ಬೆಳಕಿನ ಹಬ್ಬವೆಂದೇ ಮಾನ್ಯತೆ ಪಡೆದಿರುವ ಈ ದೀಪಾವಳಿ ಹಬ್ಬವು ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ,ಅಧರ್ಮದ ವಿರುದ್ಧ ಧರ್ಮದ ಗೆಲುವನ್ನು ಮತ್ತು ಕೆಟ್ಟದ್ದರ ಮೇಲೆ ಒಳ್ಳೆಯದರ ಜಯವನ್ನು ಸೂಚಿಸುತ್ತದೆ. ಪುರಾಣಗಳ ಪ್ರಕಾರ ಉತ್ತರ ಭಾರತದಲ್ಲಿ ದೀಪಾವಳಿ ಆಚರಣೆಯ ಹಿಂದಿನ ನಂಬಿಕೆ ಎಂದರೆ ಶ್ರೀ ರಾಮನು ರಾಕ್ಷಸ ರಾಜನಾದ ರಾವಣನನ್ನು ಸೋಲಿಸಿ ಅಯೋಧ್ಯೆಗೆ ಮರಳಿದ ದಿನವಿದು. ಲೇಖಕಿ ಗೀತಾಂಜಲಿ ಎನ್ ಎಮ್ ಅವರ ಬೆಳಕಿನ ಹಬ್ಬ ದೀಪಾವಳಿ ಕುರಿತಾದ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
- ನಿತ್ಯದ ಜಂಜಾಟದ ಬದುಕಿನ ಮಧ್ಯೆ ಆಗಾಗ್ಗೆ ಬರುವ ಹಬ್ಬಗಳ ಆಚರಣೆ ನಮ್ಮ ದೈನಂದಿನ ಬದುಕಿಗೆ ಒಂದಷ್ಟು ಉತ್ಸಾಹದೊಂದಿಗೆ ವಿಶೇಷ ಮೆರಗು ತುಂಬುತ್ತವೆ. ಹಾಗಾಗಿ ಹಬ್ಬಗಳು ಮಾನವನ ಬದುಕಿನಲ್ಲಿ ವಿಶೇಷ ಮಹತ್ವ ಹಾಗೂ ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ. ನಮ್ಮ ಭಾರತದಲ್ಲಿ ಆಧ್ಯಾತ್ಮ ಹಾಗೂ ಧಾರ್ಮಿಕ ನೆಲೆಗಟ್ಟಿನ ಮೂಲಕ ಪ್ರತಿ ಹಬ್ಬಗಳೂ ಬಹಳ ಶ್ರದ್ಧೆ, ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲ್ಪಡುತ್ತವೆ. ಅವುಗಳಲ್ಲಿ ಒಂದು ದೀಪಾವಳಿ. ದೀಪಾವಳಿ ಹಬ್ಬವೆಂದರೆ ಎಲ್ಲರಿಗೂ ಅಚ್ಚುಮೆಚ್ಚು ಕಾರಣ. ಪಟಾಕಿ ಹೊಡೆಯುವುದು, ದೀಪಗಳಿಂದ ಅಲಂಕೃತವಾದ ರಸ್ತೆಗಳು ಮನೆಯಂಗಳ ದೇವಸ್ಥಾನಗಳನ್ನು ನೋಡುವುದೇ ಒಂದು ಚಂದದ ಅನುಭವ. ಹಾಗಾಗಿ ದೀಪಾವಳಿ ತನ್ನದೇ ಆದ ವಿಶೇಷತೆ ಪಡೆದುಕೊಂಡಿದೆ.
- ಬೆಳಕಿನ ಹಬ್ಬವೆಂದೇ ಮಾನ್ಯತೆ ಪಡೆದಿರುವ ಈ ದೀಪಾವಳಿ ಹಬ್ಬವು ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು, ಅಧರ್ಮದ ವಿರುದ್ಧ ಧರ್ಮದ ಗೆಲುವನ್ನು ಮತ್ತು ಕೆಟ್ಟದ್ದರ ಮೇಲೆ ಒಳ್ಳೆಯದರ ಜಯವನ್ನು ಸೂಚಿಸುತ್ತದೆ. ಇದನ್ನು ಹಿಂದೂ ಧರ್ಮದವರು ಮಾತ್ರವಲ್ಲದೆ ಜೈನ,ಸಿಖ್ಖ ಧರ್ಮದವರು ಕೂಡ ಆಚರಿಸುತ್ತಾರೆ, ಅಲ್ಲದೆ ಸತತ ಐದು ದಿನಗಳ ಹಬ್ಬವಾಗಿ ಆಚರಿಸಲ್ಪಡುವ ಈ ಹಬ್ಬ ಒಂದು ಹಬ್ಬ ಹಲವು ಕಥೆಗಳು ಎಂಬಂತೆ ಈ ದೀಪಾವಳಿ ಹಬ್ಬದ ಹಿಂದೆ ಹಲವು ಕಥೆಗಳಿವೆ. ಇಲ್ಲಿ ಆಚರಣೆ,ಪೂಜೆ ಒಂದೇ ರೀತಿ ಇದ್ದರೂ ಧಾರ್ಮಿಕ ಕಥೆಗಳು ಮಾತ್ರ ಒಂದೊಂದು ಧರ್ಮದಲ್ಲಿ ಒಂದೊಂದು ರೀತಿ ಇವೆ, ಹಿಂದೂಗಳ ಪ್ರಕಾರ ಭಾರತದ ದಕ್ಷಿಣ ಭಾಗಗಳಲ್ಲಿ ದೀಪಾವಳಿಯನ್ನು ನರಕಚತುರ್ದಶಿ ಎಂದು ಆಚರಿಸುತ್ತಾರೆ. ನರಕ ಚತುರ್ದಶಿ ಎಂದರೆ ಶ್ರೀಕೃಷ್ಣನು ನರಕಾಸುರ ಎಂಬ ರಾಕ್ಷಸನನ್ನು ಕೊಂದ ದಿನವೆಂದು ನರಕಚತುರ್ದಶಿ ಆಚರಿಸಲಾಗುತ್ತದೆ. ದಂತಕಥೆಗಳ ಪ್ರಕಾರ ನರಕಾಸುರನು ತನ್ನ ಕೊನೆಯ ಕ್ಷಣಗಳಲ್ಲಿ ಪಶ್ಚಾತ್ತಾಪ ಪಡುತ್ತಾನೆ. ಕೊನೆಗೆ ಭೂತಾಯಿಯಲ್ಲಿ ತನ್ನ ಮರಣದ ದಿನದ ಹಿನ್ನೆಲೆಯನ್ನು ಇಡೀ ಭೂಮಿಯಲ್ಲಿ ಪ್ರತಿವರ್ಷ ದೀಪ ಹಾಗೂ ಬಣ್ಣಗಳ ಮೂಲಕ ಸಂಭ್ರಮ ಹರಡಿರುವ ಹಾಗೇ ಮಾಡು ಎಂದು ಬೇಡಿಕೊಳ್ಳುತ್ತಾನೆ ಅದಕ್ಕೆ ಭೂತಾಯಿ ಅಸ್ತು ಎನ್ನುತ್ತಾಳೆ. ಈ ಹಿನ್ನೆಲೆಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ ಎನ್ನುವುದು ಇನ್ನೊಂದು ನಂಬಿಕೆ. ಇನ್ನೂ ಪುರಾಣಗಳ ಪ್ರಕಾರ ಉತ್ತರ ಭಾರತದಲ್ಲಿ ದೀಪಾವಳಿ ಆಚರಣೆಯ ಹಿಂದಿನ ನಂಬಿಕೆ ಎಂದರೆ ಶ್ರೀ ರಾಮನು ರಾಕ್ಷಸ ರಾಜನಾದ ರಾವಣನನ್ನು ಸೋಲಿಸಿ ಅಯೋಧ್ಯೆಗೆ ಮರಳಿದ ದಿನವಿದು. ಹಾಗಾಗಿ ಶ್ರೀರಾಮನು ತಮ್ಮ ರಾಜ್ಯಕ್ಕೆ ಮರಳಿದ ಖುಷಿಯಲ್ಲಿ ದೇಶದಾದ್ಯಂತ ದೀಪಗಳನ್ನು ಬೆಳಗಿಸಲಾಯಿತು. ಅಂದಿನಿಂದ ದೀಪಾವಳಿ ಆಚರಣೆ ರೂಢಿಯಲ್ಲಿದೆ ಎಂಬುದು ಅವರ ನಂಬಿಕೆ.
- ಜೈನ ಧರ್ಮದವರು ದೀಪಾವಳಿಯನ್ನು 24 ತೀರ್ಥಂಕರರಲ್ಲಿ ಕೊನೆಯವರಾಗಿರುವ ಮಹಾವೀರರು ನಿರ್ವಾಣ ಪಡೆದ ದಿನ ಎಂದು ಆಚರಿಸುತ್ತಾರೆ. ಹಾಗೆಯೇ ಸಿಖ್ಖರು ಗ್ವಾಲಿಯರ್ ನಲ್ಲಿ ಮೊಘಲ್ ದೊರೆ ಜಹಾಂಗೀರ್‌ನ ಸೆರೆಯಿಂದ ಹಲವಾರು ಹಿಂದೂ ರಾಜರೊಂದಿಗೆ ತಮ್ಮ ಸಿಖ್ ಗುರು ಹರಗೋಬಿಂದ್ ಜಿ ಅವರನ್ನೂ ಬಿಡುಗಡೆ ಮಾಡಿದ ಹಿನ್ನೆಲೆಯ ನೆನಪಿನಲ್ಲಿ ಸಿಖ್‌ರು ದೀಪಾವಳಿ ಆಚರಿಸುತ್ತಾರೆ. ಇನ್ನೂ ಬೌದ್ಧರು ಸಹ ಈ ದಿನವನ್ನು ಪ್ರಬುದ್ಧ ಹಾಗೂ ಪವಿತ್ರವೆಂದು ಪರಿಗಣಿಸುತ್ತಾರೆ. ಗೌತಮ ಬುದ್ಧನು ತನ್ನ ಅನುಯಾಯಿಗಳೊಂದಿಗೆ 18 ವರ್ಷಗಳ ನಂತರ ಕಪಿಲವಸ್ತುವಿಗೆ ಮರಳಿದನು. ಹಾಗಾಗಿ ಅವರ ಮರಳುವಿಕೆ ಯನ್ನು ಬೆಳಕಿನ ಹಬ್ಬವೆಂದು ಆಚರಿಸಲಾಯಿತು ಒಟ್ಟಿನಲ್ಲಿ ಈ ಹಬ್ಬದ ಹಿಂದಿನ ಉದ್ದೇಶ ಒಂದೇ ಅಧರ್ಮ ಹಾಗೂ ಕೆಟ್ಟದ್ದರ ವಿರುದ್ದದ ಗೆಲುವನ್ನು ಸಂಭ್ರಮಿಸುವುದು.
- ದೀಪಾವಳಿ ಮತ್ತೊಂದು ವಿಶೇಷ ಆಕರ್ಷಣೆ ಎಂದರೆ”ಲಕ್ಷ್ಮೀಪೂಜೆ” ಸಂಪತ್ತಿನ ಅಧಿದೇವತೆ ಯಾದ ಲಕ್ಷ್ಮಿಯನ್ನು ಧನಲಕ್ಷ್ಮೀ ರೂಪದಲ್ಲಿ ಆರಾಧಿಸಲಾಗುತ್ತದೆ.ಸಂಪತ್ತು, ಸಮೃದ್ಧಿ ಮತ್ತು ಅದೃಷ್ಟದ ಪ್ರತಿರೂಪವಾಗಿರುವ ಲಕ್ಷ್ಮೀ ದೇವಿಯನ್ನು ಪೂಜಿಸುವ ಜೊತೆಗೆ ಗೋಮಾತೆಯನ್ನೂ ಸಹ ಪೂಜಿಸಲಾಗುತ್ತದೆ ಈ ಹಬ್ಬದಲ್ಲಿ ಗೋವರ್ಧನ ಪೂಜೆ ಅಥವಾ ಗೋ ಪೂಜೆ ಮಾಡುವುದು ವಾಡಿಕೆ. ಗೋವರ್ಧನ ಪೂಜೆಯನ್ನು ಅನ್ನ ಕೂಟದ ಹಬ್ಬ ಎಂದೂ ಕರೆಯುತ್ತಾರೆ. ಈ ಹಬ್ಬವನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ ವಿಶೇಷವಾಗಿ ಮಥುರಾ, ವೃಂದಾವನ, ನಂದಗಾಂವ್, ಗೋಕುಲ್, ಬರ್ಸಾನಾದಲ್ಲಿ ಇದನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ.ಶ್ರೀಕೃಷ್ಣನು ಸ್ವತಃ ಗೋಕುಲದ ಜನರನ್ನು ಗೋವರ್ಧನನನ್ನು ಪೂಜಿಸಲು ಪ್ರೇರೇಪಿಸಿದನು ಮತ್ತು ದೇವರಾಜ ಇಂದ್ರನ ಅಹಂಕಾರ ವನ್ನು ಈ ದಿನದಂದು ನಾಶಮಾಡಿದನು ಎನ್ನುವ ನಂಬಿಕೆಯಿದೆ. ಹಾಗೆಯೇ ಕರ್ನಾಟಕದಲ್ಲಿ ಕೂಡ ಗೋಪೂಜೆಗೆ ಮಹತ್ವದ ಸ್ಥಾನವಿದ್ದು ಗೋವುಗಳಿಗೆ ಸ್ನಾನ ಮಾಡಿಸಿ, ಕೊಟ್ಟಿಗೆಯನ್ನು ಶುಭ್ರಗೊಳಿಸಿ ವಿಭೂತಿ ಅರಶಿನ ಕುಂಕುಮ ಹಣೆಗೆ ಇಟ್ಟು ಹೂವಿನ ಹಾರ ಹಾಕಿ ಆರತಿ ಬೆಳಗಿ ಬಾಳೆಹಣ್ಣು, ಸಿಹಿ ತಿನ್ನಿಸಿ ಸಂಭ್ರಮಿಸಲಾಗುವುದು.
- ಈ ಹಬ್ಬದ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ‘ಪಟಾಕಿ’ ಹೊಸ ಬಟ್ಟೆ ತೊಟ್ಟ ಮಕ್ಕಳು ಪಟಾಕಿ ಸಿಡಿಸುತ್ತ ಸಂಭ್ರಮಿ ಸುವುದನ್ನು ನೋಡುವುದೆ ಚಂದ, ಆದರೆ ಪಟಾಕಿ ಸುಟ್ಟಾಗ ಅದರಿಂದ ಬರುವ ಹೊಗೆ ಪ್ರಕೃತಿ ಮಾಲಿನ್ಯಕ್ಕೆ ನೇರ ಕಾರಣವಾದರಿಂದ ಪ್ರಕೃತಿಗೆ ಹಾನಿಯಾಗದಂತಹ ಪಟಾಕಿಗಳನ್ನು ಸಿಡಿಸುತ್ತಾ ಮಣ್ಣಿನ ಹಣತೆಯಿಂದ ಜ್ಯೋತಿ ಬೆಳಗಿಸುತ್ತಾ ಆರೋಗ್ಯಕರವಾದ ಪ್ರಕೃತಿಗೆ ಅವಕಾಶ ಮಾಡಿಮಾಡೋಣ.
ಒಟ್ಟಿನಲ್ಲಿ ಕತ್ತಲೆಯಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಸುಜ್ಞಾನದೆಡೆಗೆ, ನಶ್ವರದಿಂದ ಐಶ್ವರ್ಯದಡೆಗೆ ಕೊಂಡೊಯ್ಯುವ ಸಂಕೇತವಾದ ದೀಪಾವಳಿ ಹಬ್ಬ ಎಲ್ಲರಿಗೂ ಆಯುರಾರೋಗ್ಯಾ ಐಶ್ವರ್ಯ ನೆಮ್ಮದಿ ತರಲಿ.
ಮನೆಯಂಗಳದಿ ಹಚ್ಚುವ
ಬೆಳಕಿನ ಹಣತೆ
ಮನೆಯನ್ನು ಬೆಳಗಿದರೆ,
ಮನದಂಗಳಿದಿ ಹಚ್ಚುವ
ಸುಜ್ಞಾವೆಂಬ ಹಣತೆ
ಮನೆ ಮನದ ಜೊತೆ
ಜಗತ್ತೇ ಪ್ರಕಾಷಿಸುವಂತೆ ಬೆಳಗುತ್ತದೆ.!!!
- ಗೀತಾಂಜಲಿ ಎನ್ ಎಮ್ – ಕೊಡಗು.
