‘ಕಾಲುಗಳು ಸೋತು ದೇಹ ತೂಗಿ ಕುಂಟುತ್ತೇನೆ’…ಖ್ಯಾತ ಮನಃಶಾಸ್ತ್ರಜ್ಞರಾದ ಶಾಂತಾ ನಾಗರಾಜ್ ಅವರ ಲೇಖನಿಯಲ್ಲಿ ಅರಳಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಎಂಬತ್ತರ ಮನೆ ದಾಟಿದ್ದೇನೆ
ಒಂದಲ್ಲ ಎರಡಲ್ಲ ಎಂಬತ್ತು ಮನೆಗಳು!
ಮಲಗಿ ಕುಳಿತು ಕುಪ್ಪಳಿಸಿ ಅಂಬೆಗಾಲಿಟ್ಟು
ಎಡವುತ್ತ ಕುಂಟುತ್ತಾ ದಾಟಿದ್ದೆಷ್ಟು?
ಎರಡು ಪಾದಗಳ ಊರಿ
ಗಗನಕ್ಕೆ ಮುಖಮಾಡಿ ಕಣ್ಮುಚ್ಚಿ
Am I right?
ಕಿರುಚಿದ್ದೆಷ್ಟು ? ಮಿಡುಕಿದ್ದೆಷ್ಟು?
ಸುತ್ತಲಿದ್ದವರು ‘ ಯೆಸ್ ಯೆಸ್ ‘
ಅಂದಿರಲೇ ಬೇಕು ಇಲ್ಲದಿದ್ದರೆ
ಅಲ್ಲೇ ಔಟಾಗಿ ಹೋಗುತ್ತಿದ್ದೆನಲ್ಲ ?
ಆದರೆ ಹೇಳುತ್ತೇನೆ ಕೇಳಿ
ಯಾವ ಮನೆಗೂ ಮೂಲೆಯಿಂದ ಮೂಲೆಗೆ
ಗೆರೆ ಎಳೆದು ಇಂಟು ಎನ್ನುವ ಚಿತ್ರಬರೆದು
‘ಇದು ನನ್ನದು’ ಎನ್ನಲಾಗಿಲ್ಲ ನನಗಿನ್ನೂ
ಹುಡುಕಬೇಕು ಕಾಲೂರಬಹುದಾದ
ಆ ನನ್ನ ಮನೆಯನ್ನು ಇನ್ನೂ
ಗೆರೆ ತುಳಿಯದೇ ಮನೆ ದಾಟಿ
ಕೇಳಬೇಕೀಗ Am I Right ? ಮತ್ತೆ
ಆಕಾಶಕ್ಕೆ ಮುಖ ಕಣ್ಣುಗಳು ಮುಂಜು
ಯೆಸ್ ಯೆಸ್ ಧ್ವನಿಯೇಕೋ ಕ್ಷೀಣ
ಅಥವಾ ನನ್ನ ಕಿವಿ ಮಂದವೇ?
ಕಾಲುಗಳು ಸೋತು ದೇಹ ತೂಗಿ
ಕುಂಟುತ್ತೇನೆ ಮುಂದಿನ ಮನೆಗೆ
ಊರಬಹುದೇ ಅಲ್ಲಿ ಎರಡೂ ಪಾದಗಳನ್ನು?
ಗೊತ್ತಿಲ್ಲ…… ಆದರೂ ಬಿಟ್ಟಮನೆಗಳಿಗೊಂದು
ಚೆಂದದ ವಿದಾಯ !
- ಶಾಂತಾ ನಾಗರಾಜ್ – ಖ್ಯಾತ ಮನಃಶಾಸ್ತ್ರಜ್ಞ
