‘ಸಂಪತ್ತು’ ಸಣ್ಣಕತೆ : ಬಿ.ಆರ್.ಯಶಸ್ವಿನಿ

ವಿಕಾಸನಿಗೆ ತನ್ನ ಬಳಿ ಇದ್ದ ಅಸ್ತಿ, ಸಂಪತ್ತನ್ನು ಕಳೆದುಕೊಂಡಾಗ ಅನಸಿದ್ದು ಆಸ್ತಿ ಇದ್ದಾಗ ಮಾತ್ರ ಸಂಬಂಧಿಕರು, ಇಲ್ಲದಿದ್ದರೆ ಯಾರು ಇಲ್ಲ. ನಮ್ಮೊಂದಿಗೆ ಕೊನೆತನಕ ಉಳಿಯುವುದು ವಿದ್ಯೆ ಮತ್ತು ಅಪ್ಪ,ಅಮ್ಮ ಜೀವನೋಪಾಯಕ್ಕೆ ಕಲಿಸಿದ ಕೆಲಸಗಳು ಮಾತ್ರ. ಬಿ.ಆರ್.ಯಶಸ್ವಿನಿ ಅವರ ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ…

ಮಲೆನಾಡಿನ ಪುಟ್ಟ ಹಳ್ಳಿ. ಅಲ್ಲಿ ರಾಮಚಂದ್ರರಾಯರು ಮತ್ತು ಶಾರದ ಎಂಬ ದಂಪತಿಗಳಿದ್ದರು. ಆ ಊರಿನ ಶ್ರೀಮಂತ ಕುಟುಂಬಗಳಲ್ಲಿ ರಾಯರ ಕುಟುಂಬವು ಒಂದು. ಅಷ್ಟು ಆಸ್ತಿ ಇದ್ದರು ಜಂಭವಿಲ್ಲದ ಸದ್ಗುಣವುಳ್ಳವರಾಗಿದ್ದರು. ರಾಯರಿಗೆ ಮದುವೆಯಾಗಿ ಹತ್ತು ವರ್ಷಗಳು ಕಳೆದರೂ ಮಕ್ಕಳಾಗಿರಲಿಲ್ಲ. ಈ ಚಿಂತೆ ದಂಪತಿಗಳಿಬ್ಬರನ್ನು ಕಾಡುತಿತ್ತು. ರಾಯರು ಶಾರದ ಹೋಗದ ಆಸ್ಪತ್ರೆಗಳಿಲ್ಲ, ಸುತ್ತದ ದೇವಾಲಯಗಳಿಲ್ಲ. ಎಲ್ಲಿ ಹೋದರು ಅವರಿಗೆ ನೆಮ್ಮದಿ ಇರಲಿಲ್ಲ. ಎಷ್ಟು ಸಂಪತ್ತು ಇದ್ದರೇನು ನೆಮ್ಮದಿ ಇಲ್ಲ ಅಂದ ಮೇಲೆ.

ಬಂಧು ಮಿತ್ರರು ರಾಯರಿಗೆ ಬೇರೆ ಮದುವೆಯಾಗಿ ಅಂದರು ರಾಯರು ನಿರಾಕರಿಸುತ್ತಿದ್ದರು. ಶಾರದ ಮೇಲೆ ಆಗಾಧವಾದ ಪ್ರೀತಿ ಇತ್ತು. ಶಾರದ ಕೂಡ ಬೇರೆ ಮದುವೆಯಾಗಲು ಹೇಳಿದರು ರಾಯರು ಕೇಳುತ್ತಿರಲಿಲ್ಲ. ಶಾರದಳನ್ನು ಯಾವ ಕಾರ್ಯ ಕ್ರಮಗಳಿಗೆ ಬಂಧು ಮಿತ್ರರು ಕರೆಯುತ್ತಿರಲಿಲ್ಲ.ನೊಂದ ಶಾರದ ಒಂದೆರಡು ಬಾರಿ ಸಾಯಲು ಹೊರಟಿದ್ದಳು.ಇದನ್ನು ತಿಳಿದ ರಾಯರು ಶಾರದಳನ್ನು ತಡೆದು ಬುದ್ದಿ ಹೇಳಿದರು.

ನೀನು ಸತ್ತರೆ ನಾನೇನು ಬೇರೆ ಮದುವೆಯಾಗುವುದಿಲ್ಲ. ನಿನ್ನ ಜೊತೆ ನಾನು ಕೂಡ ಸಾಯುವೆ ಎಂದು ರಾಯರು ಹೇಳಿದಾಗ ಶಾರದಳಿಗೆ ಇನ್ನು ದುಃಖವಾಗಿ ಮರುಮಾತಾಡದೇ ಸುಮ್ಮನಾದಳು. ಬೇಸರಗೊಂಡ ಇಬ್ಬರು ಹೊರಗಡೆ ಸುತ್ತಾಡಿಕೊಂಡು ಬರಲು ನಿರ್ಧರಿಸಿದರು. ರಾಯರು ಶಾರದಳಿಗೆ ಹೊರಡಲು ಸಿದ್ದಳಾಗು ನಾನು ಅಷ್ಟೋರೊಳಗೆ ತೋಟಕ್ಕೆ ಹೋಗಿ ಆಳುಗಳಿಗೆ ಕೆಲಸ ನೇಮಿಸಿ ಬರುವೆನೆಂದು ತೋಟಕ್ಕೆ ಹೋದರು.

ತಯಾರಾಗಿದ್ದ ಶಾರದ ರಾಯರ ಬರುವಿಕೆಗೆ ಕಾಯುತ್ತಿದ್ದಳು. ರಾಯರು ಬಂದ ನಂತರ ಅವರಿಗೆ ಉಪಚಾರ ಮಾಡಿದಳು. ನಂತರ ತಮ್ಮ ಕಾರಿನಲ್ಲೆ ಪ್ರಯಾಣ ಮಾಡಿದರು.ಮೊದಲಿಗೆ ಅವರು ಯಾವಾಗಲೂ ಹೋಗುತ್ತಿದ್ದ ದೇವಾಲಯಕ್ಕೆ ಹೋಗಿ ನಂತರ ಬೇರೆ ಸ್ಥಳಗಳಿಗೆ ಹೋಗೋಣವೆಂದುಕೊಂಡರು. ಆ ದೇವಾಲಯದಲ್ಲಿ ಓರ್ವ ಗುರುಗಳಿದ್ದರು. ರಾಯರು ಗುರುಗಳ ಮಾತನ್ನು ನಂಬುವರು. ಗುರುಗಳ ಹತ್ತಿರ ಹೋಗಿ ನಮಸ್ಕರಿಸಿ ತನ್ನೆಲ್ಲಾ ಕಷ್ಟಗಳನ್ನು ಹೇಳಿಕೊಂಡು ಪರಿಹಾರ ತಿಳಿಸಿ ಎಂದು ಕೇಳಿಕೊಂಡರು.

ಗುರುಗಳು ಹೇಳಿದರು. ನೀನು ಅವಿದ್ಯಾವಂತನಾದ ಕಾರಣ ಅಧುನಿಕ ಸೌಕರ್ಯ, ಸೌಲಭ್ಯಗಳ ಅರಿವು ನಿನಗಿಲ್ಲ. ನೀವು ಬರಿ ನಿಮ್ಮ ಹಳ್ಳಿಯ ಸುತ್ತಮುತ್ತ ಇರುವ ಆಸ್ಪತ್ರೆಗಳಿಗೆ ಹೋಗಿದ್ದಿಯಾ ಆದರಿಂದ ನಿನಗೇನು ಪ್ರಯೋಜನವಾಗಿಲ್ಲ. ಒಮ್ಮೆ ನಗರದ ಆಸ್ಪತ್ರೆಗೆ ಹೋಗಿ ತೋರಿಸು ನಿನ್ನೆಲ್ಲಾ ಕಷ್ಟ ಪರಿಹಾರವಾಗುತ್ತದೆ. ರಾಯರು ಗುರುಗಳ ಮಾತಿನಂತೆ ನಗರದ ಅಸ್ಪತ್ರೆಗೆ ಹೋದರು. ಅಲ್ಲಿ ಒಳ್ಳೆಯ ಪ್ರಸೂತಿ ತಜ್ಞೆ ಸೀಮಾ ಅವರನ್ನು ಭೇಟಿಯಾದರು. ಸೀಮಾ ಅವರನ್ನು ಪರೀಕ್ಷಿಸಿ ತಿಳಿಸಿದಳು. ನೀವು ಒಳ್ಳೇಯ ಸಮಯಕ್ಕೆ ಬಂದಿದ್ದಿರಾ ಕೆಲವೊಂದು ಹಾರ್ಮೋನುಗಳ ವ್ಯತ್ಯಾಸಗಳಿಂದ ತಡವಾಗಿದೆ. ನೀವು ನಾಲ್ಕೈದು ಬಾರಿ ಬಂದು ಹೋದರೆ ನಿಮ್ಮ ಪತ್ನಿ ಗರ್ಭವತಿಯಾಗುವಳು.

ರಾಯರಿಗೆ ಡಾಕ್ಟರ್ ಹೇಳಿದ್ದು ಏನು ಅರ್ಥವಾಗಲಿಲ್ಲ. ನಿಮ್ಮನ್ನೆ ನಂಬಿದ್ದೇನೆ ನಾಲ್ಕೈದು ಬಾರಿ ಏಕೆ ಬೇಕಾದರೆ ನಾಲ್ಕೈದು ದಿನ ಇಲ್ಲೆ ಇರುವೆ ನಮಗೆ ಮಕ್ಕಳಾದರೆ ಅಷ್ಟೆ ಸಾಕು ಎಂದರು. ಸೀಮಾ ಅವರಿಗೆ ತಿಳಿಯುವಂತೆ ಬಿಡಿಸಿ ಹೇಳಿದ ಮೇಲೆ ಅವರಿಗೆ ಅರ್ಥವಾಯಿತು. ಡಾಕ್ಟರ್ ಚಿಕಿತ್ಸೆ ಮುಂದುವರಿಸಿದರು. ನಾಲ್ಕೈದು ಬಾರಿ ಬಂದುಹೋದ ನಂತರ ಶುಭಸೂಚನೆ ಸಿಕ್ತು. ರಾಯರಿಗೆ ಶಾರದಳಿಗೆ ಖುಷಿಯಾಯಿತು. ರಾಯರು ಶಾರದಳಿಗೆ ನಮಗೆ ಇಲ್ಲಿಗೆ ಹೋಗಲು ತಿಳಿಸಿದ ಗುರುಗಳ ಹತ್ತಿರ ಹೋಗಿ ಆರ್ಶಿವಾದ ಪಡೆದು ಕಾಣಿಕೆ ನೀಡಿ ಬರುವೆ ಅಂತ ಹೇಳಿ ಹೊರಟರು.

ಮಂದಿರಕ್ಕೆ ಬಂದ ರಾಯರು ಗುರುಗಳನ್ನು ಭೇಟಿ ಮಾಡಿ ಶುಭ ಸಮಾಚಾರವನ್ನು ತಿಳಿಸಿದರು.ಆರ್ಶಿವಾದ ಪಡೆದ ನಂತರ ರಾಯರು ದಕ್ಷಿಣೆ ಕೊಡಲು ಮುಂದಾದಾಗ ಗುರುಗಳು ನನಗೇನು ಕಾಣಿಕೆ ಬೇಡ ನಿನ್ನ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡು ನನಗೆ ಅಷ್ಟೆ ಸಾಕು. ವಿದ್ಯೆ ಏಕೆ ಬೇಕು ಆನ್ನುವ ಅರಿವು ಈಗ ನಿನಗೆ ಆಗಿರಬೇಕಲ್ಲವೇ ಎಂದರು.ಆಯ್ತು ಎಂದು ಸಮ್ಮತಿ ಸೂಚಿಸಿ ರಾಯರು ಹೊರಟರು.

ಕೆಲವು ದಿನಗಳ ನಂತರ ಗರ್ಭವತಿಯಾದ ಶಾರದಳನ್ನು ಕಂಡು ಕೆಲವರಿಗೆ ಅಸೂಯೆಯಾಯಿತು. ಆಕೆಗೆ ಮಕ್ಕಳಿಲ್ಲದಿದ್ದರೆ ನಮ್ಮ ಮಕ್ಕಳನ್ನು ರಾಯರಿಗೆ ಮದುವೆ ಮಾಡಿಸಬಹುದಿತ್ತು ಎನ್ನುವ ಸ್ವಾರ್ಥ ಅವರಲ್ಲಿತ್ತು. ಶಾರದಳಿಗೆ ಹೆರಿಗೆಯಾಯಿತು. ಮಗ ಹುಟ್ಟಿದ ಅನ್ನುವ ಸಂಭ್ರಮಕ್ಕೆ ನಾಮಕರಣಕ್ಕೆ ಸಿದ್ದಮಾಡಿಕೊಂಡರು. ಕೆಲವರು ಶಾರದಳನ್ನು ಬಂಜೆ ಎಂದು ಕರೆದವರೆಲ್ಲಾ ಬರೋಕೆ ಆಗದೆ ಬರಲಿಲ್ಲ. ವಿಕಾಸ್ ಎಂದು ಹೆಸರಿಟ್ಟರು.

ಶಾರದ ವಿಕಾಸ್ ಗೆ ಒಳ್ಳೆಯ ಗುಣ, ಸಂಸ್ಕಾರ ಎಲ್ಲ ಕಲಿಸಿದ್ದಳು. ರಾಯರು ಕೂಡ ಜೀವನೋಪಾಯಕ್ಕೆ ಬೇಕಾದ ಕೆಲಸಗಳು ತೋಟದ ಕೆಲಸಗಳನ್ನು ಎಲ್ಲ ಕಲಿಸಿದ್ದರು. ಓದಿನಲ್ಲೂ ಚುರುಕಾಗಿದ್ದ. ಹಳ್ಳಿಯಲ್ಲೆ ಪ್ರೌಢಶಿಕ್ಷಣ ಮುಗಿಯಿತು. ರಾಯರಿಗೆ ಗುರುಗಳು ಹೇಳಿದ ಮಾತು ನೆನಪಾಗಿ ಪಟ್ಟಣಕ್ಕೆ ಓದಲು ಕಳಿಸಿದರು.ಅಲ್ಲೂ ಓದು ಮುಗಿದ ನಂತರ ಊರಿಗೆ ಬರುವಷ್ಟರಲ್ಲಿ ಶಾರದಳಿಗೆ ಹುಷಾರಿಲ್ಲದ ಕಾರಣ ಹಾಸಿಗೆ ಹಿಡಿದಿದ್ದಳು.

ಶಾರದ ರಾಯರಿಗೆ ನಾನೇನು ಹೆಚ್ಚಿಗೆ ದಿನ ಬದುಕುವುದಿಲ್ಲ. ನಿಮ್ಮ ಹತ್ತಿರ ಇದುವರೆಗೂ ಏನನ್ನು ಕೇಳಿರಲಿಲ್ಲ.ನಾನು ಸಾಯೊದೊರಳಗೆ ವಿಕಾಸ್ ನ ಮದುವೆ ನೋಡಬೇಕು ಅಂದಳು.ರಾಯರು ವಿಕಾಸ್ ನನ್ನು ಕೇಳಿದಾಗ ಒಪ್ಪಿಗೆ ಸೂಚಿಸಿದ.

ಶ್ರೀಮಂತರಾಗಿದ್ದರಿಂದ ಎಷ್ಟೊಂದು ಜನರು ಹೆಣ್ಣು ಕೊಡಲು ಬಂದರೂ ರಾಯರಿಗೆ ತನ್ನ ತಂಗಿ ಮಗಳನ್ನು ತಂದುಕೊಳ್ಳುವ ಆಸೆ. ವಿಕಾಸ್ ಕೂಡ ಅಪ್ಪನ ಮಾತಿಗೆ ಇಲ್ಲ ಅನ್ನದೆ ಒಪ್ಪಿಗೆ ಕೊಟ್ಟ. ಅತ್ತೆಯ ಮಗಳ ಜೊತೆ ಮದುವೆ ನಿಶ್ಚಯವಾಯಿತು. ವಿಕಾಸ್ ಅಪ್ಪನ ಹತ್ತಿರ ಒಂದೆರಡು ಪರೀಕ್ಷೆಗಳಿವೆ. ಅದನ್ನು ಬರೆದರೆ ಸರ್ಕಾರಿ ಕೆಲಸ ಸಿಗುತ್ತದೆ.ಹೋಗಿ ಬರೆದು ಬಂದ ನಂತರ ಮದುವೆ ಮಾಡಿಕೊಳ್ಳುವೆ ಎಂದನು. ರಾಯರು ಕೂಡ ಹೋಗಿ ಬರೆದು ಬಾ ಎಂದರು.

ಮಲೆನಾಡಿನ ಹಳ್ಳಿಯಾಗಿದ್ದರಿಂದ ಯಾವಾಗ ಜೋರು ಮಳೆ ಬಂದರೂ ರಸ್ತೆ ಸಂಪರ್ಕವಿಲ್ಲದೆ ಎಲ್ಲಿಗೂ ಹೋಗಲು ಸಾಧ್ಯವಾಗದ ಕಾರಣ ವಿಕಾಸ್ ಒಂದು ವಾರ ಮುಂಚಿತವಾಗಿಯೇ ಪಟ್ಟಣಕ್ಕೆ ‌ತೆರಳಿದ. ಅವನು ಹೋದ ಮೇಲೆ ಜೋರು ಮಳೆ ಬಂದು ಪ್ರವಾಹವಾಗಿ ಜಮೀನು ಮನೆ ಎಲ್ಲ ಕಳೆದುಕೊಂಡರು. ಕೆಲವರು ಪ್ರಾಣ ಕಳೆದುಕೊಂಡರು.ಇದೆಲ್ಲಾ ಸುದ್ದಿವಾಹಿನಿಯಲ್ಲಿ ಬರತೊಡಾಗಿದಾಗ ವಿಕಾಸ್ ಮನೆಯವರಿಗೆ ಫೋನ್ ಮಾಡಿದರು. ಫೋನ್ ತೆಗೆಯದೆ ಇದ್ದ ಕಾರಣ ಗಾಬರಿಯಾಗಿ ಪರೀಕ್ಷೆ ಬರೆಯದೆ ಊರಿಗೆ ಬಂದನು.

ಅಲ್ಲಿ ಮನೆ ಜಮೀನುಗಳ ಗುರುತುಗಳಿಲ್ಲದೆ ಹಾನಿಯಾಗಿತ್ತು. ಅಪ್ಪ ಅಮ್ಮನ ಹುಡುಕಾಡಿದರು ಸಿಗಲಿಲ್ಲ. ನೀರಿನ ಸೆಳತಕ್ಕೆ ಕೊಚ್ಚಿ ಹೋಗಿ ಅಸುನೀಗಿದ್ದರು. ದಾರಿ ಕಾಣದೆ ಅತ್ತೆ ಮನೆಗೆ ಹೋದರೆ ಆಸ್ತಿಯೆಲ್ಲಾ ಕಳೆದುಕೊಂಡಿದ್ದರಿಂದ ನೀನ್ಯಾರು ಅಂತ ಗೊತ್ತೆ ಇಲ್ಲ ಅಂದರು. ದಾರಿ ಕಾಣದೆ ಪಟ್ಟಣಕ್ಕೆ ತೆರಳುವಾಗ ವಿಕಾಸನಿಗೆ ಅನಿಸಿದ್ದು ಇಷ್ಟೆ. ನಮ್ಮ ಹತ್ತಿರ ಸಂಪತ್ತು, ಆಸ್ತಿ ಎಲ್ಲಾ ಇದ್ದಾಗ ಮಾತ್ರ ಸಂಬಂಧಿಕರು ಇಲ್ಲ ಅಂದಾಗ ಹತ್ತಿರನು ಸುಳಿವುದಿಲ್ಲ. ಕೊನೆಯವರಿಗೂ ನಮ್ಮ ಜೊತೆ ಉಳಿಯುವುದು ವಿದ್ಯೆ ಮತ್ತು ನನ್ನ ಅಪ್ಪ,ಅಮ್ಮ ಜೀವನೋಪಾಯಕ್ಕೆ ಕಲಿಸಿದ ಕೆಲಸಗಳು ಮಾತ್ರ. ನಗರಕ್ಕೆ ತೆರಳಿದ ವಿಕಾಸ್ ಅಪ್ಪ ಅಮ್ಮ ಹೇಳಿಕೊಟ್ಟಿದ್ದ ಕೆಲಸಗಳನ್ನು ಮಾಡಿ ಹಣ ಸಂಪಾದಿಸಿದನು. ಬಡಮಕ್ಕಳಿಗೆ ಪಾಠ ಮಾಡುತ್ತಾ ಅವರುಗಳ ಜೀವನಕ್ಕೆ ಬೆಳಕಾದನು.

ನೀತಿ : ಮಕ್ಕಳಿಗೆ ವಿದ್ಯೆಯ ಜೊತೆ ಒಂದಿಷ್ಟು ಕೆಲಸವನ್ನಾದರು ಕಲಿಸಿರಬೇಕು.ಓದು ತಲೆಗೆ ಹತ್ತದೆ ಇದ್ದಾಗ ಬದುಕು ಸಾಗಿಸಲು ಬೇಕಾಗುವಷ್ಟು ಕೆಲಸಗಳ ಮಹತ್ವ ತಿಳಿಸಿರಬೇಕು. ಕೊನೆಗಾಲದವರೆಗೂ ಅವರ ಜೊತೆ ಕಲಿತ ವಿದ್ಯೆ ಮತ್ತು ತಂದೆತಾಯಿ ಹೇಳಿಕೊಟ್ಟ ಪಾಠಗಳೆ ಬರುವುದೇ ಹೊರತು ಯಾವ ಆಸ್ತಿ,ಸಂಪತ್ತು ಅಲ್ಲ. ತಂದೆತಾಯಿಯರು ಹೇಳಿಕೊಟ್ಟ ಪಾಠಗಳು ಮತ್ತು ಗುರುಗಳು ಹೇಳಿಕೊಟ್ಟ ವಿದ್ಯೆ ಇದೇ ನಿಜವಾದ ಸಂಪತ್ತು.


  • ಬಿ.ಆರ್.ಯಶಸ್ವಿನಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading