ಗುಜರಾತಿನ ಥೋರಿಗಳಿಗೆ ಹುಬ್ಬಳ್ಳಿ, ಧಾರವಾಡ, ಕಾರವಾರದಲ್ಲಿ ಬ್ಯಾಟ್- ವಿಕೆಟ್ ತಯಾರಿಸಿ ಮಾರುವುದೇ ಇವರ ಕಾಯಕ. ಎರಡು ವರ್ಷದ ಪೋರನಿಂದ ಮೂವತ್ತು ವರ್ಷದ ದಾಂಡಿಗರ ತನಕ ಬ್ಯಾಟ್, ವಿಕೆಟ್ ತಯಾರಿಸುತ್ತಾರೆ. ಅವರ ಕುರಿತು ಲೇಖಕ ಟಿ. ಶಿವಕುಮಾರ್ ಅವರು ಬರೆದಿರುವ ಒಂದು ಲೇಖನ, ತಪ್ಪದೆ ಓದಿ…
ಈಗ ಪಂದ್ಯ ಪ್ರಾರಂಭವಾಗಿದೆ. ಮಕ್ಕಳಿಗೆ ರಜೆಯು ಹತ್ತಿರ ಬಂದಿದೆ ಮಕ್ಕಳಿಗೆ ಕ್ರಿಕೆಟ್‍ನ ಕಲರವ ಆದರೆ ಹುಬ್ಬಳ್ಳಿ, ಧಾರವಾಡ, ಕಾರವಾರ ಹೀಗೆ ಇನ್ನು ಅನೇಕ ಪಟ್ಟಣಗಳ ಕಡೆ ಗುಜರಾತಿನ ಥೋರಿಗಳು ಬ್ಯಾಟ್ ವಿಕೆಟ್ ತಯಾರಿಸಿ ಮಾರುವುದೇ ಇವರ ಕಾಯಕ ಎರಡು ವರ್ಷದ ಪೋರನಿಂದ ಹಿಡಿದು ಮೂವತ್ತು ವರ್ಷದ ದಾಂಡಿಗರ ತನಕ ಹಿಡಿಯ ಬಲ್ಲ ಬ್ಯಾಟ್ ವಿಕೆಟ್ ತಯಾರಿಸುತ್ತಾರೆ.
ಇವರಿಗೆ ಮರಗೆಲಸ ಬಿಟ್ಟು ಉಳಿದೆನನ್ನು ಅರಿಯರು ದೊಡ್ಡ ದೊಡ್ಡ ನಗರಗಳಿಗೆ ಕಚ್ಚಾ ಮಾಲು ಸಮೇತ ಲಾರಿಯಲ್ಲಿ ಗುಂಪು ಗುಂಪಾಗಿ ಬಂದು ಇಳಿಯುತ್ತಾರೆ. ಕ್ರಿಕೆಟ್ ಬ್ಯಾಟ್, ವಿಕೆಟ್ ತಯಾರಿಸುತ್ತಾರೆ ಮಾರುತ್ತಾರೆ. ವರ್ಷದಲ್ಲಿ 8-10 ತಿಂಗಳು ದುಡಿಯುವ ಇವರು ಒಂದು ಲಾರಿಯಲ್ಲಿ ಸುಮಾರು 20-30 ಸಾವಿರದವರೆಗೆ ಕಚ್ಚಾ ಮಾಲು ಹಾಕಿಕೊಂಡು ಸಾವಿರಾರು ಹಾದಿ ಸವೆಸಿಕೊಂಡು ಬರುತ್ತಾರೆ.

ಮೈದಣಿವಿನ ಪರಿವೆ ಇಲ್ಲದೆ ಬೆಳ್ಳಗ್ಗಿನಿಂದ ಬೈಗಿನವರೆಗೆ ದುಡಿಯುತ್ತಾರೆ. ಕುಟುಂಬ ಸಮೇತರಾಗಿ ಬರುವ ಇವರು ಮಕ್ಕಳು ಶಾಲಾ ವಯಸ್ಸಿಗೆ ಬಂದರೆ ಊರುಗಳಲ್ಲಿ ಬಿಟ್ಟು ಶಾಲೆಗೆ ಕಳುಹಿಸುತ್ತಾರೆ. ಆದರೆ ಅಕ್ಷರಭ್ಯಾಸವಷ್ಟೆ ಮಾಡುವ ಮಕ್ಕಳು ಕ್ರಮೇಣ ಬೆಳೆದು ಈ ಕುಲಕಸುಬು ಕಲಿಯುತ್ತಾರೆ ಬ್ಯಾಟ್ ಮಾಡಲು ಥೋರಿಗಳು ಬಳಸುವುದು ‘ಮಸೀ’ ಮರವನ್ನು ತಾಳಿಕೆ ಬಾಳಿಕೆಯ ಮೋಪು ಮರವಿದು ದಿನವೊಂದಕ್ಕೆ ಬಲು ಶ್ರಮಪಟ್ಟು 15 ರಿಂದ 20 ಬ್ಯಾಟ್ ತಯಾರಿಸುತ್ತಾರೆ. ಆದರೂ ದಿನಕ್ಕೆ 8-10 ಬ್ಯಾಟ್‍ಗಳು ಖರೀದಿಯಾಗುತ್ತವೆ. ಆದರೆ ಒಮ್ಮೊಮ್ಮೆ ಭೋಣಿ ಕೂಡ ಆಗುವುದಿಲ್ಲ ಎನ್ನುತ್ತಾನೆ ಬಚ್ಚೂಬಾ ಗಿರಾಕಿಗಳು ಚೌಕಾಸಿ ಮಾಡಿದರೆ ಒಂದು ಬ್ಯಾಟಿಗೆ 10 ರಿಂದ 20 ರೂಪಾಯಿ ಉಳಿಯುತ್ತದೆ. ಬ್ಯಾಟಿನ ಕಚ್ಚಾಮರ, ಹಚ್ಚುವಹಳದಿ ಬಣ್ಣ, ಲೇಬಲ್, ಪಾಲಿಸ್ ಎಲ್ಲಾ ಖರ್ಚು ಕಳೆದರೆ ಕೈಗೆಟುಕುವ ಪುಡಿಗಾಸಿನಿಂದಲೇ ಇವರ ಜೀವನ ಥೋರಿಗಳು ಸಸ್ಯಹಾರಿಗಳು ಗಂಡಸರಿಗೆ ಧೂಮಪಾನ, ತಂಬಾಕು, ಮಧ್ಯಪಾನದಂತಹ ಚಟ ವಿರಳ ಯಾಕೆ ಎಂದರೆ ನಾವು ಗಾಂಧಿ ನಾಡಿನವರು ಎಂದು ಹೇಳುತ್ತಾರೆ. ಬಲು ಒಗ್ಗಟಿನಿಂದ ಜೀವನ ನಡೆಸುತ್ತಾರೆ. ಪರಸ್ವರ ಪೈಪೋಟಿಯಿಲ್ಲ ಜಗಳವಿಲ್ಲ ಎಲ್ಲ ಕುಟುಂಬಗಳಲ್ಲಿ ಸಹಕಾರ ಸಹಾನೂಭೂತಿ ಇವೆ. ಇಂದಿಗೂ ಇವರಲ್ಲಿ ಬಾಲ್ಯವಿವಾಹ ಜಾರಿಯಲ್ಲಿದೆ. ದೀಪಾವಳಿ ಇವರ ಪಾಲಿಗೆ ದೊಡ್ಡ ಹಬ್ಬ. ವರ್ಷದ ಸಂಪಾದನೆಯನ್ನು ಒಟ್ಟು ಗೋಡಿಸಿಕೊಂಡು ದೀಪಾವಳಿಗೆ ತಮ್ಮ ಸ್ವಂತ ಊರಿಗೆ ಹೋಗುತ್ತಾರೆ. ಹಬ್ಬ ಆಚರಿಸಿ ಸಂಭ್ರಮಿಸಿ ಮತ್ತೇ ಕಚ್ಚಾ ಸಾಮಾಗ್ರಿಗಳೊಂದಿಗೆ ಮರಳುತ್ತಾರೆ.

ಯಾವ ದೇಶ ಗೆಲ್ಲುತೋ, ಆದರಿಂದ ಯಾರಿಗೆ ಉಪಯೋಗವಾಗುತ್ತದೋ ಗೋತ್ತಿಲ್ಲ. ಆದರೆ ಇವರಿಗೆ ಲಾಭವಾಗುತ್ತದೆ. ಬ್ಯಾಟ್ ವಿಕೆಟ್‍ಗಳು ಬಿರ ಬಿನೇ ಬಿಕರಿಯಾಗುತ್ತವೆ. ದೆಹಲಿಯಲ್ಲೋ, ಕೊಲ್ಕತ್ತಾದಲ್ಲೋ, ಬೆಂಗಳೂರಿನಲ್ಲೋ ಧೋನಿ, ವಿರಾಠ ಕೊಹ್ಲಿ, ಶಿಖರ ಧವನ್, ರೋಹಿತ್ ಶರ್ಮ ಸಿಕ್ಸರ್ ಹೊಡೆದರೆ ಬಯಲು ಬದುಕಿನ ಈ ಥೋರಿಗಳು ಹೊಟ್ಟೆ ತುಂಬುತ್ತದೆ. ನಿಜಕ್ಕೂ ಇವರಿಗೆ ಅಂದೇ ದೀಪಾವಳಿ.

ಕ್ರಿಕೆಟ್ ಮೋಸದಾಟ ಪ್ರಕರಣಗಳು ಇವರಿಗೆ ಬೇಸರ ತಂದಿವೆಯಂತೆ ಇದರ ಪರಿಣಾಮ ಜನರ ಮೇಲೆ ಬಿದ್ದಾಗ ಬ್ಯಾಟ್ ಖರೀದಿ ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ. ಇದರಿಂದ ಕ್ರಿಕೆಟ್ ಕನಸುಗಳನ್ನು ಹೋತ್ತು ಮಾರುವ ಥೋರಿಗಳ ಕನಸುಗಳಿಗೆ ಕಲ್ಲು ಬಿದ್ದಂತಾಗುತ್ತದೆ.
- ಟಿ. ಶಿವಕುಮಾರ್ (ಲೇಖಕರು ಮೂಲತಃ ದಾವಣಗೇರೆ ಜಿಲ್ಲೆ ಹರಿಹರ ತಾಲೂಕಿನ ಗಡಿ ಗ್ರಾಮ ಹಾಲಿವಾಣ. ಪ್ರಸ್ತುತ ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಲಕ್ಷ್ಮೀಪುರ ಗೊಲ್ಲರ ಬಿಡಾರ ಸ.ಕಿ. ಪ್ರಾ ಶಾಲೆಯಲ್ಲಿ ಸಹ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು. ಚಿಕ್ಕದಿಂನಿಂದಲೇ ಬರೆಯುವ ಗೀಳನ್ನು ಹಚ್ಚಿಕೊಂಡು ಈಗ ಅನೇಕ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದಾರೆ. ) ಲಕ್ಷ್ಮೀಪುರ ಬಿಡಾರ, ತಾ. ಹಾನಗಲ್ಲ ಜಿ. ಹಾವೇರಿ.
