‘ಇರಬೇಕು ಇಳೆಯಲ್ಲಿ, ಸಾಗರಾರ್ಣವದಂತೆ’….ಕವಿ ಅನಂತ ನಾಯಕ ಅವರ ಕವಿತೆಯ ಸುಂದರ ಸಾಲುಗಳು ಓದುಗರ ಮುಂದೆ…ತಪ್ಪದೆ ಓದಿ…
ಇರಬೇಕು ಇಳೆಯಲ್ಲಿ
ಪ್ರಖರ ಭಾನುವಿನಂತೆ,
ತಿಮಿರದಿ ನರಳುವಗೆ
ಸೊಡರು ಬೆಳಗುವಂತೆ|೧|
ಇರಬೇಕು ಇಳೆಯಲ್ಲಿ
ಸ್ವಚ್ಛ ತರುವಿರುವಂತೆ,
ನಿಚ್ಚ ನಿಲುವ ಪಥಿಕರ
ನೆರಳ ಕಾವಣದಂತೆ |೨|
ಇರಬೇಕು ಇಳೆಯಲ್ಲಿ
ಸಾಗರಾರ್ಣವದಂತೆ,
ಬರುವೆಲ್ಲ ನದಿಗಳಿಗೆ
ಮಡಿಲಿನಾಶ್ರಯದಂತೆ |೩|
ಇರಬೇಕು ಇಳೆಯಲ್ಲಿ
ಮಂದ ಮಾರುತದಂತೆ,
ಆರುಮೆಯ ನಮ್ಮಿರುವು
ಚಂದನದ ಸೊವಡಿನಂತೆ |೪|
ಇರಬೇಕು ಇಳೆಯಲ್ಲಿ
ಉಲಿವ ಕೋಕಿಲನಂತೆ,
ಉಕ್ತಿಯಲಿ ಅಕ್ಕರೆಯ
ಅಬ್ಬೆಯಾಸರೆಯಂತೆ |೫|
ಇರಬೇಕು ಇಳೆಯಲ್ಲಿ
ಎತ್ತರದ ಗಿರಿಯಂತೆ,
ಸಾತ್ವಿಕ ಚಿಂತನೆಯ
ಸಂತರ ಬದುಕಿನಂತೆ |೬|
- ಅನಂತ ನಾಯಕ (ಕವಿಗಳು, ಹಿರಿಯ ಲೇಖಕರು, ಕತೆಗಾರರು) ಬೆಂಗಳೂರು
