ಪ್ರಭಾಳಿಗೆ ಮಗನ ಮೇಲೆ ಹುಸಿಮುನಿಸು. ಆದರೆ ಅದನ್ನು ಸಾಧಿಸಲು ಆಗುವುದಿಲ್ಲವೆಂದು ಅವಳಿಗೂ ಗೊತ್ತು. ಈ ಮುಸುಕಿನ ಗುದ್ದಾಟ ಸ್ವಲ್ಪ ದಿನ ನಡೆಯಿತು. ಮಗನ ದಾಕ್ಷಿಣ್ಯವೇ ಬೇಡ ಎಂದು ಅವನ ಯಾವ ತಿಂಡಿ-ತೀರ್ಥ-ಉಡುಗೊರೆಗಳಿಗೂ ಕೈ ಒಡ್ಡಲಿಲ್ಲ. ಮುಂದೇನಾಯಿತು ವೈ.ಕೆ.ಸಂಧ್ಯಾ ಶರ್ಮ ಅವರ ಸಣ್ಣಕತೆಯನ್ನು ತಪ್ಪದೆ ಓದಿ…
ತಟ್ಟೆಗೆ ಹಾಕಿದ ಚಪಾತಿಯನ್ನು ಹಿಂದೆ ಮುಂದೆ ತಿರುಗಿಸಿ ನೋಡಿ ಅದರ ಉದ್ದ–ಅಗಲ ಅಳತೆ ಮಾಡಿ, ದಪ್ಪ-ತೂಕ ತೂಗಿ ನೋಡಿದವನೇ ಮಗರಾಯ ರಾಕೇಂದು ಮುಖ ಸಿಂಡರಿಸಿ ಕೂಗಾಡಿದ:
‘ಎಷ್ಟು ಸಲ ಹೇಳೋದಮ್ಮ ನಿನಗೆ, ಕೊಂಚವೂ ನಯ ಇಲ್ಲ -ನಾಜೂಕಿಲ್ಲ, ಯದ್ವಾ ತದ್ವಾ ಲಟ್ಟಿಸಿ ಊರಗಲ ಮಾಡಿಕೊಡ್ತೀಯಲ್ಲ, ಹೇಗೆ ತಿನ್ನೋದು ಇದನ್ನು ? …ನಂಗೆ ಬೇಡ’-ಎನ್ನುತ್ತಾ ಅವನು ಮುಲಾಜಿಲ್ಲದೆ ಒರಟಾಗಿ ತಟ್ಟೆ ಹಿಂದೆ ತಳ್ಳಿದ.
ಪ್ರಭಳ ಮುಖ ಹುಳ್ಳಗಾಯಿತು. ತಾನಷ್ಟು ಅನಾಗರಿಕ ಹೆಂಗಸೇ?… ಅದು ತನಗೆ ತಿಳಿಯದ್ದೇ?…ಬೇಕಂತಲೇ ತಾನವನಿಗೆ ಹೀಗೆ ಎರಡು ಚಪಾತಿ ಹಿಟ್ಟಿನ ಉರುಳಿಗಳನ್ನು ಸೇರಿಸಿ ದೊಡ್ಡ ಚಪಾತಿಯನ್ನು ಮಾಡಿಕೊಟ್ಟಿದ್ದಲ್ಲವೇ?… ಅವನು ಎರಡೇ ಎರಡು ಚಪಾತಿ ಸಾಕಮ್ಮ, ಮೂರನೆಯದು ಮಾಡಿದರೆ ಖಂಡಿತ ನಾ ತಿನ್ನಲ್ಲ ಅಂತ ಕಂಡೀಷನ್ನಾಗಿ ಹೇಳಿದ್ದು ತನಗೆ ಗೊತ್ತಿಲ್ವೇ?.. ಲೆಕ್ಕ ಎಂದರೆ ಅವನದು ಪಕ್ಕಾ ಲೆಕ್ಕ. ಆದರೂ ಭೀಮಕಾಯದ ಅವನ ಹೊಟ್ಟೆಗೆ ಎರಡು ಚಪಾತಿ ಸಾಕೇ ಎಂದು ತಾನೇ ನಿರ್ಧರಿಸಿ, ಉಪಾಯ ಮಾಡಿ ನಾಲ್ಕು ಉರುಳಿಗಳನ್ನು ಎರಡಾಗಿ ಲಟ್ಟಿಸಿ ಅವನನ್ನು ಯಾಮಾರಿಸಲು ನೋಡಿದ್ದು ತನ್ನ ಮೂರ್ಖತನವೇ ಎಂದವಳಿಗೆ ಅನಿಸಿತು. ನೆನಪಿನ ಅಡಕತ್ತರಿಯ ಇರಿತ ತಾಳಲಾರದೆ ಹೊಯ್ದಾಡುತ್ತಿದ್ದಳು.
ಪಾಪ, ಬೆಳಗ್ಗೆ ತಿಂಡಿ ತಿಂದು ಹೋದರೆ ಆಫೀಸಿನಲ್ಲಿ ಎಷ್ಟು ಹೊತ್ತಿಗೆ ಊಟ ಮಾಡುತ್ತಾನೋ, ಸದಾ ಕೆಲಸ ಕೆಲಸ, ಮೀಟಿಂಗುಗಳು…ಅವಳ ಹೆತ್ತ ಹೊಟ್ಟೆ ಚುರ್ರೆನ್ನುವುದು ಅಸಹಜವೇ?
ಅವನ ಕೋಪ ಇನ್ನೂ ಆರಿರಲಿಲ್ಲ.
‘ದಿನಾ ನಿಂದು ಒಂದೇ ಗೋಳು ಆಯ್ತು ಕಣಮ್ಮ, ತಟ್ಟೆ ಭರ್ತಿ, ಉಪ್ಪಿಟ್ಟು-ಅವಲಕ್ಕಿ ಒಗ್ಗರಣೆ ತಿಂಡಿಗಳನ್ನು ಗೋಪುರದ ಹಾಗೇ ತುಂಬಿಕೊಂಡು ಬರ್ತೀಯಾ.. ಇಲ್ಲ, ಕಾವಲಿಯಷ್ಟಗಲವೂ ರೊಟ್ಟಿ ತಟ್ಟಿಕೊಂಡು ತಂದು, ತಿನ್ನು ತಿನ್ನು ಅಂತ ನನ್ನ ಪ್ರಾಣ ತಿನ್ತೀಯೇ, ನಾನೇನು ರಾಕ್ಷಸನೇ?…..ಅದೇನು ಕೈಯೋ ನಿಂದು, ರಾಕ್ಷಸ ಗಣ ಇರ್ಬೇಕು ನಿಂದು..’- ಎಂದವನು ಕೋಪದಿಂದ ಕಣ್ಣರಳಿಸಿ ತಾಯಿಯನ್ನು ಕೆಕ್ಕರಿಸಿ ನೋಡಿದಾಗ, ಪ್ರಬಾ , ‘ಹೌದು ಕಣೋ ನಾನು ರಾಕ್ಷಸಿಯೇ…ಪ್ರೀತಿಯ ರಾಕ್ಷಸಿ… ರಕ್ಕಸ ಕಕ್ಕುಲಾತಿ ತುಂಬಿಕೊಂಡಿರೋ ಮೂರ್ಖ ಹೆಂಗಸು ಕಣೋ ನಾನು… ಮಗ ಎಷ್ಟು ಉಗಿದರೂ ಕೋಪ ಮಾಡಿಕೊಳ್ಳೋ ಜಾಯಮಾನದವಳೇ ಅಲ್ಲದ ನಾನು, ನಯ-ನಾಜೂಕಿಲ್ಲದ ಪೆದ್ದು ಹೆಂಗಸು ಕಣೋ…ಸರೀನಾ ’ – ಎಂದು ಹುಚ್ಚು ಕೋಡಿಗಟ್ಟಿದ ತನ್ನ ಕುರುಡುಪ್ರೀತಿಯ ಅದಮ್ಯ ಭಾವುಕ ನುಡಿಗಳು, ಇನ್ನೇನು ತನ್ನ ತುಟಿಯ ದಡದಿಂದ ಜಾರಲಿದ್ದುದನ್ನು ಕಷ್ಟಪಟ್ಟು ಒಳಗೇ ನುಂಗಿಕೊಂಡಳು. ತನ್ನೆದೆಯೊಳಗೆ ಧುಮ್ಮಿಕ್ಕುತ್ತಿದ್ದ ಭಾವನೆಗಳು ತನ್ನ ವ್ಯಾಮೋಹವೋ-ಮಮಕಾರವೋ ಒಂದೂ ಅರ್ಥವಾಗದೆ ಎಲ್ಲವೂ ಅವಳಿಗೆ ಅಯೋಮಯವೆನಿಸಿತು.
ಒಂದೊಂದು ಸಲ ಅವಳಿಗೆ ತನ್ನದು ಎಲ್ಲ ಅತಿ ಅತಿಯೆನಿಸುತ್ತದೆ. ಯಾವುದು ರುಚಿಯಾದ ಪದಾರ್ಥ ಸಿಕ್ಕರೂ ಮಗನಿಗೆ ಮೀಸಲಿಡಬೇಕೆನಿಸುತ್ತದೆ. ಎಷ್ಟೇ ದುಬಾರಿಯಾದರೂ ಅವನಿಗೆ ಇಷ್ಟವಾಗುವ ಚೆಂದದ ಎಲ್ಲ ವಸ್ತುಗಳನ್ನು ತಂದುಕೊಟ್ಟು ಅವನ ಕಣ್ಣುಗಳು ಅರಳುವ ಖುಷಿಯನ್ನು ನೋಡುವ ಹುಚ್ಚು ಆಸೆ ತನಗೆ. ಅವನು ಚಪ್ಪರಿಸಿದರೆ, ಅವಳ ನಾಲಗೆಗೆ ರುಚಿ ಇಳಿಯುತ್ತದೆ. ಅವನುಂಡು ಸಂತೃಪ್ತನಾದರೆ ಇವಳ ಹೊಟ್ಟೆ ಭಾರದಿಂದ ತಣಿಯುತ್ತದೆ.
ದಿನ ಬೆಳಗಾದರೆ ಇದೇ ಕಸರತ್ತು ಹೆತ್ತವ್ವೆ ಪ್ರಭಳಿಗೆ. ಒಮ್ಮೊಮ್ಮೆ ಅವಳಿಗೆ ಅನಿಸುತ್ತದೆ, ತನ್ನದು ಅತೀವ ವ್ಯಾಮೋಹವಾಯಿತೇ?…ಒಬ್ಬನೇ ಮಗ ಎಷ್ಟು ಜನರಿಗಿರುವುದಿಲ್ಲ..ಎಲ್ಲರೂ ತನ್ನ ಹಾಗೆಯೇ ಮಕ್ಕಳ ಬಗ್ಗೆ ಇಂಥ ವ್ಯಸನಿಗಳೇ…ಈ ಅಂಟು ತನ್ನನ್ನು ಸುತ್ತಿಕೊಂಡು ಮೈಯೆಲ್ಲಾ ಜಿಗುಟಾಗುತ್ತಿದೆಯೇ ಎಂಬ ಜಿಜ್ಞಾಸೆಯೂ ಒಮ್ಮೊಮ್ಮೆ.
ಪ್ರಭಾವತಿ ಮತ್ತು ರಾಮಪ್ರಸಾದರಿಗೆ ಮದುವೆಯಾದ ಎಂಟು ವರ್ಷಗಳ ನಂತರ ಹಲವು ಹರಕೆಗಳಿಂದ ಹುಟ್ಟಿ ಬಂದ ಈ ಅಪರೂಪದ ಕುವರ ‘ರಾಕೇಂದು’ ಎಲ್ಲ ಮಕ್ಕಳ ಹಾಗೇ ಆಟ-ಪಾಠ, ಬಾಲ್ಯವನ್ನು ಕಳೆದವನೇ. ತನ್ನ ಬಾಳಿಗೆ ಬೆಳದಿಂಗಳಿನಂತೆ ಆಗಮಿಸಿದ ಅವನಿಗೆ ಪೂರ್ಣಚಂದಿರ ‘ರಾಕೇಂದು’ ಎಂದು ನಾಮಧೇಯ ಮಾಡಿದ್ದಳು ಪ್ರಭಾ . ಅವನ ಹಿಂದೆ ಮತ್ತೊಂದು ಮಗುವಾಗದ್ದಕ್ಕೋ ಏನೋ ಅಂತೂ ಮಗನನ್ನು ತುಂಬಾನೇ ಹಚ್ಚಿಕೊಂಡು ಬಿಟ್ಟಿದ್ದಳವಳು . ಅಗತ್ಯಕ್ಕಿಂತ ಸ್ವಲ್ಪ ಜಾಸ್ತಿಯೇ ಅನ್ನಬಹುದು.
‘ರಾಕೇಂದು’- ಅರ್ಥಾತ್ ರಾಕಿ, ನಿಜಕ್ಕೂ ತಾಯಿಯ ಬಾಳನ್ನು ಬೆಳಗಿ, ಅವಳ ಪ್ರೀತ್ಯಾಭಿಷೇಕದಲ್ಲಿ ಮಿಂದು ಗೆಳೆಯರ ದೃಷ್ಟಿಯಲ್ಲಿ ‘ಲಕ್ಕಿ ಬಾಯ್’ ಎನಿಸಿಕೊಂಡಿದ್ದ.
‘ನಿಮ್ಮಮ್ಮ ಬಿಡಪ್ಪ, ನೀನು ಬೆರಳಲ್ಲಿ ತೋರಿದ್ದನ್ನ ನಿನ್ನ ಕಣ್ಮುಂದೆ ತಂದು ಪ್ರತ್ಯಕ್ಷ ಮಾಡಿಸಿ ಬಿಡೋ ಮ್ಯಾಜಿಷಿಯನ್, ಯೂ ಆರ್ ವೆರಿ ಲಕ್ಕಿ ಕಣೋ …’ -ಎಂದು ಹೊಗಳುವಂತೆ ಮಾತಾಡುವ ಈರ್ಷೆಗೊಳ್ಳುವ ಗೆಳೆಯರು ಹಲವರು .
ಅವರೆಲ್ಲ ಅನ್ನುವ ಮಾತೇನು ಅತಿಶಯೋಕ್ತಿಯಲ್ಲ. ಪ್ರಭಾ, ತನ್ನ ಸಂಬಳದಲ್ಲಿ ಅರ್ಧದಷ್ಟನ್ನು ಮಗನ ಬಯಕೆಗಳನ್ನು ಸಾಕ್ಷಾತ್ಕರಿಸುವುದರಲ್ಲೇ ಸುಖಗೊಳ್ಳುವ ಖಯಾಲಿಯವಳು. ಸದಾ ಮಗನ ತಪ್ಪುಗಳನ್ನು ಒಪ್ಪಿರಿಸಿಕೊಂಡು ಬರುವ ಹೆಂಡತಿಯ ಈ ಗುಣ ಪ್ರಸಾದನಿಗೆ ಕೊಂಚವೂ ಹಿಡಿಸುತ್ತಿರಲಿಲ್ಲ. ಅಸಹನೆ ತೋರುತ್ತಿದ್ದ.
‘ಪಬ್ಬಿ, ಖಂಡಿತಾ ನೀನು ಮಗನನ್ನು ಹಾಳುಮಾಡುತ್ತಿದ್ದೀಯ ಕಣೆ, ಅವನು ಕುಣಿದ ಹಾಗೆಲ್ಲ ಕುಣಿಯಬೇಡ…ಅವನ ಒಳ್ಳೆಯದಕ್ಕೆ ಹೇಳ್ತಿದ್ದೀನಿ, ನೀನು ಸ್ವಲ್ಪ ಸ್ಟ್ರಿಕ್ಟ್ ಆಗಿರಬೇಕು…ಪ್ರೀತಿ ಅನ್ನೋ ಭಾವ ಒಳಗಿರಬೇಕು, ಇಷ್ಟು ದೈನೇಸಿಯಾಗಬಾರ್ದು ’ -ಎಂದು ಅಣಕಿಸಿದಂತೆ ಚುಚ್ಚಿ ನುಡಿದಾಗ, ಪ್ರಭಾ ನಿಜಕ್ಕೂ ಕೆಂಡಾಮಂಡಲವಾಗಿದ್ದಳು.
‘ಇದ್ಯಾವ ಸೀಮೆ ಅಪ್ಪಾರೀ ನೀವು..ಸ್ವಂತ ಮಗನ ಬಗ್ಗೇನೇ ಹೊಟ್ಟುರಿದುಕೊಳ್ತೀರಿ…ನಾನು ಹೇಗಿರಬೇಕು ಅಂತ ನಂಗೆ ಗೊತ್ತಿದೆ, ನೀವು ನನ್ನ ಮತ್ತು ನನ್ನ ಮಗನ ಬಗ್ಗೆ ತಲೆ ಹಾಕಬೇಡಿ’ – ಎಂದು ಖಾರವಾಗಿ ಹೇಳಿದ ಮೇಲೆ ಪ್ರಸಾದ್, ‘ನಿನ್ನ ಹಣೆಬರಹ…ಇನ್ನೊಂದು ದಿನ ನನ್ನ ಹತ್ತಿರ ಹಾಗೇ ಹೀಗೇಂತ ನಿನ್ನ ಗೋಳು ಹೇಳಿಕೊಳ್ಳಕ್ಕೆ ಬರ್ಬೇಡ ಮತ್ತೆ ’ -ಎಂದು ಅಷ್ಟೇ ಖಡಕ್ಕಾಗಿ ಉತ್ತರ ಬಿಸಾಕಿದ್ದ.
ಪ್ರಭಾ ಗೊಣಗಿಕೊಂಡು, ಟಿಫನ್ ಬಾಕ್ಸ್ ಮರೆತುಹೋಗಿದ್ದ ಮಗನ ಲಂಚ್ ಬ್ಯಾಗ್ ತೆಗೆದುಕೊಂಡು ಶಾಲೆಯ ಕಡೆ ಸ್ಕೂಟಿ ತಿರುಗಿಸಿದಳು.
ಪೇರೆಂಟ್ಸ್ ಮೀಟಿಂಗ್ ದಿನ- ರೇಣುಕಾ ಮಿಸ್ ಆಡಿದ ಚುಚ್ಚುಮಾತನ್ನು ಪ್ರಭಾ ಇಂದಿಗೂ ಮರೆತಿಲ್ಲ. ‘ ಏನ್ರೀ, ಅಷ್ಟು ವರ್ಷಗಳಿಂದ ಮೀಟಿಂಗ್ಗೆ ನೀವೊಬ್ಬರೇ ಬರ್ತೀರಾ, ನಿಮ್ಮ ಮನೆಯವರು…’ ಎಂದು ಕರುಣಾಪೂರಿತ ನೋಟ ಬೀರಿ ಲೊಚಗುಟ್ಟಿದ್ದು ಇನ್ನೂ ಅವಳ ಕಣ್ಣಿಗೆ ಕಟ್ಟಿದಂತಿದೆ.
‘ಅಂತೂ ಹತ್ತುವರ್ಷ ಮುಗಿಸಿಬಿಟ್ರೀ ನಿಮ್ಮ ಸಿಂಗಲ್ ಪೇರೆಂಟ್ ಅಪಿಯರೆನ್ಸ್ ನಲ್ಲಿ , ಯೂ ಆರ್ ವೆರಿ ಎಫಿಷಿಯೆಂಟ್ ಕಣ್ರೀ , ಎಲ್ಲ ಜವಾಬ್ದಾರೀನೂ ಒಬ್ರೇ ನಿಭಾಯಿಸಿಬಿಟ್ರಿ…ರಿಯಲಿ ಐ ಅಪ್ರಿಶಿಯೇಟ್ ಯೂ..’ ಎಂದು ಅದೇ ರೇಣುಕಾ ಮಿಸ್ ಮೆಚ್ಚುಗೆಯಂತೆ ಹಂಗಿಸಿದಾಗ ಪ್ರಭಾ ಒಳಗೇ ಹಲ್ಲು ಕಟಕರಿಸಿದಳು.
ಆಕೆ ಹೇಳಿದ್ದರಲ್ಲಿ ಯಾವ ಅಸಹಜತೆಯಾಗಲಿ, ಅತಿಶಯೋಕ್ತಿಯಾಗಲಿ ಇರಲಿಲ್ಲ. ಪ್ರತಿದಿನ ನೂರು ಕಂಪ್ಲೈಂಟ್ಸ್ ತರುತ್ತಿದ್ದ ಮಗನ ತಂದೆಯಾಗಿ ಟೀಚರ್ಸ್ಗಳನ್ನು ಎದುರಿಸಲು ಪ್ರಸಾದ್ ಸಿದ್ಧನಿರಲಿಲ್ಲ. ಅಷ್ಟಕ್ಕೂ ಪ್ರಭಳೇ ಎಲ್ಲಕ್ಕೂ ಗೋಣು ಒಡ್ಡುವಾಗ ತಾನ್ಯಾಕೆ ರಿಸ್ಕ್ ತೆಗೆದುಕೊಳ್ಳುವುದೆಂಬ ಅವನಿಗಂಟಿದ ಜಾಯಮಾನಕ್ಕೆ ತಕ್ಕಂತೆ ಅವಳು, ಅವನಿಗೆ ಕೊಟ್ಟ ಬಿರುದು ‘ಪಕ್ಕಾ ಪಲಾಯನವಾದಿ’.
ನೆನೆಪುಗಳು ಒತ್ತರಿಸತೊಡಗಿತ್ತು.
ಗಂಡನೇ ಸರಿ ಎಂದು ಈಗೀಗ ಅವಳಿಗೆ ಮನವರಿಕೆಯಾಗತೊಡಗಿತ್ತು. ಅವನ ವಾಸ್ತವವಾದಿ ಮನೋಭಾವ ಹೆಚ್ಚು ಪ್ರಾಕ್ಟಿಕಲ್ ದೃಷ್ಟಿಯದ್ದು ಎಂಬ ಭಾವ ಆಳವಾಗತೊಡಗಿತ್ತು.
ಮಗನೇ ಸರ್ವಸ್ವ ಎಂದು ಬಗೆದಿದ್ದ ಪ್ರಭಾ ಯಾವುದನ್ನೂ ಕಷ್ಟ ಎಂದು ಪರಿಗಣಿಸಿರಲಿಲ್ಲ. ಕಾಲೇಜಿನಲ್ಲಿ ಮಗನಿಗೆ ಅಟೆಂಡೆನ್ಸ್ ಷಾರ್ಟೆಜ್ ಆಗಿ ಪರೀಕ್ಷೆಗೆ ಕೂಡಿಸುವುದಿಲ್ಲವೆಂದು ತಿಳಿದು ಬಂದಾಗ ಅವಳು ಹೌಹಾರಿ, ಓಡಿಹೋಗಿ ಪ್ರಿನ್ಸಿಪಾಲ್ ಮುಂದೆ ಮುಖ್ಯಪ್ರಾಣನಂತೆ ನಿಂತು ಕೈಮುಗಿದು ಗೋಗರೆದದ್ದು, ಎಂಜಿನಿಯರಿಂಗ್ ಅಡ್ಮಿಷನ್ ಸಮಯದಲ್ಲಿ ಅವನಿಗೆ ಬೇಕಾದ ಕಾಲೇಜು, ಸಬ್ಜೆಕ್ಟ್ ಗಳಿಗಾಗಿ ಹೋರಾಡಿದ್ದು ಒಂದೇ ಎರಡೇ?…ಎಲ್ಲಕ್ಕಿಂತ ಅವನಿಗೆ ಬೈಕ್ ಆಕ್ಸಿಡೆಂಟ್ ಆದಾಗ ತೊಡೆಗೆ ರಾಡ್ ಹಾಕಿಸಿದ ಆಪರೇಷನ್ನಿನ ಕರ್ಮಕಾಂಡ ನೆನೆದು ಝಿಲ್ಲನೆ ನಡುಗಿದಳು. ಹಲವಾರು ದಿನ ಆಸ್ಪತ್ರೆಯಲ್ಲಿ ಅವಳು ಮಗನ ಬಗಲಿಗೇ ಇದ್ದು ನಡೆಸಿದ ಉಪಚಾರ, ಚಿಕಿತ್ಸೆ…ಕಡೆಗೆ ಅವನ ಮೂತ್ರದ ಚೀಲವನ್ನು ಹಿಡಿದು ಅವನೊಡನೆ ಶೌಚಾಲಕ್ಕೆ ಹೋಗಿ ಬರುತ್ತಿದ್ದುದನ್ನು ನೋಡಿ, ಅದೇ ರೂಮಿನಲ್ಲಿದ್ದ ಇನ್ನೊಬ್ಬ ಪೇಷೆಂಟ್ ಅವಳತ್ತ ಕಕ್ಕುಲಾತಿಯ ದೃಷ್ಟಿ ಬೀರಿ- ‘ಪಾಪ ಎಷ್ಟು ಸೇವೆ ಮಾಡ್ತೀರಮ್ಮ ಮಗನಿಗೆ?!’ ಎಂದು ಲೊಚಗುಟ್ಟಿದಾಗ ಅವಳು, ತುಟಿ ಸೊಟ್ಟಗೆ ಮಾಡಿ, ‘ ಹೋಗೋಗಿ ಇದೇನು ಮಹಾ, ಮಗುವಾಗಿದ್ದಾಗ ಒಂದು-ಎರಡೂ ಬಾಚ್ತಿರ್ಲಿಲ್ವೇ…ಆಗಲೂ ಮಗು, ಈಗಲೂ ಇವನು ನನಗೆ ಮಗೂವೇ’ -ಎಂದು ಅವನ ಬಾಯಿ ಮುಚ್ಚಿಸಿದ್ದು ನೆನಪಾಯಿತು ಅವಳಿಗೆ.
‘ಗ್ರೇಟ್ ಮದರ್ ಕಣೆ ಪಬ್ಬಿ ನೀನು…’ ಎಂದು ಪ್ರಸಾದ್, ಬೆಳೆದ ಮಗನ ಬಾಯಿಗೆ ತುತ್ತಿಡುತ್ತಿದ್ದ ಹೆಂಡತಿಯ ಬೆನ್ನ ಮೇಲೊಂದು ಗುದ್ದಿ ಪ್ರಶಸ್ತಿ ನೀಡಿದ. ಅಷ್ಟೇಕೆ ರಾಕೇಂದು ಓದು ಮುಗಿಸಿ ಕೆಲಸಕ್ಕೆ ಸೇರಿದಾಗಲೂ ಅವಳು ಅಕ್ಕರೆಯಿಂದ ಅವನಿಗೆ ಉಪಚಾರ ಮಾಡಿ ಅಲವತ್ತುಕೊಳ್ಳುವುದನ್ನು ನಿಲ್ಲಿಸಿರಲಿಲ್ಲ. ರಾಕೇಂದುಗೆ ಅಮ್ಮ ಎಂದರೆ ಬಹು ಸದರವೇ. ಅವಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳದೇ ಸದಾ ರೇಗುತ್ತ, ಅವನು ಅವಳ ಮೇಲೆ ಸಿಡಿಮಿಡಿಗುಟ್ಟುತ್ತಿದ್ದರೂ ಪ್ರಭಾ ತಣ್ಣಗೆ ನಗುವ ಪ್ರಶಾಂತೆ. ಆಫೀಸಿಗೆ ಹೊರಟು ನಿಂತವನು ಅರೆ ಹೊಟ್ಟೆ ತಿಂದನೆಂದೆನಿಸಿ ಶೂಸ್ ಹಾಕಿಕೊಲ್ಲುತ್ತಿದ್ದವನ ಬಾಯಿಗೆ ತುತ್ತಿಟ್ಟು ಎಷ್ಟೋ ಸಲ ಮಗನಿಂದ ಬೈಸಿಕೊಂಡಿದ್ದಾಳೆ – ‘ಏನಮ್ಮ ನಿಂದೊಳ್ಳೆ ಗೋಳು?…ತಿನ್ಸೀ ತಿನ್ಸಿ ನನ್ನ ಗುಡಾಣ ಮಾಡಿಬಿಡ್ತೀ..’ ಎಂದು ಅವಳ ಕೈಯನ್ನು ದೂರ ತಳ್ಳಿ ಹೊರಟು ಬಿಟ್ಟಿದ್ದಾನೆ.
ಅಂಥ ಮಗ ಇಂದು ಎಂಥ ಮಾತನಾಡಿ ಬಿಟ್ಟ ಎಂದವಳ ಹೃದಯ ಬಿರಿದುಹೋಗಿದೆ… ಪ್ರಭಾ ಬೆಳಗ್ಗಿಂದಲೂ ಗಂಡನ ಹತ್ತಿರ ಹೀಗೆಂದು ಹತ್ತು ಸಲವಾದರೂ ಹೇಳಿಕೊಂಡಿದ್ದಾಳೆ. ಪ್ರಸಾದನಿಗೆ ಹೆಂಡತಿಯ ಮಾತು ಕೇಳಿ ನಗುವುದೋ ಅಳುವುದೋ ತಿಳಿಯದಾಯಿತು.
‘ನಿನ್ನ ಪ್ರೀತಿಯ ಮಗ ಕಣೆ ಅವನು…ಯಾಕಿಷ್ಟು ಅವನ ಮಾತಿಗೆ ಅರ್ಥ ಹಚ್ತೀಯಾ…ಬಿಟ್ಹಾಕು..’ ಎಂದು ನಕ್ಕು ಸುಮ್ಮನಾದ. ಆದರೆ ಅವಳು ಸುಮ್ಮನಾಗಲಿಲ್ಲ.
ರಾಕೇಂದು ಹಗಲೂ ರಾತ್ರಿ ಕಷ್ಟಪಟ್ಟು ಓದಿ ಡಿಸ್ಟಿನ್ ಕ್ಷ ನ್ನಲ್ಲಿ ಎಂಜಿನಿಯರಿಂಗ್ ಪಾಸ್ ಮಾಡಿದ್ದ. ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಒಳ್ಳೆಯ ಕಂಪೆನಿಯಲ್ಲಿ ಕೆಲಸ ಸಿಕ್ಕಿತ್ತು. ಕೈ ತುಂಬಾ ಸಂಬಳ. ಪ್ರಭಳ ಸಂತೋಷಕ್ಕೆ ಪಾರವೇ ಇಲ್ಲ.
‘ನೋಡಿದ್ರಾ ನನ್ನ ಮಗನ್ನ…ನೀವು ಸಾಥ್ ಕೊಡದಿದ್ರೂ ನನ್ನ ಅಚಿವ್ ಮೆಂಟ್ ಇವನು, ಅಂತಾರೆ ನನ್ನ ಫ್ರೆಂಡ್ಸ್ ಎಲ್ಲ ‘ ಎಂದು ಜಂಭ ಕೊಚ್ಚಿಕೊಂಡಾಗ , ರಾಕೇಂದು ರಪ್ಪೆಂದು ಹಾಗೆ ತಿರುಗೇಟು ಕೊಟ್ಟು ಬಿಡೋದೇ? ..ಪ್ರಭಾ ತತ್ತರಿಸಿದಳು.
‘ ನೀನು ದಿನಾ ಕಾಲೇಜಿಗೆ ಹೋಗಿ ಪಾಠ ಕೇಳಿ ಎಕ್ಸಾಮ್ ಬರೆದೆಯೇನಮ್ಮ…ಬರೆದೋನು ನಾನು’ ಎಂದಾಗ ಅವಳು ತಟ್ಟನೆ ಸಪ್ಪಗಾದರೂ ಯೋಚಿಸಿದನಂತರ ಹೌದಲ್ವಾ ಎನಿಸಿತವಳಿಗೆ . ಸಣ್ಣ ಸಣ್ಣ ಮಾತಿಗೂ ತಾನೇಕೆ ಇಷ್ಟು ಸೂಕ್ಷ್ಮ ಆದೆ ಎಂದು ತನ್ನಲ್ಲೇ ತಾನು ನಕ್ಕು ಸಮಾಧಾನ ಅಪ್ಪಿಕೊಳ್ಳ ಲೆತ್ನಿಸುವಳು. ಛೆ..ಎಂಥೆಂಥ ತ್ಯಾಗ ಜೀವಿ ತಾಯಂದಿರು ಇರುವಾಗ ತನಗ್ಯಾಕೆ ಇಷ್ಟು ಸಂಕುಚಿತ ಬುದ್ದಿ ಎಂದು ತಲೆ ಮಟುಕಿಕೊಂಡಳು.
ಆದರೂ ರಾಕೇಂದು ಹಾಗನ್ನಬಹುದೇ? ಅವನಾಡಿದಾಗ ಒಳಗೇನೋ ಛಳಕು ಹೊಡೆದ ಹಾಗೆ…ಇಡೀ ದಿನ ತಲೆ ಬಿರುಕು ಬಿಟ್ಟ ಹಾಗೇ ನೋವು…ಯಾವುದನ್ನೂ ಹಚ್ಚಿಕೊಳ್ಳದ ಪ್ರಸಾದ್ ಥರ ತಾನಿರಬಾರದೇ ಎಂದು ತನಗೆ ತಾನೇ ಛೀಮಾರಿ ಹಾಕಿಕೊಂಡಳು.
ಅಂದು ಆದದ್ದಾದರೂ ಇಷ್ಟೇ- ಪ್ರಭಾ ತನ್ನ ಕಚೇರಿಯ ಮೀಟಿಂಗ್ ಗಾಗಿ ಮೂರು ದಿನಗಳಿಂದಲೂ ಒಂದೇಸಮನೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಳು. ಅವಸರ-ಗಡಿಬಿಡಿಯಲ್ಲಿ ತಿಂಡಿ ಮಾತ್ರ ಮಾಡಿ, ಗಂಡ-ಮಗನಿಗೆ ಕೊಟ್ಟು ಆಫೀಸಿಗೆ ಹೊರಟುಹೋಗಿದ್ದಳು. ರಜಾ ದಿನ- ಪ್ರಸಾದ್ ಮನೆಯಲ್ಲಿರಲಿಲ್ಲ. ಊಟದ ಹೊತ್ತಿಗೆ ಹಿಂತಿರುಗಿದ ಪ್ರಭಾ ಸೆರಗು ಕಟ್ಟಿ, ಅಡುಗೆ ಮನೆ ಹೊಕ್ಕಳು.
‘ಅಮ್ಮ ತುಂಬಾ ಹಸಿವು, ನೀನು ಅಡುಗೆ ಈಗ ಶುರು ಮಾಡಿ ಯಾವಾಗ ಮುಗಿಸ್ತೀಯಾ..ನಡಿ ಹೊರಗೆ ಊಟ ಮಾಡೋಣ’ ಎಂದು ಮೊದಲ ಬಾರಿ ಮಗ ಹೇಳಿದ್ದನ್ನು ಕೇಳಿ ಅವಳಿಗೆ ಸಂಭ್ರಮವೋ ಸಂಭ್ರಮ. ಸಂಬಳ ತರುವ ಮಗನನ್ನು ಹೆಮ್ಮೆಯಿಂದ ದಿಟ್ಟಿಸುವಾಗ ದೃಷ್ಟಿ ತಾಕೀತೆಂದು ಅತ್ತ ಮುಖ ತಿರುಗಿಸಿ ವ್ಯಾನಿಟಿ ಬ್ಯಾಗ್ ಎತ್ತಿಕೊಂಡಳು. ಗಂಡ ಮೊದಲ ಹುಟ್ಟುಹಬ್ಬಕ್ಕೆ ಹವಳ-ಮುತ್ತಿನ ಸರ ತಂದುಕೊಟ್ಟಾಗಲೂ ಇಷ್ಟು ಖುಷಿಯಾಗಿರಲಿಲ್ಲ.
ಆರಡಿ ಎತ್ತರ ಬೆಳೆದ ಮಗನ ಗೋಧಿ ಬಣ್ಣದ ಮುಖದಲ್ಲಿ ಚಿಗುರು ಮೀಸೆ ಕಂಡು ನಾಚಿಕೊಂಡಿದ್ದಳು. ಅವನ ಪಕ್ಕದಲ್ಲಿ ಕಾರಿನಲ್ಲಿ ಹೋಗಿ ಕುಳಿತಾಗ ಈ ಪ್ರಪಂಚದಲ್ಲಿ ತನಗೊಬ್ಬಳಿಗೆ ಮಗ ಇರೋದು ಎಂಬ ವಿಶಿಷ್ಟ ಭಾವ ಕೆನೆದಿತ್ತು.
ಅವರು ಊಟ ಮಾಡಿಬಂದಾಗ ಪ್ರಸಾದ್ ಅದೇ ತಾನೇ ಬಂದು ನಡುಮನೆಯಲ್ಲಿ ಟಿ ವಿ ನೋಡುತ್ತ ಕುಳಿತಿದ್ದ.
ಮಗ್ಗುಲಿಗೆ ಬಂದು ಕೂತ ಹೆಂಡತಿಯನ್ನು ಕುರಿತು ಅವನು ತುಂಬಾ ಕ್ಯಾಷುಯಲ್ಲಾಗಿ ತಮಾಷೆ ಮಾಡಿದ: ‘ಪಬ್ಬಿ, ಅಂತೂ ನಿನಗೆ ಇವತ್ತು ರೆಸ್ಟು, ಅಡುಗೆ ಮಾಡೋದನ್ನ ತಪ್ಪಿಸಿಕೊಂಡು ಬಿಟ್ಟೆ’ ರಪ್ಪನೆ ರಾಕೇಂದು ಉತ್ತರಿಸಿದ: ‘ ರೆಸ್ಟೇ… ನಾನಿವತ್ತು ಅಮ್ಮನಿಗೆ ಊಟ ಹಾಕಿಸಿದೆನಲ್ಲ’ ಅವನ ದನಿಯಲ್ಲೇನೋ ಒಂದು ಬಗೆಯ ಹಮ್ಮು ಇಣುಕಿದಂತೆ ಭಾಸವಾಗಿ ಅವಳಿಗೆ ಮುಖಕ್ಕೆ ರಾಚಿದಂತಾಗಿತ್ತು.
‘ಹೌದು ಮಾರಾಯ, ನಿಮ್ಮಮ್ಮನಿಗೆ ಒಂದು ದಿನ ಊಟ ಹಾಕಿಸಿಬಿಟ್ಟೆ..ಧರ್ಮರಾಯ..’
ಮನಸ್ಸು ಒಳಗೆ ಕರಕ್ಕೆಂದಿತು. ಗಂಡ ಏನೂ ಆಗದಂತೆ ಹಸನ್ಮುಖನಾಗಿ ಕುಳಿತಿದ್ದರೂ ತನಗೇಕೆ ದುಗುಡ? ಅವಳಿಗೆ ಅರ್ಥವಾಗಲಿಲ್ಲ. ಮೌನವಾಗಿ ಜಾಗ ಖಾಲಿ ಮಾಡಿದಳು.
ಮರುದಿನ ಅವಳ ಮನಸ್ಸು ಅಡ್ಡಾದಿಡ್ಡಿ. ಹತ್ತಾದರೂ ಪ್ರಭಾ ತಿಂಡಿ ಮಾಡಲು ಮೇಲೇಳಲಿಲ್ಲ.
‘ ಪಬ್ಬಿ ಗಂಟೆ ನೋಡು ಎಷ್ಟಾಯಿತು…?’ ಎಂದ ಪ್ರಸಾದನ ಮಾತಿಗೆ ಮಗ ಏನನ್ನಬೇಕು?
‘ದಿನಾ ನಿನಗೆ ಹೊರಗೆ ಊಟ-ತಿಂಡಿ ಹಾಕಿಸಕ್ಕೆ ಆಗಲ್ಲಮ್ಮ’
ಶಾಕ್ ಹೊಡೆಸಿಕೊಂಡವಳಂತೆ ಮೆಟ್ಟಿಬಿದ್ದಳು ಪ್ರಭಾ. ಹೊಟ್ಟೆಯೊಳಗೆನೋ ಕಿವುಚಿದಂತಾಯ್ತು ! ಕಣ್ಣಲ್ಲಿ ಬಳಬಳ ನೀರು….ತಟ್ಟನೆದ್ದು ಅಡುಗೆಮನೆ ಸೇರಿದಳು. ಇಡೀ ದಿನ ಮಂಕಾಗಿದ್ದ ಹೆಂಡತಿಯನ್ನು ಮತ್ತೆ ಕಿಚಾಯಿಸಿದ ಪ್ರಸಾದ್. ‘ ಅಡುಗೆ ಮಾಡಕ್ಕೆ ಬೋರಾದರೆ ಹೇಳು, ಸ್ವಿಗ್ಗಿ ಮಾವನಿಗೆ ಕಾಲ್ ಮಾಡೋಣ’
ಪ್ರಭಾ, ಗಂಡನ ಮಾತಿಗೆ ಪ್ರತಿಕ್ರಿಯಿಸದೆ ಕಣ್ಣು ಕೆಂಪಾಗಿಸಿಕೊಂಡು ನೋಟದಿಂದ ಸುಟ್ಟಳು. ಅವನ ಜೊತೆ ನೀವೂ ಸೇರ್ಕೊಂಡ್ರಾ ಎನ್ನುವಂತೆ. ಮೂರು ದಿನ ತನ್ನಲ್ಲೇ ಕುದ್ದುಕೊಂಡ ಮೇಲೆ ಗಂಡನ ಬಳಿ ಮೆಲ್ಲನೆ ತನ್ನ ಒಳಕುದಿತ ತೋಡಿಕೊಂಡಳು. ‘ಅಲ್ಲಾರೀ, ಅವನ ಸೊಕ್ಕು ನೋಡಿದ್ರಾ, ಒಂದು ದಿನ ಹೊರಗೆ ಊಟ ಹಾಕಿಸಿದವನಿಗೇ ಇಷ್ಟಿದ್ರೆ, ಇನ್ನು….’ ಉಳಿದ ಮಾತನ್ನು ನುಂಗಿಕೊಂಡಳು.
‘ಅಯ್ಯೋ ಪೆದ್ದೇ, ಇಷ್ಟು ಸಣ್ಣ ಮಾತನ್ನೆಲ್ಲ ಅಷ್ಟು ಸೀರಿಯಸ್ಸಾಗಿ ತೊಗೋತಿಯಲ್ಲ, ನಿನ್ನ ಬುದ್ದೀಗೆ ಏನು ಹೇಳೋಣ?..ಇಷ್ಟು ದಿನ ಇಲ್ಲದ್ದು ಈಗೇನು…ಹುಡುಗುಡುಗಾಗಿ ಆಡ್ಬೇಡ ‘ ಎಂದು ಉದಾಸೀ ನತೆಯಿಂದ ಅಂದು ಜಾಗ ಖಾಲಿ ಮಾಡಿದ.
ಪ್ರಭಳಿಗೆ ಮಗನ ಮೇಲೆ ಹುಸಿಮುನಿಸು. ಆದರೆ ಅದನ್ನು ಸಾಧಿಸಲು ಆಗುವುದಿಲ್ಲವೆಂದು ಅವಳಿಗೂ ಗೊತ್ತು. ಈ ಮುಸುಕಿನ ಗುದ್ದಾಟ ಸ್ವಲ್ಪ ದಿನ ನಡೆಯಿತು. ಮಗನ ದಾಕ್ಷಿಣ್ಯವೇ ಬೇಡ ಎಂದು ಅವನ ಯಾವ ತಿಂಡಿ-ತೀರ್ಥ-ಉಡುಗೊರೆಗಳಿಗೂ ಕೈ ಒಡ್ಡದೆ, ಗೇಣು ಬಿಡು ಎಂದರೆ ಅವನಿಂದ ಮಾರು ಬಿಟ್ಟಳು. ಆ ನಿರ್ಧಾರವೂ ಕೆಲವು ದಿನಗಳಲ್ಲಿ ಮುರಿದುಬಿತ್ತು. ಸಣ್ಣ ಸಣ್ಣ ಯೋಚನೆಗಳನ್ನು ಹೆಣೆಯುತ್ತ ಅದು ಹುತ್ತವಾದಾಗ ತನ್ನದು ಮನೆ ಹಾಳು, ಬೇಡದ—ವ್ಯರ್ಥ ಚಿಂತೆಗಳೆಂದು ಬಿಟ್ಟು ಹಾಕಿ ಸ್ಥಿತಪ್ರಜ್ಞ ತೆಯಿಂದ ಇರಲು ಪ್ರಯತ್ನಿಸಿದಳು.
ಹೆಂಡತಿಯ ಯೋಚನೆಯ ದಿಕ್ಕನ್ನು ಗುರುತಿಸಿದ ರಾಮಪ್ರಸಾದ್ ಗದರಿಕೊಂಡ:
‘ಹೆತ್ತ ಮಗನ ನಡವಳಿಕೆಯಲ್ಲೇ ಯಾಕೆ ಹುಳುಕು ಹುಡುಕುತ್ತೀಯೇ..ನಿಶ್ಚಿಂತೆಯಿಂದಿರು…ಸುಮ್ನೆ ಕೆರ್ಕೊಂಡು ಗಾಯ ಮಾಡ್ಕೋಬೇಡ ’
‘ಹೌದು, ನೀವು ಹೇಳೋದೂ ಸರಿಯೇ..ಯಾರನ್ನೂ, ಯಾವುದನ್ನೂ ಹಚ್ಕೋಬಾರ್ದು…ವೈರಾಗ್ಯದಿಂದ ಇದ್ದುಬಿಡಬೇಕು’-ಎಂದು ಗೊಣಗಿದಳು ಪ್ರಭಾ.
‘ಹಾಗ್ಯಾಕಂತೀ…ನಿರ್ಲಿಪ್ತವಾಗಿರು, ಎಲ್ಲ ತಾನೇ ತಾನಾಗಿ ಸರಿ ಹೋಗತ್ತೆ…ಇನ್ನೂ ಸೊಸೆ ಬಂದಿಲ್ಲ..ಆಗ್ಲೇ ಮಗನ ಮೇಲೆ…’ ಎಂದು ಮಾತನ್ನು ಅರ್ಧಕ್ಕೇ ನಿಲ್ಲಿಸಿದ ರಾಮಪ್ರಸಾದ್. ಅವನ ಮಾತುಗಳು ಪ್ರಭಳ ಮೇಲೆ ಪರಿಣಾಮ ಬೀರಿ ಅವಳು ತನ್ನ ಮನಸ್ಸಿಗೊಂದು ಬಿರಡೆ ಒತ್ತಿ ಅಲ್ಲಿಂದ ಎದ್ದು, ತನ್ನ ಗೆಳತಿಯರ ಒಕ್ಕೂಟದತ್ತ ನಡೆದಳು.
ಅಲ್ಲೂ ನೂರೆಂಟು ರಂಪ ರಾದ್ಹಾಂತದ ಅದೇ ಮಾತುಗಳು. ಸೊಸೆಯರ ಬಗ್ಗೆ, ಅತ್ತೆಯರ ಬಗ್ಗೆ, ಅತ್ತಿಗೆ-ನಾದಿನಿಯರ ಬಗ್ಗೆ ಹೀಗೆ. ಯಾಕೋ ಈ ತಪ್ಪುಗ್ರಹಿಕೆಯ ಭಾವ- ಅಭಿಪ್ರಾಯಗಳ ಬಾಲಿಶ ಅಭಿವ್ಯಕ್ತಿಗಳಿಗೆ ಕಿವಿಯಾದಾಗ, ತನ್ನದೂ ತೀರಾ ಅತಿರೇಕವಾಯಾಯಿತೇ ಎನಿಸಿತವಳಿಗೆ.
ಮೂರು ವರ್ಷ ಕಳೆಯುವುದರಲ್ಲಿ ಆ ಮನೆಯಲ್ಲಿ ಏನೇನೋ ಬದಲಾವಣೆಗಳಾಗಿದ್ದವು. ಮಗನಿಗೊಂದು ಪ್ರೋಮೊಷನ್ನು, ಮದುವೆಯಾಗಿ ಮನೆಗೊಬ್ಬಳು ಸೊಸೆ, ಅಜ್ಜಿ-ತಾತನನ್ನು ಕಾಡುವ ಮೊಮ್ಮಗ ಬಂದಿದ್ದು ಮನೆಯ ಖದರ್ರೇ ಬೇರೆಯಾಗಿ ಹೋಗಿತ್ತು.
ಅಂದು- ಮೊಮ್ಮಗ ಟಿವಿ ನೋಡುತ್ತ ಕೂತಿದ್ದವನು ಅನಾಮತ್ತು ಎದ್ದು ಬಂದು ಅಜ್ಜಿಗೆ ಡಿಶ್ಶುಂ ಡಿಶ್ಶುಂ ಮಾಡಿ ಜೋರಾಗಿ ಒದೆಯತೊಡಗಿದ. ಪ್ರಭಾಗೆ ಮಗುವಿನ ಆಟ ಜೋರು ನಗೆ. ‘ಛೀ ಕಳ್ಳ’ ಎಂದು ಮಮತೆಯಿಂದ ಅವನ ಕೆನ್ನೆ ಸವರಿ ಅವನ ತೊದಲು ಮಾತನ್ನು ಎಂಜಾಯ್ ಮಾಡತೊಡಗಿದಳು. ಅಲ್ಲೇ ಪೇಪರ್ ಓದುತ್ತ ಕುಳಿತಿದ್ದ ರಾಮಪ್ರಸಾದ್ ಕೀಟಲೆಯ ದನಿಯಲ್ಲಿ – ‘ ಲೇ ಪಬ್ಬಿ, ನೀನು ಎತ್ತಿ ಆಡಿಸಿದ-ಪ್ರೀತಿ ಮಗು ನೋಡು ನಿನ್ನ ಹೇಗೆ ಒದೀತಾ ಅವಮರ್ಯಾದೆ ಮಾಡ್ತಿದ್ದಾನೆ..’-ಎಂದು ಕೆಣಕಿದ.
‘ಥೂ ನಿಮ್ಮ..ಏನ್ ಮಾತಾಡ್ತೀರಾ…ಅದು ಮಗು…ನಮ್ಮ ಕರುಳ ಬಳ್ಳಿ ಕಣ್ರೀ …ಪಾಪ ಅದೇನು ಮಾಡಿದ್ರೂ ಚೆಂದ… ಇಲ್ಲದ್ದೆಲ್ಲ ಅರ್ಥ ಕೊಡಬೇಡಿ..’ ಎಂದು ಪ್ರಭಾ ಮೊಮ್ಮಗನನ್ನು ಉಕ್ಕಿಬಂದ ಅಕ್ಕರೆಯಿಂದ ಬಿಗಿದಪ್ಪಿ ಕೆನ್ನೆಯ ಮೇಲೆ ಹೂ ಮುತ್ತನ್ನೊತ್ತಿದಳು.
ಆ ದೃಶ್ಯವನ್ನು ನೋಡುತ್ತಿದ್ದ ರಾಮಪ್ರಸಾದ್ ಅರ್ಥಗರ್ಭಿತವಾಗಿ ನಕ್ಕ.
- ವೈ.ಕೆ.ಸಂಧ್ಯಾ ಶರ್ಮ
