ಬದುಕಿಗೊಂದು ಸೆಲೆ (ಭಾಗ – ೧೮)

ನೋವು, ಸಂಕಟ, ದುಃಖ, ದುಮಾನಗಳು ಬದುಕಿನ ಭಾಗಗಳು. ನಮ್ಮ ಬದುಕಿನಲ್ಲಿ ಸದಾ ಬೆಳದಿಂಗಳೇ ಇರಲಿ ಎನ್ನಲು ಸಾಧ್ಯವೇ ಇಲ್ಲ ಹಾಗೆಯೇ ಬದುಕಿನಲ್ಲಿ ಬರುವ ಎಲ್ಲಾ ನೋವು ಸಂಕಟಗಳನ್ನು ನಾವು ಎದುರಿಸಬೇಕು. ಕಷ್ಟಗಳಾದರೂ ಅಷ್ಟೇ ಬಗ್ಗಿದರೆ ಬೆನ್ನು ಏರುವ ಎದ್ದು ನಿಂತರೆ ಅಡಗಿ ಕುಳಿತುಕೊಳ್ಳುವ ಗುಮ್ಮನಂತೆ. ವೀಣಾ ಹೇಮಂತ್ ಗೌಡ ಪಾಟೀಲ್ ಅವರು ‘ನಮ್ಮ ಬದುಕು ಮತ್ತು ಆಯ್ಕೆಗಳು’ ಕುರಿತು ಇಂದಿನ ಲೇಖನದಲ್ಲಿ ಬರೆದಿದ್ದಾರೆ, ತಪ್ಪದೆ ಮುಂದೆ ಓದಿ…

ಆಕೆ ಇಳಿ ವಯಸ್ಸಿನ ಲಕ್ಷಣವಾದ ಹೆಣ್ಣು ಮಗಳು. ಮುಂಜಾನೆ ತನ್ನ ದೈನಂದಿನ ಕರ್ಮಗಳನ್ನು ಪೂರೈಸಿ ಅಚ್ಚುಕಟ್ಟಾಗಿ ಸೀರೆಯಟ್ಟು ಓರಣವಾಗಿ ತಲೆ ಬಾಚಿ, ಹಿತವಾಗಿ ಅಲಂಕರಿಸಿಕೊಂಡು ತಯಾರಾದ ಆಕೆ ಎಂಟು ಗಂಟೆಗೆ ಹತ್ತಿರದಲ್ಲಿಯೇ ಇರುವ ವೃದ್ಧರ ಮನೆಯಾದ ವೃದ್ಧಾಶ್ರಮಕ್ಕೆ ತೆರಳಿದಳು. ಕಳೆದ ವರ್ಷವೇ ಆಕೆ ತನ್ನ ಪತಿಯನ್ನು ಕಳೆದುಕೊಂಡಿದ್ದಾಳೆ. ಬಹಳಷ್ಟು ಸಮಯ ತಾಳ್ಮೆಯಿಂದ ಕಾಯ್ದ ಆಕೆಗೆ ಅಲ್ಲಿಯ ಸಿಬ್ಬಂದಿ ಒಬ್ಬರು ಬಂದು ನಿಮ್ಮ ಕೋಣೆ ತಯಾರಾಗಿದೆ ಎಂದು ಹೇಳಿದಾಗ ಆಕೆ ಮೆದುವಾಗಿ ನಕ್ಕಳು. ಅಲ್ಲಿಯೇ ಇದ್ದ ಡೆಸ್ಕ್ ಮೇಲೆ ತನಗೆ ಕೊಟ್ಟ ಕಾಗದದಲ್ಲಿನ ಎಲ್ಲಾ ಮಾಹಿತಿಯನ್ನು ವಿವರವಾಗಿ ಓದಿಕೊಂಡ ಆಕೆ ತನ್ನ ಕೈಯಲ್ಲಿನ ಕೋಲನ್ನು ಊರಿಕೊಂಡು ನಿಧಾನವಾಗಿ ಆದರೆ ಅಷ್ಟೇ ದೃಢವಾಗಿ ನಡೆದು ಅಲ್ಲಿಯ ಸಹಾಯಕಿ ತೋರಿದ ತನ್ನ ಕೋಣೆಯತ್ತ ನಡೆದಳು.

ಇಲ್ಲಿಯವರೆಗೂ ವೃದ್ಧಾಶ್ರಮಕ್ಕೆ ಬರುವ ಹೆಣ್ಣು ಮಕ್ಕಳನ್ನು ವೃದ್ಧರನ್ನು ನೋಡುತ್ತಿದ್ದ ಆ ಸಹಾಯಕಿಗೆ ಈ ಹೆಣ್ಣುಮಗಳ ಚರ್ಯೆ ಹೊಸದು. ತನ್ನನ್ನು ಬಿಟ್ಟು ಹೋಗಲು ಬಂದವರೊಂದಿಗೆ ಗೋಳಾಡುವ, ತನ್ನನ್ನು ಮರಳಿ ಕರೆದೊಯ್ಯಲು ಆಗ್ರಹಿಸುವ, ಅವರನ್ನು ಶಪಿಸುವ ಇಲ್ಲವೇ ಮೌನವಾಗಿ ಜೋಲು ಮುಖ ಮಾಡಿಕೊಂಡು ಕಣ್ಣೀರುಗರೆಯುತ್ತಾ ಬರುವ ವೃದ್ಧರನ್ನು ಆಕೆ ನೋಡಿದ್ದಳು.

ಆದರೆ ಭರಪೂರ ಆತ್ಮವಿಶ್ವಾಸದಿಂದ ಕೈಯಲ್ಲಿ ಕೋಲು ಹಿಡಿದರೂ ದೃಢತೆಯಿಂದ ನಡೆಯುತ್ತಿದ್ದ ತನಗೆ ಕೊಟ್ಟ ಮಾಹಿತಿಯನ್ನು ಓದಿ ಅತ್ಯಂತ ಸಂತಸದಿಂದ ನನಗೆ ಖಂಡಿತವಾಗಿಯೂ ಆ ಕೋಣೆ ಇಷ್ಟವಾಗುತ್ತದೆ ಎಂದು ಹೇಳುತ್ತಾ ಪುಟ್ಟ ಹುಡುಗಿಯಷ್ಠೆ ಉತ್ಸಾಹದಿಂದ ಬರುತ್ತಿದ್ದ ವೃದ್ಧೆಯನ್ನು ಕಂಡು ಆಕೆಗೆ ಆಶ್ಚರ್ಯ. ಆಕೆಯ ಉತ್ಸಾಹಕ್ಕೆ ಭಂಗ ತರಬಾರದು ಎಂದು ತೋರಿದರೂ ಕೂಡ ಅಮ್ಮ ನೀವಿನ್ನೂ ನಿಮ್ಮ ಕೋಣೆಯನ್ನು ನೋಡಿಲ್ಲ, ಸ್ವಲ್ಪ ತಾಳಿ ಎಂದು ಆ ಸಹಾಯಕಿ ಹೇಳಿದಳು.

ಅದಕ್ಕೆ ಉತ್ತರವಾಗಿ ಹೆಣ್ಣುಮಗಳು ಆಕೆಯತ್ತ ತಿರುಗಿ ನಸುನಕ್ಕು.. ತೊಂದರೆ ಇಲ್ಲ! ಖಂಡಿತವಾಗಿಯೂ ಆ ಕೋಣೆ ನನಗೆ ಇಷ್ಟವಾಗುತ್ತದೆ. ಸಂತೋಷ ಎಂಬುದು ಸಮಯಕ್ಕೆ ತಕ್ಕಂತೆ ನಾವು ನಿರ್ಣಯಿಸಬೇಕಾದ ಒಂದು ಸ್ಥಿತಿ. ನನ್ನ ಕೋಣೆಯಲ್ಲಿರುವ ಮಂಚ, ಟೇಬಲ್, ಕುರ್ಚಿ ಮತ್ತು ಕಿಟಕಿಗೆ ಹಾಕಲ್ಪಟ್ಟಿರುವ ಪರದೆಗಳ ಮೇಲೆ ನನ್ನ ಸಂತೋಷ ಅವಲಂಬಿಸಿಲ್ಲ…. ನನ್ನ ಸಂತೋಷ ನನ್ನ ಮನಸ್ಥಿತಿಯನ್ನು ಅವಲಂಬಿಸಿದೆ ಎಂದು ಹೇಳಿದರು.

ಫೋಟೋ ಕೃಪೆ : google

ಮತ್ತೆ ಜೋರಾಗಿ ಉಸಿರೆಳೆದುಕೊಂಡು ಆಕೆ ಮುಂದುವರಿಸಿದರು ನನ್ನ ಕೋಣೆ ಚೆನ್ನಾಗಿರುತ್ತದೆ ಎಂದು ನಾನು ಈಗಾಗಲೇ ನಿರ್ಣಯಿಸಿದ್ದೇನೆ. ಪ್ರತಿದಿನ ಮುಂಜಾನೆ ಏಳುವಾಗ ನನಗೆ ಎರಡು ಆಯ್ಕೆಗಳಿರುತ್ತವೆ. ಇಡೀ ದಿನವನ್ನು ನಾನು ಇಲ್ಲದ ಕೊರತೆಗಳ ನೆವದಿಂದ ಬೇಸರಗೊಂಡು ಶಪಿಸುತ್ತಾ ಕಾಲ ಕಳೆಯುವುದು ಒಂದು ಆಯ್ಕೆಯಾದರೆ ಇದ್ದುದರಲ್ಲಿಯೇ ಸಂತೋಷವಾಗಿ ಇರುವುದು, ನೆಮ್ಮದಿಯನ್ನು ಪಡೆಯುವುದು ಮತ್ತು ಕೊಡುವುದು ಎರಡನೇ ಆಯ್ಕೆ. ನನಗೆ ಎರಡನೇ ಆಯ್ಕೆಯೇ ಇಷ್ಟ ಎಂದು ಹೇಳಿದಳು.

ಅರೆ! ನೀವು ಹೇಳುತ್ತಿರುವ ರೀತಿ ತುಂಬಾ ಆಪ್ತವಾಗಿದೆ. ನಿಮಗೇಕೆ ಈ ರೀತಿ ಅನ್ನಿಸುತ್ತದೆ ಎಂದು ಕೇಳಬಹುದೇ? ಎಂದು ಆ ಸಹಾಯಕಿ ಕೇಳಿದಳು.

ನನ್ನ ದೇಹದಲ್ಲಿ ಹಲವಷ್ಟು ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಆದರೆ ಮತ್ತೆ ಕೆಲವಷ್ಟು ಅಂಗಗಳು ತುಂಬಾ ಚೆನ್ನಾಗಿ ಕಾರ್ಯ ನಿರ್ವಹಿಸುತ್ತವೆ. ಇದೀಗ ವೃದ್ಯಾಪ್ಯದ ಅಂಚಿನಲ್ಲಿರುವ ನಾನು ನನಗೆ ದೊರೆಯುವ ಪ್ರತಿಯೊಂದು ದಿನವನ್ನು ಆ ದೇವರ ಕೊಡುಗೆ ಎಂದೇ ಭಾವಿಸುತ್ತೇನೆ. ಪ್ರತಿ ದಿನವನ್ನು ಸಂತೋಷವಾಗಿ ಕಳೆಯಬೇಕು ಎಂಬ ಆಶಯವನ್ನು ಹೊತ್ತು ನಾನು ಪ್ರತಿದಿನ ಏಳುತ್ತೇನೆ.

ಸಂತೋಷ ಎನ್ನುವುದು ಬ್ಯಾಂಕಿನಲ್ಲಿರುವ ನಮ್ಮ ಖಾತೆಯಂತೆ. ಅಲ್ಲಿ ನೀನು ಏನನ್ನು ಜಮಾ ಮಾಡುತ್ತಿಯೋ ಅದೇ ನಿನಗೆ ಮರಳಿ ದೊರೆಯುತ್ತದೆ ಅಲ್ವೇ.ನನ್ನ ಸಲಹೆ ಇಷ್ಟೇ ಪ್ರತಿದಿನ ನಿನ್ನ ಮನಸ್ಸಿನ ನೆನಪಿನ ಖಾತೆಯಲ್ಲಿ ಸಂತೋಷವನ್ನು ಜಮಾ ಮಾಡು… ನಿನಗೆ ಮತ್ತೆ ಸಂತೋಷವೇ ದೊರೆಯುತ್ತದೆ.

ಎಷ್ಟು ಸುಲಭವಾಗಿ ಸಂತೋಷದ ರಹಸ್ಯವನ್ನ ಹೇಳಿದ್ರಿ ಎಂದು ಅತ್ಯಂತ ಸಂತಸದಿಂದ ಹೇಳಿದ ಸಹಾಯಕಿಯ ಹೆಗಲನ್ನು ತಟ್ಟುತ್ತಾ ಆಕೆ ಮುಂದುವರೆಸಿದರು. ಬದುಕಿನಲ್ಲಿ ಈ ಐದು ಸರಳ ತತ್ವಗಳನ್ನು ನಾನು ಪಾಲಿಸಿಕೊಂಡು ಬಂದಿದ್ದು ಇಂದು ಅವುಗಳೇ ನನ್ನನ್ನು ಪಾಲಿಸುತ್ತಿವೆ.

ಬೇರೆಯವರ ಕುರಿತು ಅಸೂಯೆ, ಅಸಹನೆಗಳು ಇದ್ದರೆ ಅದನ್ನು ತೆಗೆದುಹಾಕಬೇಕು. ನಮ್ಮ ಮನಸ್ಸಿನಲ್ಲಿ ಇರುವ ಬೇರೆಯವರ ಕುರಿತಾದ ನಮ್ಮ ಅಸಹನೆ, ಬೇಸರ, ಮತ್ಸರಗಳು ಅವರನ್ನು ತಾಕುವ ಮುನ್ನವೇ ನಮ್ಮನ್ನು ಸುಡುತ್ತವೆ. ಅದರ ತಾಪಕ್ಕೆ ನಾವು ಬೆಂದು ಹೋಗುತ್ತೇವೆ.

ನೋವು, ಸಂಕಟ, ದುಃಖ, ದುಮಾನಗಳು ಬದುಕಿನ ಭಾಗಗಳು. ನಮ್ಮ ಬದುಕಿನಲ್ಲಿ ಸದಾ ಬೆಳದಿಂಗಳೇ ಇರಲಿ ಎನ್ನಲು ಸಾಧ್ಯವೇ ಇಲ್ಲ ಹಾಗೆಯೇ ಬದುಕಿನಲ್ಲಿ ಬರುವ ಎಲ್ಲಾ ನೋವು ಸಂಕಟಗಳನ್ನು ನಾವು ಎದುರಿಸಬೇಕು. ಕಷ್ಟಗಳಾದರೂ ಅಷ್ಟೇ ಬಗ್ಗಿದರೆ ಬೆನ್ನು ಏರುವ ಎದ್ದು ನಿಂತರೆ ಅಡಗಿ ಕುಳಿತುಕೊಳ್ಳುವ ಗುಮ್ಮನಂತೆ. ಅವುಗಳು ನಮ್ಮ ಮೇಲೆ ಸವಾರಿ ಮಾಡುವ ಮುನ್ನ ನಾವೇ ಅವುಗಳ ಮೇಲೆ ಸವಾರಿ ಮಾಡಬೇಕು.

ಸರಳತೆ ನಮ್ಮದಾಗಿರಬೇಕು. ಸರಳವಾದ ಜೀವನ ಶೈಲಿ ಅತ್ಯುತ್ತಮವಾದ ಆಯ್ಕೆ. ಸರಳವಾದ ಉಡುಗೆ ತೊಡುಗೆ, ಇರುವಿಕೆ, ಯಾವುದೇ ಪೂರ್ವಾಗ್ರಹವಿಲ್ಲದ ಸರಳವಾದ ಮಾತುಕತೆಗಳು ನಮ್ಮದಾಗಿರಬೇಕು.

ನಮ್ಮ ಕೈಲಾದಷ್ಟು ಸಹಾಯವನ್ನು ಮಾಡಬೇಕು. ದಾನ ಮಾಡಲು ಲಕ್ಷ ಲಕ್ಷ ಹಣ ಬೇಕೆಂದಿಲ್ಲ ಲಕ್ಷ ಲಕ್ಷ ಹಣ ಇದ್ದವರು ಮಾತ್ರ ಕೊಡುಗೈ ದಾನಿಗಳಲ್ಲ. ಇದ್ದವರು ಇಲ್ಲದವರಿಗೆ ಸಹಾಯ ಮಾಡುವುದು ಒಂದು ಒಳ್ಳೆಯ ಮನಸ್ಥಿತಿಯ ಲಕ್ಷಣ. ಅದೊಂದು ಸಾಮಾಜಿಕ ಜವಾಬ್ದಾರಿ. ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದೆ ನಮ್ಮ ಅನುಕೂಲಕ್ಕೆ ತಕ್ಕಂತೆ ಬೇರೆಯವರಿಗೆ ಸಹಾಯ ಮಾಡಬೇಕು.

ಫೋಟೋ ಕೃಪೆ : google

ನಮ್ಮ ಕೈಲಾದಷ್ಟು ಅಸಹಾಯಕರಿಗೆ, ವೃದ್ಧರಿಗೆ, ಅಂಗವಿಕಲರಿಗೆ, ಸಾಮಾಜಿಕವಾಗಿ ಅತ್ಯಂತ ಹೀನಾಯ ಸ್ಥಿತಿಯಲ್ಲಿರುವವರಿಗೆ ಸಹಾಯ ಮಾಡಬೇಕು. ಅದು ಅವರ ಕರ್ಮ ಎಂದು ಹಂಗಿಸುವುದಾಗಲಿ, ಹಣೆಬರಹ ಎಂದು ಬಿಟ್ಟು ಬಿಡುವುದಾಗಲಿ ಬೇಡ. ನಮ್ಮ ಕೈಲಾದಷ್ಟು ನಾವು ಸಹಾಯ ಮಾಡಬೇಕು ಎಂದು ಸುದೀರ್ಘವಾಗಿ ಹೇಳಿ ಆಕೆ ತೋರಿದ ತನ್ನ ಕೋಣೆಯ ಬಾಗಿಲನ್ನು ತೆರೆದು ಒಳಗೆ ಹೋಗಿ ಅಲ್ಲಿದ್ದ ಮಂಚದ ಮೇಲೆ ಕುಳಿತುಕೊಂಡರು. ಜಗತ್ತಿನ ಎಂಟನೇ ಅದ್ಭುತವನ್ನು ಕಣ್ಣರಳಿಸಿ ನೋಡುತ್ತಿರುವಂತೆ ತನ್ನನ್ನೇ ನೋಡುತ್ತಿರುವ ಸಹಾಯಕಿಯನ್ನು ಕುರಿತು ಆ ವೃದ್ಧ ಹೆಣ್ಣು ಮಗಳು ಪ್ರೀತಿಯಿಂದ ಇದನ್ನೇ ನನ್ನ ಬದುಕಿನ ತತ್ವ ಎಂದು ನಾನು ಭಾವಿಸಿ ನಡೆದುಕೊಂಡಿದ್ದೇನೆ.
ಇದೀಗ ನನ್ನ ಬದುಕಿನಲ್ಲಿ ನನಗೆ ಯಾರ ಕುರಿತೂ ಬೇಸರವಿಲ್ಲ, ನೋವಿಲ್ಲ ಅಸಹನೆ ಇಲ್ಲ… ಇರುವಷ್ಟು ದಿನ ನೆಮ್ಮದಿ ಹೊಂದಲು ನಾನಿಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.

ಅಲ್ಲಿಯವರೆಗೂ ಅವರ ಮಾತುಗಳನ್ನು ಗಮನವಿಟ್ಟು ಆಲಿಸುತ್ತಿದ್ದ ಸಹಾಯಕಿ ಅಮ್ಮ ನಾನು ನಿಮ್ಮ ಹಾಗೆಯೇ ಬದುಕನ್ನು ನಡೆಸುವಂತಾಗಲಿ ಎಂದು ಆಶೀರ್ವದಿಸಿ ಎಂದು ಹೇಳಿ ಅವರ ಕಾಲಿಗೆ ತನ್ನ ತಲೆಯನ್ನು ಇಟ್ಟು ನಮಿಸಿದಳು

ನೋಡಿದಿರಾ ಸ್ನೇಹಿತರೆ! ಬದುಕಿನ ಕೆಲ ವಿಷಯಗಳು ಅತ್ಯಂತ ಸರಳ ಮತ್ತು ಅಳವಡಿಸಿಕೊಳ್ಳಲು ಸುಲಭ ಸಾಧ್ಯವಾದಂತವು. ಅವುಗಳನ್ನು ಕಠಿಣಗೊಳಿಸಿಕೊಳ್ಳುವವರು ನಾವೇ. ನಮ್ಮ ಮನಸ್ಸಿನಲ್ಲಿ ಮೂಡುವ ವಿನಾಕಾರಣದ ಶಂಕೆ, ಅಸೂಯೆ, ಅಸಹನೆ, ಸಿಟ್ಟು, ಸೆಡವುಗಳಿಗೆ ಬಲಿಯಾಗಿ ನಾವೇ ನಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತೇವೆ ಮತ್ತು ನಂತರ ಅಯ್ಯೋ! ನನ್ನ ಬದುಕು ಹೀಗಾಯಿತು ಎಂದು ಗೋಳಾಡುತ್ತೇವೆ.

ಚಿಕ್ಕದೊಂದು ಸೂಜಿಯನ್ನು ಭೂತಗನ್ನಡಿಯಲ್ಲಿ ನೋಡಿದಾಗ ಬೃಹದಾಕಾರದ ಡಬ್ಬಣದಂತೆ ಕಾಣಿಸುತ್ತದೆ… ಅಂತೆಯೇ ನಮ್ಮ ಬದುಕಿನ ಸಮಸ್ಯೆಗಳನ್ನು ರಾವು( ಹೆಸರೇ ಹೇಳುವಂತೆ) ಗಾಜಿನಲ್ಲಿ ನೋಡುವ ಬದಲು ಅವುಗಳು ಇರುವಂತೆಯೇ ಎದುರಿಸಿದಾಗ ಸಮಸ್ಯೆ ತಂತಾನೆ ಪರಿಹಾರವಾಗುತ್ತದೆ.

ಬದುಕು ನಮ್ಮದು. ಬದುಕಿನಲ್ಲಿ ಆಯ್ಕೆಗಳು ಕೂಡ ನಮ್ಮದೇ. ಬದುಕಿನ ನಿರ್ಣಯಗಳನ್ನು ಜಾಣ್ಮೆಯಿಂದ ಆಯ್ದುಕೊಳ್ಳಿ.

ಹಿಂದಿನ ಸಂಚಿಕೆಗಳು :


  • ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ, ಗದಗ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW