ಬದುಕಿಗೊಂದು ಸೆಲೆ (ಭಾಗ-೩೧)

ಪುಟ್ಟ ಬಾಲಕನೊಬ್ಬ ಪಕ್ಕದ ಮನೆಗೆ ಬಂದು ನಿಮ್ಮನೇಲಿ ಮನೆಯಲ್ಲಿನ ಹಣ್ಣು, ಸಿಹಿ ತಿಂಡಿಗಳನ್ನೂ ತಿಂದು ಕೆಳಕ್ಕೆಲ್ಲಾ ಹರವಾಡಿ ಹೋಗುತ್ತಿದ್ದ, ಇದರಿಂದ ಮನೆಯ ಯಜಮಾನಿ ಬೇಸತ್ತು ಹೋಗಿದ್ದರು. ಮಕ್ಕಳಲ್ಲಿ ಈ ರೀತಿಯ ಅತಿರೇಕದ ವರ್ತನೆ ಕಂಡು ಬಂದಾಗ ಅವರನ್ನು ತಿದ್ದುವ ನಿಟ್ಟಿನಲ್ಲಿ ಸೂಕ್ಷ್ಮವಾಗಿ ತಿಳಿ ಹೇಳಬೇಕು. ವೀಣಾ ಹೇಮಂತ್ ಗೌಡ ಪಾಟೀಲ್ ಅವರು ‘ನಿಮ್ಮ ಮಕ್ಕಳ ವರ್ತನೆ ಮಿತಿಯಲ್ಲಿರಲಿ… ಯಾವುದೂ ಅತಿಯಾಗದಿರಲಿ ’ ಕುರಿತು ಇಂದಿನ ಅಂಕಣದಲ್ಲಿ, ತಪ್ಪದೆ ಮುಂದೆ ಓದಿ…

ತನ್ನ ತಾಯಿ ಕೊಟ್ಟ ವಸ್ತುವನ್ನು ಹಿಡಿದು ತಾಯಿಯ ಸ್ನೇಹಿತೆಯ ಮನೆಗೆ ಬಂದ ಬಾಲಕಿಯನ್ನು ಆಕೆ ಸ್ವಾಗತಿಸಿ ಕೂಡಿಸಿ ಮಾತನಾಡಿದರು. ಊಟದ ಸಮಯಕ್ಕೆ ಬಾಲಕಿಗೆ ಕೂಡ ತನ್ನೊಂದಿಗೆ ಊಟ ಮಾಡಲು ಒತ್ತಾಯಿಸಿದರು. ಊಟದ ನಂತರ ಮತ್ತಷ್ಟು ಹೊತ್ತು ಮಾತಾಡಿ ಆಕೆ ಮನೆಗೆ ಮರಳಬಹುದು ಎಂಬ ನಿರೀಕ್ಷೆ ಅವರದಾಗಿತ್ತು. ಆದರೆ ಆಕೆ ಅಲ್ಲಿಂದ ಹೊರಡುವ ಲಕ್ಷಣಗಳೇ ಕಾಣಲಿಲ್ಲ. ಒಂದರ ಹಿಂದೆ ಮತ್ತೊಂದರಂತೆ ತನ್ನ ಶಾಲೆಯಲ್ಲಿ ನಡೆದ ಘಟನೆಗಳನ್ನು ಆ ಬಾಲಕಿ ಹೇಳತೊಡಗಿದಳು. ಸಾಕಷ್ಟು ಸಮಯ ಕೇಳಿದ ನಂತರ ಬೇಸರಗೊಂಡ ಮನೆಯ ಯಜಮಾನಿ ‘ಪುಟ್ಟಿ, ಅಮ್ಮ ಕಾಯುತ್ತಿರಬಹುದು’ ಎಂದು ಸೂಕ್ಷ್ಮವಾಗಿ ಆಕೆಗೆ ಮನೆಗೆ ಹೋಗಲು ಸೂಚಿಸಿದರು.

” ಅಯ್ಯೋ! ಬಿಡಿ ಆಂಟಿ… ಅಮ್ಮ ಈಗಾಗ್ಲೇ ಮಲ್ಕೊಂಡು ನಿದ್ದೆ ಮಾಡ್ತಿರ್ತಾರೆ, ನನಗೋಸ್ಕರ ಕಾಯೋದು ಅಷ್ಟರಲ್ಲೇ ಇದೆ” ಎಂದು ಹೇಳಿದ ಆ ಬಾಲಕಿ. ಮತ್ತೆ ತನ್ನ ಮಾತನ್ನು ಮುಂದುವರೆಸಿದಳು. ಈಗಾಗಲೇ ಇಳಿ ಮಧ್ಯಾಹ್ನದ ಹೊತ್ತಾಗಿದ್ದು ಮುಂಜಾನೆಯಿಂದ ಕೆಲಸ ಮಾಡಿ ದಣಿದ ಆಕೆ ನನಗೂ ತುಂಬ ನಿದ್ದೆ ಬರ್ತಾ ಇದೆ, ನಾನು ಸ್ವಲ್ಪ ಮಲಗಿಕೊಳ್ಳುತ್ತೇನೆ” ಎಂದು ಹೇಳಿ ಈಗಲಾದರೂ ಆ ಬಾಲಕಿ ಮನೆಗೆ ಹೋಗ್ತೀನಿ ಎನ್ನಬಹುದು ಎಂಬ ಆಶಯದಿಂದ ಅಲ್ಲಿಯೇ ಇದ್ದ ದಿವಾನ್ ಕಾಟಿನ ಮೇಲೆ ಅಡ್ಡಾದರು.

” ನೀವು ಆರಾಮಾಗಿ ಮಲ್ಕೊಳ್ಳಿ ಆಂಟಿ, ನಾನು ನಿಮ್ಮ ಮನೆಯಲ್ಲಿ ಅಕ್ಕ ಮತ್ತು ಅಣ್ಣನ ಕಪಾಟುಗಳಲ್ಲಿ ಏನೇನು ಜೋಡಿಸಿದ್ದಾರೆ ಎನ್ನುವುದನ್ನು ನೋಡ್ತೀನಿ” ಎಂದು ಹೇಳಿದ ಆಕೆ ಸೀದಾ ಮಕ್ಕಳ ಕೋಣೆಗೆ ತೆರಳಿ ಅವರ ಕಪಾಟುಗಳನ್ನು ಕೂಲಂಕುಶವಾಗಿ ಪರಿಶೀಲಿಸಲು ಆರಂಭಿಸಿದಳು. ಆಕೆಯನ್ನು ತಡೆಯಲೂ ಆಗದೇ, ಜೋರಾಗಿ ಗದರಿಸಲೂ ಆಗದ ಸಂದಿಗ್ಧಕ್ಕೆ ಸಿಲುಕಿದ ಮನೆಯೊಡತಿ ಆಕೆಯ ಹಿಂದೆ ತೆರಳಿ ಮಕ್ಕಳ ಕೋಣೆಯ ಮಂಚದ ಮೇಲೆ ಸುಳ್ಳು ನಿದ್ದೆಯ ನೆವ ಮಾಡಿ ಕಣ್ಣು ಮುಚ್ಚಿದರು.

ಆ ಬಾಲಕಿ ಆರಾಮಾಗಿ ತಪಾಟಿನ ಅರೆಗಳನ್ನು ಒಂದೊಂದಾಗಿ ತೆರೆದು ಅದರಲ್ಲಿ ಜೋಡಿಸಿದ ಸಾಮಾನುಗಳನ್ನು ಎತ್ತಿ, ಮುಟ್ಟಿ ನೋಡಿ, ತನ್ನ ಮೈ ಮೇಲೆ ಧರಿಸಿ ಅಲ್ಲಿಯೇ ಇದ್ದ ಕನ್ನಡಿಯಲ್ಲಿ ನೋಡಿಕೊಳ್ಳುವ ಮೂಲಕ ಮತ್ತೆ ಅವುಗಳನ್ನು ಬಿಚ್ಚಿ ಸ್ವಸ್ಥಾನಕ್ಕೆ ಸೇರಿಸುವ ಕೆಲಸದಲ್ಲಿ ಮಗ್ನಳಾದಳು. ಅದೆಷ್ಟೋ ಹೊತ್ತಿನವರೆಗೆ ಬಾಲಕಿಯ ಈ ಹುಚ್ಚಾಟಗಳನ್ನು ತಡೆಯಲು ಸಾಧ್ಯವಾಗದೆ ಮೌನವಾಗಿ ಸಹಿಸಿದ ಮನೆಯ ಯಜಮಾನಿ ಮುಂದಿನ ದಿನಗಳಲ್ಲಿ ಆ ಬಾಲಕಿ ತಮ್ಮ ಮನೆಗೆ ಬರುವ ಮುನ್ನವೇ ಮನೆಯ ಎಲ್ಲಾ ಕಪಾಟುಗಳ ಕೀಲಿ ಹಾಕಿ ಇಡುವುದನ್ನು ರೂಢಿಸಿಕೊಂಡರು. ಹೊರಗಿಂದಲೇ ಆ ಹುಡುಗಿಯನ್ನು ಮಾತನಾಡಿಸಿ ಉಪಾಯವಾಗಿ ಸಾಗ ಹಾಕುವುದನ್ನು ಕೂಡ ಕಲಿತುಕೊಂಡರು.

ಮತ್ತೊಂದು ಘಟನೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದು ತಮ್ಮ ಬಳಿ ಚಿಕಿತ್ಸೆಗಾಗಿ ಬಂದ ಆ ಹುಡುಗನನ್ನು ವೈದ್ಯರು ತುಸು ಹೆಚ್ಛೇ ಕನಿಕರ ಮತ್ತು ಕಾಳಜಿಯಿಂದ ಮಾತನಾಡಿಸಿದರು. ಮನೆಯಲ್ಲಿಯ ಒಂದು ಕೋಣೆಯಲ್ಲಿ ಚಿಕಿತ್ಸೆ ನೀಡುತ್ತಿದ್ದ ಆ ವೈದ್ಯರ ಜೊತೆಗೆ ಉಂಟಾದ ಆತ್ಮೀಯತೆಯ ಪರಿಣಾಮವಾಗಿ ಆ ಬಾಲಕ ಹೊತ್ತುಗೊತ್ತಿಲ್ಲದೆ ಅವರ ಕ್ಲಿನಿಕ್ಕಿಗೆ ಬಂದು ಕೂಡಲಾರಂಭಿಸಿದ. ರೋಗಿಗಳು ಇದ್ದಾಗಲೇನೋ ಸರಿ, ಅವರು ಇಲ್ಲದೇ ಹೋದಾಗ ಬಾಲಕನ ಅಸಂಬದ್ಧ ಹರಟೆಗಳನ್ನು ಪ್ರಲಾಪಗಳನ್ನು ಕೇಳುವ ಸು(ಕು)ಯೋಗ ವೈದ್ಯರದಾಯಿತು. ಅದೆಷ್ಟೇ ಪ್ರಯತ್ನಿಸಿದರೂ ಅಪರೋಕ್ಷವಾಗಿ ತಿಳಿಸಿ ಹೇಳಿದರೂ ಅರಿತುಕೊಳ್ಳದ ಬಾಲಕನ ನಡೆಯಿಂದಾಗಿ ವೈದ್ಯರಿಗೆ ಆ ಬಾಲಕ ಉಗುಳಲೂ ಬಾರದ ನುಂಗಲೂ ಬಾರದ ಬಿಸಿ ತುಪ್ಪದಂತೆ ಭಾಸವಾದನು. ತಮ್ಮ ಕೆಲಸ ಕಾರ್ಯಗಳಿಗೆ ಹಾಗೂ ಸಂಪೂರ್ಣ ವೈಯುಕ್ತಿಕತೆಗೆ ಧಕ್ಕೆ ಉಂಟಾಗಿ ಯಾವಾಗ ಈ ಬಾಲಕನಿಂದ ಮುಕ್ತಿ ಪಡೆಯುವೆನೋ ಎಂಬ ಹಪಹಪಿ ವೈದ್ಯರದಾಯಿತು.

ಮಗುವಿನ ತೊಂದರೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯಾದ ವೈದ್ಯರು ತಮ್ಮ ವೈಯುಕ್ತಿಕ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವಲ್ಲಿಗೆ ಪ್ರಸಂಗ ಪರ್ಯಾವಸಾನವಾಗಿತ್ತು. ನಿಮ್ಮಿಂದಲೇ ನಮ್ಮ ಮಗ ಗುಣವಾಗಿದ್ದು ಎಂಬ ಕಾರಣವನ್ನು ಒಡ್ಡಿ ಆ ಮಗುವಿನ ಪಾಲಕರು ಕೂಡ ಆ ಬಾಲಕನನ್ನು ಆ ವೈದ್ಯರ ದತ್ತ ಪುತ್ರ ಎಂದು ತಾವೇ ಹೇಳಲಾರಂಭಿಸಿದರು. ಅವರೊಂದಿಗೆ ಇದ್ದರೆ ತಮ್ಮ ಮಗ ಸಂಪೂರ್ಣ ಆರೋಗ್ಯವಂತನಾಗಿರುತ್ತಾನೆ ಎಂಬ ಭಾವ ಅವರಲ್ಲಿತ್ತೇ ಹೊರತು ಅವರಿಗೆ ಅನಾನುಕೂಲವಾಗಬಹುದು ಎಂದು ಯೋಚಿಸಲೇ ಇಲ್ಲ.

ಖುದ್ದು ತಮ್ಮ ಪತ್ನಿ ಮತ್ತು ತಮ್ಮ ಮಕ್ಕಳಿಗೆ ಕೂಡ ನೀಡಲು ಸಮಯವಿಲ್ಲದಂತೆ ಅವರನ್ನು ಆ ಬಾಲಕ ಆಕ್ರಮಿಸಿಕೊಳ್ಳತೊಡಗಿದ. ಬೇಕೆಂದೇ ಆ ಬಾಲಕನನ್ನು ವೈದ್ಯರು ನಿರ್ಲಕ್ಷಿಸಿದರೂ ಆತ ಅದನ್ನು ಪರಿಗಣಿಸಲೇ ಇಲ್ಲ. ಮತ್ತೆ ಮತ್ತೆ ತನ್ನ ಬದುಕಿನಲ್ಲಿ ಅವರ ಅವಶ್ಯಕತೆಯ ಕುರಿತು ಹೇಳುತ್ತಾ ತನ್ನ ಮುಂದಿನ ಬದುಕಿನಲ್ಲಿ ತನಗೆ ಹುಟ್ಟುವ ಮಕ್ಕಳನ್ನು ಅವರೇ ಸಾಕ ಬೇಕೆಂದು, ಅವರು ತನ್ನ ಮಾತನ್ನು ಕೇಳಬೇಕು, ನನ್ನ ತೊಂದರೆಗಳಿಗೆ ಪರಿಹಾರ ಹೇಳಬೇಕು ಎಂದು ವಿಪರೀತ ಹಕ್ಕು ಚಲಾಯಿಸಲು ಆರಂಭಿಸಿದ. ಇದೆಲ್ಲವೂ ಆ ವೈದ್ಯರಿಗೆ ಭರಿಸಲಾಗದ ಕಿರಿಕಿರಿ ಉಂಟು ಮಾಡಿ ಅವರ ಮಾನಸಿಕ ಶಾಂತಿಗೆ ಭಂಗವನ್ನು ತಂದಿತು.

ಮತ್ತೊಂದು ಪ್ರಕರಣದಲ್ಲಿ ತನ್ನ ತಾಯಿಯ ಸ್ನೇಹಿತೆಯ ಮನೆಗೆ ಬಂದ ಹದಿಹರೆಯದ ಬಾಲಕಿ ಅವರ ಮನೆಯಲ್ಲಿ ತನಗೆ ಇಷ್ಟವಾದ ಅವರ ಮಗಳ ಕಿವಿಯೋಲೆ, ಸರ, ಬೆಲ್ಟ್, ಸ್ಕ್ರಾಪ್ ಬುಕ್ ಮತ್ತು ಇತರ ವಸ್ತುಗಳನ್ನು ತನ್ನ ಚೀಲಕ್ಕೆ ತುಂಬಿಕೊಂಡಳು. ಈ ಕುರಿತು ಸ್ನೇಹಿತೆಯ ಮಗಳು “ನನ್ನ ವಸ್ತುಗಳನ್ನು ಮುಟ್ಟಲು ನಿನಗಾರು ಪರ್ಮಿಷನ್ ಕೊಟ್ಟರು?” ಎಂದು
ಬೇಸರದಿಂದ ಪ್ರಶ್ನಿಸಿದಾಗ “ಅಯ್ಯೋ ಅಕ್ಕ, ಅದಕ್ಕೆ ಯಾಕೆ ಅಷ್ಟು ತಲೆಕೆಡಿಸಿಕೊಳ್ತೀಯಾ ನನಗೆ ಇಷ್ಟ ಆಯ್ತು ಅದಕ್ಕೆ ತಗೊಂಡೆ” ಎಂಬ ಭಂಡತನದ ಉತ್ತರ ನೀಡಿದಳು. ಸ್ನೇಹಿತೆ ಮತ್ತು ಆಕೆಯ ಮಗಳು ತಮ್ಮ ಮನೆಗೆ ತೆರಳಿದ ನಂತರ ತನ್ನ ವಸ್ತುಗಳಲ್ಲಿ ಕೆಲವನ್ನು ಈಗಾಗಲೇ ಆ ಹುಡುಗಿಯಿಂದ ಪಡೆದುಕೊಂಡಿದ್ದ ಆ ಮನೆಯ ಮಗಳು “ಇನ್ನೊಮ್ಮೆ ಅವರು ನಮ್ಮ ಮನೆಗೆ ಬಂದರೆ ನಾನಂತೂ ಆ ಹುಡುಗಿಯನ್ನು ನನ್ನ ಕೋಣೆಗೆ ಸೇರಿಸುವುದಿಲ್ಲ. ಪರ್ಸನಲ್ ಸ್ಪೇಸ್ ಅನ್ನುವ ಪದದ ಅರ್ಥ ಆದರೂ ಆ ಹುಡುಗಿಗೆ ಗೊತ್ತಿದೆಯಾ ಅಮ್ಮ! “ಎಂದು ತಾಯಿಯ ಮೇಲೆ ಹರಿಹಾಯ್ದಳು.

ಮತ್ತೊಂದು ಘಟನೆಯಲ್ಲಿ ಸಾಕಷ್ಟು ಅನುಕೂಲವಂತರ ಮನೆಯ ಆ ಮಗು ” ಅಯ್ಯೋ! ನಿಮ್ಮನೇಲಿ ಇಷ್ಟೊಂದು ಹಣ್ಣುಗಳಿವೆ, ಸಿಹಿ ತಿಂಡಿಗಳಿವೆ ಚಾಕಲೇಟಿವೆ ನನ್ನಮ್ಮ ಇದು ಯಾವುದನ್ನು ಇಡೋದಿಲ್ಲ ಇಟ್ಟರೂ ಕೆಲವೇ ನಿಮಿಷಗಳಲ್ಲಿ ಖಾಲಿ ಆಗಿಬಿಡುತ್ತೆ ಎಂದು ಹೇಳಿದ ಆ ಪುಟ್ಟ ಬಾಲಕ ತನಗೆ ಬೇಕಾದಷ್ಟನ್ನು ತಿಂದು, ಒಂದಷ್ಟನ್ನು ಹರವಿ ಇನ್ನೊಂದಷ್ಟನ್ನು ಚೆಲ್ಲಿ ಹೋಗುತ್ತಿದ್ದನು. ನಿರಂತರವಾಗಿ ಆ ಬಾಲಕನ ಈ ರೀತಿಯ ವರ್ತನೆಯಿಂದ ಮನೆಯ ಯಜಮಾನಿ ಬೇಸತ್ತು ಹೋಗಿದ್ದರು.

ಮತ್ತೆ ಕೆಲಬಾರಿ ಬಾಲಕ ನನಗೆ ನೀವು ಅಂದ್ರೆ ತುಂಬಾ ಇಷ್ಟ. ನೀವೇ ನನ್ನ ಅಮ್ಮ ಆಗಿದ್ರೆ ಅದೆಷ್ಟೋ ಚೆನ್ನಾಗಿರ್ತಿತ್ತು ಎಂದು ಅಲವತ್ತುಕೊಳ್ಳುತ್ತಿದ್ದ. ರಾತ್ರಿ ನನ್ನ ಕನಸಿನಲ್ಲಿ ನೀವು ಬಂದಿದ್ರಿ, ನಿಮ್ಮನ್ನು ಬಿಟ್ಟರೆ ನನಗೆ ಬೇರೆ ಯಾರೂ ಇಷ್ಟೊಂದು ಕ್ಲೋಸ್ ಇಲ್ಲ ಎಂದು ಹೇಳುತ್ತಿದ್ದ.

ಸ್ನೇಹಿತರೆ! ಎಲ್ಲ ಮಕ್ಕಳು ಹೀಗೆಯೇ ಇರುತ್ತಾರೆ ಎಂದು ಹೇಳುವುದಿಲ್ಲ. ಆದರೆ ಕೆಲ ಮಕ್ಕಳು ಖಂಡಿತವಾಗಿಯೂ ಈ ರೀತಿ ವರ್ತಿಸುತ್ತಾರೆ. ತಮ್ಮ ಪಾಲಕರ ಮುಂದೆ ಅತ್ಯಂತ ಮುಗ್ಧರಂತೆ ವರ್ತಿಸುವ ಈ ಮಕ್ಕಳು ಹೊರಗೆ ಬಂದಾಗ ಮಹಾ ಪ್ರಚಂಡ ರಾಗಿರುತ್ತಾರೆ. ಮತ್ತೆ ಕೆಲ ಮಕ್ಕಳ ಪಾಲಕರು ತಮ್ಮ ಮಕ್ಕಳಿಗೆ ಬಾಯಲ್ಲಿ ಬೆರಳಿಟ್ಟರೂ ಕಡಿಯಲು ಬಾರದು ಎಂಬಷ್ಟು ಮುಗ್ಧರು ಎಂದು ಭಾವಿಸಿರುತ್ತಾರೆ… ಹಾಗೆ ಭಾವಿಸಲು ಕಾರಣ ಮನೆಯಲ್ಲಿ ಆ ಮಕ್ಕಳ ಸೌಮ್ಯ ವರ್ತನೆ.

ಮಕ್ಕಳಲ್ಲಿ ಈ ರೀತಿಯ ಅತಿರೇಕದ ವರ್ತನೆ ಕಂಡು ಬಂದಾಗ ಅವರನ್ನು ತಿದ್ದುವ ನಿಟ್ಟಿನಲ್ಲಿ ಸೂಕ್ಷ್ಮವಾಗಿ ತಿಳಿ ಹೇಳಬೇಕು. ಅಷ್ಟಕ್ಕೂ ಮಕ್ಕಳು ಕೇಳದೆ ಹೋದಾಗ ಅವರಿಗೆ ವಿಪರೀತ ಪ್ರೀತಿ, ಆದರಗಳನ್ನು ತೋರಿಸದೆ ನಿರ್ಲಕ್ಷಿಸಬೇಕು. ನೀವು ಉದಾಸೀನ ಮಾಡಿದಾಗ ಮಕ್ಕಳಲ್ಲಿರುವ ಅಹಂಭಾವಕ್ಕೆ ಪೆಟ್ಟು ಬೀಳುತ್ತದೆ. ಆಗ ಅವರು ನಿಮ್ಮಿಂದ ದೂರ ಸರಿಯಬಹುದು. ತೊಂದರೆಯಿಲ್ಲ.

ಪ್ರತಿಯೊಂದು ಆಟಕ್ಕೂ ನಿಯಮಗಳು ಇರುತ್ತವೆ. ಮಿತಿಗಳು ಇರುತ್ತವೆ… ಅಂತೆಯೇ ಬದುಕಿಗೆ ಕೂಡ. ಕೆಲವು ಮಿತಿಗಳು ಇರುತ್ತವೆ. ಈ ಮಿತಿಗಳನ್ನು ದಾಟಿ ಅತಿಯಾಗಿ ಆಡಬಾರದು.

ನಮ್ಮ ಮನೆ ಎಂಬುದು ನಮ್ಮ ವೈಯಕ್ತಿಕ ಪ್ರಪಂಚ. ಆ ಖಾಸಗಿ ಪ್ರಪಂಚದಲ್ಲಿ ನಾವಾಗಿ ಒಳ ಬಿಟ್ಟುಕೊಳ್ಳದ ಹೊರತು ಬೇರೆಯವರು ಅನವಶ್ಯಕವಾಗಿ ಬಂದು ಸೇರಿಕೊಳ್ಳಲು ಮಾಡುವ ಪ್ರಯತ್ನಗಳನ್ನು ನಿರ್ಧಾಕ್ಷಿಣ್ಯವಾಗಿ ದೂರ ತಳ್ಳಿ.ಅವರ ಮತ್ತು ನಮ್ಮ ನಡುವೆ ಒಂದು ಅಗೋಚರ ಮಿತಿಯನ್ನು ಹಾಕಲೇಬೇಕು. ಅವರು ನಮ್ಮ ಕುಟುಂಬಕ್ಕೆ ಹತ್ತಿರದವರೇ ಆಗಿರಬಹುದು ಹೊರತು ಕುಟುಂಬದ ಸದಸ್ಯರಲ್ಲ ಎಂಬ ನಿಷ್ಠುರ ಸತ್ಯದ ಅರಿವನ್ನು ಅವರಿಗೆ ಮೂಡಿಸಲೇಬೇಕು.

ಇನ್ನು ಇಂತಹ ಮಕ್ಕಳ ಪಾಲಕರು ಬಹಳಷ್ಟು ಬಾರಿ ತಮ್ಮ ಮಕ್ಕಳು ಹೀಗೆ ಮಾಡುತ್ತಾರೆ ಎಂದರೆ ನಂಬಲು ಸಿದ್ಧರಿರುವುದಿಲ್ಲ. ಮತ್ತೆ ಕೆಲವೊಮ್ಮೆ ನಾವು ಅವರಿಗೆ ಈ ವಿಷಯಗಳನ್ನು ತಿಳಿಸಿ ಉಪಕಾರ ಮಾಡಲು ಹೋದರೂ… ಅವರು ನಮ್ಮನ್ನು ತಪ್ಪು ತಿಳಿದುಕೊಳ್ಳುವ ಸಾಧ್ಯತೆಗಳೇ ಹೆಚ್ಚು .ಅವರನ್ನು ನಂಬಿಸುವ ದರ್ದು ನಮಗಿಲ್ಲ. ಅಂತೆಯೇ ಅವರ ಮಕ್ಕಳ ಹುಚ್ಚಾಟಗಳನ್ನು ಸಹಿಸುವ ಅವಶ್ಯಕತೆ ಕೂಡ ಇಲ್ಲ. ಏನಂತೀರಾ ಸ್ನೇಹಿತರೇ?

ಹಿಂದಿನ ಸಂಚಿಕೆಗಳು :


  • ವೀಣಾ ಹೇಮಂತಗೌಡ ಪಾಟೀಲ್ – ಮುಂಡರಗಿ, ಗದಗ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW