ನಮ್ಮ ಬಂಗಾರದಂಥ ಇಸ್ಕೂಲು ! ನಮ್ಮ ಮುತ್ತಿನಂಥ ಮೇಷ್ಟ್ರುಗಳು !!

ಯಾವ ಊರುಗಳ ಇಸ್ಕೂಲುಗಳು ಯಂಗಿದ್ದವೋ ಏನೋ ನಮ್ಮೂರ ಪ್ರೈಮರಿ ಇಸ್ಕೂಲಂತೂ ಅಪ್ಪಟ ಬಂಗಾರದಂತಿತ್ತು . ಊರಿನಿಂದ ಫರ್ಲಾಂಗು ದೂರವಿದ್ದ ನಮ್ಮ ಸ್ಕೂಲಿನ ಬಲಕ್ಕೆ ಊರ ದೇವರಾದ ರಂಗನಾಥ ಸ್ವಾಮಿ ದೇವಸ್ಥಾನವಿದ್ದರೆ ಎಡಭಾಗಕ್ಕೆ ಅಂಟಿಕೊಂಡಂತೆ ಐದಾರು ಕುರಿರೊಪ್ಪಗಳು. – ಕೇಶವ ರೆಡ್ಡಿ ಹಂದ್ರಾಳ, ಮುಂದೆ ಓದಿ… 

ಅವುಗಳ ಅಂಚಿಗೆ ದೊಡ್ಡ ಕುಂಟೆ . ನಮ್ಮ ಸ್ಕೂಲು ಮುಂದಿನ ಬಯಲು ಸುಗ್ಗಿ ಕಾಲದಲ್ಲಿ ದೊಡ್ಡ ಕಣವಾಗಿ ಮಾರ್ಪಾಡಾಗುತ್ತಿತ್ತು . ಬಲವಾಗಿ ಗಾಳಿ ಬೀಸಿದರೆ ರಾಗಿ , ಹುರುಳಿ ಉಬ್ಲು ಇಸ್ಕೂಲಿಗೂ ನುಗ್ಗಿ ಬರುತ್ತಿತ್ತು . ಮಳೆಗಾಲದಲ್ಲಿ ಅಲ್ಲಲ್ಲಿ ಹೆಂಚು ಸೋರಿ ನೀರು ತೊಟ್ಟಿಕ್ಕುತ್ತಿತ್ತು ! ತೊಟ್ಟಿಕ್ಕುತ್ತಿದ್ದ ನೀರಿಗೆ ನಾವು ಒಬ್ಬರ ಮೇಲೊಬ್ಬರು ಬಿದ್ದು ಬಾಯಿ ತೆರೆದು ಕ್ಯಾಚ್ ಹಿಡಿದು ನುಂಗುತ್ತಿದ್ದೆವು . ವಿಶಾಲವಾದ ಒಂದೇ ಕೊಠಡಿ . ಎರಡು ಬಾಗಿಲು , ನಾಲ್ಕು ಕಿಟಕಿ . ಎರಡು ವಿರುದ್ಧ ದಿಕ್ಕಿನ ಗೋಡೆಗಳಲ್ಲಿ ಎರಡು ಬೋರ್ಡುಗಳು . ಒಂದು ಮತ್ತು ಎರಡನೇ ಕ್ಲಾಸಿನ ಮಕ್ಕಳು ಒಂದು ಗೋಡೆಗೆ ಮುಖಮಾಡಿ ಕುಂತರೆ , ಮೂರನೇ ಮತ್ತು ನಾಲ್ಕನೇ ಕ್ಲಾಸಿನ ವಿದ್ಯಾರ್ಥಿಗಳು ಇನ್ನೊಂದು ಗೋಡೆಗೆ ಮುಖಮಾಡಿ ಕುಳಿತುಕೊಳ್ಳುತ್ತಿದ್ದರು . ಸ್ಕೂಲಿನಲ್ಲಿ ಉತ್ಪಾದನೆಯಾಗುತ್ತಿದ್ದ ವಟವಟ ಎಂಬ ಕಪ್ಷಗಳು ವಟರುಗುಟ್ಟುತ್ತಿದ್ದಂಥ ಶಬ್ದ ಗಾಳಿಯಲ್ಲಿ ಎಗರಿ ಬಂದು ಊರಿಗೂ ಸ್ಪಷ್ಟವಾಗಿ ಕೇಳಿಸುತ್ತಿತ್ತು .

ಇನ್ನು ನಮ್ಮ ಮೇಷ್ಟ್ರುಗಳಿಗಂತೂ ನಮ್ಮ ತಲೆಗಳಲ್ಲಿ ಅಕ್ಷರ ತುಂಬುವುದರ ಜೊತೆಗೆ ಬೇಕಾದಷ್ಟು ಬೇರೆ ಬೇರೆ ಚಾಕರಿಗಳಿರುತ್ತಿದ್ದವು . ಊರಿನ ತುಂಬಾ ಬರಿ ಹೆಬ್ಬೆಟ್ಟು ಪಾರ್ಟಿಗಳೇ ತುಂಬಿದ್ದರು . ಅಕ್ಷರ ಓದಲು ಸುಮಾರು ಜನರಿಗೆ ಬರುತ್ತಿದ್ದರೂ ಬರೆಯಲು ಬರುತ್ತಿದ್ದದ್ದು ಪುಟ್ಟಾರಾಧ್ಯರಿಗೆ , ಭೀಮಪ್ಪನವರಿಗೆ ಮತ್ತು ನಮ್ಮ ದೊಡ್ಡಪ್ಪ ಹನುಮಂತರೆಡ್ಠಿಗೆ ಮಾತ್ರ . ಭೀಮಪ್ಪನವರ ಅಕ್ಷರಗಳು ಬ್ರಹ್ಮಲಿಪಿ ಯಾದ್ದರಿಂದ ಯಾರೂ ಅವರ ಹತ್ತಿರ ಹೋಗುತ್ತಿರಲಿಲ್ಲ . ಇನ್ನು ನಮ್ಮ ದೊಡ್ಡಪ್ಪ ಸ್ವಲ್ಪ ಕಟ್ಟುನಿಟ್ಟಿನ ಮತ್ತು ಖಡಕ್ ಮನುಷ್ಯನಾಗಿದ್ದರಿಂದ ” ಆ ತಿಕ್ಕುಲ್ತುಲ್ ಹನುಮಂತ ರೆಡ್ಡಿತಾವೇನ್ನಡಿರಿ ..” ಎಂದು ಕಾಗದ ಓದಿಸುವವರು , ಕಾಗದ ಬರೆಸುವವರು ಬಂದು ನಮ್ಮ ಮೇಷ್ಷ್ರಿಗೆ ಮಂಡಿಗೆ ಬೀಳುತ್ತಿದ್ದರು . ಕೆಲವರು ಪೋಸ್ಟ್ ಕಾರ್ಡ್ ತಂದುಕೊಟ್ಟು ಅಡ್ರಸ್ಸು ಮತ್ತು ವಿಷಯ ಹೇಳಿ ” ಬರ್ದು ಹಂಗೆ ಪೋಸ್ಟ್ ಡಬ್ಬುಕ್ಕೆ ಹಾಕಿ ಮೇಷ್ಟ್ರೆ..” ಎಂದು ಅದೇ ಹೋಗುತ್ತಿದ್ದರು . ಸಣ್ಣಪುಟ್ಟ ಜಗಳಗಳಾದರೆ ನ್ಯಾಯಕ್ಕೆಂದು ಮೇಷ್ಟ್ರ ಹತ್ತಿರ ಬರುತ್ತಿದ್ದರು . ಇನ್ನೂ ಕೆಲವರು ಹಸು , ಎಮ್ಮೆ ವ್ಯಾಪಾರವಾದರೆ ರೇಟು ಕರೆಕ್ಟಾಗಿ ಇದೆಯೋ ಇಲ್ಲವೋ ಎಂದು ತಿಳಿದುಕೊಳ್ಳಲು ಮೇಷ್ಟ್ರನ್ನು ಅವಲಂಬಿಸುತ್ತಿದ್ದರು . ಇನ್ನು ಹಬ್ಬ , ಜಾತ್ರೆ ತಿಳಿದುಕೊಳ್ಳಲು ಕುರಿರೊಪ್ಪದವರ ಸಮೇತ ಊರಿನವರು ದಿನವೂ ಯಾರಾದರೊಬ್ಬರು ಇದ್ದೇ ಇರುತ್ತಿದ್ದರು . ಆಗ ಮೇಷ್ಟ್ರು ಪಾಠ ಮಾಡುವುದನ್ನು ಅರ್ಧಕ್ಕೆ ನಿಲ್ಲಿಸಿ ಜೇಬಿನಲ್ಲಿದ್ದ ಪ್ಯಾಕೆಟ್ ಕ್ಯಾಲೆಂಡರ್ ತೆಗೆದು ಇಂತಿಂಥ ದಿನ ಎಂದು ಹೇಳಿ ಕಳಿಸುತ್ತಿದ್ದರು . ನಮ್ಮ ಅಂಜಿನಪ್ಪ ಮೇಷ್ಟ್ರಂತೂ

” ಥತ್ ಈ ಮೇಷ್ಟ್ರು ಕೆಲಸಕ್ಕಿಂಥ ಒಂದಿಪ್ಪತ್ ಕುರಿ ಮೇಯ್ಸೋದೆ ವಾಸಿ ..” ಎಂದು ತಮ್ಮಷ್ಟಕ್ಕೆ ತಾವೇ ಗೊಣಗಿಕೊಳ್ಳುತ್ತಿದ್ದರು .

ಫೋಟೋ ಕೃಪೆ : ndtv

ಇನ್ನು ಸ್ಕೂಲಿನಲ್ಲಿ ಸ್ಟೂಡೆಂಟ್ಸನ್ನು ನಿಭಾಯಿಸುವುದು ಮೇಷ್ಟ್ರುಗಳಿಗೆ ದೊಡ್ಡ ಚಾಲೆಂಜಿಂಗ್ ಕೆಲಸವಾಗಿತ್ತು . ಹೊಸದಾಗಿ ಸ್ಕೂಲ್ ಸೇರಿ ಮಂಡಿಗೆ ಬಿದ್ದ ಕೆಲವು ಮಕ್ಕಳನ್ನು ಮನೆಯ ಯಾರಾದರೂ ದೊಡ್ಡವರು ಸೌದೆ ಹೊರೆ ಹೊತ್ತು ತರುವಂತೆ ತಂದು ಸ್ಕೂಲ್ ಬಾಗಿಲಲ್ಲಿ ಬಿಸಾಕಿ ಹೋಗುತ್ತಿದ್ದರು . ಮೇಷ್ಟ್ರಿಗೆ ಹೆದರಿ ಕೆಲವರು ಸುಮ್ಮನಾದರೂ ಕೆಲವರು ಒಂದಾ ಎರಡಾ ಮಾಡಿಕೊಂಡು ಬಿಡುತ್ತಿದ್ದರು . ಆಗ ಮಾನಿಟರ್ ಎನಿಸಿಕೊಂಡವರು ಕಾರ್ಯೋನ್ಖುರಾಗುತ್ತಿದ್ದರು . ಸ್ಕೂಲಿನ ಮುಂದೆಯೇ ಇದ್ದ ಕೆಂಕೇಸರಿ ಹೂಗಳನ್ನು ಕಿತ್ತು ತಿನ್ನುವುದಕ್ಕೆ ಕೆಲವರು ಮರ ಹತ್ತುತ್ತಿದ್ದರು . ಆಗ ಮೇಷ್ಟ್ರು ಸ್ಕೂಲ್ ಬಾಗಿಲಿನಲ್ಲಿ ನಿಂತೇ ” ಹುಷಾರ್ರಲೇ ,ಬಿದ್ಗಿದ್ ಕೈಕಾಲು ಮುರ್ಕಂಡಿರಲೆ ಕೋತಿಗ್ಳ..” ಎಂದು ಕೂಗಿಕೊಳ್ಳುತ್ತಿದ್ದರು . ಸ್ಕೂಲಿನಲ್ಲಿ ಜಾವನರು ಇಲ್ಲದಿದ್ದರಿಂದ ಜಾವನನಿಂದಿಡಿದು ದಿವಾನನ ಕೆಲಸದವರೆಗೂ ಮೇಷ್ಟ್ರೇ ಮಾಡಬೇಕಾಗಿತ್ತು . ಸ್ಕೂಲಿನ ಬಾಗಿಲು , ಕಿಟಕಿಗಳನ್ನು ತೆಗೆಯುವುದು ಮತ್ತು ಮುಚ್ಚುವುದು , ಕಸ ಹೊಡೆಯುವುದು ಮುಂತಾದ ಕೆಲಸಗಳಲ್ಲಿ ಹುಡುಗರೊಂದಿಗೆ ಮೇಷ್ಟ್ರೂ ಕೈ ಜೋಡಿಸುತ್ತಿದ್ದರು . ಇನ್ನೂ ಎಷ್ಟೊಂದು ಬರೆಯಬಹುದು ! ಈಗ ಪರಿಸ್ಥಿತಿ ತುಂಬಾ ಸುಧಾರಿಸಿದೆ .
ಕಾಲೇಜು , ವಿಶ್ವವಿದ್ಯಾಲಯದ ಮೇಷ್ಟ್ರುಗಳಿಗಿಂತಲೂ ಪ್ರೈಮರಿ , ಮಿಡ್ಲಿಸ್ಕೂಲುಗಳ ಮೇಷ್ಟ್ರುಗಳ ಕೆಲಸ ಸಾಹಸದಾಯಕವಾದದ್ದೆ ಸರಿ . ನಾನೂ ಆರು ವರ್ಷಗಳ ಕಾಲ ಕಾಲೇಜು ಮೇಷ್ಟ್ರು ಕೆಲಸ ಮಾಡಿರುವೆನೆಂಬ ಹೆಮ್ಮೆ ನನಗಿದೆ . ಎಲ್ಲಾ ಕೆಲಸಗಳಿಗಿಂತ ಮೇಷ್ಟ್ರು ಕೆಲಸ ಪವಿತ್ರವಾದದ್ದು ಎಂಬ ನಂಬಿಕೆ ಕೂಡ . ಜಗತ್ತಿನ ಎಲ್ಲಾ ಹಂತದ ಗುರುವರ್ಯರಿಗೂ ಶಿಕ್ಷಕರ ದಿನಾಚರಣೆಯಂದು ಶಿರಸಾಸ್ಟಾಂಗ ನಮಸ್ಕಾರಗಳು .


  • ಕೇಶವ ರೆಡ್ಡಿ ಹಂದ್ರಾಳ  (ಸುಮಾರು ಐನೂರು ಕಥೆಗಳು , ಮುನ್ನೂರು ಪ್ರಬಂಧಗಳು ಕನ್ನಡದಲ್ಲಿ ಪ್ರಕಟಗೊಂಡಿವೆ. ಕೆ ಎ ಎಸ್ ಅಧಿಕಾರಿಯಾಗಿ ನಿವೃತ್ತಿಯನ್ನು ಹೊಂದಿದ್ದಾರೆ)

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW