ಬದುಕಿಗೊಂದು ಸೆಲೆ (ಭಾಗ-೪೭)

ಸಾಮಾನ್ಯವಾಗಿ ಚಲನಚಿತ್ರಗಳಲ್ಲಿ ವಧು ಪರೀಕ್ಷೆ ಹಾಗೂ ವರ ಪರೀಕ್ಷೆಗಳು ಹೇಗಿರುತ್ತವೆ ಎಂಬುದನ್ನು ನೋಡಿ ನಮಗೆ ಒಂದು ಹಂತದವರೆಗೆ ಈ ಕುರಿತು ಪರಿಚಯ ಇದೆ. ಅಂಕಣಕಾರ್ತಿ ವೀಣಾ ಹೇಮಂತ್ ಗೌಡ ಪಾಟೀಲ್ ಅವರು ‘ಹೀಗೊಂದು ವಧು/ವರ ಪರೀಕ್ಷೆ ’ ವಿಷಯದ ಕುರಿತು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಏಳೆಂಟು ದಶಕಗಳ ಹಿಂದೆ ವಧುವನ್ನು ನೋಡಲು ಯಾರೂ ಹೇಳಿ ಇಲ್ಲವೇ ಕೇಳಿ ಹೋಗುತ್ತಲೇ ಇರಲಿಲ್ಲ. ವರನ ಸಂಬಂಧಿಕರಲ್ಲಿ ಯಾರಾದರೂ ಒಬ್ಬರು ವಧುವಿನ ಮನೆಯಲ್ಲಿರುವ ಹಸು ಇಲ್ಲವೇ ಎಮ್ಮೆಯನ್ನು, ಹೊಲ ಖರೀದಿಸುವ ಇಲ್ಲವೇ ಇನ್ನಾವುದೋ ವಿಷಯವನ್ನು ಮುಂದಿಟ್ಟುಕೊಂಡು ಅವರ ಮನೆಗೆ ಹೋಗುತ್ತಿದ್ದರು. ಹುಡುಗಿಯ ಮುಖ ಲಕ್ಷಣ, ಸೌಂದರ್ಯ, ಗುಣ ನಡತೆಗಳನ್ನು ಆಕೆಗೆ ಅರಿವಿಲ್ಲದೆಯೇ ಪರೀಕ್ಷಿಸುವ ಈ ಪರೀಕ್ಷೆಯಲ್ಲಿ ಯಾವುದೇ ರೀತಿಯ ತೋರಿಕೆ ಇರುತ್ತಿರಲಿಲ್ಲ.

ನಂತರ ಶುರುವಾದದ್ದು ಇಂದಿಗೂ ತುಸುಮಟ್ಟಿಗೆ ಚಾಲ್ತಿಯಲ್ಲಿರುವ ಕನ್ಯಾ ಪರೀಕ್ಷೆ. ನಮ್ಮಲ್ಲಿ ಕನ್ಯಾ ಪರೀಕ್ಷೆ ಮಾಡಲು ಅಥವಾ ನಮ್ಮ ಭಾಷೆಯಲ್ಲಿ ಹೇಳೋದಾದರೆ ಕನ್ಯೆ ನೋಡಲು ಆಕೆಯ ಮನೆಗೆ ಹೋಗುತ್ತಿದ್ದರು. ಆಗ ಅಷ್ಟೇನೂ ಸುಭಿಕ್ಷವಲ್ಲದ ಕಾಲವಾಗಿತ್ತು. ಉಳ್ಳವರ ಮನೆಯಲ್ಲಿ ಎಲ್ಲ ರೀತಿಯ ಸೌಕರ್ಯಗಳು ಇರುತ್ತಿದ್ದವೇನೋ ಆದರೆ ಮಧ್ಯಮ ವರ್ಗ ಹಾಗೂ ಕೆಳ ಮಧ್ಯಮ ವರ್ಗದ ಜನರಲ್ಲಿ ಕನ್ಯಾ ಪರೀಕ್ಷೆಯ ಸಮಯ ಒಂದು ರೀತಿಯಲ್ಲಿ ಅವರ ಓಣಿಯಲ್ಲಿಯೇ ಸಂಭ್ರಮ ಮತ್ತು ಸೌಹಾರ್ದಮಯ ವಾತಾವರಣವನ್ನು ಉಂಟುಮಾಡುತ್ತಿತ್ತು ಎಂದರೆ ತಪ್ಪಿಲ್ಲ.

ಅತ್ತಿಗೆಯ ರೇಷ್ಮೆ ಸೀರೆಗೆ ಪಕ್ಕದ ಮನೆಯ ತನ್ನದೇ ವಯಸ್ಸಿನ ಸ್ನೇಹಿತೆಯ ಕುಪ್ಪಸ, ಮೇಲಿನ ಮನೆಯವರ ನೆಕ್ಲೆಸ್, ತಾಯಿ ಕೊಟ್ಟ ಹಸಿರು ಬಳೆಯ ಜೊತೆಗೆ ಹಿಂದಿನ ಮನೆಯಾಕೆ ಜಾತ್ರೆಯಲ್ಲಿ ತಂದ ಚಿನ್ನದ ಬಣ್ಣದ ಹೊಸ ಬಳೆಗಳು, ಅಮ್ಮನ ಜುಮುಕಿ ಬೆಂಡೋಲೆಗಳು ಮದುಮಗಳ ಉಡುಗೆತೊಡುಗೆಗಳಾದರೆ, ಅಲಂಕಾರ ಮಾಡಲು ವಾರಿಗೆಯ ಸ್ನೇಹಿತೆ, ಅಕ್ಕ-ತಂಗಿ, ಅತ್ತಿಗೆ ಇಲ್ಲವೇ ಚಿಕ್ಕಮ್ಮ ಹೀಗೆ ಯಾರಾದರೂ ಒಬ್ಬರು ಇದ್ದೇ ಇರುತ್ತಿದ್ದರು.

ಅಲಂಕಾರವಾದರೂ ಹೇಗೆ?? ಓರಣವಾಗಿ ತಲೆ ಬಾಚಿ ಜಡೆ ಹೆಣೆದು ಅದಕ್ಕೆ ಒಂದು ಮಾರು ಹೂವನ್ನು ನೀಟಾಗಿ ಮುಡಿಸಿ ತೊಳೆದ ಮುಖಕ್ಕೆ ಸ್ನೋ ಪೌಡರ್ ಲೇಪಿಸಿ ಒಂದಷ್ಟು ತುಟಿಗೆ ಕೆಂಪಿನ ಲಿಪ್ ಸ್ಟಿಕ್ ಬಣ್ಣವನ್ನು ಹಚ್ಚಿ ಕೆನ್ನೆಯ ಕೆಳಭಾಗದ ತುದಿಗೆ ಒಂದು ಕಪ್ಪಿನ ಬೊಟ್ಟನ್ನು ಇಟ್ಟರೆ ಅಲಂಕಾರ ಪೂರ್ಣವಾಯಿತು.

ಯಾರದೋ ಮನೆಯ ಜಮಖಾನ ತಂದು ಮತ್ತಾರದೋ ಮನೆಯ ದಿಂಬುಗಳು ಇನ್ನಾರದೋ ಮನೆಯ ಸ್ಟೀಲ್ ತಟ್ಟೆಗಳು, ಲೋಟಗಳು ಚಹಾದ ಬಟ್ಟಲುಗಳು ಹೀಗೆ ಒಬ್ಬರ ಮನೆಯಲ್ಲಿ ವಧು ಪರೀಕ್ಷೆ ಇದೆಯೆಂದರೆ ಇಡೀ ಓಣಿಯ ಜನ ತಮ್ಮ ತಮ್ಮ ಮನೆಯ ವಸ್ತುಗಳನ್ನು ನೀಡಿ ಸಹಕರಿಸುತ್ತಿದ್ದರು.

ಬರುವ ಹುಡುಗ ಹೇಗಿದ್ದಾನೆ, ಆತನೊಂದಿಗೆ ಯಾರ್ಯಾರು ಬಂದಿದ್ದಾರೆ ಎಂಬುದರ ಮಾಹಿತಿ ನೀಡಲು ಪುಟ್ಟಪೋರಿಯರ ದಂಡೇ ಇರುತ್ತಿತ್ತು. ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡ ವಧು ತಲೆ ಬಾಗಿಸಿ ಹಿರಿಯರು ಕರೆದಾಗ ಬಂದು ಕುಳಿತುಕೊಂಡು ಗಂಡಿನ ಕಡೆಯವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ತುಸುವೇ ಮುಖವನ್ನು ಮೇಲಕ್ಕೆತ್ತಿ ಗಡಿಬಿಡಿಯಲ್ಲಿ ತನ್ನನ್ನು ನೋಡಲು ಬಂದ ವರನನ್ನು ನೋಡಿ ಮತ್ತೆ ಹಿರಿಯರ ಆಣತಿಯಂತೆ ಒಂದೆಡೆ ನಿಂತು ಎಲ್ಲರಿಗೂ ಒಟ್ಟಾಗಿ ತಲೆಯನ್ನು ನೆಲಕ್ಕೆ ಹಚ್ಚಿ ನಮಸ್ಕರಿಸಿ ಒಳಹೊದರೆ ಮುಗಿಯಿತು…. ಮನೆಯ ಹಿರಿಯರ ಆಣತಿಯಂತೆ ಕಿರಿಯರು ತಿಂಡಿ, ಚಹಾ ಸರಬರಾಜು ಮಾಡತೊಡಗುತ್ತಾರೆ. ಹಿರಿಯರು ಲೋಕಾಭಿರಾಮವಾಗಿ ಮಾತನಾಡುತ್ತಾ ಕೊಟ್ಟ ಅವಲಕ್ಕಿ ಮಂಡಕ್ಕಿಯನ್ನು ಸೇವಿಸುತ್ತಾ ಅವರವರ ಸಂಬಂಧಿಕರು ಎಲ್ಲೆಲ್ಲಿ ಇದ್ದಾರೆ ಎಂಬ ವಿಷಯವನ್ನು ಕುರಿತು ವ್ಯಾಪಾರ ವ್ಯವಹಾರ ಒಕ್ಕಲುತನದ ಕುರಿತು ಮಾತನಾಡುತ್ತಾ ತಿಂಡಿ ತಿಂದು ಚಹಾ ಕುಡಿದು ಶೀಘ್ರವೇ ತಮಗೆ ವಿಷಯವನ್ನು ತಿಳಿಸುತ್ತೇವೆ ಎಂದು ಮಾತನಾಡಿ ಹೊರಡುತ್ತಿದ್ದರು.

ಇಂತಹದ್ದೇ ಒಂದು ವಧು ಪರೀಕ್ಷೆ ಕೆಲ ದಶಕಗಳ ಹಿಂದೆ ನಡೆಯಿತು. ವಧುವಿನ ತಂದೆ ಆ ಭಾಗದ ಚುನಾಯಿತ ಸದಸ್ಯರಾಗಿದ್ದ ಕಾರಣ ಅವರ ಅನುಪಸ್ಥಿತಿಯಲ್ಲಿ ಕನ್ಯಾ ಪರೀಕ್ಷೆ ನಡೆಯಿತು. ಹುಡುಗನ ರೂಪ ( ಕೆಲಮಟ್ಟಿಗೆ ಅದು ಕೂಡ ಮಾನ್ಯತೆ ಪಡೆಯುತ್ತಿತ್ತು), ಗುಣ, ವಿದ್ಯಾರ್ಹತೆ, ನೌಕರಿ ಎಲ್ಲವೂ ಒಪ್ಪಿಗೆಯಾಗಿ ಹುಡುಗನನ್ನು ಆತ ಕೆಲಸ ಮಾಡುವ ಸ್ಥಳದಲ್ಲಿಯೇ ಭೇಟಿಯಾಗಿ ಆತನ ಕುರಿತು ವಿವರ ಸಂಗ್ರಹಿಸಬೇಕೆಂದು ವಧುವಿನ ತಂದೆ ತಮ್ಮ ಸ್ನೇಹಿತರೊಂದಿಗೆ ಅವರು ಕಾರ್ಯನಿರ್ವಹಿಸುತ್ತಿದ್ದ ದೂರದ ಮತ್ತೊಂದು ರಾಜ್ಯದ ಅವರ ಕಚೇರಿ ಇದ್ದ ಸ್ಥಳಕ್ಕೆ ಹೊರಟುಬಿಟ್ಟರು.

ಮಿಲಿಟರಿಯ ಸಂಶೋಧನಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವರನಿಗೆ ಈ ಮುಂಚೆ ತಿಳಿಸದೆ ಅನಿರೀಕ್ಷಿತವಾಗಿ ಬಂದ ವಧುವಿನ ತಂದೆ ಹಾಗೂ ಅವರ ಸಂಬಂಧಿಕರು ಕಚೇರಿಯಲ್ಲಿ ಕುಳಿತು ಇವರಿಗಾಗಿ ಕಾಯುತ್ತಿದ್ದರು. ಮೇಲಧಿಕಾರಿಯ ಆದೇಶದಂತೆ ತನ್ನ ಕೆಲಸವನ್ನು ಅರ್ಧಕ್ಕೆ ಬಿಟ್ಟು ಬಂದ ವರಮಹಾಶಯ ತನ್ನ ಮೇಲಧಿಕಾರಿಗಳ ಮೂಲಕ ವಧುವಿನ ತಂದೆಗೆ ಪರಿಚಯಿಸಲ್ಪಟ್ಟರು. ಪರಸ್ಪರ ಪರಿಚಯ, ಚಹಾ ಸೇವನೆಯ ನಂತರ ಈಗಾಗಲೇ ಊಟದ ಸಮಯವಾದ್ದರಿಂದ ಅವರಿಗೆ ಹೊರಗೆ ಊಟ ಮಾಡಿಸಿದ ನಂತರ ಕಳುಹಿಸಿ ಬರುತ್ತೇನೆ ಎಂದು ವರಮಹಾಶಯ ಮೇಲಧಿಕಾರಿಗಳಿಂದ ಅನುಮತಿ ಪಡೆದುಕೊಂಡರು. ಅಂತೆಯೇ ಹತ್ತಿರದ ಹೋಟೆಲ್ ಒಂದಕ್ಕೆ ಅವರನ್ನು ಕರೆದೊಯ್ದು ಅಲ್ಲಿಯೇ ಊಟಕ್ಕೆ ಆರ್ಡರ್ ಮಾಡಿ ಅವರೊಂದಿಗೆ ಮಾತನಾಡುತ್ತಾ ಊಟ ಮಾಡಿದರು.

ಊಟವಾದ ನಂತರ ಉತ್ತರ ಕರ್ನಾಟಕ ಭಾಗದ ಹಿರಿಯರು ಎಂದರೆ ಎಲೆ ಅಡಿಕೆ ಸೇವನೆ ಮಾಡದೆ ಇರುತ್ತಾರೆಯೇ ಎಂದು ಯೋಚಿಸಿದ ವರಮಹಾಶಯ ಹತ್ತಿರದ ಪಾನ್ ಶಾಪ್ ಒಂದರಲ್ಲಿ ಅವರಿಗಾಗಿ ಮಸಾಲೆ ತುಂಬಿದ ಪಾನ್ ಖರೀದಿಸಿ ಅವರ ಕೈಗಿತ್ತು ಕಚೇರಿಗೆ ಸಮಯವಾಗಿದ್ದರಿಂದ ಅವರ ಅನುಮತಿ ಪಡೆದು ಅಲ್ಲಿಂದ ತನ್ನ ಕಚೇರಿಗೆ ಹೊರಟುಹೋದರು.

ಆತ ತಮ್ಮ ಕೈಗೆ ಕೊಟ್ಟ ಪಾನನ್ನು ಸೇವಿಸಿದ ಹಿರಿಯರು ತಮ್ಮ ಉಳಿದ ಕೆಲಸಗಳನ್ನು ಪೂರೈಸಿ ಅಂದೇ ರಾತ್ರಿ ಮರಳಿ ತಮ್ಮ ಊರಿಗೆ ಪ್ರಯಾಣವನ್ನು ಬೆಳೆಸಿದರು.
ಮರುದಿನ ಮುಂಜಾನೆ ಊರನ್ನು ತಲುಪಿ ಪ್ರಾತಃ ಕರ್ಮಗಳನ್ನು ತೀರಿಸಿ ಸ್ನಾನ ಮಾಡಿ ತಿಂಡಿ ತಿಂದರು. ಅಲ್ಲಿಯವರೆಗೂ ಕುಟುಂಬದ ಎಲ್ಲಾ ಸದಸ್ಯರು ತಮ್ಮ ಕುತೂಹಲವನ್ನು ಅದುಮಿಟ್ಟುಕೊಂಡಿದ್ದು ಇದೀಗ ಎಲ್ಲರೂ ಅವರ ಮುಂದೆ ಬಂದು ಕುಳಿತುಕೊಂಡರು.

ಹುಡುಗ ಹೇಗೆ ಎಂದು ಗೊತ್ತಾಯಿತೇ? ಎಂದು ವಧುವಿನ ತಾಯಿ ಪ್ರಶ್ನಿಸಿದರೆ ಉಳಿದವರೆಲ್ಲ ಉತ್ತರವನ್ನು ಅರಿಯುವ ಕುತೂಹಲದಿಂದ ಅವರತ್ತ ಪ್ರಶ್ನಾರ್ಥಕ ದೃಷ್ಟಿ ಬೀರಿದರು. ನಿಧಾನವಾಗಿ ತಲೆಯೆತ್ತಿ ನೋಡಿದ ಹಿರಿಯರು ಹುಡುಗನಿಗೆ ಒಳ್ಳೆಯ ಉದ್ಯೋಗ, ಹೆಸರು ಎಲ್ಲವೂ ಇದೆ. ತುಸು ಕಪ್ಪಾಗಿದ್ದರೂ ಲಕ್ಷಣವಾಗಿರುವ ಹುಡುಗನಿಗೆ ಬಹುಶಹ ಎಲೆ ಅಡಿಕೆ ತಿನ್ನುವ ಚಟ ಇದೆ ಎಂದು ಕಾಣಿಸುತ್ತದೆ ಎಂದು ತುಸು ಮೆಲುವಾದ ಧ್ವನಿಯಲ್ಲಿ ಹೇಳಿದಾಗ ವಧುವಿನ ಮುಖದ ಕಳೆಯೇ ಇಳಿದುಹೋಯಿತು. ಕಾರಣ ಇಷ್ಟೇ ಆಕೆಗೆ ತಾನು ಮದುವೆಯಾಗುವ ಹುಡುಗ ಹೇಗಿರಬೇಕು ಎಂದು ಆಕೆಯನ್ನು ಕೇಳಿದಾಗ… ಹುಡುಗ ಕಪ್ಪಿದ್ದರೂ ಪರವಾಗಿಲ್ಲ ಆದರೆ ಬಾಯಲ್ಲಿ ಎಲಡಿಕೆ ಹಾಕಿಕೊಂಡು ಅತ್ತಿತ್ತ ಉಗುಳುವ ವ್ಯಕ್ತಿ ಮಾತ್ರ ಬೇಡ ಎಂದು ಆಕೆ ಖಡಾಖಂಡಿತವಾಗಿ ಆಕೆ ಹೇಳಿದ್ದಳು.

ಮುಂದೆ ಅದು ಹೇಗೋ ಆಕೆಯನ್ನು ಒಪ್ಪಿಸಿ ಅದೇ ವ್ಯಕ್ತಿಯೊಂದಿಗೆ ಮದುವೆ ಮಾಡಲಾಯಿತು. ಮದುವೆಯಾದ ನಂತರ ಅದೊಂದು ದಿನ ಗಂಡನಿಗೆ ಎಲೆ ಅಡಿಕೆ ತಟ್ಟೆಯನ್ನು ಆಕೆ ಮುಂದೆ ತಂದಿಟ್ಟ ಸಮಯದಲ್ಲಿ ಪತಿ ಮಹಾಶಯ ನಾನು ಎಲೆ ಅಡಿಕೆ ಹಾಕುವುದಿಲ್ಲ. ಯಾವಾಗಲೂ ಒಮ್ಮೆ ಭರ್ಜರಿ ಊಟ ಅದರಲ್ಲೂ ಸಿಹಿ ಅಡುಗೆಯನ್ನು ಮಾಡಿದಾಗ ಮಾತ್ರ ಎಲೆ ಅಡಿಕೆ ತಿನ್ನುತ್ತೇನೆಯೇ ಹೊರತು ಪ್ರತಿದಿನ ಅಲ್ಲ ಎಂದು ಹೇಳಿದರು.

ಹೌದೇ! ಎಂದು ಆಕೆ ಅಚ್ಚರಿ ವ್ಯಕ್ತಪಡಿಸಿದ ರೀತಿ ಹಾಗೂ ಆಕೆಯ ಮುಖದಲ್ಲಿ ಮೂಡಿದ ನಿರಾಳತೆಯನ್ನು ನೋಡಿ ಏನಾಯಿತು? ಎಂದು ಪತಿ ಮಹಾಶಯ ಕುತೂಹಲ ತೋರಿದಾಗ ಆಕೆ ಈ ಮುಂಚೆ ವರನನ್ನು ನೋಡಲು ತನ್ನ ತಂದೆ ಅವರಿದ್ದ ಸ್ಥಳಕ್ಕೆ ಭೇಟಿ ನೀಡಿದಾಗ ನಡೆದ ಘಟನೆಯನ್ನು ಹೇಳಿದಾಗ ಅವರಿಬ್ಬರೂ ಬಿದ್ದು ಬಿದ್ದು ನಕ್ಕರು. ಈಗಲೂ ಕೂಡ ಅವರ ಬದುಕಿನಲ್ಲಿ ನಡೆದ ಈ ಘಟನೆಯನ್ನು ಆಗಾಗ ನೆನಪಿಸಿಕೊಂಡು ನಗುವುದಿದೆ.

ಈಗ ಬಿಡಿ ಆನ್ಲೈನ್ ನಲ್ಲಿ ಮದುವೆ ಬ್ರೋಕರ್ ಗಳ ಕೈಯಲ್ಲಿ ತಾವು ಬಯಸಿದ ಗುಣಗಳನ್ನು ಹೊಂದಿದ ವಧು ಇಲ್ಲವೇ ವರನ ಬಯೋಡಾಟಾ ಇಟ್ಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅವರ ಕುರಿತು ಜಾಲಾಡಿ ಮಾಹಿತಿಯನ್ನು ಕಲೆ ಹಾಕಿ, ಕೆಲವೊಮ್ಮೆ ಕಾಫಿ ಶಾಪ್ ಗಳಲ್ಲಿ, ರೆಸ್ಟೋರೆಂಟ್ಗಳಲ್ಲಿ ಭೇಟಿಯಾಗಿ ಪರಸ್ಪರ ಮಾತನಾಡಿ ತೀರ್ಮಾನಿಸುವ ಆಧುನಿಕ ಮನೋಭಾವ ಕೂಡ ಚಾಲ್ತಿಯಲ್ಲಿದೆ. ಯಾರಿಗೂ ಯಾವುದೇ ರೀತಿಯ ಒತ್ತಡವನ್ನು ತರದ, ಇರಿಸು ಮುರಿಸನ್ನು ಉಂಟುಮಾಡದ ಈ ಪರೀಕ್ಷೆ ಕೂಡ ಒಂದು ರೀತಿಯಲ್ಲಿ ಅನುಕೂಲವೇ ಸರಿ.

ಇಂತಹ ಎಷ್ಟೋ ಘಟನೆಗಳು ಪ್ರತಿ ಮನೆಗಳಲ್ಲಿ ನಡೆದಿರಬಹುದು ಅಲ್ಲವೇ ಸ್ನೇಹಿತರೆ ? ಇಂತಹ ಸುಂದರ ಘಟನೆಗಳನ್ನು ಬದುಕಿನಲ್ಲಿ ಅನಿರೀಕ್ಷಿತವಾಗಿ ನಡೆದಿದ್ದು ಆಗಾಗ ಇಂತಹ ಘಟನೆಗಳನ್ನು ಬದುಕಿನ ವಿವಿಧ ಹಂತಗಳಲ್ಲಿ ಪದೇ ಪದೇ ಮೆಲುಕು ಹಾಕಿದಾಗ ಮನಸ್ಸು ಮುದದಿಂದ ಅರಳುತ್ತದೆ. ಆತ್ಮೀಯತೆಯ ಭಾವ ಸುಳಿಯುತ್ತದೆ…. ಅಂತಹ ಆತ್ಮೀಯತೆಯ ಬಲವೇ ಒಳ್ಳೆಯ ದಾಂಪತ್ಯಕ್ಕೆ ನಾಂದಿ ಹಾಡುತ್ತದೆ ಏನಂತೀರಾ ಸ್ನೇಹಿತರೇ ?


  • ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ, ಗದಗ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW