‘ಮಧುರ ಸುಮ’ ಕೃತಿ ಪರಿಚಯ

ಕಾದಂಬರಿಗಾರ್ತಿ  ಸರ್ವಮಂಗಳ ಜಯರಾಂ ಅವರ ‘ಮಧುರ ಸುಮ’ ಕೃತಿಯಲ್ಲಿ 40 ವರ್ಷಗಳ ಹಿಂದಿನ ಹಳ್ಳಿಯ ಚಿತ್ರಣವನ್ನು ಲೇಖಕಿ ಬಹಳ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಈ ಕೃತಿಯ ಕುರಿತು ನಟರಾಜು ಮೈದನಹಳ್ಳಿ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಶ್ರೀಮತಿ ಸರ್ವಮಂಗಳ ಜಯರಾಂ ರವರು ಕನ್ನಡದ ಉದಯೋನ್ಮುಖ ಲೇಖಕಿ. ಇವರು ನಮ್ಮ ಗೌರಿಬಿದನೂರಿನವರು ಎಂಬುದು ನಮ್ಮ ಹೆಮ್ಮೆ. ಇವರ ಮೊದಲ ಕಾದಂಬರಿ ಮಧುರ ಸುಮ. ಈ ಕಾದಂಬರಿಯನ್ನು ಓದಿದಾಗ ಹಿರಿಯ ಲೇಖಕಿಯರಾದ ಸಾಯಿಸುತೆ, ಉಷಾ ನವರತ್ನರಾಂ, ತ್ರಿವೇಣಿ, ಎಂ.ಕೆ.ಇಂದಿರಾ, ಹೆಚ್.ಜಿ.ರಾಧಾದೇವಿ , ಆರ್ಯಾಂಬ ಪಟ್ಟಾಭಿ ಇವರ ಸಾಮಾಜಿಕ ಕಾದಂಬರಿಗಳನ್ನು ಬಿಟ್ಟೂಬಿಡದೆ ಓದುತ್ತಿದ್ದಾಗಿನ ದಿನಗಳು ನೆನಪಾದವು.

ಮಧುರ ಸುಮ ಸರ್ವ ಮಂಗಳಾರವರ ಮೊದಲ ಕಾದಂಬರಿ ಅನ್ನಿಸುವುದಿಲ್ಲ. ಏಕೆಂದರೆ ಕಥಾವಸ್ತುವಿನ ಆಯ್ಕೆ, ಕಥಾ ಪಾತ್ರಗಳ ಪೋಷಣೆ, ಕಥೆಯ ಬಿಗಿಯಾದ ನಿರೂಪಣೆ ಎಲ್ಲವೂ ಚೆನ್ನಾಗಿದೆ. ಸುಂದರ ಕಾದಂಬರಿ.

ಕತೆಯ ನಾಯಕ ಸುಮಂತ್ ಹಾಗು ನಾಯಕಿ ಮಧುರ ಆಗಿದ್ದರೂ ಉಳಿದ ಪಾತ್ರಗಳೂ ಅಷ್ಟೇ ಮಹತ್ವ ಪಡೆದಿವೆ. ಕತೆಯ ನಿರೂಪಣೆಯಲ್ಲಿ ಎಲ್ಲಾ ಪಾತ್ರಗಳ ವ್ಯಕ್ತಿತ್ವವನ್ನು ಉದಾಹರಣೆಗಳ ಮೂಲಕ ಲೇಖಕಿ ಬಹಳ ಸುಂದರವಾಗಿ ಕಟ್ಟಿಕೊಡುತ್ತಾರೆ. ಕೆಲವು ಪಾತ್ರಗಳ ನಿರೂಪಣೆ ನಾಯಕ ನಾಯಕಿ ಪಾತ್ರಗಳಿಗಿಂತ ಹೆಚ್ಚು ಮಹತ್ವ ಪಡೆದಿವೆ.

ಈ ಕಾದಂಬರಿಯಲ್ಲಿ ಬರುವ ದಂಪತಿಗಳಲ್ಲಿ ಸುಂದರ್ ರವರ ಕುಡುಕ ತಂದೆ- ತಾಯಿ ಕೆಂಪಮ್ಮ, ಸುಂದರ್- ಯಶೋಧಾರನ್ನು ಬಿಟ್ಟರೆ ಉಳಿದ ದಂಪತಿಗಳಾದ ನರಸಿಂಹ-ಸರೋಜ, ಮಂಜುಳ-ಲೋಕೇಶ್, ನರಸಪ್ಪ-ಪಾರ್ವತಮ್ಮ, ಡಾ.ಗೋಪಾಲಯ್ಯ-ಸಾವಿತ್ರಿ, ರಾಮಚಂದ್ರರಾಯರು-ರೇವತಿ ಎಲ್ಲರೂ ಅನುರೂಪ ದಂಪತಿಗಳೆ. ಅದರಲ್ಲಿಯೂ ನರಸಪ್ಪ, ಪಾರ್ವತಮ್ಮ, ನರಸಿಂಹ, ಲೋಕೇಶ್ ರ ಮಾನವೀಯತೆ, ವ್ಯಕ್ತಿತ್ವಗಳು ಓದುಗರಿಗೆ ತುಂಬಾ ಇಷ್ಟವಾಗುತ್ತವೆ. ಸಹವಾಸದಿಂದ ಸನ್ಯಾಸಿ ಕೆಟ್ಟ ಎನ್ನುವಂತೆ ಬೆಂಗಳೂರಿನಲ್ಲಿ ತನ್ನ ಊರಿನವನೇ ಆದ ರಂಗಸ್ವಾಮಿ ಮಗ ಹನುಮಂತನ ಸಹವಾಸದಿಂದ ಒಂದು ಹಂತದಲ್ಲಿ ಸುಂದರ್ ಕೆಟ್ಟ ಚಟಗಳನ್ನು ಕಲಿಯುತ್ತಾರೆ. ಹನುಮಂತನ ಸಹವಾಸದಿಂದ ಸುಂದರ್ ಹೆಂಡತಿ ಯಶೋಧ ಅಡ್ಡದಾರಿ ಹಿಡಿಯುತ್ತಾಳೆ. ಅದಕ್ಕೆ ತಕ್ಕ ಹಾಗೆ ಮೂವರಿಗು ತಕ್ಕ ಶಾಸ್ತಿ ಆಗುತ್ತದೆ.

ಡಾ.ಮಧುರಾಳ ಅಪ್ಪ ಸುಂದರ್ ಗೆ ತನ್ನ ಮುದ್ದು ಮಗಳನ್ನು ಆತ್ಮೀಯ ಸ್ನೇಹಿತ ಉದ್ಯಮಿ ಮಧುಸೂದನರಾಯರ ಪುತ್ರ ರಾಕೇಶ್ ಗೆ ಮದುವೆ ಮಾಡಿಕೊಡಬೇಕೆಂಬ ಆಸೆ. ತಾಯಿ ಯಶೋಧಾಗೆ ನಗರದ ಪ್ರತಿಷ್ಟಿತ ಡಾಕ್ಟರ್ ಗೋಪಾಲಯ್ಯರವರ ಪುತ್ರ ಡಾ. ರೇವಂತ್ ಗೆ ತನ್ನ ಮಗಳನ್ನು ಮದುವೆ ಮಾಡಿಕೊಡುವ ಆಸೆ. ಆದರೆ ಕಥಾ ನಾಯಕಿ ಮಧುರಾಗೆ ತನ್ನ ಬಾಲ್ಯ ಸ್ನೇಹಿತ ಇಂಜಿನಿಯರ್ ಸುಮಂತ್ ನನ್ನು ಮದುವೆಯಾಗೋ ಆಸೆ. ಇಲ್ಲಿ ರಾಕೇಶ್ ಆಗಲಿ, ರೇವಂತ್ ಆಗಲಿ, ಸುಮಂತ್ ಆಗಲಿ, ಅವರ ತಂದೆ ತಾಯಿಗಳಾಗಲೀ ಕೆಟ್ಟವರಲ್ಲ. ಮಧುರ ತನ್ನ ತಂದೆ ತಾಯಿಗಳ ಮಾತನ್ನು ಧಿಕ್ಕರಿಸಿ ತನ್ನ ಪ್ರೇಮಿ ಸುಮಂತ್ ನನ್ನು ಮದುವೆಯಾಗುವ ಮನೋಭಾವದವಳೂ ಅಲ್ಲ. ಈ ನಡುವೆ ಅವಳ ಜೀವನದಲ್ಲಾಗುವ ಅನೇಕ ತಿರುವುಗಳು ಮಧುರಾಳ ಜೀವನದ ದಿಕ್ಕನ್ನೆ ಬದಲಿಸುತ್ತಾ ಹೋಗುತ್ತವೆ. ಹಾಗಾದರೆ ಮಧುರ ಈ ಮೂವರಲ್ಲಿ ಯಾರನ್ನು ಮದುವೆಯಾಗುತ್ತಾಳೆ ಎನ್ನುವುದೇ ಕತೆಯ ತಿರುಳು.

ಕತೆ, ಓದುಗರನ್ನು ಕುತೂಹಲದಿಂದ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. 40 ವರ್ಷಗಳ ಹಿಂದಿನ ಹಳ್ಳಿಯ ಚಿತ್ರಣವನ್ನು ಲೇಖಕಿ ಬಹಳ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಆಗಿನ ಜೀವನ ಶೈಲಿ, ಸಂಪ್ರದಾಯ, ನಂಬಿಕೆಗಳನ್ನು ನೈಜವಾಗಿ ವಿವರಿಸಿದ್ದಾರೆ. ಕತೆಯ ಅಲ್ಲಲ್ಲಿ ಸಂದರ್ಭೋಚಿತವಾಗಿ ಬಳಸಿರುವ ಗಾದೆ ಮಾತುಗಳು, ನುಡಿಕಟ್ಟುಗಳು ಮುದ ನೀಡುತ್ತವೆ. ಈ ಸಾಮಾಜಿಕ ಕಾದಂಬರಿಯನ್ನು ನೀವೂ ಸಹ ಓದಿ. ಓದುವ ಸುಖ ಅನುಭವಿಸಿ.

ಶ್ರೀಮತಿ ಸರ್ವಮಂಗಳಾರವರು ಇನ್ನಷ್ಟು ಚೆಂದದ ಕೃತಿಗಳನ್ನು ಬರೆಯಲಿ. ಅವರಿಗೆ ಆ ಪ್ರತಿಭೆ ಇದೆ. ಅವರಿಗೆ ಯಶಸ್ಸು ಮತ್ತು ಕೀರ್ತಿ ದೊರೆಯಲಿ. ಶುಭವಾಗಲಿ.


  • ನಟರಾಜು ಮೈದನಹಳ್ಳಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW