ಮೊದಲ ಮಹಿಳಾ ಕವಯಿತ್ರಿ ಬೆಳೆಗೆರೆ ಜಾನಕಮ್ಮ



ನಮ್ಮ ನಾಡಿನ ನವೋದಯ ಕಾಲದ ಮೊದಲ ಮಹಿಳಾ ಕವಯಿತ್ರಿ ಎಂದೇ ಹೆಸರಾದ “ಬೆಳಗೆರೆ ಜಾನಕಮ್ಮ” ಇವರ ಬಗ್ಗೆ ಕೆಲ ವಿಷಯಗಳನ್ನು ಲೇಖಕಿ ವಸಂತ ಗಣೇಶ್ ಅವರು ಕೊಂಡಿದ್ದಾರೆ. ಓದಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.

ಬೆಳೆಗೆರೆ ಜಾನಕಮ್ಮ ನವರ ಹೆಸರು ಹೆಚ್ಚು ಜನರು ಕೇಳಿಲ್ಲದೆ ಇರಬಹುದು. ಆದರೆ “ಯೇಗ್ದಾಗೆಲ್ಲಾ ಐತೆ” ಬರೆದ ಕೃಷ್ಣಶಾಸ್ತ್ರಿಗಳ ಹೆಸರು ಕೇಳದವರು ವಿರಳ. ಈ ಕೃಷ್ಣಶಾಸ್ತ್ರಿಗಳ ಸೋದರಿ ಜಾನಕಮ್ಮ ನವರು.

ಹೆಸರು: ಬೆಳಗೆರೆ ಜಾನಕಮ್ಮ
ಜನನ: ೧೯೧೨
ಸ್ಥಳ : ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಬೆಳಗೆರೆಯಲ್ಲಿ
ತಾಯಿ :ಅನ್ನಪೂರ್ಣಮ್ಮ
ತಂದೆ :ಚಂದ್ರಶೇಖರ ಶಾಸ್ತ್ರಿ.
ಪ್ರಥಮ ಕವನಸಂಕಲನ:ಕಲ್ಯಾಣ

೬ನೆಯ ವಯಸ್ಸಿಗೆ ಶಾಲೆ ಸೇರಿದ ಇವರು ೨ನೆಯ ತರಗತಿ ಮುಗಿದ ಕೂಡಲೇ ಅಜ್ಜಿಯ ಕಟ್ಟಪ್ಪಣೆಯಿಂದ ಶಾಲೆ ಬಿಡುವಂತಾಯಿತು. ಮನೆಯಲ್ಲಿಯೆ ಉಳಿದ ಇವರು ದೇವರ ನಾಮಗಳನ್ನು, ತೊಟ್ಟಿಲು ತೂಗುವಾಗ ಹಾಡುವ ಹಾಡುಗಳನ್ನು, ಬೀಗರ ಪದಗಳನ್ನು ರಚಿಸಿ, ಹಾರ್ಮೋನಿಯಂ ಜೊತೆಗೆ ಹಾಡುತ್ತಿದ್ದರು. ತಮ್ಮ ತಂದೆಯ ಪ್ರೋತ್ಸಾಹ ಹಾಗು ಸೋದರಿ ಪಾರ್ವತಿಯ ಒತ್ತಾಸೆಯಿಂದಾಗಿ ಜಾನಕಮ್ಮನವರು ಕಾವ್ಯರಚನೆಯನ್ನು ಮುಂದುವರಿಸಲು ಸಾಧ್ಯವಾಯಿತು.

ಇವರ ಕುಟುಂಬವೇ ಒಂದು ಸಾಹಿತ್ಯದ ಕುಟುಂಬ. ಸಾಹಿತ್ಯ ಪ್ರೇಮ, ಪ್ರಗತಿಪರತೆ, ಕಾವ್ಯಾಸಕ್ತಿ , ಕವಿತ್ವದಿಂದ ಕೂಡಿದ ಕುಟುಂಬ. ಚಂದ್ರಶೇಖರಶಾಸ್ತ್ರಿಗಳು ಇಡೀ ಚಳ್ಳಕೆರೆ ತಾಲ್ಲೂಕಿನಲ್ಲಿ ಲಾವಣಿಶಾಸ್ತ್ರಿ, ಕಡಲೇಕಾಯಿಶಾಸ್ತ್ರಿ ಎಂದೇ ಪ್ರಖ್ಯಾತರಾಗಿದ್ದ ಆಶುಕವಿಗಳು.

ಬೆಳೆಗೆರೆ ಜಾನಕಮ್ಮನವರು ಚಂದ್ರಶೇಖರ ಶಾಸ್ತ್ರಿಗಳ ಐವರು ಮಕ್ಕಳಲ್ಲಿ ಎರಡನೆಯವರು. ಇವರ ಅಣ್ಣ ಸೀತಾರಾಮಶಾಸ್ತ್ರಿಗಳು “ಕಾಶಿಯಾತ್ರೆ”ಯಂತಹ ನಾಟಕವನ್ನು ಬರೆದವರು. ಗಣಿತಶಾಸ್ತ್ರವಲಯದಲ್ಲಿ “ಕ್ಯಾಲ್ಕುಲೆಸ್” ಶಾಸ್ತ್ರಿ ಎಂದೇ ಸುಪ್ರಸಿದ್ಧರಾದವರು. ಜಾನಕಮ್ಮನವರ ತಂಗಿಯರು ರುಕ್ಕಮ್ಮ ಮತ್ತು ಪಾರ್ವತಮ್ಮ. ಬೆಳೆಗೆರೆ ಪಾರ್ವತಮ್ಮನವರೂ ಸೃಜನಶೀಲ ಲೇಖಕಿಯೆ. ಮತ್ತೊಬ್ಬ ತಮ್ಮ ಬೆಳೆಗೆರೆ ಕೃಷ್ಣಶಾಸ್ತ್ರಿಗಳು ಶಿಕ್ಷಣ ತಜ್ಞರು, ಗಾಂಧೀವಾದಿಗಳು ಹಾಗೂ “ಯೇಗ್ದಾಗೆಲ್ಲಾ ಐತೆ” “ಮರೆಯಲಾದೀತೇ?” ಮುಂತಾದ ವಿಶಿಷ್ಟ ಕೃತಿಗಳನ್ನು ಕನ್ನಡಕ್ಕೆ ನೀಡಿದವರು.

ಇವರಿಗೆ ತಮ್ಮ ಹತ್ತನೇ ವಯಸ್ಸಿನಲ್ಲೇ ಸೋದರತ್ತೆಯ ಮಗ ಮಲ್ಲೂರು ಕೃಷ್ಣಶಾಸ್ತ್ರಿಗಳೊಂದಿಗೆ ವಿವಾಹವಾಯಿತು. ಅವರು ಬಳ್ಳಾರಿಯ “ವಾಲ್‍ಕಾಟ್ ಬ್ರದರ್ಸ್” ಸ್ವಿಸ್ ಕಂಪನಿಯಲ್ಲಿ ಗುಮಾಸ್ತರಾಗಿದ್ದರು. ಕಮಲನಾಭ ಹಾಗೂ ಪ್ರಸನ್ನಕುಮಾರ ಇವರ ಇಬ್ಬರು ಮಕ್ಕಳು.

ಜಾನಕಮ್ಮನವರು ಜನಕಜೆ ಎಂಬ ಕಾವ್ಯನಾಮದಲ್ಲಿ ಸುಮಾರು ೯೦ ಪ್ರಕಟಿತ ಹಾಗು ಅಪ್ರಕಟಿತ ಕೃತಿಗಳನ್ನು ರಚಿಸಿದ್ದಾರೆ. ಇವರ ಕವನಗಳು ಜೀವನ, ಜಯಕರ್ನಾಟಕ ಹಾಗು ಪ್ರಬುದ್ಧ ಕರ್ನಾಟಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. “ಸುಕವಯಿತ್ರಿ “ಎಂಬ ಬಿರುದನ್ನು ಹೊಂದಿದ್ದರು.

ಮಹಿಳೆಯರು ಸಾರ್ವಜನಿಕವಾಗಿ ಮಾತನಾಡಲು, ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಅಭಿವ್ಯಕ್ತಿಸಲು ಹಿಂಜರಿಯುತ್ತಿದ್ದ ಕಾಲದಲ್ಲಿ ತಮ್ಮ ಸೀಮಿತ ಬದುಕಿನ ವಲಯದಲ್ಲಿಯೇ ತಮ್ಮ ಜೀವನಾನುಭವದಿಂದ ಕವನಗಳನ್ನು ಬರೆಯುವ ಮೂಲಕ, ಕನ್ನಡದ ಆರಂಭಿಕ ಮಹಿಳಾ ಕಾವ್ಯದ ಪ್ರಮುಖ ಪ್ರತಿನಿಧಿಯಾಗಿದ್ದಾರೆ.

ಜಾನಕಮ್ಮನವರು ತಮ್ಮ ಮೊದಲ ಕವನಸಂಕಲನ “ಕಲ್ಯಾಣ” ವನ್ನು ಪತಿ ಕೃಷ್ಣಶಾಸ್ತ್ರಿಯವರಿಗೆ ಸಮರ್ಪಿಸಿದ್ದಾರೆ. ಬೇಂದ್ರೆ, ಬಿ.ಎಂ.ಶ್ರೀ ಯವರಂತಹ ದಿಗ್ಗಜರು ಇವರಿಗೆ ಆತ್ಮೀಯರಾಗಿದ್ದರು. ಇವರ ಬದುಕಿನಲ್ಲಿ ಪ್ರೇರಣೆ ನೀಡಿದ ಮತ್ತೊಬ್ಬ ಹಿರಿಯರು ಎಂದರೆ ಪ್ರಣವಾನಂದ ಸ್ವಾಮೀಜಿಯವರು.

ಜಾನಕಮ್ಮನವರ ಪತಿ ತೀರಿಕೊಂಡಾಗ ಬೇಂದ್ರೆಯವರು

“ತಂಗಿ ಜಾನಕಿ ನಿನ್ನ ವೈದೇಹದೊಲವಿನಲಿ ಓಲೆ ಬಂದಿತು ಒಂದು ಇತ್ತ ತೇಲಿ”ಎಂದು ಜಾನಕಮ್ಮ ನವರ ನೋವಿಗೆ ಸ್ಪಂದಿಸಿ ಬರೆದಿದ್ದರು.



ನವೋದಯ ಪೂರ್ವ ದಿನಗಳಲ್ಲಿ ಮಹಿಳೆಯರು ಅಕ್ಷರಸ್ಥರಾಗುವುದೇ ಕಷ್ಟ ಎನ್ನುವಂತೆ ಇತ್ತು. ಆಗಲೇ ಜಾನಕಮ್ಮನವರು ತುಂಬ ಪ್ರಾಮಾಣಿಕವಾಗಿ ತಮ್ಮ ನೋವು ನಲಿವುಗಳನ್ನು ತೋಡಿಕೊಂಡರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದರು. ಹೆಣ್ಣಿನ ಅಸಹಾಯಕತೆ, ಸಮಾಜದಲ್ಲಿ ಹೆಣ್ಣಿನೆಡೆಗೆ ಇರುವ ಅನಾದರಗಳನ್ನು ಕಂಡು ಅವರು ಸಾಕಷ್ಟು ಅಸಹನೆಯನ್ನು ವ್ಯಕ್ತಪಡಿಸುತ್ತಾರೆ.

“ಹೆಣ್ಣಾಟ” ಎಂಬ ಕವನದಲ್ಲಿ,

ಹೆಣ್ಣು ಗಂಡೆಂಬ ಗೊಂಬೆಗಳ ಆಟದಲಿ ಎನ್ನೊಡಲು ಕುದಿಯುತಿದೆ ಹೆಣ್ಣಾಟ ಕಂಡು ಮನಸ್ಸಿದ್ದು ಜನಕಜೆಗೆ ಏನೂ ಚೆನ್ನಿಲ್ಲ.

ಲೈಂಗಿಕ ತಾರತಮ್ಯದ ಬಗ್ಗೆ ಅಸಮಾಧಾನವನ್ನು ತೋಡಿಕೊಳ್ಳುತ್ತಾರೆ “ಚಂಡಶಾಸನ” ಎಂಬ ಮತ್ತೊಂದು ಪದ್ಯದಲ್ಲಿ ಲಂಚಕೋರನು ನೀನು ವಂಚನೆಯ ಮಾಡಿರುವೆ ಮೃದುತನ ಸ್ತ್ರೀವರ್ಗಕ್ಕೆ ಕಸಕ್ಕಿಂತ ಕಡೆಯಾಯಿತೆ ಹೆಣ್ಣು ಜನ್ಮವು ನಿನಗೆ ಈ ಭಾರ ಹೊರಿಸುವುದಕೆ ಗಿಡವೆಂದು ಬಗೆದೆಯಾ ಹೆಣ್ಣು ಜನ್ಮದ ಒಡಲ ಫಲಗಳನು ಸೃಜಿಸುವುದಕೆ ಎಂದು ಪ್ರಶ್ನಿಸುತ್ತಾರೆ. ಈ ಮಾತುಗಳಲ್ಲಿ ದಟ್ಟವಾದ ಸ್ತ್ರೀಸಂವೇದನೆಯನ್ನು ಗುರುತಿಸಬಹುದು. ಇವರು ತಮ್ಮ ಸುತ್ತಮುತ್ತಲಿನ ಬದುಕಿನ ದೈನಂದಿನ ಸಮಸ್ಯೆಗಳಿಗೆ ತೀವ್ರವಾಗಿ ಸ್ಪಂದಿಸುತ್ತಾರೆ.

ಬಳ್ಳಾರಿಯಂತಹ ಬಿಸಿಲು ಪ್ರದೇಶದ ನೀರಿನ ಸಮಸ್ಯೆ, ಬೇಗೆಯ ಬದುಕಿಗೆ ತಂಪಿನ ಕರೆ ನೀಡುತ್ತಾರೆ. ಬಾಯಾರಿ ಬಾ ಬಂದೆ ಬತ್ತಿದೆ ಈ ಕೊಳವು ಬಾರವ್ವ ಗಂಗೆ ಉರಗನು ನಿನ್ನ ಬಿಡೆನೆ ಶಂಕರ ತಡೆದಿಹನೆ ಪೇಳವ್ವೆ ಗಂಗೆ.

ಎನ್ನುವಾಗ ಜನತೆಯ ಬದುಕನ್ನು, ಅದರಲ್ಲೂ ಹೆಣ್ಣನ್ನು ಕಾಡುವ ನೀರಿನ ಸಮಸ್ಯೆಯನ್ನು ಕುರಿತು ದುಃಖಿಸುತ್ತ, ಗಂಗೆ ತಮ್ಮ ನಾಡಿನಲ್ಲಿ ಯಥೇಚ್ಛವಾಗಿ ಹರಿಯಲಿ, ಜನತೆಯ ಕಂಗೆಟ್ಟ ಬದುಕನ್ನು ತೇವವಾಗಿಸಲಿ, ಸಮೃದ್ಧವಾಗಿಸಲಿ ಎಂಬ ಆಶಯವನ್ನು ವ್ಯಕ್ತಪಡಿಸುತ್ತಾರೆ.

ಹೆಣ್ಣಿನ ಬಂಧನದ ಬಗ್ಗೆ, ದೇಶಕ್ಕೆ ಒದಗಿದ ಬಂಧನದ ಬಗ್ಗೆ ಅವರ ಮನಸ್ಸು ಕುದಿಯುತ್ತದೆ. ಕುದಿಯುವುದು ಒಳಗೊಳಗೆ ಸ್ವಾತಂತ್ರ್ಯವಿಲ್ಲೆನುತ ದುಡಿಯುವುದು ಹಗಲಿರುಳು ಉಸಿರಿರುವ ತನಕ ಎಂದು ಜಾನಕಮ್ಮನವರು ಹೆಣ್ಣಿನ ಸ್ವಾತಂತ್ರ್ಯರಹಿತ, ಅತಂತ್ರ ಬದುಕಿನ ಬಗ್ಗೆ ಬೇಸರವನ್ನು ವ್ಯಕ್ತಪಡಿಸುತ್ತಾರೆ. ಜಾನಕಮ್ಮನವರು ದೇಶದ ಅತಂತ್ರಸ್ಥಿತಿಯ ಬಗೆಗೆ, ಬಡತನದ ಬಗ್ಗೆ, ಸಾಮಾಜಿಕ ಅನ್ಯಾಯಗಳ ಬಗೆಗೂ ಮಾತನಾಡುತ್ತಿದ್ದರು.



ದುಷ್ಟರನು ಬಹುದೂರವಿರಿಸಯ್ಯ ಹರಿಯೆ ಇಷ್ಟಾರ್ಥಗಳನೆನಗೆ ಕೊಡದಿರಲು ಸರಿಯೆ ಎನ್ನ ಒಳಗಡಗಿರುವ ಕಳ್ಳರಿಗೆ ಸೋತಿಹೆನು ನಿನ್ನ ಧ್ಯಾನವನೆನಗೆ ದಕ್ಕಗೊಡರಿವರು ಕಣ್ಣು ಬಡಿಯುವ ಕ್ಷಣಕೆ ನಿನ್ನ ಮರೆಸುತಲಿಹರು ಇನ್ನಾವ ಬಗೆಯೊಳಗೆ ಧನ್ಯಳಾಗುವೆನೊ ವಿಷಮಯದ ಮೋಹವನು ಸವಿಮಾಡಿ ಉಣಿಸುವರು ಹಸಿವ ತೀರಿಸುವಂತೆ ನಟನೆ ಮಾಡುವರು ವಿಷಮಸ್ಥಿತಿಗೆನ್ನೆಳೆದು ಕ್ರೋಧವನು ತುಂಬುವರು ಮಸೆಯುತಿಹರೆನ್ನೊಳಗೆ ಮಾತ್ಸರ್‍ಯ ಮದವ ಕಂಡುಕಂಡುದನೆಲ್ಲ ಕೊಂಡು ತಾ ಎಂಬುವರು ಉಂಡು. ಇದೂ ಇವರ ಮತ್ತೊಂದು ಕವನ.

ಜಾನಕಮ್ಮ ನವರು ಜೀವಿಸಿದ್ದ ಕಾಲದಲ್ಲಿ ಅವರ ಕಾವ್ಯಗಳು ಪ್ರಕಟಣೆಯಾಗದಿದ್ದರೂ ಅವರ ಮರಣಾನಂತರ ಚಿತ್ರದುರ್ಗದ ಮರುಘಾಮಠದ ನೆರವಿನಿಂದ “ಕಲ್ಯಾಣ” ಕೃತಿ ಬೇಂದ್ರೆಯವರ ಮುನ್ನುಡಿ ಹೊತ್ತು ಪ್ರಕಟವಾಗಿದೆ. ಬೆಳೆಗೆರೆ ಜಾನಕಮ್ಮನವರು ನಿರ್ವಿವಾದವಾಗಿ ನವೋದಯ ಪೂರ್ವ ಮಹಿಳಾ ಕಾವ್ಯದ ಪ್ರಮುಖ ಧ್ವನಿಯಾಗಿದ್ದಾರೆ ಎನ್ನಲಾಗುತ್ತದೆ.

೧೯೪೮ ರಲ್ಲಿ ತಮ್ಮ ಮೂರನೇಯ ಮಗುವಿನ ಪ್ರಸವದ ಸಮಯದಲ್ಲಿ ಮಗುವಿನೊಂದಿಗೇ ನಿಧನರಾದರು.

ಶಾಲೆಗೆ ಹೋಗಿ ಕಲಿತದ್ದು ಕಡಿಮೆಯಾದರೂ ಜಾನಕಮ್ಮನವರು ತಮ್ಮ ಸುತ್ತಲಿನ ಪ್ರಪಂಚದ ಆಗು ಹೋಗುಗಳನ್ನು ನೋಡುತ್ತಾ ಅದನ್ನು ತಮ್ಮ ಕಾವ್ಯಗಳಲ್ಲಿ ಬರೆಯುವುದರಲ್ಲಿ ಸಮರ್ಥರಾಗಿದ್ದಾರೆ. ವಿದ್ಯೆಗಿಂತ ಜೀವನಾನುಭವ ದೊಡ್ಡದು, ಸಾಧನೆಗೆ ಯಾವುದೂ ಅಡ್ಡಿಯಲ್ಲ ಎನ್ನುವುದು ಇವರ ಬಗ್ಗೆ ಓದುವಾಗ ನೆನಪಾಗುತ್ತವೆ. ಒಟ್ಟಿನಲ್ಲಿ ಜಾನಕಮ್ಮ ಸಾಹಿತ್ಯಲೋಕದ ಅನರ್ಘ್ಯ ಸ್ತ್ರೀ ರತ್ನವೇ ಸರಿ.


  • ವಸಂತ ಗಣೇಶ್  (ಲೇಖಕರು, ಸಾಹಿತಿಗಳು)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW