ಲೇಖಕಿ ಹೆಚ್ ವಿ ಮೀನಾ ಅವರ “ಎವಿಡೆನ್ಸ್ ನಂಬರ್ 5/A” ಕೃತಿಯಲ್ಲಿ ೧೬೮ ಪುಟಗಳಷ್ಟಿದ್ದು, ಈ ಕೃತಿಯನ್ನು ಓದುವಾಗ ಒಂದು ಒಳ್ಳೆ ಸಿನಿಮಾ ನೋಡಿದ ಅನುಭವವನ್ನು ಕೊಡುತ್ತದೆ. ಈ ಕೃತಿಯ ಕುರಿತು ನನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಎವಿಡೆನ್ಸ್ ನಂಬರ್ 5/A
ಲೇಖಕರು : ಹೆಚ್ ವಿ ಮೀನಾ
ಪ್ರಕಾರ : ಪತ್ತೇದಾರಿ
ಬೆಲೆ : ೨೦೦.೦೦
ಪ್ರಕಾಶಕರು : ಸೆಂಚುರಿ ಪ್ರಕಾಶನ
ಖರೀದಿಗಾಗಿ : 97311 11234
ಹೆಣ್ಣು ಗಂಡಿನಿಂದ ಭದ್ರತೆ, ಹಿಡಿ ಪ್ರೀತಿ ಬಯಸುತ್ತಾಳೆ. ಆದರೆ ಗಂಡು ಹೆಣ್ಣಿನಿಂದ ಕಾಮವನ್ನು ಬಯಸುತ್ತಾನೆ ಎನ್ನುವ ಮಾತು “ಎವಿಡೆನ್ಸ್ ನಂಬರ್ 5/A” ಕೃತಿ ಓದಿದಾಗ ಬಲವಾಗುತ್ತದೆ.
ಪತ್ತೇದಾರಿ ಕಾದಂಬರಿಗೆ ಅಧ್ಯಯನ, ಅನುಭವಗಳು ಬೇಕು ಹಾಗಾಗಿ ಅದನ್ನು ಬರೆಯುವ ಸಾಮರ್ಥ್ಯವಿರುವುದು ಪುರುಷ ಲೇಖಕರಲ್ಲಿ ಮಾತ್ರ ಎನ್ನುವ ಮಾತಿಗೆ ವಿರುದ್ದವೇನ್ನುವಂತೆ ಹೆಚ್ ವಿ ಮೀನಾ ಅವರ ‘ಎವಿಡೆನ್ಸ್ ನಂಬರ್ 5/A’ ಕೃತಿಯಾಗಿದೆ. ಈ ಕೃತಿಯಲ್ಲಿ ಅವರು ಕತೆಯನ್ನು ಪೋಣಿಸಿದ ರೀತಿ, ಪಾತ್ರಗಳ ಆಗಮನ, ಕತೆಯಲ್ಲಿ ಬರುವ ರೋಚಕತೆಯನ್ನು ಹುಟ್ಟು ಹಾಕುವ ಮೂಲಕ ಯಾವ ಪುರುಷ ಲೇಖಕರಿಗಿಂತ ಮಹಿಳಾ ಲೇಖಕಿಯರೆನ್ನು ಕಮ್ಮಿ ಇಲ್ಲಾ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ಈಗಾಗಲೇ ಮೀನಾ ಅವರು ಐದು ಕೃತಿಗಳನ್ನು ರಚಿಸಿದ್ದು, ಅದರಲ್ಲಿ ‘ಎವಿಡೆನ್ಸ್ ನಂಬರ್ 5/A’ ಅವರ ಮೊದಲ ಪತ್ತೇದಾರಿ ಕಾದಂಬರಿಯಾಗಿದೆ. ಈ ಕಾದಂಬರಿಯಲ್ಲಿ ಓದುಗರಿಗೆ ಕುತೂಹಲ ತಿರುವನ್ನು ಲೇಖಕಿ ನೀಡಿದ್ದಾರೆ.
ಕತೆ ಪೂರ್ತಿ ನಾನು ಹೇಳಲಾರೆ. ಓದುಗರಲ್ಲಿ ಒಂದಷ್ಟು ಕುತೂಹಲವನ್ನು ಬಿಟ್ಟು ಸ್ವಲ್ಪ ವಿವರಣೆ ನೀಡುತ್ತೇನೆ. ಸುಧಾ ಮತ್ತು ಮಧುರ ಇಬ್ಬರೂ ಆಪ್ತ ಸ್ನೇಹಿತರಿರುತ್ತಾರೆ. ಮಧುರ ಮಕ್ಕಳು, ಗಂಡನೊಂದಿಗೆ ಸುಖಿಯಾಗಿರುತ್ತಾಳೆ. ಸುಧಾ ವಿಧವೆ ಹೆಣ್ಣುಮಗಳು. ಒತ್ತಡದ ಬದುಕಿನಿಂದ ಒಂದು ವಿರಾಮ ತಗೆದುಕೊಂಡು ಇಬ್ಬರೂ ಸ್ನೇಹಿತೆಯರು ಆಗುಂಬೆಯತ್ತ ಬಸ್ ನಲ್ಲಿ ಪ್ರಯಾಣ ಬೆಳೆಸುತ್ತಾರೆ. ರಾತ್ರಿಯ ಸಮಯ, ಸ್ಲೀಪರ್ ಬಸ್ ನಲ್ಲಿ ಮಧುರ ಕಣ್ಣಿಗೆ ಬೀಳುವ ಬೂದು ಬಣ್ಣದ ಜಾಕೆಟ್ ವ್ಯಕ್ತಿಯಿಂದ ಕುತೂಹಲ ಶುರುವಾಗುತ್ತದೆ. ಇನ್ನೊಂದೆಡೆ ಪೊಲೀಸ್ ಸ್ಟೇಷನ್ ಸಮೀಪದಲ್ಲಿ ಹೆಣ್ಣಿನ ಕೂಗು ಕೇಳಿಸುತ್ತದೆ. ಆ ಧ್ವನಿಯ ಜಾಡು ಹಿಡಿದು ಹೊರಡುತ್ತಾರೆ ಎಸ್ ಐ ಸುರೇಶ . ಮುಂದೆ ಅದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಎನ್ನುವುದು ಕೃತಿ ಓದಿದರೆ ಅರ್ಥವಾಗುವುದು.
ಮೀನಾ ಅವರು ಈ ಕಾದಂಬರಿಯಲ್ಲಿ ಕತೆಯನ್ನು ಎರಡು ಎಳೆಗಳನ್ನಾಗಿ ಸಿದ್ಧ ಮಾಡಿಕೊಂಡಿದ್ದು, ಆ ಎರಡು ಎಳೆಯ ಸುತ್ತ ಕತೆ ಹೆಣಿಯುತ್ತಾ ಹೋಗಿ ಮುಂದೆ ಆ ಎರಡು ಎಳೆಗಳು ಒಂದಾಗಿ ನಿಲ್ಲಿಸುವ ಅವರ ಜಾಣತನ ಮೆಚ್ಚುವಂತದ್ದು.
ಈಗಿನ ವಾಸ್ತವಕ್ಕೆ ಹತ್ತಿರವಾದ ಕತೆಯನ್ನು ಮೀನಾ ಅವರು ಆಯ್ಕೆ ಮಾಡಿಕೊಂಡಿದ್ದಾರೆ. ರಾತ್ರಿ ಬಸ್ಸಿನಲ್ಲಿ ಓಡಾಡುವ ಒಂಟಿ ಹೆಣ್ಣುಮಕ್ಕಳು, ಪ್ರೀತಿಗೆ ಹಾತೊರೆಯುವ ಹೆಣ್ಣುಮಕ್ಕಳು, ಹಿಂದೆ ಮುಂದೆ ತಿಳಿಯದೆ ಅಪರಿಚಿತ ವ್ಯಕ್ತಿಯನ್ನು ಪ್ರೀತಿಸುವ ಹೆಣ್ಣುಮಕ್ಕಳು, ಅಂತರ್ಜಾಲದಲ್ಲಿ ಮಾರು ಹೋಗುವ ಮುನ್ನ ಹೆಣ್ಣುಮಕ್ಕಳು ಈ ಕೃತಿಯನ್ನು ಓದಲೇ ಬೇಕು.
ಈ ಕೃತಿ ಓದುವಾಗ ಒಂದು ಕ್ಷಣ ನಾನು ರಾತ್ರಿ ಹೊತ್ತು ಪ್ರಯಾಣಿಸುತ್ತಿದ್ದದ್ದು ನೆನಪಿಗೆ ಬಂತು. ಇಂತಹ ಅನುಭವಗಳು ನನಗೆ ಅಂದು ಗಟ್ಟಿಸದೆ ಇರಬಹುದು. ಒಂದು ವೇಳೆ ಇಂತಹ ವ್ಯಕ್ತಿಗಳು ಆ ಸಮಯದಲ್ಲಿ ಸಿಕ್ಕಿದ್ದರೇ… ಎಂದು ನೆನೆದು ಬೆವರಿದೆ. ಈ ತರ ವಾಸ್ತವ ಅನುಭವವನ್ನು ಕೃತಿ ಓದುವಾಗ ಕೊಡುತ್ತದೆ. ಇದೊಂದು ಹೆಣ್ಣುಮಕ್ಕಳಿಗೆ ಮುನ್ನೆಚ್ಚರಿಕೆ ಕೃತಿಯಾಗಿದೆ ಎಂದರೆ ತಪ್ಪಾಗಲಾರದು.

ಹೆಣ್ಣು ಮೈತುಂಬಾ ಕಣ್ಣಾಗಿಸಿಕೊಂಡರು ಒಮ್ಮೊಮ್ಮೆ ಯಾಮಾರಿ ಬಿಡುತ್ತಾಳೆ. ಇದಕ್ಕೆ ಕಾರಣ ಮುಖವಾಡ ಧರಿಸಿದ ಕಾಮುಕ ವ್ಯಕ್ತಿಗಳು ಕಣ್ಣಿಗೆ, ಮನಕ್ಕೆ ಕಾಣದೆ ಇರುವುದು. ಅಂತಹ ಕಾಮುಕರು ತಮ್ಮ ಆಸೆ ಈಡೇರಿಕೆಗಾಗಿ ಹೆಣ್ಣಿನ ಮುಂದೆ ಹೇಗೆಲ್ಲ ಮುಖವಾಡ ಧರಿಸುತ್ತಾರೆ. ಹೆಣ್ಣು ಬಲೆಗೆ ಬಿದ್ದಮೇಲೆ ಅವಳ ಕತೆ ಏನಾಗುತ್ತೆ ಎನ್ನುವುದನ್ನು ಓದುಗರಲ್ಲಿ ಕ್ಷಣ ಕ್ಷಣಕ್ಕೂ ಕುತೂಹಲ ಹುಟ್ಟಿಸುವುದರ ಜೊತೆಗೆ ಹೆಣ್ಣುಮಕ್ಕಳಲ್ಲಿ ಜಾಗೃತಿ ಮೂಡಿಸಿದ್ದಾರೆ ಲೇಖಕಿ.
ಮೀನಾ ಅವರ ಬರವಣಿಗೆ ಮಕ್ಕಳ ಕತೆಯಿಂದ ಆರಂಭವಾಗಿ, ಪತ್ತೇದಾರಿ ಕಾದಂಬರಿವರೆಗೂ ಬಂದಿದೆ ಎಂದರೆ ಅವರ ಬರವಣಿಗೆ ಹಾದಿ ಪಕ್ವವಾಗಿದೆ. ಪತ್ತೇದಾರಿ ಕಾದಂಬರಿಗೆ ಸಾಕಷ್ಟು ರೋಚಕ ತಿರುವುಗಳು ಬೇಕು, ವಿಷಯ ಸಂಗ್ರಹವಿಲ್ಲದೇ ಬರೆಯುವುದು ಕಷ್ಟ. ಲೇಖಕಿ ಕತೆಗೆ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಂಡದ್ದು ಅವರ ಕೃತಿಯಲ್ಲಿ ಎದ್ದು ಕಾಣುತ್ತದೆ. ಮತ್ತು ಸರಳ ಭಾಷೆ ಕೃತಿಯಲ್ಲಿ ಇರುವುದರಿಂದ ಕೃತಿ ಓದುವಾಗ ಸುಲಭವಾಗಿ ಓದುಗನ ಗಮನ ಸೆಳೆಯುತ್ತದೆ. ಹೆಜ್ಜೆ ಹೆಜ್ಜೆಗೂ ತಲ್ಲಣ ಮೂಡಿಸುವ ಈ ಕತೆ ಎಲ್ಲಿಯೂ ಓದುಗರನ್ನು ಬೇಸರಿಸುವುದಿಲ್ಲ.
ಕೊನೆಯದಾಗಿ ಈ ಕೃತಿಯ ಬಗ್ಗೆ ಹೇಳುವುದಾದರೆ ಮೀನಾ ಅವರ “ಎವಿಡೆನ್ಸ್ ನಂಬರ್ 5/A” ನನ್ನ ಮನಗೆದ್ದಿದೆ. ಈ ಕೃತಿ ಎಲ್ಲೆಡೆ ತಲುಪಿದರೆ ಲೇಖಕಿಗೆ ಇನ್ನೊಂದು ಕತೆ ಬರೆಯಲು ಹುಮ್ಮಸ್ಸು ಸಿಗುತ್ತದೆ. ಮೀನಾ ಅವರು ಪ್ರಬುದ್ಧ ಬರಹಗಾರ್ತಿ ಎನ್ನುವುದರಲ್ಲಿ ಸಂದೇಹವೇ ಇಲ್ಲಾ. ಅವರ ಬರಹ ನಿಂತ ನಿರಾಗದೆ ಹರಿಯುವ ತೊರೆಯಂತೆ ನಿರಂತರವಾಗಿ ಸಾಗಲಿ ಎನ್ನುವುದೇ ನನ್ನ ಆಶಯ.
- ಶಾಲಿನಿ ಹೂಲಿ ಪ್ರದೀಪ್ – ಆಕೃತಿಕನ್ನಡ ಸಂಪಾದಕಿ,
