ಜಯಂತ ಕಾಯ್ಕಿಣಿ ಅವರು ಪ್ರೇಮ ಕವಿಯಾದರೇ, ಯೋಗರಾಜ್ ಭಟ್ ರು ಪ್ರೇಮ ನಿರ್ದೇಶಕ ಎನ್ನಬಹುದು. ಈ ಎರಡು ತಲೆಗಳು ಒಂದೆಡೆ ಸೇರಿದಾಗ ತೆರೆಯ ಮೇಲೆ ಸಿನಿಮಾ ಹೇಗೆ ಮೂಡಬಹುದು ? ಎನ್ನುವ ಕುತೂಹಲ, ಪ್ರಶ್ನೆಗಳು ಎಲ್ಲರಿಗೂ ಮೂಡುವುದು ಸಹಜ. ಆದರೆ ಅವುಗಳಿಗೆ ಉತ್ತರವಾಗಿ ಸಿಗುವುದು ‘ಅದ್ಬುತ’ ಎನ್ನುವ ಮಾತುಗಳು.
‘ಮುಂಗಾರು ಮಳೆ’ ಸಿನಿಮಾದ ಮೂಲಕ ಜೋಡಿಯಾದ ಇವರು, ತದನಂತರ ಅನೇಕ ಸಿನಿಮಾಗಳಲ್ಲಿ ಒಟ್ಟೊಟ್ಟಿಗೆ ಕೆಲಸ ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಯೋಗರಾಜ್ ಭಟ್ ರ ನಿರ್ದೇಶನ ಮತ್ತು ಜಯಂತ್ ಕಾಯ್ಕಿಣಿ ಅವರ ಸಾಹಿತ್ಯ ಚಿತ್ರರಸಿಕರಿಗೆ ಒಳ್ಳೆಯ ರಸದೌತಣವನ್ನೇ ನೀಡುತ್ತಿದೆ. ತೆರೆಯ ಮೇಲೆ ನಾಯಕ – ನಾಯಕಿಯ ಕೆಮಿಸ್ಟ್ರಿಯನ್ನು ನೋಡಿದ್ದೇವೆ. ಅದೇ ರೀತಿ ಒಬ್ಬ ನಿರ್ದೇಶಕ ಹಾಗು ಗೀತ ರಚನಕಾರನ ಮಧ್ಯೆಯೂ ಒಳ್ಳೆಯ ಕೆಮಿಸ್ಟ್ರಿ ಇರಲೇಬೇಕು. ಹಾಡು ಹೃದಯಕ್ಕೆ ನಾಟಿದರೆ ಮಾತ್ರ ಜನ ಸಿನಿಮಾದತ್ತ ಹೆಚ್ಚು ವಾಲುತ್ತಾರೆ. ಅಂದರೆ ಸಿನಿಮಾಕ್ಕೆ ಒಳ್ಳೆಯ ಸಾಹಿತ್ಯ ಬಲು ಮುಖ್ಯ.ಅದು ಭಟ್ ರ ಮತ್ತು ಕಾಯ್ಕಿಣಿ ಅವರ ಕೆಮಿಸ್ಟ್ರಿಯಿಂದ ನಿಜ ಎನ್ನಿಸಿಕೊಂಡಿದೆ. ಹಾಗಾಗಿ ಅವರು ಜೋಡಿಯಾಗಿ ಮಾಡಿದಂತಹ ಸಿನಿಮಾಗಳು ಬಹುತೇಕ ಹಿಟ್ ಆಗುತ್ತಿವೆ. ಈ ಹಿಂದೆ ರವಿಚಂದ್ರನ್ ಹಾಗು ಹಂಸಲೇಖ ಅವರಲ್ಲಿ ಈ ಕೆಮಿಸ್ಟ್ರಿ ಇತ್ತು. ಆಗ ಈ ಜೋಡಿಗಳು ಸಹಚಿತ್ರಮಂದಿರಗಳಲ್ಲಿ ಸಾಕಷ್ಟು ಸದ್ದು ಮಾಡಿದ್ದರು.
ಈಗ ನಾಡಿನಾದ್ಯಂತ ಯೋಗರಾಜ್ ಭಟ್ ಅವರ ನಿರ್ದೇಶನದ ಹೊಚ್ಚ ಹೊಸ ಸಿನಿಮಾ ‘ಪಂಚತಂತ್ರ’ ಬಿಡುಗಡೆಯಾಗಿದೆ.’ಪಂಚತಂತ್ರ’ ಎನ್ನುವ ಹೆಸರು ಮಕ್ಕಳ ಕತೆ ಪುಸ್ತಕಕ್ಕೆ ಹೆಸರು ವಾಸಿಯಾಗಿತ್ತು. ಯೋಗರಾಜ್ ಭಟ್ ರು ಈಗ ಅದೇ ಹೆಸರಿನಲ್ಲಿ ಸಿನಿಮಾವನ್ನು ಮಾಡಿದ್ದಾರೆ. ಈ ಸಿನಿಮಾದಲ್ಲಿ ನೀತಿ ಕತೆ ಇದೆಯಾ? ಅಥವಾ ಟೈಟಲ್ ಸಾಂಗ್ ನಲ್ಲಿ ನೋಡಿದ ಹಾಗೆ ಸಿನಿಮಾ ಪೂರ್ತಿ ಕಾರಿನ ರೇಸ್ ಇದೆಯಾ ? ಎನ್ನುವುದನ್ನು ಚಿತ್ರಮಂದಿರದಲ್ಲಿ ಹೋಗಿಯೇ ನೋಡಬೇಕು. ಆದರೆ ಭಟರ ಸಿನಿಮಾದಲ್ಲಿ ಎಲ್ಲೊ ಒಂದು ಕಡೆ ಥ್ರಿಲ್ ಕೊಡುವ ಅಂಶ ಇದ್ದೇ ಇರುತ್ತದೆ. ಈ ಸಿನಿಮಾದಲ್ಲಿಯೂ ಏನೋ ಇದೆ ಅನ್ನುವುದಂತೂ ಖಚಿತ.
ಈ ಸಿನಿಮಾದ ಟೈಟಲ್ ಸಾಂಗ್ ನ್ನು ಕಾಯ್ಕಿಣಿ ಅವರು ಬರೆದಿದ್ದಾರೆ. ‘ಹಾಗೆ ಸುಮ್ಮನೆ’ ನೋಡಿದರೆ ಯೋಗರಾಜ್ ಭಟ್ ಅವರು ಕೂಡ ಒಳ್ಳೆಯ ಗೀತರಚನಾಕಾರರು. ಅವರ ರಚನೆಯ ಹಾಡುಗಳು ಸಾಕಷ್ಟು ಜನಪ್ರಿಯವಾಗಿದೆ. ಮತ್ತು ಅವರಲ್ಲಿಯೂ ಸಾಹಿತ್ಯದ ಅಭಿರುಚಿ ಇದೆ. ಹೀಗಿದ್ದರೂ ಕೂಡ ಯೋಗರಾಜ್ ಭಟ್ ರ ನಿರ್ದೇಶನದಲ್ಲಿ ಕಾಯ್ಕಿಣಿ ಅವರ ಪ್ರೇಮ ಸಾಹಿತ್ಯದ ಮಳೆಹನಿ ಇರಲೇಬೇಕು. ಇದು ಇವರಿಬ್ಬರ ನಡುವಿನ ಇಚಿಕು – ಕುಚುಕು ಗೆಳೆತನವನ್ನು ಎತ್ತಿ ತೋರಿಸುತ್ತದೆ.
‘ಇದೇ ಪಂಚತಂತ್ರ…ಮಜಾ ಪಂಚತಂತ್ರ …’ ಕಾಯ್ಕಿಣಿ ಅವರ ಸಾಹಿತ್ಯ ಥಟ್ ಅಂತ ಜನರ ಮನಸ್ಸನ್ನು ಲೂಟಿ ಮಾಡಿ ಬಿಡುತ್ತದೆ. ಟೈಟಲ್ ಸಾಂಗ್ ನಲ್ಲಿ ನೀತಿ ಕತೆಯನ್ನು ಎಳೆಯಾಗಿಟ್ಟುಕೊಂಡು ಬರೆದಂತಹ ಸಾಹಿತ್ಯ ನಿಜಕ್ಕೂ ಸೂಪರ್ ಆಗಿದೆ. ಕಾಯ್ಕಿಣಿ ಅವರ ಸಾಹಿತ್ಯದ ಆಳಕ್ಕೆ ಇಳಿದಾಗ ಮಾತ್ರ ಅವರ ಸಾಹಿತ್ಯದ ಸೌಂದರ್ಯ ಎಷ್ಟಿದೆ ಎನ್ನುವುದು ಅರ್ಥವಾಗುತ್ತದೆ.
‘ಪಂಚತಂತ್ರ’ ಸಿನಿಮಾದ ಟೈಟಲ್ ನಲ್ಲಿ ಸಾಕಷ್ಟು ವಿಶೇಷತೆಗಳು ಕಾಣುತ್ತದೆ.
ಇಷ್ಟು ದಿನ ಕಾಯ್ಕಿಣಿ ಅವರ ಸಾಹಿತ್ಯ ವನ್ನು ಮೆಲೋಡಿಯಾಗಿಯೇ ಸ್ವೀಕರಿಸಿದ್ದೆವು. ಆದರೆ ಈ ಸಿನಿಮಾದಲ್ಲಿ ಮೊದಲ ಬಾರಿಗೆ ಸಂಗೀತ ನಿರ್ದೇಶಕ ಹರಿಕೃಷ್ಣ ಅವರು ಕಾಯ್ಕಿಣಿ ಅವರ ಸಾಹಿತ್ಯಕ್ಕೆ ಫಾಸ್ಟ್ ಟ್ರ್ಯಾಕ್ ನಲ್ಲಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಇದು ಒಂದು ರೀತಿಯ ಹೊಸ ಪ್ರಯತ್ನವೆಂದೇ ಹೇಳಬೇಕು. ಜೊತೆಗೆ ನಟ-ನಿರ್ದೇಶಕ ಪ್ರೇಮ್ ಅವರು ಈ ಹಾಡನ್ನು ಜಾಲಿಯಾಗಿ ಖುಷಿಕೊಡುವ ಹಾಗೆ ಹಾಡಿದ್ದಾರೆ.
ಟೈಟಲ್ ನಲ್ಲಿಯೇ ಇಷ್ಟೆಲ್ಲ ಮಜಾ, ಹೊಸತನವಿರುವಾಗ ಇನ್ನು ಸಿನಿಮಾ ಎಷ್ಟರ ಮಟ್ಟಿಗೆ ಮಜಾ ಕೊಡಬಹುದು ಎನ್ನುವ ಕುತೂಹಲ ನನಗಿದೆ. ಆದಷ್ಟು ಬೇಗ ನಾನು ಸಿನಿಮಾ ನೋಡುತ್ತೇನೆ. ನೀವು ನೋಡಿ. ನಿಮ್ಮ ಅಭಿಪ್ರಾಯವನ್ನು ನಮ್ಮ ಆಕೃತಿ ಕನ್ನಡದಲ್ಲಿ ಹಂಚಿಕೊಳ್ಳಿ. ಮತ್ತು ಚಿತ್ರತಂಡಕ್ಕೆ ಶುಭವಾಗಲಿ…
ಲೇಖನ : ಶಾಲಿನಿ ಪ್ರದೀಪ್