‘ಭಾಮೆ’ ಪುಸ್ತಕ ಪರಿಚಯ – ಭಾಗ್ಯ.ಕೆ.ಯು

‘ಭಾಮೆ’  ಪುಸ್ತಕದಲ್ಲಿ  ಬರುವ ಕೆಲವು ಸನ್ನಿವೇಷಗಳು ಕಥೆಯ ಹರಿವಿಗೆ ಸ್ಪಷ್ಟತೆಯನ್ನು ನೀಡುತ್ತದೆ. ಭಾಮೆ ಸತತವಾಗಿ ಹದಿಮೂರು ವರ್ಷ ನಿಧಿಗಾಗಿ ಕಾದು ಕೂರುವುದು ಏಕೆ? ಮತ್ತು ಹೇಗೆ? ಎಂಬುದನ್ನೆಲ್ಲಾ ಕಾದಂಬರಿಯನ್ನು ಓದಿಯೆ ಅರಿಯಬೇಕು. ಲೇಖಕಿ ಭಾಗ್ಯ.ಕೆ.ಯು ಅವರು ಮನೋಜ್. ಪಿ. ಎಂ (ದೇವಿಪುತ್ರನ್) ಅವರ ‘ಭಾಮೆ’ ಪುಸ್ತಕದ ಕುರಿತು ಓದುಗರಿಗೆ ಪರಿಚಯ ಮಾಡಿದ್ದಾರೆ. ಮುಂದೆ ಓದಿ …

ಪುಸ್ತಕ : ಭಾಮೆ
ಲೇಖಕರು : ಮನೋಜ್. ಪಿ. ಎಂ (ದೇವಿಪುತ್ರನ್)
ಪ್ರಕಾಶನ : ಸೊಡರು ಪ್ರಕಾಶನ
ಬೆಲೆ : 190
ಮೊ. ಸಂಖ್ಯೆ : 900 807 3499

“ಏನೇನೋ ನೆನಪುಗಳು – ಕನಸುಗಳು! ಈ ಸಾರಿ ನಮ್ಮ ಸಿನೆಮಾದ ಕ್ಲೈಮ್ಯಾಕ್ಸ್ ತಲೆ ತಿನ್ನುತ್ತಿದೆ! ಏನು ಮಾಡೋಣ?, ಓಪನಿಂಗ್ ಸೀನನ್ನೇ ಕ್ಲೈಮಾಕ್ಸ್ ಮಾಡೋಣವ?” ಕಥಾನಾಯಕ ಕಾರಿನ ಸ್ಟಿಯರಿಂಗ್ ಹಿಡಿದು ಜೋರು ಬಡಿದುಕೊಳ್ಳುವ ಹೃದಯದಲಿ ಬಡಬಡಿಸುವುದನ್ನು ಓದುವಾಗ ಸಿನೆಮಾದಲ್ಲಿನ ಒಂದು ಚೇಸಿಂಗ್ ಸೀನೊ.. ಒಂದು ಪಕ್ಕಾ ಆಕ್ಷನ್ನೊ ನಡೆಯಬಹುದು ಅನ್ನಿಸುತ್ತದೆ.

ಇಂದು ಭಾಮೆ ಮತ್ಯಾರೊಡನೆಯೊ ಮದುವೆಯ ಬಂಧಕ್ಕೆ ಸಾಕ್ಷಿಯಾಗಲು ಕುಳಿತಿರುವ ದಿನ. ನಾಳೆ ತನ್ನ ಮೊದಲ‌ ಸಿನೆಮಾದ ಮುಹೂರ್ತ!. ತನ್ನ ಅವಳಿ ಮಕ್ಕಳೊಂದಿಗೆ ಗೆಳೆಯನಂತೆ ವರ್ತಿಸುವ ಕಾರ್ತಿಕೇಯನ ನಡೆ ಮಾತ್ರ ತುಸು ವಿಚಿತ್ರ!. ಎಷ್ಟೇ ಸಲುಗೆಯಿತ್ತರೂ ಮಕ್ಕಳೊಡನೆ ಒಡನಾಡುವ ಈ ಬಗೆ ಮಾತ್ರ ಅತ್ಯಂತ ವಿಚಿತ್ರ!. ಮದುಮಗಳನ್ನು ತನಗಾಗಿ ಆರಿಸಿಕೊಂಡು ಬರಲು ಹೊರಟಿರುವ ಅವಳಿ ಮಕ್ಕಳ ತಂದೆಗೆ ಭಾಮೆ ಒಂದು ವಿಶಿಷ್ಟ ಪ್ರೇಮ. ತನಗೆ ದಕ್ಕಿದರೆ ಅದವಳ ನರಕ!, ನನಗೆ ಪುಣ್ಯ ಅಂತಲೂ ಎನ್ನುವ ನಿಧಿ(ಕಾರ್ತಿಕೇಯ) ಅವಳನ್ನು ಅದೆಷ್ಟು ಪ್ರೇಮಿಸುತ್ತಾನೆಂಬುದುನ್ನು ಕತೆಯ ಆಳಕ್ಕಿಳಿದಾಗಲೆ ಅರ್ಥೈಸಿಕೊಳ್ಳಲು ಸಾಧ್ಯ.

ಭಾಮೆ ಪುಸ್ತಕದ ಲೇಖಕರು  ಮನೋಜ್. ಪಿ. ಎಂ (ದೇವಿಪುತ್ರನ್)

ಕಾರಿನ ಟೈಯರು ರೋಡಿನ ಮೇಲ್ಮೈಗೆ ತಿಕ್ಕುತ್ತಾ ಮಿತ ವೇಗದಲ್ಲಿಯೆ ಚಲಿಸುತ್ತಿದೆಯಾದರೂ ಅವನ ಮನಸು ಮಾತ್ರ ಬಹುವೇಗವಾಗಿ ತನ್ನ ಗತವನ್ನು ಸ್ಮರಿಸುತ್ತಿತ್ತು. ಭಾಮೆ ತನ್ನ ಬದುಕಿಗೆ ಎಷ್ಟು ಪ್ರಮುಖಳು?, ತಾನೆಷ್ಟು ಅವಳಿಗೆ ಪ್ರಾಮುಖ್ಯತೆ ನೀಡಿದೆನೆಂದು ಅವನಿಗೆ ಅರಿವಾಗುವುದೇ ಇಲ್ಲ. ಕಾರಣ ಅವನು ಅವಳಿಗಾಗಿ ತಪಿಸಲಿಲ್ಲ, ಅವಳು ಅವನ ಜೀವನದಲ್ಲಿ ಬಂದಿದ್ದ ಒಂದು ಪಾತ್ರ ಎಂಬುದಷ್ಟೇ ಪರಿಗಣೆನೆಗೆ ಇತ್ತು. ನನ್ನ ಬಾಳಿನಲ್ಲಿ ನಿನ್ನ ಬೆಲೆಯೇ ಇರಲಿಲ್ಲ!, ಒಂದು ಹಂತದವರೆಗೆ ಎನ್ನುವ ಇದೇ ನಿಧಿ ಅವಳಿಗಾಗಿ ಓಡುತ್ತಿದ್ದಾನೆ.
‘ನನ್ನ ಮನಸ್ಸನ್ನು ತೆರೆದಿಡುತ್ತಾ ಹೋದರೆ, ಎಲ್ಲರಲ್ಲೂ ಇರುವ ಗುಣಗಳು ನನ್ನಲ್ಲೂ ಕಾಣಿಸುತ್ತದೆ – ಯಾರೂ ಪ್ರಕಟಪಡಿಸದ ಗುಣಗಳು!, ಪ್ರಕಟಪಡಿಸಲು ಹೆದರುವ ಗುಣಗಳು!’ ಎಂದು ತನ್ನನ್ನು ತಾನೇ ನಿರ್ದೇಶಿಸುವ ಕಥಾನಾಯಕನ ಗುಣವೈಶಿಷ್ಟ್ಯತೆಯನು ಕಂಡಾಗ ನಮಗಿದು ಸಾಧ್ಯವೆ?, ಹೀಗಿರುವ ವ್ಯಕ್ತಿಯನ್ನು ಪ್ರೇಮಿ ಎಂದು ಒಪ್ಪಿಕೊಳ್ಳುತ್ತೇವೆಯೆ ಎಂಬುದೆ ಒಂದು ಪ್ರಶ್ನೆಯಾಗಿಬಿಡುತ್ತದೆ.

ತನ್ನ ಆರನೇ ವಯಸ್ಸಿನಲ್ಲಿ ಮೊದಲಿಗೆ ಪ್ರೇಮದಲ್ಲಿ ಬೀಳುವ ನಿಧಿಗೆ ಹೆಣ್ಣೆಂದರೆ ಪ್ರಾಣ. “ಕಥೆಯಾದರೂ ಜೀವನಕ್ಕಾದರೂ ಪ್ರಾರಂಭವಿರಬೇಕು!, ಆ ಪ್ರಾರಂಭವನ್ನು ನಾನು ನನ್ನ ಕಥೆಯಾಗಿ ತೆಗೆದುಕೊಂಡರೆ ನಾನದನ್ನು ಪ್ರಾರಂಭಿಸುವುದು ಚಿತ್ರಾಳಿಂದ” ಎನ್ನುತ್ತಾ ಭಾಮೆಯ ಪುಟಗಳನ್ನು ತೆರೆದಿಡುತ್ತಾ ಲೇಖಕರು ನೇಪಥ್ಯದಲಿ ಸರಿದುಬಿಡುತ್ತಾರೆ. ಇನ್ನು ನಾವು ಕಥೆಯೊಳಗಿನ ಉಪಕಥೆಗಳಂತೆ ಮುಳುಗಿಹೋಗುವುದಾಗುತ್ತದೆ.

ಕಥಾವಸ್ತುವನ್ನು ಆರಿಸಿಕೊಂಡ ಬಗೆಯಲ್ಲಿ ಲೇಖಕರ ಮೊದಲ ಕಾದಂಬರಿ #ಕಾಸನೋವಾ ದ ಎರಡನೇ ಆವೃತ್ತಿಯೆ ಇದು!?, ಎಂದೆನಿಸುವಂತೆ ನಮಗೆ ಭಾಸವಾಗಬಹುದು. ಆದರೆ ಕಾಸನೋವಾ ಕಾದಂಬರಿಗಿಂತಲೂ ತುಸು ವಿಭಿನ್ನವಾದ ಕಥಾವಸ್ತು ಹಾಗು ಕಥೆಯ ಒಳಹರಿವು ಇರುವುದರಿಂದ ಈ ಭಾಮೆ ಕಥೆಯನ್ನು ಆಸಕ್ತಿಯಿಂದ ಓದಿಕೊಂಡು ಹೋಗಬಹುದಾಗಿದೆ.

ಚಿತ್ರ ತನ್ನ ಮನೆಯ ಮೇಲ್ಭಾಗದ ಪೋರ್ಷನ್ಗೆ ಬಾಡಿಗೆಗೆ ಹೊಸದಾಗಿ ಬರುವ ಕುಟುಂಬದ ಹೆಣ್ಣುಮಗಳು. ತಂದೆ ತಾಯಿ ಮಾತ್ರ ನಿಧಿಯ ಮನೆಯಲ್ಲಿ ಬಾಡಿಗೆಗೆ ಬಂದು ತಮ್ಮ ಮಗಳನ್ನು ಧಾರವಾಡದಲ್ಲಿ ಅಜ್ಜಿಯ ಸುಪರ್ದಿನಲ್ಲಿ ಬಿಟ್ಟುಬಂದಿರುತ್ತಾರೆ, ಹಾಗಾಗಿ ಮಗಳಿಲ್ಲದೆ ಕೊರತೆಗೆ ನಿಧಿಯನ್ನು ಹಚ್ಚಿಕೊಳ್ಳುತ್ತಾರೆ. ಚಿತ್ರಾಳ ತಾಯಿ ಲೀಲಾಮ ತನ್ನ ಸ್ವಂತ ಮಗನಂತೆ ವಾತ್ಸಲ್ಯ ತುಂಬುತ್ತಾ ಹೋಗುವುದು ನಿಧಿಯಲ್ಲಿ ಅಪಾರ ಸಂತಸ, ತೃಪ್ತಿಯನ್ನು ತುಂಬುತ್ತಿರುತ್ತದೆ. ಚಿತ್ರಾಳ ತಂದೆ ಶೇಖರ್ ಅವರಿಗೆ ವರ್ಗವಾಗಿ ಧಾರವಾಡಕ್ಕೆ ಹೊರಟು ನಿಂತಾಗ ನಿಧಿಯು ತನ್ನ ತಂದೆತಾಯಿಯೊಡನೆ ಹೋಗುವುದು ಚಿತ್ರಾಳನ್ನು ಮೊದಲ ಬಾರಿ ಕಾಣುವುದು, ಆರನೆಯ ವಯಸ್ಸಿನಲ್ಲಿಯೆ ಅವಳ ತುಟಿಗೆ ಹೂಮುತ್ತನ್ನಿಡುವುದು, ಮನೆಯವರು ಹೇಳಿದಾಗ್ಯೂ ಆಕೆಯನ್ನು ಅಕ್ಕನ ಸ್ಥಾನಕ್ಕೆ ತಿರಸ್ಕರಿಸುವುದು ಇದೆಲ್ಲವೂ ಒಂದು ಬಗೆಯ ಹೆಣ್ಣಿನ ಮೇಲಿನ ಆತನ ಆಕರ್ಷಣೆಯನ್ನು ಆಗಿನ ಅವನ ಮನಸ್ಥಿತಿಯನ್ನು ಬಹಳ ಸುಂದರವಾಗಿ ಚಿತ್ರಿಸಲಾಗಿದೆ.

ಕಾಲದ ಸರಿವಿನಲ್ಲಿ ಚಿತ್ರಾ ತಾನು ಕಾಣುವ ಪ್ರತೀ ಹೆಣ್ಣಿನಲ್ಲೂ ಆವರಿಸಿಕೊಳ್ಳುತ್ತಾಳೆ. ನಾನೊಂದು ಚಿಟ್ಟೆ!, ಹೂವಿನಿಂದ ಹೂವಿಗೆ ಹಾರುತ್ತೇನೆ. ಆದರೆ ದೇಹಾಕರ್ಷಣೆಯಿಂದಲ್ಲ – ದೈಹಿಕ ಕಾಮನೆಯನ್ನು ಬಯಸಿಯಲ್ಲ!. ಹಾಗೆಂದೂ ಅದನ್ನೂ ತೇಡುವ ಹೆಣ್ಣಿಂದ ನಾನು ದೂರ ಸರಿದವನೂ ಅಲ್ಲ ಎನ್ನುವ ನಿಧಿಯ ಮನಸ್ಥಿತಿ ಒಮ್ಮೊಮ್ಮೆ ನಮ್ಮಲ್ಲಿನ ಚಂಚಲತೆಗೆ ಸಾಕ್ಷಿಯಾಗುತ್ತದೆ. ನಿಜಾಯತಿಯನ್ನು ತೋರುವ ನಿಧಿಗೆ ಹೆಣ್ಣೆಂದರೆ ಪ್ರಾಣ, ಅನಿವರ್ಚನೀಯ, ಅನಿರ್ಬಂಧಿತ, ಅಸಾಧ್ಯ, ಅದಮ್ಯ ಪ್ರೇಮ!. ಹೆಣ್ಣಿನ ಮನಸಿನಾಳಕ್ಕೆ ಇಳಿದು, ಅವಳ ಭಾವದೊಂದಿಗೆ ಮಿಲನವಾಗುವ ಉತ್ಕಟ ಪ್ರೇಮ. ನಿಧಿಯ ಬಾಳಿನಲ್ಲಿ ಸಾಕಷ್ಟು ಹುಡುಗಿಯರು ಬಂದುಹೋಗುತ್ತಾರೆ. ಈ ನಡುವೆ ಮಾಧವಿ ಅಂದರೆ ಭಾಮಾ ಎನ್ನುವ ಹೆಸರನ್ನೇ ತನ್ನ ಜೀವನಕ್ಕೆ ನಾಯಕಿಯನ್ನಾಗಿ ತೀರ್ಮಾನಿಸುತ್ತಾನೆ. ಬಂಧನ ಹಿಡಿಸದ, ಮದುವೆಯೆಂಬುದನ್ನೆ ಬಯಸದ ನಿಧಿಯನ್ನು ಮಣಿಸಿ ತನ್ನ ಮದುವೆಯ ದಿನ ಬಂದು ಕರೆದುಕೊಂಡು ಹೋಗುವಂತೆ ಮಾಡುವ ದಿಟ್ಟತೆ ಭಾಮೆಯಲ್ಲಿ ಕಾಣಬಹುದು.

ಕಥೆಯಲ್ಲಿ ಒಂದಷ್ಟು ಪಾತ್ರಗಳು ಪರಿಣಾಮ ಬೀರುತ್ತದೆ. ಚಿತ್ರ, ಅಶ್ವಿನಿ, ಕಾವ್ಯ, ವೀಣಾ, ಚಾರುಲತಾ ಇನ್ನಷ್ಟು ಕಥಾ ಪಾತ್ರಗಳು ಬಹುತೇಕ ಕಾಡಿಬಿಡುತ್ತದೆ. ಒಂದೊಂದು ಪಾತ್ರಕ್ಕೂ ಅದರದ್ದೇ ಆದ ತೂಕವಿದೆ. ಚಿಕ್ಕಂದಿನಿಂದ ಒಟ್ಟಿಗೆ ಬೆಳೆದ ದೇವ್ ನ ಮೇಲಿನ ಪ್ರೇಮವನ್ನು ಚಿತ್ರಾ ಅರುಹಿದಾಗ ತಾನು ಬಾಲಿಶವಾಗಿ ಯೋಚಿಸಿದೆ ಎಂದುಕೊಂಡು ಆತ್ಮವಿಮರ್ಶೆಗೆ ಬೀಳುತ್ತಾನೆ. ಆನಂತರದಲ್ಲಿ ಕಾವ್ಯ ಮೊದಲ ಬಾರಿಗೆ ಕನ್ನಿಸ್ವಾಮಿಯಾಗಿ ಮಾಲೆ ಹಾಕಿಕೊಂಡ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಇಬ್ಬರ ಭೇಟಿಯಾಗುತ್ತದೆ. ಬಾಲ್ಯದಿಂದಲೂ ಗೆಳೆತಿಯಾದ ಅಶ್ವಿನಿಯ ಬಳಿ ಕಾವ್ಯಾಳ ಕುರಿತು ಮಾತುಕತೆ, ಹೀಗೆ ಕಾವ್ಯಾಳ ಮೇಲೆ ಕುತೂಹಲ, ಆಕರ್ಷಣೆ ಬೆಳೆಯುತ್ತಾ ಅವಳೊಡನೆ ಬೆರೆಯಲು ಸಮಯ ಹೆಚ್ಚೇನು ಆಗುವುದಿಲ್ಲ. ಹೀಗೆಯೆ ತನ್ನ ಚಾಕಚಕ್ಯತೆಯಿಂದ ಹೆಣ್ಣನ್ನು ಆಕರ್ಷಿಸುವ ನಿಧಿಗೆ ಹೆಣ್ಣುಮಕ್ಕಳು ತಾವಾಗಿಯೆ ಆಕರ್ಷಿತರಾಗುತ್ತಿದ್ದರು ಸಹ.

ಕಥೆಯ ನಡುವೆ ಬರುವ ಕೆಲವು ಸನ್ನಿವೇಷಗಳು ಕಥೆಯ ಹರಿವಿಗೆ ಸ್ಪಷ್ಟತೆಯನ್ನು ನೀಡುತ್ತದೆ. ಭಾಮೆ ಸತತವಾಗಿ ಹದಿಮೂರು ವರ್ಷ ನಿಧಿಗಾಗಿ ಕಾದು ಕೂರುವುದು ಏಕೆ? ಮತ್ತು ಹೇಗೆ? ಎಂಬುದನ್ನೆಲ್ಲಾ ಕಾದಂಬರಿಯನ್ನು ಓದಿಯೆ ಅರಿಯಬೇಕು.

ಒಂದು ಹೆಣ್ಣಿನ‌ ಬಲತ್ಕಾರ ಆಕೆ ತನ್ನ ಕಾಲೇಜು ಸಹಪಾಠಿಯಾಗಿದ್ದಾಗ ನಿಧಿಯ ನಡೆ ಪ್ರಶಂಸನಾರ್ಹ. ಮದುವೆಯಾಗಿಯೂ ಗಂಡನೊಂದಿಗಿಲ್ಲದ ಸುಖದ ದಾಂಪತ್ಯ, ನಿಧಿಯನ್ನು ಹರಸುವ ಹೆಣ್ಣು, ನಿಧಿಯಿಂದ ಮಾತ್ರವೆ ಪಡೆಯುವ ಮಕ್ಕಳು!. ನನಗೆ ಬೇರೆ ಹುಡುಗಿಯರೊಂದಿಗೆ ದೈಹಿಕ ಸಂಪರ್ಕವಿದೆ ಎಂದಾಗಲೂ ಗೊತ್ತು, ಊಹಿಸಿದ್ದೇನೆ, ಆದಾಗ್ಯೂ ಜೀವನಪರ್ಯಂತ ಜೊತೆಗಿರು ಎನ್ನುವ ಮಾಧವಿ ಮೊದಲ ಬಾರಿಗೆ ಭಾಮೆಯಾಗಿ ನಿಧಿಯ ಜೀವನದಲ್ಲಿ ಪ್ರವೇಶಿಸುತ್ತಾಳೆ. ನಿನಾಗಿ ಕಾಯುತ್ತೇನೆ ಎನ್ನುತ್ತಾಳೆ.

ತನ್ನ ಗುರಿಯೆಡೆಗೆ ಹೆಜ್ಜೆಹಾಕುವ ನಿಧಿಗೆ ನಿರ್ದೇಶಕನಾಗಲು ಹದಿಮೂರು ವರ್ಷಗಳು ಬೇಕಾಗಬಹುದು ಎಂಬುದು ಭಾಮೆ ಹಾಕುವ ಷರತ್ತು, ಇದು ಊಹೆಯೊ ಏನೋ ಒಟ್ಟಿನಲ್ಲಿ ಇದೇ ನಡೆದುಹೋಗುವುದು ವಿಪರ್ಯಾಸ.

ಇದರ ತನ್ನ ಗುರಿಯೊಡನೆ ತಾನು ಮಾಡಬೇಕಿರುವ ಕರ್ತವ್ಯ, ಜವಬ್ದಾರಿ ಒಂದನ್ನೂ ತಾನು ಮಾತ್ರ ಮರೆಯಲಾರ. ತನಗೆ ಅತೀಮುಖ್ಯವಾದ ತನ್ನ ಜೀವನದ ಮೊದಲ ಪ್ರೇಮವಾದ ಹೆಣ್ಣಿನ ಧಾರುಣ ಅಂತ್ಯ, ತನ್ನ ಕಣ್ಣೆದುರೆ ನಡೆದ ಆ ಕೃತ್ಯಕ್ಕೆ ನ್ಯಾಯ ಒದಗಿಸಲು ಪಡುವ ಶ್ರಮ ಎಲ್ಲವನ್ನು ನೆನೆಯುತ್ತಾ ಕನಸಿನಿಂದೆದ್ದಂತೆ ಮರವೊಂದಕ್ಕೆ ಕಾರನ್ನು ಗುದ್ದಿಸಿ ನಿಲ್ಲುತ್ತಾನೆ. ಕಡೆಯದು ಇನ್ನು ಕ್ಲೈಮ್ಯಾಕ್ಸ್ ಇಲ್ಲಿಯೆ ಲೇಖಕರ ಚತುರತೆ ತಿಳಿಯುವುದು.

ಒಂದು ಮೂವಿ ನೋಡಿದ ಅನುಭವವಂತೂ ಆಗುತ್ತದೆ. ಓದುತ್ತಿದ್ದಂತೆ ನಾಯಕನ ಪಾತ್ರ ಹಲವರಿಗೆ ಗೊಂದಲವೂ, ಸಭ್ಯತೆಯ ಮೀರಿದಾಗಿಯೂ ಎನಿಸಿದರೆ ಅವನ ನಿಜಾಯತಿಯನ್ನು ಪ್ರಾಮಾಣಿಕತೆಯನ್ನು ಕಾಣುವುದರಲ್ಲಿ ಎಡವಬೇಕಾಗುತ್ತದೆ. ನಾಯಕ ಹೆಣ್ಣನ್ನು ಆಕರ್ಷಿಸಿ ಸೇರುವಲ್ಲಿ ಕೇವಲ ಅವನದ್ದೇ ಪಾತ್ರವಿದೆ ಎಂದು ಅವನ ಸೆಳವಿಗೆ ಸಿಕ್ಕ ಅಥವಾ ತಾವೆ ಅವನಲ್ಲಿ ಬೆಸೆಯಲ್ಪಡುವ ಹೆಣ್ಣುಮಕ್ಕಳಿಗೂ ಪಾಲಿದೆ ಎಂಬುದನ್ನು ಮನಗಾಣಬೇಕಾಗುತ್ತದೆ. ದೈಹಿಕ ಸಂಪರ್ಕವೇ ಆದ್ಯತೆಯಾಗಿ ತೆಗೆದುಕೊಳ್ಳದ ನಾಯಕನ ಪಾತ್ರದಲ್ಲಿ ಹೆಣ್ಣನ್ನು ಪರಿಪೂರ್ಣವಾಗಿ ಪ್ರೀತಿಸುವ, ಆಸ್ವಾದಿಸುವ, ಗೌರವಿಸುವ, ನಂಬುವ ಅತೀ ವಿಶ್ವಾಸದ ಮನುಷ್ಯನನ್ನು, ಅವರ ದುಃಖಕ್ಕೆ, ಭಾವನೆಗಳಿಗೆ ಸ್ಪಂದಿಸುವ ಮನಸನ್ನು ಕಾಣಬೇಕಾಗುತ್ತದೆ.
ಒಂದು ವಿಭಿನ್ನ ಕಥಾವಸ್ತುವನ್ನಿಟ್ಟುಕೊಂಡು ವಿಶಿಷ್ಟ ನಿರೂಪಣೆಯ ಮೂಲಕ ಕಾದಂಬರಿಯನ್ನು ತೆಗೆದುಕೊಂಡ‌ ಬಗೆಯಲ್ಲಿ ಒಂದು ಉತ್ತಮ ಉತ್ಕೃಷ್ಣ ಬರಹಗಾರರಾಗಿ ಮನಸ್ಸನ್ನಾಕ್ರಮಿಸುತ್ತಾರೆ ಮನೋಜ್. ಪಿ. ಎಂ(ದೇವಿ ಪುತ್ರನ್). ಅವರು ಬರೆದ #ಭಾಮೆ ಇದು ಅವರ ಮೂರನೆ ಪುಸ್ತಕವಾಗಿದ್ದು, ಎರಡನೆಯ ಕಾದಂಬರಿಯಾಗಿದ್ದು ವಿಶಿಷ್ಟ ನಿರೂಪಣೆಯಿಂದಲೂ ವಿಭಿನ್ನ ಕಥಾಹಂದರಗಳಿಂದಲೂ ಮನಗೆದ್ದ ಇವರ ಬರಹಗಳ ಅಪ್ಪಟ ಅಭಿಮಾನಿಯಾಗಿ ಈ ಕಾದಂಬರಿ ಬಹುತೇಕ ಕಾಡಿತ್ತು. ಈಗಿನ ಜನರೇಷನ್ ಇದನ್ನು ಸ್ಪಷ್ಟವಾಗಿ ಸ್ವೀಕರಿಸಬಹುದು ಎಂದೆಂತನ್ನಿಸುವುದು. ಪ್ರತೀ ಪುಟವನ್ನು ಆಸಕ್ತಿಯಿಂದ ತಿರುವುತ್ತಾ ಓದಿಸಿಕೊಂಡು ಹೋಗುವ ಕೌಶಲವುಳ್ಳ ಬರಹ ಇವರದ್ದು. ನೂರಾರು ಸಣ್ಣ ಕಥೆಗಳನ್ನು ಬರೆದು ಸಿನೆಮಾ ಕ್ಷೇತ್ರದಲ್ಲಿ ನಿರ್ದೇಶಕರು ಆಗಿರುವ ಇವರಿಗೆ ಮತ್ತಷ್ಟೂ ಯಶಸ್ಸು ಲಭಿಸಲಿ..


  • ಭಾಗ್ಯ.ಕೆ.ಯು (ಗೃಹಿಣಿ, ಹವ್ಯಾಸಿ ಬರಹಗಾರ್ತಿ), ಬೆಂಗಳೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW