ಕವಿಯತ್ರಿ ಮಾರ್ಥಾ ರಿವೇರಾ ಅವರ ಕವನವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಕವಿ ಮಂಜುನಾಥ ಚಾಂದ್ ಅವರು ಚಂದದ ಕವಿತೆ ತಪ್ಪದೆ ಓದಿ….
ತುಸು ಹೆಚ್ಚೇ ಓದುವವಳ
ಮಾತು ಮಾತಿಗೆಲ್ಲ
ಭಾವೋನ್ಮುಖಳಾಗುವವಳ
ಹೃದಯದ ನುಡಿಗಳ
ಬರೆಯುವವಳ
ಒಲವಿಗೆಂದೂ ಬೀಳದಿರು
ಅಕ್ಷರದ ಹಂಗಿಗೆ ಬಿದ್ದವಳ
ಮೋಹ ನಿರ್ಮೋಹದ
ಹಕೀಕತ್ತು ಬಲ್ಲವಳ
ಗೀಳಿಗೆ ಬಿದ್ದು
ಗೋಳು ಹೊಯ್ದುಕೊಳ್ಳುವವಳ
ಒಲವಿಗೆಂದೂ ಬೀಳದಿರು
ಚಿಟ್ಟೆಯಂಥಾಗಿ
ಗಾಳಿಪಟವಾಗಿ
ಏರಬಲ್ಲವಳ
ತನ್ನೆದೆಯ ದನಿಯ
ತಾನೇ ಬಲ್ಲವಳ
ಒಲವಿಗೆಂದೂ ಬೀಳದಿರು
ಪ್ರೀತಿಯ ನೆವದಲ್ಲಿ
ನಗೆಯ ಹೊನಲು ಹರಿಸಿ
ಅತ್ತು ರಚ್ಚೆ ಹಿಡಿವವಳ
ತನ್ನ ಚೈತನ್ಯವೇ
ರಕ್ತ-ಮಾಂಸವಾದವಳ
ಕವಿತೆಯಲಿ ಉಸಿರನಿಟ್ಟವಳ
ಕಲೆಯೊಳಗೆ
ಹುದುಗಿಹೋದವಳ
ಸಂಗೀತವೇ ಧ್ಯಾನವಾದವಳ
ಒಲವಿಗೆಂದೂ ಬೀಳದಿರು
ರಾಜಕೀಯದ ಸೆಳವಿನ
ಬಂಡುಕೋರ ಮನಸಿನವಳ
ಅಧರ್ಮ ಕಂಡರೆ
ಸಿಡಿಮಿಡಿಗೊಳ್ಳುವವಳ
ಟೀವಿ ಸೀರಿಯಲ್ಲು
ರಿಯಾಲಿಟಿ ಶೋಗಳ
ಹುಕಿಗೆ ಬೀಳದವಳ
ಒಲವಿಗೆಂದೂ ಬೀಳದಿರು
ಮುಖವೋ
ದೇಹವೋ
ಒನಪೋ
ವಯ್ಯಾರವೋ
ಅಂತಹ
ಎಲ್ಲ ಚೌಕಟ್ಟಿನಾಚೆಗೆ
ರಮ್ಯವಾಗಿ ಕಾಣುವವಳ
ಒಲವಿಗೆಂದೂ ಬೀಳದಿರು
ಉತ್ಕಟಾಕಾಂಕ್ಷೆಯ
ಕಿಲಕಿಲವೆಂದು
ರಂಜಿಸುವವಳ
ಭಕ್ತಿ-ಭಾವಕ್ಕೆಂದೂ
ಗಂಟು ಬೀಳದವಳ
ನಿಜ್ಜಾ ಹೇಳುವೆ
ಅಂಥವಳ
ಒಲವಿಗೆಂದೂ
ಬೀಳದಿರು
ಅವಳು ನಿನ್ನ ತೆಕ್ಕೆಗಂಟದೇ
ನಿನ್ನ ಪ್ರೀತಿಗೊಲಿಯದೇ
ಇರಬಹುದು
ಆದರೆ ಬಲು ಕಷ್ಟ
ಅಂಥವಳ ಒಲವ
ಬೆಳಂದಿಗಳ ಕಳೆದು
ಮರಳಿ ಬರಲಾರೆ ಎಂದಿಗೂ
-ಮಾರ್ಥಾ ರಿವೇರಾ (ಡೊಮಿನಿಕ್ ಕವಿ)

- ಕನ್ನಡಕ್ಕೆ: ಮಂಜುನಾಥ ಚಾಂದ್ (ಖ್ಯಾತ ಲೇಖಕರು, ಕತೆಗಾರರು, ಪತ್ರಕರ್ತರು)
