‘ಸೂರ್ಯನ್ ಪರ್ಪಂಚ’ ಪುಸ್ತಕ ಪರಿಚಯ – ನಟರಾಜು ಮೈದುನಹಳ್ಳಿ

ಸೂರ್ಯನ್ ಪ್ರಸಾದ್ ಕುಲಕರ್ಣಿ ಅವರ ಪ್ರಪ್ರಥಮ ಕಾದಂಬರಿ ‘ಸೂರ್ಯನ್ ಪರ್ಪಂಚ’ ದ ಕುರಿತು ಲೇಖಕ ನಟರಾಜು ಮೈದುನಹಳ್ಳಿ ಅವರು ಬರೆದಿರುವ ಪುಸ್ತಕ ಪರಿಚಯವನ್ನು ತಪ್ಪದೆ ಓದಿ…

ಪುಸ್ತಕ : ಸೂರ್ಯನ್ ಪರ್ಪಂಚ
ಲೇಖಕರು: ಸೂರ್ಯನ್ ಪ್ರಸಾದ್ ಕುಲಕರ್ಣಿ

ಸೂರ್ಯನ್ ಪರ್ಪಂಚ ಸೂರ್ಯಸಖ ಪ್ರಸಾದ್ ಕುಲಕರ್ಣಿಯವರ ಪ್ರಪ್ರಥಮ ಕಾದಂಬರಿ. ಇದನ್ನು ಓದುವುದು ಕೆಲಸಗಳ ಒತ್ತಡದಿಂದ ತಡವಾಯಿತು. ಈ ಕಾದಂಬರಿ ನನ್ನ ನಿರೀಕ್ಷೆಯನ್ನೂ ಮೀರಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಓದುತ್ತಾ ಹೋದಂತೆ ಲೇಖಕರ ಬರಹದ ಸತ್ವ, ಕಥೆಯ ನಿರೂಪಣೆ, ಪಾತ್ರಗಳನ್ನು ಕಟ್ಟಿಕೊಡುವ ರೀತಿ ಇಷ್ಟವಾಗುತ್ತಾ ಹೋಗುತ್ತದೆ. ವೃಶಾಲಿ-ಪ್ರಕಾಶ, ರಾಗಿಣಿ ಶ್ರೀವತ್ಸ, ಶಾಲ್ಮಲಾ-ಶ್ರೀನಿವಾಸ, ಮುಖ್ಯವಾಗಿ ಈ ಮೂರು ದಂಪತಿಗಳ ವ್ಯಕ್ತಿತ್ವಗಳು, ಸಾಂಸಾರಿಕ ಏರುಪೇರುಗಳು ಗರಿ ಬಿಚ್ಚುತ್ತಾ ಹೋಗುತ್ತವೆ. ಇವರುಗಳ ಜೊತೆಗೆ ಕತೆಗಾರರೂ ಸಹ ಲೇಖಕ ಉಪಸಂಪಾದಕ ಸೂರ್ಯನಾರಾಯಣ ಕರಿಕಟ್ಟೆ ಪಾತ್ರದಲ್ಲಿ ಎಲ್ಲರ ಜೀವನದ ಆಗುಹೋಗುಗಳಿಗೆ ಸಾಕ್ಷಿಯಾಗುತ್ತಾರೆ. ಇವರು ಕೆಲಸ ಮಾಡುವ ಮಿಂಚು ಪತ್ರಿಕೆಯ ಸಂಪಾದಕ ಅರುಣ್ಹುತ್ತಿನಗದ್ದೆ ಯವರ ವ್ಯಕ್ತಿತ್ವದ ಬಗ್ಗೆ ಓದುವಾಗ ವಿನಾಕಾರಣ ರವಿ ಬೆಳಗೆರೆಯವರು ನೆನಪಾಗುತ್ತಾರೆ.

ಈ ಕಾದಂಬರಿಯಲ್ಲಿ ಬರುವ ಕೆಲವು ವ್ಯಕ್ತಿಗಳ ವ್ಯಕ್ತಿತ್ವಗಳು ಓದುಗರ ಮನದಾಳದಲ್ಲಿ ಇಳಿಯುತ್ತವೆ. ವೃಶಾಲಿ- ಬಾಲ್ಯದಲ್ಲಿಯೇ ಗ್ಯಾಸ್ ಸಿಲಿಂಡರ್ ಸ್ಪೋಟದ ಅವಘಡಕ್ಕೆ ಸಿಲುಕಿ ತನ್ನ ತಾಯಿಯನ್ನು ಕಳೆದುಕೊಳ್ಳುತ್ತಾಳೆ, ತನ್ನ ಕಾಲಿಗೆ ಊನ ಮಾಡಿಕೊಳ್ಳುತ್ತಾಳೆ. ಮೊದಲಿನಿಂದಲೂ ತಂದೆ ಚಂದ್ರಮೌಳಿಯ ತಿರಸ್ಕಾರಕ್ಕೆ ತುತ್ತಾಗಿದ್ದ ವೃಶಾಲಿ , ತಂದೆ ಇನ್ನೊಂದು ಮದುವೆಯಾದಾಗ ಮಲತಾಯಿಯ ತಿರಸ್ಕಾರಕ್ಕೂ ಗುರಿಯಾಗುತ್ತಾಳೆ. ಆದರೆ ವೃಶಾಲಿಯದು ಗಟ್ಟಿ ವ್ಯಕ್ತಿತ್ವ. ಈಕೆಯ ವೃತ್ತಿ ಅಡ್ವೊಕೇಟ್. ಜೀವನದಲ್ಲಿ ಬಂದ ಕಷ್ಟಗಳನ್ನು ತನ್ನ ಛಲದಿಂದ ಎದುರಿಸುತ್ತಾಳೆ. ಬೇಜವಾಬ್ದಾರಿ ಸ್ವಭಾವದ, ಕೊಂಕು ಮಾತುಗಳನ್ನಾಡುವ ಗಂಡ ಪ್ರಕಾಶನ ಜೊತೆಯಲ್ಲೂ ಹೊಂದಾಣಿಕೆ ಮಾಡಿಕೊಂಡು ನೆಮ್ಮದಿಯ ಜೀವನ ಕಂಡುಕೊಳ್ಳುತ್ತಾಳೆ. ತನಗೆ ಆಪ್ತರಾದ ಶ್ರೀವತ್ಸ ಹಾಗೂ ಶಾಲ್ಮಲಾಳ ಸಂಸಾರಗಳಲ್ಲಿ ಸಮಸ್ಯೆಗಳು ಉಂಟಾದಾಗ ಅವರಿಗೆ ಸಹಾಯ ಮಾಡಲು ಹೊರಡುತ್ತಾಳೆ. ಇವಳದು ಎಲ್ಲರಿಗೂ ಒಳ್ಳೆಯದನ್ನು ಬಯಸುವ ವ್ಯಕ್ತಿತ್ವ. ಕತೆಗಾರರ ಹಾಗೂ ವೃಶಾಲಿಯ ಪ್ರಾಂಜಲ ಸ್ನೇಹ, ವಿಶ್ವಾಸ ಓದುಗರಿಗೆ ಖುಷಿಕೊಡುತ್ತದೆ.

ವೃಶಾಲಿಯ ಗಂಡ  ಪ್ರಕಾಶ್ ನದು ವಿಕ್ಷಿಪ್ತ ವ್ಯಕ್ತಿತ್ವ. ಆತ ಏನೇ ಉಡಾಫೆ, ಅಹಂ, ಕೊಂಕುಮಾತುಗಳ ವ್ಯಕ್ತಿಯಾದರೂ ಅವನು ಇತರರೊಂದಿಗೆ ಯಾವುದೇ ವಿಷಯದ ಬಗ್ಗೆ ಚರ್ಚಿಸುವಾಗ ಮಂಡಿಸುವ ತರ್ಕಬದ್ಧವಾದ ವಿಶ್ಲೇಷಣೆ ಓದುಗರಿಗೆ ಬೆರಗು ಮೂಡಿಸುತ್ತದೆ. ತುಂಬಾ ಪುಸ್ತಕಗಳನ್ನು ಓದುವ ಬುದ್ಧಿವಂತ ಎನಿಸುತ್ತದೆ. ಇದಮಿತ್ಥಂ ಎಂದು ಆತನ ವ್ಯಕ್ತಿತ್ವದ ಬಗ್ಗೆ ಒಂದು ನಿರ್ಧಾರಕ್ಕೆ ಬರಲು ಸಾಧ್ಯವಾಗುವುದೇ ಇಲ್ಲ.

ಕಾದಂಬರಿಯಲ್ಲಿ ಬರುವ ಇನ್ನೊಂದು ಜೋಡಿ ಎಂದರೆ ಶ್ರೀವತ್ಸ ಮತ್ತು ರಾಗಿಣಿಯವರದು. ಇವರದು ಅದ್ಭುತ ಪ್ರೇಮ ಕಥೆ, ಒಂದು ಶೃಂಗಾರ ಕಾವ್ಯ. ಶ್ರೀವತ್ಸನಿಗೆ ರಾಗಿಣಿಯ ಮೇಲೆ ಉಂಟಾಗುವ ಪ್ರೀತಿ, ತನ್ನ ಪ್ರೀತಿಯನ್ನು ಆಕೆಗೆ, ರಾಗಿಣಿಯ ಮನೆಯವರಿಗೆ ಹಾಗೂ ತನ್ನ ಮನೆಯವರಿಗೆ ತಿಳಿಸಿ ಅದನ್ನು ಮದುವೆಯವರೆಗೂ ತೆಗೆದುಕೊಂಡು ಹೋಗಲು ಶ್ರೀವತ್ಸ ಅನುಭವಿಸುವ ಪಡಿ ಪಾಟಲು ಓದುಗರಿಗೆ ಖುಷಿ ಕೊಡುತ್ತದೆ. ಅದರಲ್ಲಿಯೂ ಶ್ರೀವತ್ಸ ರಾಗಿಣಿಗೆ ಬರೆಯುವ ಪ್ರೇಮಪತ್ರ ಅತ್ಯಂತ ಚೆಂದ. ಲೇಖಕರ ರಸಿಕತನ ಓದುಗರಿಗೂ ಮಧುರ ಅನುಭೂತಿ ಉಂಟು ಮಾಡುತ್ತದೆ. ಪ್ರೇಮ ಪತ್ರದಲ್ಲಿ ಅಲ್ಲಲ್ಲಿ ಬರೆದಿರುವ ಕವನಗಳ ಸಾಲುಗಳು ಓದುಗರಿಗೆ ಕಚಗುಳಿ ನೀಡುತ್ತವೆ. ಉದಾಹರಣೆಗೆ ಕವನದಲ್ಲಿ ಬರುವ ಒಂದು ಸಾಲು ಎಷ್ಟು ಚೆಂದ ಇದೆ ನೋಡಿ.

ಕೊಳಲಾಗು ನೀನು ನನ್ನ ಉಸಿರಿಗೆ ಕೊರಳಾಗುವೆ ನಾನು ನಿನ್ನ ಮಾತಿಗೆ ಇಂತಹ ಪ್ರೇಮಿಗಳು ಮದುವೆಯಾದ ಮೇಲೆ, ಗುಲ್ಮೋಹರ್ ನಂತಹ ರಾಗಿಣಿಯು ತನ್ನ ಗಂಡನ ಪಾಲಿಗೆ ಮುಳ್ಳಾಗಿ ಬದಲಾಗಿ, ಗಂಡನನ್ನು ನರಳಿಸಿ ಡಿವೋರ್ಸ್ ತನಕ ತೆಗೆದುಕೊಂಡು ಹೋಗುವುದು ದುರಂತ…ಇದಕ್ಕೆ ಕಾರಣ ಪುಸ್ತಕದಲ್ಲಿ ಓದಿದರೇ ಚೆಂದ.

ಶಾಲ್ಮಲಾ ಮತ್ತು ಶ್ರೀನಿವಾಸ ದಂಪತಿಗಳ ಜೀವನದಲ್ಲಿ, ಶ್ರೀನಿವಾಸನ ತಮ್ಮ ಮಾಧವ ನೇ ಖಳನಾಯಕ. ತನ್ನ ಅತ್ತಿಗೆಯನ್ನೇ ಕಾಮಿಸುವ ಲಂಪಟ. ತೋಟದ ಮನೆಯಲ್ಲಿ ಉಂಟಾಗುವ ಮಾಧವನ ಕೊಲೆ ಕತೆಗೆ ರೋಚಕ ತಿರುವನ್ನು ಉಂಟುಮಾಡುತ್ತದೆ. ಕೊಲೆ ಮಾಡಿದ್ದು ಯಾರಿರಬಹುದು ಎಂಬ ಓದುಗರ ಊಹೆ ಅಂತಿಮವಾಗಿ ತಲೆಕೆಳಗಾಗುತ್ತದೆ. ಲೇಖಕರು ಬಹಳ ಚೆನ್ನಾಗಿ ಈ ಪ್ರಸಂಗವನ್ನು ಹಣೆದಿದ್ದಾರೆ. ಇದೊಂದು ಕುತೂಹಲ ಭರಿತ ಪತ್ತೇದಾರಿ ಪ್ರಸಂಗ.

ಸೂರ್ಯನ್ ಪರ್ಪಂಚ ಕಾದಂಬರಿಕಾರ ಸೂರ್ಯನ್ ಪ್ರಸಾದ್ ಕುಲಕರ್ಣಿ

ಶ್ರೀವತ್ಸ-ರಾಗಿಣಿ, ಶಾಲ್ಮಲಾ-ಶ್ರೀನಿವಾಸ ದಂಪತಿಗಳ ಸಾಂಸಾರಿಕ ಜೀವನದಲ್ಲಿ ಉಂಟಾದ ಸಮಸ್ಯೆಗಳನ್ನು ವೃಶಾಲಿಯು ಬಗೆಹರಿಸಲು ಸಾಧ್ಯವಾಯಿತಾ? ಎಂಬುದನ್ನು ಕಾದಂಬರಿ ಓದಿಯೇ ತಿಳಿಯಬೇಕು.

ಇವತ್ತಿನ ಸಮಾಜದಲ್ಲಿ ಅನೇಕ ಸಂಸಾರಗಳಲ್ಲಿ ಬಿರುಕು ಮೂಡಲು ಮುಖ್ಯ ಕಾರಣ ಅನೈತಿಕ ಸಂಬಂಧ. ಈ ಕಾದಂಬರಿಯಲ್ಲಿ ನೈತಿಕ ಪತನ ಹೊಂದುವ ವೈಶಾಲಿ, ಸುಜಾತ, ಕಮಲಿ, ಮಾಧವ, ಗುರುರಾಜ, ಶ್ರೀನಿವಾಸ, ಬಾಲಚಂದ್ರ ಭಟ್ಟ ಪಾತ್ರಗಳು ಇದಕ್ಕೆ ಸಾಕ್ಷಿಯಾಗಿ ನಿಲ್ಲುತ್ತವೆ. ಲೇಖಕರು ಉತ್ತಮ ಓದುಗರು. ಕಾದಂಬರಿಯ ಮಧ್ಯದಲ್ಲಿ ಅಲ್ಲಲ್ಲಿ ಸ್ವಂತದ ಕವನಗಳನ್ನು, ಪ್ರಾಚೀನ ಮಹಾ ಕಾವ್ಯಗಳ ಸಾಲುಗಳನ್ನು, ಡಿವಿಜಿಯವರ ಕಗ್ಗಗಳನ್ನು, ಭರತೇಶ ಬಾಹುಬಲಿ, ಪುಣ್ಯಕೋಟಿ ಗೋವಿನ ಹಾಡುಗಳನ್ನು ಸಾಂದರ್ಭಿಕವಾಗಿ ಸೇರಿಸಿರುವುದು ಲೇಖಕರ ಪಾಂಡಿತ್ಯಕ್ಕೆ ಸಾಕ್ಷಿ. ಇವು ಕೃತಿಯ ಅಂದವನ್ನು ಮತ್ತಷ್ಟು ಹೆಚ್ಚಿಸಿವೆ.

ಲೇಖಕರು ಕಾದಂಬರಿಯ ಮಧ್ಯದಲ್ಲಿ ಅಲ್ಲಲ್ಲಿ ಪಾತ್ರಗಳ ಮೂಲಕ ಹೇಳಿಸುವ ಸಾಲುಗಳು ಬಹಳ ಅರ್ಥಪೂರ್ಣವಾಗಿವೆ. ಉದಾಹರಣೆಗೆ ಕನಸು ಕಾಣಲು ಶ್ರಮ ಇರದ ನಿದ್ರೆ ಸಾಕು ಮತ್ತು ಗಮ್ಯ ತಲುಪಲು ನಿದ್ರೆಗೂ ಅವಕಾಶ ಇರದ ಶ್ರಮ ಬೇಕು. ತಾನು ಬೆಳೆದು ಇತರರನ್ನು ಬೆಳೆಸುವವನೇ ನಾಯಕ, ತನ್ನ ಜೊತೆಗೆ ಇತರರನ್ನು ಹಾಳು ಗೆಡವುವವನೇ ನಾಲಾಯಕ. ಒಲವು ಗೆಲುವಾಗಿದ್ದರೆ ಅದು ಸಾಕ್ಷಾತ್ಕಾರ.ಒಲವು ಛಲವಾದರೆ ಸಕತ್ ಖಾರ. ಮನುಷ್ಯನ ನಿಯತ್ತು ಮತ್ತು ದೃಷ್ಟಿಕೋನ ಬದಲಾದಷ್ಟು ವೇಗದಲ್ಲಿ ಯಾವುದೂ ಬದಲಾಗುವುದಿಲ್ಲ.

ಈ ಕಾದಂಬರಿಯನ್ನು ಒಂದೇ ಗುಕ್ಕಿನಲ್ಲಿ ಓದಿದರೆ ಮಾತ್ರ ಕಥೆಯ ಸಾರ ಹಾಗೂ ಪಾತ್ರಗಳು ಅರ್ಥವಾಗುವುದು. ಏಕೆಂದರೆ ಕಥೆಯಲ್ಲಿ ಬಹಳಷ್ಟು ಪಾತ್ರಗಳು ಬರುತ್ತವೆ. ಅರ್ಧ ಓದಿ ಗ್ಯಾಪ್ ಕೊಟ್ಟರೆ, ಮತ್ತೆ ಓದಲು ಪ್ರಾರಂಭಿಸಿದಾಗ ಪಾತ್ರಗಳು ಕಲಸು ಮೇಲೋಗರ. ಈ ಕೃತಿಯ ಬಿಡುಗಡೆಗೆ ಲೇಖಕರು ಸಾಕಷ್ಟು ಸಮಯ ತೆಗೆದುಕೊಂಡರೂ, ತಡೆದ ಮಳೆ ಜಡಿದು ಬಂತು ಎನ್ನುವಂತೆ ಉತ್ತಮ ಕೃತಿಯನ್ನೇ ಹೊರತಂದಿದ್ದಾರೆ. ಓದಿ ಖುಷಿಯಾಯ್ತು. ಅಭಿನಂದನೆಗಳು ಸೂರ್ಯಸಖರಿಗೆ. ನಿಮ್ಮಿಂದ ಇನ್ನಷ್ಟು ಉತ್ತಮ ಕೃತಿಗಳು ಮೂಡಿ ಬರಲಿ. ಶುಭವಾಗಲಿ


  • ನಟರಾಜು ಮೈದುನಹಳ್ಳಿ

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW