ಕಳೆದ ವರ್ಷ ಇಡೀ ಜಗತ್ತನ್ನೇ ತನ್ನೆಡೆಗೆ ತಿರುಗಿನೋಡುವಂತೆ ಮಾಡಿದ ಸಿನಿಮಾ ಕಾಂತಾರ. ತುಳುನಾಡ ಸಂಸ್ಕೃತಿಯನ್ನು ಪ್ರಚುರ ಪಡಿಸಿದ ಈ ಸಿನಿಮಾ ಏಪ್ರಿಲ್ 15ರಂದು ತುಳುನಾಡ ಹಬ್ಬ ವಿಷು ಪ್ರಯುಕ್ತ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿದೆ. ವಿವರಕ್ಕೆ ಮುಂದೆ ಓದಿ..
ಇಡೀ ದೇಶವೇ ಸ್ಯಾಂಡಲ್ ವುಡ್‌ನತ್ತ ತಿರುಗಿ ನೋಡುವಂತೆ ಮಾಡಿ ಇತಿಹಾಸ ಸೃಷ್ಟಿಸಿದ್ದು ಕಾಂತಾರಾ. ಈ ಸಿನಿಮಾ ವಿವಿಧ ಭಾಷೆಗಳಲ್ಲಿ ಪ್ರದರ್ಶನವಾಗಿತ್ತು. ಕೊನೆಗೆ ಅದರ ನೆಲದ ಭಾಷೆ ತುಳುವಿನಲ್ಲೇ ಸಿದ್ಧವಾಗಿ ಪ್ರದರ್ಶನವಾಗಿತ್ತು ಕೂಡ. ಈ ತುಳು ಭಾಷೆಯ ಸಿನಿಮಾ ಇದೇ ಮೊದಲ ಸಲ ಕನ್ನಡ ಕಿರುತೆರೆಯಲ್ಲಿ ಅಂದರೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿದೆ.
ಸುವರ್ಣ ವಾಹಿನಿ ತುಳು ಭಾಷೆಯ ಕಾರ್ಯಕ್ರಮ ಬಿತ್ತರಿಸುವುದು ಹೊಸದೇನಲ್ಲ. ಸುವರ್ಣ ವಾಹಿನಿಯಲ್ಲಿ 2010ರಲ್ಲಿ ‘ಗೊತ್ತಾನಗ ಪೊರ್ತಾಂಡ್’ ಎಂಬ ತುಳು ಧಾರಾವಾಹಿ ಪ್ರಸಾರವಾಗಿತ್ತು. ಅದು ಪ್ರೇಕ್ಷಕರ ಮನಗೆದ್ದು ಮನೆ ಮಾತಾಗಿತ್ತು. 13 ವರ್ಷಗಳ ಬಳಿಕ ದೇಶದ ಉದ್ದಗಲಕ್ಕೂ ಮನೆಮಾತಾದ ಕಾಂತಾರಾ ಸಿನಿಮಾದ ತುಳು ಅವತರಣಿಕೆಯನ್ನು ಪ್ರಸಾರಮಾಡಲು ಕನ್ನಡದ ಜನಪ್ರಿಯ ವಾಹಿನಿ ಸ್ಟಾರ್ ಸುವರ್ಣ ಸಜ್ಜಾಗಿದೆ.
https://www.instagram.com/reel/Cqzg3b9gnEz/?utm_source=ig_web_copy_link
ಕೇವಲ 16 ಕೋಟಿ ರೂಪಾಯಿ ಬಜೆಟ್‍ನಲ್ಲಿ ತಯಾರಾದ ಸಿನಿಮಾ 450 ಕೋಟಿ ರೂಪಾಯಿಗೂ ಹೆಚ್ಚು ಲಾಭ ಮಾಡುವುದು ಸುಲಭದ ಮಾತಲ್ಲ.’ಕಾಂತಾರ’ ಆ ಸಾಧನೆ ಮಾಡಿದೆ. ಹೊಂಬಾಳೆ ಫಿಲ್ಸ್ಮ್ ನಿರ್ಮಾಣ, ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ತಯಾರಾದ ‘ಕಾಂತಾರ’ ಸಿನಿಮಾ ಮಾಡಿರುವ ದಾಖಲೆ ಅಸಮಾನ್ಯವಾದುದು.
ತುಳುನಾಡಿನಲ್ಲಿ ನಡೆಯುವ ದೈವಾರಾಧನೆ, ಭೂತಕೋಲ, ಕಂಬಳ, ಕೋಳಿ ಅಂಕ ಇತ್ಯಾದಿ ಸಂಭ್ರಮಗಳ ಹಿನ್ನೆಲೆಯಲ್ಲಿ ನಡೆಯುವ ಕಥೆ. ಕ್ಲೈಮ್ಯಾಕ್ಸ್ ಈ ಸಿನಿಮಾದ ಆಕರ್ಷಣೆ. ಅಲ್ಲಿ ನಡೆಯುವ ಊಹೆಗೂ ಮೀರಿದ ದೃಶ್ಯ ವೈಭವ ವೀಕ್ಷಕರನ್ನು ಮಂತ್ರ ಮುಗ್ಧಗೊಳಿಸುವುದು ವಿಶೇಷ.
ಪ್ರೇಕ್ಷಕರು ಹೊತ್ತು ಕೊಂಡಾಡಿದ ಹೆಮ್ಮೆಯ ಕಥೆ ‘ಕಾಂತಾರ’ ತುಳು ಭಾಷೆಯಲ್ಲಿ ಏಪ್ರಿಲ್ 15 ರಂದು ಅಪರಾಹ್ನ 1 ಗಂಟೆಗೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿದೆ. ತುಳುನಾಡಿನ ಹೊಸ ವರ್ಷ ‘ಬಿಸು’ ಹಬ್ಬ ಪ್ರಯುಕ್ತ ವಾಹಿನಿ ಇದನ್ನು ಪ್ರಸಾರ ಮಾಡುತ್ತಿರುವುದು ವಿಶೇಷ. ನೋಡೋದಕ್ಕೆ ಮರೆಯೋದಿಲ್ಲ ಅಲ್ವಾ?
ಆಕೃತಿ ನ್ಯೂಸ್