‘ಪ್ರಸ್ತುತತೆ’ ಕವನ – ಶಿವದೇವಿ ಅವನೀಶಚಂದ್ರ

ಫಲಮಾಗಿ ರೆಂಬೆ ಬಾಗಿ ತುಂಬಿ ತೊನೆಯುವ ರೆಂಬೆಯಲಿ ತನ್ನ ಕನಸು ಫಲಿಸಿದವರ ನೆನಪಾಗುವುದೇ ಇಲ್ಲ…ಕವಿಯತ್ರಿ ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…

ನನಗಾಗಿ ಬರುತ್ತಿತ್ತು ಕೇವಲ ನನಗಾಗಿಯೇ ಬರುತ್ತಿತ್ತು
ಅಂದು ಉಡುಗೊರೆ
ಹುಟ್ಟುಹಬ್ಬಕ್ಕೆ
ಮದುವೆ ವಾರ್ಷಿಕೋತ್ಸವಕ್ಕೆ
ಪ್ರಿಯರ ಸಂತೋಷದ ಕ್ಷಣಗಳಿಗೆ
ಸಾಕ್ಷಿಯಾದ ನನ್ನ ಖುಷಿಘಳಿಗೆಯಲ್ಲಿ

ಅದು ಅವರ ಆಯ್ಕೆ ಕೇವಲ ನನಗಾಗಿಯೇ ….
ನನ್ನ ಖುಷಿಗಾಗಿಯೇ…

ಈಗ ಖರೀದಿಸುವ ಬೊಕ್ಕಸವಿದೆ
ಅಪಾರ ಸರಕುಗಳ ಮಾರುಕಟ್ಟೆಯಿದೆ
ಗಳಿಸುವ ಸಂಪನ್ನ ಹುದ್ದೆಯಿದೆ..

ನೆನಪಿಲ್ಲ…
ಈಗ…ಅವರಿಗೆ
ನೆಟ್ಟು ಬೆಳೆಸಿ ಖುಷಿಪಟ್ಟವರ
ನೀರೆರೆದು ಗೊಬ್ಬರ ಹಾಕಿದವರ…

ಫಲಮಾಗಿ ರೆಂಬೆ ಬಾಗಿ
ತುಂಬಿ ತೊನೆಯುವ ರೆಂಬೆಯಲಿ
ತನ್ನ ಕನಸು ಫಲಿಸಿದವರ ನೆನಪಾಗುವುದೇ ಇಲ್ಲ
ಹೆಗಲ ಮೇಲೆ ಹೊತ್ತವರ
ತಪ್ಪಿನ ಶಿಕ್ಷೆಗೆ ಗುರಾಣಿಯಾದವರ
ಅಪರಾಧಿಯಾದಾಗ ವಕಾಲತ್ತು ವಹಿಸಿದವರ
ಎಲ್ಲವನೂ ಕಳಕೊಂಡು
ಅವರನು ನಗೆಹೊನಲಲ್ಲೇ ತೇಲಿಸಿದವರ….

ನೆನಪಾಗದೀಗ…ಅವರಿಗೆ
ಬಿಸಿಯಾಗಿದ್ದಾರೆ ಅವರು
ಸ್ವಯಂಭೂಗಳಂತೆ
ವಂದಿಮಾಗಧರ ನಡುವೆ…
ಕಳೆದು ಹೋಗಿದ್ದಾರೆ ಅವರು
ತಾವು ಸಂಗ್ರಹಿಸಿದ ಜೇನು ಹುಟ್ಟಿಗೆ
ಕೈ ಹಾಕಿ
ಆಸ್ವಾದಿಸುವವರ ಖುಷಿಯಲ್ಲಿ…

ಕಳೆದು ಹೋಗಿದ್ದಾರೆ ಅವರು
ನಯವಂಚಕರ
ಆಷಾಢಭೂತಿತನದಲ್ಲಿ…
ಅಟ್ಟಿಬಿಟ್ಟಿದ್ದಾರೆ ಹೊರಗೆ
ಬದುಕಿನ ಬಂಧಗಳ ಸವಿಗೊಳಿಸುವ ಹಿತವರ
ಬೆನ್ನು ತಿರುವಿದ್ದಾರೆ ಅವರು…ನಿಜವಾದ ಖುಷಿಗೆ…
ಧಿಕ್ಕರಿಸಿ ಬದುಕಿನ ಮೌಲ್ಯಗಳ

ನಡೆವ ಹಾದಿಯಲಿ ಕಳೆದುಹೋಯಿತು ಎಲ್ಲವೂ…
ಮತ್ತೆ ಆರಿಸಿದರೆ ಸಿಗಬಹುದೇ
ಆನಂದದ ಕ್ಷಣಗಳು
ಮುಖವಾಡವಿಲ್ಲದ ಅಪ್ಪಟ ಮುಖಗಳು…
ಕಷ್ಟವಿಲ್ಲದೆ ದಕ್ಕಿದ ಪ್ರೀತಿಯ ಸುಧೆಯು
ತಿದ್ದುವ ಮನಸುಗಳು
ಶಿಕ್ಷಿಸುವ ಕೈಗಳು
ತಬ್ಬುವ ಬಾಹುಗಳು…..
ನಿಶ್ಚಿಂತ ಬಾಲ್ಯವನ್ನು ಉಣಬಡಿಸಿದ
ಹಿರಿತನದ ಲಾಂಛನಗಳು…

ಈಗ ನನಗಿಲ್ಲ ಯಾವ ಅಸ್ತಿತ್ವ
ನಾಚಿಕೆಯಾಗುತ್ತದೆ
ಸಂಬಂಧಗಳ ಎಲ್ಲರೆದುರು ಪ್ರಸ್ತುತಪಡಿಸಲು
ಬಣ್ಣವಿಲ್ಲದ ಮುಖಗಳ ಕಾಂತಿಹೀನತೆಯನ್ನು
ತನ್ನದೆಂದು ಹೇಳಿಕೊಳ್ಳಲು….

ಈಗ ಹುಟ್ಟು ಹಬ್ಬಗಳಿಲ್ಲ
ಉಡುಗೊರೆಗಳಿಲ್ಲ
ನಿರೀಕ್ಷೆಯಿಲ್ಲ
ಕನಸು ಫಲಿಸಲಿಲ್ಲ…
ಇದ್ದಾನೆ ಅವನೊಬ್ಬನೇ ನನ್ನ ಹಗಲು ರಾತ್ರಿಗಳಲ್ಲಿ ಕಾವಲಾಗಿ…
ಆದರೂ ಅವನೇಕೋ ಎದುರು ಬಾರನಲ್ಲ….


  • ಶಿವದೇವಿ ಅವನೀಶಚಂದ್ರ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading