ಬದುಕಿಗೊಂದು ಸೆಲೆ (ಭಾಗ-೩೫)

ಚಂದ್ರನ ಮೇಲೆ ಕಾಲಿಡಲು ಕೂಡ ಮೊದಲು ಒಂದು ಪುಟ್ಟ ಹೆಜ್ಜೆಯನ್ನು ಇಡಬೇಕಲ್ಲವೇ? ಅತಿ ದೊಡ್ಡ ಸಾಗರವನ್ನು ಸೇರಲು ಓಡುವ ಪುಟ್ಟ ನದಿಯು ಕೂಡ ತನ್ನ ಮೂಲದಲ್ಲಿ ಒಂದು ಸಣ್ಣ ನೀರಿನ ಹರಿವಾಗಿರುತ್ತದೆ ಅಲ್ಲವೇ?…ವೀಣಾ ಹೇಮಂತ್ ಗೌಡ ಪಾಟೀಲ್ ಅಂಕಣದಲ್ಲಿ ‘ಖಾಲಿ ಕುರ್ಚಿ ಎಂಬ ತತ್ವವೂ…ನಮ್ಮ ಬದುಕೂ’ , ತಪ್ಪದೆ ಮುಂದೆ ಓದಿ…

ಜಾಕ್ ಮಾ ಎಂಬ ವ್ಯಕ್ತಿ ತನಗೆ ಅತ್ಯಂತ ಮುಜುಗರ ತಂದ ಒಂದು ಕ್ಷಣವನ್ನು ತನ್ನ ಚಾಣಾಕ್ಷತೆಯಿಂದ ಆಲಿಬಾಬ ಎಂಬ ಅತಿ ದೊಡ್ಡ ಸಂಸ್ಥೆಯನ್ನು ಕಟ್ಟಲು ಬಳಸಿದ ಎಂಬ ಘಟನೆಯನ್ನು ನೋಡೋಣ.

ಆಲಿಬಾಬ ಎಂಬ ಬಹುದೊಡ್ಡ ಆನ್ಲೈನ್ ಮಾರಾಟ ಸಂಸ್ಥೆಯ ಬಹುಕೋಟಿ ಮೌಲ್ಯದ ಅತಿ ದೊಡ್ಡ ಕಂಪನಿಯನ್ನು ಸ್ಥಾಪಿಸಿದ ಜಾಗತಿಕ ವ್ಯಕ್ತಿಯಾಗಿ ಗುರುತಿಸಲ್ಪಡುವ ಮುನ್ನ ನಡೆದ ಈ ಘಟನೆ ಆತನ ಬದುಕನ್ನೇ ಬದಲಾಯಿಸಿತು ಎಂದರೆ ಅಚ್ಚರಿ ಪಡಬೇಡಿ. ಹ್ಯಾಂಗ್ ಜಾವೋ ಎಂಬ ಇಂಗ್ಲಿಷ್ ಶಾಲೆಯಲ್ಲಿ ಓದುತ್ತಿದ್ದ ಜಾಕ್ ಸೆಮಿನಾರ್ ಒಂದರಲ್ಲಿ ಭಾಗವಹಿಸಿದ್ದ. ಸ್ಥಳೀಯವಾಗಿ ಸುಮಾರು 20ಕ್ಕೂ ಹೆಚ್ಚು ವ್ಯಾಪಾರಿಗಳು ಭಾಗವಹಿಸಲಿದ್ದ ಆ ಸೆಮಿನಾರಿನಲ್ಲಿ ತನ್ನ ಸಂಶೋಧನಾತ್ಮಕ ವರದಿಯನ್ನು ಮಂಡಿಸಲು ಆತ ಅತ್ಯಂತ ಉತ್ತಮ ತಯಾರಿ ಮಾಡಿಕೊಂಡಿದ್ದ. ತನ್ನ ಪ್ರಬಂಧದ ಪ್ರತಿಯೊಂದು ಸಾಲನ್ನು ಆತ ಪದೇ ಪದೇ ಓದಿ ಬಾಯಿ ಪಾಠ ಮಾಡಿಕೊಂಡಿದ್ದ.

ಸೆಮಿನಾರಿನ ಆರಂಭಕ್ಕೂ ಮುನ್ನ ತಾನೇ ಓಡಾಡಿ ಆ ಇಪ್ಪತ್ತು ಜನರಿಗಾಗಿ ಕುರ್ಚಿಗಳನ್ನು ಆತ ಹೊಂದಿಸಿದ. ಸೆಮಿನಾರ್ ನ ಸಮಯಕ್ಕೆ ಸರಿಯಾಗಿ ವೀಕ್ಷಕರಲ್ಲಿ ಕೇವಲ ಓರ್ವ ವ್ಯಕ್ತಿ ಮಾತ್ರ ಅಲ್ಲಿ ಬಂದು ಕುಳಿತುಕೊಂಡ. ಮುಂದಿನ ಕೆಲ ಕ್ಷಣಗಳು ಕಾತರದಿಂದ ಕಾದರೂ ಯಾರೊಬ್ಬರೂ ಆ ಸ್ಥಳಕ್ಕೆ ಬರಲೇ ಇಲ್ಲ. ಸುಮಾರು 20 ಜನ ಭಾಗವಹಿಸಬೇಕಾದ ಕಾರ್ಯಕ್ರಮದಲ್ಲಿ ಕೇವಲ ಐದು ಜನ ಕೂಡ ಬರದೆ ಹೋದದ್ದು ಆತನಿಗೆ ನಿರಾಶೆಯನ್ನುಂಟು ಮಾಡಿದರೂ ಉಳಿದ 19 ಖಾಲಿ ಕುರ್ಚಿಗಳ ನಡುವೆ ಮುಂದಿನ ಸಾಲಿನಲ್ಲಿ ಕುಳಿತ ಓರ್ವ ವ್ಯಕ್ತಿ ಅತ್ಯಂತ ಕುತೂಹಲದಿಂದ ಈತ ಮಂಡಿಸಲಿರುವ ಪ್ರಬಂಧವನ್ನು ಕೇಳಲು ಕುಳಿತುಕೊಂಡಿದ್ದ.

ಫೋಟೋ ಕೃಪೆ : ಅಂತರ್ಜಾಲ

ಜಾಕ್ ನ ಎದೆಯ ತಾಳ ತಪ್ಪಿದಂತೆ ಭಾಸವಾಯಿತು. ಕಾರ್ಯಕ್ರಮವನ್ನು ರದ್ದುಪಡಿಸಲೇ ಎಂದು ಆತ ಕೆಲ ಕ್ಷಣ ಯೋಚಿಸಿದ. ಕುಳಿತಿದ್ದ ಓರ್ವ ವ್ಯಕ್ತಿಗೆ ಕ್ಷಮೆ ಯಾಚಿಸಿ ಹೊರಟು ಬಿಡಲೇ ಎಂದು ಮನದ ಮತ್ತೊಂದು ಮೂಲೆಯಿಂದ ಕರೆ ಕೇಳಿಸಿತು.ಅಂತಿಮವಾಗಿ ಇನ್ನೇನು ಬಿಟ್ಟುಬಿಡಬೇಕು ಎಂದು ಯೋಚಿಸಿ ಮೇಲೆದ್ದನಾತ. ಆದರೆ ಮುಂದಿನ ಕೆಲವೇ ಕ್ಷಣಗಳಲ್ಲಿ ಅತ್ಯಂತ ಸಹಜವಾಗಿ ನಡೆದುಕೊಂಡು ಹೋಗಿ ವೇದಿಕೆಯ ಮೇಲೆ ನಿಂತುಕೊಂಡ. ತನ್ನ ಮುಂದಿರುವ ಮೈಕನ್ನು ಸರಿಪಡಿಸಿಕೊಂಡು ತನ್ನ ಮುಂದೆ ಕುಳಿತಿದ್ದ ಆ ಏಕೈಕ ವ್ಯಕ್ತಿಗೆ ತಲೆಬಾಗಿ ನಂತರ ಆತನನ್ನು ಉದ್ದೇಶಿಸಿ ನಿಮಗೆ ಆಸಕ್ತಿ ಇದ್ದರೆ, ಇದನ್ನು ತುಂಬಿದ ಸಭೆ ಎಂದೇ ಭಾವಿಸಿ. ನಾನು ನನ್ನ ವಿಷಯವನ್ನು ಮಂಡಿಸುವೆ ಎಂದು ಸ್ಪಷ್ಟವಾಗಿ ಆದರೆ ಅಷ್ಟೇ ಮೆಲುವಾದ ದನಿಯಲ್ಲಿ ಹೇಳಿದ.

ಮುಂದಿನ ಎರಡು ಗಂಟೆಗಳ ಕಾಲ ಆತ ನಿರಂತರವಾಗಿ ವಿಷಯವನ್ನು ಮಂಡಿಸಿ ತಾನು ಹೇಳಬೇಕೆಂದುಕೊಂಡ ತನ್ನೆಲ್ಲ ಯೋಜನೆಗಳಲ್ಲಿ ಪ್ರತಿಯೊಂದನ್ನು ಉದಾಹರಣೆ ಸಮೇತವಾಗಿ ಆತ ತನ್ನ ಮುಂದೆ ಕುಳಿತಿದ್ದ ವ್ಯಕ್ತಿಗೆ ಕಣ್ಣಿಗೆ ಕಟ್ಟುವಂತೆ ವಿವರಿಸಿದ. ತನ್ನೆಲ್ಲ ಯೋಜನೆಗಳನ್ನು ಹಂಚಿಕೊಂಡ ಆತ ಅಂತಿಮವಾಗಿ ಒಂದೊಳ್ಳೆಯ ಉಪನ್ಯಾಸವನ್ನು ನೀಡಿದ ತೃಪ್ತಿಯಿಂದ ವೇದಿಕೆಯಿಂದ ಕೆಳಗಿಳಿದ ಕೆಲ ವರ್ಷಗಳ ನಂತರ ಜಾಕ್ ಮಾ ತನ್ನದೇ ಆದ ಅಲಿಬಾಬಾ ಕಂಪನಿಯನ್ನು ಪ್ರಾರಂಭಿಸಿ ಸಾವಿರಾರು ಜನರಿಗೆ ಉದ್ಯೋಗ ನೀಡಿದ ನಂತರ ಒಂದು ದಿನ ತನ್ನ ಎಲ್ಲ ಉದ್ಯೋಗಿಗಳನ್ನು ಹೊಂದಿದ ಸಮೂಹದ ಸಭೆಯಲ್ಲಿ ಈ ದಿನವನ್ನು ನೆನಪಿಸಿಕೊಂಡ.

ನೀವು ಕೇವಲ ಓರ್ವ ವ್ಯಕ್ತಿ ಎಂದು ಪರಿಗಣಿಸದೆ ನಿಮ್ಮ ಎಲ್ಲಾ ಸೇವೆಯನ್ನು ಆತನಿಗೆ ನೀಡಲು ಸಾಧ್ಯವಾದರೆ ನೀವು ಲಕ್ಷಾಂತರ ಜನರಿಗೆ ಕೂಡ ಅದೇ ಮಟ್ಟದ ಸೇವೆಯನ್ನು ನೀಡುವಿರಿ. ಆ ಒಂದು ಕ್ಷಣದ ಅವಮಾನ ಆತನ ಬಹುದೊಡ್ಡ ಯೋಜನೆಗೆ ಮೂಲ ಬೀಜವಾಗಿ ಕಾರ್ಯನಿರ್ವಹಿಸಿತು.

ಅದೆಷ್ಟೇ ಬೇಡಿಕೆ ಕಡಿಮೆ ಇದ್ದರೂ ಪರವಾಗಿಲ್ಲ, ಪ್ರತಿಯೊಬ್ಬ ಗ್ರಾಹಕನು ಅತ್ಯಮೂಲ್ಯವಾದ ಸೇವೆಯನ್ನು ಬಯಸಿದಾಗ ನಾವು ಕೊಡಲು ಸಿದ್ದರಿರಬೇಕು. ಸಣ್ಣ ಮಟ್ಟದ ವೀಕ್ಷಕರು ಮತ್ತು ಗ್ರಾಹಕರು ನಮಗೆ ಹೆಚ್ಚು ಅವಶ್ಯಕ. ಚಂದ್ರನ ಮೇಲೆ ಕಾಲಿಡಲು ಕೂಡ ಮೊದಲು ಒಂದು ಪುಟ್ಟ ಹೆಜ್ಜೆಯನ್ನು ಇಡಬೇಕಲ್ಲವೇ?

ಅತಿ ದೊಡ್ಡ ಸಾಗರವನ್ನು ಸೇರಲು ಓಡುವ ಪುಟ್ಟ ನದಿಯು ಕೂಡ ತನ್ನ ಮೂಲದಲ್ಲಿ ಒಂದು ಸಣ್ಣ ನೀರಿನ ಹರಿವಾಗಿರುತ್ತದೆ ಅಲ್ಲವೇ?

ಫೋಟೋ ಕೃಪೆ : ಅಂತರ್ಜಾಲ

ಪ್ರತಿ ಸಣ್ಣ ಹೆಜ್ಜೆ, ಪ್ರತಿ ಸಣ್ಣ ಕೋಣೆ, ಭೇಟಿಯಾಗುವ ಪ್ರತಿಯೊಬ್ಬ ವ್ಯಕ್ತಿ ನಮ್ಮ ಬದುಕಿನಲ್ಲಿ ಅತ್ಯವಶ್ಯಕ ಬದಲಾವಣೆಯನ್ನು ತರಲು ಸಾಧ್ಯ ಜಾಕ್ ಹೇಳುವ ಪ್ರಕಾರ ಖಾಲಿ ಕುರ್ಚಿಗಳು ಆತನಿಗೆ ಭಯವನ್ನು ಹುಟ್ಟಿಸಲಿಲ್ಲ, ಬದಲಾಗಿ ಆತನ ಆತ್ಮವಿಶ್ವಾಸವನ್ನು ಹೆಚ್ಚಿಸಿದವು. ಬಹುತೇಕ ಬಹಳಷ್ಟು ಉದ್ದಿಮೆದಾರರು ಮರೆಯುವ ಒಂದು ವಿಷಯವನ್ನು ಜಾಕ್ ಅತ್ಯಂತ ಸ್ಪಷ್ಟವಾಗಿ ತಿಳಿದುಕೊಂಡಿದ್ದ. ತುಂಬಿದ ಸಭಾಂಗಣದಿಂದ ಯಶಸ್ಸನ್ನು ಗುರುತಿಸಬಾರದು… ಸಂಪೂರ್ಣ ಖಾಲಿಯಾಗಿರುವ ಕೋಣೆ ಕೂಡ ನಿನ್ನ ಯಶಸ್ಸಿಗೆ ದಾರಿ ದೀಪವಾಗಬಲ್ಲದು.

ನಿಜ ಅಲ್ಲವೇ ಸ್ನೇಹಿತರೆ? ಅತ್ಯಂತ ದೊಡ್ಡ ಕೋಣೆಯಲ್ಲಿ ಹಚ್ಚಿಟ್ಟ ಒಂದು ಕಿರು ಹಣತೆ ಕೂಡ ಕತ್ತಲನ್ನು ಓಡಿಸಲು ಸಾಧ್ಯ. ನಮ್ಮ ಭವಿಷ್ಯದ ಬದುಕನ್ನು ನಮ್ಮ ಇಂದಿನ ಚಿಕ್ಕಪುಟ್ಟ ನಡೆಗಳ ಮೂಲಕ ನಾವು ಗುರುತಿಸಿಕೊಳ್ಳಬಹುದು.

ನೀವು ಕೇವಲ ಮೂರು ನಾಲ್ಕು ಜನ ನೋಡುತ್ತಿರುವ ನೇರ ಪ್ರಸಾರವೇ ಇರಬಹುದು, ಕೆಲವೇ ಕೆಲವು ಜನರು ಲೈಕ್ ಮಾಡುವ ಸುದ್ದಿಯೇ ಇರಬಹುದು. ಇಬ್ಬರು ಮೂವರು ವಿದ್ಯಾರ್ಥಿಗಳಿಂದ ಕೂಡಿದ ತರಗತಿಯೇ ಇರಲಿ ಕೇವಲ ಒಂದು ವಿಷಯದ ಕುರಿತು ಮಾತನಾಡುವುದೇ ಇರಲಿ, ಕೊನೆಯ ಪಕ್ಷ ಯಾರು ಕೂಡ ನಮ್ಮನ್ನು ಪ್ರಶ್ನಿಸಲು ಸಾಧ್ಯವಾಗದ,ಬೇರೆಯವರು ನಮ್ಮನ್ನು ನೋಡುತ್ತಿದ್ದಾರೆಯೋ ಇಲ್ಲವೋ ಎಂಬುದನ್ನು ಕೂಡ ಅರಿಯಲು ಆಗದ ಏಕಮುಖ ಪ್ರಸಾರ ವ್ಯವಸ್ಥೆಯೇ ಇರಲಿ…. ಪ್ರತಿಯೊಬ್ಬ ವ್ಯಕ್ತಿಯು ಕೂಡ ನಮಗೆ ತನ್ನ ಬಹುಮೂಲ್ಯ ಸಮಯವನ್ನು ನೀಡಿರುತ್ತಾನೆ . ಅವರ ಸಮಯಕ್ಕೆ ನಾವು ಬೆಲೆ ಕೊಡಲೇಬೇಕು. ಚಾಂಪಿಯನ್ ಎಂದೆನಿಸಿಕೊಳ್ಳುವ ವ್ಯಕ್ತಿ ಯಾರು ನೋಡಲಿ ಬಿಡಲಿ ಪ್ರತಿದಿನ ತನ್ನ ತರಬೇತಿಯನ್ನು ಪೂರೈಸುತ್ತಾನೆ.

ನಮ್ಮ ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪನವರು ಹೇಳಿರುವ ಗೀತೆಯ ಸಾಲುಗಳು ನೆನಪಾಗುತ್ತಿವೆ. ಎದೆ ತುಂಬಿ ಹಾಡಿದೆನು ಅಂದು ನಾನು ಮನವಿಟ್ಟು ಕೇಳಿದಿರಿ ಅಲ್ಲಿ ನೀವು ಎಂಬ ಕವಿತೆಯಲ್ಲಿ ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ ಹಾಡುವುದು ಅನಿವಾರ್ಯ ಕರ್ಮ ನನಗೆ ಎಂಬ ಕವನದ ಸಾಲುಗಳು ಮುಂದುವರೆದು ಹಾಡುವೆನು ಮೈದುಂಬಿ ಎಂದಿನಂತೆ ಕುಳಿತು ಯಾರು ಕಿವಿ ಮುಚ್ಚಿದರೂ ಎನಗಿಲ್ಲ ಚಿಂತೆ ಎಂಬ ಸಾಲಿನಲ್ಲಿ ಮುಕ್ತಾಯವಾಗುವ ಕವಿತೆಯಲ್ಲಿ ಕವಿ ಜಿ ಎಸ್ ಶಿವರುದ್ರಪ್ಪನವರು ಕೇಳುವವರಿಗಾಗಿ ಯಾರೂ ಹಾಡುವುದಿಲ್ಲ, ಬದಲಾಗಿ ತಮ್ಮ ಮನದ ತೃಪ್ತಿಗಾಗಿ, ಸಂತೋಷಕ್ಕಾಗಿ ಹಾಡುತ್ತಾರೆ. ಬದುಕಿನಲ್ಲಿ ಆತ್ಮ ತೃಪ್ತಿಯ ಮುಂದೆ ಉಳಿದೆಲ್ಲ ಸಂತಸಗಳು ಗೌಣ ಎಂಬ ಕವಿವಾಣಿ ಅದೆಷ್ಟೋ ನಿಜ ಅಲ್ಲವೇ.

ಪ್ರತಿ ಪುಟ್ಟ ಸಾಮ್ರಾಜ್ಯವು ಕೂಡ ಅದರ ಒಬ್ಬೊಬ್ಬ ಪ್ರಜೆಯಿಂದಲೂ ಆರಂಭವಾಗುತ್ತದೆ. ಪ್ರತಿಯೊಂದು ಆರಂಭ ಆರ್ಭಟಿಸುತ್ತಾ ಬರುವುದಿಲ್ಲ.
ಅತಿ ದೊಡ್ಡ ಮ್ಯಾರಥಾನ್ ಓಟವು ಕೂಡ ಮೊದಲ ಹೆಜ್ಜೆಯಿಂದಲೇ ಪ್ರಾರಂಭ. ಖಾಲಿ ಕುರ್ಚಿಯ ತತ್ವವು ನಮಗೆ ಕಲಿಸುವ ಪಾಠಗಳು ಬಹಳ. ಬದುಕಿನ ಅತ್ಯುತ್ತಮವಾದ ವಿಷಯಗಳು ತುಂಬಿದ ಸಭಾಂಗಣದಲ್ಲಿಯೇ ಹೊರಹೊಮ್ಮಬೇಕೆಂದಿಲ್ಲ. ಅತ್ಯುತ್ತಮಿಕೆ ಎಂಬುದು ಜನರು ನಿಮ್ಮ ಸಭೆಗೆ ಬಂದು ಕುಳಿತುಕೊಳ್ಳುವ ಮುನ್ನ ನೀವು ಯಶಸ್ಸಿನ ಮೊದಲ ಹೆಜ್ಜೆಯನ್ನು ಇಡುವ ಸಮಯದಲ್ಲಿಯೇ ಆರಂಭವಾಗಿರುತ್ತದೆ. ಕಡಿಮೆ ಸಂಖ್ಯೆಯ ಪ್ರೇಕ್ಷಕರು ನಿಜವಾದ ತೊಂದರೆ ಅಲ್ಲವೇ ಅಲ್ಲ ಬದಲಾಗಿ ಕಡಿಮೆ ಪ್ರಯತ್ನಗಳು ನಿಜವಾದ ತೊಂದರೆಯಾಗಿ ಪರಿಣಮಿಸುತ್ತವೆ. ಬೇರೆಯವರು ನಿಮ್ಮನ್ನು ನೋಡಲಿ ಎಂದು ಉತ್ತಮ ಪ್ರದರ್ಶನ ಕೊಡಬೇಡಿ ಬದಲಾಗಿ ನಿಮ್ಮ ತೃಪ್ತಿಗಾಗಿ ಅತ್ಯುತ್ತಮವಾದುದನ್ನು ನೀವು ನೀಡಲು ಪ್ರಯತ್ನಿಸಿ.

ಚಿಕ್ಕ ಪುಟ್ಟ ಆರಂಭಗಳನ್ನು ಸಂಭ್ರಮಿಸಿ.. ಉತ್ಸಾಹದಿಂದ ಎದುರುಗೊಳ್ಳಿ. ನಿಮ್ಮ ಯಶಸ್ಸಿನ ನಾಗಾಲೋಟಕ್ಕೆ ನೀವೇ ಮುನ್ನುಡಿ ಬರೆಯುವಿರಿ.
ಏನಂತೀರಾ ಸ್ನೇಹಿತರೆ?


  • ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ, ಗದಗ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW