‘ಬೇಲಿಯ ಹೂಗಳು’ ಪುಸ್ತಕ ಅಪರಿಚಯ

ನಾಡಿನ ಪ್ರಸಿದ್ಧ ಲೇಖಕರಾದ ಕುಂ.ವೀರಭದ್ರಪ್ಪ ಅವರ ಬೇಲಿಯ ಹೂಗಳು ಕಾದಂಬರಿಯ ಈ ಕಥೆಯು ಶಿವರಾಜ್ ಕುಮಾರ್ ಅವರ ಅಭಿನಯದಲ್ಲಿ ‘ದೊರೆ’ ಎನ್ನುವ ಹೆಸರಿನ ಜನಪ್ರಿಯ ಚಲನ ಚಿತ್ರವಾಗಿದ್ದು, ಲೇಖಕಿ ಮಾಲತಿ ರಾಮಕೃಷ್ಣ ಭಟ್ ಅವರು ಕೃತಿಯ ಕುರಿತು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ ಹೆಸರು: ಬೇಲಿಯ ಹೂಗಳು.
ಲೇಖಕರು: ಕುಂ.ವೀರಭದ್ರಪ್ಪ.
ಹೇಮಂತ ಸಾಹಿತ್ಯ ಪ್ರಕಾಶನ ಬೆಂಗಳೂರು.
ಮುದ್ರಣದ ವರ್ಷ: ೧೯೮೭ & ೨೦೦೮.
ಪುಟಗಳು:೧೮೪.
ಬೆಲೆ: ರೂ. ೯೦.

ನಾಡಿನ ಪ್ರಸಿದ್ಧ ಲೇಖಕರಾದ ಕುಂ. ವೀರಭದ್ರಪ್ಪ ಅವರ ಕಾದಂಬರಿಯ ಈ ಕಥೆಯು ಶಿವರಾಜ್ ಕುಮಾರ್ ಅವರ ಅಭಿನಯದಲ್ಲಿ ‘ದೊರೆ’ ಎನ್ನುವ ಹೆಸರಿನ ಜನಪ್ರಿಯ ಚಲನ ಚಿತ್ರವಾಗಿದೆ. ಕುಂ. ವೀ. ಎಂದೇ ಪರಿಚಿತರಾಗಿರುವ ಇವರ ಕೆಂಡದ ಮಳೆ, ಕೊಟ್ರೆಶಿ ಕನಸು, ಮನಮೆಚ್ಚಿದ ಹುಡುಗಿ ಮುಂತಾದ ಕಥೆಗಳು ಸಹ ಸಿನೇಮಾ ಆಗಿದ್ದು ರಾಜ್ಯ/ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನಗಳು ಸೇರಿದಂತೆ ಇವರು ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

ಸಂಪೂರ್ಣ ಗ್ರಾಮೀಣ ಭಾಷೆಯಲ್ಲಿರುವ ಇದು ಹಿಂದೆ ಹಳ್ಳಿಗಳಲ್ಲಿದ್ದ ಶೋಷಣೆ, ಮೂಢನಂಬಿಕೆ ಹಾಗೂ ಜೀತ ಪದ್ಧತಿಯ ಕುರಿತು ಬರೆದಿರುವ ಕಥೆ. ಅಜ್ಞಾನ ಬಡತನ ತುಂಬಿದ ಆ ಹಳ್ಳಿಯಲ್ಲಿ ದೊರೆ ಮೆರೆಯುತ್ತಿದ್ದ. ಜನರು ಅವನ ಗುಲಾಮರಾಗಿದ್ದರು. ಬದುಕಿದರೂ ಸತ್ತರೂ ದೊರೆಗಾಗಿ ಮಾತ್ರ ಎಂಬುದೇ ಅಲ್ಲಿನ ನಿಯಮವಾಗಿತ್ತು. ತನಗೆ ತಿರುಗಿ ಬಿದ್ದವರನ್ನು ಮುಲಾಜಿಲ್ಲದೇ ದೊರೆ ಗಲ್ಲುಗಂಬಕ್ಕೆರಿಸುತ್ತಿದ್ದ. ಅಂತಹ ಒಬ್ಬ ದುರ್ದೈವಿ ಕರಿಲಿಂಗ.

ತನಗೆ ಸಾವು ನಿಶ್ಚಿತ ಎಂದು ಗೊತ್ತಾದ ಕೂಡಲೇ ಆತ ಹೆಂಡತಿ ಹಾಗೂ ಒಬ್ಬನೇ ಮಗ ಪುಟ್ಟ ಕರಿಯನೊಂದಿಗೆ ಊರು ಬಿಟ್ಟು ಪಲಾಯನ ಮಾಡಬೇಕೆಂದು ಕೊಂಡಿದ್ದ.
ಆದರೆ ಅವನ ಹೆಂಡತಿ ಭಯಭೀತಳಾಗಿದ್ದಳು.

ಯೋಚಿಸಲು ಸಮಯವಿಲ್ಲದೇ ಕರಿಲಿಂಗ ಒಬ್ಬನೇ ತಪ್ಪಿಸಿ ಕೊಳ್ಳಲು ಯತ್ನಿಸಿದನಾದರೂ ದೊರೆಯ ಬಂಟರು ಅವನನ್ನು ಹಿಡಿದು ಎಳೆ ತಂದಿದ್ದರು. ಪೊಲೀಸರು ಕೂಡಾ ದೊರೆಯ ಪರವಾಗಿದ್ದರಿಂದ ಊರಲ್ಲಿ ಯಾರೊಬ್ಬರಿಗೂ ದೊರೆಯನ್ನು ಎದಿರು ಹಾಕಿ ಕೊಳ್ಳಲು ಹೆದರಿಕೆಯಿತ್ತು.

ಕಡೆಗೂ ದೊರೆಯ ಭವನದಲ್ಲಿ ಕರಿಲಿಂಗನ ದೇಹ ನೇಣಿನಲ್ಲಿ ನೇತಾಡಿದಾಗ….ಅವನ ಹೆಂಡತಿ ಎದೆಯೊಡೆದು ಕೊಂಡು ಸತ್ತಳು. ಅನಾಥನಾದ ಪುಟ್ಟ ಕರಿಯನನ್ನು ದೊರೆಯ ಆಪ್ತ ಹಣ್ಣು ಹಣ್ಣು ಮುದುಕ ಕಾಡಜ್ಜನೇ ಸಾಕಿ ಬೆಳೆಸಿದ. ಬಾಲ್ಯದ ಮನಸ್ಸಿನಲ್ಲಿ ನಾಟುವಂತೆ ನೂರಾರು ಕಥೆಯನ್ನು ಹೇಳುತ್ತಾ ಅವನನ್ನು ತನಗೆ ಬೇಕಾದ ಆಕಾರಕ್ಕೆ ಬಗ್ಗಿಸಲು ಪ್ರಯತ್ನಿಸ ತೊಡಗಿದ್ದ. ವಿಪರೀತ ಸ್ವಾಮಿ ಭಕ್ತಿಯಿಂದ ಕೆಟ್ಟ ಕೆಲಸ ಮಾಡುತ್ತಿದ್ದ ಆತ ಕರಿಯನನ್ನೂ ಹಾಗೇ ಪರಿವರ್ತಿಸ ಬೇಕೆಂಬ ಕನಸು ಕಂಡಿದ್ದ. ಆದರೆ….. ವಿಧಿ ನಿಯಮವೇ ಬೇರೆ ಇತ್ತು. !!

ದೊರೆಗೊಬ್ಬ ಚೆಲುವೆ ಮಗಳು ಹೊನ್ನಿ. ಅವಳು ತಾಯಿಯಿಲ್ಲದ ತಬ್ಬಲಿ. ಅವಳನ್ನು ನೋಡಿ ಕೊಳ್ಳಲು ಮನೆ ತುಂಬಾ ಆಳು ಕಾಳುಗಳು. ಅದರಲ್ಲೂ ಪಾರವ್ವನೆಂಬ ನಂಬುಗಸ್ತೆ ಹೊನ್ನಿಯನ್ನು ತಾಯಿಯಂತೆ ಪ್ರೀತಿಸಿ ಹಾಲು ತುಪ್ಪ ತಿನ್ನಿಸಿ ಅವಳನ್ನು ಸದಾ ಅಕ್ಕರೆಯಿಂದ ಪಾಲಿಸುತ್ತಿದ್ದಳು.

ಒಂದುದಿನ…

ತನ್ನ ಅಪ್ಪ ಜನರನ್ನು ಗಲ್ಲಿಗೇರಿಸುವ ನೆಲ ಮಾಳಿಗೆಯ ಕೋಣೆಯನ್ನು ತಾನು ನೋಡಲೇ ಬೇಕೆಂದು ಹಠ ಹಿಡಿದ ಪುಟ್ಟ ಬಾಲೆಯನ್ನು ಪಾರವ್ವ ತೋರಿಸಲು ಕರೆದುಕೊಂಡು ಬಂದಳು. ರಾಜ ಕುಮಾರಿಯಂತೆ ಅರಮನೆಯಲ್ಲಿದ್ದ ಅವಳು ಅಂದು ಬಡ ಜನರಿದ್ದ ಹರುಕು ಗುಡಿಸಲುಗಳ ಹೊರ ಪ್ರಪಂಚವೇನೆಂದು ಕಂಡಳು.

ಅಲ್ಲಿಂದ ದಿನವೂ ಪಾರವ್ವನ ಕಣ್ತಪ್ಪಿಸಿ ಮಹಡಿಯಿಂದ ಮಹಡಿಗೆ ಇಳಿಯುತ್ತಾ ಕೆಳಕ್ಕಿಳಿದು, ಹಾಗೇ ನಡೆದು… ಕಾಡಜ್ಜನಿದ್ದಲ್ಲಿಗೆ ಬಂದಾಗ ಪುಟ್ಟ ಕರಿಯನನ್ನು ಕಂಡಳು.ದಿನ ಕಳೆದಂತೆ ಬಿಳಿಯ ಮಿನುಗುವ ಹಲ್ಲುಗಳ ಕರಿಯ ಅವಳಿಗೆ ಆತ್ಮೀಯನಾಗಿ ಬಿಟ್ಟಿದ್ದ.

ಕಾಲ ಕಳೆದಂತೆ ಹೊನ್ನಿ ಋತುಮತಿಯಾದ ಮೇಲೆ ಮನೆಯಲ್ಲಿ ಬಂಧಿಯಾದಳು. ಅವಳಿಗೆ ಕರಿಯನನ್ನು ಮೊದಲಿನಂತೆ ಕಂಡು ಮಾತಾಡಿಸಲು ಕಷ್ಟವಾಗಿತ್ತು. ಕರಿಯನೂ ಈಗ ಫೈಲ್ವಾನ್ ಭದ್ರಪ್ಪನವರ ಅಖಾಡದಲ್ಲಿ ಕುಸ್ತಿ ಪಟ್ಟು ಕಲಿಯುತ್ತಿದ್ದ. ಒಮ್ಮೆ ಪಕ್ಕದೂರಿನ ಜಟ್ಟಿ ಹಾಗೂ ಕರಿಯನ ನಡುವೆ ನಡೆಯುತ್ತಿದ್ದ ಪಂದ್ಯವನ್ನು ವೀಕ್ಷಿಸಲು ಹೊನ್ನಿ ಭಿಕಾರಿಯಂತೆ ವೇಷ ಮರೆಸಿಕೊಂಡು ಬಂದಿದ್ದಳು.! ಊರಿನ ಮಾನ ಕಾಪಾಡಿದ ಕಲ್ಲಿನಂತ ಗಟ್ಟಿ ದೇಹದ ಕರಿಯನನ್ನು ಕಂಡು ಆನಂದ ಪಟ್ಟಿದ್ದಳು. ಅವಳು ಮನಸಾರೆ ಕರಿಯನನ್ನು ಮೆಚ್ಚಿದ್ದಳು.

ಇತ್ತ ತನ್ನ ದಂತದ ಗೊಂಬೆಯಂತಹ ಮಗಳನ್ನು ಪೇಟೆಯ ವ್ಯಾಪಾರಿ ಕೆ. ರಾವ್ ಅವರ ಮಗನಿಗೆ ಕೊಟ್ಟು ಮದುವೆ ಮಾಡಬೇಕೆಂದು ದೊರೆ ನಿರ್ಧಾರ ಮಾಡಿದ್ದ. ಮೊದಲೇ ಇವರ ಆಸ್ತಿಯ ಮೇಲೆ ಕಣ್ಣಿಟ್ಟಿದ್ದ ರಾವ್ ಮತ್ತವರ ಹೆಂಡತಿ ಮುಗ್ಧ ಭಾವೀ ಸೊಸೆಯನ್ನು ನೋಡಿ ಅಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳಲು ತಯಾರಾಗಿದ್ದರು.

ಆಗ ಏನಾಯಿತು? ರಾವ್ ಅವರ ಮಗನೊಂದಿಗೆ ಹೊನ್ನಿ ಮಾತಾಡಿದ ವಿಷಯವೇನು?… ದುಷ್ಟ ದೊರೆಯ ಆಡಳಿತ ಅಂತ್ಯಗೊಳ್ಳಲು ಕಾರಣವೇನು? ಹೊನ್ನಿ ಮತ್ತು ಕರಿಯ ಒಂದಾದರೆ?. ಇಂತಹ ಅನೇಕ ಪ್ರಶ್ನೆಗಳು ನಿಮ್ಮಲ್ಲೂ ಕಾಡುತ್ತಿರ ಬೇಕಲ್ಲವೇ?.. ಹಾಗಾದರೆ ತಡವೇಕೆ?… ಕಾದಂಬರಿಯನ್ನು ಓದಿ… ಬಿಡಿ.

ಗ್ರಾಮ್ಯ ಕನ್ನಡದ ಸೊಬಗು, ಹಾಗೂ ಗ್ರಾಮೀಣ ಚಿತ್ರಣವೇ ಗಾಢವಾಗಿರುವ ಇವರ ಕೃತಿ ಓದುವುದೇ ಆಹ್ಲಾದ.


  • ಮಾಲತಿ ರಾಮಕೃಷ್ಣ ಭಟ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW