ಯಾಕೋ ನೆನಪಾದರು ಅಶ್ವಥ್ : ಗಣೇಶ ಕಾಸರಗೋಡು

ಗಾಯಕ ಸಿ ಅಶ್ವಥ್ ಗಾಯನ ಎಲ್ಲರಿಗೂ ಅಚ್ಚುಮೆಚ್ಚು, ಆದರೆ ಇಂಥಾ ಅಶ್ವಥ್ ಅವರ ಮತ್ತೊಂದು ಮುಖವನ್ನು ಗಣೇಶ ಕಾಸರಗೋಡು ನೋಡಿದ್ದು ‘ಕನ್ನಡವೇ ಸತ್ಯ’ ಎಂಬ ಬೃಹತ್ ಸಂಗೀತ ಸಮಾರಾಧನೆಯಲ್ಲಿ. ಅದರ ಕುರಿತು ಖ್ಯಾತ ಪತ್ರಕರ್ತರಾದ ಗಣೇಶ ಕಾಸರಗೋಡು ಅವರು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ..

‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ‘ಚಿತ್ರಸೌರಭ’ ಸಿನೆಮಾ ವಿಭಾಗದ ಇನ್’ಚಾರ್ಜ್ ಆಗಿದ್ದಾಗಲೊಮ್ಮೆ ಗಾಯಕ ಸಿ.ಅಶ್ವಥ್ ಬಿರುಗಾಳಿಯಂತೆ ನಮ್ಮ ಕಚೇರಿಯ ಒಳ ನುಗ್ಗಿದ್ದರು! ಅದ್ಯಾವ ರಭಸದಿಂದ ಒಳಕೋಣೆಯಲ್ಲಿ ಕುಳಿತಿದ್ದ ನನ್ನ ಟೇಬಲ್ ಬಳಿ ಬಂದಿದ್ದರೆಂದರೆ ಎಲ್ಲಾ ಸ್ಟಾಫ್ ಅಚ್ಚರಿಯಿಂದ ದಿಗ್ಮೂಡರಾಗಿದ್ದರು. ಕೆಲವರಿಗಂತೂ ಖುಷಿಯೋ ಖುಷಿ! ‘ಆ ಸಿಡುಕನನ್ನು ಈ ಸಿಡುಕ ಇಂದು ಬಲಿ ಹಾಕಿ ಬಿಡ್ತಾನೆ’ – ಎನ್ನುವ ವಿಕೃತ ಸಂತೋಷಿಗಳೂ ನಮ್ಮಲ್ಲಿ ಇದ್ದರೆನ್ನಿ.

ಒಳ ಬಂದವರೇ ಅಂದಿನ ‘ಚಿತ್ರಸೌರಭ’ ಸಂಚಿಕೆಯನ್ನು ಟೇಬಲ್ ಮೇಲೆ ಎಸೆದು ‘ಅವನ್ಯಾವ ಘನಂಧಾರಿ ಮನುಷ್ಯ ಅಂತ ಇಷ್ಟು ದೊಡ್ಡ ಐಟಮ್ ಹಾಕಿದ್ದಿ? ಆತ ಜಸ್ಟ್ ಪೋಸ್ಟ್ ಮ್ಯಾನ್. ವರ್ಷಾನುಗಟ್ಟಲೆಯಿಂದ ಸಂಗೀತ ಸಾಧನೆ ಮಾಡುತ್ತಿರುವ ನನ್ನ ಬಗ್ಗೆ ಇಷ್ಟೊಂದು ಪುಟ್ಟ ಐಟಮ್ ಹಾಕಿ, ಆ ಪುಟಗೋಸಿ ಫಲ್ಗುಣನ ಬಗ್ಗೆ ಅರ್ಧ ಪುಟ ಬರ್ದಿದ್ದೀಯಲ್ಲಾ? ನಿಂಗೇನು ತಲೆಗಿಲೆ ನೆಟ್ಟಾಗಿದೆಯಾ ಹೇಗೆ?’ – ಅಶ್ವಥ್ ಮೇಲಿನ ಗೌರವ ಹೊರಟು ಹೋಗಿತ್ತು. ಅರ್ಧಕ್ಕೇ ತಡೆದು ನಾನು ಆರ್ಭಟಿಸಿದೆ : ‘ಎದ್ದೇಳೋ ಮೇಲೆ, ಬಂದ್ಬಿಟ್ಟ ಮಹಾ ದೊಡ್ಡ ಮನುಷ್ಯ. ಜಾಗ ಖಾಲಿ ಮಾಡು. ನಮ್ಮಲ್ಲಿ ಸಂಪಾದಕ ಮಂಡಳಿ ಇದೆ. ಯಾವುದನ್ನು ಹಾಕಬೇಕು, ಯಾವುದನ್ನು ಬಿಡಬೇಕು ಅನ್ನೋದನ್ನು ಅವರು ನನ್ಗೆ ಸೂಚಿಸ್ತಾರೆ. ನೀನ್ಯಾರೋ ನನ್ಗೆ ಹೇಳಲು? ನಿನ್ನ ತಲೆ ನೆಟ್ಟಾಗಿದ್ಯಾ ಮೊದ್ಲು ಚೆಕ್ ಮಾಡು…’ – ಎಂದು ಹೇಳುತ್ತಾ ಕುರ್ಚಿಯನ್ನು ಎಳೆದು ಬಿಟ್ಟೆ!

ಕ್ಷಣಕಾಲ ತಬ್ಬಿಬ್ಬಾದರು ಅಶ್ವಥ್. ನಂತರ ಕೂಲಾಗಿ ನನ್ನ ಕಿವಿಯಲ್ಲಿ ಹೇಳಿದರು : ‘ಸ್ವಲ್ಪ ಮೆಲ್ಲಗೆ ಮಾತಾಡಿ ಗಣೇಶ್. ನಿಮ್ಮ ಸ್ಟಾಫ್ ನನ್ನ ಬಗ್ಗೆ ತಪ್ಪು ತಿಳ್ಕೊತಾರೆ, ದಯವಿಟ್ಟು ರೇಗ್ಬೇಡಿ…’ – ಇಷ್ಟು ಹೇಳಿದ್ದಲ್ಲದೇ ಕ್ಷಮೆ ಕೇಳುತ್ತಾ ಹೊರಟು ಹೋಗಿದ್ದರು ವಿಶ್ವವಿಖ್ಯಾತ ಗಾಯಕ ಅಶ್ವಥ್!

ಇಂಥಾ ಅಶ್ವಥ್ ಅವರ ಮತ್ತೊಂದು ಮುಖವನ್ನು ನಾನು ನೋಡಿದ್ದು ‘ಕನ್ನಡವೇ ಸತ್ಯ’ ಎಂಬ ಬೃಹತ್ ಸಂಗೀತ ಸಮಾರಾಧನೆಯಲ್ಲಿ. ಇದಕ್ಕೆ ಸಂಬಂಧಿಸಿದ ಪತ್ರಿಕಾಗೋಷ್ಠಿಯಲ್ಲಿ ಅಶ್ವಥ್ ‘ಹತ್ತು ಸಾವಿರ ಜನ ಸೇರಿದರೆ ಸಾಕಪ್ಪಾ…ಸೇರದಿದ್ದರೆ ನಮ್ಮ ಗತಿ ಏನಪ್ಪಾ?’ – ಎಂದು ರಾಗವೆಳೆದಿದ್ದರು. ಆದರೆ ಅಂದು ಅರಮನೆ ಮೈದಾನದಲ್ಲಿ ಕಂಡದ್ದೇನು?
ಕೆಳಗಡೆ ಜನಪ್ರವಾಹ ; ಮೇಲ್ಗಡೆ ಮೋಡಗಳ ಪ್ರವಾಹ! ಇಂಥಾದ್ದೊಂದು ಕ್ರೌಡನ್ನು ಕಂಡು ಕೇಳರಿಯದ ಅಶ್ವಥ್ ವೇದಿಕೆಯ ಎಡ ಬದಿಯ ಶಾಮಿಯಾನಾದೊಳಗೆ ಏಕಾಂಗಿಯಾಗಿ ಕುಳಿತಿದ್ದರು. ಹೇಗೋ ಒಳ ಸೇರಿಕೊಂಡ ನನ್ನನ್ನುದ್ದೇಶಿಸಿ ಅಶ್ವಥ್ ಗೊಣಗಿಕೊಂಡರು : ‘ಮಳೆ ಬರುತ್ತೇನಪ್ಪಾ ಗಣೇಶಾ? ಇಷ್ಟೊಂದು ಜನ ಸೇರಿರುವಾಗ ಮೋಡ ಕೈಕೊಟ್ಟರೆ ಗತಿಯೇನಪ್ಪಾ…?’ – ಎಂದು ಹೇಳುತ್ತಾ ಹೇಳುತ್ತಾ ಗದ್ಗದಿತರಾಗಿದ್ದರು ಅಶ್ವಥ್.

ಸುಮ್ಮನೇ ಹೆಗಲ ಮೇಲೆ ಕೈ ಹಾಕಿ ಮೃದುವಾಗಿ ಸ್ಪರ್ಶಿಸಿದೆ : ‘ಅಶ್ವಥ್’ಜೀ ಇದೊಂದು ಯಜ್ಞ, ಸಂಗೀತ ಯಜ್ಞ. ವರುಣನಿಗೂ ಜವಾಬ್ದಾರಿಯಿದೆ. ಸುಮ್ಮನೇ ಆತಂಕ ಪಡಬೇಡಿ. ನಿಮಗಾಗಿಯೇ ಲಕ್ಷಾಂತರ ಮಂದಿ ಇಲ್ಲಿ ಜಮಾಯಿಸಿದ್ದಾರೆ. ಹಾಡಿ ರಂಜಿಸಿ. ನಿಮಗೆ ಒಳ್ಳೆದಾಗುತ್ತದೆ…’ – ಎಂದು ಹಾರೈಸುತ್ತಾ ವೇದಿಕೆ ಕೆಳಗೆ ಹೊರಟು ಹೋದೆ. ಮಳೆ ಬರಲಿಲ್ಲ. ಅಶ್ವಥ್ ಹಾಡಿದರು. ಕುಣಿದರು. ಕುಣಿಸಿದರು. ಒಂದು ಅಭೂತಪೂರ್ವ ಸಂಗೀತ ಯಜ್ಞಕ್ಕೆ ನಾವೆಲ್ಲಾ ಸಾಕ್ಷಿಯಾದೆವು. ಮಾರನೇ ದಿನ ಅಶ್ವಥ್ ಫೋನ್ ಮಾಡಿದರು : ‘ಬದುಕು ಸಾರ್ಥಕ ಕಣಪ್ಪ ಗಣೇಶ…’ – ಒಂದು ಕ್ಷಣ ‘ಸಂಯುಕ್ತಕರ್ನಾಟಕ’ ಪತ್ರಿಕಾ ಕಚೇರಿಯಲ್ಲಿ ನಾನು ಅಶ್ವಥ್ ಅವರಿಗೆ ಹಾಕಿದ ಧಮಕಿ ನೆನಪಾಯಿತು : ‘ಎದ್ದೆಳೋ ಮೇಲೆ, ಬಂದ್ಬಿಟ್ಟ ಮಹಾ ದೊಡ್ಡ ಮನುಷ್ಯ…’ – ಇನ್ನೂ ಏನೇನೋ…ಹೌದು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳುತ್ತಿದ್ದೇನೆ, ಅಶ್ವಥ್ ದೊಡ್ಡ ಮನುಷ್ಯನೇ…ಅಂದು ಎದ್ದು ನಿಲ್ಲಲು ಅಶ್ವಥ್ ಅವರಿಗೆ ಆರ್ಡರ್ ಮಾಡಿದ್ದೆ, ಇಂದು ಎದ್ದು ನಿಂತು ನಾನೇ ಗೌರವಿಸುತ್ತಿದ್ದೇನೆ : ‘ಒಪ್ಪಿಸಿಕೋ ಗುರುವೇ…’


  • ಗಣೇಶ ಕಾಸರಗೋಡು – ಖ್ಯಾತ ಸಿನಿ ಬರಹಗಾರರು, ಪತ್ರಕರ್ತರು, ಹಳೆಯ ಸಿನಿಮಾದ ಕೊನೆಯ ಫ್ರೆಮ್ ‘ಶುಭಂ’ ಕೃತಿಯ ಲೇಖಕರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading