ನನಗೆ ಮತ್ತೊಂದು ಕಥೆ ನೆನಪಾಗುತ್ತಿದೆ. ಕಪ್ಪೆಗಳ ಗುಂಪೊಂದು ಕಡಿದಾದ ಬೆಟ್ಟವನ್ನು ಏರುವ ಒಂದು ಕಠಿಣ ಸವಾಲನ್ನು ತನ್ನ ಸಮುದಾಯದ ಯುವ ಕಪ್ಪೆಗಳಿಗೆ ಹಾಕಿತು. ವೀಣಾ ಹೇಮಂತ್ ಗೌಡ ಪಾಟೀಲ್ ಅವರ ಬದುಕಿಗೊಂದು ಸೆಲೆ ಅಂಕಣದಲ್ಲಿ ‘ಕೆಲ ವಿಷಯಗಳಿಗೆ ಕಿವುಡರಾಗಬೇಕು’ ತಪ್ಪದೆ ಓದಿ…
1940ರ ಸಮಯ. ಬರ್ಕ್ಲಿ ಎಂಬ ಊರಿನ ಬಳಿಯ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಲ್ಲಿ ಎಂದಿನಂತೆ ಮಂಜು ಆವರಿಸಿತ್ತು. ಮುಂಜಾನೆಯ ತರಗತಿಗಳು ಇನ್ನೇನು ಆರಂಭವಾಗಬೇಕಿತ್ತು. ವಿದ್ಯಾರ್ಥಿಗಳ ದಟ್ಟಣೆಯಿಂದ ತುಂಬಿದ ವಿಶ್ವವಿದ್ಯಾಲಯದ ಕಾರಿಡಾರುಗಳಲ್ಲಿ ಉಳಿದ ವಿದ್ಯಾರ್ಥಿಗಳನ್ನು ಸರಿಸುತ್ತಾ ಓಡೋಡಿ ಬರುತ್ತಿದ್ದ ಜಾರ್ಜ ಡ್ಯಾಟಜಂಗ್. ಕೊನೆಯ ವರ್ಷದ ಅರ್ಥಶಾಸ್ತ್ರದ ವಿದ್ಯಾರ್ಥಿಯಾಗಿದ್ದ ಆತ ತರಗತಿಗೆ ತಡವಾಗುತ್ತದೆ ಎಂದು ತುಸು ಆತಂಕದಿಂದಲೇ ಓಡುನಡಿಗೆಯಲ್ಲಿ ಬರುತ್ತಿದ್ದ.
ಏದುಸಿರು ಬಿಡುತ್ತಲೇ ತರಗತಿಯ ಹಿಂಬಾಗಿಲಿನಿಂದ ಉಪನ್ಯಾಸಕರು ಮತ್ತು ಉಳಿದ ವಿದ್ಯಾರ್ಥಿಗಳ ಪಾಠ ಪ್ರವಚನಕ್ಕೆ ತೊಂದರೆಯಾಗದಂತೆ ಮೆಲ್ಲನೆ ಒಳಗೆ ನುಸುಳಿ ಕೊನೆಯ ಬೆಂಚಿನಲ್ಲಿ ಕುಳಿತ. ಮುಂದೆ ಉಪನ್ಯಾಸಕರು ಕಪ್ಪು ಹಲಗೆಯ ಮೇಲೆ ಈಗಾಗಲೇ ಎರಡು ಲೆಕ್ಕಗಳನ್ನು ಬಿಡಿಸಿ ಮತ್ತೆ ಅವುಗಳನ್ನು ಅಳಿಸಿದ್ದರು. ತನ್ನ ಉಸಿರನ್ನು ಬಿಗಿ ಹಿಡಿದು ನೋಟ ಪುಸ್ತಕವನ್ನು ಹೊರತೆಗೆದು ಅವೆರಡು ಲೆಕ್ಕಗಳನ್ನು ಆತ ತನ್ನ ಪುಸ್ತಕದಲ್ಲಿ ಟಿಪ್ಪಣಿ ಮಾಡಿಕೊಂಡ ಆತ ಅವುಗಳು ಮನೆಯಲ್ಲಿ ಮಾಡಬೇಕಾದ ಲೆಕ್ಕಗಳು ಎಂದು ಊಹಿಸಿದ.
ಈ ಎರಡು ಲೆಕ್ಕಗಳು ಸಾಕಷ್ಟು ಕ್ಲಿಷ್ಟವಾದ ಮತ್ತು ಸವಾಲನ್ನು ಹೊಂದಿರುವ ಲೆಕ್ಕಗಳಾಗಿದ್ದು ಲೆಕ್ಕ ಶಾಸ್ತ್ರದಲ್ಲಿಯೇ ಬಿಡಿಸಲಾಗದ ಪ್ರಶ್ನೆಗಳು ಎಂದು ಹೆಸರಾಗಿವೆ. ಲೆಕ್ಕಶಾಸ್ತ್ರದ ಈ ವಿಷಯದಲ್ಲಿ ಅತ್ಯಂತ ಮೇಭಾವಿಗಳು ಮಾತ್ರ ಈ ಲೆಕ್ಕಗಳನ್ನು ಬಿಡಿಸಬಲ್ಲರು ಎಂದು ಹೆಸರಾಗಿವೆ ಎಂದು ಆ ಲೆಕ್ಕಗಳನ್ನು ಬರೆಯುವ ಮುನ್ನವೇ ಉಪನ್ಯಾಸಕರು ಹೇಳಿದ ಮಾತು ಆತನಿಗೆ ಕೇಳಿಸದೆ ಹೋಗಿತ್ತು. ಉಳಿದ ಲೆಕ್ಕಗಳಿಗಿಂತ ಈ ಲೆಕ್ಕಗಳು ತುಸು ಕ್ಲಿಷ್ಟವಾಗಿರಬಹುದು ಎಂಬುದು ಆತನ ಲೆಕ್ಕವಾಗಿತ್ತು. ಮುಂದಿನ ಕೆಲವು ದಿನಗಳನ್ನು ಆತ ಅತೀವ ಆಸಕ್ತಿಯಿಂದ ಲೆಕ್ಕ ಬಿಡಿಸುವುದರಲ್ಲಿಯೇ ಕಳೆದ. ಆದರೆ ಆ ಲೆಕ್ಕಗಳು ಅಷ್ಟೇನೂ ಸುಲಭವಾಗಿರಲಿಲ್ಲ. ಉಳಿದ ಸಾಮಾನ್ಯ ಲೆಕ್ಕಗಳಿಗಿಂತ ತುಸು ದೊಡ್ಡ ಲೆಕ್ಕಗಳಾಗಿದ್ದವು. ಅಂತಿಮವಾಗಿ ಆ ಎರಡು ಲೆಕ್ಕಗಳನ್ನು ಬಿಡಿಸುವಲ್ಲಿ ಆತ ಯಶಸ್ವಿಯಾದ ಆ ಲೆಕ್ಕಗಳನ್ನು ಮಾಡಿ ಗುರುಗಳಿಗೆ ಒಪ್ಪಿಸಿದ ಆತ ಅವುಗಳನ್ನು ಮಾಡಿ ಮುಗಿಸಲು ತಡವಾಗಿದ್ದಕ್ಕೆ ಕ್ಷಮೆಯನ್ನು ಕೋರಿ ಮತ್ತೆ ಆ ವಿಷಯವನ್ನು ಅಲ್ಲಿಗೆ ಮರೆತು ಬಿಟ್ಟ. ಕೆಲ ವಾರಗಳೇ ಕಳೆದವು.

ಫೋಟೋ ಕೃಪೆ : google
ಅದೊಂದು ದಿನ ಮಧ್ಯಾಹ್ನ ಆತನ ಮನೆಯ ಬಾಗಿಲನ್ನು ಬಾರಿಸಿದ ಶಬ್ದವನ್ನು ಕೇಳಿ ಆತ ಬಾಗಿಲನ್ನು ತೆರೆದಾಗ ಎದುರಲ್ಲಿ ಆತನ ಪ್ರೊಫೆಸರ್ ಬಾಗಿಲಲ್ಲಿ ನಿಂತಿದ್ದರು. ಅವರ ಕಣ್ಣುಗಳು ಅಪನಂಬಿಕೆ ಮತ್ತು ಅತ್ಯಾಶ್ಚರ್ಯದಿಂದ ದೊಡ್ಡದಾಗಿ ತೆರೆದಿದ್ದು ಜಾರ್ಜ್ ನೀನೇನು ಮಾಡಿದೆ ಎಂದು ನಿನಗೆ ಅರಿವಿದೆಯೇ? ಎಂದು ಕೇಳಿದರು.
ದಶಕಗಳಿಂದ ಅಂಕಿ ಅಂಶ ತಜ್ಞರು ಬಿಡಿಸಲಾಗದೆ ಒದ್ದಾಡುತ್ತಿದ್ದ ಎರಡು ಅತ್ಯಂತ ಕ್ಲಿಷ್ಟ ಲೆಕ್ಕಗಳಿಗೆ ನೀನು ಉತ್ತರಿಸಿರುವೆ. ಇದುವರೆಗೂ ಈ ಲೆಕ್ಕಗಳನ್ನು ಯಾರೂ ಬಿಡಿಸಿಲ್ಲ ಎಂಬುದು ಕೂಡ ನಿನ್ನ ಅರಿವಿಗೆ ಬಂದಿಲ್ಲ ಅಲ್ಲವೇ? ಎಂದು ಅತ್ಯಂತ ಸಂತಸದಿಂದ ಶಿಷ್ಯನ ಬೆನ್ನು ಚಪ್ಪರಿಸಿದರು.
ಮುಂದೆ ಆ ಲೆಕ್ಕಗಳ ಉತ್ತರಗಳು ಆತನ ಪಿ ಎಚ್ ಡಿ ಪ್ರಬಂಧದ ವಿಷಯವಾಗಿ ಮಂಡನೆಯಾದವು. ಮುಂದಿನ ಹಲವು ವರ್ಷಗಳು ಆತ ತನ್ನ ವೃತ್ತಿ ಜೀವನದಲ್ಲಿ ಅದ್ಭುತವಾದ ಮೈಲಿಗಲ್ಲುಗಳನ್ನು ದಾಟಿದ. ಜಾರ್ಜ್ ಗಣಿತ ಶಾಸ್ತ್ರದ ಕಾರ್ಯಾಚರಣೆಗಳ ಸಂಶೋಧನೆಯಲ್ಲಿ ತೊಡಗಿಕೊಂಡನು. ಮುಂದೆ ಆತ ಸಿಂಪ್ಲೆಕ್ಸ್ ಅಲ್ಗೊರಿದಮ್ ಕೋಷ್ಟಕವನ್ನು ಸೃಷ್ಟಿಸಿದ. ಆಪ್ಟಿಮೈಸೇಶನ್ ಥಿಯರಿಯ ಬುನಾದಿ ಕಲ್ಲನ್ನು ಹಾಕಿದ. ಈ ಆಪ್ಟಿಮೈಸೇಶನ ಸಿದ್ದಾಂತವು ಪವರ್ ಲಾಜಿಸ್ಟಿಕ್ ಏರ್ ಲೈನ್ಸ್ ಶೆಡ್ಯೂಲಿಂಗ್ ಎಕನಾಮಿಕ್ ಮಾಡಲಿಂಗ್ ಮತ್ತು ಮಿಲಿಟರಿ ಪ್ಲಾನಿಂಗ್ ಅಲ್ಲದೆ ಪ್ರಪಂಚದಾದ್ಯಂತ ಹತ್ತು ಹಲವು ಉದ್ಯಮಗಳಲ್ಲಿ ಉಪಯುಕ್ತವಾದ ಮಾಹಿತಿಗಳನ್ನು ಕಲೆ ಹಾಕಲು ಬಳಸಲ್ಪಡುತ್ತಿದೆ.
ಇಲ್ಲಿ ನಮಗೆ ಮುಖ್ಯವಾಗಿ ಕಾಣುವುದು ಜಾರ್ಜ್ ನ ಜಾಣತನಕ್ಕಿಂತ ತಾನು ಈ ಲೆಕ್ಕಗಳನ್ನು ಮಾಡಲೇಬೇಕು ಎಂದು ಆತ ಆ ಲೆಕ್ಕಗಳನ್ನು ಹೇಗಾದರೂ ಮಾಡಿ ತಾನು ಬಿಡಿಸಲೇಬೇಕು ಎಂದು ತನ್ನ ಮನಸ್ಸಿನಲ್ಲಿ ಸಾಕಾರಗೊಳಿಸಿಕೊಂಡ ಶ್ರದ್ದೆಯನ್ನು ಆತ ಈ ಲೆಕ್ಕಗಳು ಬಿಡಿಸಲು ಸಾಧ್ಯವಾಗದ ಸಮಸ್ಯೆಗಳು ಎಂದು ಯೋಚಿಸಲೇ ಇಲ್ಲ. ಏಕೆಂದರೆ ಪ್ರೊಫೆಸರರು ಹೇಳಿದ್ದನ್ನು ಆತ ಕೇಳಿರಲಿಲ್ಲ ಮತ್ತು ಬೇರೆಯವರನ್ನು ಕೂಡ ಆತ ಕೇಳಲೇ ಇಲ್ಲ. ಎಷ್ಟೋ ಬಾರಿ ಈ ರೀತಿಯ ಉದಾಸೀನತೆಗಳು ಒಂದು ರೀತಿಯ ಸ್ವಾತಂತ್ರವನ್ನು ತಂದುಕೊಡುತ್ತವೆ. ಪ್ರಯತ್ನಿಸುವ ಸ್ವಾತಂತ್ರ್ಯ ಮತ್ತು ಯಶಸ್ಸನ್ನು ಪಡೆಯುವ ಸ್ವಾತಂತ್ರ್ಯ ಚಾರ್ಜ್ ಡ್ಯಾಂಟ್ ಜಿಗ್ ನ ಈ ಕತೆ ಎಷ್ಟೋ ಬಾರಿ ನಾವು ನಮ್ಮ ಮೇಲೆ ಹೇರಿಕೊಂಡಿರುವ ಕೆಲವು ಮಿತಿಗಳ ವರ್ತುಲಗಳನ್ನು ಮೀರಿ ಪ್ರಯತ್ನಿಸಿದಾಗ ಯಶಸ್ಸು ನಮಗೆ ದೊರೆಯುತ್ತದೆ ಎಂಬುದನ್ನು ಹೇಳುತ್ತದೆ. ಮತ್ತೆ ಕೆಲವೊಮ್ಮೆ ಈ ಮಿತಿಗಳು ನಿಜವಾಗಿದ್ದರೂ ಕೂಡ ಆ ಮಿತಿಗಳ ಕುರಿತು ನಮಗೆ ಹೇಳುವವರ ಮೇಲೆ ಕೂಡ ನಿರ್ಬರವಾಗಿರುತ್ತವೆ. ನಾವು ಮತ್ತು ನಾವು ಕಲ್ಪಿಸಿಕೊಂಡಿರುವ ಮಿತಿಗಳ ನಡುವೆ ಅಗೋಚರವಾದ ಅಸಾಧಾರಣವಾದ ಶಕ್ತಿಯೊಂದು ನಮ್ಮೊಳಗೆ ಕಾರ್ಯ ನಿರ್ವಹಿಸುತ್ತಿದ್ದರೆ ಅಸಾಧ್ಯವಾದದನ್ನು ಸಾಧ್ಯಗೊಳಿಸುವ ತಾಕತ್ತು ನಮಗಿರುತ್ತದೆ.
ನನಗೆ ಮತ್ತೊಂದು ಕಥೆ ನೆನಪಾಗುತ್ತಿದೆ. ಕಪ್ಪೆಗಳ ಗುಂಪೊಂದು ಕಡಿದಾದ ಬೆಟ್ಟವನ್ನು ಏರುವ ಒಂದು ಕಠಿಣ ಸವಾಲನ್ನು ತನ್ನ ಸಮುದಾಯದ ಯುವ ಕಪ್ಪೆಗಳಿಗೆ ಹಾಕಿತು. ಸ್ಪರ್ಧೆಯಲ್ಲಿ ಭಾಗವಹಿಸಲು ಬಹಳಷ್ಟು ಕಪ್ಪೆಗಳು ಮುಂದೆ ಬಂದವು. ಅವುಗಳಲ್ಲಿ ಒಂದು ಕಾಲು ತುಸು ಚಿಕ್ಕದಾಗಿದ್ದ ಆಕಾರದಲ್ಲಿ ಅತ್ಯಂತ ತೆಳುವಾಗಿದ್ದ ಕಪ್ಪೆಯು ಇತ್ತು. ಕಪ್ಪೆಯ ಪುಟ್ಟ ಆಕಾರವನ್ನು ನೋಡಿ ಉಳಿದ ಎಲ್ಲಾ ಕಪ್ಪೆಗಳು ನಗಾಡಿದವು. ಉಳಿದೆಲ್ಲ ಕಪ್ಪೆಗಳು ನಗುವುದನ್ನು ನೋಡಿದ ಆ ಪುಟ್ಟ ಕಪ್ಪೆ ತಾನು ಕೂಡ ಹಲ್ಲು ಕಿರಿಯಿತು. ಸ್ಪರ್ಧೆ ಆರಂಭವಾಗುವ ಗಂಟೆ ಬಾರಿಸಿದೊಡನೆ ಎಲ್ಲಾ ಸ್ಪರ್ಧಾಳು ಕಪ್ಪೆಗಳು ವೇಗವಾಗಿ ಬೆಟ್ಟವನ್ನು ಏರಲು ಆರಂಭಿಸಿದವು. ಆ ಪುಟ್ಟ ಕಪ್ಪೆ ಕೂಡ.! ಕೆಳಗೆ ನಿಂತ ಉಳಿದೆಲ್ಲ ಕಪ್ಪೆಗಳು ಪುಟ್ಟ ಕಪ್ಪೆಯನ್ನು ಕುರಿತು ನಗಾಡುತ್ತಾ ನಿನ್ನ ಕೈಯಲ್ಲಿ ಸಾಧ್ಯವಾಗುವುದಿಲ್ಲ ಎಂದು ಕೂಗುತ್ತಿದ್ದರೆ ಪುಟ್ಟ ಕಪ್ಪೆ ತನ್ನ ಪಾಡಿಗೆ ತಾನು ಮೇಲೆ ಹಾರುತ್ತಾ, ಜಿಗಿಯುತ್ತ ತನ್ನ ಗಮ್ಯದೆಡೆ ಪಯಣ ಸಾಗಿ ಅಂತಿಮ ರೇಖೆಯನ್ನು ಎಲ್ಲರಿಗಿಂತಲೂ ಮುಂಚೆಯೇ ತಲುಪಿ ಮೊದಲ ಸ್ಥಾನ ಗಳಿಸಿತು. ಎಲ್ಲರೂ ಜೋರಾಗಿ ಚಪ್ಪಾಳೆ ಹಾಕಿ ಆ ಪುಟ್ಟ ಕಪ್ಪೆಯನ್ನು ಅಭಿನಂದಿಸಿದಾಗಲೂ ಅದು ನಕ್ಕು ಗೋಣು ಹಾಕುತ್ತಿತ್ತು.

ಫೋಟೋ ಕೃಪೆ : google
ಪ್ರಶಸ್ತಿಯನ್ನು ಸ್ವೀಕರಿಸಿ ಕೆಳಗೆ ಬಂದ ಪುಟ್ಟ ಕಪ್ಪೆಯನ್ನು ಪತ್ರಕರ್ತರೊಬ್ಬರು ಕೆಳಗೆ ನಿಂತ ಉಳಿದೆಲ್ಲ ಕಪ್ಪೆಗಳು ನಿನ್ನನ್ನು ಅಷ್ಟು ಹೀಯಾಳಿಸಿದರೂ ಕೂಡ ನೀನು ಅದಾವುದಕ್ಕೂ ತಲೆಕೆಡಿಸಿಕೊಳ್ಳದೆ ಪ್ರಯತ್ನವನ್ನು ಮುಂದುವರಿಸಿ ಮೊದಲ ಸ್ಥಾನ ಗಳಿಸಿದೆ ಇದು ಹೇಗೆ ಸಾಧ್ಯವಾಯಿತು? ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರವಾಗಿ ಆ ಪುಟ್ಟ ಕಪ್ಪೆ “ತುಸು ಜೋರಾಗಿ ಹೇಳಿ, ನನ್ನ ಕಿವಿ ಸ್ವಲ್ಪ ಮಂದ” ಎಂದು ಹೇಳಿತು.
ಪತ್ರಕರ್ತ ಆ ಪುಟ್ಟ ಕಪ್ಪೆಯ ಕೈ ಕುಲುಕುತ್ತಾ ನೀವು ಹೇಳದೆಯೇ ನಿಮ್ಮ ಯಶಸ್ಸಿನ ರಹಸ್ಯದ ಅರಿವಾಯಿತು, ಧನ್ಯವಾದಗಳು ಎಂದ. ಹಾಗಾದರೆ ಆ ಪತ್ರಕರ್ತನಿಗೆ ಗೊತ್ತಾದ ವಿಷಯ ಯಾವುದು ಎಂದು ಪ್ರಶ್ನಿಸಿದರೆ ಬಹಳಷ್ಟು ಬಾರಿ ನಾವು ನಮ್ಮ ಬದುಕಿನ ದಾರಿಯಲ್ಲಿ ಎದುರಾಗುವ ನಕಾರಾತ್ಮಕ ವಿಷಯಗಳಿಗೆ ಕಿವುಡರಾಗಿರಬೇಕು ಅಂತಹ ಯಾವುದೇ ವಿಷಯಗಳು ನಮ್ಮ ಚಿತ್ತ ಸ್ವಾಸ್ಥ್ಯವನ್ನು ಕಲಕದಂತೆ ನಮ್ಮ ಮನಸ್ಸನ್ನು ನಾವು ಸ್ಥಿಮಿತದಲ್ಲಿ ಇಟ್ಟುಕೊಳ್ಳಬೇಕು.
ನೋಡಿದಿರಾ ಸ್ನೇಹಿತರೆ, ಬಹಳಷ್ಟು ಬಾರಿ ನಾವು ಸಣ್ಣ ಕೂದಲೆಳೆಯಂತಹ ಸಮಸ್ಯೆಯನ್ನು ಹಗ್ಗವೆಂದು ಭಾವಿಸಿ ಹಗ್ಗವನ್ನು ಹಾವೆಂದು ಭಾವಿಸಿ ನಮಗೆ ನಾವೇ ಭಯಪಟ್ಟುಕೊಳ್ಳುವುದಲ್ಲದೇ ನಮ್ಮ ಸುತ್ತ ಇರುವವರನ್ನು ಕೂಡ ಭಯಕ್ಕೆ ಈಡು ಮಾಡುತ್ತೇವೆ. ಇದು ಖಂಡಿತಾ ಸಲ್ಲದು. ಬೆಟ್ಟವನ್ನು ಹತ್ತಿ ನೋಡಿದರಷ್ಟೇ ನಮಗೆ ಸುತ್ತಲಿನ ವಿಹಂಗಮ ದೃಶ್ಯದ ಅರಿವಾಗುತ್ತದೆ, ಅಂತೆಯೇ ಪ್ರತಿಯೊಂದು ಪುಟ್ಟ ಸವಾಲು ಕೂಡ ನಮಗೆ ದೊಡ್ಡದಾಗಿ ತೋರುವುದು ನಾವು ಅವುಗಳನ್ನು ಬದುಕಿನ ರಾವುಗಾಜಿನಲ್ಲಿ ಹಾಕಿ ನೋಡುವ ಕಾರಣಕ್ಕೇ ಹೊರತು ಅವು ನಿಜವಾಗಿಯೂ ಹಾಗೆ ಇರಲಾರವು.
ಈ ಸತ್ಯವನ್ನು ಅರಿತು ನಾವು ಬದುಕಿನಲ್ಲಿ ಕಾರ್ಯನಿರ್ವಹಿಸಿದರೆ ನಮ್ಮ ಬದುಕು ಯಶಸ್ಸಿನತ್ತ ದಾಪುಗಾಲು ಹಾಕಿ ಮುನ್ನಡೆಯುತ್ತದೆ. ಏನಂತೀರಾ ಸ್ನೇಹಿತರೇ?
ಹಿಂದಿನ ಸಂಚಿಕೆಗಳು :
- ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ, ಗದಗ
