ನಾನು ಐದನೇ ತರಗತಿಯಲ್ಲಿ ಅನ್ನುತ್ತೀರ್ಣಳಾಗಿದ್ದೆ, ಆದರೆ ಇದೀಗ ಯುಪಿಎಸ್ಸಿ ಪರೀಕ್ಷೆ ಬರೆದು ನಾಗರಿಕ ಸೇವೆಯಲ್ಲಿರುವೆ ಎಂದು ಅತ್ಯಂತ ಹೆಮ್ಮೆಯಿಂದ ಹೇಳುವ ಈ ಮಹಿಳೆಯ ಹೆಸರು ನೇಹಾ ಬ್ಯಾಡ್ವಾಲ. ವೀಣಾ ಹೇಮಂತ್ ಗೌಡ ಪಾಟೀಲ್ ಅವರು ‘ಸಾಧನೆಯ ಶಿಖರ ಏರಲು…ಬೇಕು ಬದ್ಧತೆ’ ಕುರಿತು ಬರೆದಿದ್ದಾರೆ, ತಪ್ಪದೆ ಮುಂದೆ ಓದಿ…
ರಾಜಸ್ಥಾನ ರಾಜ್ಯದ ರಾಯಪುರದಲ್ಲಿ ಹುಟ್ಟಿದ ನೇಹಾಳ ಬಾಲ್ಯ ಜೀವನ ಅರಳಿದ್ದು ಜೈಪುರದ ತನ್ನ ಅಜ್ಜಿ ತಾತನ ಮನೆಯಲ್ಲಿ.. ಮಾತೃ ಭಾಷೆ ರಾಜಸ್ಥಾನ ಭಾಷೆಯಲ್ಲಿಯೇ ಎಲ್ಲ ವ್ಯವಹಾರಗಳು ನಡೆಯುತ್ತಿದ್ದವು. ಇಂಗ್ಲೀಷ್ ದೂರದ ಮಾತು. ಹಿಂದಿ ಕೂಡ ಅವರಿಗೆ ವಿದೇಶಿ ಭಾಷೆಯಂತೆ ತೋರುತ್ತಿತ್ತು ಎಂದರೆ ನೀವೇ ಊಹಿಸಿ ಆಕೆ ಬೆಳೆದ ಬಗೆ ಹೇಗಿತ್ತು ಎಂದು.
ಶಾಲೆ ಎಂದರೆ ಪಂಚಪ್ರಾಣ ಆಕೆಗೆ. ಶಾಲೆಯ ಮೊದಲ ದಿನವೇ ಅತ್ಯಂತ ಆಸೆಯಿಂದ ತಯಾರಾಗಿ ಹೊರಟು ನಿಂತಿದ್ದಾಳೆ. ಶಾಲೆಯಲ್ಲಿ ಓದು ಬರಹ ಮುಂತಾದ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಅವಕಾಶ ಸಿಗುತ್ತದೆ ಎಂಬುದಕ್ಕಿಂತ ಹೆಚ್ಚಾಗಿ ಜನರೊಂದಿಗೆ ಮಾತನಾಡುವ ಒಡನಾಡುವ ಕುರಿತು ಹೆಚ್ಚಿನ ಆಸಕ್ತಿ ವಹಿಸಿದ್ದ ಆಕೆಗೆ ಶಾಲೆಯಲ್ಲಿ ಬಹಳಷ್ಟು ಜನ ಸ್ನೇಹಿತರು ಸಿಗುತ್ತಾರೆ ಎಂಬ ಆಸೆಯಿಂದ ಶಾಲೆಗೆ ಭರ್ತಿಯಾದಳು.
ಮುಂದೆ ಅನಿವಾರ್ಯ ಕಾರಣಗಳಿಂದಾಗಿ ಆಕೆ ಭೂಪಾಲ್ ನಗರಕ್ಕೆ ಸ್ಥಳಾಂತರಿಸಲ್ಪಟ್ಟಳು. ಅಲ್ಲಿ ಆಕೆಗೆ ಇಂಗ್ಲಿಷ್ ಮೀಡಿಯಂ ಶಾಲೆಗೆ ಕಳುಹಿಸಲಾಯಿತು. ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೂ ಮಾತೃ ಭಾಷೆಯಲ್ಲಿಯೇ ಕಲಿತ ಆಕೆಗೆ ಒಂದೇ ಒಂದು ಅಕ್ಷರ ಇಂಗ್ಲಿಷ್ ಕೂಡ ಬರದೇ ಇದ್ದುದರ ಪರಿಣಾಮವಾಗಿ ಆಕೆ 5ನೇ ತರಗತಿಯಲ್ಲಿ ಫೇಲಾದಳು.

ಫೋಟೋ ಕೃಪೆ : google
ಇಂಗ್ಲೀಷ್ ಮಾಧ್ಯಮದಲ್ಲಿ ಫೇಲಾದ ಆಕೆಗೆ ಹಿಂದಿ ಮಾಧ್ಯಮಕ್ಕೆ ಬದಲಾಗಲು ಒಂದು ಅವಕಾಶವನ್ನು ನೀಡಲಾಯಿತು.ಆಕೆಯ ಒಳ ಮನಸು ಚೀರಿ ಈ ಅವಕಾಶವನ್ನು ಬಿಟ್ಟು ಕೊಡಬೇಡ ಎಂದು ಹೇಳುತ್ತಿತ್ತು. ಆದರೆ ಮನಸ್ಸಿನ ಮತ್ತೊಂದು ಮೂಲೆಯಲ್ಲಿ ಆಕೆಯದ್ದೇ ಕ್ಷೀಣ ಧ್ವನಿ ಸವಾಲುಗಳಿಗೆ ಎದೆಯೊಡ್ಡಿ ನಿಲ್ಲು ಎಂದು ಹೇಳುತ್ತಿತ್ತು. ಕ್ರಮೇಣ ಆ ಕ್ಷೀಣ ಧ್ವನಿ ದೊಡ್ಡದಾಗುತ್ತಾ ಜೋರಾದ ಸದ್ದಾಗಿ ಆಕೆಯ ಮನಸ್ಸನ್ನು ಆವರಿಸಿತು. ಪರಿಣಾಮವಾಗಿ ಆಕೆ ಇಂಗ್ಲಿಷ್ ಮಾಧ್ಯಮದಲ್ಲಿಯೇ ಉಳಿದುಕೊಂಡಳು.
ಇಂಗ್ಲಿಷ್ ಅಕ್ಷರಗಳನ್ನು ಅರಿತುಕೊಳ್ಳುವುದರಿಂದ ಹಿಡಿದು ಅವುಗಳನ್ನು ಓದುವ, ಬರೆಯುವ ಕಲೆಯನ್ನು ಕರಗತ ಮಾಡಿಕೊಂಡಳು. ನಿಧಾನವಾಗಿ ಒಂದೊಂದೇ ಇಂಗ್ಲಿಷ್ ವಾಕ್ಯಗಳನ್ನು ರಚಿಸಿ ಮಾತನಾಡಲು ಆರಂಭಿಸಿದ ಆಕೆ ಮುಂದಿನ ಕೆಲವೇ ವರ್ಷಗಳಲ್ಲಿ ನಿರರ್ಗಳವಾಗಿ ಇಂಗ್ಲಿಷ್ ನಲ್ಲಿ ಮಾತನಾಡುವ ಮೂಲಕ ತನ್ನ ಮುಂದಿದ್ದ ಬಹುದೊಡ್ಡ ಸವಾಲನ್ನು ಎದುರಿಸಿ ಜಯಿಸಿದಳು. ಆಕೆಯ ಈ ಹೋರಾಟದಲ್ಲಿ ಆಕೆಗೆ ಜೊತೆಯಾಗಿದ್ದು ಆಕೆಯ ಆತ್ಮ ವಿಶ್ವಾಸ ಒಂದೇ. ಮನೆಯಲ್ಲಿ ಹೇಳಿಕೊಡುವವರು ಇಲ್ಲದ ಕಾರಣ ಆಕೆ ಏಕಾಂಗಿಯಾಗಿ ಈ ಹೋರಾಟವನ್ನು ಮಾಡಬೇಕಾಯಿತು. ಪರಿಣಾಮವಾಗಿ ಐದನೇ ತರಗತಿಯಲ್ಲಿ ಫೇಲಾದ ಆಕೆ ಹತ್ತನೇ ತರಗತಿಯಲ್ಲಿ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿ ಗುರುತಿಸಲ್ಪಟ್ಟಳು. ಮುಂದೆ 11 ಮತ್ತು 12ನೇ ತರಗತಿಗಳಿಗೆ ಬಂದಾಗ ಆಕೆ ಸಾಮಾನ್ಯವಾಗಿ ಉಳಿದೆಲ್ಲ ಹರಿಹರೆಯದವರು ವರ್ತಿಸುವಂತೆ ಇದ್ದು ಓದು ಬರಹಗಳಲ್ಲಿ ಅಷ್ಟೇನು ಆಸಕ್ತಿಯನ್ನು ತೋರಿಸದೆ ಹೋದ ಪರಿಣಾಮವಾಗಿ ಆ ತರಗತಿಗಳಲ್ಲಿ ಆಕೆಗೆ ಪರೀಕ್ಷೆಯಲ್ಲಿ ದೊರೆತ ಅಂಕಗಳು ಕಡಿಮೆಯಾದವು. ವರ್ಷದಲ್ಲಿ ಹಲವಾರು ಬಾರಿ ಆಕೆಯನ್ನು ಪ್ರಿನ್ಸಿಪಾಲರು ಕರೆದು ಬೈದು ಬುದ್ಧಿ ಹೇಳುವಂತಹ ಪರಿಸ್ಥಿತಿ ತಂದು ಕೊಂಡಳು.
ಆಕೆಯ ಬದುಕು ಟ್ರಾಂಪೋಲಿನ ಮೇಲೆ ಕುಪ್ಪಳಿಸುವ ಮಕ್ಕಳಂತಾಗಿತ್ತು ಎಂದೇ ಆಕೆ ಹೇಳುತ್ತಾರೆ… ಅದೆಷ್ಟು ಜೋರಾಗಿ ಆಕೆ ಕೆಳಕ್ಕೆ ಜಿಗಿಯುತ್ತಿದ್ದಳೋ ಅಷ್ಟೇ ಜೋರಾಗಿ ಮೇಲಕ್ಕೆ ಏರುತ್ತಿದ್ದಳು ಕೂಡ. ಪ್ರತಿಯೊಂದು ಕ್ರಿಯೆಗೂ ಅಷ್ಟೇ ಸಮನಾದ ಮತ್ತು ನಿಖರವಾದ ಪ್ರತಿಕ್ರಿಯೆ ಇರುತ್ತದೆ ಎಂದು ವಿಜ್ಞಾನದಲ್ಲಿ ನಾವು ಓದಿದ್ದೇವೆ ಮತ್ತು ಕೇಳಿದ್ದೇವಷ್ಟೇ. ಆಕೆಯ ಬದುಕು ಕೂಡ ಹಾಗೆಯೇ ಇತ್ತು.
ನೇಹಾ ರಾಯಪುರಕ್ಕೆ ಮರಳಿ ಎಚ್ ಡಿ ಬಿ ಗರ್ಲ್ಸ್ ಕಾಲೇಜಿಗೆ ಬಂದು ಪ್ರವೇಶ ಪಡೆದಳು ಅಲ್ಲಿ ಯಾರಿಗೂ ಇಂಗ್ಲೀಷ್ ಬರುತ್ತಿರಲಿಲ್ಲ. ಆಕೆ ಮೊದಲ ವರ್ಷ ಮತ್ತೆ ಅತಿ ಹೆಚ್ಚಿನ ಅಂಕಗಳನ್ನು ಗಳಿಸಿ ತರಗತಿಗೆ ಮೊದಲಿಗಳಾದಳು. ಇದು ಆಕೆಗೆ ತನ್ನಲ್ಲಿ ಭರವಸೆ ಮತ್ತು ಆತ್ಮವಿಶ್ವಾಸ ಮೂಡಲು ಕಾರಣವಾಯಿತು. ಆಕೆಯ ತರಗತಿಯ ಉಳಿದ ವಿದ್ಯಾರ್ಥಿಗಳು ಆಕೆಯ ಸಹಾಯ ಕೇಳಿ ಬರತೊಡಗಿದಾಗ ಮೊಟ್ಟಮೊದಲ ಬಾರಿಗೆ ಆಕೆಗೆ ತಾನು ಕೂಡ ನಂಬಲರ್ಹ ವ್ಯಕ್ತಿ ಎಂದು ಭಾಸವಾಯಿತು.
ಆಕೆ ತನ್ನ ಕಾಲೇಜಿನ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಂಡಳು. ಕಾಲೇಜಿನ ಎಲ್ಲ ಕಾರ್ಯಕ್ರಮಗಳನ್ನು ನಿರೂಪಿಸುವ, ಮಾತನಾಡುವ ಮತ್ತು ಚರ್ಚೆಗಳಲ್ಲಿ ಭಾಗವಹಿಸುವ ಅವಕಾಶಗಳನ್ನು ಆಕೆ ಕೈಬಿಡಲಿಲ್ಲ. ಬದಲಾಗಿ ಆ ಎಲ್ಲಾ ಅವಕಾಶಗಳು ಆಕೆಗೆ ಕಾಲೇಜಿನ ವೇದಿಕೆ ಸೃಷ್ಟಿಸಿತು. ಆಕೆಗೆ ಲಾಯರ್ ಆಗಬೇಕೆಂಬ ಕನಸಿತ್ತು. ಒಂದು ದಿನ ಆಕೆಯ ತಂದೆ ಆಕೆಗೊಂದು ಬೆಟ್ಟವನ್ನು ತೋರಿಸಿದರು ಆ ಬೆಟ್ಟ ಸಂಪೂರ್ಣ ಕಸದಿಂದ ತುಂಬಿತ್ತು. ಇದು ನೀನು ಏರಬೇಕಾಗಿರುವ ಬೆಟ್ಟ.ನನಗೆ ಗೊತ್ತು ನೀನು ಇದನ್ನು ಖಂಡಿತವಾಗಿಯೂ ಏರುತ್ತಿಯಾ ಎಂದು. ಆದರೆ ಇದನ್ನು ಏರಲು ನೀನು ಬಳಸುವ ದಾರಿ ಮುಖ್ಯವಾಗುತ್ತದೆ ಎಂದು ಹೇಳಿದರು
ಆ ದಿನವೇ ಆಕೆ ಯುಪಿಎಸ್ಸಿ ಯನ್ನು ಆಯ್ಕೆ ಆಯ್ದುಕೊಂಡಳು. ಸುಮಾರು 30 ಜನ ಇರುವ ಆಕೆಯ ಕುಟುಂಬದಲ್ಲಿ ಅವರ ಮನೆಯಲ್ಲಿ ದೂರದರ್ಶನವಾಗಲಿ ಬಿಳಿ ಬಣ್ಣದ ಬೋರ್ಡ್ ಆಗಲಿ ಯಾವುದೂ ಇರಲಿಲ್ಲ ಮನೆಯ ಊಟದ ಟೇಬಲ್ ನ ಮೇಲೆ ಅವರು ಪ್ರಶ್ನೋತ್ತರಗಳ ಸರಣಿಗಳನ್ನು ನಡೆಸುತ್ತಿದ್ದರು. ಅದು ಅವರ ದೈನಂದಿನ ದಿನಚರಿಯಾಗಿತ್ತು
ರೆವಿನ್ಯೂ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಕೆಯ ತಂದೆ ಕೆಲಸದಿಂದ ದಣಿದು ಬಂದಿದ್ದರೂ ಕೂಡ ಮಕ್ಕಳಿಗೆ ಗಣಿತ ಪಾಠವನ್ನು ಹೇಳಲು ಕುಳಿತುಕೊಳ್ಳುತ್ತಿದ್ದರು. ಆಕೆಯೇ ಹೇಳುವಂತೆ ಆಕೆಯ ತಲೆಗೆ ಗಣಿತದ ವಿಷಯ ಬಂದರೆ ಅಂಕಿ ಸಂಖ್ಯೆಗಳು ಕೀಲಿ ಹಾಕಿದಂತೆ ಮರೆತು ಹೋಗುತ್ತಿದ್ದವು. ನನ್ನ ತಂದೆಯೇ ನನ್ನ ಗಣಿತದ ಕೋಣೆಯ ಕೀಲಿಯನ್ನು ತೆಗೆದದ್ದು ಮತ್ತು ಅದರಿಂದಲೇ ನಾನು (csat) ಸಿ ಸ್ಯಾಟ್ ಪರೀಕ್ಷೆಯನ್ನು ಬರೆದು ಪಾಸಾಗಲು ಸಾಧ್ಯವಾಯಿತು ಎಂದು ಆಕೆ ಹೇಳುತ್ತಾರೆ.
ಒಟ್ಟು ನಾಲ್ಕು ಬಾರಿ ಪರೀಕ್ಷೆ ಎದುರಿಸಿದಳಾಕೆ. ಮೊದಲ ಬಾರಿ ಯಾವುದೇ ರೀತಿಯಲ್ಲೂ ಅವಶ್ಯಕವಾದ ಪ್ರಮಾಣದ ಪರಿಶ್ರಮ ಪಡದ ಕಾರಣ ಆಕೆಗೆ ಪ್ರವೇಶ ದೊರೆಯಲಿಲ್ಲ.
ಎರಡನೆಯ ಬಾರಿ ಕೇವಲ ಎರಡು ಅಂಕಗಳಿಂದ ಪ್ರಿಲಿಮ್ಸ್ ಪ್ರವೇಶ ದೊರೆಯಲಿಲ್ಲ. ಆದರೂ ಈ ಪ್ರಯತ್ನವು ಆಕೆಯಲ್ಲಿ ಭರವಸೆಯನ್ನು ಮೂಡಿಸಿತು. ಮೂರನೇ ಪ್ರಯತ್ನದಲ್ಲಿ ಆಕೆ ಪ್ರಿಲಿಮ್ಸ್ ನಲ್ಲಿ ಪಾಸಾದಳು. ಆದರೆ ಮೇನ್ಸ್ ನಲ್ಲಿ ಆಕೆ ನಿರೀಕ್ಷೆಗೆ ತಕ್ಕಂತೆ ಬರೆಯಲು ಸಾಧ್ಯವಾಗಲಿಲ್ಲ. ನಾಲ್ಕನೆಯ ಆಕೆಯ ಪ್ರಯತ್ನ ಆಕೆಯ ಬದುಕಿನ ದಿಕ್ಕನ್ನೇ ಬದಲಿಸಿತು.ಆಕೆ ಪಾಸಾಗಿದ್ದಳು.
ಆಕೆಯ ಪುಟ್ಟ ಸಹೋದರ ಪ್ರತಿದಿನ ಆಕೆಗೆ 10 ಗಂಟೆಗಳ ಕಾಲ ಜೊತೆಯಾಗಿ ಕುಳಿತುಕೊಳ್ಳುತ್ತಿದ್ದ. ಆಕೆಯನ್ನು ಪ್ರೋತ್ಸಾಹಿಸುತ್ತಿದ್ದ. ಒಂದೇ ವಾರದಲ್ಲಿ ಆಕೆ ಹತ್ತು ನಿಮಿಷದಲ್ಲಿ ಕೊಡುವ ಉತ್ತರಗಳಿಗೆ ಆರು ನಿಮಿಷಗಳ ಸಮಯಕ್ಕೆ ಇಳಿಸಿದ್ದಳು.
ನಾಲ್ಕನೇ ಬಾರಿ ಪರೀಕ್ಷೆಯನ್ನು ಬರೆಯುವಾಗ ಅವಧಿಗೆ ಮುನ್ನವೇ ಎಲ್ಲ ಉತ್ತರಗಳನ್ನು ಬರೆದ ಆಕೆಗೆ ತನ್ನ ಉತ್ತರಗಳನ್ನು ಮರುಪರಿಶೀಲಿಸಲು ಸಾಕಷ್ಟು ಸಮಯ ದೊರೆಯಿತು. ಕೊನೆಗೆ ಉಳಿದದ್ದು ಇಂಟರ್ವ್ಯೂ ಸುತ್ತು.
ಸಂದರ್ಶನದ ಸುತ್ತಿಗೆ ಆಕೆಯ ಇಡೀ ಕುಟುಂಬವೇ ಆಕೆಗೆ ಸಂದರ್ಶಕರ ರೂಪದಲ್ಲಿ ಪ್ರಶ್ನಿಸಲು ಆರಂಭಿಸಿದರು. ಆಕೆಯ ತಂದೆ-ತಾಯಿ, ಚಿಕ್ಕಪ್ಪ-ಚಿಕ್ಕಮ್ಮ, ಸೋದರ ಸಂಬಂಧಿಗಳು ನಿಂತಲ್ಲಿ ಕುಳಿತಲ್ಲಿ ಆಕೆಯನ್ನುಪ್ರಶ್ನೆ ಕೇಳುವ ಮೂಲಕ ಎಚ್ಚರಿಸುತ್ತಿದ್ದರು. ಪ್ರತಿದಿನವೂ ಮನೆಯಲ್ಲಿ ಸಂದರ್ಶನದ ಅಣಕು ಪ್ರದರ್ಶನ ನಡೆಯುತ್ತಿತ್ತು. ಎಲ್ಲರೊಂದಿಗೆ ಬೆರೆತು ಮಾತನಾಡಲು ಇಚ್ಚಿಸುತ್ತಿದ್ದ ಆಕೆಗೆ ಸಂದರ್ಶನವನ್ನು ಎದುರಿಸುವುದು. ಅಷ್ಟೇನೂ ಭಯ ಎನ್ನಿಸಲಿಲ್ಲ. ಮನೆಯ ವಾತಾವರಣದಂತೆಯೇ ತೋರಿತು.

ಫೋಟೋ ಕೃಪೆ : google
ಫಲಿತಾಂಶದ ದಿನ ಆಕೆ ತನ್ನ ಫಲಿತಾಂಶವನ್ನು ನೋಡಲು ಹೋಗಲೇ ಇಲ್ಲ.ಇದಕ್ಕೂ ಮುನ್ನ ಫೇಲಾದ ಕಾರಣ ಆಕೆಗೆ ಕೊಂಚ ಭಯವಿತ್ತು. ಆಕೆಯ ಚಿಕ್ಕಪ್ಪ ಪರೀಕ್ಷೆಯ ಫಲಿತಾಂಶವನ್ನು ನೋಡುತ್ತಿದ್ದು ಮುಂದಿನ ಒಂದೆರಡು ನಿಮಿಷಗಳಲ್ಲಿ ಜೋರಾಗಿ ಕೂಗುತ್ತಾ ಬಂದ ಅವರ ದನಿಯಲ್ಲಿ ಸಂತಸ ವಿದ್ದರೆ ಕಣ್ಣಲ್ಲಿ ಕಂಬನಿ ಮಡುಗಟ್ಟಿತ್ತು. ಹೌದು, ಆಕೆ ಆಯ್ಕೆಯಾಗಿದ್ದಳು.
ಐದನೇ ತರಗತಿಯಲ್ಲಿ ಫೇಲ್ ಆಗಿದ್ದರೂ ಕೂಡ ದೇಶದಲ್ಲಿಯೇ ಅತ್ಯಂತ ಕಠಿಣ ಪರೀಕ್ಷೆ ಎಂದು ಪರಿಗಣಿಸಲ್ಪಟ್ಟ ನಾಗರಿಕ ಸೇವಾ ಪರೀಕ್ಷೆಯನ್ನು ಪಾಸಾದದ್ದು ಒಂದು ಪವಾಡವೇ ಸರಿ ಎಂದೆನ್ನುವ ಜನರ ನಡುವೆ ಆಕೆ ಹಾಕಿದ ನಿರಂತರ ಪರಿಶ್ರಮ ಬಹಳಷ್ಟು ಜನರಿಗೆ ಅರ್ಥವಾಗಲಿಕ್ಕಿಲ್ಲ. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಮೊಬೈಲ್ನಲ್ಲಿ ಮುಳುಗುವ ಇಂದಿನ ಯುವ ಜನಾಂಗದವರ ಎದುರು ತನ್ನ ಗುರಿ ತಲುಪುವವರೆಗೆ ಸುಮಾರು ಮೂರು ವರ್ಷಗಳ ಕಾಲ ನೇಹಾ ಮೊಬೈಲನ್ನೇ ಮುಟ್ಟಿರಲಿಲ್ಲ ಎಂದರೆ ಆಕೆಯ ಬದ್ಧತೆ ಎಷ್ಟಿರಬಹುದು ಎಂಬುದನ್ನು ಅರಿಯಬಹುದು.
ಮುಖ್ಯವಾಗಿ ಈ ಪಯಣದಲ್ಲಿ ಅದೆಷ್ಟೇ ಅಡೆತಡೆಗಳು ಬಂದರೂ ಕೂಡ, ಸವಾಲುಗಳು ಇದ್ದರೂ ಕೂಡ ಅವುಗಳನ್ನು ಎದುರಿಸಲು ಕೇವಲ ನಾನು ಮಾತ್ರ ಸಿದ್ಧವಾಗಿರಬೇಕು ಎಂಬುದನ್ನು ಆಕೆ ಅರಿತುಕೊಂಡಳು.ಇಡೀ ಜಗತ್ತಿಗೆ ನಾನು ವಂಚಿಸಬಹುದು ಆದರೆ ಖುದ್ದು ತನ್ನನ್ನಲ್ಲ ಎಂಬ ಸತ್ಯದ ಅರಿವಾಗಿತ್ತು.
ಯಶಸ್ಸು ನಮ್ಮ ಹಣೆಬರಹ ಎಂದು ಹೇಳಬಹುದು, ಆದರೆ ಪ್ರಯತ್ನ ಮಾತ್ರ ನಮ್ಮ ಕೈಯಲ್ಲಿ ಖಂಡಿತವಾಗಿಯೂ ಇದೆ. ಪದೇ ಪದೇ ಪಯತ್ನಿಸುವುದರ ಮೂಲಕ ಒಂದೊಮ್ಮೆ ಬಹುದೊಡ್ಡ ಗುಡ್ಡ ಎಂದೆನಿಸಿದ ಯುಪಿಎಸ್‌ಸಿ ಪರೀಕ್ಷೆಯ ಫಲಿತಾಂಶ ಇದೀಗ ಆಕೆಯ ಕೈ ಸೇರಿತು.ಆಕೆಯ ಆಲ್ ಇಂಡಿಯಾ ರಾಂಕಿಂಗ್ 569 ಆಗಿದ್ದು ದೇಶದ ಅತಿ ಚಿಕ್ಕ ಐಎಎಸ್ ಆಫೀಸರ್ ಆಗಿ ಆಕೆ ಆಯ್ಕೆಯಾಗಿದ್ದಳು.
ಇದು ನೇಹಾಳ ಯಶೋಗಾಥೆ ಮಾತ್ರವಲ್ಲ. ಇಂತಹ ನೂರಾರು ಸಾವಿರಾರು ನೇಹಾಗಳು ಭವಿಷ್ಯದಲ್ಲಿ ಅದ್ಭುತವಾದ ಸಾಧನೆಗಳನ್ನು ಮಾಡಲು ಪ್ರೋತ್ಸಾಹಿಸಲ್ಪಟ್ಟರೆ ಮಹಿಳಾ ಸಬಲೀಕರಣಕ್ಕೆ ಹೊಸ ನಾಂದಿ ಹಾಡಬಹುದು… ಏನಂತೀರಾ ಸ್ನೇಹಿತರೆ?
ಹಿಂದಿನ ಸಂಚಿಕೆಗಳು :
- ಬದುಕಿಗೊಂದು ಸೆಲೆ (ಭಾಗ -೧)
- ಬದುಕಿಗೊಂದು ಸೆಲೆ (ಭಾಗ -೨)
- ಬದುಕಿಗೊಂದು ಸೆಲೆ (ಭಾಗ -೩)
- ಬದುಕಿಗೊಂದು ಸೆಲೆ ‘ಕೆಲ ವಿಷಯಗಳಿಗೆ ಕಿವುಡರಾಗಬೇಕು’ (ಭಾಗ – ೪)
- ಬದುಕಿಗೊಂದು ಸೆಲೆ ‘ಉದಾರತೆ ಎಂಬ ಮಾರುಕಟ್ಟೆ ತಂತ್ರ’ (ಭಾಗ- ೫)
- ಬದುಕಿಗೊಂದು ಸೆಲೆ ‘ಹೌದು! ನನಗೆ ವಯಸ್ಸಾಗುತ್ತಿದೆ’ (ಭಾಗ – ೬)
- ಬದುಕಿಗೊಂದು ಸೆಲೆ‘ಕಾಯುತ್ತಿದ್ದಾರೆ ನಿಮ್ಮವರು… ನಿಮಗಾಗಿ’ (ಭಾಗ -೭)
- ಬದುಕಿಗೊಂದು ಸೆಲೆ ‘ಹೆಣ್ಣು ಮಕ್ಕಳೇ ಎಚ್ಚರವಾಗಿ’ (ಭಾಗ – ೮)
- ಬದುಕಿಗೊಂದು ಸೆಲೆ ‘ ಮನೆಯ ಆಹಾರವೂ,ಕೌಟುಂಬಿಕ ಬಂಧವೂ’ (ಭಾಗ – ೯)
- ಬದುಕಿಗೊಂದು ಸೆಲೆ ‘ಶ್ರಾವಣ ಮಾಸ… ಶ್ರವಣ ಮಾಸ’ (ಭಾಗ – ೧೦)
- ಬದುಕಿಗೊಂದು ಸೆಲೆ ‘ಪ್ಯಾರಿಸ್ ಸುಗಂಧದ ಖ್ಯಾತಿಯ ಕೋಕೋ ಚಾನೆಲ್…. ಸತತ ಪ್ರಯತ್ನದ ಸಾಫಲ್ಯ’ (ಭಾಗ – ೧೧)
- ಬದುಕಿಗೊಂದು ಸೆಲೆ ವರಮಹಾಲಕ್ಷ್ಮಿ ಹಬ್ಬ (ಭಾಗ – ೧೨)
- ಬದುಕಿಗೊಂದು ಸೆಲೆ ‘ಸಿತಾರೆ ಜಮೀನ್ ಪರ್’ (ಭಾಗ – ೧೪)
- ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ ಗದಗ
