ವಿದ್ಯಾರ್ಥಿಗಳು ತಮ್ಮ ಉದ್ಯೋಗ ಆಕಾಂಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಅದರ ತಕ್ಕಂತೆ ಶೈಕ್ಷಣಿಕ ಹಾಗೂ ಅದಕ್ಕೆ ಪೂರಕವಾದ ಗುರಿಗಳನ್ನು ನಿಗದಿಪಡಿಸಿ ಕೊಳ್ಳಬೇಕು. “Dreams defined are Goals” ಎಂಬುದು ನನ್ನ ಅಭಿಪ್ರಾಯ. ಗುರಿಗಳು ಗಮನವನ್ನು ಕೇಂದ್ರೀಕರಿಸಿ, ಗೊಂದಲಗಳನ್ನು ದೂರ ಮಾಡಲು ಸಹಾಯ ಮಾಡುತ್ತದೆ. ವೃತ್ತಿ ಸಮಾಲೋಚಕರಾದ ಪ್ರೊ.ಶಂಕರ್ ಬೆಳ್ಳೂರ್ ಅವರ ‘ಬದುಕಿನ ಗುರಿ’ ಅಂಕಣದಲ್ಲಿ ‘ವಿದ್ಯಾರ್ಥಿಗಳ ಜೀವನದಲ್ಲಿ ಗುರಿಗಳ ಮಹತ್ವ’ದ ಕುರಿತು ಚರ್ಚಿಸಿದ್ದಾರೆ ತಪ್ಪದೆ ಮುಂದೆ ಓದಿ…
ನಾನು ಸಾಮಾನ್ಯವಾಗಿ ವಿದ್ಯಾರ್ಥಿಗಳೊಂದಿಗೆ ಮಾತಾಡುವಾಗ ಅವರನ್ನು ಒಂದು ಪ್ರಶ್ನೆ ಕೇಳುತ್ತೇನೆ. ನಿಮ್ಮ ಪ್ರಕಾರ ಕನಸು ಹಾಗೂ ಗುರಿಗೆ ಏನಾದರೂ ವ್ಯತ್ಯಾಸ ಇದೆಯಾ ಅಥವಾ ಎರಡು ಒಂದೇನಾ? ಇವೆರಡಕ್ಕೂ ವ್ಯತ್ಯಾಸ ಇದ್ದರೆ ಅದನ್ನು ತಿಳಿಯುವುದು ತುಂಬಾ ಮುಖ್ಯ. ನಮ್ಮಲ್ಲಿ ಒಂದು ಮಾತು ಪ್ರಚಲಿತವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಮುಂದೆ ಒಂದು ಗುರಿ ಇರಬೇಕು ಹಿಂದೆ ಒಬ್ಬ ಗುರು ಇರಬೇಕು ಎಂದು, ಎಂತಹ ಉತ್ತಮ ವಿಚಾರವಿದು. ವಿದ್ಯಾರ್ಥಿಗಳ ಜೀವನದಲ್ಲಿ ಗುರಿ ಇಲ್ಲದಿದ್ದರೆ ಅವರು ಯಾವ ಮಹತ್ತರವಾದ ಸಾಧನೆಯನ್ನು ಮಾಡಲು ಸಾಧ್ಯವೇ ಇಲ್ಲ. ಸೂಕ್ತವಾದ ಹಾಗೂ ಸ್ಪಷ್ಟವಾದ ಗುರಿಗಳು ವಿದ್ಯಾರ್ಥಿಗಳಿಗೆ ಜೀವನದಲ್ಲಿ ಬೆಳೆಯಲು ಪ್ರೇರೇಪಿಸುತ್ತವೆ ಮತ್ತು ಪ್ರೋತ್ಸಾಹಿಸುತ್ತವೆ. ಅವು ಅವರ ಕನಸುಗಳ ಇಂಧನ ವಾಗಿದೆ.
ವಿದ್ಯಾರ್ಥಿಗಳು ತಮ್ಮ ಉದ್ಯೋಗ ಆಕಾಂಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಅದರ ತಕ್ಕಂತೆ ಶೈಕ್ಷಣಿಕ ಹಾಗೂ ಅದಕ್ಕೆ ಪೂರಕವಾದ ಗುರಿಗಳನ್ನು ನಿಗದಿಪಡಿಸಿ ಕೊಳ್ಳಬೇಕು. “Dreams defined are Goals” ಎಂಬುದು ನನ್ನ ಅಭಿಪ್ರಾಯ. ಕನಸುಗಳನ್ನು ಗುರಿಯಾಗಿಸ ಬೇಕಾದರೆ ಅದಕ್ಕೆ ಒಂದು ನಿರ್ದಿಷ್ಟವಾದ ಯೋಜನೆ ಹಾಗೂ ಕಾಲಮಿತಿ ಇರಬೇಕಾಗುತ್ತದೆ. ನಮಗೆಲ್ಲ ತಿಳಿದಿರುವಂತೆ ಕಾಲವು ಯಾರ ಅಧೀನದಲ್ಲಿ ಇರುವುದಿಲ್ಲ. ವಿದ್ಯಾರ್ಥಿಗಳಿಗೆ ಗುರಿ ಮುಟ್ಟುವ ಹಂಬಲವಿದ್ದರೆ ಸಮಯದ ಸದುಪಯೋಗ, ಸದ್ಬಳಕೆ ಹಾಗೂ ಶಿಸ್ತಿನ ಅನಿವಾರ್ಯತೆ ಇದೆ. ನಮ್ಮ ಗುರಿಯನ್ನು ಕಾಲಮಿತಿಯಲ್ಲಿ ಸಾಧಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡದಿದ್ದರೆ ಅದು ಕೇವಲ ಕನಸಾಗಿಯೇ ಉಳಿಯುತ್ತದೆ ಮತ್ತು ವಾಸ್ತವದಲ್ಲಿ ಎಂದಿಗೂ ಕಾರ್ಯರೂಪಕ್ಕೆ ಬರುವುದಿಲ್ಲ. ಸ್ಪಷ್ಟ ಗುರಿ ಇಲ್ಲದ ಜೀವನ ಬಹುಶಹ ಮುಂದೆ ಅಸಮಾಧಾನ ಮತ್ತು ವೈಫಲ್ಯವನ್ನು ಅನುಭವಿಸುವಂತೆ ಮಾಡುತ್ತದೆ. ವಿದ್ಯಾರ್ಥಿಗಳ ಜೀವನದಲ್ಲಿ ಬಲವಾದ ಗುರಿಗಳಿಂದ ಆಗುವ ಕೆಲವು ಪ್ರಯೋಜನಗಳನ್ನು ತಿಳಿಸ ಬಯಸುತ್ತೇನೆ.

ಫೋಟೋ ಕೃಪೆ : ಅಂತರ್ಜಾಲ
ಗುರಿಗಳು ಗಮನವನ್ನು ಕೇಂದ್ರೀಕರಿಸಿ, ಗೊಂದಲಗಳನ್ನು ದೂರ ಮಾಡಲು ಸಹಾಯ ಮಾಡುತ್ತದೆ. ನಮ್ಮ ಆಲೋಚನೆಗಳಲ್ಲಿ ಗೊಂದಲಗಳಿದ್ದರೆ ನಾವು ತಪ್ಪು ನಿರ್ಧಾರ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ನಿಮಗೆ ಅತ್ಯುತ್ತಮ ಸಾಮರ್ಥ್ಯಗಳು ಇದ್ದರೂ ಸಹ ಸರಿಯಾದ ಗುರಿ ಇಲ್ಲದಿದ್ದರೆ, ನಿಮ್ಮ ಕೌಶಲ್ಯಗಳು ಹಾಗೂ ಸರಿಯಾಗಿ ಬಳಕೆಯಾಗುವುದಿಲ್ಲ. ಹಾಗಾಗಿ ನೀವು ಜೀವನದಲ್ಲಿ ಹೆಚ್ಚಿನ ಯಶಸ್ಸು ಗಳಿಸಲು ತೊಂದರೆಯಾಗುತ್ತದೆ.
ಗುರಿಗಳು ನಿಮ್ಮ ಜೀವನದ ದಿಕ್ಕನ್ನು ನಿರ್ಧರಿಸುತ್ತದೆ. ಉದಾಹರಣೆಗೆ ನೀವು ರೈಲ್ವೆ ಸ್ಟೇಷನ್ ಟಿಕೆಟ್ ಕೌಂಟರ್ ಗೆ ಹೋಗಿ ಒಂದು ಟಿಕೆಟ್ ಕೊಡಿ ಎಂದರೆ ನಿಮಗೆ ಮರು ಪ್ರಶ್ನೆ ಬರುತ್ತದೆ. ಎಲ್ಲಿಗೆ ಎಂದು? ಎಲ್ಲಿಗೆ ಹೋಗಬೇಕೆಂಬ ಸ್ಪಷ್ಟತೆ ನಿಮಗಿಲ್ಲದಿದ್ದರೆ ನಿಮಗೆ ಟಿಕೆಟ್ ಸಿಗುವ ಸಾಧ್ಯತೆ ಇಲ್ಲ. ನೀವು ಯಾವ ದಿಕ್ಕಿನಲ್ಲಿ ಪರಿಶ್ರಮ ಹಾಕಬೇಕು ಎಂಬ ಸ್ಪಷ್ಟತೆ ನಿಮ್ಮ ಗುರಿಯಿಂದ ಸಿಗುತ್ತದೆ.
- ನಿಮ್ಮ ಜೀವನದ ಪ್ರಗತಿಯನ್ನು ಅಳೆಯಲು ಗುರಿಗಳು ಅನುವು ಮಾಡಿಕೊಡುತ್ತದೆ. ಗುರಿಗಳನ್ನು ನಿಗದಿಪಡಿಸುವ ಮೂಲಕ ನಿಮ್ಮ ಕಾರ್ಯಕ್ಷಮತೆಯ ಮಾನದಂಡವನ್ನು ಹಾಗೂ ನಿಮ್ಮ ಕಾರ್ಯವನ್ನು ಪೂರ್ಣಗೊಳಿಸಬೇಕಾದ ಕಾಲಮಿತಿಯನ್ನು ನಿರ್ಧರಿಸಲು ಸಹಾಯವಾಗುತ್ತದೆ.
- ನಿಮ್ಮ ಜೀವನದಲ್ಲಿ ಸೋಮಾರಿತನ ಅಥವಾ ವಿಳಂಬ ನೀತಿಯನ್ನು ನಿಭಾಯಿಸಲು ನಿಮಗೆ ಗುರಿಗಳ ಅವಶ್ಯಕತೆ ಇದೆ. ಸೋಮಾರಿತನವೂ ಬಹುಶಹ ವಿದ್ಯಾರ್ಥಿಗಳ ಜೀವನದಲ್ಲಿ ಗುರಿ ಸಾಧನೆಗೆ ದೊಡ್ಡ ಶತ್ರುವಾಗಿ ಪರಿಣಮಿಸಿದೆ. ಈ ಮನಸ್ಥಿತಿಯಿಂದ ಹೊರಬಂದು ಏನಾದರೂ ಮಹತ್ತರವಾದದ್ದನ್ನು ಸಾಧಿಸಲು ನಿಮ್ಮ ಜೀವನದ ಗುರಿಯು ನಿಮಗೆ ಪ್ರೇರಣೆ ನೀಡುತ್ತದೆ. ಇದು ನಿಮ್ಮನ್ನು ಸಕ್ರಿಯ ವಾಗಿರಲು ಪ್ರೇರೇಪಿಸುತ್ತದೆ ಹಾಗೂ ಇಡೀ ದಿನ ಉತ್ಸಾಹದಿಂದ ಕೆಲಸ ಮಾಡಲು ಪೂರಕವಾದ ಮನಸ್ಥಿತಿಯನ್ನು ಸೃಷ್ಟಿ ಮಾಡುತ್ತದೆ.
- ಜೀವನದಲ್ಲಿ ಗುರಿಗಳು ನಿಮ್ಮ ಕನಸುಗಳಿಗೆ ರೆಕ್ಕೆಗಳನ್ನು ಹಾಗೂ ಬಲವನ್ನು ನೀಡುತ್ತದೆ. ನೀವು ಗುರಿ ಸಾಧಿಸುವ ಮೂಲಕ ನಿಮ್ಮ ಜೀವನದಲ್ಲಿ ಎತ್ತರಕ್ಕೆ ಏರಲು ಪ್ರೋತ್ಸಾಹಿಸುತ್ತದೆ. ನೀವು ನಿಮ್ಮ ಪ್ರಯತ್ನವನ್ನು ಸ್ವಯಿಚ್ಛೆಯಿಂದ ಹಾಗೂ ಸಂತೋಷದಿಂದ ನಿರ್ವಹಿಸಲು ಗುರಿಗಳು ನಿಮಗೆ ಸಹಾಯ ಮಾಡುತ್ತದೆ.
- ನಿಮ್ಮ ಜೀವನದ ಗುರಿಯು ನಿಮ್ಮಸಂಪೂರ್ಣ ಸಾಮರ್ಥ್ಯಗಳನ್ನು ಬಳಸಿ ಸಾಧನೆ ಮಾಡಲು ಪ್ರೋತ್ಸಾಹಿಸುತ್ತವೆ. ನಿಮ್ಮ ಜೀವನದ ಗುರಿಯೊಂದಿಗೆ ನಿಮಗೆ ಭಾವನಾತ್ಮಕ ಸಂಬಂಧ ಗಟ್ಟಿಯಾಗಿದ್ದರೆ ಅದು ನಿಮಗೆ ಸತತವಾಗಿ ಹಾಗೂ ಸ್ಥಿರವಾಗಿ ಕೆಲಸ ಮಾಡಲು ಶಕ್ತಿಯನ್ನು ತುಂಬುತ್ತದೆ. ನಿಮ್ಮ ಜೀವನದಲ್ಲಿ ಶಿಸ್ತು ಹಾಗೂ ಸಮಯಪ್ರಜ್ಞೆ ಹೆಚ್ಚಾಗುತ್ತದೆ. ಯಾವ ವ್ಯಕ್ತಿಯು ಜೀವನದಲ್ಲಿ ಕಳೆದುಹೋದ ಸಮಯವನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಆದರೆ ಇವತ್ತಿನ ಸಮಯವನ್ನು ಸರಿಯಾಗಿ ಬಳಸಿಕೊಂಡಲ್ಲಿ ಮುಂದಿನ ಭವಿಷ್ಯ ಖಂಡಿತವಾಗಿ ಉತ್ತಮವಾಗಿರುತ್ತದೆ.
ವಿದ್ಯಾರ್ಥಿಗಳ ಜೀವನದಲ್ಲಿ ಗುರಿಯ ಅಭಾವ ಅಥವಾ ಅಸ್ಪಷ್ಟತೆ ಇದ್ದಲ್ಲಿ ಅದು ಅವರ ಭವಿಷ್ಯದ ಮೇಲೆ, ಅದರಲ್ಲೂ ಉದ್ಯೋಗದ ಯಶಸ್ಸಿನ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಇಂದಿನ ಸ್ಪರ್ಧಾತ್ಮಕ ಹಾಗೂ ಅಸ್ಥಿರ ಉದ್ಯೋಗ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಸದೃಢಗೊಳಿಸಿ ಕೊಳ್ಳಬೇಕಾದರೆ ಅವರಿಗೆ ಸ್ಪಷ್ಟ ಗುರಿಯ ಅವಶ್ಯಕತೆ ಹಾಗೂ ಅನಿವಾರ್ಯತೆ ಇದೆ. ಯಾವ ವಿದ್ಯಾರ್ಥಿ ಹೆಚ್ಚು ಪರಿಶ್ರಮ ಹಾಕಿ ತಮಗೆ ಆಸಕ್ತಿ ಇರುವ ಉದ್ಯೋಗಕ್ಕೆ ಅವಶ್ಯಕವಾಗಿ ಬೇಕಾಗಿರುವ ಹಾಗೆ ತಯಾರಿ ನಡೆಸುತ್ತಾರೋ, ಅವರಿಗಷ್ಟೇ ಉದ್ಯೋಗ ಸಿಗುವ ಸಾಧ್ಯತೆ ಹಾಗೂ ಯಶಸ್ಸು ಗಳಿಸುವ ಅವಕಾಶ ಇರುತ್ತದೆ. ಉದ್ಯೋಗದ ಗುರಿಯ ಸ್ಪಷ್ಟತೆ ಇಲ್ಲದೆ, ಯಾವ ರೀತಿಯ ತಯಾರಿಯು ಇಲ್ಲದೆ, ಯುದ್ಧದಲ್ಲಿ ಶಸ್ತ್ರಾಭ್ಯಾಸ ಎಂಬಂತೆ ಕಡೆಗಳಿಗೆಯಲ್ಲಿ ಉದ್ಯೋಗವಕಾಶ ಹುಡುಕಿಕೊಂಡು ಹೊರಟರೆ ಅವರಿಗೆ ನಿರಾಸೆ ಹಾಗೂ ಸೋಲು ಕಟ್ಟಿಟ್ಟ ಬುತ್ತಿ. ವಿದ್ಯಾರ್ಥಿಗಳ ಎಚ್ಚೆತ್ತು ಗೊಳ್ಳಿ, ನಿಮ್ಮ ಗುರಿಯನ್ನು ನಿರ್ಧರಿಸಿರಿ ಮತ್ತು ಗುರಿಯ ಸಾಧನೆ ಆಗುವವರೆಗೂ ನಿಮ್ಮ ಪ್ರಯತ್ನವನ್ನು ನಿಲ್ಲಿಸಬೇಡಿ. ಶುಭವಾಗಲಿ.
It doesn’t matter where you are coming from. All that matters is where you are going.
– Brian Tracy
- ಪ್ರೊ.ಶಂಕರ್ ಬೆಳ್ಳೂರ್ – ಖ್ಯಾತ ವೃತ್ತಿ ಸಮಾಲೋಚಕರು
