ವಿಶ್ವ ಹೋಮಿಯೋಪಥಿ ದಿನ: ಹೋಮಿಯೋಪಥಿ ಚಿಕಿತ್ಸಾ ವಿಶೇಷ.



ಕೊರೋನಾ ವೈರಸ್ ಈಗಾಗಲೇ ಎರಡನೆಯ ಅಲೆಯ ಮೂಲಕ ದಂಡಯಾತ್ರೆ ಆರಂಭಿಸಿದೆ. ತನ್ನ ಕಬಂಧ ಬಾಹುಗಳನ್ನು ತುಸು ವೇಗವಾಗಿ ಚಾಚುತ್ತಲಿದೆ. “ಆಯುಷ್ ಸಚಿವಾಲಯ” ಮುನ್ನೆಚ್ಚರಿಕಾ ಕ್ರಮವಾಗಿ, ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ, ಹೋಮಿಯೋಪಥಿ, ಯುನಾನಿ ಔಷಧಿಗಳು ಮತ್ತು ಸುರಕ್ಷತಾ ಕ್ರಮಗಳನ್ನು ಸೂಚಿಸಿದೆ.

ಅದರಲ್ಲಿ ಕೊರೋನಾ ಜ್ವರದ ಲಕ್ಷಣಗಳು ಕಂಡುಬಂದರೆ “ಆರ್ಸೇನಿಕಮ್‌ ಆಲ್ಬಮ್‌ ೩೦” ಎನ್ನುವ ಔಷಧವನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಮೂರು ದಿನ ಸೇವಿಸಿ ಅಂತ ಸಹ ತಿಳಿಸಿದೆ.
ಇದು “ಹೋಮಿಯೋಪಥಿ” ಔಷಧಿ.

ಹೋಮಿಯೋಪಥಿ ಪರ್ಯಾಯ ಚಿಕಿತ್ಸಾ ಪದ್ದತಿಯಾಗಿದ್ದು. ಹೋಮಿಯೋಪಥಿ ಬಗ್ಗೆ ಹೆಚ್ಚು ವಾದ, ಗೊಂದಲ, ಟೀಕೆಗಳು ಇದ್ದರೂ, ಇಂದು ವಿಶ್ವದೆಲ್ಲೆಡೆಯಲ್ಲಿ ಅತೀ ವೇಗವಾಗಿ ಜನಪ್ರಿಯವಾಗುತ್ತಿರುವ ಔಷಧ ಪದ್ಧತಿ. ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಕಾರ ವಿಶ್ವದಲ್ಲಿ ಹೋಮಿಯೋಪಥಿ ಬಳಕೆಯು ಎರಡನೇ ಸ್ಥಾನದಲ್ಲಿದೆ ಮತ್ತು ವರ್ಷಕ್ಕೆ ಇದು ಶೇ. ೨೦-೨೫ ರಷ್ಟು ಬೆಳೆಯುತ್ತಲಿದೆ.

ಹೋಮಿಯೋಪಥಿ ಜನಕನಾದ “ಸ್ಯಾಮ್ಯುಯೆಲ್ ಹಾನಿಮನ್” ಜನ್ಮದಿನದ ಸವಿನೆನಪಿಗಾಗಿ ಪ್ರತಿವರ್ಷ ಏಪ್ರಿಲ್ ೧೦ ರಂದು “ವಿಶ್ವ ಹೋಮಿಯೋಪಥಿ ದಿನ”ವನ್ನು ಆಚರಿಸಲಾಗುತ್ತದೆ.

ಡಾಸ್ಯಾಮ್ಯುಯೆಲ್ಹಾನಿಮನ್

“ಸ್ಯಾಮ್ಯುಯೆಲ್ ಹಾನಿಮನ್” ಏಪ್ರಿಲ್ ೧೦, ೧೭೫೫ ರಲ್ಲಿ ಜರ್ಮನಿಯ ಸ್ಯಾಕ್ಸನೀ ಜಿಲ್ಲೆಯ, ಮೇಸನ್ ಎಂಬ ಹಳ್ಳಿಯಲ್ಲಿ ಜನಿಸಿದರು. ಅವರು ಜರ್ಮನ್ ವೈದ್ಯರಾಗಿದ್ದರು. ವಿಜ್ಞಾನಿ, ಶ್ರೇಷ್ಠ ವಿದ್ವಾಂಸ ಮತ್ತು ಭಾಷಾಶಾಸ್ತ್ರಜ್ಞರು ಕೂಡ. ಡಾ. ಹಾನಿಮನ್’ರು ನೂರಾ ಹದಿನಾಲ್ಕು ಪುಸ್ತಕಗಳಿಗೂ ಹೆಚ್ಚಿನ ಮತ್ತು ೧೨೦ ಚಿಕ್ಕ ಪ್ರಕಟಣೆಗಳನ್ನು ಮಾಡಿದರು.

ಇವರು ಪ್ರಚಾರ ಪಡಿಸಿದ ಮುಖ್ಯ ಮೂಲಗ್ರಂಥಗಳೇಂದರೆ :

೧. ಮೂಲ ಔಷಧ ವಸ್ತುಕೋಶ (Materia medica pura)

೨. ದೀರ್ಘಕಾಲಿನ ರೋಗಗಳು (The chronic diseases)

೩. ಔಷಧ ತಯಾರು ವಿಧಾನ. (Organon of medicine)

ಹೋಮಿಯೋಪಥಿ ಔಷಧಿಗಳ ಮೂಲಕ ಕಾಯಿಲೆಗಳನ್ನು ವಾಸಿ ಮಾಡುವ ವಿಧಾನ ಕಂಡುಹಿಡಿದವರು‌. ಇಂತಹ ಕ್ರಾಂತಿಕಾರಿ ಶೋಧನೆಗೆ ಅವರು ಮೊದಲು ಅನುಭವಿಸಿದ್ದು ಸಮಕಾಲಿನವರಿಂದ ಕಿರುಕುಳ ಮತ್ತು ದ್ವೇಷ. ಆವಾಗ ಅವರು ಊರಿಂದೂರಿಗೆ ಅಲೆಯುತ್ತ ಕೊನೆಯದಾಗಿ ಪ್ಯಾರಿಸ್ ತಲುಪಿದರು. ಅದಾಗಲೇ ಇಡೀ ಯುರೋಪಿನಲ್ಲಿ ಹೆಸರುವಾಸಿಯಾಗಿದ್ದರು.

ತಮ್ಮ ಎಂಭತ್ತೆಂಟನೆಯ ವಯಸ್ಸಿನಲ್ಲಿ, ಜುಲೈ ೨, ೧೮೪೩ ರಲ್ಲಿ ನಿಧನರಾದರು.

ಹೋಮಿಯೋಪಥಿ.

ನಮ್ಮ ದೇಹ ತನ್ನನ್ನು ತಾನು ಸರಿಪಡಿಸಿಕೊಳ್ಳುವ ಅದ್ಭುತ ಸಾಮರ್ಥ್ಯ ಹೊಂದಿದೆ. ಈ ಸಾಮರ್ಥ್ಯವನ್ನ ಚಿಕಿತ್ಸೆ ರೂಪದಲ್ಲಿ ಬಳಸುವುದೆ “ಹೋಮಿಯೋಪಥಿ”.

ಇದರ ಮೂಲಭೂತ ತತ್ವವೆಂದರೆ “ಹೋಲಿಕೆ ನಿಯಮ” (Law of similars) ಅಥವಾ “ಲೋಹವೆ ಲೋಹವನ್ನು ಕತ್ತರಿಸುತ್ತದೆ” (similia similibus curantur i.e likes are cured by likes ) ಎಂಬ ತತ್ವ.

ಉದಾಹರಣೆಗೆ ತುರಿಕೆ ಇದ್ದ ಸ್ಥಳದಲ್ಲಿ ಇನ್ನಷ್ಟು ತುರಿಕೆ ಹೆಚ್ಚಿಸುವ ತುರಿಕೆಪುಡಿ ಬಳಸಿದರೆ ಹೇಗೆ? ಈಗ ದೇಹ ತನ್ನ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿ ಈ ತುರಿಕೆಯನ್ನು ಹತ್ತಿಕ್ಕುತ್ತದೆ. ಈ ವಿಧಾನವೇ ಹೋಮಿಯೋಪತಿಯ ಜೀವಾಳ.

“ಯಾವುದೊಂದು ವಸ್ತು, ಯಾವ ರೋಗ ಚಿಹ್ನೆಗಳನ್ನು ಆರೋಗ್ಯವಂತನಲ್ಲಿ ಉಂಟು ಮಾಡುತ್ತದೋ, ಅಂತಹುದೇ ರೋಗ ಲಕ್ಷಣಗಳನ್ನು ಹೋಲುವ ರೋಗಿಯನ್ನು, ರೋಗದ ಹೆಸರು ಏನಿದ್ದರೂ, ಆ ರೋಗ ಲಕ್ಷಣಗಳಿಂದ ದೂರ ಮಾಡುತ್ತದೆ” ಎಂದು ಇದೇ ಹೋಮಿಯೋಪಥಿಯ ಮೊದಲ ಹೆಜ್ಜೆ. ಇದನ್ನು ೧೭೯೬ ರಲ್ಲಿ ಡಾ.ಹಾನಿಮನ್ ಪ್ರಪಂಚಕ್ಕೆ ಸಾರಿದರು.

ಈ ಚಿಕಿತ್ಸೆಯಲ್ಲಿ ರೋಗಗಳನ್ನು ಗುಣಪಡಿಸಲು ಕೃತಕ ರಾಸಾಯನಿಕಗಳನ್ನು ಬಳಸುವುದಿಲ್ಲ. ಹೆಚ್ಚಿನ ಹೋಮಿಯೋಪತಿ ಔಷಧಿಗಳಲ್ಲಿ ಒಂದು ನಿರ್ದಿಷ್ಟ ಕಾಯಿಲೆಗೆ ಮಾತವಲ್ಲದೇ ಇತರ ಕಾಯಿಲೆಗಳಿಗೂ ದೇಹವನ್ನು ಎದುರಿಸಲು ಸಜ್ಜುಗೊಳಿಸುತ್ತದೆ. ಅಂದರೆ ಒಂದೇ ಔಷಧಿಯ ಮೂಲಕ ಹಲವು ಕಾಯಿಲೆಗಳ ವಿರುದ್ಧ ದೇಹ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತದೆ.

ಹೋಮಿಯೋಪಥಿ ಚಿಕಿತ್ಸೆಯಲ್ಲಿ ಒಂದೇ ತೊಂದರೆಯ ಎರಡು ರೋಗಿಗಳಿಗೆ ಚಿಕಿತ್ಸೆ ಬದಲಾಗುತ್ತದೆ‌. ಏಕೇಂದರೆ ಇದು “ವ್ಯಕ್ತಿ ಕೇಂದ್ರಿಕೃತ” ಚಿಕಿತ್ಸೆಯಾಗಿದೆ. ರೋಗಿ ಜೀವಿಸುವ ಹವಾಮಾನ ಪರಿಸ್ಥಿತಿ, ಅಲರ್ಜಿಗಳು, ಆಹಾರ ಪದ್ಧತಿ, ಜೀವನ ಶೈಲಿ, ಒತ್ತಡದ ಅಂಶಗಳನ್ನು ಅರಿತು ಚಿಕಿತ್ಸೆ ನೀಡಲಾಗುತ್ತದೆ. ಅಲೋಪಥಿ ಪದ್ಧತಿಯಂತೆ ಒಂದು ಅಂಗ ಅಥವಾ ಲಕ್ಷಣಗಳನ್ನು ಮಾತ್ರ ಚಿಕಿತ್ಸೆಗೆ ಒಳಪಡಿಸುವುದಿಲ್ಲ.

ಭಾರತಕ್ಕೆ ಹೋಮಿಯೋಪಥಿ ಆಗಮನದ ಇತಿಹಾಸ :

(ಸಾಂದರ್ಭಿಕ ಚಿತ್ರ)

ಭಾರತ ದೇಶವನ್ನು ಬ್ರಿಟೀಷರು ಆಳುತ್ತಿದ್ದ ಸಮಯವದು‌, ೧೮೧೦ ನೇ ಇಸವಿಯಲ್ಲಿ ಜರ್ಮನಿಯ ಒಬ್ಬ ಭೂಗರ್ಭ ಶಾಸ್ತ್ರಜ್ಞನಿಂದ ಹೋಮಿಯೋಪಥಿಯನ್ನು ಭಾರತ ಪ್ರವೇಶಿಸಿ, ಪರಿಚಯಸಲ್ಪಟ್ಟಿತು. ಡಾ.ಮುಲನ್’ರ ಮಿಷಿನರಿ ಪಾದ್ರಿಗಳು ತಮ್ಮ ಧರ್ಮವನ್ನು ಪ್ರಚಾರ ಮಾಡುವ ಸಂದರ್ಭದಲ್ಲಿ ಕಲ್ಕತ್ತೆಯಲ್ಲಿ ಬಡಜನರಿಗೆ ಹೋಮಿಯೋಪಥಿ ಔಷಧಿಗಳನ್ನು ನೀಡತೊಡಗಿದರು. ಹೀಗೆ ಕಲ್ಕತ್ತೆ ಮತ್ತು ಬೆಂಗಾಲ ಪ್ರಾಂತ್ಯಗಳಲ್ಲಿ ಹೋಮಿಯೋಪಥಿ ಬೇರೂರಿತು.

ಲಾಹೋರಿನ ದೊರೆ ರಣಜೀತಸಿಂಗ್ ಕಾಯಿಲೆ ಯಾವ ಚಿಕಿತ್ಸೆಯಿಂದಲೂ ಗುಣವಾಗದಿದ್ದಾಗ, 1839 ರಲ್ಲಿ ಡಾ.ಜೋನಿಮಾಟನ್ ಹೋಯಿಸಿಂಗ್ ಬರಗರ್ ಎಂಬ ಹೋಮಿಯೋಪಥಿ ವೈದ್ಯ ಜರ್ಮನಿಯಿಂದ ಬಂದು ಅವರ ಕಾಯಿಲೆಯನ್ನ ವಾಸಿ ಮಾಡಿದನಂತೆ. ಆವಾಗಲೇ ಪಂಜಾಬಿನಲ್ಲಿ ಹೋಮಿಯೋಪಥಿ ನೆಲೆಯೂರಿತು.

೧೮೪೬ ರಲ್ಲಿ ಸರಜನ್- ಜನರಲ್ ಡಾ. ಸ್ಯಾಮ್ಯುಯೆಲ್ ಬ್ರೂಕಿಂಗ್ ತಮ್ಮ ಕೆಲಸದಿಂದ ನಿವೃತ್ತಿಯ ನಂತರ ತಂಜಾವೂರು ಮತ್ತು ಪುದುಕೊಟೈಗಳಲ್ಲಿ (ದಕ್ಷಿಣ ಭಾರತದಲ್ಲಿ) ಹೋಮಿಯೋಪಥಿ ಔಷಧಾಲಯ ತೆರೆದರು.

೧೮೮೦ರಲ್ಲಿ ಕ್ರೈಸ್ತ ಪಾದ್ರಿ ಮತ್ತು ವೈದ್ಯರಾದ ಫಾದರ್ ಮುಲ್ಲರ್ ಮಂಗಳೂರಿನ ಕಂಕನಾಡಿಯಲ್ಲಿ ಚಿಕಿತ್ಸಾ ಕೇಂದ್ರ ತೆರೆದರು. ಈ ಸಂಸ್ಥೆ ಇಂದಿಗೂ ಹೋಮಿಯೋಪಥಿ ಚಿಕಿತ್ಸೆ ಮತ್ತು ಭೋದನೆ ಮಾಡುತ್ತಿದೆ.

ಭಾರತದ ಉದ್ದಗಲಕ್ಕೂ ಹೋಮಿಯೋಪಥಿ ಚಿಕಿತ್ಸಾ ಪದ್ಧತಿಯನ್ನು ನೂರಾರು ಪಾದ್ರಿಗಳು ಧರ್ಮ ಭೋದನೆಯೊಡನೆ ಬಳಸತೊಡಗಿದರು.

ಹೀಗೆ ಹೋಮಿಯೋಪಥಿ ಭಾರತಕ್ಕೆ ಬಂದು, ದಿನದಿಂದ ದಿನಕ್ಕೆ ಪ್ರವರ್ಧಮಾನಕ್ಕೆ ಬಂದು ಪ್ರಸಿದ್ಧವಾಯಿತು.

ಹೋಮಿಯೋಪಥಿ ಔಷಧಿ :

ಹೋಮಿಯೋಪಥಿ ಔಷಧಿಗಳನ್ನು ತಯಾರಿಸಲು ಒಂದು ನಿರ್ಧಿಷ್ಟ ಪ್ರದೇಶದಲ್ಲಿ ದೊರೆಯುವ ಸಸ್ಯಗಳು ಮತ್ತು ಖನಿಜಗಳನ್ನು ಬಳಸಲಾಗುತ್ತದೆ. ಎಲ್ಲವೂ ನೈಸರ್ಗಿಕ ವಸ್ತುಗಳೆ. ಔಷಧಿಯಲ್ಲಿ ಮೂಲ ಘಟಕವನ್ನು ಅತೀವ ಕಡಿಮೆ ಪ್ರಮಾಣದಲ್ಲಿ ಉಪಯೋಗಿಸಲಾಗುವುದರಿಂದ ಅಡ್ಡಪರಿಣಾಮಗಳು ವಿರಳ. ಈ ಔಷಧಿಗಳು ಚಟವಾಗಿ ಪರಿವರ್ತನೆ ಆಗುವುದಿಲ್ಲ (Non addictive) ಮತ್ತು ದೀರ್ಘಕಾಲ ಸೇವನೆಗೂ ಸುರಕ್ಷಿತ. ಕಾಯಿಲೆ ವಾಸಿಯಾದ ನಂತರ ಯಾವುದೇ ತೊಂದರೆಯಿಲ್ಲದೆ ಸುರಕ್ಷಿತವಾಗಿ ಔಷಧಗಳ ಸೇವನೆ ನಿಲ್ಲಿಸಬಹುದು. ದೀರ್ಘಕಾಲೀನ ಅನಾರೋಗ್ಯಕ್ಕೆ ಪರಿಣಾಮಕಾರಿ ಮತ್ತು ನಿರೀಕ್ಷಿತ ಫಲಿತಾಂಶ ನಿರೀಕ್ಷಿಸಬಹುದು.




ಹೋಮಿಯೋಪಥಿ ಹೆಚ್ಚಿನ ಔಷಧಿಗಳು ಸಿಹಿ ಗುಳಿಗೆಗಳು, ಚಿಕ್ಕ ಮಾತ್ರೆಗಳು, ದ್ರವ ಔಷಧಿ ಇರುವುದರಿಂದ ಶಿಶುಗಳಿಗೆ, ಮಕ್ಕಳಿಗೆ ಸುಲಭವಾಗಿ ನೀಡಬಹುದು. ಗರ್ಭಿಣಿ,ಮಕ್ಕಳು, ಶಿಶುಗಳು, ಬಾಣಂತಿಯರಿಗೆ, ವಯೋವೃದ್ಧರಿಗೆ, ಎದೆಹಾಲು ನೀಡುವ ತಾಯಂದಿರಿಗೆ, ವ್ಯಸನ ರೋಗಿಗಳಿಗೆ ಸುರಕ್ಷಿತ ಔಷಧಗಳಾಗಿವೆ.

ಹೋಮಿಯೋಪಥಿ ಔಷಧಿಗಳನ್ನು ಇತರೆ ಆಯುರ್ವೇದ, ಅಲೋಪಥಿ ಔಷಧಿಗಳೊಂದಿಗೂ ಸಹ ಸುಲಭವಾಗಿ ಬಳಸಬಹುದು. ಹೋಮಿಯೋಪಥಿ ಔಷಧಿಯು ಕೇವಲ ರೋಗದ ಲಕ್ಷಣಗಳನ್ನು ನಿವಾರಣೆ ಮಾಡುವುದು ಮಾತ್ರವಲ್ಲದೆ, ರೋಗವನ್ನು ಬುಡದಿಂದಲೇ ಕಿತ್ತು ಹಾಕುವುದು ವಿಶೇಷ.

“Placebo effect” ಎಂದು ಕರೆಯುವ ಪೊಳ್ಳು ನಂಬಿಕೆಯೇ ಹೋಮಿಯೋಪತಿಯಲ್ಲಿಯೂ ಕೆಲಸ ಮಾಡುತ್ತದೆ ಎಂಬುದು ಹೆಚ್ಚಿನವರ ಅಭಿಪ್ರಾಯ. ಆದರೆ ವಾಸ್ತವವಾಗಿ ಹೋಮಿಯೋಪತಿ ಔಷಧಿಗಳು ಸಂಶೋಧನೆ ಮತ್ತು ಪ್ರಯೋಗಗಳ ಮೂಲಕ ಸಿದ್ಧ ಪಡಿಸಿದ್ದೇ ಆಗಿದ್ದು ಇವು ನಿಜಕ್ಕೂ ಕಾಯಿಲೆ ವಾಸಿ ಮಾಡುವ ಔಷಧಿಗಳೆ.

ಹೋಮಿಯೋಪತಿ ವೈದ್ಯಕೀಯ ವ್ಯವಸ್ಥೆಯು “ಹೋಮಿಯೋಪತಿ ಕೇಂದ್ರ ಮಂಡಳಿ” ಕಾಯ್ದೆ, ೧೯೭೩ ರ ಅಡಿಯಲ್ಲಿ ಭಾರತದಲ್ಲಿ ಮಾನ್ಯತೆ ಪಡೆದ ವೈದ್ಯಕೀಯ ವ್ಯವಸ್ಥೆಯಾಗಿದೆ.


  • ಡಾ.ಪ್ರಕಾಶ ಬಾರ್ಕಿ, ಕಾಗಿನೆಲೆ 

3 2 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW