ಬದಲಾದ ತಲೆಮಾರುಗಳಲ್ಲಿ ಕಂಡು ಬರುವ ವ್ಯತ್ಯಾಸ

ತಲೆಮಾರು ಬದಲಾದ ತಕ್ಷಣ ತಂತ್ರಜ್ಞಾನ, ಜೀವನಮಟ್ಟ ಮತ್ತು ಕಾಲಗತಿಗನುಸಾರವಾಗಿ ಬದಲಾವಣೆಯಲ್ಲಿ ಕಂಡು ಬರುವ ವ್ಯತ್ಯಾಸವನ್ನು ಲೇಖಕ ಕೆಎಂ.ಅವರು ಗಮನಿಸಿದಾಗ ಅವರಿಗೆ ಅನ್ನಿಸಿದ್ದು ಹೀಗೆ, ಮುಂದೆ ಓದಿ…

ತಲೆಮಾರು ಬದಲಾದ ತಕ್ಷಣ ನಂಬಿಕೆ ಮತ್ತು ನಡವಳಿಕೆ ಎರಡರಲ್ಲೂ ಸಮಕಾಲೀನತೆಯ ವ್ಯತ್ಯಾಸ ಸ್ಪಷ್ಟವಾಗಿ ಗೋಚರಿಸುತ್ತದೆ. ಇದು ಅಂದು, ಇಂದು, ಮುಂದೂ ನಡೆದದ್ದು, ನಡೆಯುವಂಥದ್ದೇ. ಅಜ್ಜನ ಹಾಗೆ ಅಪ್ಪ, ಅಪ್ಪನ ಹಾಗೆ, ಮಗ, ತಾತನ ಹಾಗೆ ಮೊಮ್ಮಗನ ಪರಿಸ್ಥಿತಿ ಹಾಗೂ ಮನಃಸ್ಥಿತಿ ಎರಡೂ ಇರುವುದಿಲ್ಲ. ಹಾಗಿರುವಾಗ ತಂತ್ರಜ್ಞಾನ, ಜೀವನಮಟ್ಟ ಮತ್ತು ಕಾಲಗತಿಗನುಸಾರವಾಗಿ ತಲೆಮಾರಿನ ಬದಲಾವಣೆಯಲ್ಲಿ ಕಂಡು ಬರುವ ವ್ಯತ್ಯಾಸಗಳು ಇವೆಲ್ಲ ಗಮನಿಸಿದಾಗ ಅನ್ನಿಸಿದ್ದು ನನಗೆ.

  • ಒಂದು ಕಾಲಕ್ಕೆ ಆಕಸ್ಮಿಕವಾಗಿ, ಅಪರೂಪಕ್ಕೆ ಬಂಧು ಮಿತ್ರರನ್ನು ಕಂಡಾಗ ನಾವಾಗಿ ಹತ್ತಿರ ಹೋಗಿಯೋ, ದೂರದಿಂದ ಪರಿಚಯದ ಸನ್ನೆ ಮಾಡಿಯೋ ಮಾತನಾಡಿಸುವುದು, ಬಳಿ ಕುಳಿತು ಕಷ್ಟಸುಖ ಮಾತನಾಡುವುದಿತ್ತು. ಕರೆಯದೇ ನೆಂಟರಾಗಿ ಬಂಧುಗಳ ಮನೆಗೆ ಹೋಗುವುದಿತ್ತು. ಎಲ್ಲೋ ಕಂಡಾಗ ಮಾತನಾಡುವಷ್ಟು ವ್ಯವಧಾನ, ಕನಿಷ್ಠ ಪರಿಚಯದ ನಗು ಬೀರುವಷ್ಟು ಸಾವಕಾಶ ಹಾಗೂ ಸಮಾಧಾನ ಎರಡೂ ಇತ್ತು. ಅದೇ ತಲೆಮಾರಿನ ಕೊನೆಯ ಕೊಂಡಿಗಳು ಮತ್ತು ಹೊಸ ತಲೆಮಾರಿನವರಿಗೆ ಇದು ದೊಡ್ಡ ಸಂಗತಿ ಆಗುವುದಿಲ್ಲ. ಬದುಕಿಗೆ ಓದು, ಓದಿದ್ದಕ್ಕೆ ಕೆಲಸ, ಕೆಲಸಕ್ಕಾಗಿ ಬದುಕು ಮತ್ತು ಕೆಲಸದ ನಡುವೆ ಬಿಡುವು ಸಿಕ್ಕರೆ ಮಾತ್ರ ವೈಯಕ್ತಿಕ ಬದುಕು.. ಇಂಥದ್ದೊಂದು ಕಾಂಬಿನೇಶನ್ ನ ತಲೆಮಾರು ಮೊಬೈಲಿನಲ್ಲಿ, ಲ್ಯಾಪ್ ಟಾಪಿನಲ್ಲಿ ವ್ಯಸ್ತವಾಗಿರುವಾಗ ತೀರಾ ಪರಿಚಿತರು ಬಳಿ ಸಾರಿದರೂ, ಪಕ್ಕದಲ್ಲೇ ಕುಳಿತರೂ, ಮಾತನಾಡಲು ಹಾತೊರೆದರೂ ಕನಿಷ್ಠ ಮುಖ ತಿರುಗಿಸಲು, ಪರಿಚಯದ ನಗು ಬೀರಲು, ಒಂದು ಗೌರವದ ಸಂಕೇತ ನೀಡಲು ಮನಸ್ಸು ಮಾಡುವುದಿಲ್ಲ. ಮುಖದ ನರಗಳನ್ನು ಸಡಿಲಗೊಳಿಸಿ ಒಂದು ಮುಗುಳುನಗೆ ಬೀರಬೇಕು ಅನ್ನಿಸುವುದಿಲ್ಲ. ವ್ಯಸ್ತ ಬದುಕಿನ ಅನಿವಾರ್ಯತೆಗಳಾದ ಮೊಬೈಲು, ಓದು, ಕೆಲಸ ಇವುಗಳ ನಡುವೆ ಸ್ನೇಹಪೂರ್ವಕ ಶಿಷ್ಟಾಚಾರಗಳು ಅನಿವಾರ್ಯಗಳಲ್ಲ ಎಂಬಲ್ಲಿ ವರೆಗೆ ತಲುಪಿದೆ. ಪರಿಚಿತರನ್ನು ಸವರಿಕೊಂಡೇ ಹೋದರೂ ಮುಖದ ಬಿಗುಮಾನ ಸಡಿಲವಾಗದಿದ್ದಾಗ, ಅದರ ಹಿಂದಿನ ತಲೆಮಾರು ನಿರ್ಲಿಪ್ತವಾಗಿ ಕೂರುವಷ್ಟರ ಮಟ್ಟಿಗೆ ಕಾಲ ಅಪ್ ಗ್ರೇಡ್ ಆಗಿದೆ.

 

  • ರಾತ್ರಿ ಇಡೀ ಕುಳಿತು ಯಕ್ಷಗಾನ ನೋಡುವುದು, ಮೊಬೈಲ್ ಸ್ವಿಚಾಫ್ ಮಾಡಿ ಹರಿಕತೆ ಕೇಳುವುದು, ಸಂಗೀತ ಆಲಿಸುವುದು, ಭರತನಾಟ್ಯ ನೋಡುವುದು, ಮತ್ತೇನೂ ಬೇಡ, ಗಂಟೆಗಟ್ಟಲೆ ಕಾಲ ಅಪೇಕ್ಷಿಸುವ ತಾಲಮದ್ದಲೆಗಳನ್ನು ತಾಳ್ಮೆಯಿಂದ ವೀಕ್ಷಿಸುವುದು ಇವೆಲ್ಲ ನನ್ನ ತಲೆಮಾರಿನವರೆಗೂ ಮುಂದುವರಿದು ಬಂದಿದೆ. ಇಂದು ಹಾಗಲ್ಲ. ರಾತ್ರಿ ಇಡೀ ಬಿಡಿ, ಕನಿಷ್ಠ ಮೂರು ಗಂಟೆ ಯಾಕೆ, ಅರ್ಧ ಗಂಟೆಯೂ ಮೊಬೈಲ್ ಪಕ್ಕಕ್ಕಿಟ್ಟು ಮೇಲೆ ಹೇಳಿದ ಯಾವ ಸಾಂಸ್ಕೃತಿಕ ಕಾರ್ಯಕ್ರಮ ನೋಡುವುದಕ್ಕೂ ಈ ತಲೆಮಾರಿಗೆ ಪುರುಸೊತ್ತಿಲ್ಲ. ಒಂದು ವೇಳೆ ಯಾರದ್ದಾದರೂ ಒತ್ತಾಯಕ್ಕೆ ಅಂತಹ ಕಾರ್ಯಕ್ರಮಕ್ಕೆ ಬಂದರೂ ಅವರಿಗೆ ಮೊಬೈಲ್ ಪಕ್ಕಕ್ಕಿರಿಸಿ ಇರುವುದಕ್ಕಾಗುವುದಿಲ್ಲ. ಮೊಬೈಲ್ ಪಕ್ಕಕ್ಕೆ ಇರಿಸಿದರೂ ಏಕಾಗ್ರತೆ ದಕ್ಕುವುದಿಲ್ಲ. ಏನೋ ಅನ್ಯಮನಸ್ಕತೆ ಕಾಡುತ್ತದೆ. ಇವರಿಗೆ ರೀಲ್ಸು, ವಾಟ್ಸಪ್ ಸ್ಟೇಟಸ್ಸು, ಇನ್ ಸ್ಟಾ ವಿಡಿಯೋಗಳಲ್ಲಿ ಬರುವ ಪುಟ್ಟ ಪುಟ್ಟ ಇನ್ ಸ್ಟಂಟ್ ಮನರಂಜನೆಯೇ ಸಾಕಷ್ಟು ನಿರಾಳತೆ ನೀಡುತ್ತವೆ. ಬೇಕಾದ್ದನ್ನು ಯೂಟ್ಯೂಬಿನಲ್ಲಿ ಬೇಕಾದಾಗ ನೋಡಿಕೊಳ್ಳುತ್ತಾರೆ, ಮತ್ತೆ ಪ್ರತಿಕ್ರಿಯೆಗಳನ್ನೆಲ್ಲ ಇಮೋಜಿಗಳಲ್ಲಿ, ಜಿಫ್ ರೂಪದಲ್ಲಿ, ಸ್ಮೈಲಿಗಳಾಗಿ ಪರಿವರ್ತಿಸಿ ವ್ಯಕ್ತಪಡಿಸುತ್ತಾರೆ. ಅವರು ಸಾಗುವ ರಸ್ತೆಯಲ್ಲೇ ಒಂದು ಯಕ್ಷಗಾನವೋ, ನಾಟಕವೋ ಆದರೂ ಒಂದ ಹತ್ತು ನಿಮಿಷ ನಿಂತು ನೋಡಿ ಹೋಗುವ ಅಂತ ಅನ್ನಿಸುವುದಿಲ್ಲ. ಯಾಕಂದರೆ ಮೊಬೈಲಿನಲ್ಲಿ ಬೇಕಾದಾಗ, ಬೇಕಾದ್ದನ್ನು ನೋಡುವುದಕ್ಕೆ ಸಾಧ್ಯವಿದೆ. ಟೈಂ ವೇಸ್ಟ್ ಆಗುವುದಿಲ್ಲ ಎಂಬ ಕಲ್ಪನೆ ಇದೆ. ಒಂದು ಸಮೂಹದ ನಡುವೆ ಕುಳಿತು ಒಂದು ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮದ ಅನುಭೂತಿ ಹೊಂದುವುದು ಬಹುಶಃ ಈ ತಲೆಮಾರಿಗೆ ಬೇಕಾಗಿಲ್ಲ. ಜನರೊಡನೆ ಬೆರೆಯದೇ ಒಂಟಿಯಾಗಿ ನಗುವುದರಲ್ಲೇ ಅವರಿಗೆ ಖುಷಿಯಿದೆ !

 

  • ಒಂದು ತಲೆಮಾರಿನವರು ಕಾಪಾಡಿಕೊಂಡು ಬಂದಿದ್ದ ಶಿಷ್ಟಾಚಾರ, ಕುತೂಹಲ, ಗೌರವದ ದ್ಯೋತಕಗಳು, ಹಳತ್ತರ ಕುರಿತಾದ ಅಪಾರ ಗೌರವ, ಪ್ರೀತಿ, ಸಾಂಸ್ಕೃತಿಕ ಹೆಗ್ಗುರುತುಗಳೆಂಬ ಅಭಿಮಾನ ಅದರ ನಂತರದ ತಲೆಮಾರಿನವರ ಪಾಲಿಗೆ “ಸಿಲ್ಲಿ ಫಂಡಾಗಳು” ಎಂಬಷ್ಟರ ಮಟ್ಟಿಗೆ ಕ್ಲೀಷೆಯಾಗಿ ಹೋಗಿದೆ. ಅವರು ಎಲ್ಲವನ್ನು ಸಮಯದ ತಕ್ಕಡಿಯಲ್ಲಿ ತೂಗಿ ನೋಡಿ ನಿರ್ಧರಿಸುತ್ತಾರೆ, ಇದಕ್ಕೆಷ್ಟು ಸಮಯ ಕೊಡಬೇಕು, ಅದಕ್ಕೇನು ಮಹತ್ವ ಕೊಡಬೇಕು ಅಂತ. ಅಜ್ಜನ ಕಾಲದ ಆಲದ ಮರವೆಂಬ ಭ್ರಮೆಯೋ, ಹಳತ್ತರ ಕೊಂಡಿಯನ್ನು ಇನ್ನೂ ಜೀವಂತ ಉಳಿಸಬೇಕೆಂಬ ತುಡಿತವೋ ಅವರಿಗೆ ಬಹಳಷ್ಟು ಸಲ ಕಾಡುವುದೇ ಇಲ್ಲ. ಆಗಲೇ ಹೇಳಿದ ಹಾಗೆ ಈ ತಲೆಮಾರಿನವರ ಖುಷಿಗಳು, ಅವರ ನಿರೀಕ್ಷೆಗಳು, ಅವರ ತೋರ್ಪಡಿಕೆಗಳಿಗೆ ಇರುವ ವೇದಿಕೆಗಳೇ ಬೇರೆ. ಹಾಗಾಗಿ ಖುಷಿ ಎಂದರೆ ಏನು, ಸಾರ್ಥಕತೆ ಯಾವುದರಲ್ಲಿ ಅಡಗಿದೆ, ದಿನದ ಕೊನೆಗೆ ಮನಸ್ಸಿಗೆ ನೆಮ್ಮದಿ ನೀಡುವುದು ಯಾವುದು ಎಂಬ ಪ್ರಶ್ನೆಗೆ, ಈ ಅರ್ಧ ವಯಸ್ಸು ದಾಟಿದ ತಲೆಮಾರಿನವರೂ, ಈಗ ಅರ್ಧ ವಯಸ್ಸಿನತ್ತ ಬರುತ್ತಿರುವ ತಲೆಮಾರಿನವರಿಗೂ ತುಂಬ ವ್ಯತ್ಯಾಸಗಳನ್ನು ಸ್ಪಷ್ಟವಾಗಿ ಗುರುತಿಸಬಹುದು.

 

  • ನಡೆದುಕೊಂಡೇ ಶಾಲೆಗೆ ಹೋದ ಅನುಭವ, ಅಲ್ಲಿ ಅಸಂಖ್ಯಾತದ ಸಂಖ್ಯೆಯಲ್ಲಿದ್ದ ಸಹಪಾಠಿಗಳು, ಬೇರೆ ಬೇರೆ ಹಿನ್ನೆಲೆಯ ಶಿಕ್ಷಕರು, ಅತ್ಯಂತ ತಳಮಟ್ಟದ ಮೂಲಸೌಕರ್ಯ, ವಿಶಾಲ ಬಯಲು, ಸೌಮ್ಯ ವಾತಾವರಣದ ಶಾಲೆಗಳಲ್ಲಿ ಕಲಿತು ದೊಡ್ಡವರಾದವರು, ವಸ್ತ್ರಕ್ಕೆ, ಲೇಖನಿಗೆ, ಚಪ್ಪಲಿಗೆ, ಚೀಲಕ್ಕೆ, ಕೊಡೆ ತಕ್ಕೊಳ್ಳಲಿಕ್ಕೆ ಖರ್ಚೆಷ್ಟಾಗುತ್ತದೆ ಅಂತ ಲೆಕ್ಕ ಹಾಕಿ ದೊಡ್ಡವರಾದವರು, ಕಷ್ಟ ಕಂಡವರು, ಕಳೆದ ವರ್ಷದ ನೋಟ್ಸು ಪುಸ್ತಕದ ಹಾಳೆಗಳಲ್ಲೇ ಈ ವರ್ಷದ ರಫ್ ಪುಸ್ತಕ ಮಾಡಿ ಬೆಳೆದವರು ಇಂದು ಜಗತ್ತನ್ನು ಕಾಣುವುದಕ್ಕೂ, ಇಂದು ಸ್ಕೂಲ್ ಬಸ್ಸಿನಲ್ಲೇ ಶಾಲೆಗೆ ಹೋಗುವ ತಲೆಮಾರಿಗೂ ತುಂಬಾ ವ್ಯತ್ಯಾಸಗಳಿವೆ. ಬಹುತೇಕ ವೈವಿಧ್ಯತೆಯೇ ಇಲ್ಲದ ಶಾಲಾ ಬದುಕು, ಕೇಳಿದಾಗ, ಕೇಳಿದಷ್ಟು ಸಿಕ್ಕುವ ಅನುಕೂಲಗಳು, ಯೂನಿಫಾರಂ ಥರಹ ಒಂದೇ ರೀತಿಯ ವ್ಯವಸ್ಥೆ, ಒಂದೇ ರೀತಿಯ ಶಿಕ್ಷಣ, ಒಂದೇ ರೀತಿಯ ಮನಸ್ಥಿತಿಗಳ ನಡುವೆ ವೈವಿಧ್ಯತೆ ಎಂದರೆ ವಾರಾಂತ್ಯದಲ್ಲಿ ಊರಿನ ಮೈದಾನದಲ್ಲಿ ನಡೆಯುವ ಎಕ್ಸಿಬಿಷನ್ನಿನೊಳಗಿರುವ ಕೃತಕ ಕಾಡು ಎಂಬ ಹಾಗಿದೆ ಬದುಕು. ಹಾಗಿರುವಾಗ ಹೋಲಿಕೆ ಮಾಡಲು, ವ್ಯತ್ಯಾಸ ಕಂಡುಕೊಳ್ಳಲು ಒಂದು ಜಗತ್ತೇ ಕಣ್ಣೆದುರಿಗೆ ಇಲ್ಲದಿರುವಾಗ, ಹಳೆ ತಲೆಮಾರು ಹೇಳುವ ಅಜ್ಜಿಕತೆಗಳಿಂದ ಒಂದು ಚಂದದ ಬದುಕಿನ ಕಲ್ಪನೆ ಕಟ್ಟಿಕೊಳ್ಳಲು ಸೋಲುವ ಇಂದಿನ ತಲೆಮಾರಿಗೆ ಅವೆಲ್ಲ ಆಗದ, ಹೋಗದ ಭ್ರಾಮಕ ಜಗತ್ತು ಅನ್ನಿಸಬಹುದೇನೋ… ಹಾಗಾಗಿ ಈ ತಲೆಮಾರಿನ ಅಚ್ಚರಿಗಳು, ಕುತೂಹಲಗಳ ವ್ಯಾಖ್ಯಾನ ಬದಲಾಗಿದೆ!

 

  • ಕಾಲದ ವ್ಯಾಖ್ಯೆ ಬದಲಾಗಿಲ್ಲ. ದಿನಕ್ಕೆ ಈಗಲೂ 24 ಗಂಟೆಯೇ ಇದೆ. ಆದರೆ, ಯಾಕೋ ಅದೂ ಸಾಲುವುದಿಲ್ಲ ಎಂಬ ಹಾಗೆ. ಬದುಕಿನ ವಿಧಾನ ಒಂದೇ ತಲೆಮಾರಿನ ಪೂರ್ವಾರ್ಧ ಮತ್ತು ಉತ್ತರಾರ್ಧದಲ್ಲಿ ತುಂಬ ತುಂಬ ಬದಲಾಗುತ್ತಿದೆ. ಹಾಗಾಗಿ ಅದೇ ತಲೆಮಾರಿನ ವ್ಯಕ್ತಿ ಹುಟ್ಟಿ ಬೆಳೆದಾಗಿನ ದಿನಗಳಿಗೂ, ಬದುಕು ಮುಂದೆ ಕೊಂಡುಹೋಗುವ ದಿನಕ್ಕೂ ಆದ ಸ್ಥಿತ್ಯಂತರಗಳ ನಡುವಿನ ಸಮತೋಲನ ಸರಿದೂಗಿಸಲು ಪರದಾಡುತ್ತಿರುತ್ತಾನೆ. ಮೊಬೈಲ್ ಇಲ್ಲದೆ ಯೌವ್ವನ ಕಳೆದ ವ್ಯಕ್ತಿ ಬದುಕಿನ ಇಳಿ ವಯಸ್ಸಿನಲ್ಲಿ ವಾಟ್ಸಪ್ಪಿನಲ್ಲೇ ವ್ಯವಹಾರ ಮಾಡಲು ಸರ್ಕಸ್ಸು ಮಾಡುವ ಹಾಗೆ! ಈ ವಾಟ್ಸಪ್ಪು ಇಡೀ ತಲೆಮಾರೊಂದರ ಹತಾಶ ಸಂವಹನ ಸೇತುವಿಗೊಂದು ಕನ್ನಡಿ ಇದ್ದ ಹಾಗೆ ಅಂತ ತುಂಬ ಸಲ ಅನ್ನಿಸುವುದಿದೆ.

ಫೋಟೋ ಕೃಪೆ : readsector

ಅದೊಂದು ಕಾಲ ಇತ್ತು, ಅದೇ ಚಂದ. ಇಂದು ಕಾಲ ಕೆಟ್ಟಿದೆ ಎಂಬಿತ್ಯಾದಿ ಮಾತುಗಳು ಕ್ಲಿಷೆ ಆಗಿ ಬಿಡುತ್ತವೆ. ಬದುಕನ್ನು ನೋಡುವ, ಸ್ವೀಕರಿಸುವುದರಲ್ಲಿ ಚಂದ, ಕೆಟ್ಟದು ಎಲ್ಲ ಅಡಗಿದೆ. ನಾನು ಹೇಳಹೊರಟಿರುವುದು ಒಂದೇ ವ್ಯವಸ್ಥೆಯ, ಒಂದೆ ಮನೆಯ, ಒಂದೇ ಪ್ರದೇಶದ ಎರಡು ತಕ್ಷಣದ ತಲೆಮಾರುಗಳು ಬದುಕನ್ನು ನೋಡುವುದು, ಸ್ವೀಕರಿಸುವುದು ಮತ್ತು ಪ್ರತಿಕ್ರಿಯಿಸುವುದರಲ್ಲಿ ತುಂಬ ತುಂಬ ವ್ಯತ್ಯಾಸಗಳಿವೆ ಅಂತ. ಅವರವರ ಪಾಲಿಗೆ ಅವರವರು ಸರಿಯಾಗೇ ಇದ್ದಾರೆ. ಸ್ಥಿತ್ಯಂತರಗಳ ನಡುವೆ ನಿಂತು ಅಂಪೈರ್ ಥರ ವಿಮರ್ಶೆ ಮಾಡಲು ಹೊರಟಾಗ ನಡುವಿನ ಕಂದಕ ಎದ್ದು ಕಾಣುತ್ತದೆ. ಹೊಂದಿಕೊಂಡು ಬದುಕುವವನಿಗೆ ಕ್ರಮೇಣ ದೃಷ್ಟಿ ಸ್ಪಷ್ಟವಾಗುತ್ತಾ ಬಂದು ಸಹಜವಾಗಿರಲು ಪ್ರಯತ್ನಿಸುತ್ತಾನೆ. ಮಂಡೆ ಬಿಸಿ ಮಾಡಿಕೊಂಡು ಚಿಂತಿಸುತ್ತಾ ಕೂರುವವನ ದೃಷ್ಟಿ ಸರಿಯಾಗಿ ಫೋಕಸ್ ಆಗದೆ, ಕನ್ನಡಕದ ನಂಬರ್ ಬದಲಾಯಿಸುತ್ತಲೇ ಇರಬೇಕಾಗುತ್ತದೆ!


  • ಕೆಎಂ. (ಹವ್ಯಾಸಿ ಬರಹಗಾರ) ಮಂಗಳೂರು
0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW