ಬೆಳಕಿನ ಹಬ್ಬದ ಆಯ್ದ ಪದಗಳು

ದೀಪಾವಳಿ, ದೀವಳಿಗೆ ಹಬ್ಬದ ಈ ಸಂದರ್ಭದಲ್ಲಿ ವಚನಕಾರರು, ತತ್ವಪದಕಾರರು ಹಾಗೂ ಜನಪದ ನುಡಿಯ ಗುಡಿಗಾರರು ಬೆಳಕಿನ ದೀಪವನ್ನು ಹೇಗೆ ಕಂಡಿದ್ದಾರೆಂಬುದನ್ನು ತಿಳಿಸಲು ಕೆಲವು ಆಯ್ದ ಪದಗಳನ್ನು ಡಾ.ವಡ್ಡಗೆರೆ ನಾಗರಾಜಯ್ಯ ಅವರ ಸಂಗ್ರಹಿಸಿದ್ದಾರೆ, ತಪ್ಪದೆ ಮುಂದೆ ಓದಿ…

ಅಪ್ಪಾ ಪರಂಜ್ಯೋತಿ ಧರುಮಗುರು
ಮಂಟೇದ ಲಿಂಗಯ್ಯ
ಧರೆಗೆ ದೊಡ್ಡಯ್ಯ
ಸಿದ್ಧ ಸಿದ್ಧರಿಗೆಲ್ಲಾ ಅತಿಮುದ್ದು
ಘನನೀಲಿ ಸಿದ್ದಪ್ಪಾಜಿ
ತುಂಬಿದ ಸ್ವಾಮಾರದ ದಿವ್ಸ
ಸತ್ಯವಂತರಾ ಮನೆಯೊಳಗೆ
ಎತ್ತುವೆ ನಿಮ್ಮ ಶಿವ ನುಡಿಯ…
ನಾವು ಕೂಗುವ ಕೂಗು ನಿಮ್ಮ ಪಾದಕ್ಕರಿವಾಗಲಪ್ಪಾ
ಸಿದ್ದಯ್ಯ ಸ್ವಾಮಿ ಬನ್ನಿ…

ಹೆತ್ತ ಮನೆಗೂ ಜ್ಯೋತಿ
ಸತ್ತ ಮನೆಗೂ ಜ್ಯೋತಿ
ಕುರುಬನ ಮನೆಗೂ ಜ್ಯೋತಿ
ಕುಂಬಾರನ ಮನೆಗೂ ಜ್ಯೋತಿ
ಬಡವನ ಮನೆಗೂ ಜ್ಯೋತಿ
ಬಲಿಗಾರನ ಮನೆಗೂ ಜ್ಯೋತಿ
ತಿಪ್ಪಮೇಲೆ ಹಚ್ಚಿಟ್ಟರೂ ಏಕಪ್ರಕಾರವಾಗಿ ಉರಿಯುವ ಪರಂಜ್ಯೋತಿ !

  • ಮಂಟೇಸ್ವಾಮಿ ಕಾವ್ಯದಲ್ಲಿ

****

ಉರಿವ ತೃಣದ ಮೇಲೆ ತೃಣವ ತಂದಿರಿಸಿದಡೆ
ಆ ತೃಣವನ್ನು ಆ ಕೆಂಡ ನುಂಗುವಂತೆ
ಗುರುಚರಣದ ಮೇಲೆ ತನುತೃಣವನಿರಿಸಿದಡೆ
ಆ ತನುವೆಲ್ಲ ಲಿಂಗಮಯ ಕಾಣಾ! ರಾಮನಾಥ

  • ಜೇಡರ ದಾಸಿಮಯ್ಯ

****

ಅಪರಿಮಿತದ ಕತ್ತಲೆಯೊಳಗೆ
ವಿಪರೀತದ ಬೆಳಕನಿಕ್ಕಿದವರಾರೋ?
ಕತ್ತಲೆಯೂ ಅದೆ! ಬೆಳಕೂ ಅದೆ!
ಒಂದಕ್ಕೊಂದು ಅಂಜದು!
ಇದೇನು ಚೋದ್ಯವೋ?
ಆನೆಯೂ ಸಿಂಹವೂ ಒಂದಾಗಿ
ಉಂಬುವುದ ಕಂಡು ಬೆರಗಾದೆನು ಕಾಣಾ
ಗುಹೇಶ್ವರ!?

  • ಅಲ್ಲಮಪ್ರಭು

***

ಚಿದ್ಘನ ಚಿತ್ಪ್ರಕಾಶ ಚಿದಾನಂದ ಲಿಂಗವೇ
ಎನ್ನ ಹೃದಯ ಕಮಲವ ಬೆಳಗುವ ಪರಂಜ್ಯೋತಿ ಲಿಂಗವೇ
ಎನ್ನ ಕರಸ್ಥಲಕ್ಕನುವಾದ ಲಿಂಗವೇ
ಎನ್ನ ಕಂಗಳ ಕೊನೆಯಲ್ಲಿ ಮೂರ್ತಿ ಯಪ್ಪೆಯಯ್ಯಾ ಧರ್ಮಿ ಕೂಡಲ ಚೆನ್ನಸಂಗಮದೇವಾ

  • ಚೆನ್ನಬಸವಣ್ಣ

****

ಜ್ಞಾನಪೂರ್ಣಂ ಜಗಂಜ್ಯೋತಿ
ನಿರ್ಮಲವಾದ ಮನವೇ
ಕರ್ಪೂದಾರತಿ

  • ತತ್ವಪದಕಾರ ಕಡಕೋಳ ಮಡಿವಾಳಪ್ಪ

****
ಜ್ಯೋತಿ ಬೆಳಗುತಿದೆ ವಿಮಲ ಪರಂಜ್ಯೋತಿ ಬೆಳಗುತಿದೆ
ಮಾತು ಮನಂಗಳಿಂದತ್ತತ್ತ ಮೀರಿದ
ಸಾದತಿಶಯದ ನಿರುಪಾಧಿಕ ನಿರ್ಮಲ
ಜ್ಯೋತಿ ಬೆಳಗುತಿದೆ ವಿಮಲ ಪರಂಜ್ಯೋತಿ ಬೆಳಗುತಿದೆ

ಶಿವಧರ್ಮನಾಳವೆಂತೆಂಬ ಕಂಬದ ಮೇಲೆ
ಸುವಿವೇಕ ಹೃದಯಾಬ್ಜ ಪಣತೆಯೊಳು
ಸವೆಯದ ಸದ್ಭಕ್ತಿ ರಸತೈಲ ತೀವಿದ
ಪ್ರವಿಮಲ ಕಳೆಯೆಂಬ ಬತ್ತಿವಿಡಿದು ದಿವ್ಯ
ಜ್ಯೋತಿ ಬೆಳಗುತಿದೆ ವಿಮಲ ಪರಂಜ್ಯೋತಿ ಬೆಳಗುತಿದೆ

ಮುಸುಕಿದ ವಿಷಯ ಪತಂಗ ಬಿದ್ದುರುಳೆ ತಾ
ಮಸಬುದ್ಧಿಯೆಂಬ ಕತ್ತಲೆಯಳಿಯೆ
ಮಸಗಿ ಸುಜ್ಞಾನವೆಂತೆಂಬ ಮಹಾಪ್ರಭೆ
ಪಸರಿಸಿ ಮಾಯಾಕಾಳಿಕೆ ಪೊರ್ದದನುಪಮ
ಜ್ಯೋತಿ ಬೆಳಗುತಿದೆ ವಿಮಲ ಪರಂಜ್ಯೋತಿ ಬೆಳಗುತಿದೆ

ಪ್ರಣವಾಕಾರದ ಗುಣ ಮೂರು ಮುಟ್ಟದ
ಗಣನೆಗತೀತಾರ್ಥವೆನೆ ತೋರುವ
ಅಣುಮಾತ್ರ ಚಲನೆಯಿಲ್ಲದ ಮೋಕ್ಷ ಚಿಂತಾ
ಮಣಿಯೆನಿಸುವ ಶಂಭುಲಿಂಗವೆ ತಾನಾದ
ಜ್ಯೋತಿ ಬೆಳಗುತಿದೆ ವಿಮಲ ಪರಂಜ್ಯೋತಿ ಬೆಳಗುತಿದೆ

  • ನಿಜಗುಣ ಶಿವಯೋಗಿಗಳು

***

ಸಣ್ಣ ಬತ್ತಿ, ಮಿಳ್ಳೆ ಎಣ್ಣೆ
ನನ್ನ ಗುಡಿಸಲ ಜ್ಯೋತಿಯೆ
ಮೆಲ್ಲ ಮೆಲ್ಲಾಕ ಉರಿಯೆ ಪರಂಜ್ಯೋತಿಯೆ !

  • ಸಿರಿಯಜ್ಜಿ

****

ಬೆಳಗತೀನಿ ಜ್ಯೋತಿ
ಜ್ಯೋತಿ ಬೆಳಗತೀನಿ ನೋಡಮ್ಮ
ಪರಂಜ್ಯೋತಿ ಬೆಳಗತೀನಿ ನೋಡಮ್ಮ..
ಎಣ್ಣೆ ಬತ್ತಿ ಸ್ನಾನ ಉನ್ನತ ಉರಿಯುತ
ಅಚ್ಚ ಕೆಂಪಿನ ಬಾಲೆ ನೋಡಮ್ಮ
ಕಣ್ಣು ಕಪ್ಪಿನ ಬಾಲೆ ನೋಡಮ್ಮ

  • ವಡ್ಡಗೆರೆ ಕದರಮ್ಮ

  • ಡಾ.ವಡ್ಡಗೆರೆ ನಾಗರಾಜಯ್ಯ

 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW