ರಕ್ತಸಂಬಂಧಿಗಳನ್ನು ನೆರವಿಗಾಗಿ ಕೋರಿಕೊಂಡಾಗ ನಮ್ಮ ಪರಿಸ್ಥಿತಿಯ ದುರುಪಯೋಗ ಪಡೆಯುವುದು ಎಲ್ಲರಿಗೂ ತಿಳಿದಿದೆ. ಅಂತಹ ಒಂದು ಪಾತ್ರವನ್ನು ಕಾದಂಬರಿಗಾರ್ತಿ ಸುಮ ಉಮೇಶ್ ಅವರ ‘ಬಾಂಧವ್ಯ’ ಕಾದಂಬರಿಯಲ್ಲಿ ನೋಡಬಹುದು, ಕಾದಂಬರಿಯ ಸಂಪೂರ್ಣ ಪರಿಚಯವನ್ನು ಲೇಖಕ ಪದ್ಮನಾಭ. ಡಿ ಅವರು ಮಾಡಿದ್ದಾರೆ, ತಪ್ಪದೆ ಓದಿ..
ಕೃತಿ: ಬಾಂಧವ್ಯ
ಲೇಖಕಿ : ಸುಮ ಉಮೇಶ್
ಪ್ರಾಕಾರ: ಕಾದಂಬರಿ
ಜಂಗಮವಾಣಿ – 9035287970
ಪ್ರಕಾಶನ: ಶ್ರೀನಿಧಿ ಪಬ್ಲಿಕೇಷನ್ಸ್ ಬೆಂಗಳೂರು
ಪುಟಗಳು: 182
ಮುಖಬೆಲೆ: ₹200/- ಇನ್ನೂರು ರೂಗಳು.
ಫೇಸ್ಬುಕ್, ವಾಟ್ಸಾಪ್ ಇತ್ಯಾದಿ ಜಾಲತಾಣಗಳಿಂದ ಸಾಹಿತ್ಯಾಸಕ್ತಿಯನ್ನು ಹೆಚ್ಚಿಸಿಕೊಂಡು ಹಲವಾರು ಪ್ರತಿಭಾನ್ವಿತರು ಪುಸ್ತಕಲೋಕಕ್ಕೆ ಪ್ರವೇಶ ಪಡೆದು ಉತ್ತಮ ಕೃತಿಗಳನ್ನು ಲೋಕಾರ್ಪಣೆಗೊಳಿಸಿದ್ದಾರೆ. ಈ ಸಾಲಿಗೆ ಹೊಸ ಸೇರ್ಪಡೆ ಶ್ರೀಮತಿ ಸುಮ ಉಮೇಶ್.

ಬೆಂಗಳೂರಿನಲ್ಲಿ ವಾಸವಿದ್ದು ಸಾಹಿತ್ಯ ಬಳಗಗಳಲ್ಲಿ ಸಕ್ರಿಯರಾಗಿರುವ ಇವರು ತಮ್ಮ ಮೊದಲ ಕೃತಿಯಲ್ಲೇ ಉತ್ತಮ ಲೇಖಕಿಯಾಗುವ ಎಲ್ಲ ಲಕ್ಷಣಗಳನ್ನೂ ತೋರಿದ್ದಾರೆ.
ಬಾಂಧವ್ಯ ಎಂಬುದು ಕೇವಲ ರಕ್ತಸಂಬಂಧಕ್ಕೆ ಸೀಮಿತವಲ್ಲ. ಇದು ಜೀವನಪೂರ್ತಿ ಒಬ್ಬರು ಇನ್ನೊಬ್ಬರಿಗೆ ಮಿಡಿಯುವಂತಹದ್ದು. ಇದಕ್ಕೆ ಸಿರಿತನ ಬಡತನ ಅಡ್ಡಿ ಬರುವುದಿಲ್ಲ. ಈ ವಾಕ್ಯವನ್ನು ಓದಿ ಇದೊಂದು ಪ್ರೇಮಕಥೆ ಎಂದು ಭಾವಿಸಬೇಡಿ. ನಾನು ಹೇಳಿದ್ದು ನಿಂಗಿ, ಹಾಗೂ ಅನ್ನಪೂರ್ಣ ನಡುವಿನ ಬಾಂಧವ್ಯದ ಬಗ್ಗೆ ಅನ್ನಪೂರ್ಣ ಶ್ರೀಮಂತ ಜಮೀನ್ದಾರರ ಮಗಳು. ನಿಂಗಿ ಅದೇ ಮನೆಯಲ್ಲಿ ಕೆಲಸದಾಳು. ಆದರೂ ಒಟ್ಟಿಗೆ ಓಡಾಡಿ ನಲಿದಾಡಿ ಬೆಳೆದವರು. ಅನ್ನಪೂರ್ಣ ಮದುವೆಯಾದ ಬಳಿಕ ಇದಕ್ಕೆ ಕೆಲಕಾಲ ತೆರೆ ಬಿದ್ದರೂ ಮತ್ತೆ ಅನ್ನಪೂರ್ಣ ಗರ್ಭಿಣಿ ಆದಾಗ ಆರೈಕೆಗೆ ನಿಂಗಿಯೇ ಬರಬೇಕಾಗುತ್ತದೆ. ಕಾಲಾಂತರದಲ್ಲಿ ನಿಂಗಿಯ ಮಗಳೇ ಅನ್ನಪೂರ್ಣಳ ಮಗಳಾಗುವ ಸಂದರ್ಭ ಇನ್ನೊಂದು ಅಪರಿಚಿತರ ಮಗುವಿಗೆ ನಿಂಗಿಯೇ ತಾಯಾಗುವ ಸಂದರ್ಭ, ಇವುಗಳೆಲ್ಲ ಬಹಳ ಸೊಗಸಾಗಿ ಮೂಡಿಬಂದಿವೆ ಮಗುವಿಗೆ ಹಂಬಲಿಸುವ. ಹೆಣ್ಮನದ ಭಾವನೆಗಳು, ಬಡವನಾದರೂ ಸ್ವಾಭಿಮಾನ ತೋರುವುದು, ಸ್ವಾಮಿನಿಷ್ಠೆಗಾಗಿ ಪ್ರಿಯಕರನಿಂದ ದೂರಾಗುವುದು, ಮತ್ತೆ ಅವನೊಂದಿಗೆ ವಿವಾಹವಾದರೂ ಮರ ಕಡಿಯುವ ಸಂದರ್ಭದಲ್ಲಿ ಪತಿಯ ಸಾವು, ಇದೆಲ್ಲ ಘಟಿಸಿದರೂ ತನ್ನ ಸಾಕಿದವರನ್ನು ನೋಡಿಕೊಳ್ಳುವ ಯೋಚನೆಯಿಂದ ದುಃಖವನ್ನು ಹುದುಗಿಸಿಟ್ಟು ಜೀವನ್ಮುಖಿಯಾಗುವುದು, ಏಕಾಂಗಿಯೆಂದು ಪರಿತಪಿಸುವಾಗ ಇನ್ನೊಂದು ಅಪರಿಚಿತ ಮಗು ಕೈಸೇರುವುದು ಮಾತೃವಾತ್ಸಲ್ಯ ಉಕ್ಕಿಬರುವುದು ಇತ್ಯಾದಿಗಳನ್ನು ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ.

ಬಾಂಧವ್ಯ ಕಾದಂಬರಿಗಾರ್ತಿ ಸುಮ ಉಮೇಶ್
ಎಲ್ಲಿಯೂ ಭಾವಾವೇಶ ಭಾವೋದ್ರೇಕ ಇಲ್ಲದೆ. ಧನಾತ್ಮಕ ಚಿಂತನೆಗಳತ್ತ ಕವಿಚಿತ್ತ ಹರಿದಿದೆ. ಹಳ್ಳಿಯ ಆಡುಭಾಷೆಯನ್ನೂ, ಸುಶಿಕ್ಷಿತ ಭಾಷೆಯನ್ನೂ ಪಾತ್ರಕ್ಕೆ ತಕ್ಕಂತೆ ಬಳಸಿರುವುದು ಮೆಚ್ಚುವ ಅಂಶ. ಒಮ್ಮೊಮ್ಮೆ ರಕ್ತಸಂಬಂಧಿಗಳನ್ನು ನೆರವಿಗಾಗಿ ಕೋರಿಕೊಂಡಾಗ ನಮ್ಮ ಪರಿಸ್ಥಿತಿಯ ದುರುಪಯೋಗ ಪಡೆಯುವುದು ಎಲ್ಲರಿಗೂ ತಿಳಿದಿದೆ. ಅಂತಹ ಒಂದು ಪಾತ್ರವಾಗಿ ಪುಟ್ಟತ್ತೆ ಗಮನ ಸೆಳೆಯುತ್ತದೆ.
ಅನಕ್ಷರಸ್ಥೆಯಾದರೂ ನಂತರ ಅಕ್ಷರ ಕಲಿತು ಸಾಧನೆ ಮಾಡಿದ ನಿಂಗಿ ವಿದ್ಯೆಗೆ ವಯಸ್ಸಿನ ನಿರ್ಬಂಧವಿಲ್ಲ ಎಂದು ತೋರುತ್ತಾಳೆ. ಸ್ತ್ರೀ ವಾದ ಎಂದರೆ ಕೇವಲ ಹೆಣ್ಣಿನ ಸಮಸ್ಯೆ ಬಿಂಬಿಸುವುದು ಅಥವಾ ಅದಕ್ಕೆ ಪುರುಷರನ್ನು ದೂಷಿಸುವುದು ಕೆಲವು. ಲೇಖಕಿಯರ ಕೃತಿಗಳಲ್ಲಿ ಕಂಡುಬರುತ್ತದೆ. ಆದರೆ ಇದ್ಯಾವುದೂ ಇಲ್ಲದೆ ಹೆಣ್ಣು ಎಂತಹ ಸಮಸ್ಯೆ ಬಂದರೂ ಎದುರಿಸುವ ಜೀವನ್ಮುಖಿ ಆಕೆಯ ಜೀವನೋತ್ಸಾಹ ಬತ್ತದ ಸೆಲೆ ಎಂಬುದನ್ನು ಸುಮ ಉಮೇಶ ಸಮರ್ಥವಾಗಿ ಹೇಳಿದ್ದಾರೆ. ಓದಿ ಮುಗಿಸಿದಾಗ ಅ. ನ ಕೃ ಹೇಳಿದ ಮಾತುಗಳು ನೆನಪಾದವು. ” ಕವಿ ಉಪದೇಶಕ ಅಥವ ಸಂತನಲ್ಲ. ಉಪದೇಶ ನೀಡುವುದೇ ಸಾಹಿತಿಯ ಮುಖ್ಯ ಕೆಲಸವಲ್ಲ. ಅವನು ಸೃಷ್ಟಿಸುವ ಪಾತ್ರಗಳಿಂದ ಆ ಪಾತ್ರಗಳ ವರ್ತನೆಯಿಂದ ಉಪದೇಶ/ಸಂದೇಶ ಸೃಷ್ಟಿಯಾಗಬೇಕು. ಈ ಮಾತನ್ನು ಅಕ್ಷರಶಃ ಲೇಖಕಿ ಪಾಲಿಸಿದ್ದಾರೆ.
ಲೇಖಕಿಗೆ ಶುಭವಾಗಲಿ ಮತ್ತಷ್ಟು ಇಂತಹ ಧನಾತ್ಮಕ ಸಂದೇಶಗಳಿರುವ ಕೃತಿಗಳು ಇವರಿಂದ ಹೊರಬರಲಿ.
- ಪದ್ಮನಾಭ. ಡಿ. ( ನಿವೃತ್ತ ಪೋಸ್ಟ್ ಮಾಸ್ಟರ್, ಸಾಹಿತ್ಯ ಕೃತಿಗಳು : ಸಂತೋಷ-ಸಂದೇಶ ಕವನ ಸಂಕಲನ – 2018, ಭಾವಲಹರಿ ಕವನಸಂಕಲನ -2018, ಹೂಬನ ಕವನಸಂಕಲನ – 2019, ಭಾವಸರಿತೆ – ಕಥಾ ಸಂಕಲನ – 2020, ರಾಜ್ಯ ಮಟ್ಟದ ಸಾಹಿತ್ಯ ಚಿಗುರು ಪ್ರಶಸ್ತಿ, ಪ್ರೇಮಕ್ಕೆ ಜಯ ಕಾದಂಬರಿ – 2021, ತರಂಗಿಣಿ – ಕವನಸಂಕಲನ – 2022 ಕವಿಗಳು, ಲೇಖಕರು) ಮೈಸೂರು.
