ಅಪರೂಪದ ಓದಿಗೆ ಸಿಕ್ಕ ಐತಿಹಾಸಿಕ ಕಾದಂಬರಿಕರುನಾಡ ಸಿಡಿಲು ಬೆಳವಡಿ ರಾಣಿ ಮಲ್ಲಮ್ಮ

– ಲೇಖಕರುಃ ಯ.ರು.ಪಾಟೀಲ

ಪ್ರಕಾಶಕರುಃ ಬೆಳವಡಿ ರಾಣಿ ಮಲ್ಲಮ್ಮ ಪ್ರತಿಷ್ಠಾನ, ಮಲ್ಲಮ್ಮನ ಬೆಳವಡಿ, ತಾ. ಬೈಲಹೊಂಗಲ, ಜಿ. ಬೆಳಗಾವಿ

ಸುಮಾರು ಒಂದೂವರೆ ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಬೆಳವಡಿ ಸಂಸ್ಥಾನ ಅನೇಕ ಏಳು ಬೀಳುಗಳನ್ನು ಕಂಡಿದೆ. ನಮಗೆ ಪ್ರಖರ ಇತಿಹಾಸ ಸಿಗುವುದು ಕೇವಲ ಮುನ್ನೂರಾ ಐವತ್ತು ವರ್ಷಗಳಾಚೆಯಿಂದ. ಕಾದಂಬರಿ ೪೫೦ ಪುಟಗಳಷ್ಟು ದೊಡ್ಡದಿದೆ. ಲೇಖಕರಾದ ಯ.ರು.ಪಾಟೀಲರು ತುಂಬ ಶ್ರಮ ಪಟ್ಟು ಇತಿಹಾಸವನ್ನು ಬಗೆದು, ಹುಡುಕಿ, ತಿರುಗಾಡಿ ವಿಷಯ ಸಂಗ್ರಹಿಸಿ ಇದನ್ನು ಬರೆದಿದ್ದಾರೆ. ಕಿತ್ತೂರು ಚನ್ನಮ್ಮನಿಗಿಂತ ನೂರಾ ಅರವತ್ತು ವರ್ಷ ಮೊದಲೇ ಆಗಿ ಹೋದ ಬೆಳವಡಿ ಮಲ್ಲಮ್ಮನ ಬಗ್ಗೆ ಆಸಕ್ತಿಗಿಂತ ಅನಾಸ್ಥೆಯೇ ಹೆಚ್ಚಿತ್ತು. ಅದರಿಂದ ಮಲ್ಲಮ್ಮ ಇತಿಹಾಸದ ಪುಟದಲ್ಲಿ ಸೇರಿಹೋಗಿದ್ದಳು. ಕನ್ನಡಿಗರಿಗೆ ಮಲ್ಲಮ್ಮ ಅಪರಿಚಿತಳಾಗೇ ಉಳಿದಿದ್ದಳು. ಈಗ ಆ ಕೊರತೆಯನ್ನು ಯು.ರಾ.ಪಾಟೀಲರು ಅವಳ ಬಗ್ಗೆ ಕಾದಂಬರಿ ಬರೆಯುವ ಮೂಲಕ ಇತಿಹಾಸವನ್ನು ನಮ್ಮ ಮುಂದೆ ಪುನಃಸೃಷ್ಟಿಸಿ ಕೈಗಿತ್ತು ನಮ್ಮನ್ನು ರೋಮಾಂಚನಗೊಳಿಸಿದ್ದಾರೆ. ಇಡೀ ಭಾರತ ಇತಿಹಾಸದಲ್ಲಿಯೇ ಮಹಿಳಾ ಸೇನೆಯನ್ನು ಕಟ್ಟಿದ ಕೀರ್ತಿ ಬೆಳವಡಿ ಮಲ್ಲಮ್ಮನದು.

ಛತ್ರಪತಿ ಶಿವಾಜಿ ಮಹಾರಾಜನನ್ನೇ ಸೋಲಿಸಿದ ಈ ಕನ್ನಡ ಮಹಿಳೆಯ ದಿಟ್ಟತನ, ವಾತ್ಸಲ್ಯ, ಸ್ವಾಭಿಮಾನಗಳು ಇಂದಿನ ನಮ್ಮ ಮಹಿಳೆಯರಿಗೆ ಆದರ್ಶಪ್ರಾಯವಾಗಿದೆ. ಪ್ರತಿಯೊಬ್ಬ ಕನ್ನಡಿಗ-ಕನ್ನಡತಿ ಈ ಕಾದಂಬರಿಯನ್ನು ಅವಶ್ಯ ಓದಬೇಕು. ಮುನ್ನೂರು ವರ್ಷಗಳ ಹಿಂದಿನ ಬೆಳಗಾವಿ ನಾಡಿನ ಜನಜೀವನ, ಆಗಿನ ಊಟ- ಆಟಗಳು ಹೇಗಿದ್ದವು, ಹಬ್ಬಗಳ ಆಚರಣೆ ಹೇಗಿತ್ತು ಎಂದು ಅರಿಯಬೇಕಾದರೆ ಈ ಕಾದಂಬರಿಯನ್ನು ಓದಬೇಕು. ಮಲ್ಲಮ್ಮ ರಾಣಿಯ ಪತಿ ಈಶ ಪ್ರಭುವಿನ ಜನಾನುರಾಗಿ ಆಡಳಿತ ವಿವರ ಕೊಡುವ ಕಾದಂಬರಿ ಸಂಗ್ರಹ ಯೋಗ್ಯವಾಗಿದೆ.

ಕಾದಂಬರಿ ಕುರಿತು ನಾಡಿನ ನಾಡಿನ ಹಿರಿಯರು ಹೀಗೆ ಹೇಳಿದ್ದಾರೆ

೧. ಶ್ರೀ ಶಿವ ಮಹಾಂತೇಶ ಶಿವಾಚಾರ್ಯ ಮಹಾ ಸ್ವಾಮಿಗಳು

ಪೂವಲ್ಲಿ [ಹೂಲಿ] ಪಂಚವಣ್ಣಿಗಿ ಸಿಂಹಾಸನ ಬೃಹನ್ಮಠದ [ಬೆಳವಡಿ ಸಂಸ್ಥಾನದ ರಾಜಗುರುಗಳಾಗಿದ್ದ ಮಠ]

ನಲವತೈದನೇ ಚರಪಟ್ಟಾಧ್ಯಕ್ಷರು,

ಪಾತಿವ್ರತ್ಯದಲ್ಲಿ ಪಾರ್ವತಿ ದೇವಿ, ರಾಜ ತಂತ್ರದಲ್ಲಿ ಪ್ರಮೀಳೆ, ಸೌಂದರ್ಯದಲ್ಲಿ ರತಿ,

ವಿದ್ಯೆಯಲ್ಲಿ ಸರಸ್ವತಿ, ವೇದಾಂತದಲ್ಲಿ ಗಾರ್ಗಿದೇವಿ, ದಾನದಲ್ಲಿ ಕಲ್ಪಲತೆಯಾಗಿದ್ದವಳು ಬೆಳವಡಿ ಮಲ್ಲಮ್ಮ.

ಆಕೆ ಕನ್ನಡ ವನಿತೆಯರ ಸ್ವಾಭಿಮಾನದ ಕುರುಹು. ಆಕೆಯನ್ನು ಕುರಿತು ಹದಿನೆಂಟನೇ ಶತಮಾನದಲ್ಲಿ ಆಗಿಹೋದ ಶ್ರೀ ಮಠದ ಗುರುಗಳೂ ಕಿತ್ತೂರು ಸಂಸ್ಥಾನದ ಅವಸಾನದ ಕಾಲದಲ್ಲಿದ್ದ ಶ್ರೀ ಷ.ಬ್ರ.ನೀಲಕಂಠ ಶಿವಾಚಾರ್ಯಮಹಾಸ್ವಾಮಿಗಳು ‘ತುರುಕಾರಿ ಪಂಚಮರ ಇತಿಹಾಸ’ ಎಂಬ ಕಿರು ಹೊತ್ತಿಗೆಯನ್ನು ರಚಿಸಿದ್ದಾರೆ. ಇದನ್ನು ಬಿಟ್ಟರೆ ಮರಾಠಿಯ ಡಾ.ಎನ್‌.ಕೆ.ಚಟ್ನೀಸ್‌ ಅವರು ‘ಶಿವಾಜಿ-ಮಲ್ಲಮ್ಮ ಸಮರೋತ್ಸವ್‌’ ಎಂಬ ಹೊತ್ತಿಗೆ ಬರೆದಿದ್ದಾರೆ. ಅದರ ನಂತರ ಬರುತ್ತಿರುವ ಪುಸ್ತಕ ಇದು. ದಾಖಲಾರ್ಹ ವಾಗಿದೆ. ಬೆಳವಡಿ ಸಂಸ್ಥಾನದ ಇತಿಹಾಸ ತಿಳಿಯಬೇಕೆನ್ನುವವರು ಅವಶ್ಯ ಓದಲೇಬೇಕಾದ ಪುಸ್ತಕವಿದು.

೨. ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು, ಜ್ಞಾನಯೋಗಾಶ್ರಮ, ವಿಜಯಪುರ [ವಿಜಾಪುರ]

ಇದೊಂದು ಸುಂದರ ಕಾದಂಬರಿ. ಬೆಳವಡಿ ಮಲ್ಲಮ್ಮನವರ ಬದುಕಿನ ಸುಂದರ ಶಬ್ದ ಚಿತ್ರಣ. ಲೋಕ ಹಿತ ಕಾರ್ಯಗಳ ವರ್ಣನ. ಶೌರ್ಯ-ಸಾಹಸಗಳ ಮಾರ್ಮಿಕ ಕಥನ. ಶ್ರದ್ಧೆ, ಸ್ವಾಭಿಮಾನಗಳ ಬಣ್ಣನ. ಆದರ್ಶ ಮಹಾರಾಣಿ, ಸಾವಿರಾರು ಮಹಿಳಾ ಯೋಧೆಯರನ್ನು ರೂಪಿಸಿದ ಯುದ್ಧ ಕಲೆಯಲ್ಲಿ ಪಳಗಿಸಿದ ಅಪ್ರತಿಮ ಸೇನಾ ನಾಯಕಿ.

ನಿರ್ಭಯ, ನಿಷ್ಕಳಂಕ ವ್ಯಕ್ತಿತ್ವ. ಯುದ್ಧಕಲಾ ನೈಪುಣ್ಯ, ಅಪ್ರತಿಮ ನಾಡು-ನುಡಿ ಪ್ರೇಮ. ರಾಷ್ಟ್ರವೇ ಗೌರವಿಸಬೇಕು ಅಂಥ ಚಾರಿತ್ರ್ಯ. ಮಹಿಳಾ ಜಗತ್ತೇ ಹೆಮ್ಮೆಪಡಬೇಕು ಅಂಥ ಧೈರ್ಯ, ಸ್ಥೈರ್ಯ.

ಅವರನ್ನು ಕುರಿತು ಈ ಕೃತಿಯನ್ನು ರಚಿಸಿದವರು ಶ್ರೀ ಯ.ರು.ಪಾಟೀಲ ಅವರು. ಈ ಕೃತಿಯು ಹೆಚ್ಚು ಜನ ಮಹಿಳೆಯರ ಮತ್ತು ಯುವಕರ ಕೈಸೇರುವಂತಾಗಲಿ. ಇದರ ಸಾರ್ಥಕತೆ ಹೆಚ್ಚಲಿ. ಅವರ ಸಂತೋಷ ಹೆಚ್ಚಲಿ.

೩. ಶ್ರೀ ಎಂ.ಚಿದಾನಂದಮೂರ್ತಿಯವರು, ಖ್ಯಾತ ಇತಿಹಾಸ ಸಂಶೋಧಕರು

ಕಿತ್ತೂರು ಚನ್ನಮ್ಮನ ಹೆಸರು ವ್ಯಾಪಕ ಪ್ರಚಾರದಲ್ಲಿದೆ. ಆದರೆ ಅವಳಿಗಿಂತ ನೂರಾ ಅರವತ್ತು ವರ್ಷಗಳ ಹಿಂದೆಯೇ ಶೂರತನದಲ್ಲಿ ಛತ್ರಪತಿ ಶಿವಾಜಿಯನ್ನು ನಿಬ್ಬೆರಗಾಗಿಸಿದ ಕನ್ನಡ ರಾಣಿ ಬೆಳವಡಿ ಮಲ್ಲಮ್ಮನ ಬಗ್ಗೆ ಅಂಥ ಪ್ರಚಾರವಾಗಲಿಲ್ಲ. ಅವಳ ಹೆಸರು ಅಷ್ಟೇ ಪ್ರಚಾರಕ್ಕೆ ಬರುವುದು ಅವಶ್ಯವಾಗಿದೆ. ನಾವು ಬೆಂಗಳೂರಿನ ಪುರಭವನದ ಪಕ್ಕದಲ್ಲಿ ಕಿತ್ತೂರು ಚೆನ್ನಮ್ಮನ ಪುತ್ಥಳಿ ಸ್ಥಾಪಿಸಲು ಯಶಸ್ವಿಯಾಗಿದ್ದೇವೆ. ಆದರೆ ಬೆಳವಡಿ ಮಲ್ಲಮ್ಮನ ಪುತ್ಥಳಿ ಸ್ಥಾಪಿಸುವ ನಮ್ಮ ಪ್ರಯತ್ನ ಯಶಸ್ವಿಯಾಗಿಲ್ಲ. ಆ ಕೊರಗು ನನ್ನಲ್ಲಿದೆ.

ಮಲ್ಲಮ್ಮನ ಪ್ರದೇಶಕ್ಕೆ ಸೇರಿದವರಾದ ಶ್ರೀ ಯ.ರು.ಪಾಟೀಲ ಅವರು ಕನ್ನಡಿಗರ ಕನಸನ್ನು ತಮ್ಮ ಕರುನಾಡ ಸಿಡಿಲು ಬೆಳವಡಿ ಮಲ್ಲಮ್ಮ ಕಾದಂಬರಿಯ ಮಬಲಕ ನಿಜವಾದ ಅರ್ಥದಲ್ಲಿ ನನಸಾಗಿಸಿದ್ದಾರೆ. ಮಲ್ಲಮ್ಮನ ಬಗ್ಗೆ ದೊರಕುವ ಎಲ್ಲ ಐತಿಹಾಸಿಕ ಮಾಹಿತಿಯನ್ನು ಸಂಪೂರ್ಣವಾಗಿ ಸಂಗ್ರಹಿಸಿ ಅವಳ ಬದುಕಿನ ಸಾಧನೆ, ಸಿದ್ಧಿಗಳನ್ನು ರಸಪೂರ್ಣ ಭಾಷೆಯಲ್ಲಿ ಚಿತ್ರಿಸಿದ್ದಾರೆ. ಈ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದಾರೆ.

ಈ ಕಾದಂಬರಿಯನ್ನು ನಾನು ಮನಸ್ಸುಗೊಟ್ಟು ಓದುತ್ತಿದ್ದರೆ ಇದು ಕಾದಂಬರಿಯೋ, ಇಲ್ಲ ಇತಿಹಾಸವೋಎಂಬ ಭ್ರಮೆ ಹುಟ್ಟಿಸಿತು. ಇದು ಇತಿಹಾಸಕಾರರಿಗೆ ಇತಿಹಾಸ. ಸಾಹಿತ್ಯ ಪ್ರಿಯರಿಗೆ ಸಾಹಿತ್ಯ. ಇದು ಕರ್ನಾಟಕ ಮಹಾರಾಷ್ಟ್ರ ಗಡಿ ಪ್ರದೇಶದ ಆಡು ಕನ್ನಡ ಭಾಷೆಯ ಸೊಗಡನ್ನು ಪಡೆದುಕೊಂಡಿದೆ.

೪. ನಾಡೋಜ ಪಾಟೀಲ ಪಟ್ಟಪ್ಪನವರು

ಬೆಳಗಾವಿ ಜಿಲ್ಲೆ ಮಹಿಳಾ ವೀರ ಪರಂಪರೆಯ ನೆಲ. ಬೆಳವಡಿ ಮಲ್ಲಮ್ಮ, ಕಿತ್ತೂರಿನ ರಾಣಿ ಮಲ್ಲಮ್ಮ, ರಾಣಿ ರುದ್ರಮ್ಮ, ರಾಣಿ ವೀರಮ್ಮ, ವಂಟಮುರಿ ದೇಸಗತಿಯ ರಾಣಿ ನಾಗಮ್ಮ, ಸಿರಸಂಗಿ ರಾಣಿ ಚೆನ್ನಮ್ಮ ಹೀಗೆ ಇವರೆಲ್ಲರಿಗಿಂತ ಹಿರಿಯಳಾದವಳೇ ಬೆಳವಡಿ ಮಲ್ಲಮ್ಮ. ಈಕೆ ತರಬೇತು ಪಡೆದ ಎರಡು ಸಾವಿರ ಮಹಿಳಾ ಸೇನೆಯನ್ನು ಹೊಂದಿದ್ದಳು. ಶಿವಾಜಿ ಛತ್ರಪತಿಯಿಂದ ಮೆಚ್ಚುಗೆ ಪಡೆದು ಕನ್ನಡ-ಮರಾಠಾ ಬಾಂಧವ್ಯದ ಸಂಕೇತವಾಗಿ ಇತಿಹಾಸದ ಪುಟಗಳಲ್ಲಿ ಮಿಂಚಿದ ಮಹಾ ಮಾತೆ ಬೆಳವಡಿ ಮಲ್ಲಮ್ಮ.

ಇಂಥಹ ವೀರ ಮಾತೆಯ ಕುರಿತು ಈಗಾಗಲೇ ಸಾಕಷ್ಟು ಕಾದಂಬರಿಗಳು, ನಾಟಕಗಳು, ಸಿನಿಮಾ, ಟೀವಿ ಧಾರಾವಾಹಿಗಳು ಬರಬೇಕಾಗಿತ್ತು. ಆದರೆ ಇತಿಹಾಸಪ್ರಿಯ ಮನಸ್ಸುಗಳ ಕೊರತೆಯಿಂದ ರಾಣಿ ಮಲ್ಲಮ್ಮನಿಗೆ ಸಿಗಬೇಕಾದಷ್ಟು ಪ್ರಚಾರ ಸಿಕ್ಕಿಲ್ಲ. ಒಟ್ಟಿನಲ್ಲಿ ಇತ್ತೀಚೆಗೆ ವೀರ ರಾಣಿ ಬೆಳವಡಿ ಮಲ್ಲಮ್ಮನ ವೀರಗಾಥೆಪ್ರಸ್ತುತ ಪೀಳಿಗೆಗೆ ಪರಿಚಯವಾಗುವ ದಿಸೆಯಲ್ಲಿ ಹಂತ ಹಂತವಾಗಿ ಬೆಳಕಿಗೆ ಬರುತ್ತಿರುವುದು ಸಂತಸದ ಸಂಗತಿಯಾಗಿದೆ. ***

#ಪಸತಕ

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW