‘ಬೇಡ ಬೇರೆಯಾಗುವುದು’ ಕವನ

ಆಗಾಗ ರಚ್ಚೆ ಹಿಡಿದ ಮಗುವಿನಂತೆ ಗೋಡೆಯೆಡೆಗೆ ಮುಖಮಾಡಿ ಕುಳಿತೇಬಿಡುತ್ತೀಯಾ..ಬೇಡ ಬೇರೆಯಾಗುವುದು !! ಕವಿ ಡಾ. ಲಕ್ಷ್ಮಣ ಕೌಂಟೆ ಅವರ ಲೇಖನಿಯಲ್ಲಿ ಅರಳಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಅಗಲಬಾರದು
ಒಮ್ಮೆ ಕೂಡಿದ ಮೇಲೆ..
ಇದೇ ಸುಖೀ ದಾಂಪತ್ಯ ಜೀವನದ ಸೂತ್ರ

ನಾನಂತೂ ಸದಾ ರಾಜಿಯೇ..
ನಿನ್ನೊಂದಿಗೆ ಕಲಹ ಸಲ್ಲದು..
ಕದಡುವ ಮಾತು ಬೇಡ ಎಂದರೂ
ನೀನು ಬಿಡುವುದೇ ಇಲ್ಲ ಬಿಡು
ಅದಿರಬೇಕು ನಿನ್ನ ಜನ್ಮಜನ್ಯ ಸ್ವಭಾವವೇ!!

ಆಗಾಗ ರಚ್ಚೆ ಹಿಡಿದ ಮಗುವಿನಂತೆ
ಗೋಡೆಯೆಡೆಗೆ ಮುಖಮಾಡಿ
ಕುಳಿತೇಬಿಡುತ್ತೀಯಾ..!!
ಬೆಳಗಿನಿಂದ ಕತ್ತಲಾಗುವವರೆಗೂ!!

ಕಡ್ಡಿ ಗೀರಿದಾಗಲಾದರೂ
ಕಾಣ ಬಹುದೇನೋ ನಿನ್ನ ಮುಖ
ಅಂದುಕೊಂಡಿದ್ದೆ..!!
ನೀನು ವಿಮುಖಿಯಾಗಿ ಬಿಡುತ್ತಿ..!!

ಆರೋಪ ಯಾರಾದರೂ
ಹೊರಿಸುತ್ತಾರೆ ಬಿಡು
ಸುಮ್ಮನೆ ಸುಲಭವಾಗಿ!!
ಆದರೆ ಅಪರಾಧಿತನ ಸಾಬೀತಿಗೆ
ಸರಳವಾಗಿ ದೊರೆಯವು ಸಾಕ್ಷಿ..!!

ಮುರಿಯಬೇಕು
ಗಟ್ಟಿ ಮನಸ್ಸು ಮಾಡಿ ಮೌನವ!!
ಆಗಲಾದರೂ ಬೆಳಕಿನ ಕಿರಣವೊಂದು
ಹರಿದೀತು ಗಾಢ ನಿಗೂಢ ಭಾವ ಕತ್ತಲೊಳಗೆ!!

ಎರಡು ಹೆಜ್ಜೆ ಮುಂದೆ ಬರಬೇಕು ಇಬ್ಬರೂ
ಮೊದಲು ಯಾರಾದರೂ ತಿಳಿಗೊಂಡು
ಕದಲಿಸಬೇಕು ಪಾದಗಳ..
ರಾಡಿ ಕೊಳವೂ ತಿಳಿಯಾಗುತ್ತದೆ ನೀರವದೊಳಗೆ!!

ನಾನೇ ಮುಂಬರುತ್ತೇನೆ ಬಿಡು
ಹಮ್ಮುಬಿಮ್ಮು ಬಿಟ್ಟು..!!
ನಮ್ಮಿಬ್ಬರ ನಡುವೆ
ಎಲ್ಲಿದೆ ಸೋಲು ಗೆಲುವಿನ ಪಣ!!
ಸೋತರೆ ಇಬ್ಬರೂ ಸೋಲುವುದು
ಗೆದ್ದರೆ ಇಬ್ಬರೂ ಗೆಲ್ಲುವುದು..


  • ಡಾ. ಲಕ್ಷ್ಮಣ ಕೌಂಟೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading