‘ವಂದೇ ಮಾತರಂ’ ಕವಿ ಸಾಮ್ರಾಟ್ ಬಂಕಿಮ ಚಂದ್ರ ಚಟರ್ಜಿರವರ ಸ್ಮೃತಿದಿನ



‘ವಂದೇ ಮಾತರಂ’, ‘ತಾಯಿ ವಂದಿಸುವೆ’ ಈ ಮಂತ್ರದ ಮೋಡಿ ಎಂತಾದ್ದು? ಈ ಒಂದು ಮಾತಿನ ಮೋಡಿಗೆ ಮರುಳಾಗಿ ಲೆಕ್ಕವಿಲ್ಲದಷ್ಟು ಜನ ನಗುನಗುತ್ತಾ ನೇಣುಗಂಭವನ್ನೇರಿ ಹುತಾತ್ಮರಾಗಿದ್ದಾರೆ. ರಣಮಂತ್ರ ವಂದೇಮಾತರಂ. ಇಂದು ಈ ರಣಮಂತ್ರದ ಜನ್ಮದಾತನಾದ ಬಂಕಿಮ ಚಂದ್ರ ಚಟರ್ಜಿರವರ ಸ್ಮೃತಿದಿನ.

ರಕ್ತದ ಕಣಕಣಗಳಲ್ಲಿ ಕ್ಷಣ ಮಾತ್ರದಲ್ಲಿ ದೇಶಭಕ್ತಿಯ ಆವಾಹನೆ ಮಾಡಿ, ಶತಮಾನಗಳ ಕಾಲ ಭದ್ರವಾಗಿ ಬೇರೂರಿದ್ದ ಬ್ರಿಟಿಷ್ ಸಾಮ್ರಾಜ್ಯದ ಬುಡವನ್ನೇ ಅಲ್ಲಾಡಿಸಿದ್ದ ರಣಮಂತ್ರ ವಂದೇಮಾತರಂ. ಇಂದು ಈ ರಣಮಂತ್ರದ ಜನ್ಮದಾತನಾದ ಬಂಕಿಮ ಚಂದ್ರ ಚಟರ್ಜಿರವರ ಸ್ಮೃತಿದಿನ.

ಯಾರು ಈ ಬಂಕಿಮ! ಬಂಕಿಮರು ೧೮೩೯ ಜೂನ್ ೨೭ ರಂದು ಕಂಥಾಲಪಾರ ಎಂಬ ಹಳ್ಳಿಯ ಬಂಗಾಳ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದರು. ಹೂಗ್ಲಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ಬಂಕಿಮ ೧೮೫೭ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆದಾಗ ೧೯ವರ್ಷದ ಯುವಕ. ೧೮೫೮ ರ ಹೊತ್ತಿಗೆ ಸಂಗ್ರಾಮ ಕೊನೆಯ ಹಂತ ತಲುಪಿತ್ತು. ರಾಣಿ ಲಕ್ಷ್ಮೀಬಾಯಿ, ತಾತ್ಯಾಟೋಪಿ, ಕುವರಸಿಂಹ ಮೊದಲಾದ ನಾಯಕರು ಹತರಾಗಿದ್ದರು. ದೆಹಲಿಯ ಬಹದ್ದೂರ್ ಷಾ ಸೆರೆಮನೆ ಸೇರಿದ್ದರು. ಮತ್ತೋರ್ವ ನಾಯಕ ನಾನಾ ಸಾಹೇಬ್ ಪೇಶ್ವೆ ಅಜ್ಞಾತರಾಗಿದ್ದರು. ಇದು ಬಂಕಿಮಗೆ ನುಂಗಲಾರದ ತುತ್ತು. ಅದೇ ವರ್ಷ ಕಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಪದವೀಧರನಾದ ಬಂಕಿಮ ನಂತರ ಕಾನೂನು ಪದವೀಧರನಾಗಿ ಬ್ರಿಟಿಷ್ ಸರ್ಕಾರದಡಿಯಲ್ಲಿ ಡೆಪ್ಯುಟಿ ಮ್ಯಾಜಿಸ್ಟ್ರೇಟ್ ಆಗಿ ಕೆಲಸ ನಿರ್ವಹಿಸಿದರು. ಆದರೆ ಬ್ರಿಟಿಷರು ದೇಶದಲ್ಲಿ ನಡೆಸುತ್ತಿದ್ದ ವಿಧ್ವಂಸಕ ಕೃತ್ಯಗಳನ್ನು ನೋಡಿ ನೊಂದು ಕೆಲಸವನ್ನು ತ್ಯಜಿಸಿದರು.

ಫೋಟೋ ಕೃಪೆ : wikiquote

ಬಂಕಿಮರಿಗೆ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಘಟನೆಗಳನ್ನು ನೋಡಿದಾಗ ಕೋಟಿ ಕೋಟಿ ಭಾರತೀಯರು ಕೆಲವು ಸಾವಿರ ಬ್ರಿಟಿಷರಿಗೆ ಅಡಿಯಾಳಾಗಿದ್ದು ಹೇಗೆ ಎಂಬ ಪ್ರಶ್ನೆ ಸದಾ ಕಾಡುತ್ತಿತ್ತು. ರಾಜಾರಾಮ್ ಮೋಹನ್ ರಾಯ್, ಈಶ್ವರ ಚಂದ್ರ ವಿದ್ಯಾಸಾಗರ್, ಝಾನ್ಸಿರಾಣಿ ಲಕ್ಷ್ಮಿಬಾಯಿ ಇವರ ಜೀವನ ಮತ್ತು ವಿಚಾರದಿಂದ ಪ್ರೇರಿತರಾದ ಬಂಕಿಮರಿಗೆ ಗೋಚರಿಸಿದ್ದು ಬ್ರಿಟಿಷರ ತಂತ್ರಗಳಲ್ಲಿ ಒಂದಾದ ಸಾಂಸ್ಕೃತಿಕ ಆಕ್ರಮಣ ಹಾಗೂ ಆ ಮೂಲಕ ರಾಷ್ಟ್ರಭಕ್ತಿಯ ಅಪಹರಣ. ಅಂದಿನ ಭಾರತೀಯರು ಆಂಗ್ಲರ ವೇಷಭೂಷಣ, ನಡವಳಿಕೆ, ಭಾಷೆ ಎಲ್ಲವನ್ನೂ ಅನುಕರಿಸಲು ಉತ್ಸುಕರಾಗಿದ್ದರು. ತಮ್ಮ ಸಾವಿರಾರು ವರ್ಷ ಇತಿಹಾಸವುಳ್ಳ ಪರಂಪರೆ, ಜೀವನ ಪದ್ಧತಿಯನ್ನು ತೊರೆದು ಪಾಶ್ಚಿಮಾತ್ಯ ನಾಗರೀಕತೆಯನ್ನು ಅಪ್ಪಿಕೊಳ್ಳಲು ಪ್ರಾರಂಭಿಸಿದ್ದರು.



ಬಂಕಿಮರಿಗೆ ಸ್ವಾತಂತ್ರ್ಯದ ಮಹತ್ವಾಕಾಂಕ್ಷೆ ಇತ್ತು. ಯಾವ ರೀತಿಯ ಸ್ವಾತಂತ್ರ್ಯ? ಕೇವಲ ಬ್ರಿಟಿಷ್ ಮುಕ್ತ ಭಾರತವಲ್ಲ. #ಜಾತಿಗಳ ನಡುವೆ ಸಂಘರ್ಷಮುಕ್ತ ಭಾರತ. ಸ್ತ್ರೀ ಶೋಷಣೆ ಮುಕ್ತ ಭಾರತ, ಬಡವರ ಮೇಲೆ ಶ್ರೀಮಂತರ ದೌರ್ಜನ್ಯ ಮುಕ್ತ ಭಾರತದ ನಿರ್ಮಾಣದ ಹೆಬ್ಬಯಕೆ ಆತನದು. ಬ್ರಿಟಿಷರ ಆಘಾತಗಳಿಗೆ ಶಿಥಿಲವಾಗುತ್ತಿದ್ದ ಭಾರತವೆಂಬ ಮಹಾಸೌಧವನ್ನು ಜೀರ್ಣೋದ್ಧಾರ ಮಾಡಲು ಆಯ್ದುಕೊಂಡ ಮಾರ್ಗ ಕಾದಂಬರಿಗಳು. ಅಂದಿನ ಬಂಗಾಳಿ ಸಾಹಿತ್ಯ ನೀರಸ, ನಿಸ್ಸಾರ, ಏಕತಾನತೆಯಿಂದ ಕೂಡಿದ್ದಾಗ ಬಂಕಿಮರು ತಮ್ಮ ಪ್ರಖರ ಕೃತಿಗಳಿಂದ ಜೀವ ತುಂಬುವ ಕೆಲಸ ಮಾಡಿದರು. ಇವರ ಸಾಹಿತ್ಯದ ಪ್ರಭಾವದಿಂದ ಶೇಕ್ಸ್‌ಪಿಯರ್, ಮಿಲ್ಟನ್, ಷೆಲ್ಲಿ ಇವರ ಕೃತಿಗಳನ್ನು ಓದುತ್ತಿದ್ದ ಜನರು ಸ್ವದೇಶಿ ಚಿಂತನೆ ಪ್ರಾರಂಭಿಸಿದರು. ಕಾಳಿದಾಸ, ಚಂಡಿದಾಸರ ಕೃತಿಗಳನ್ನು ಓದಲು ಪ್ರಾರಂಭಿಸಿದರು. ಸ್ವದೇಶಿ ಚಿಂತನೆ ಸಾಹಿತ್ಯ ಕ್ಷೇತ್ರಕ್ಕೆ ಸೀಮಿತವಾಗದೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಹರಡಲು ಪ್ರಾರಂಭಿಸಿತು. ನಮ್ಮ ಭಾಷೆ, ಸಂಸ್ಕೃತಿ, ದೇಶದ ಬಗ್ಗೆ ಜನ ಹೆಮ್ಮೆ ಪಡಲು ಪ್ರಾರಂಭಿಸಿದರು. ಈ ಕಾರಣಕ್ಕಾಗಿ ಬಂಕಿಮರನ್ನು ಬಂಗಾಲಿ ಸಾಹಿತ್ಯದ ಸಾಮ್ರಾಟ್‌ ಎಂದು ಕರೆಯಲಾಗುತ್ತದೆ.

ಇವರು ಅನೇಕ ಕಾದಂಬರಿಗಳನ್ನು ಬರೆದಿದ್ದಾರೆ. ದುರ್ಗೇಶನಂದಿನಿ, ಕಪಾಲಕುಂಡ, ವಿಷವೃಕ್ಷ, ರಾಜಸಿಂಹ, ದೇವಿ ಚೌದುರಾಣಿ ಇತ್ಯಾದಿ. ಜೊತೆಗೆ ಭಗವದ್ಗೀತೆಯ ಭಾವಾರ್ಥವನ್ನು ಬರೆದರು. ಇವುಗಳ ಪೈಕಿ ಬಂಕಿಮ ಚಂದ್ರ ಚಟರ್ಜಿಯ ಹೆಸರನ್ನು ಭಾರತದಲ್ಲಿ ಅಮರಗೊಳಿಸಿದ ಕೃತಿಯೇ ‘ಆನಂದಮಠ’. ಈ ಆನಂದಮಠದ ಭಾಗವೇ ‘ವಂದೇ ಮಾತರಂ.’

ಇಂತಹ ಮಹಾನ್ ಕವಿ ತನ್ನ ೫೫ ನೇ ವಯಸ್ಸಿಗೆ ೧೮೯೪ ಎಪ್ರಿಲ್ ೮ ರಂದು ಭಾರತಾಂಬೆಯ ಮಡಿಲಲ್ಲಿ ಸೇರಿಕೊಂಡರು. ಬಂಗಾಳಿ ಕವಿ ಸಾಮ್ರಾಟ್ ಮತ್ತೊಮ್ಮೆ ಭಾರತಾಂಬೆಯ ಸೇವೆಗಾಗಿ ಹುಟ್ಟಿಬನ್ನಿ.

ಜೈಹಿಂದ್

ವಂದೇಮಾತರಂ


  • ಶಿವಕುಮಾರ್ ಬಾಣಾವರ. (ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್ )

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading