” ಅಂವಾ… ನರಕವಿ ಅಲ್ಲಲೇ ತಮ್ಮಾ. ವರಕವಿ ಅದಾನ. ನರಕವಿಗೂಳು ಓಣೀಗೆ ಹತ್ತು ಮಂದಿ ಸಿಗತಾರ. ಆದರ ವರಕವಿಗೂಳು ದಿಕ್ಕಿಗೊಬ್ಬರೂ ಸಿಗೂದಿಲ್ಲ. ಅಂಥಾ ಅಪರೂಪದ ಕವಿ ಈ ಬೇಂದ್ರೆ. ಇಂವಾ ನಮ್ಮ ಕಾಲದಾಂವ ಅನ್ನೂದ ನಮಗ ಹೆಮ್ಮೆ” ಈ ಧನ್ಯತೆಯ ನುಡಿಗಳನ್ನು ಆಡಿದವರು ನಮ್ಮೂರಿನ ಬಸಪ್ಪ. ಆಗಲೇ ಎಪ್ಪತ್ತು ದಾಟಿದ ಅವರು ಬೇಂದ್ರೆಯನ್ನು ಎಂದೂ ನೋಡಿದವರಲ್ಲ. ” ಅಂವಾ ಧಾರವಾಡದಾಗ ಅದಾನ. ಅಂವನ್ನ ನೋಡೂ ಭಾಗ್ಯ ನಮಗೆಲ್ಲಿ ಐತಿ. ನಮ್ಮ ಹಳ್ಳೀನ ನಮಗ ಇಲ್ಲಿ ಸರ್ವಸ್ವ ಆಗಿ ಕುಂತೈತಿ. ಆದರ ಧಾರವಾಡ ರೇಡಿಯೋ ಹಚ್ಚಿದರ ಸಾಕು. ಬೇಂದ್ರೆ ಹಾಡು ಕಿವಿ ತುಂಬತಾವ ನೋಡು”. ತಳ ಸಾಲೆಯಲ್ಲಿ ಎರಡನೇ ತರಗತಿವರೆಗೆ ಕಲಿತಿದ್ದ ಈ ಬಸಪ್ಪನಿಗೆ ಕತೆ ಹೇಳುವ ಹುಚ್ಚು. ಬೆಂದ್ರೆ ಬಗ್ಗೆ ತನಗೆ ಸರಿಯಾಗಿ ಗೊತ್ತಿರದಿದ್ದರೂ ಕತೆ ಕಟ್ಟಿ ಬೇಂದ್ರೆ ವ್ಯಕ್ತಿತ್ವವನ್ನು ಹಳ್ಳಿಗಾಡಿನಲ್ಲಿ ಎತ್ತರಕ್ಕೇರಿಸದ ಕೀರ್ತಿ ಈ ಬಸಪ್ಪನದು. ಇವನೆಂದೂ ಬೇಂದ್ರೆಯನ್ನು ನೋಡಲಿಲ್ಲ. ಆದರೆ ಬೇಂದ್ರೆ ಹುಚ್ಚನ್ನೂ ಬಿಡಲಿಲ್ಲ. ಹೀಗೆ ಉತ್ತರ ಕರ್ನಾಟಕದ ಹಳ್ಳಿಗಾಡಿನ ಜನರನ್ನು ಬಿಡದ ಮಾಯಕಾರ ಕವಿ ಡಾ.ದ.ರಾ ಬೇಂದ್ರೆ. ಇಂಥ ಯುಗದ ಕವಿ, ವರ ಕವಿ ಬೇಂದ್ರೆಯವ ರನ್ನು ನಾನು ನಂತರ ಅನೇಕ ಸಲ ದರ್ಶನ ಮಾಡಿದೆ. ಅವರಿದ್ದಾಗ ್ವರ ಮನೆಗೂ ಹೋಗುತ್ತಿದ್ದೆ. ನಾನು ಕಾರ್ಯದರ್ಶಿಯಾಗಿದ್ದ ಸಾಹಿತ್ಯ ಸಂಘದ ಕಾರ್ಯಕ್ರಮಕ್ಕೆ ಅವರನ್ನು ಅತಿಥಿಯಾಗಿ ಆಮಂತ್ರಿಸಿ ಅವರು ವಾಚಿಸಿದ ಕಾವ್ಯವನ್ನೂ ಕೇಳಿದ್ದೆ. ಬೇಂದ್ರೆಯವರ ಬಾಯಿಂದ ಕಾವ್ಯವನ್ನು ಕೇಳುವುದೇ ಒಂದು ಸೊಗಸು. ಅವರು ತೀರಿ ಹೋದಾಗ ಒಂದು ಯುಗದ ದನಿ ಸತ್ತು ಹೋಯಿತೆಂದೇ ದುಃಖಿತನಾಗಿದ್ದೆ.
ಆದರೆ ಬೇಂದ್ರೆವರನ್ನು ಮತ್ತೆ ನಮ್ಮೆದುರು ನೋಡುವಂತಾದ್ದದ್ದು ಮತ್ತು ಅದನ್ನು ಸಾಧ್ಯವಾಗಿಸಿದ್ದು ಧಾರವಾಡದ ಸಾಧನಕೇರಿಯಲ್ಲಿಯೇ ಇರುವ ಶ್ರೀ ಅನಂತ ದೇಶಪಾಂಡೆ ಅವರಿಂದ. ಬೇಂದ್ರೆಯವರನ್ನು ಕಂಡವರು, ಅವರ ಮಾತು ಕಾವ್ಯವಾಚನವನ್ನು ಆಲಿಸಿ, ಅನುಭವಿಸಿದವರು ಈಗ ನಿರಾಸೆಯಾಗಬೇಕಿಲ್ಲ. ಬೇಂದ್ರೆಯೇ ಮತ್ತೆ ಅವತರಿಸಿದ್ದಾರೆ. ವೈಕುಂಠದಿಂದ ಸೀದ ನಮ್ಮ ಕಣ್ಣೆದುರಿಗೇ ಬಂದು ನಿಂತಿದ್ದಾರೆ. ಅದೇ ಶೈಲಿಯಲ್ಲಿ ಮಾತಾಡುತ್ತಾರೆ. ಕಾವ್ಯ ವಾಚಿಸು ತ್ತಾರೆ. ಹಾಗೇ ನಡೆಯುತ್ತಾರೆ. ಕಾವ್ಯದಲ್ಲಿಯೇ ಸಂಖ್ಯಾ ಶಾಸ್ತ್ರಗಳನ್ನು ಹೇಳಿ ಅಚ್ಚರಿಪಡಿಸುತ್ತಾರೆ.
ಹೌದು. ಬೇಂದ್ರೆ ಮತ್ತೆ ನಮ್ಮ ಕಣ್ಣೆದುರಿಗೆ ಬರುತ್ತಾರೆ. ” ಇಳಿದು ಬಾ.ತಾಯಿ ! ಇಳಿದು ಬಾ. ಹರನ ಮುಡಿಯಿಂದ, ಋಷಿಯ ತೊಡೆಯಿಂದ ಇಳಿದು ಬಾ ” ಎನ್ನುತ್ತ ಕಾವ್ಯದ ಗುಂಗು ಹಿಡಿಸುತ್ತಾರೆ. ಈ ಅಭಿನವ ಬೇಂದ್ರೆ ಬೇರೆ ಯಾರೂ ಅಲ್ಲ. ಧಾರವಾಡದಲ್ಲಿ ಬೇಂದ್ರೆಯವರ ಮನೆಯ ಕೂಗಳತೆಯಲ್ಲಿ ಪುಟ್ಟ ಮನೆಯಲ್ಲಿ ಇರುವ ಅರವತ್ತು ವರ್ಷದ ಬ್ರಹ್ಮಚಾರಿ ಅನಂತ ಕೃಷ್ಣಾ ದೇಶಪಾಂಡೆಯವರು. ಧಾರವಾಡದವರಾದರೂ ಮುಂಬಯಿಯಲ್ಲಿ ಜನಿಸಿ ಅಲ್ಲಿಯೇ ಬಾಲ್ಯ ಶಿಕ್ಷಣ ಮುಗಿಸಿ ಮತ್ತೆ ಧಾರವಾಡದ ಮೂಲ ಮನೆಗೆ ಹಿಂದಿರುಗಿ ಈಗ ಇಲ್ಲಿಯೇ ನೆಲೆಸಿದ ಅನಂತ ಹವ್ಯಾಸಿ ರಂಗ ನಟರಾಗಿ ಧಾರವಾಡಕ್ಕೆ ಪರಿಚಿತರು.
ಉದರ ಪೋಷಣೆಗೆ ಇವರು ಮಾಡದ ಕೆಲಸಗಳಿಲ್ಲ. ಒಂದು ಕಾಲಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದೆದುರು ಲಾಟರಿ ಟಿಕೇಟು ಮಾರುತ್ತ, ರಾತ್ರಿ ಹೊತ್ತು ಅದೇ ಸಂಘದಲ್ಲಿ ನಾಟಕ ಮಾಡುತ್ತ ಬದುಕಿದವರು. ಮೂಡಲ ಮನೆ, ಮಹಾನವಮಿ, ಸೌಭಾಗ್ಯವತಿ ಹೀಗೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಟಿ.ಎಸ್. ರಂಗಾ ಅವರ ಸಿನಿಮಾಗಳಲ್ಲೂ ಅಭಿನಯಿದ್ದಾರೆ. ಈಗ ಬೇಂದ್ರೆ ದರ್ಶನ ಎಂಬ ಕಾರ್ಯಕ್ರಮ ನೀಡುತ್ತ ಅಪ್ಪಟ ಶಿಸ್ತಿನ ಕಲಾವಿದರಾಗಿ ನೂರಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಬೇಂದ್ರೆಯವನ್ನು ನೋಡಿದ ಜನ ಇವರ ಈ ಕಾರ್ಯಕ್ರಮ ನೋಡಿ ‘ಅಬ್ಬಾ! ಮತ್ತೆ ಬೇಂದ್ರೆಯವರನ್ನು ನೋಡಿದೆವು ‘ ಎಂದು ಉಸುರು ಹಾಕುತ್ತಾರೆ. ಹೊಸ ಪೀಳಿಗೆಯವರು ಬೇಂದ್ರೆ ಅಜ್ಜ ಹೀಗಿದ್ದರಾ ಎಂದು ಅಚ್ಚರಿಗೊಳ್ಳುತ್ತಾರೆ. ಬೇಂದ್ರೆಯವರನ್ನು ಹಳಬರಿಗೆ ನೆನಪಿಸುವ, ಹೊಸಬರಿಗೆ ಅವರನ್ನು ಪರಿಚಯಿಸುವ ಉದಾತ್ತ ಕಾರ್ಯ ಮಾಡುತ್ತಿರುವ ಅನಂತ ದೇಶಪಾಂಡೆಯವರು ನಿಜಕ್ಕೂ ಅಭಿನಂದನಾರ್ಹರು.
ಸಜ್ಜನ, ಸೌಮ್ಯ ಸ್ವಭಾವ, ಮಿತ ಭಾಷಿಯಾದ ಇವರು ದಿನಕ್ಕೆ ಒಂದು ಬಾರಿ ಮಾತ್ರ ಊಟ ಮಾಡುತ್ತಾರೆ. ಯಾಕೆ ಎಂದು ಕೇಳಿದರೆ ಹೇಳುವುದಿಲ್ಲ. ಧಾರವಾಡದಲ್ಲಿ ಅವರು ಸಗರ ಸಾರಿಗೆ ಬಸ್ಸು, ಆಟೋಗಳನ್ನು ಹತ್ತುವುದೇ ಅಪರೂಪ. ನಾಟಕದ ತಾಲೀಮು ಮನೆ ಎಷ್ಟೇ ದೂರವಿದ್ದರೂ ಇವರು ಹೋಗುವುದು ಕಾಲ್ನಡಿಗೆಯಲ್ಲೇ. ತಡ ರಾತ್ರಿಯಾದರೂ ಸರಿ. ನಡೆದುಕೊಂಡೇ ಮನೆಗೆ ಹೋಗುತ್ತಾರೆ. ಜೀವನ ನಿರ್ವಹಣೆಗೆ ನಿಶ್ಟಿತ ಆದಾಯವಿಲ್ಲ. ಸರಕಾರದಿಂದಲೂ ಸಹಾಯವಿಲ್ಲ. ಹೊಗಳುವ ಬಾಯಿಗಳಿವೆ. ಸಹಾಯ ಮಾಡುವ ಕೈಗಳಿಲ್ಲ. ಹಾಗೆಂದು ಇವರಿಗೆ ಅದರ ಬಗ್ಗೆ ನೋವೂ ಇಲ್ಲ.
ಕೊನೆಯ ದಿನಗಳಲ್ಲಿ ಮಗನಿಂದಲೇ ಬಂದಿಯಾಗಿದ್ದ ಷಹಾಜಹಾನ್ ಬಂದೀಖಾನೆಯ ಕಿಡಕಿಯಿಂದಲೇ ತಾಜಮಹಲನ್ನು ನೋಡುತ್ತ ದಿನಗಳೆದನಂತೆ. ಹಾಗೇ ಇವರು ಸಾಧನಕೇರಿಯಲ್ಲಿರುವ ತಮ್ಮ ಪುಟ್ಟ ಮನೆಯಿಂದ ಬೇಂದ್ರೆಯವರ ಮನೆಯ ದಾರಿಯನ್ನು, ವರಕವಿ ದಾಟಿ ಹೋಗುತ್ತಿದ್ದ ರಸ್ತೆಯ ತಿರುವುಗಳನ್ನು ನೋಡುತ್ತ, ತಮ್ಮ ಪುಟ್ಟ ಮನೆಯಲ್ಲಿ ಕೂತಿರುತ್ತಾರೆ. ಬೇಂದ್ರೆಯವರ ನೆನಪನ್ನು ಕಣ್ಣಲ್ಲಿ ತುಂಬಿಕೊಂಡು ಕಣ್ಣರೆಪ್ಪೆಯಲ್ಲಿ ಅವರ ಚಿತ್ರ ಬಿಡಿಸುತ್ತ ಹೊರ ರಸ್ತೆಯನ್ನು ನೋಡುತ್ತಿರುತ್ತಾರೆ.
ಈ ಕಲಾವಿದನಿಗೆ ಈಗ ”ಆಕೃತಿ ಕನ್ನಡ ಪ್ರಶಸ್ತಿ-2019” ಯನ್ನು ನಮ್ಮ ಅಂತರ್ಜಾಲ ಪತ್ರಿಕೆ ಈಗ ನೀಡಿ ಗೌರವಿಸುತ್ತಿದೆ.
ಲೇಖನ : ಹೂಲಿಶೇಖರ್