ಬೆಕ್ಕು ಎಂಬ ವಿಸ್ಮಯ ಜೀವಿ !!

ಭಾರತದಲ್ಲಿ ಬೆಕ್ಕುಗಳ ಬಗ್ಗೆ ಅನೇಕ ಮೂಢ ನಂಬಿಕೆಗಳಿವೆ. ಪ್ರಪಂಚದ ವಿವಿಧ ದೇಶಗಳಲ್ಲಿ ಬೆಕ್ಕುಗಳ ಬಗ್ಗೆ ವಿವಿಧ ನಂಬುಕೆಗಳಿವೆ. ಅಮೇರಿಕಾದಂತ ದೇಶಗಳಲ್ಲಿ ಹಡಗಿನಲ್ಲಿ ಪ್ರಯಾಣ ಮಾಡುವಾಗ ಬೆಕ್ಕು ಜೊತೆಗಿದ್ದರೆ ಅದೃಷ್ಟ ತರುತ್ತದೆ ಎಂದೂ ಸಹ ನಂಬಲಾಗಿದೆ. ಬೆಕ್ಕಿನ ಕುರಿತು ರೋಚಕ ವಿಷಯವನ್ನು ಡಾ.ಎನ್.ಬಿ.ಶ್ರೀಧರ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಬೆಕ್ಕು ಮನುಷ್ಯನ ಅತ್ಯಂತ ಮುದ್ದಿನ ಪ್ರಾಣಿಗಳಲ್ಲಿ ಒಂದು. ದಿನವಿಡಿ ಮಿಯಾಂವ್, ಮಿಯಾಂವ್ ಎನ್ನುತ್ತಾ ಮನೆಯನ್ನೆಲ್ಲಾ ಸುತ್ತುತ್ತಾ ತನಗಿಷ್ಟ ಬಂದ ಖಾದ್ಯಗಳನ್ನು ಕದ್ದಾದರೂ ತಿನ್ನದೇ ಬಿಡದ ಜೀವಿ. ಮಾಲಕಿಯ ಕಾಲನ್ನು ಸುತ್ತುತ್ತಾ ತಿನ್ನಲು ಬೇಕಾದ್ದನ್ನು ಗಿಟ್ಟಿಸದೇ ಬೆಕ್ಕು ಬಿಡದು. ಆಗಾಗ ಬೇಸರವಾದಾಗ ತನ್ನ ಕುಲ ಕಸುಬಾದ ಇಲಿಯನ್ನೂ ಸಹ ಹಿಡಿದು ಹೊಟ್ಟೆ ತುಂಬಿಸಿಕೊಳ್ಳುತ್ತದೆ.

ಬೆಕ್ಕು ಮತ್ತು ಮನುಷ್ಯನದ್ದು ಅವಿನಾಭಾವ ಮತ್ತು ಅತ್ಯಂತ ಹಳೆಯ ಸಂಬಂಧ. ಇದಕ್ಕೆ ಲಕ್ಷಾಂತರ ವರ್ಷಗಳ ಇತಿಹಾಸವಿದೆ. ಇದು ಒಂದು ಸಣ್ಣ ಗಾತ್ರದ ಮಾಂಸಾಹಾರಿ ಸಸ್ತನಿಯಾಗಿದ್ದು, ಮನುಷ್ಯರ ಜೊತೆಗಿನ ಅದರ ಒಡನಾಟಕ್ಕಾಗಿ, ಇಲಿ ಹಿಡಿಯಲು, ಕ್ರಿಮಿಕೀಟಗಳ ನಾಶಕ ಸಾಮರ್ಥ್ಯವಾಗಿ ಮನುಷ್ಯರಿಂದ ಸಾಕಲ್ಪಟ್ಟಿದೆ. ಬೆಕ್ಕು ಸುಮಾರು 9,500 ವರ್ಷಗಳಿಂದ ಮಾನವರೊಂದಿಗೆ ಸಂಬ0ಧ ಹೊಂದಿದೆ ಮತ್ತು ಪ್ರಸ್ತುತ ವಿಶ್ವದ ಅತ್ಯಂತ ಜನಪ್ರಿಯ ಸಾಕು ಪ್ರಾಣಿಯಾಗಿದೆ. ಸಧ್ಯ ಪ್ರಪಂಚದಲ್ಲಿ 600 ಮಿಲಿಯನ್ ಬೆಕ್ಕುಗಳಿವೆ.
ಬೆಕ್ಕು ಅತ್ಯಂತ ಚಾಣಾಕ್ಷ ಮತ್ತು ಅತ್ಯಂತ ನುರಿತ ಬೇಟೆಗಾರ ಪ್ರಾಣಿ. ಬೆಕ್ಕು ತನ್ನ ಆಹಾರಕ್ಕಾಗಿ 1,000 ಜಾತಿಗಳಿಗಿಂತ ಹೆಚ್ಚು ಜಾತಿಯ ಪ್ರಾಣಿ ಮತ್ತು ಕೀಟಗಳನ್ನು ಬೇಟೆಯಾಡುತ್ತದೆ.

ಸರಳ ಆಜ್ಞೆಗಳನ್ನು ಪಾಲಿಸಲು ಇದಕ್ಕೆ ಸುಲಭವಾಗಿ ತರಬೇತಿ ನೀಡಬಹುದು. ಬೆಕ್ಕುಗಳು ಬಾಗಿಲಿನ ಹಿಡಿಕೆಗಳು ಮತ್ತು ಶೌಚಾಲಯದ ಹಿಡಿಕೆಗಳನ್ನು ಹಿಡಿದು ತೆಗೆಯುವಂತ ಸರಳ ಕಾರ್ಯವಿಧಾನಗಳನ್ನು ಕುಶಲತೆಯಿಂದ ನಿರ್ವಹಿಸುತ್ತವೆ. ಬೆಕ್ಕುಗಳು ಸಂವಹನಕ್ಕಾಗಿ ವಿವಿಧ ರೀತಿಯ ಧ್ವನಿಗಳನ್ನು ಮತ್ತು ದೇಹ ಭಾಷೆಯನ್ನು ಬಳಸುತ್ತವೆ. ಉದಾಹರಣೆಗೆ ಮಿಯಾಂವ್ ಅನ್ನುವುದು, ಹಿಸ್ ಗುಟ್ಟುವುದು, ಗೊಣಗುವುದು, ಕೀರಲು ಧ್ವನಿಯಲ್ಲಿ ಹೇಳುವುದು ಇತ್ಯಾದಿ ವಿಧಗಳಿಂದ ಸಂಪರ್ಕ ಸಾಧಿಸುತ್ತವೆ. ಈ ಹವ್ಯಾಸವನ್ನು “ಕ್ಯಾಟ್ ಫ್ಯಾನ್ಸಿ” ಎಂದು ಕರೆಯಲಾಗುತ್ತದೆ.

ಇತ್ತೀಚಿನವರೆಗೂ ಬೆಕ್ಕು ಪ್ರಾಚೀನ ಈಜಿಪ್ಟ್ನಲ್ಲಿ ಪಳಗಿಸಲ್ಪಟ್ಟಿದೆ ಎಂದು ಸಾಮಾನ್ಯವಾಗಿ ನಂಬಲಾಗಿತ್ತು. ಈಜಿಪ್ಟ್ನಲ್ಲಿ ಅದು ಆರಾಧನಾ ಪ್ರಾಣಿಯಾಗಿತ್ತು. ಆದಾಗ್ಯೂ, 2004 ರಲ್ಲಿ ಬೆಕ್ಕಿನ ಸಾಕಣೆಯ ಆರಂಭಿಕ ಸ್ಥಳವು ಪ್ರಾಚೀನ ಸೈಪ್ರಸ್ ಎಂದು ಕಂಡುಹಿಡಿಯಲಾಯಿತು ಮತ್ತು 2007 ರಲ್ಲಿ ನಂತರದ ಅಧ್ಯಯನವು ಎಲ್ಲಾ ಮನೆ ಬೆಕ್ಕುಗಳ ಮೂಲವು ಆಫ್ರಿಕಾ ದೇಶದ ಕಾಡುಬೆಕ್ಕಿನದು ಎಂದು ಪತ್ತೆಯಾಯಿತು.

ಬೆಕ್ಕುಗಳ ಕುರಿತಾದ ನಂಬುಗೆಗಳು

ಬೆಕ್ಕುಗಳ ಬಗ್ಗೆ ಇರುವ ಅಪನಂಬಿಕೆ ಇನ್ನಾವುದೇ ಪ್ರಾಣಿಗಳಿಗೆ ಇರಲಿಕ್ಕಿಲ್ಲ. ಈ ರೀತಿಯ ಅಪದ್ಧ ಪ್ರಾಣಿಗಳಲ್ಲಿ ನರಿ, ಗೂಬೆ, ಕಾಗೆ, ಹಾವು, ಕರಡಿ ಮತ್ತು ಎಮ್ಮೆ ಇತ್ಯಾದಿ ಅನೇಕ ಪ್ರಾಣಿ ಪಕ್ಷಿಗಳು ಸೇರಿಕೊಳ್ಳುತ್ತವೆ. ಪಾಪ ! ಮನುಷ್ಯರು ಅವುಗಳ ಮೇಲೆ ಹೀಗೆಲ್ಲಾ ಚಿತ್ರ ವಿಚಿತ್ರ ನಂಬಿಕೆ ಇಟ್ಟುಕೊಂಡಿದ್ದಾರೆ0ಬುದೇ ಅವುಗಳಿಗೆ ತಿಳಿದಿಲ್ಲ. ಇವುಗಳ ಕುರಿತು ಅಪನಂಬಿಕೆಗಳು ಮತ್ತು ಮೂಢ ನಂಬಿಕೆಗಳು ಪ್ರಪಂಚದಾದ್ಯ0ತ ಇವೆ. ಇದರಲ್ಲಿ ಯಾರೂ ಹಿಂದೆ ಬಿದ್ದಿಲ್ಲ. ಪ್ರತಿಯೊಂದು ದೇಶದಲ್ಲಿಯೂ ಸಹ ಅವುಗಳ ಮೇಲೆ ವಿವಿಧ ರೀತಿಯ ನಂಬುಗೆಗಳಿವೆ. ಕೆಲವೊಂದು ದೇಶಗಳಲ್ಲಿ ಬೆಕ್ಕು ಹಿರೋ ಆಗಿ ದೇವರ ಮತ್ತು ಅದೃಷ್ಟದ ಪ್ರತೀಕವಾಗಿ ಹೊರಹೊಮ್ಮಿದರೆ ಕೆಲವೊಂದು ದೇಶಗಳಲ್ಲಿ ಇವುಗಳನ್ನು ಅತ್ಯಂತ ಕೆಟ್ಟದಾಗಿ ದ್ವೇಷಿಸುವ ಜನರಿದ್ದಾರೆ.

ಭಾರತದಲ್ಲಿಯಂತೂ ಬೆಕ್ಕುಗಳ ಬಗ್ಗೆ ಅನೇಕ ಮೂಢ ನಂಬಿಕೆಗಳಿವೆ. ವಿದೇಶಗಳಲ್ಲಿ ಇರುವಂತೆ ಅವುಗಳಲ್ಲಿ ಪರಿಪರಿಯ ಅಪನಂಬಿಕೆಗಳಿವೆ.

• ಮನೆಯಿಂದ ಹೊರಗೆ ಹೊರಟಾಗ ಬೆಕ್ಕು ಅಡ್ಡ ಬಂದರೆ ಯಾವುದೇ ಕೆಲಸವಾಗುವುದಿಲ್ಲ ಮತ್ತು ಅಪಘಾತವಾದರೂ ಸಹ ಆಗಬಹುದು.

• ಬೆಕ್ಕು ಅದರ ಕೈಯಿಂದ ಮುಖ ತೊಳೆದುಕೊಳ್ಳುವ ಪ್ರಕ್ರಿಯೆ ನಡೆಸಿದರೆ ಆ ದಿಕ್ಕಿನಿಂದ ನೆಂಟರುಗಳು ಬಂದು ಅನೇಕ ದಿನಗಳ ಕಾಲ ತಳವೂರುತ್ತಾರೆ.

• ಅಪರ ಕರ್ಮದ ಕ್ರಿಯೆ ನಡೆಯುವಾಗ ಬೆಕ್ಕು ಬರಲೇ ಬಾರದು. ಕಾರಣ ಬೆಕ್ಕನ್ನು ಬುಟ್ಟಿಯಿಂದ ಮುಚ್ಚಿ ಬಂಧಿಸುತ್ತಾರೆ.

• ಬೆಕ್ಕು ಜೋರಾಗಿ ಕಿರುಚುತ್ತಿದ್ದರೆ ಕುಟುಂಬದ ಯಾರಲ್ಲೋ ಸಾವು ಖಚಿತ.

ಹಿಂದಿನ ಕಾಲದಲ್ಲಿ ಹೇಗಿತ್ತು?

ಬೆಕ್ಕು ಅಪಶಕುನದ ಸಂಕೇತ ಎಂದು ಹೇಗೆ ಇಂದಿಗೂ ಸಹ ಭಾವಿಸಲಾಗುತ್ತದೆಯೋ ಹಾಗೆಯೇ 1607 ರ ಹಿಂದಿನ ಜಾನಪದ ಕಥೆಗಳು ಹೇಳುವಂತೆ ಬೆಕ್ಕು ತನ್ನ ಮೂಗನ್ನು ನವಜಾತ ಮಗುವಿನ ಬಾಯಿಗೆ ಹಾಕುವ ಅದರ ಉಸಿರು ಹೀರಿ ಸಾಯಿಸುತ್ತದೆ ಎಂದು ನಂಬಲಾಗಿತ್ತು. ಇದರಿಂದ ಕೆಲವರು ಮನೆಯಲ್ಲಿನ ಬೆಕ್ಕುಗಳನ್ನು ಹೊರಗಟ್ಟಿದರು. ಇಂದಿಗೂ ಸಹ ಕಪ್ಪು ಅವಲಕ್ಷಣ, ಬೆಕ್ಕು ಅಡ್ಡ ಬಂದರೆ ತೊಂದರೆ ತಪ್ಪಿದ್ದಲ್ಲ, ಬೆಕ್ಕಿಗೆ 9 ಜನ್ಮಗಳಿವೆ ಎಂಬ ಅನೇಕ ತಪ್ಪು ನಂಬಿಕೆಗಳಿವೆ.

ಬೆಕ್ಕುಗಳ ಬಗ್ಗೆ ಒಳ್ಳೆಯ ನಂಬಿಕೆ

ಜಪಾನಿನಲ್ಲಿ ಬೆಕ್ಕನ್ನು “ಅದೃಷ್ಟದ ಸಂಕೇತ” ಮತ್ತು ” ಶುಭ ಸೂಚಕ” ಎಂದು ಭಾವಿಸಲಾಗುತ್ತದೆ. ಇಲ್ಲಿ ಬೆಕ್ಕಿನ ಅನೇಕ ಮೂರ್ತಿಗಳಿವೆ. ಬಹುತೇಕ ಮೂರ್ತಿಗಳು ಪಂಜಾವನ್ನು ಹಿಡಿದೆತ್ತಿ ಆಕ್ರಮಣಕ್ಕೆ ಸಿದ್ದವಾದ ಭಂಗಿಯಲ್ಲಿವೆ. ಇದಕ್ಕೆ ಒಂದು ದಂತಕಥೆಯಿದೆ. ಒಮ್ಮೆ ಜಪಾನಿನ ಜಮೀನುದಾರನೊಬ್ಬ ಹೊಲಕ್ಕೆ ತನ್ನ ಬೆಕ್ಕಿನೊಡನೆ ಹೋಗಿದ್ದ. ಇದ್ದಕ್ಕಿದ್ದ ಹಾಗೆ ಬೆಕ್ಕು ಅದರ ಪಂಜಾ ಮತ್ತು ಖಡ್ಗವನ್ನು ಆತನೆಡೆಗೆ ಬೀಸಿತು. ಆತ ಅದರಿಂದ ತಪ್ಪಿಸಿಕೊಳ್ಳಲು ಪಕ್ಕಕ್ಕೆ ಸರಿದು ಬಿಟ್ಟ. ಆ ಕ್ಷಣದಲ್ಲಿಯೇ ಅತ್ಯಂತ ಭೀಕರವಾದ ಸಿಡಿಲು ಆತ ಹಿಂದೆ ನಿಂತಿದ್ದ ಜಾಗಕ್ಕೆ ಬಡಿದು ಅದು ಸುಟ್ಟು ಕರಕಲಾಯಿತು. ಬೆಕ್ಕು ತನ್ನ ಜೀವವುಳಿಸಿದೆ ಎಂದು ಆತ ನಂಬಿ ಅದನ್ನು ಎಲ್ಲಾ ಪ್ರಚಾರ ಮಾಡಿದ. ಅಲ್ಲದೇ ಆತನ ಸಂಪತ್ತು ಜಾಸ್ತಿಯಾದ್ದರಿಂದ ಬೆಕ್ಕನ್ನು ಆತ “ಅದೃಷ್ಟ ದೇವತೆ” ಯ ಸಂಕೇತ ಎಂದು ಕರೆದ. ಕಾರಣ ಜಪಾನಿನಲ್ಲಿ ವ್ಯಾಪಾರಿಗಳ ಪ್ರದೇಶದಲ್ಲಿ ಬೆಕ್ಕು “ಕೈಬೀಸಿ” ಕರೆಯುವ ಚಿತ್ರಗಳಿದ್ದು ಗ್ರಾಹಕರನ್ನು ಆಕರ್ಷಿಸುವ ಕಲೆಯಾಗಿದೆ.
ನೆಕೊಮಾಟಾ ಪ್ರದೇಶದಲ್ಲಿ ಅಲ್ಲಿನ ಜನರು ಬೆಕ್ಕಿಗೆ 13 ಜನ್ಮಗಳಿದ್ದು ಆ ಜನ್ಮದಲ್ಲಿ ಅದು ಮತ್ತೊಂದು ಬಾಲವನ್ನು ಬೆಳೆಸಿಕೊಂಡು ಮನುಷ್ಯರಂತೆ ಮಾತನಾಡುತ್ತದೆ ಎಂದು ನಂಬಿದ್ದಾರೆ. ಅಲ್ಲದೇ ಬೆಕ್ಕಿಗೆ ದೈತ್ಯಾಕಾರ ರೂಪವನ್ನು ಹೊಂದುವ ಸಾಮರ್ಥ್ಯವಿದ್ದು (ಬಕೆನೆಕೊ) ಇದು ದುರದೃಷ್ಟವನ್ನು ತರಬಹುದು ಎಂದು ನಂಬಲಾಗಿದ್ದು ಇಂದಿಗೂ ಸಹ ಅದು ಅಲ್ಲಿ ಪ್ರಸ್ತುತವಾಗಿದೆ.

ರಷ್ಯಾದಲ್ಲಿ ಬೆಕ್ಕನ್ನು ಹೊಸ ಮನೆಗೆ ಬಿಡುವುದು ಅದೃಷ್ಟವನ್ನು ತರುತ್ತದೆ ಮತ್ತು ಮನೆಯವರು ಸುರಕ್ಷಿತವಾಗಿರುವುದನ್ನು ಖಚಿತಪಡಿಸುತ್ತದೆ ಎಂದು ಭಾವಿಸಲಾಗಿದೆ. ಬೆಕ್ಕು ಸೀನಿದರೆ ಅತ್ಯಂತ ಸಂತಸ ತರುವ ಅತಿಥಿಗಳು ಮನೆಗೆ ಬರುತ್ತಾರೆ ಎಂದು ನಂಬಲಾಗಿದೆ.

ಅಮೇರಿಕಾದಂತ ದೇಶಗಳಲ್ಲಿ ಹಡಗಿನಲ್ಲಿ ಪ್ರಯಾಣ ಮಾಡುವಾಗ ಬೆಕ್ಕು ಜೊತೆಗಿದ್ದರೆ ಅದೃಷ್ಟ ತರುತ್ತದೆ ಎಂದೂ ಸಹ ನಂಬಲಾಗಿದೆ. ಬ್ರಿಟನ್‌ನ ಭಾಗಗಳಲ್ಲಿ ಕಪ್ಪು ಬೆಕ್ಕುಗಳನ್ನು ಅದೃಷ್ಟವೆಂದು ಪರಿಗಣಿಸಲಾಗುತ್ತದೆ, ವಿಶೇಷವಾಗಿ ಇಂಗ್ಲಿಷ್ ಜಾನಪದದಲ್ಲಿ, ಬೆಕ್ಕನ್ನು ಉಡುಗೊರೆಯಾಗಿ ನೀಡಿದರೆ ನವವಿವಾಹಿತರಿಗೆ ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.

ಸ್ಕಾಟ್ಲೆ0ಡ್ ದೇಶದಲ್ಲಿ ಮನೆಗೆ ವಿಚಿತ್ರವಾದ ಕಪ್ಪು ಬೆಕ್ಕು ಆಗಮಿಸುವುದನ್ನು ಸಮೃದ್ಧಿ ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಟರ್ಕಿಯಲ್ಲಿ ಬೆಕ್ಕುಗಳು ಅವು ಮರಣಿಸಿದ ನಂತರವೂ ಹೊಸ ಜೀವನ ಪಡೆಯುತ್ತಿದ್ದು ದುಷ್ಟ ಶಕ್ತಿಗಳಿಂದ ಕಾಪಾಡಲು ಸಹಾಯ ಮಾಡುತ್ತವೆ ಮತ್ತು ಹೊರಗಿನ ಪ್ರಪಂಚದ ದುಷ್ಟಶಕ್ತಿಗಳನ್ನು ಒದ್ದೋಡಿಸುತ್ತವೆ ಎಂದು ನಂಬಿಕೆ ಇದೆ.

ಫೋಟೋ ಕೃಪೆ : google

ಬೆಕ್ಕಿನ ಬಗ್ಗೆ ನಂಬುಗೆಗಳು ಮತ್ತು ಮೌಢ್ಯಗಳು

ಪ್ರಪಂಚದ ವಿವಿಧ ದೇಶಗಳಲ್ಲಿ ಬೆಕ್ಕುಗಳ ಬಗ್ಗೆ ವಿವಿಧ ನಂಬುಗೆಗಳಿವೆ. ಆಗಾಗ್ಗೆ ಒಳ್ಳೆಯ ಮತ್ತು ಕೆಟ್ಟ ಶಕುನಗಳೊಂದಿಗೆ ಸಂಬ0ಧಿಸಿವೆ. ವಿವಿಧ ದೇಶಗಳಲ್ಲಿ ಬೆಕ್ಕಿಗೆ ಸಂಬ0ಧಿಸಿದ ಮೂಢನಂಬಿಕೆಗಳ ಅವಲೋಕನ ಇಲ್ಲಿದೆ:

  • ಅಮೇರಿಕಾದಂತ ಪಾಶ್ಚಿಮಾತ್ಯ ದೇಶಗಳಲ್ಲಿ ಜಾನಪದದಲ್ಲಿ, ಕಪ್ಪು ಬೆಕ್ಕುಗಳನ್ನು ದುರದೃಷ್ಟದ ಸಂಕೇತವೆ0ದು ಪರಿಗಣಿಸಲಾಗುತ್ತದೆ. ಅವು ಮನುಷ್ಯರ ಎದುರು ಬಂದರೆ ಅವರಿಗೆ ಅಪಾಯ ಕಾದಿದೆ ಎಂಬ ನಂಬಿಕೆ ಸಹಾ ಇದೆ.
  • ಇಟಲಿಯಲ್ಲಿ ಬೆಕ್ಕು ಅದರಲ್ಲಿಯೂ ಕಪ್ಪು ಬೆಕ್ಕು ಅನಾರೋಗ್ಯದ ವ್ಯಕ್ತಿಯ ಹಾಸಿಗೆಯ ಮೇಲೆ ಹಾರಿದರೆ, ಆ ವ್ಯಕ್ತಿಯು ಶೀಘ್ರದಲ್ಲೇ ಸಾಯುತ್ತಾನೆ ಎಂದು ಮೂಢನಂಬಿಕೆ ಇದೆ.
    ಐರ್ಲೆಂಡ್ ದೇಶದಲ್ಲಿ ಕಪ್ಪು ಬೆಕ್ಕುಗಳು ಸಮೃದ್ಧಿಯನ್ನು ತರುತ್ತವೆ ಎಂದು ನಂಬುತ್ತಾರೆ: ಐರ್ಲೆಂಡ್‌ನ ಕೆಲವು ಭಾಗಗಳಲ್ಲಿ, ಕಪ್ಪು ಬೆಕ್ಕುಗಳನ್ನು ಅದೃಷ್ಟಶಾಲಿಯಾಗಿ ನೋಡಲಾಗುತ್ತದೆ. ಆದರೆ ಚಂದ್ರನ ಬೆಳಕಿನಲ್ಲಿ ಕಪ್ಪು ಬೆಕ್ಕು ದಾಟುವುದನ್ನು ಕಂಡರೆ ಅದೊಂದು ದೊಡ್ಡ ಕೆಟ್ಟ ಶಕುನವಾಗಿ ಪರಿಗಣಿಸುತ್ತಾರೆ.
  • ಜರ್ಮನಿಯ ಕಪ್ಪು ಬೆಕ್ಕು ಯಾವ ದಿಕ್ಕಿನಲ್ಲಿ ಮನುಷ್ಯ ಕ್ರಮಿಸುವ ಹಾದಿಯನ್ನು ದಾಟುತ್ತದೆ ಎಂಬುದರ ಮೇಲೆ ಅದೃಷ್ಟವನ್ನು ನಿರ್ಧರಿಸಲ್ಪಡುತ್ತದೆ. ಅದು ಎಡದಿಂದ ಬಲಕ್ಕೆ ದಾಟಿದರೆ ಅದು ಅದೃಷ್ಟವೆಂದು ಪರಿಗಣಿಸಲಾಗುತ್ತದೆ ಆದರೆ ಅದು ಬಲದಿಂದ ಎಡಕ್ಕೆ ದಾಟಿದರೆ ಅದನ್ನು ದುರದೃಷ್ಟವೆಂದು ಪರಿಗಣಿಸಲಾಗುತ್ತದೆ.
  • ಫ್ರಾನ್ಸ್ನಲ್ಲಿ ಬೆಕ್ಕನ್ನು ಮಾಟಗೊಟ್ ಎಂದು ಕರೆಯಲಾಗುತ್ತಿದ್ದು ಇದು ಮಂತ್ರಿಕ ಆತ್ಮವಾಗಿದ್ದು ಅದು ಅಗಾಗ್ಗೆ ಬೆಕ್ಕಿನ ರೂಪದಲ್ಲಿ ಮನುಷ್ಯರ ಮಧ್ಯ ಬರುತ್ತದೆ ಮತ್ತು ಅದಕ್ಕೆ ಪ್ರಿಯವಾದ ಆಹಾರವನ್ನು ನೀಡಿದರೆ ಅದು ಸಂಪತ್ತನ್ನು ತರುತ್ತದೆ ಎಂದು ನಂಬಲಾಗಿದೆ.
  • ಐಸ್ಲ್ಯಾ0ಡ್ ದೇಶದಲ್ಲಿ ಬೆಕ್ಕನ್ನು “ಯೂಲ್ ಕ್ಯಾಟ್” ಎಂದು ಕರೆಯಲಾಗುತ್ತಿದ್ದು ಇಲ್ಲಿನ ಜಾನಪದದಲ್ಲಿ ಇದು ಕ್ರಿಸ್ಮಸ್ ಕಾಲದಲ್ಲಿ ದೈತ್ಯಾಕಾರ ರೂಪವನ್ನು ತಳೆದು ಹಬ್ಬದಲ್ಲಿ ಹೊಸ ಬಟ್ಟೆಗಳನ್ನು ಉಡುಗೊರೆಯಾಗಿ ಪಡೆಯದ ಜನರನ್ನು ಕಬಳಿಸುತ್ತದೆ ಎಂದು ನಂಬಲಾಗಿದೆ. ಒಟ್ಟಿನಲ್ಲಿ ಬೆಕ್ಕು ಪ್ರಪಂಚದ ವಿಸ್ಮಯಕಾರಿ ಜೀವಿಯಾಗಿದ್ದು ಮಾನವನ ಸಂಗಾತಿಯಾಗಿರುವುದ0ತೂ ನಿಜ.

  • ಡಾ.ಎನ್.ಬಿ.ಶ್ರೀಧರ – ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading