ಆತ ಜೂಲಿಯಸ್ ರಾಬರ್ಟ್ ಒಪ್ಪೆನ್ಹೈಮರ್. (ಅಪ್ಪೆನ್ಹೈಮೆರ್, ಒಪನ್ಹೀಮರ್) ಅಸಾಧಾರಣ ಪ್ರತಿಭಾವಂತ. ಅಮೆರಿಕ ಅಣು ಬಾಂಬ್ ತಯಾರಿಸಲು ಆರಂಭಿಸಿದ ’ಮ್ಯಾನ್ ಹಟನ್’ ಯೋಜನೆಯ ಮುಖ್ಯಸ್ಥ. ಬಾಂಬ್ ನಿಂದ ಮನುಕುಲ ಅಳಿಯುವುದು ಆತನಿಗೆ ತಿಳಿಯದ ವಿಚಾರವೇನಲ್ಲ. ಆದರೆ ದೇಶ ವಹಿಸಿದ ಗುರುತರ ಹೊಣೆ. ದೇಶ/ಹೊಣೆಗಾರಿಕೆ/ಮಾನವೀಯತೆ ಗಳಿಗೆ ಮುಖಾಮುಖಿಯಾಗಿ ಕಲ್ಲಿನಂತೆ ನಿಂತು ತನ್ನ ಕರ್ತವ್ಯಕ್ಷಮತೆ ಮೆರೆದಿದ್ದಾನೆ. ಒಪ್ಪೆನ್ಹೈಮರ್ ಅವರ ಕುರಿತು ರಾಘವನ್ ಚಕ್ರವರ್ತಿ ಅವರು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…
“Mr.President…Now I feel I have blood in my hands”
ಆ ಯೋಜನೆ ಸಾಕಾರಗೊಳ್ಳುತ್ತಿದ್ದ ನ್ಯೂ ಮೆಕ್ಸಿಕೋದ ‘ಲಾಲ್ ಅಲ್ಮಾಸ್’ ಪ್ರಯೋಗ ಶಾಲೆಯೇ ಆತನ ಕರ್ಮಭೂಮಿ. ಬಾಂಬ್ ತಯಾರಾಯಿತು. ಅದರ ವೀರೋಚಿತ ಪರೀಕ್ಷೆಯೂ ಆಯಿತು. ತನ್ನ ಮಾತು ಕೇಳದ, ತನ್ನ ದಾರಿಗೆ ಬರದ ಜಪಾನಿನ ಹಿರೋಶಿಮಾದ ಮೇಲೆ ಒಂದೆರೆಡು ದಿನಗಳಲ್ಲೇ ಬಾಂಬ್ ಸ್ಪೋಟಿಸಿದ್ದೂ ಆಯಿತು. ನಾಗಸಾಕಿ ನಗರದ ಮೇಲೆಯೂ ಬಾಂಬ್ ಪ್ರಯೋಗವಾಗಿದೆ. ಈಗ ಆತನ ಮಾನವೀಯ ಪ್ರಜ್ಞೆ ಹೆಚ್ಚು ಜಾಗೃತ ಗೊಳ್ಳಲಾರಂಭಿಸಿದೆ.
ಬಾಂಬ್ ಪ್ರಯೋಗದ ಯಶಸ್ಸಿಗೆ ಉತ್ಕಟ ಆನಂದದಿಂದ ಸ್ಪಂದಿಸುತ್ತ ತನ್ನ ಸುತ್ತೂ ನೆರೆದಿದ್ದ ತನ್ನದೇ ಪ್ರಜೆಗಳು, ಸೈನಿಕರಲ್ಲಿ ಅಣುಬಾಂಬ್ ಸ್ಪೋಟಕ್ಕೆ ಬಲಿಯಾದ ಮನುಷ್ಯ ಜೀವಗಳನ್ನು ಕಲ್ಪಿಸಿಕೊಳ್ಳುತ್ತಾನೆ. ತಾನೀಗ ‘ವಿಶ್ವಾತ್ಮ’ ಎಂಬ ಭ್ರಮೆಯಲ್ಲಿ ತೇಲುತ್ತಿದ್ದ ಅಮೆರಿಕಾದ ಅಂದಿನ ಅಧ್ಯಕ್ಷ ಹ್ಯಾರಿ ಟ್ರುಮನ್ ಖುದ್ದು ಅಭಿನಂದಿಸಲು ಶ್ವೇತ ಭವನ (ವೈಟ್ ಹೌಸ್) ಕ್ಕೆ ಆತನನ್ನು ಆಹ್ವಾನಿಸಿದ್ದಾನೆ. ಆತನಿಗೆ ಈಗಾಗಲೇ ಆದ ಜೀವಹಾನಿ ಮನಸ್ಸನ್ನು ಕಲಕಲಾರಂಭಿಸಿದೆ. ಅಭಿನಂದಿಸಿದ ಅಧ್ಯಕ್ಷನಿಗೆ, ತೀವ್ರ ವೇದನೆಯಿಂದ ಮೆಲ್ಲನೆಯ ಧ್ವನಿಯಲ್ಲಿ ಪ್ರತಿಕ್ರಿಯಿಸುತ್ತಾನೆ:
“Mr.President…Now I feel I have blood in my hands”
ಮಾರ್ಮಿಕವಾದ ಮಾತುಗಳ ಹಿಂದೆ ಇದ್ದ ನೋವು, ಸಂಕಟಗಳನ್ನು ಗ್ರಹಿಸದ ಟ್ರುಮನ್, ತನ್ನ ಕೋಟಿನ ಜೇಬಿನಿಂದ ಕರವಸ್ತ್ರ ತೆಗೆದು ’ಒರೆಸಿಕೋ’ ಎಂಬಂತೆ ನೀಡುತ್ತಾನೆ. ಆತ ನಿರಾಕರಿಸುತ್ತಾನೆ. ಈ ಅವಿಧೇಯತೆಯಿಂದ ಕನಲಿದ ಟ್ರುಮನ್, ತನ್ನ ಕಾರ್ಯದರ್ಶಿಗೆ “Never bring this crying baby again to me..” ಎಂದು ಆದೇಶಿಸುತ್ತಾನೆ. ಮೂಲಕೃತಿಯಲ್ಲಿ ಟ್ರುಮನ್, “son of a bitch” ಎಂದು ಶಪಿಸಿದನೆಂದು ದಾಖಲಾಗಿದೆ.

ತನ್ನೆಲ್ಲಾ ತನು-ಮನ-ಪ್ರತಿಭೆ-ಪರಿಶ್ರಮಗಳನ್ನು ಧಾರೆಯೆರೆದು ಯಶಸ್ಸಿನ ತುದಿ ತಲುಪಿಸಿದ ‘ಮ್ಯಾನ್ ಹಟನ್ ’ ಯೋಜನೆಯ ರೂವಾರಿ ಒಪ್ಪೆನ್ಹೈಮರ್ ನ ವೃತ್ತಿಜೀವನದ ಪರೀಕ್ಷಾಕಾಲಕ್ಕೆ ನಾಂದಿ ಹಾಡಿದ ಟ್ರುಮನ್ ಭೇಟಿಯ ಈ ಸಂದರ್ಭದ ನಂತರದ ದಿನಗಳು ಆತನನ್ನು ಹೈರಾಣಾಗಿಸುತ್ತದೆ. ಅತ್ತ ವಿಷಸಾಗರವನ್ನೇ ಹರಿಸಿದ ಅಣುಬಾಂಬ್ ಸ್ಪೋಟದ ಪ್ರಯೋಗಪಶುಗಳಾದ ಜಪಾನೀಯರು ತೀವ್ರ ಆರ್ಥಿಕ ಹೊಡೆತ, ಕ್ಷಾಮ, ಹತ್ತುಹಲವು ರೋಗಗಳಲ್ಲಿ ಮಿಂದೇಳುತ್ತಿರುವಾಗ, ಇತ್ತ ಒಪ್ಪೆನ್ಹೈಮರ್ ತನ್ನ ವೃತ್ತಿ-ಜೀವನದ, ವೈಯಕ್ತಿಕ ಜೀವನದ ಹೊಡೆತಕ್ಕೆ ಒಳಗಾಗುತ್ತಾನೆ. ಹೆಂಡತಿಯ ಒತ್ತಾಸೆ, ಕೆಲ ನಿಜ ಸ್ನೇಹಿತರ ಸಹಕಾರ, ಜೀವನ ತನಗೆ ಕಲಿಸಿದ ಸಂಯಮಗಳಿಂದ ಪರಿಸ್ಥಿತಿ ಎದುರಿಸುತ್ತಾನೆ ಒಪ್ಪೆನ್ಹೈಮರ್…
ನಾವುಗಳು ಹುಟ್ಟುವ ಮುಂಚೆಯೇ ತನ್ನ ಜೀವನಯಾತ್ರೆ ಮುಗಿಸಿದ್ದ ಒಪ್ಪೆನ್ಹೈಮರ್ ನ ನಿಜ ಜೀವನಗಾಥೆ ಸಾರುವ ಕಾಯ್ ಬರ್ಡ್ ಮತ್ತು ಮಾರ್ಟಿನ್ ಶೆರ್ವಿನ್ ರ ಕೃತಿ: “American Prometheus : The Triumph and Tragedy of J Robert Oppenhaimer ” ಆಧರಿಸಿದ, ‘ಒಪ್ಪೆನ್ಹೈಮೆರ್’ ಚಿತ್ರವನ್ನು, ಸಿನಿಮಾಸಕ್ತರೆಲ್ಲಾ ಒಮ್ಮೆ ನೋಡಬೇಕು.
ಹೊಸೂರಿನ ಶಾಲೆಯಲ್ಲಿ ಓದುತ್ತಿದ್ದ ದಿನಗಳಲ್ಲಿ ಎಚ್ಚೆನ್ ಒಡನಾಟದಿಂದ ಫಿಸಿಕ್ಸ್ ನ ಗೀಳು ಹಿಡಿಯಲಾರಂಭಿಸಿತ್ತು.
ಬೆಂಗಳೂರಿಗೆ ಬಂದ ಮೇಲಂತೂ ಎಚ್ಚೆನ್ ಭೇಟಿ ಆಗಾಗ ನಡೆಯುತ್ತಿತ್ತು. ಆ ಸಂದರ್ಭಗಳಲ್ಲಿ ಕೇಳಿ ಬರುತ್ತಿದ್ದ ಹೆಸರುಗಳಲ್ಲಿ ಪ್ರಮುಖವಾದವು ಐನ್ ಸ್ಟೀನ್, ಮ್ಯಾಕ್ಸ್ ಪ್ಲಾಂಕ್, ಬರ್ಟ್ರಂಡ್ ರಸೆಲ್, ವರ್ನರ್ ಹೀಸನ್ ಬರ್ಗ್. ಜಾರ್ಜ್ ಗಾಮೊ, ಫರ್ಮಿ, ರುದರ್ ಫ಼ರ್ಡ್ ಇತ್ಯಾದಿ…ಜಾರ್ಜ್ ಗಾಮೋ ನ ಸುಪ್ರಸಿದ್ದ “The thirty years that shook Physics” ಕೃತಿಯ ಬಗ್ಗೆಯಂತೂ ಎಚ್ಚೆನ್ ಬಹಳಾ ಹೇಳುತ್ತಿದ್ದರು.
‘ಒಪನ್ಹೀಮರ್ ಅಂತನೂ ಒಬ್ಬ ಇದ್ದಾಪ್ಪ… ನೂಕ್ಲಿಯರ್ ಫಿಸಿಕ್ಸ್ ಗೆ ಅವನ ಕೊಡುಗೆ ಬಹಳ ಇದೆ. ಆದರೆ ಇವ್ರಗಳಷ್ಟು ಅವನ ಹೆಸರು ಬಹಳ ಬಂದಿಲ್ಲ’ ಎಂದು ಹೇಳುತ್ತಿದ್ದರು. ಐನ್ ಸ್ಟೀನ್, ಪ್ಲಾಂಕ್, ರಸಲ್ ರ ಬಗ್ಗೆ ಬಹಳ ಕುತೂಹಲಕಾರಿಯಾಗಿ ವಿವರಿಸುತ್ತಿದ್ದರು. ’ಆ ಐನ್ ಸ್ಟೀನ್ ನೋಡಪ್ಪಾ… ಈ ಜೀವನದಲ್ಲೇ ನಿನಗೆ ಮಾಥ್ಸ್ ತಲೆಗೆ ಹತ್ತಲ್ಲ ಅಂತಾ ಬೈಸಿಕೊಳ್ಳುತ್ತಿದ್ದವ್ನು. ಅವನು ಹೇಳಿದ ಫಿಸಿಕ್ಸ್ ಆಗಲೀ, ಮಾಥ್ಸ್ ಆಗಲೀ ಎಷ್ಟೋ ಫಿಸಿಕ್ಸ್ ಮೇಷ್ಟುಗಳಿಗೇ ಇನ್ನೂ ಅರ್ಥ ಆಗಿಲ್ಲಪ್ಪಾ’ ಎಂದು ಐನ್ ಸ್ಟೀನ್ ಬಗ್ಗೆ ಆಸಕ್ತಿ ತರಿಸುತ್ತಿದ್ದರು.

‘ಹಾಗಂತ ಇವತ್ತು ಮ್ಯಾಥ್ಸ್ ನಲ್ಲಿ ಕಡಿಮೆ ಮಾರ್ಕ್ಸ್ ತೊಗೋಳೊರು, ಫೇಲ್ ಆಗೊರೆಲ್ಲಾ ನಾಳೆ ಐನ್ಸ್ಟೀನ್ ಆಗಿಬಿಡ್ತಾರೆ ಅಂತಾ ತಿಳ್ಕೋಬೇಡ್ರಪ್ಪಾ’ ಎಂದೂ ತಕ್ಷಣ ಎಚ್ಚರಿಸುತ್ತಿದ್ದರು. ಆದರೂ ’ಇವ್ರಗಳಷ್ಟ್ ಹೆಸರು ಕೇಳದ’ ಆ ಒಪನ್ಹೀಮರ್ ಬಗ್ಗೆ ಕುತೂಹಲವೊಂದು ಜಾಗೃತವಾಗತೊಡಗಿತು. ಈಗಿನಂತೆ ತಂತ್ರಜ್ಞಾನ-ಗೂಗಲ್-ವಿಕಿಗಳಿರಲಿಲ್ಲ. ನಿರಂಜನರು ಸಂಪಾದಿಸಿದ್ದ ‘ಜ್ಞಾನಗಂಗೋತ್ರಿ’ ಯ ’ಭೌತಜಗತ್ತು’ ಸಂಪುಟವಿತ್ತು. ಆದರೆ ಅದರಲ್ಲಿ ಎಲ್ಲಾ ವಿವರಗಳೂ ಸಿಗುತ್ತಿರಲಿಲ್ಲ. ಒಪನ್ಹೀಮರ್ ಮನಃಪಟಲದಲ್ಲೆಲ್ಲೋ ಸೇರಿಹೋದ…ಸೈನ್ಸ್ ಫೋರಮ್ ನ ಪರಮಾಣು ವಿಜ್ಞಾನದ ಉಪನ್ಯಾಸಗಳಲ್ಲಿ ಅವನ ಹೆಸರು ಆಗಾಗ ಬಂದು ಹೋಗುತ್ತಿತ್ತು. ನಂತರದ ದಿನಗಳಲ್ಲಿ ಒಪ್ಪೆನ್ಹೀಮರ್ ಬಗ್ಗೆ ವಿವರವಾಗಿ ತಿಳಿಯುವ ಅವಕಾಶಗಳು ಸಿಕ್ಕವು. ಕಳೆದ ವಾರ ಕ್ರಿಸ್ಟೋಫರ್ ನೊಲಾನ್ ನಿರ್ದೇಶನದ ’ಒಪ್ಪೆನ್ಹೈಮರ್’ ಬಿಡುಗಡೆಯಾದಾಗ ಹಳೆಯ ನೆನಪುಗಳನ್ನು ಮೆಲಕುಹಾಕುತ್ತಾ ನೋಡಿದೆ. ಚಿತ್ರ ನೋಡಲು ಸಹನೆ-ಸಂಯಮ (:-)) ಗಳೊಂದಿಗೆ ಸ್ವಲ್ಪ ಮಟ್ಟದ ವಿಜ್ಞಾನ ಚರಿತ್ರೆಯ ಓದಿನ ಅಗತ್ಯವೂ ಇದೆ.
೧೯೩೭ರ ವೇಳೆಗೆ ಹಿಟ್ಲರ್ ಆಳ್ವಿಕೆಯಲ್ಲಿದ್ದ ಜರ್ಮನಿ, ಪರಮಾಣು ಶಸ್ತ್ರಾಸ್ತ್ರ (ನೂಕ್ಲಿಯರ್ ವೆಪನ್ಸ್) ತಯಾರಿಕೆಯ ಪ್ರಯತ್ನಗಳನ್ನು ಪರಿಣಾಮಕಾರಿಯಾಗಿ ಆರಂಭಿಸಿತ್ತು. ಇದರ ಉದ್ದೇಶ್ಯ ನೂಕ್ಲಿಯರ್ ರಿಯಾಕ್ಟರ್ ಗಳ ತಯಾರಿಕೆ, ನೂಕ್ಲಿಯರ್ ತಂತ್ರಜ್ಞಾನದ ಅಭಿವೃದ್ದಿ, ಹಾಗೂ ನೂಕ್ಲಿಯರ್ ಶಸ್ತ್ರಾಸ್ತ್ರಗಳ ತಯಾರಿಕೆ. ೧೯೩೮ರ ಕೊನೆಯ ದಿನಗಳಲ್ಲಿ ಜರ್ಮನ್ ವಿಜ್ಞಾನಿ ಒಟ್ಟೊಹ್ಯಾನ್ ಮತ್ತವನ ಶಿಷ್ಯರು ಮೊದಲಬಾರಿಗೆ ’ಪರಮಾಣು ವಿದಳನ’ (ನೂಕ್ಲಿಯರ್ ಫಿಶನ್) ವೆಂಬ ವಿದ್ಯಮಾನವನ್ನು ವರದಿ ಮಾಡಿದರು. ವಿದ್ಯುದಂಶ (ಎಲೆಕ್ಟ್ರಿಕ್ ಚಾರ್ಜ್) ಇಲ್ಲದ ನ್ಯೂಟ್ರಾನ್ ಗಳಿಂದ ಯುರೇನಿಯಮ್ ಅಣುವನ್ನು ಘಟ್ಟಿಸಿದಾಗ, ಬೇರಿಯಮ್ ಮತ್ತು ಕ್ರಿಪ್ಟಾನ್ ಎಂಬ ಎರಡು ಮೂಲಧಾತುಗಳು (ಎಲೆಮೆಂಟ್ಸ್) ಸೃಷ್ಟಿಯಾಗುವುದಲ್ಲದೇ, ಒಂದು ನ್ಯೂಟ್ರಾನ್ ಎರಡಾಗಿ, ಎರಡು ನಾಲ್ಕಾಗಿ… ಸರಪಳಿ ಕ್ರಿಯೆಯಾಗಿ (ಚೈನ್ ರಿಯಾಕ್ಷನ್) ಮುಂದುವರೆಯುತ್ತಾ ಉಳಿದೆಲ್ಲಾ ಯುರೇನಿಯಮ್ ಅಣುಗಳನ್ನು ಸಿಡಿಸಿ ಅಪಾರಪ್ರಮಾಣದ ಶಕ್ತಿ (ಎನರ್ಜಿ)ಯನ್ನೂ ಬಿಡುಗಡೆಮಾಡುವುದರ ಬಗ್ಗೆ ಬಹಳ ವಿವರವಾಗಿ ಬರೆದಿದ್ದರು. ಪೊಲ್ಯಾಂಡ್ ದೇಶವನ್ನು ಧ್ವಂಸಗೊಳಿಸಲೇಬೇಕೆಂದು ಹಿಟ್ಲರ್ ಹೊಂಚುತ್ತಿದ್ದ ಕಾಲಘಟ್ಟದಲ್ಲಿ, ಒಟ್ಟೊಹ್ಯಾನ್ ತಂಡದ ಈ ಪ್ರಯೋಗ ಅಪಾರ ಸಂಚಲನ ಸೃಷ್ಟಿಸಿಬಿಟ್ಟಿತು. ಅಲ್ಲದೇ ಆಗಿನ್ನೂ ಕಣ್ಣುಬಿಡುತ್ತಿದ್ದ ’ನೂಕ್ಲಿಯರ್ ಫಿಸಿಕ್ಸ್’ ಎಂಬ ಭೌತಶಾಸ್ತ್ರದ ಭಾಗವೊಂದು ಸಶಕ್ತವಾಗಿ ಬೆಳೆಯಲು ಅನುವುಮಾಡಿತು. ಅಷ್ಟೇ ಆಗಿದ್ದರೆ ಸಾಕಿತ್ತು. ಆದರೆ ’ಅಣು ಬಾಂಬ್’ ಎಂಬ ಮನುಕುಲ ನಾಶಕ ಶಸ್ತ್ರವನ್ನು ತಯಾರಿಸಿ, ಪ್ರಯೋಗಿಸಬೇಕೆಂಬ ಕ್ಷುದ್ರ ಬುದ್ಧಿಯನ್ನು ಪ್ರೇರೇಪೆಸಿಬಿಟ್ಟಿತು. ಅಪಾರ ಪ್ರಮಾಣದ ಯುರೇನಿಯಮ್ ಅನ್ನು ಹೀಗೆಯೇ ಸ್ಫೋಟಕವಾಗಿ ಏಕೆ ಬಳಸಬಾರದು ಎಂಬ ವಿನಾಶಕಾರಿ ಚಿಂತನೆಯೊಂದಕ್ಕೆ ಮುನ್ನುಡಿ ಬರೆಯಿತು.
ಓಟ್ಟೋಹ್ಯಾನ್ ತಂಡದ ಸಂಚಲನಕಾರಿ ಪ್ರಯೋಗದ ವರದಿಗಳು ಅಂದಿನ ಪ್ರತಿಷ್ಟಿತ ವಿಜ್ಞಾನ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದಂತೆ ಅಮೆರಿಕಾ ಮೈಕೊಡವಿ ಎದ್ದಿತು. ತಾನು ‘First World’ ಎಂಬ ಪ್ರತಿಷ್ಟೆ, ಭ್ರಮೆಗಳು ಅಮೆರಿಕಾವನ್ನು ಅಂದಿನಿದಲೇ ಆವರಿಸಿತ್ತು. ಜರ್ಮನಿ ’ನೂಕ್ಲಿಯರ್ ಬಾಂಬ್’ ತಯಾರಿಕೆಯ ಹೆಗ್ಗಳಿಕೆ ಪಡೆಯುವುದನ್ನು ಅಮೆರಿಕಾ ಸಹಿಸದಾಯಿತು. ಆಗ ಆರಂಭವಾಗಿದ್ದೇ ’ಮ್ಯಾನ್ ಹಟನ್’ ಯೋಜನೆ. ( The Manhattan project) ಈ ಯೋಜನೆಯ ಸಾರಥ್ಯ ವಹಿಸಿಕೊಳ್ಳುವ ಛಾತಿ ಇರುವ ವಿಜ್ಞಾನಿ/ಆಡಳಿತಗಾರನಿಗಾಗಿ ಶಿಕಾರಿ ಆರಂಭವಾಯಿತು. ೧೯೪೦ ರ ವೇಳೆಗೆ ಮ್ಯಾನ್-ಹಟನ್ ನ ರೂಪುರೇಷೆಗಳು ಸಿದ್ದವಾದವು. ಕೆನಡಾ, ಬ್ರಿಟಿಶ್ ಸಂಸ್ಥಾನಗಳೂ ಮ್ಯಾನ್-ಹಟನ್ ಸೇರಿದವು. ಕೇಳಿದಷ್ಟು ಹಣ-ಜನ-ಸವಲತ್ತುಗಳನ್ನು ಅಮೆರಿಕ-ಬ್ರಿಟಿಷ್ ಸರ್ಕಾರಗಳು ಕೊಟ್ಟವು. ಆದರೆ ಹಿಟ್ಲರ್ ನ ಜರ್ಮನಿಯಲ್ಲಿ, ಬಾಂಬ್ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದ ಹಲವು ಪ್ರತಿಭಾವಂತ ಯುವ ವಿಜ್ಞಾನಿಗಳನ್ನು ಬಲವಂತವಾಗಿ ಸೈನ್ಯಕ್ಕೆ ಕಳುಹಿಸಲಾಯಿತು. ಮತ್ತೊಂದಷ್ಟು ಜನ ಹಿಟ್ಲರ್ ಭಯಕ್ಕೆ ದೇಶ ಬಿಟ್ಟು ಹೋದರು. ೪೦ರ ಅಂದಿನ ದಶಕದಲ್ಲೇ ಅಮೆರಿಕ ಸುಮಾರು ೨ ಬಿಲಿಯನ್ ಹಣವನ್ನು ಮ್ಯಾನ್-ಹಟನ್ ಗೆ ನೀಡಿತ್ತು. ಸುಮಾರು ಒಂದೂವರೆ ಲಕ್ಷದಷ್ಟು ವಿಜ್ಞಾನಿ-ತಂತ್ರಜ್ಞ ರನ್ನು ನಿಯೋಜಿಸಿತ್ತು. ಆದರೆ ಜರ್ಮನಿ ತನ್ನ ಬಹುತೇಕ ಸಂಪನ್ಮೂಲಗಳನ್ನು ಯುದ್ಧಕ್ಕೆ ವಿನಿಯೋಗಿಸಿತು.

ಒಪ್ಪೆನ್ಹೈಮೆರ್ ತನ್ನ ಪ್ರತಿಭೆ-ಪರಿಶ್ರಮ-ಭೌತಶಾಸ್ತ್ರದ ಆಳವಾದ ಪಾಂಡಿತ್ಯಗಳಿಂದ ಜನಪ್ರಿಯನಾಗಿದ್ದ. ಗಂಟೆಗಟ್ಟಲೇ ಒಂದೆಡೆ ಕೂರದ, ಸದಾ ಏನನ್ನಾದರೂ ಮಾಡುತ್ತಿರುವ ಒಪ್ಪೆನ್ಹೈಮೆರ್ ತನ್ನ ಅದ್ಭುತವಾಗಿ ಪಾಠ ಮಾಡುವ ಕೌಶಲ್ಯ, ಸಂಶೋಧನಾತ್ಮಕ ನಿಲುವು, ಪಾಂಡಿತ್ಯಪೂರ್ಣವಾದ, ಅಪಾರ ಒಳನೋಟಗಳಿದ್ದ ಬರಹಗಳಿಂದ ವಿದ್ಯಾರ್ಥಿವೃಂದಕ್ಕೆ ಅಚ್ಚುಮೆಚ್ಚಿನ ಅಧ್ಯಾಪಕನಾಗಿದ್ದ. ’ಕ್ವಾಂಟಮ್ ಮೆಕಾನಿಕ್ಸ್’ ಮತ್ತು ’ನೂಕ್ಲಿಯರ್ ಫಿಸಿಕ್ಸ್’ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡುತ್ತಿದ್ದ ಒಪ್ಪೆನ್ಹೈಮರ್ ಎಲ್ಲಾ ಯೋಗ್ಯತೆಗಳಿದ್ದರೂ ಮ್ಯಾನ್-ಹಟನ್ ಗೆ ನಿಯೋಜನೆಗೊಳ್ಳುವುದು ಸುಲಭವಿರಲಿಲ್ಲ. ಅದಕ್ಕೆ ಪ್ರಮುಖ ಕಾರಣಗಳು, ಒಂದು: ಅವನ ಜರ್ಮನ್ ಮೂಲ. ಜರ್ಮನಿಯಿಂದ ಅಮೆರಿಕ ಸಂಸ್ಥಾನಕ್ಕೆ ವಲಸೆ ಬಂದ ತಂದೆ-ತಾಯಿಗಳ ಮಗ ಒಪ್ಪೆನ್ಹೈಮರ್, ಪಿ.ಎಚ್.ಡಿ ಪಡೆದದ್ದು ಜರ್ಮನಿಯ ಗೊಟ್ಟಿನ್ ಗೆನ್ ವಿಶ್ವವಿದ್ಯಾಲಯದಲ್ಲಿ. ಜರ್ಮನಿಯ ಮತ್ತೊಬ್ಬ ನೋಬಲ್ ಪ್ರಶಸ್ತಿ ವಿಜೇತ ವರ್ನರ್ ಹೀಸನ್ ಬರ್ಗ್ ಜೊತೆ ಒಪ್ಪೆನ್ಹೈಮರ್ ಗೆ ಮಹಾ ಸ್ನೇಹ…ಅಲ್ಲದೇ ಜರ್ಮನಿಯ ಅಣುಬಾಂಬ್ ಯೋಜನೆಯ ಮುಖ್ಯಸ್ಥನೇ ಈ ಹೀಸನ್ಬರ್ಗ್. ಅಲ್ಲದೇ ಒಪ್ಪೆನ್ಹೈಮರ್ ಗೆ ಇನ್ನೂ ನೊಬಲ್ ಪ್ರಶಸ್ತಿ ಬಂದಿರಲಿಲ್ಲ.
ಎರಡು: ಅಮೆರಿಕ ಕಮ್ಯುನಿಸ್ಟ್ ಚಿಂತನೆಗಳನ್ನು, ಕಮ್ಯುನಿಸ್ಟ್ ಕಾರ್ಯಕರ್ತರನ್ನು ಮಾತ್ರವಲ್ಲದೇ ಕಮ್ಯುನಿಸ್ಟರ ಹಿತಚಿಂತಕರನ್ನೂ ತೀವ್ರ ಪ್ರಶ್ನಾರ್ಥಕವಾಗಿ ಕಾಣುತ್ತದೆ. ಮಾತ್ರವಲ್ಲ ಕಾಡುತ್ತದೆ ಕೂಡಾ. ಒಪ್ಪೆನ್ಹೈಮರ್ ಕಮ್ಯುನಿಸ್ಟ್ ಪಕ್ಷದ ಸದಸ್ಯನೇನೂ ಅಲ್ಲ. ಆದರೆ ಅವರ ವಿಚಾರದಲ್ಲಿ ಮೃದುಧೋರಣೆ ಇರುವಾತ. ಒಪ್ಪೆನ್ಹೈಮರ್ ನ ಪತ್ನಿ, ಕಮ್ಯುನಿಸ್ಟ್ ಪಕ್ಷದ ಮಾಜಿ ಸದಸ್ಯೆ. ಅವನ ತಮ್ಮನಿಗೂ ಆ ಪಕ್ಷದ ಒಡನಾಟ ಹೆಚ್ಚು. ಅಮೆರಿಕನ್ನರಿಗೆ ಈ ಕಾರಣಗಳು ಸಾಕಿತ್ತು. ಈ ಕಮ್ಯುನಿಸ್ಟ್ ಛಾಯೆಯೇ ಒಪ್ಪೆನ್ಹೈಮರ್ ನನ್ನು ಎಡಬಿಡದೇ ಕಾಡುತ್ತದೆ.
೧೯೪೫ ರ ಜಪಾನ್ ಬಾಂಬ್ ದಾಳಿಯ ನಂತರ ಅಧ್ಯಾಪನದಲ್ಲಿ ಆಸಕ್ತಿ ಕಳೆದುಕೊಳ್ಳುವ ಒಪ್ಪೆನ್ಹೈಮರ್ ನನ್ನು ಲೂಯಿಸ್ ಸ್ಟ್ರಾಸ್ ಎಂಬ ನೌಕಾಧಿಕಾರಿ ಪ್ರಿನ್ಸ್ ಟನ್ (ನ್ಯೂಜೆರ್ಸಿ) ಗೆ ಕರೆತಂದು ಅಲ್ಲಿನ Institute of Advanced Study” ನಲ್ಲಿ ದೊಡ್ಡ ಪದವಿಯ ಉದ್ಯೋಗ, ವಸತಿಗಳನ್ನು ಕೊಡುತ್ತಾನೆ.. . ಸ್ಟ್ರಾಸ್ ಜೊತೆಗಿನ ಒಡನಾಟಕ್ಕೆ ಒಪ್ಪೆನ್ಹೈಮರ್ ಬೆಲೆ ತೆರಬೇಕಾಗುತ್ತದೆ. ಸ್ಟ್ರಾಸ್ ಮೊದಮೊದಲು ಸಹಜವಾಗಿಯೇ ಸ್ನೇಹಮಯಿಯಾಗಿ ಕಾಣುತ್ತಾನೆ. ೧೯೪೮ ರ ವೇಳೆಗೆ ಅಮೆರಿಕ ತನ್ನ ಅಣುಶಕ್ತಿ ಆಯೋಗವನ್ನು ರಚಿಸಿದಾಗ, ಒಪ್ಪೆನ್ಹೈಮರ್ ಅದರ ಸಾಮಾನ್ಯ ಸಮಿತಿಯ ಅಧ್ಯಕ್ಷನಾಗುತ್ತಾನೆ. ಸ್ಟ್ರಾಸ್ ನ ಹಿರಿತನವನ್ನು ಕಡೆಗಣಿಸಲಾಗುತ್ತದೆ. ಸ್ಟ್ರಾಸ್ ಒಳಗೊಳಗೇ ಕುದಿಯಲಾರಂಭಿಸುತ್ತಾನೆ. ಅಧ್ಯಕ್ಷನಾದ ದಿನದಿಂದಲೇ ಶಸ್ತ್ರಾಸ್ತ್ರಗಳ ನಿಯಂತ್ರಣದ ಬಗ್ಗೆ ಗಟ್ಟಿ ದನಿಯಲ್ಲಿ ಮಾತನಾಡತೊಡಗಿದ ಒಪ್ಪೆನ್ಹೈಮರ್, ಅಮೆರಿಕಾ ಸರ್ಕಾರಕ್ಕೆ ಬಿಸಿತುಪ್ಪವಾಗುತ್ತಾನೆ. ಒಪ್ಪೆನ್ಹೈಮರ್ ನನ್ನು ಕಂಡು ಕರುಬಲಾರಂಭಿಸಿದ ಸ್ಟ್ರಾಸ್ ಕೂಡಾ ಅವಕಾಶಕ್ಕಾಗಿ ಕಾಯುತ್ತಿರುತ್ತಾನೆ. ೧೯೪೯-೫೦ ರಲ್ಲಿ ರಷ್ಯಾ ಮೊದಲ ಅಣುಪರೀಕ್ಷೆ ಮಾಡಿದಾಗ ಅಮೆರಿಕ ವ್ಯಗ್ರವಾಗುತ್ತದೆ. ’ಯುರೇನಿಯಮ್ ಬೇಡ, ಹೈಡ್ರೋಜನ್ ಬಾಂಬ್ ತಯಾರಿಸೋಣ’ ಎಂದು ಅಮೆರಿಕ ಪಟ್ಟುಹಿಡಿದಾಗ, ಒಪ್ಪೆನ್ಹೈಮರ್ ತೀವ್ರ ವಿರೋಧ ತೋರುತ್ತಾನೆ. ಸಾಮಾನ್ಯ ಸಲಹಾ ಸಮಿತಿ ಕೂಡಾ ಒಪ್ಪೆನ್ಹೈಮರ್ ನ ವಾದಕ್ಕೆ ಬೆಂಬಲ ನೀಡುತ್ತದೆ. ೧೯೪೫ರ ಹಿರೊಶಿಮಾ-ನಾಗಸಾಕಿಯ ಘೋರದುರಂತ ಕಂಡಿದ್ದ ಒಪ್ಪೆನ್ಹೈಮರ್ನಲ್ಲಿದ್ದ ಮಾನವೀಯ ತುಡಿತ ಈಗ ಹೆಪ್ಪುಗಟ್ಟಿದೆ. ಹೈಡ್ರೋಜನ್ ಬಾಂಬ್ ನ ದುಷ್ಪರಿಣಾಮದ ಬಗ್ಗೆ ವಿವರಿಸಿ ಇಂತಹ ಯೋಜನೆ ಬೇಡ ಎಂದು ಸರ್ಕಾರದ ಅಭಿಪ್ರಾಯವನ್ನು ಸಾರಸಗಟಾಗಿ ತಳ್ಳಿಹಾಕಿಬಿಡುತ್ತಾನೆ. ಆದರೆ ಹಿಂದೊಮ್ಮೆ ಆಭಾಸಕ್ಕೊಳಗಾಗಿದ್ದ ಅಧ್ಯಕ್ಷ ಟ್ರುಮನ್, ಈ ಅತ್ಯಂತ ಅಪಾಯಕರ ಬಾಂಬ್ ಯೋಜನೆಗೆ ಒಪ್ಪಿಗೆಕೊಟ್ಟುಬಿಡುತ್ತಾನೆ. ಇದು ಒಪ್ಪೆನ್ಹೈಮರ್ ನ ದೊಡ್ಡ ಸೋಲಾಗುತ್ತದೆ. ೧೯೫೧ ರಲ್ಲಿ ತನ್ನ ಅವಧಿ ಮುಗಿದಾಗ ಒಪ್ಪೆನ್ಹೈಮರ್ ಸಾಮಾನ್ಯ ಸಲಹಾಸಮಿತಿಯಿಂದ ಹೊರನಡೆಯುತ್ತಾನೆ. ’ಅವನನ್ನು ಮತ್ತೆ ಕರೆಯಬೇಡಿ’ ಎಂಬ ಸಂದೇಶ ಟ್ರುಮನ್ ನಿಂದ ಬಂದಿರುತ್ತದೆ.
ಅಲ್ಲಿಗೆ ನಿಲ್ಲಲಿಲ್ಲ. ಹೈಡ್ರೋಜನ್ ಬಾಂಬ್ ಅನ್ನು ತೀವ್ರ ವಿರೋಧಿಸಿದ, ಟ್ರುಮನ್ ನನ್ನು ಆಭಾಸಕ್ಕೀಡುಮಾಡಿದ ಒಪ್ಪೆನ್ಹೈಮರ್ ನನ್ನು ಅಮೆರಿಕಾದ ಬೇಹುಗಾರಿಕೆ ಇಲಾಖೆ (ಎಫ್ ಬಿ ಐ) ಹದ್ದುಗಣ್ಣಿನಿಂದ ನೋಡುತ್ತಿರುತ್ತದೆ. ಇದ್ದಕ್ಕಿದಂತೆ ಒಪ್ಪೆನ್ಹೈಮರ್ ನ ಗತಕಾಲದ ಕಮುನಿಸ್ಟ್ ಹಿನ್ನಲೆಯನ್ನು ಭೂತಮಾಡಲಾಗುತ್ತದೆ. ಇತ್ತ ಸ್ಟ್ರಾಸ್ ಕೂಡಾ ಎಫ್ ಬಿ ಐ ನ ನಿರಂತರ ಒಡನಾಟದಲ್ಲಿರುತ್ತಾನೆ. ಒಪ್ಪೆನ್ಹೈಮರ್ ನ ವಿರುದ್ಧದ ಹಲವು ಸಾಕ್ಷ್ಯಗಳು ಸ್ಟ್ರಾಸ್ ನಿಂದಲೇ ಸಂದಾಯವಾಗಿರುತ್ತದೆ.
ಮುಂದಿನ ದಿನಗಳು ಒಪ್ಪೆನ್ಹೈಮರ್ ಮತ್ತವನ ಕುಟುಂಬದವರನ್ನು ತೀವ್ರ ಮುಖಭಂಗಕ್ಕೀಡುಮಾಡುತ್ತದೆ. ಒಪ್ಪೆನ್ಹೈಮೆರ್ ಜೊತೆಗೆ ಆತನ ಪತ್ನಿ, ಸೋದರ ಕೂಡಾ ವಿಚಾರಣಾ ಸಮಿತಿಯ ಮುಂದೆ ನಿಲ್ಲಬೇಕಾಗುತ್ತದೆ. ಈಗ ಅಣುಶಕ್ತಿ ಆಯೋಗದ ಅಧ್ಯಕ್ಷನಾಗಿರುವ ಸ್ಟ್ರಾಸ್, ಟ್ರುಮನ್ ನಂತರ ರಾಷ್ಟ್ರಾಧ್ಯಕ್ಷ ನಾದ ಐಸನ್ಹೋವರ್ ಗೆ, ’ಇನ್ನು ಒಪ್ಪೆನ್ಹೈಮರ್ ಗೆ ಇನ್ನ್ಯಾವ ಸವಲತ್ತುಗಳೂ ಬೇಡ…ಅಣುಶಕ್ತಿ, ರಕ್ಷಣಾ ಇಲಾಖೆಯ ವಿಚಾರ, ದೇಶದ ಯಾವುದೇ ರಹಸ್ಯ ವಿಚಾರ ಅವನನ್ನು ತಲುಪುವುದು ಬೇಡ’ (ಈ ಪ್ರಕ್ರಿಯೆಯನ್ನು “Security Clarence” ಎಂದು ಕರೆಯಲಾಗುತ್ತದೆ) ಎಂದು ತಿಳಿಸಿಬಿಡುತ್ತಾನೆ.

’ಒಪ್ಪೆನ್ಹೈಮರ್ ಸೋವಿಯೆಟ್ ನ ಏಜೆಂಟ್ ಇರಬಹುದು ಎಂಬ ಶಂಕೆಯಿದೆ…ಅದು ನಿಜವಲ್ಲದೆಯೂ ಇರಬಹುದು’ ಎಂಬ ಅಪಮಾನಕಾರಿ ವರದಿಯೊಡು ಲಿಸ್ಕಮ್ ಬೋರ್ಡೆನ್ ಎಂಬ ಜಂಟಿ ಸಮಿತಿಯ ಮುಖ್ಯಸ್ಥನಿಂದ ಐಸನ್ಹೊವರ್ ಗೆ ತಲುಪುತ್ತದೆ. ಇದು ರಾಷ್ಟ್ರ ರಕ್ಷಣೆಗೆ ಸಂಬಂಧಿಸಿದ ಸೂಕ್ಷ್ಮ ಮತ್ತು ಗಂಭೀರ ವಿಚಾರವಾದ್ದರಿಂದ ಇದಕ್ಕಾಗಿ ತನಿಖಾ ಸಮಿತಿ ರಚಿಸಲೇಬೇಕು’ ಎಂಬ ನಿರ್ಧಾರಕ್ಕೆ ಐಸನ್ಹೋವರ್ ಬರುತ್ತಾನೆ. ಅಲ್ಲಿಗೆ ಸ್ಟ್ರಾಸ್ ನ ಷಡ್ಯಂತ್ರ ಯಶಸ್ವಿಯಾಗುತ್ತದೆ.
ಹಲ್ಲಿಲ್ಲದ ಹಾವಾದ ಒಪ್ಪೆನ್ಹೈಮರ್, ನಂತರದ ದಿನಗಳಲ್ಲಿ ಅಮೆರಿಕಾದ್ಯಂತ ವಿಶ್ವವಿದ್ಯಾಲಯಗಳಿಗೆ ಭೇಟಿಯಿತ್ತು ವಿಜ್ಞಾನ-ಕಲೆಗಳ ಬಗ್ಗೆ ಉಪನ್ಯಾಸಗಳನ್ನು ನೀಡುತ್ತಾನೆ. ಐನ್ ಸ್ಟೀನ್ ಬಗ್ಗೆ ಅಪಾರ ಗೌರವ ಇಟ್ಟುಕೊಂಡ ಒಪ್ಪನ್ಹೈಮರ್, ಅವರ ಮುಂದೆ ವಿಧೇಯ ವಿದ್ಯಾರ್ಥಿಯಂತೆ ನಡೆದುಕೊಳ್ಳುತ್ತಿದ್ದು ವಿಶೇಷ. ಭಗವದ್ಗೀತೆ, ಕಾಳಿದಾಸನ ’ಮೇಘದೂತ’, ಭರ್ತೃಹರಿ ಶತಕಗಳನ್ನು ಮೂಲ ಸಂಸ್ಕೃತದಲ್ಲೇ ಓದಿದ್ದ ಒಪ್ಪೆನ್ಹೈಮರ್, ಗ್ರೀಕ್ ಭಾಷೆಯನ್ನೂ ಕಲಿತಿದ್ದ.
ಭಾರತದ ಅಣು ವಿಜ್ಞಾನಿ ಹೋಮಿ ಜಹಾಂಗಿರ್ ಭಾಭಾರೊಂದಿಗೆ ಒಪ್ಪನ್ಹೈಮರ್ ಗೆ ಆತ್ಮೀಯ ಒಡನಾಟವಿತ್ತು. ಆತ ಸಂಕಷ್ಟಕ್ಕೆ ಸಿಲಿಕಿದಾಗ, ಭಾಭಾ ತಾವೇ ಸ್ವತಃ ಆಗಿನ ಪ್ರಧಾನಿ ನೆಹರು ರೊಂದಿಗೆ ಮಾತನಾಡಿ, ಒಪ್ಪೆನ್ಹೈಮರ್ ಭಾರತಕ್ಕೆ ಬಂದು ನೆಲೆಸಲು ವಿನಂತಿಸಿಕೊಡಿದ್ದರು. ನೆಹರು ತಡಮಾಡದೇ ಒಪ್ಪಿದ್ದರು ಸಹಾ. ಭಾಭಾ ನಂತರ ಒಪ್ಪನ್ಹೈಮರ್ ಗೆ ಈ ವಿಚಾರ ತಿಳಿಸಿ ಭಾರತಕ್ಕೆ ಬರುವಂತೆ ಆಹ್ವಾನಿಸಿದರು. ಆದರೆ ಒಪ್ಪೆನ್ಹೈಮರ್ ಆಹ್ವಾನವನ್ನು ನಯವಾಗಿ ತಿರಸ್ಕರಿಸಿದ. ’ಅಮೆರಿಕಾ ನನ್ನ ದೇಶ…ಎಲ್ಲಾ ಸಂಕಷ್ಟಗಳನ್ನೂ ಎದುರಿಸಿಯೇ ತೀರುತ್ತೇನೆ’ ಎಂದು ಪ್ರತಿಕ್ರಿಯಿಸಿದ.
ವಿಪರೀತ ಧೂಮಪಾನ ಮಾಡುತ್ತಿದ್ದ ಒಪ್ಪೆನ್ಹೈಮರ್ ಗೆ, ೧೯೬೫ ರಲ್ಲಿ ಗಂಟಲಿನ ಕ್ಯಾನ್ಸರ್ ಇರುವುದು ಪತ್ತೆಯಾಗುತ್ತದೆ. ತನ್ನ ಜೀವನದ ಅತ್ಯುಚ್ಛ ಮಟ್ಟ ತಲುಪಿ, ನಂತರ ಕ್ರಮೇಣ ಇಳಿದುಬಿಡುವ ಒಪ್ಪೆನ್ಹೈಮರ್ ನ ಕೊನೆಯ ಎರಡು ವರ್ಷಗಳು ಅತ್ಯಂತ ತ್ರಾಸದಾಯಕವಾಗಿದ್ದವು. ಕೊನೆಯ ಕೆಲದಿನ ಕೋಮಾಗೆ ಜಾರಿದ ಒಪ್ಪೆನ್ಹೈಮರ್, ೧೯೬೭ ರಲ್ಲಿ ತನ್ನ ೬೨ರ ವಯಸ್ಸಿನಲ್ಲಿ ಕೊನೆಯುಸಿರೆಳೆಯುತ್ತಾನೆ.
ಇನ್ನು ಸಿನಿಮಾ ವಿಚಾರಕ್ಕೆ ಬರೋಣ. ಮಿಲಿಯಗಟ್ಟಲೇ ಡಾಲರ್ ಗಳನ್ನು ಬಾಚಿದ ‘ಮೆಮೆಂಟೊ’, ‘ಡನ್ಕರ್ಕ್’ ತರದ ಚಿತ್ರಗಳನ್ನು ಮಾಡಿದ ಕ್ರಿಸ್ಟೊಫರ್ ನೊಲನ್, ’ಒಪ್ಪನ್ಹೈಮರ್’ ತರದ ಜೀವನಚರಿತ್ರೆ ಆಧರಿಸಿದ ಚಿತ್ರಗಳನ್ನೂ ಮಾಡುವುದು ಅಚ್ಚರಿಯೇ…ಕಮರ್ಷಿಯಲ್ ಅಂಶಗಳಿಲ್ಲದೇ ವಿಜ್ಞಾನಿಯ ವೈಯಕ್ತಿಕ ಹಾಗೂ ವೃತ್ತಿಜೀವನದ ಏರಿಳಿತ, ತಲ್ಲಣಗಳನ್ನು ಯಥಾವತ್ತಾಗಿ ಚಿತ್ರಿಸುವುದು ಸುಲಭಸಾಧ್ಯವಲ್ಲ. ನೊಲನ್ ಗೆ ಚಿತ್ರ ಮಾಧ್ಯಮದ ಮೇಲಿರುವ ಹಿಡಿತವನ್ನು ಮಾತ್ರವಲ್ಲದೇ ಸಿನಿಮಾ ಮೂಲಕ ’ಜೀವನ ಚರಿತ್ರೆ’ ಪ್ರಕಾರವನ್ನು (genre) ಉತ್ತೇಜನಗೊಳಿಸುವ ಅವರ ಪ್ರಯೋಗಶೀಲತೆ ಮೆಚ್ಚಬೇಕಾಗುತ್ತದೆ. ಒಪ್ಪೆನ್ಹೈಮರ್ ತರದ ಪ್ರಬುದ್ಧ ಮನಸ್ಸುಗಳೂ ಕೂಡಾ ಹೇಗೆ ಸರ್ಕಾರಗಳು ರಚಿಸುವ ಅನಿವಾರ್ಯತೆಯ ವಿಷವರ್ತುಲಕ್ಕೆ ಸಿಲುಕಿ ನರಳುತ್ತವೆ, ಅವನ ಫಿಸಿಕ್ಸ್ ಪ್ರೇಮವನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತದೆ ಎಂಬ ಅಂಶಗಳನ್ನು ನೊಲನ್ ನಿರೂಪಣೆ ಪರಿಣಾಮಕಾರಿಯಾಗಿ ತೋರಿಸುತ್ತದೆ. ಅಪ್ಪಟ ಮಾನವೀಯ ಗುಣದ ನಾಯಕನ ಕಪ್ಪು ಮುಖವನ್ನು ಅನಾವರಣಗೊಳಿಸುತ್ತಾ, ಅವನ ಅಸಹಾಯಕತೆಗೆ ಪ್ರೇಕ್ಷಕ ಮರುಗುವಂತೆ, ಚಿಂತಿಸುವಂತೆ ಮಾಡುವಷ್ಟರ ಮಟ್ಟಿಗೆ ನೊಲನ್ ಯಶಸ್ವಿಯಾಗಿದ್ದಾರೆ. ಆದರೆ ಯುದ್ಧ-ಪ್ರಾಣನಾಶ, ಬಾಂಬ್ ದುಷ್ಪರಿಣಾಮಗಳ ಬಗ್ಗೆ ಚರಿತ್ರೆಯನ್ನು ಓದಿದಾಗ ಮೂಡುವ ಗಾಢ ವಿಷಾದ, ಚಿತ್ರ ನೋಡಿದಾಗ ಮೂಡುವುದಿಲ್ಲ. ಚಿತ್ರಕಥೆಯಲ್ಲಿ ವಿಜ್ಞಾನಿಯ ವಿಚಾರಣೆಗೆ ಹೆಚ್ಚು ಒತ್ತು ಕೊಟ್ಟಿರುವುದು, ಯುದ್ಧ ಯುದ್ಧಾನಂತರದ ಭೀಕರತೆಯನ್ನು ಗ್ರಹಿಸಲು ಸಾಧ್ಯವಾಗಿಲ್ಲ. ಬಾಂಬ್ ಪರೀಕ್ಷೆಯ ದೃಶ್ಯ ಚಿತ್ರದ ಹೈಲೈಟ್. ಕಾಲಿಫೋರ್ನಿಯಾದ ವಿಶ್ವವಿದ್ಯಾಲಯದಲ್ಲಿ ಮೊದಲಬಾರಿಗೆ ಒಬ್ಬನೇ ವಿದ್ಯಾರ್ಥಿಯೊಂದಿಗೆ ಆರಂಭವಾದ ’ಥಿಯರಿಟಿಕಲ್ ಫಿಸಿಕ್ಸ್’ ತರಗತಿ, ಕಾಲಕ್ರಮೇಣ ವಿದ್ಯಾರ್ಥಿಗಳಿಂದ ತುಂಬಿತುಳುಕುವ ದೃಶ್ಯದಲ್ಲಿ, ಬಾಂಬ್ ಸ್ಪೋಟವಾದಾಗ ಹಿನ್ನಲೆ ಸಂಗೀತವಿಲ್ಲದೇ ಸಂಪೂರ್ಣ ನಿಶ್ಶಬ್ದವಾಗಿ ಚಿತ್ರಿಸುವಲ್ಲಿ, ಬಾಂಬ್ ಪರೀಕ್ಷೆ ಯಶಸ್ವಿಯಾದಾಗ ಭಾಷಣ ಮಾಡುತ್ತಾ ಚಪ್ಪಾಳೆಯ ಸುರಿಮಳೆಗರೆಯುತ್ತಾ ಮೈಮರೆತ ತನ್ನ ಸಹ-ಅಮೆರಿಕನ್ನರಲ್ಲಿಯೇ ಯುದ್ಧದ ಬಲಿಪಶುಗಳನ್ನು ಕಲ್ಪಿಸಿಕೊಳ್ಳುವಲ್ಲಿ, ವರ್ಣ-ಕಪ್ಪುಬಿಳುಪು ದೃಶ್ಯಗಳನ್ನು ಅರ್ಥವತ್ತಾಗಿ ಸಂಯೋಜಿಸಿರುವಲ್ಲಿ ನೊಲನ್ ರ ಸೂಕ್ಷ್ಮತೆ ಮೆಚ್ಚಿಗೆಯಾಗುತ್ತದೆ.
ಒಪ್ಪೆನ್ಹೈಮರ್ ಆಗಿ ಸಿಲಿಯನ್ ಮರ್ಫ಼ಿ, ಲೆವಿಸ್ ಸ್ಟ್ರಾಸ್ ಆಗಿ ರಾಬರ್ಟ್ ಡೌನಿ (ಜೂನಿಯರ್), ಮಿಲಿಟರಿ ಮುಖ್ಯಸ್ಥ ಲೆಸ್ಲೀ ಗ್ರೋವ್ಸ್ ಆಗಿ ಮ್ಯಾಟ್ ಡಮನ್, ಹಾಗೂ ಒಪ್ಪೆನ್ಹೈಮರ್ ನ ಪತ್ನಿ ಕ್ಯಾಥರೀನ್ ಆಗಿ ಎಮಿಲಿ ಬ್ಲಂಟ್,ಐನ್ ಸ್ಟೀನ್ ಆಗಿ ಸ್ಕಾಟಿಶ್ ನಟ ಟಾಮ್ ಕೊಂಟಿ, ಬರಿಯ ಅಭಿನಯಿಸಿಲ್ಲ…ಪಾತ್ರವೇ ಆಗಿಹೋಗಿದ್ದಾರೆ. ಮರ್ಫ಼ಿ ಮತ್ತು ರಾಬರ್ಟ್ ಡೌನಿ ಪೈಪೋಟಿಗೆ ಬಿದ್ದವರಂತೆ ಅಭಿನಯಿಸಿದ್ದಾರೆ. ಚಿತ್ರದ ಪರೋಕ್ಷ ನಾಯಕಿ ಬಹುಶಃ ಸಂಕಲನಕಾರ್ತಿ ಜೆನ್ನಿಫ಼ೆರ್ ಲೇಮ್. ಒಪ್ಪೆನ್ಹೈಮರ್ ನಂತಹ ನಿಜ ಜೀವನ ಘಟನೆಗಳನ್ನು ನಾನ್-ಲೀನಿಯರ್ ತಂತ್ರದ ಮೂಲಕ ಹೇಳುವ ವಿಶಿಷ್ಟ ಪ್ರಯೋಗಕ್ಕೆ ಒಡ್ಡಿಕೊಂಡ ಜೆನ್ನಿಫ಼ೆರ್ ರ ಸಂಕಲನ ಇಡೀ ಚಿತ್ರವನ್ನು ಜೀವಂತವಾಗಿ ಇಟ್ಟಿದೆ.
ಜೀವಪರ – ಯುದ್ಧ ವಿರೋಧಿ ಮನಸ್ಸುಗಳು ಬೆಳೆಯಬೇಕಾದ ತುರ್ತಿರುವ ಇಂದಿನ ದಿನಗಳಲ್ಲಿ ಬಾಂಬ್ ಪರೀಕ್ಷೆಯ ದೃಶ್ಯವೊಂದನ್ನು ಚೇತೋಹಾರಿಯಾಗಿ ಚಿತ್ರಿಸಿ ‘ಥ್ರಿಲ್’ ಕೊಡುವ ನಿರ್ದೇಶಕರು ತಮ್ಮ ನಿರ್ದೇಶನಾ ಕೌಶಲಕ್ಕೆ ಸಾಣೆಹಿಡಿದುಕೊಳ್ಳಬೇಕಿದೆ. ಮತ್ತಷ್ಟು ಸೂಕ್ಶ್ಮಗೊಳಿಸಬೇಕಾಗುತ್ತದೆ.
ಚಿತ್ರಗಳು:
ಕಪ್ಪು-ಬಿಳುಪಿನ ಸಂಯೋಜನೆ: ಒಪ್ಪೆನ್ಹೈಮರ್ ನ ವಿಚಾರಣೆ.
ವರ್ಣ:
ಚಿತ್ರೀಕರಣದಲ್ಲಿ ನೊಲನ್ ಮತ್ತು ತಂಡ
- ರಾಘವನ್ ಚಕ್ರವರ್ತಿ
