ಕೆ.ಸತ್ಯನಾರಾಯಣ ಅವರ ‘ಬೀದಿ ಜಗಳ ಮತ್ತು ಇತರ ಪ್ರಬಂಧಗಳು’ ಕುರಿತು ರಘುನಾಥ್ ಕೃಷ್ಣಮಾಚಾರ್ ಅವರು ಬರೆದಿರುವ ಪುಸ್ತಕ ಪರಿಚಯವನ್ನು ತಪ್ಪದೆ ಮುಂದೆ ಓದಿ…
ಪುಸ್ತಕ : ಬೀದಿ ಜಗಳ ಮತ್ತು ಇತರ ಪ್ರಬಂಧಗಳು
ಲೇಖಕರು : ಕೆ.ಸತ್ಯನಾರಾಯಣ
ಪ್ರಕಾಶಕರು : ನ್ಯೂ ವೇವ್ ಬುಕ್ಸ್
ಬೆಲೆ: 140.00
ಪುಟ : 128
ಕೆ.ಸತ್ಯನಾರಾಯಣ, ಈ ಸಂಕಲನದಲ್ಲಿ ಐದು ಕೇಂದ್ರ ಪ್ರತಿಮೆಗಳು ಇವೆ. ಅವು: ಒಳಾಂಗಣ, ಬೀದಿ, ಮಸಲ್ ಮೆಮೊರಿ, ಹ್ಯಾಂಗ್ ಆನ್ ಅಥವಾ ಬಂದಳಿಕೆ ಮತ್ತು ಇತರೆಯವರು: ಮೊದಲನೆಯ ಒಳಾಂಗಣ ಎನ್ನುವುದು ಮನೆಯಲ್ಲಿ ವಾಸಿಸುವವರ ನಡುವೆ ಇರಬೇಕಾದ ಸೌಹಾರ್ದ ಮತ್ತು ಜೈವಿಕ ಸಾಮರಸ್ಯದ ಪ್ರತಿಮೆಯಾಗಿದೆ. ಅದು ಇಲ್ಲದೆ ಹೋದಾಗ ಅದೇ ಬೀದಿ ಜಗಳಕ್ಕೆ ದಾರಿಮಾಡುತ್ತದೆ.
ಮನೆಯ ಕೇಂದ್ರ ಕುಟುಂಬವಾದರೆ ಇಲ್ಲಿ ಗುಂಪು ಕೇಂದ್ರ. ಎರಡರಲ್ಲೂ ಇರಬೇಕಾದ ಸಾಮರಸ್ಯ ಇಲ್ಲದೆ ಹೋದಾಗ ಅದು ರಂಪ ರಾಮಾಯಣಕ್ಕೆ ಕಾರಣವಾಗುತ್ತದೆ. ಅದನ್ನು ಇಲ್ಲಿ ಉಲ್ಲೇಖ ಮಾಡುವುದಾದರೆ” ದಶರಥ , ಕೈಕೇಯಿ , ಕೌಸಲ್ಯ, ರಾಮ ,ಸೀತೆ ಇವೆರೆಲ್ಲರಿಗೂ ಪ್ರತ್ಯೇಕ ಅರಮನೆಗಳು ಇವೆ. ಆದರೆ ಯಾರೊಬ್ಬರಿಗೂ ಮನೆಯಲ್ಲಾಗಲಿ, ಮನಸ್ಸಿನಲ್ಲಾಗಲಿ ಒಳಾಂಗಣ ಸಿಗಲಿಲ್ಲ. . ಕಾಡು ಮೇಡು , ನದಿತೀರ, ಋಷಿ ಆಶ್ರಮ ಎಲ್ಲೂ ಇವರ್ಯಾರಿಗೂ ಒಳಾಂಗಣ ಸಿಗಲಿಲ್ಲ. ಒಳಾಂಗಣ ಹುಡುಕುತ್ತಲೇ ಅದು ಎದುರಾದರೂ ಗುರುತಿಸದೆ ಹೋದ ಸಂಸಾರಗಳ ರಂಪವೆ ವಾಲ್ಮೀಕಿಯ ರಾಮಾಯಣ.” ಇತರೆಯವರು . ಬಾಲ್ಯದಲ್ಲಿಯೇ ಬ್ರಾಹ್ಮಣ ಸಮುದಾಯದ ಹೊರತು ಪಡಿಸಿ ಉಳಿದ ಎಲ್ಲರನ್ನೂ ಇತರೆಯವರು ಎಂದು ಕರೆಯುವ ಸಮಾಜದ ಶ್ರೇಣೀಕರಣ ಪದ್ದತಿಯನ್ನು , ಅದರ ವ್ಯಾಪ್ತಿ ಇಂದಿಗೂ ವಿಸ್ತಾರಗೊಂಡು ಸಮಾಜವನ್ನು ಚಿದ್ರಗೊಳಿಸುತ್ತಿರುವ ದುರಂತವನ್ನು ಸೆರೆಹಿಡಿಯುತ್ತದೆ. ಮಸ್ಸಲ್ ಮೆಮೊರಿ ಇಂದಿನ ಆಧುನಿಕ ಜಗತ್ತನ್ನು ಆಳುತ್ತಿರುವ ಕಂಪ್ಯೂಟರ್ ತಂತ್ರಜ್ಞಾನದ ಪ್ರತಿಮೆ. ಅದಕ್ಕೆ ಬೇಕಾದ್ದು ಸೃಜನಶೀಲತೆಗಿಂತ ಇವೆಲ್ಲದರ ಯಾಂತ್ರಿಕ ಪರಿಣತಿ. ನಡುವೆ ಸಿಕ್ಕ ಮನುಷ್ಯ ಸ್ವಂತದ ಯೋಗ್ಯತೆಯನ್ನು ಬೆಳೆಸಿಕೊಳ್ಳದೆ ಹ್ಯಾಂಗ್ ಆನ್ ಆಗಿ ಇಲ್ಲವೇ ಬಂದಳಿಕೆಯಾಗಿ ಪರಿಣಮಿಸಿದೆ.
‘ಬೀದಿ ಜಗಳ ಮತ್ತು ಇತರ ಪ್ರಬಂಧಗಳು’ ಲೇಖಕ ಕೆ.ಸತ್ಯನಾರಾಯಣ
ಇದು ಅದರ ಒಂದು ಮುಖ. ಇನ್ನೊಂದು ಮುಖ. ” ನಮಗೆ ಯಾಕೆ ಹೀಗೆ ಆಗಬೇಕು ” ಎಂಬ ಪ್ರಬಂಧ ಆತ್ಮವಿಶ್ಲೇಷಣೆಯ ಮಾದರಿ. ಇಲ್ಲಿ ನಮಗೆ ಒಳ್ಳೆಯದಾದಾಗ ನಾವು ಈ ಪ್ರಶ್ನೆಯನ್ನು ಕೇಳಿಕೊಳ್ಳದೆ, ಕೆಟ್ಟದಾದಾಗ ಮಾತ್ರ ಈ ಪ್ರಶ್ನೆಯನ್ನು ಕೇಳಿಕೊಳ್ಳುವುದು ನಮ್ಮ ಪೂರ್ವಾಗ್ರಹಕ್ಕೆ ಹಿಡಿದ ಕನ್ನಡಿಯಾಗಿದೆ.ಹೀಗೆ ಆದಾಗಲೂ ಅದನ್ನು ಒಂದು ಶಾಪವೆಂದು ಪರಿಗಣಿಸದೆ ವರವೆಂದು ಭಾವಿಸಿ, ಅನ್ಯರಿಗೆ ಅದರಿಂದ ಉಪಯೋಗವಾಗುವಂತೆ ಬದುಕಿದವರ ಉದಾಹರಣೆ ಕೂಡ ಈ ಪ್ರಬಂಧ ಒಳಗೊಂಡಿರುವುದು ಅದರ ಇತ್ಯಾತ್ಮಕತೆಗೆ ಸಾಕ್ಷಿ ಯಾಗಿದೆ.ಜಾತಿವಾದಿಗಳು ಜಾತ್ತ್ಯಾತೀತರೆಂದು ಮುಖವಾಡ ಧರಿಸಿದವರ ನಡುವೆ ನಿಜವಾದ ಜಾತ್ಯತೀತರ ಸಂಕಷ್ಟದ ಅನ್ವೇಷಣೆ ಇನ್ನೊಂದು ಪ್ರಬಂಧದ ವಸ್ತು. ಆತ್ಮವಿಶ್ಲೇಷಣೆ ಮತ್ತು ಲೋಕವಿಶ್ಲೇಷಣೆಗಳನ್ನು, ಕಾರಣ, ಪರಿಣಾಮ, ಪರ್ಯಾಯಗಳು ಏಕತ್ರ ಸಂಭವಿಸುವಂತೆ ಮಾಡುವುದು ಈ ಪ್ರಬಂಧ ಸಂಕಲನದ ವೈಶಿಷ್ಟ್ಯವಾಗಿದೆ- ಅನಾವಶ್ಯಕ ಇಂಗ್ಲಿಷ್ ಶಬ್ದಗಳು, ಮುದ್ರಣ ದೋಷಗಳನ್ನು ಹೊರತುಪಡಿಸಿ..
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು, ಮುಂಬೈ.