಲೆಸಿ ಅನ್ನದಾನವನ್ನು ಮಾಡುತ್ತಾ ಪಾಪವನ್ನು ಹೋಗಲಾಡಿಸಿಕೋ ಎಂದೂ ಹೇಳಿದನಂತೆ. ಅಂದು ಸತಿ ದೇವಿ ಮೊದಲ ಸಲ ಕಂಚಿಯಲ್ಲಿ ಕಾಲಿಟ್ಟ ಆದಿ ಪೀಠವೇ ಕಂಚಿ ಕ್ಷೇತ್ರ. ಭಕ್ತರು ತಾಯಿಯನ್ನು ಆದಿ ಪರಮೇಶ್ವರಿ ಎಂದೂ ಪೂಜಿಸುತ್ತಾರೆ.
ಅನ್ನಪೂರ್ಣೇಶ್ವರಿಯಾಗಿ ಮರಳಿನಿಂದ ಶಿವಲಿಂಗವನ್ನು ಮಾಡಿ ಪೂಜಿಸಿ ಆ ಪುಣ್ಯದಿಂದ ಕಾಮಾಕ್ಷಿ ದೇವಿಯಾಗಿ ಶಿವನನ್ನು ಮದುವೆಯಾದಳು ಎಂದು ಪುರಾಣಗಳಲ್ಲಿ ಉಲ್ಲೇಕಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಕ್ತರು ಆದಿಪೀಠ ಪರಮೇಶ್ವರಿ ದೇವಸ್ಥಾನವನ್ನು ಆದಿಪರಾಶಕ್ತಿ ಯೋಗಪೀಠ ಮತ್ತು ಕಾಮಾಕ್ಷಿ ದೇವಿ ದೇವಸ್ಥಾನವನ್ನು ಭೋಗಪೀಠ ವೆಂದು ಭೇಟಿ ನೀಡಿ ದೇವಿಯ ದರ್ಶನ ಮಾಡುತ್ತಾರೆ. ಈ ದೇವಾಲಯವು ನಮ್ಮ ದೇಶದ ಪ್ರಮುಖ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿದೆ.

- ಶ್ರೀಂಖಲಾ ದೇವಿ ದೇವಾಲಯ :
ಇದು ಮೂರನೇ ಶಕ್ತಿ ಪೀಠವಾಗಿದ್ದು, ಈ ದೇವಾಲಯವು ಪಶ್ಚಿಮ ಬಂಗಾಳದ ಪ್ರತ್ಯುನ್ನ ನಗರದಲ್ಲಿದೆ. ಅಮ್ಮನ ಹೊಟ್ಟೆ ಬಿದ್ದ ಸ್ಥಳ ಪ್ರದ್ಯುಮ್ನಂ. ಈ ಜಾಗ ಗುಜರಾತಿನಲ್ಲಿದೆ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಕೋಲ್ಕತ್ತಾ ಬಳಿ ಇದೆ ಎನ್ನುತ್ತಾರೆ. ಗುಜರಾತ್ನ ರಾಜ್ಕೋಟ್ ಬಳಿಯ ಸುರೇಂದ್ರನಗರದಲ್ಲಿರುವ ‘ಚೋಟಿಲ್ಲಾ ಮಾತಾ’ ಅನ್ನು ಸ್ಥಳೀಯರು ಶೃಂಖಲಾ (ಶ್ರಿಂಗಾಲ) ದೇವಿ ಎಂದೂ ಹಾಗೂ ಈ ಪೀಠವನ್ನು ಭವತಾರಿಣಿ ಪೀಠವೆಂದು ಕರೆಯುತ್ತಾರೆ . ಆದರೆ ಪಶ್ಚಿಮ ಬಂಗಾಳದಲ್ಲಿರುವ ‘ಪಾಂಡುವಾ’ ನಿಜವಾದ ಶಕ್ತಿಕೇಂದ್ರ ಎಂದು ಹೆಚ್ಚಿನವರು ಹೇಳುತ್ತಾರೆ, ಪಾಂಡುವಾ ಗ್ರಾಮದಲ್ಲಿ ಹಿಂದೆ ಶೃಂಖಲಾದೇವಿ ದೇವಸ್ಥಾನ ಎಂದು ಹೇಳಲಾಗುವ ಸ್ಥಳದಲ್ಲಿ ಈಗ ಮಸೀದಿಯ ಮಿನಾರೆಟ್ ಅನ್ನು ಕಾಣಬಹುದು. ಪುರಾತತ್ವಶಾಸ್ತ್ರಜ್ಞರ ನಿಯಂತ್ರಣದಲ್ಲಿರುವ ಈ ಆವರಣಕ್ಕೆ ಸಾರ್ವಜನಿಕರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಪ್ರತಿ ವರ್ಷ ಮಾಘಮಾಸದಲ್ಲಿ ಅಲ್ಲಿ ‘ಮೇಲ್ತಾಳ’ ಎಂಬ ಉತ್ಸವ ನಡೆಯುತ್ತದೆ. ಆ ಆಚರಣೆಗಳಲ್ಲಿ ಹಿಂದೂ ಮುಸ್ಲಿಮರು ಭಾಗವಹಿಸಿವುದು ಬಹಳ ವಿಶೇಷ. ಈ ದೇವಾಲಯದಲ್ಲಿನ ದೇವಿಯನ್ನು ದರ್ಶನ ಮಾಡಿದವರಿಗೆ ಅಷ್ಟೈಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ನಂಬುತ್ತಾರೆ.

- ಚಾಮುಂಡಿ ದೇವಿ ದೇವಾಲಯ :
ಇದು ನಾಲ್ಕನೇ ಶಕ್ತಿ ಪೀಠವಾಗಿದ್ದು, ಈ ದೇವಾಲಯವು ನಮ್ಮ ಕರ್ನಾಟಕ ರಾಜ್ಯದಲ್ಲಿನ ಮೈಸೂರಿನಲ್ಲಿರುವ ಕ್ರೌಂಚ ಪೀಠದಲ್ಲಿದೆ. ಈ ದೇವಿಯನ್ನು “ಚಾಮುಂಡೇಶ್ವರಿ” ಎಂದೂ, “ಚಾಮುಂಡಿ” ಎಂದು ಭಕ್ತರು ಕರೆಯುತ್ತಾರೆ. ಮೈಸೂರಿನ ರಾಜ ವಂಶಿಕರ ಕುಲದೇವತೆಯಾಗಿ ಆ ತಾಯಿಯನ್ನು ಭಕ್ತಿಯಿಂದ ಪೂಜಿಸುತ್ತಾರೆ. ಇಲ್ಲಿ ಸತಿ ದೇವಿಯ ಕೂದಲು ಬಿದ್ದಿತ್ತೆಂದು ಪುರಾಣಗಳಲ್ಲಿ ಹೇಳಲಾಗುತ್ತದೆ. ಈ ಭಾಗದ ಜನರನ್ನು ಹಿಂಸಿಸುತ್ತಿದ್ದ ಮಹಿಷಾಸುರನನ್ನು ಕೊಲ್ಲಲು ಸತಿ ಶಕ್ತಿಯು ಚಾಮುಂಡೇಶ್ವರಿಯಾಗಿ ಅವತರಿಸಿದಳು ಎಂದು ಸಹ ದೇವಿ ಭಾಗವತ ಹೇಳುತ್ತದೆ. ಈ ದೇವಾಲಯದಲ್ಲಿ, ಅಮ್ಮನನ್ನು ಭಕ್ತರು ಚಿನ್ನದ ಮೂರ್ತಿಯ ರೂಪದಲ್ಲಿ ಪೂಜಿಸುತ್ತಾರೆ. ಈ ದೇವಾಲಯವು ನಮ್ಮ ಭಾರತ ದೇಶದಲ್ಲಿ ಪ್ರಮುಖ ಪುಣ್ಯ ಕ್ಷೇತ್ರವಾಗಿ ಜಗತ್ಪ್ರಸಿದ್ಧಿಯನ್ನು ಪಡೆದಿದೆ.

- ಜೋಗುಳಾಂಭ ದೇವಿ ದೇವಾಲಯ :
ಇದು ಐದನೇ ಶಕ್ತಿ ಪೀಠವಾಗಿದ್ದು ಇದು ಯೋಗಿಣಿ ಪೀಠವೆಂದು ಪ್ರಸಿದ್ಧಿ ಪಡೆದಿದೆ. ಈ ದೇವಾಲಯವು ತೆಲಂಗಾಣ ರಾಜ್ಯದ ಮೆಹಬೂಬ್ ನಗರ ಜಿಲ್ಲೆಯಲ್ಲಿದೆ. ಇಲ್ಲಿ ಸತಿ ದೇವಿಯ ಹಲ್ಲುಗಳು ಬಿದ್ದಿದೆ ಎಂದು ಹೇಳಲಾಗುತ್ತದೆ. ಜೋಗುಳಾಂಭ ನೆಲೆಸಿರುವ ಈ ದೇವಾಲಯವು ಕೆಲವು ವರ್ಷಗಳ ಹಿಂದೆಯೇ ನಿರ್ಮಾಣ ಮಾಡಿದ್ದು ಎಂದೂ, ಪುರಾತನ ದೇವಾಲಯವು 14 ನೇ ಶತಮಾನದಲ್ಲಿ ಬಹುಮನಿ ಸುಲ್ತಾನರ ದಾಳಿಯಿಂದಾಗಿ ಧ್ವಂಸ ಮಾಡಿದರು ಎಂದು ಹೇಳಲಾಗುತ್ತದೆ. ಆ ಸಮಯದಲ್ಲಿ ಅಂದಿನ ಸ್ಥಳೀಯರ ಒತ್ತಾಯದ ಮೇರೆಗೆ ದೇವಿಯ ವಿಗ್ರಹವನ್ನು ಹಾಗೂ ಅದರ ಜೊತೆ ಜೊತೆಗೆ ಚಂಡಿ-ಮುಂಡಿ ದೇವತೆಗಳ ವಿಗ್ರಹಗಳನ್ನು ಕೂಡ ಬಾಲಬ್ರಹ್ಮೇಶ್ವರ ದೇವಸ್ಥಾನದಲ್ಲಿ ಅಮ್ಮನ ವಿಗ್ರಹವನ್ನು ಭದ್ರವಾಗಿಟ್ಟು ಅಲ್ಲಿಯೇ ಸಾಕಷ್ಟು ವರ್ಷಗಳ ಕಾಲ ಜೋಗುಳಾಂಭ ತಾಯಿಗೆ ಪೂಜೆಗಳನ್ನು ಮಾಡುತ್ತಿದ್ದರಂತೆ. ಪೂರ್ವದಲ್ಲಿ ಈ ದೇವಾಲಯದಲ್ಲಿ ಆದಿ ಶಂಕರಾಚಾರ್ಯರು ಶ್ರೀ ಚಕ್ರವನ್ನು ಪ್ರತಿಷ್ಟಾಪಿಸಿರುವುದಾಗಿ ಪುರಾಣಗಳು ಹೇಳುತ್ತವೆ. ಕೆಲವು ದಾಳಿಗಳ ನಂತರ ಆ ಶ್ರೀ ಚಕ್ರ ಕಾಣದೇ ಹೋಯಿತು ಎನ್ನಲಾಗುತ್ತದೆ. ಪ್ರಸ್ತುತ ಈಗಿನ ದೇವಾಲಯದ ಗರ್ಭಗುಡಿಯಲ್ಲಿ ಜೋಗುಳಾಂಭಯು ಆಸೀನ ಮುದ್ರೆಯಲ್ಲಿ ಕುಳಿತು ದರ್ಶನ ನೀಡುತ್ತಿದ್ದಾಳೆ. ಆ ತಾಯಿಯ ಸನ್ನಿಧಿಯಲ್ಲಿ ಸಪ್ತಮಾತೃಕೆಯರು, ವೀಣಾಪಾಣಿ (ಸರಸ್ವತಿ ದೇವಿ) ಮತ್ತು ವೀರಭದ್ರನ ವಿಗ್ರಹಗಳಿವೆ. ಈ ದೇವಾಲಯದ ಸುತ್ತಲೂ ನೀರಿನ ತೊಟ್ಟಿ ಇದೆ. ತಾಯಿಯು ಬಹಳ ಉಗ್ರಳಾಗಿರುವುದರಿಂದ ಆಕೆಯನ್ನು ಒಲಿಸಿಕೊಳ್ಳಲು ಈ ವ್ಯವಸ್ಥೆ ಮಾಡಲಾಗಿದೆ ಎನ್ನುತ್ತಾರೆ ಸ್ಥಳೀಯರು.

- ಭ್ರಮರಾಂಬಿಕಾ ದೇವಿ ದೇವಾಲಯ :
ಇದು ಆರನೇ ಶಕ್ತಿ ಪೀಠವಾಗಿದ್ದು ಅದು ಆಂಧ್ರ ಪ್ರದೇಶದ ದ್ವಾದಶ ಜ್ಯೋತಿರ್ಲಿಂಗದ ಕ್ಷೇತ್ರಗಳಲ್ಲಿ ಒಂದಾದ ಶ್ರೀಶೈಲ ಮಹಾ ಕ್ಷೇತ್ರದಲ್ಲಿದೆ. ಇದು ಸತಿದೇವಿಯ ಕೊರಳು ಬಿದ್ದ ಸ್ಥಳವೆಂಬುದು ಪುರಾಣಗಳಲ್ಲಿ ಉಲ್ಲೇಖನವಾಗಿದೆ.
ಇಲ್ಲಿನ ದೇವಿಯನ್ನು ಬ್ರಹ್ಮರಾಂಬ ಎಂದೂ ಕರೆಯಲಾಗುತ್ತದೆ. ಇಲ್ಲಿ ಸತಿ ದೇವಿಯ ಕತ್ತಿನ ಭಾಗ ಬಿದ್ದಿದೆ ಎಂದು ಸ್ಥಳ ಎಂದು ಪುರಾಣ ಹೇಳುತ್ತದೆ. ನಲ್ಲಮಲ್ಲ ಅರಣ್ಯದ ಮಧ್ಯೆ ಕೃಷ್ಣ ನದಿಯ ತೀರದಲ್ಲಿನ ಶ್ರೀ ಶೈಲ ಕ್ಷೇತ್ರವನ್ನು ದಕ್ಷಿಣ ಕಾಶಿ ಎಂದೂ ಸಹ ಕರೆಯುತ್ತಾರೆ. ಇಲ್ಲಿ ಸಾಕ್ಷಾತ್ ಮಹಾಶಿವನು ಜ್ಯೋತಿರ್ಲಿಂಗ ಸ್ವರೂಪಿಯಾಗಿ ಮಲ್ಲಿಕಾರ್ಜುನ ಸ್ವಾಮಿಯಾಗಿ ನೆಲೆಸಿದ್ದಾನೆ.
ಅರುಣಾಸುರ ಎಂಬ ರಾಕ್ಷಸನು ಈ ಪ್ರದೇಶದ ಜನರಿಗೆ ಪ್ರಾಣಾಪಾಯವನ್ನುಂಟು ಮಾಡುತ್ತಿದ್ದನಂತೆ. ಅವನು ನಾಲ್ಕು ಕಾಲಿನ ಜೀವಿಗಳಿಂದ ಮಾತ್ರ ಮರಣ ಬರಲೆಂದು ವರ ಪಡೆದಿದ್ದನಂತೆ. ಭಕ್ತರ ಮೋರೆಯನ್ನು ಆಲಿಸಿದ ತಾಯಿ ಅವನನ್ನು ಕೊಲ್ಲಲು ಸತಿದೇವಿಯು “ಭ್ರಮರ (ದುಂಬಿ )” ರೂಪವನ್ನು ಧರಿಸಿ ಅವನನ್ನು ಸಂಹರಿಸಿದಳಂತೆ, ನಂತರ ಈ ಕ್ಷೇತ್ರದ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿ ಭ್ರಮರಾಂಬಿಕೆಯಾಗಿ ನೆಲೆ ನಿಂತು ಇಂದಿಗೂ ಭಕ್ತರನ್ನು ಪೊರೆಯುತ್ತಿದ್ದಾಳೆ. ಶಂಕರಾಚಾರ್ಯರು ಈ ಕ್ಷೇತ್ರಕ್ಕೆ ಬಂದು ದೇವಿಯನ್ನು ಭೇಟಿ ಮಾಡಿ ಶ್ರೀ ಚಕ್ರವನ್ನು ಪ್ರತಿಷ್ಠಾಪಿಸಿ ಭ್ರಮರಾಂಬಾಷ್ಟಕವನ್ನು ರಚಿಸಿದರ ಉಲ್ಲೇಖವಿದೆ .ಹಲವಾರು ಮಾಹಿತಿಗಳ ಪ್ರಕಾರ ಶ್ರೀಶೈಲಕ್ಷೇತ್ರದಲ್ಲಿ ‘ಸೌಂದರ್ಯ ಲಹರಿ’ಯನ್ನೂ ರಚಿಸಿದ್ದಾರೆಂದು ಹೇಳಲಾಗುತ್ತದೆ. ಶ್ರೀಶೈಲ ಮಹಾ ಕ್ಷೇತ್ರಕ್ಕೆ ಭೇಟಿ ನೀಡಿ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಭ್ರಮರಾಂಭಿಕೆಯ ದರ್ಶನ ಮಾಡಿದರೆ ಪುನರ್ಜನ್ಮವಿಲ್ಲ ಎಂಬ ಐತಿಹ್ಯವಿದೆ.
ಇನ್ನುಳಿದ ಶಕ್ತಿ ಪೀಠಗಳ ಮಾಹಿತಿಯು ಮುಂದಿನ ಸಂಚಿಕೆಯಲ್ಲಿ……..

‘ಕ್ಷೇತ್ರದೊಳ್ ಸಾನಿಧ್ಯದೊಳ್’ ಅಂಕಣದ ಹಿಂದಿನ ಸಂಚಿಕೆಗಳು :
- ನಾಗಲ ಮಡಿಕೆ ವರಪ್ರದ ಶ್ರೀ ಸುಬ್ರಹ್ಮಣ್ಯ ಸ್ವಾಮಿ
- ಪರಮಶಿವನು ನೆಲೆಸಿರುವ ಅಮರನಾಥ ದೇವಾಲಯ
- ಗುರುರಾಯರು ನೆಲೆಸಿಹ ಮಂತ್ರಾಲಯ
- ಶ್ರೀ ಶರಭೇಶ್ವರ ದೇವಾಲಯ
- ಶ್ರೀ ಮಹಾಗಣಪತಿ ಕ್ಷೇತ್ರ : ಕುರುಡು ಮಲೆ
- ಶ್ರೀಕ್ಷೇತ್ರ ಕುಡುಪು ಅನಂತ ಪದ್ಮನಾಭ ದೇವಸ್ಥಾನ
- ದಕ್ಷಿಣ ಕಾಶಿ : ಶ್ರೀ ಕ್ಷೇತ್ರ ಕಳಸ
- ಬಳ್ಳಿಗಾವಿಯ ಕೇದಾರೇಶ್ವರ ದೇವಸ್ಥಾನ
- ಸೌಮ್ಯ ಸನತ್
