ಬದುಕಿಗೊಂದು ಸೆಲೆ (ಭಾಗ-೪೧)

ಬೇರೆಯವರ ಐಷಾರಾಮಿ ಬದುಕನ್ನು ನೋಡಿ ನಾವು ಆಸೆ ಪಡಬಾರದು. ನಮಗೆ ಸಿಕ್ಕ ಬದುಕನ್ನು ಸಂತೋಷದಿಂದ ಅನುಭವಿಸವೇಕೆನ್ನುವ ನೀತಿಯನ್ನು ಸಾರುವ ವೀಣಾ ಹೇಮಂತ್ ಗೌಡ ಪಾಟೀಲ್ ಅಂಕಣದಲ್ಲಿ ‘ಅವರಿವರನ್ನು ಕಂಡು ಕರುಬದಿರಿ… ನೀವು ನೀವಾಗಿಯೇ ಇರಿ’, ತಪ್ಪದೆ ಮುಂದೆ ಓದಿ…

ಅಮೇರಿಕಾದ ಅತಿ ದೊಡ್ಡ ಲಾಯವೊಂದರಲ್ಲಿ ಕತ್ತೆಯನ್ನು ಸಾಕಲಾಗಿತ್ತು. ತನ್ನ ಇಡೀ ಜೀವನದಲ್ಲಿ ಅದು ಅತ್ಯಂತ ದೊಡ್ಡ ಭಾರವನ್ನು ಹೊತ್ತಿದ್ದರೆ ಅದು ಖುದ್ದು ಆ ಕತ್ತೆಯ ‘ಅಸೂಯೆ’ಯ ಭಾರವಾಗಿತ್ತು. ಹೌದು ಆ ಕತ್ತೆ ಲಾಯದಲ್ಲಿ ಇದ್ದ ಇನ್ನಿತರ ಕುದುರೆಗಳಿಗೆ ತನ್ನನ್ನು ತಾನು ಹೋಲಿಸಿಕೊಂಡು ಅಸೂಯೆ ಪಡುತ್ತಿತ್ತು. ಆ ಲಾಯದಲ್ಲಿ ಕುದುರೆಗಳನ್ನು ಅತ್ಯಂತ ಗೌರವದಿಂದ ನಡೆಸಿಕೊಳ್ಳಲಾಗುತ್ತಿತ್ತು. ಚೆನ್ನಾಗಿ ತಿನ್ನಿಸಿ ಉಣ್ಣಿಸಿ ಅವುಗಳ ಮೈ ಮಿರಿಮಿರಿ ಮಿಂಚುವಂತೆ ಮಾಲೀಶು ಮಾಡಲಾಗುತ್ತಿತ್ತು.

ಆದರೆ ಅದೇ ಲಾಯದಲ್ಲಿದ್ದ ಕತ್ತೆಯ ಬೆನ್ನ ಮೇಲೆ ಮಣ್ಣಿನ ಮೂಟೆಗಳನ್ನು ಹೊರಿಸಲಾಗುತ್ತಿತ್ತು. ಇಡೀ ದಿನದ ದುಡಿತದ ನಂತರ ಗಟ್ಟಿಯಾದ ನೆಲದ ಮೇಲೆ ಮಲಗಿಸಲಾಗುತ್ತಿತ್ತು. ಕುದುರೆಗಳಂತೆ ಒಳ್ಳೆಯ ಆಹಾರ ಕೂಡ ಅದಕ್ಕೆ ದೊರೆಯುತ್ತಿರಲಿಲ್ಲ.

ಒಂದೇ ಸಮನೆ ಕತ್ತೆ! ಚಾಕರಿ ಮಾಡಿ ರಾತ್ರಿ ವಿಶ್ರಾಂತಿಗೆ ನೆಲದ ಮೇಲೆ ಮಲಗಿದಾಗ ಕತ್ತೆಯ ಲಕ್ಷ್ಯವೆಲ್ಲ ಕುದುರೆಯ ಲಾಯದತ್ತ ಹೊರಳಿ ‘ನಾನು ಕೂಡ ಕುದುರೆಯಾಗಿದ್ದರೆ ನನ್ನ ಜೀವನವೇ ಬದಲಾಗಿರುತ್ತಿತ್ತು. ನಾನು ಕೂಡ ಹಸಿ ಹುಲ್ಲಿನ ನಯವಾದ ಮೆತ್ತೆಯ ಮೇಲೆ ಆರಾಮಾಗಿ ಮಲಗಲು ಸಾಧ್ಯವಾಗುತ್ತಿತ್ತು. ನನಗೂ ಕೂಡ ಒಳ್ಳೆಯ ಆಹಾರ ದೊರೆಯುತ್ತಿತ್ತು, ಅಲ್ಲವೇ ‘ಎಂದು ತನಗೆ ತಾನೆ ಗೊಣಗಿಕೊಳ್ಳುತ್ತಿತ್ತು.

ಫೋಟೋ ಕೃಪೆ : ಅಂತರ್ಜಾಲ

ಅದೊಂದು ದಿನ ಮುಂಜಾನೆಯಂತೂ ಅದು ನಾನು ಇನ್ನು ಮುಂದೆ ಕತ್ತೆಯಾಗಿ ಬದುಕಲಾರೆ ಎಂದು ತನಗೆ ತಾನೇ ಪ್ರತಿಜ್ಞೆ ಮಾಡಿಕೊಂಡಿತು. ತನ್ನನ್ನು ಕೂಡ ಕುದುರೆಯಂತೆ ಆದರಿಸುವವರೆಗೆ ಮೂಟೆಗಳನ್ನು ಹೊರುವುದನ್ನು ನಿಲ್ಲಿಸಬೇಕೆಂದು ತೀರ್ಮಾನಿಸಿತು. ಅಂತಿಯೇ ಅದರ ಹೆಗಲ ಮೇಲೆ ಮೂಟೆಯನ್ನು ಇಡುವಾಗಲೇ ಕತ್ತನ್ನು ಅಲ್ಲಾಡಿಸಿ ಬೀಳಿಸಿ ಬಿಡುತ್ತಿತ್ತು. ಸಾಮಾನ್ಯವಾಗಿ ಕತ್ತೆಗಳು ಹೊರಳಾಡುವಂತೆ ಮಣ್ಣಿನ ಮೇಲೆ ಹೊರಳಾಡುವುದನ್ನು ನಿಲ್ಲಿಸಿ ತನ್ನನ್ನು ತಾನು ಸ್ವಚ್ಛವಾಗಿಟ್ಟುಕೊಳ್ಳಲು ಪ್ರಯತ್ನಿಸಿತು. ಕುದುರೆಯಂತೆ ಕತ್ತನ್ನು ಮೇಲೆ ಮಾಡಿ ನಡೆಯಲು ಪ್ರಯತ್ನಪೂರ್ವಕವಾಗಿ ರೂಢಿಸಿಕೊಂಡಿತು. ತಾನು ಕುದುರೆಯಂತೆ ಹಾವ ಭಾವಗಳನ್ನು ರೂಢಿಸಿಕೊಂಡರೆ ತನ್ನನ್ನು ಹಾಗೆಯೇ ಭಾವಿಸುತ್ತಾರೆ ಎಂಬ ಹುಸಿ ಭರವಸೆಯನ್ನು ಅದು ಹೊಂದಿತ್ತು.

ಕತ್ತೆಯ ಈ ಅಟಾಟೋಪವನ್ನು ನೋಡಿ ಕುದುರೆಗಳು ತಮಗೆ ಸಹಜವಾದ ಹೇಷಾರವ ಮಾಡಿ ನಕ್ಕು ‘ನೋಡು ಆ ಕತ್ತೆ ನಮ್ಮಂತೆ ಆಗಲು ಬಯಸುತ್ತದೆ. ನಿಜವಾಗಿಯೂ ಇದೊಂದು ಶುದ್ಧ ಕತ್ತೆಯೇ ಸರಿ’ ಎಂದು ಗೇಲಿ ಮಾಡಿದವು. ಕತ್ತೆಗೆ ಇದಾವುದೂ ವ್ಯತ್ಯಾಸವನ್ನು ತರಲಿಲ್ಲ. ಖಂಡಿತವಾಗಿಯೂ ತನ್ನ ಮಾಲೀಕ ತನ್ನಲ್ಲಾಗಿರುವ ಈ ಬದಲಾವಣೆಯನ್ನು ಗುರುತಿಸುತ್ತಾನೆ ಹಾಗೂ ತನ್ನನ್ನು ಕೂಡ ಕುದುರೆಯಂತೆ ಭಾವಿಸಿ ಕಾಳಜಿ ಮಾಡುತ್ತಾನೆ ಎಂದೇ ಅದರ ಭಾವನೆಯಾಗಿತ್ತು.

ಇದಕ್ಕೆ ವಿರುದ್ಧವಾಗಿ ಮಾಲೀಕ ಕತ್ತೆಯನ್ನು ತಿರಸ್ಕಾರದಿಂದ ನೋಡಲಾರಂಭಿಸಿದ. ಅದಕ್ಕೆ ಆಹಾರವನ್ನು ಕೊಡಲು ಕೂಡ ಹಿಂದೆ ಮುಂದೆ ನೋಡಿದ. ಕತ್ತೆಯ ಕಡೆ ಕನಿಷ್ಠ ಗಮನವನ್ನು ಕೂಡ ನೀಡಲಿಲ್ಲ. ಮತ್ತೆ ಮೊದಲ ಬಾರಿಗೆ ಯಾವೊಂದು ಕೆಲಸವೂ ಇಲ್ಲದ ಸ್ಥಿತಿ ಕತ್ತೆಯದಾಯಿತು. ಅಂತೂ ನಾನು ಕುದುರೆಯಾದೆ ಎಂದು ಕತ್ತೆ ಭಾವಿಸಿತು.

ಒಂದೆರಡು ದಿನಗಳಲ್ಲಿಯೇ ಹಸಿವು ಕತ್ತೆಯ ನರಗಳಲ್ಲಿನ ಶಕ್ತಿಯನ್ನು ಕಸಿಯಿತು. ಕಾಲುಗಳು ಮುಂದೆ ಚಲಿಸಲು ಸಾಧ್ಯವಿಲ್ಲ ಎಂಬಂತೆ ಅಶಕ್ತವಾದವು. ಹಸಿವಿನಿಂದ ಬಳಲಿದ ಕತ್ತೆಯ ಗರ್ವಭಂಗವಾಯಿತು. ಕಾಲು ಎಳೆಯುತ್ತಾ ಕುದುರೆಗಳಿಗಾಗಿ ಹಾಕಿದ್ದ ಹಸಿ ಹುಲ್ಲಿನತ್ತ ಧಾವಿಸಿದ ಕತ್ತೆಯನ್ನು ನೋಡಿ ಕುದುರೆಗಳು ‘ಇದು ನಮಗಾಗಿಯೇ ವಿಶೇಷವಾಗಿ ಬೆಳೆಸಿದ್ದು, ನಿನ್ನಂತವರಿಗಲ್ಲ ನೀನು ನಮ್ಮವನಲ್ಲ. ಎಂದು ಅವಮಾನಿಸಿದವು. ಮರಳಿ ತನ್ನ ನಿಗದಿತ ಸ್ಥಳಕ್ಕೆ ಬಂದು ನೋಡಿದ ಕತ್ತೆಗೆ ಅಲ್ಲಿ ತನ್ನನ್ನು ಕಟ್ಟಿರುವ ಜಾಗದಲ್ಲಿ ಮತ್ತಾವ ಕತ್ತೆಯೂ ಇಲ್ಲದೆ ಇರುವುದನ್ನು ನೋಡಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿತು. ಎಂದಿನಂತೆ ತನ್ನ ಕೆಲಸವನ್ನು ಮಾಡಲು ಪ್ರಯತ್ನಿಸಿದ ಕತ್ತೆಗೆ ದೇಹ ಸಹಕರಿಸಲಿಲ್ಲ. ಮುಂದೆಂದೂ ಆತ ಕುದುರೆಯಾಗುವ ಪ್ರಯತ್ನ ಮಾಡಲಿಲ್ಲ. ಆದರೆ ಆತನಿಗೆ ಕತ್ತೆಯಾಗಿ ತನ್ನ ಕಾರ್ಯವನ್ನು ನಿರ್ವಹಿಸಲು ಕೂಡ ಸಾಧ್ಯವಾಗಲಿಲ್ಲ.

ಫೋಟೋ ಕೃಪೆ : ಅಂತರ್ಜಾಲ

ಮುಂದಿನ ಒಂದೆರಡು ದಿನಗಳಲ್ಲಿ ಮಾಲೀಕ ಹಗ್ಗವೊಂದನ್ನು ತಂದು ಕೆಲಸ ಮಾಡದ ಕತ್ತೆಗಳಿಗೆ ಇಲ್ಲಿ ಜಾಗವಿಲ್ಲ ಎಂದು ತಣ್ಣಗಿನ ಸ್ವರದಲ್ಲಿ ಹೇಳುತ್ತಾ ಅದರ ಕುತ್ತಿಗೆಗೆ ಹಗ್ಗವನ್ನು ಕಟ್ಟಿದ. ಕತ್ತೆ ಒದ್ದಾಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿತು. ಸಹಾಯಕ್ಕಾಗಿ ಅರಚಿ ಕುದುರೆಗಳನ್ನು ಕರೆಯಿತು. ಆದರೆ ಅವು ಕತ್ತೆಯ ಕಡೆ ತಿರುಗಿಯೂ ನೋಡಲಿಲ್ಲ. ಕತ್ತೆ ಅದೆಷ್ಟೇ ಕೊಸರಾಡಿ ನಾನು ಮತ್ತೆ ಕತ್ತೆಯಾಗಿ ಕೆಲಸ ಮಾಡುತ್ತೇನೆ ಎಂದು ಅತ್ತು ಕರೆದರೂ ಪ್ರಯೋಜನವೇನೂ ಆಗಲಿಲ್ಲ.

ನೋಡಿದಿರಾ ಸ್ನೇಹಿತರೆ, ಎಷ್ಟೋ ಬಾರಿ ನಾವು ನಮ್ಮ ಸ್ನೇಹಿತರ ಮನೆ, ಕಾರು, ಎಲೆಕ್ಟ್ರಾನಿಕ್ ಗ್ಯಾಜೆಟ್ಗಳು ಮತ್ತಿತರ ಐಷಾರಾಮಿ ವಸ್ತುಗಳನ್ನು ನೋಡಿ ಅವು ನಮ್ಮ ಬಳಿ ಇಲ್ಲವೆಂದು ಅವರ ಬದುಕನ್ನು ನಮ್ಮ ಬದುಕಿಗೆ ಹೋಲಿಸಿಕೊಂಡು ವ್ಯಥೆ ಪಡುತ್ತೇವೆ. ನಮ್ಮ ಬಳಿ ಇರುವ ವಸ್ತುಗಳನ್ನು, ವ್ಯಕ್ತಿಗಳನ್ನು, ನಾವು ಹೊಂದಿರುವ ಮೌಲ್ಯಗಳನ್ನು ಪರಿಗಣಿಸುವುದಿಲ್ಲ. ಮತ್ತೆ ಕೆಲ ವಸ್ತುಗಳು ನಮ್ಮ ಅಸ್ತಿತ್ವದ ಗುರುತಾಗಿರುತ್ತದೆ ಎಂಬುದನ್ನು ಮರೆತು ಕೂಡ ನಾವು ಬೇರೊಬ್ಬರ ವಸ್ತುಗಳನ್ನು, ಬದುಕನ್ನು, ಅವರ ಜೀವನ ಶೈಲಿಯನ್ನು ನೋಡಿ ಕರುಬುತ್ತೇವೆ.ಇದು ಸಲ್ಲದು.

ಬದಲಾಗುತ್ತಲೇ ಇರುವ ಈ ಜಗತ್ತಿನಲ್ಲಿ ನಮ್ಮಂತಹ ವಿಶಿಷ್ಟ ವ್ಯಕ್ತಿ ಮತ್ತೊಬ್ಬರಿಲ್ಲ. ಲಕ್ಷ, ಕೋಟಿ ಸಂಖ್ಯೆಯಲ್ಲಿ ನಮ್ಮಂತೆ ಇರುವ ಮತ್ತೊಬ್ಬ ವ್ಯಕ್ತಿಯನ್ನು ನಾವು ಕಾಣಲು ಸಾಧ್ಯವಿಲ್ಲ. ಆ ಸೃಷ್ಟಿಕರ್ತ ಭಗವಂತನೇ ನಮ್ಮನ್ನು ಇನ್ನೊಬ್ಬರಂತೆ ಸೃಷ್ಟಿಸಿಲ್ಲ ಎಂದಾದರೆ ನಾವು ಅವರಿವರಂತೆ ಆಗಬೇಕು ಎಂದು ಯೋಚಿಸುವುದು ನಮ್ಮ ಮೂರ್ಖತನವಾಗುವುದಿಲ್ಲವೇ!? ನಾವು ಇರುವ ರೀತಿಯಲ್ಲಿಯೇ ನಮ್ಮ ಅಸ್ತಿತ್ವದ ಮೂಲ ಬೇರುಗಳನ್ನು ಗಟ್ಟಿಗೊಳಿಸಿಕೊಂಡು ಇನ್ನಷ್ಟು ಉತ್ತಮಿಕೆಯನ್ನು ಹೊಂದುವ ನಿಟ್ಟಿನಲ್ಲಿ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕು… ಏನಂತೀರಾ?


  • ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ, ಗದಗ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW