‘ಭರವಸೆಯೇ ಬದುಕು’ ಕೃತಿ ಪರಿಚಯ

ಲೇಖಕಿ ಶ್ವೇತಾ ಭಿಡೆ ಅವರ ಮೊದಲ ಪುಸ್ತಕ ‘ಚಿಂತೆ ಬಿಡಿ chill ಮಾಡಿ’ ಯ ಯಶಸ್ಸಿನ ಬಳಿಕ ಬರೆದ ಎರಡನೇ ಪುಸ್ತಕ ‘ಭರವಸೆಯೇ ಬದುಕು’ ಕೃತಿಯ ಕುರಿತು ಶೋಭಾ ಮೂರ್ತಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಪುಸ್ತಕ : ಭರವಸೆಯೇ ಬದುಕು
ಲೇಖಕರು : ಶ್ವೇತಾ ಭಿಡೆ
ಪುಟ : ೧೬೦
ಬೆಲೆ : ೨೨೫
ಪ್ರಕಾಶನ : ಸಾವಣ್ಣ ಪ್ರಕಾಶನ

ಮಾಮ್ಸ್ಪ್ರೆಸ್ಸೊ ಸಂಪಾದಕಿಯಾಗಿದ್ದ ಶ್ವೇತಾ ಭಿಡೆಯವರು ನನಗೆ ಬಹಳ ಆತ್ಮೀಯರು. ಒಂದು ಕುಟುಂಬದ ರೀತಿಯಲ್ಲಿ ಅವರು ವೇದಿಕೆಯನ್ನು ನಡೆಸುತ್ತಿದ್ದ ಪರಿ ಅನನ್ಯ. ಅವರ ಮೊದಲ ಪುಸ್ತಕ ‘ಚಿಂತೆ ಬಿಡಿ chill ಮಾಡಿ’ ಯ ಯಶಸ್ಸಿನ ಬಳಿಕ ಬರೆದ ಎರಡನೇ ಪುಸ್ತಕ ‘ಭರವಸೆಯೇ ಬದುಕು’ ೫೫ ಪುಟ್ಟ ಪುಟ್ಟ ಲೇಖನಗಳಲ್ಲಿ ಭರವಸೆಯ ಬೆಳಕಿಂಡಿಗಳಿವೆ. ಈ ಲೇಖನಗಳು ಚಿಕ್ಕವೇ ಆದರೂ ಹೇಳುವ ವಿಷಯ ಬಹಳ ದೊಡ್ಡವು. ಬುದುಕು ಭಾರವೆನಿಸಿ, ಧಗೆಯಲ್ಲಿ ಬೇಯುವಂತಾದಾಗ ಇಲ್ಲಿಯ ಯಾವುದಾದರೊಂದೆರಡು ಪುಟಗಳ ಮೇಲೆ ಕಣ್ಣಾಡಿಸಿದರೆ ಹಿತವಾದ ತಂಗಾಳಿ ಬೀಸಿದ ಅನುಭವವಾಗುವುದು ಸತ್ಯ.

ಹಾಗೆಂದು ಅತ್ಯಂತ ಗಹನವಾದ ವಿಷಯವನ್ನೇನು ಇವರು ಚರ್ಚಿಸುವುದಿಲ್ಲ. ಅಥವಾ ಇಂಥ ಸಮಸ್ಯೆಗೆ ಇಂತಿಂತಹ ಪರಿಹಾರವೆಂದು ಇವರು ಸೂಚಿಸುವುದೂ ಇಲ್ಲ. ಸಮಸ್ಯೆ ಉದ್ಭವಿಸುವುದು ನಮ್ಮಲ್ಲಿ ಅಥವಾ ನಾವು ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಮತ್ತು ಪರಿಹಾರವೂ ಅದರ ಬುಡದಲ್ಲೇ ಇದೆ ನೋಡಿ ಎಂದು ಹೇಳುತ್ತಾರಷ್ಟೇ. ನಿಜವೇ…ನಮ್ಮ ಸಮಸ್ಯೆಗಳಿಗೆ ಇನ್ಯಾರತ್ತಲೋ ಬೆಟ್ಟು ತೋರಿಸುವ ನಮಗೆ, ಅದಕ್ಕೆ ಅವಕಾಶ ಕಲ್ಪಿಸಿಕೊಟ್ಟವರು ನಾವೇ ಎನ್ನುವುದನ್ನು ಮರೆತು ಬಿಡುತ್ತೇವೆ.

* ಮೊದಲ ಲೇಖನದಲ್ಲಿ ಪುಣ್ಯಕೋಟಿ ಕಥೆಯನ್ನು ಪ್ರಸ್ತಾಪಿಸುತ್ತ ಬೀಸುವ ದೊಣ್ಣೆ ತಪ್ಪಿದರೆ ನೂರು ವರ್ಷ ಆಯಸ್ಸು ಎನ್ನುವಂತೆ ಎದುರಾದ ಪ್ರತಿಕೂಲ ಸನ್ನಿವೇಶದಿಂದ ಪಾರಾಗುವ ಪುಣ್ಯಕೋಟಿ ಆಗುವಿರಾ? ಅಥವಾ ದೊರೆಯುವ ಅವಕಾಶವನ್ನು ಆತ್ಮಾವಲೋಕನಕ್ಕೆ ಬಳಸಿಕೊಂಡು ಕಲ್ಮಶವನ್ನು ಕಳೆದು ನಿರ್ಮಲರಾಗುವಿರಾ? ಆಯ್ಕೆಯನ್ನು ಮುಂದಿಡುತ್ತಾರೆ.

* ಸದಾ ವ್ಯವಸ್ಥೆಯನ್ನು ದೂರುತ್ತಾ ಕೂತು ಸಮಯ ವ್ಯರ್ಥ ಮಾಡುವ ಬದಲು, ಇನ್ನೂ ಕೆಳಮಟ್ಟದ ಬದುಕನ್ನು ಸಹಜವೆಂಬಂತೆ ಅನುಭವಿಸುತ್ತ ಖುಶಿಯಾಗಿರುವವರನ್ನು ನೋಡಿ ಎನ್ನುತ್ತಾರೆ.

* ಕನ್ನಡಿಯ ಮೇಲೆ ಕೂತ ಧೂಳಿನಂತೆ ಮನಸ್ಸಿನಲ್ಲಿ ಮನೆಮಾಡುವ ನೆಪಗಳನ್ನು ಝಾಢಿಸಿ ಕೊಡವಿದರೆ ಅಸ್ಪಷ್ಟವಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ಯಾವುದೆನ್ನುವಿರಿ? ನಮ್ಮದೇ ಮನಸ್ಸು. ಪವಾಡಗಳು ಮಾಡುವುದು ದೇವರಲ್ಲ, ಸ್ವತಃ ನಾವೇ, ನಮ್ಮದೇ ಮನಃಸ್ಥಿತಿ!

* ಬದುಕಿಗೆ ಶತ್ರುಗಳು ಬೇಕು ಎನ್ನುವ ನಿಲುವಿನಲ್ಲಿ ಸ್ಪಷ್ಟತೆಯಿದೆ. ನಿಂದಕರಿರಬೇಕು, ಹಂದಿಗಳ ಹಾಗೆ.’ ದಾಸವಾಣಿಯನ್ನು ಅನುಮೋದಿಸುತ್ತ… ನಮ್ಮನ್ನೇ ಗಮನಿಸುವ ಶತ್ರುಗಳ ಬಗ್ಗೆ ಚಿಂತಿಸುವುದಕ್ಕಿಂತ…ನಮ್ಮ ಗುರಿಯೆಡೆಗೆ ಗಮನವಿಟ್ಟು, ಪ್ರಯತ್ನವನ್ನು ಗುಟ್ಟಾಗಿಟ್ಟು ಯಶಸ್ಸಿನ ಮೆಟ್ಟಿಲೇರಬೇಕು. ಒಂದು ಹಂತದವರೆಗಷ್ಟೇ ಶತ್ರುಗಳ ಕ್ರೂರದೃಷ್ಟಿಗೆ ಆಹಾರವಾಗುವ ನಾವು, ಒಂದು ಹಂತ ದಾಟಿದಮೇಲೆ ಅವರಿಂದೇನೂ ಅಪಾಯವಿರುವುದಿಲ್ಲ. ಆದರೂ ಅಕಾರಣವಾಗಿ ನಮ್ಮನ್ನು ದ್ವೇಷಿಸುವವರಿಂದ ದೂರವಿರುವುದೇ ಉತ್ತಮ.

* ಕ್ಷಣಿಕ ಜೀವನದ ಆಸ್ವಾದಿಸುವುದನ್ನು ಬಿಟ್ಟು ಹಗೆ, ದ್ವೇಷ, ಸಿಟ್ಟು, ಅಸೂಯೆಗಳಿಂದ ಬದುಕು ಭಾರವಾಗಿಸಿಕೊಂಡು ಹಾರಲಾರದ ಹಕ್ಕಿಯಾಗುವುದಕ್ಕಿಂತ..ಒಮ್ಮೆ ಮನಸ್ಸಿನಿಂದ ಎಲ್ಲವನ್ನು ಕಿತ್ತೆಸೆದು ಹಗುರಾದ ರಕ್ಕೆಗಳನ್ನು ಹರಡಿ ಬಾನಾಡಿಗಳಾಗಿ ಹಾರಿ.

* “ಅಸ್ತು ದೇವತೆಗಳಿದ್ದಾರೆ ಜಾಗ್ರತೆ!” ಎನ್ನುತ್ತಿದ್ದರು ಹಿರಿಯರು. ಇದರರ್ಥ…ಯಾವಾಗಲೂ ಸಕಾರಾತ್ಮಕವಾಗಿ ಆಲೋಚಿಸಿ ಎನ್ನುವುದಷ್ಟೇ ವಿನಃ ಕೆಟ್ಟದ್ದನ್ನೇ ನೆನೆಯುತ್ತ, ನಕಾರಾತ್ಮಕವಾಗಿ ಚಿಂತಿಸುವ ಮನಸ್ಸಿನಲ್ಲಿ ಹುಟ್ಟುವುದು ಅದೇ ಕೆಟ್ಟ ಆಲೋಚನೆಗಳು ಮತ್ತು ಆಗುವುದೂ ಕೆಟ್ಟ ಸಂಗತಿಗಳೆ. ಸಕಾರಾತ್ಮಕವಾಗಿ ಬರುವ ವಿಷಯಗಳನ್ನು ನಗುತ್ತಾ ಸ್ವೀಕರಿಸುವ ರೀತಿಯಲ್ಲಿಯೇ ನಕಾರಾತ್ಮಕ ವಿಷಯಗಳನ್ನು ಸಹ ನಗುತ್ತಾ ದೂರವಿರಿಸಬೇಕು.

* ಅನ್ಯರಿಂದ ನಿಮಗೆ ಧನಾತ್ಮಕ ಬೆಂಬಲ ದೊರೆಯದಿದ್ದಾಗ ಅದನ್ನು ಅವರಿಂದ ಪಡೆಯಲೇಬೇಕೆಂಬ ಒತ್ತಾಯದ ನಿರೀಕ್ಷೆ ಬೇಡ ; ನಿಮಗೆ ನೀವೇ ಬೆಂಬಲವಾಗಬೇಕು. ನಿಮ್ಮ ಖುಶಿಯನ್ನು ನೀವೇ ಕಂಡುಕೊಳ್ಳಿ.

* ಎಲ್ಲಿಯೋ ಜರುಗಿದ ಕೆಟ್ಟ ಘಟನೆಯನ್ನು ನಿಮ್ಮ ಜೀವನದ ಜಿತೆಗೆ ಸಮೀಕರಿಸಿ ‘ನನಗೂ ಹಾಗೆಯೇ ಆದರೆ!’ ಕಲ್ಪನೆಯಲ್ಲಿಯೇ ಕೊರಗದಿರಿ. ಬೆಳಿಗ್ಗೆ ಎದ್ದಾಗ ಮತ್ತು ಮಲಗುವ ಮುನ್ನ ಕೇವಲ ಐದೇ ಒಳ್ಳೆಯ ಸಂಗತಿಗಳನ್ನು ಮನನ ಮಾಡಿ ಅಥವಾ ಬರೆದಿಡಿ. ಆಗ ನಕಾರಾತ್ಮಕ ಆಲೋಚನೆ, ಕಲ್ಪನೆ, ಭಯ ಎಲ್ಲವೂ ಮಾಯವಾಗುತ್ತವೆ! ಎಂಥ ಒಳ್ಳೆಯ ಆಲೋಚನೆಯಲ್ಲವೇ?

* ಏನೇನೊ ಸಾಧಿಸಿದ ನೀವು ಸಾಧಿಸಿದ ಹೆಮ್ಮೆಯಲ್ಲಿರುವಾಗಲೇ…ಅದೇ ಕ್ಚಮಷೇತ್ರದಲ್ಲಿ ಹೊಸದಾಗಿ ಕಾಲಿಟ್ಟವರು ಬಹುಬೇಗನೇ ಖ್ಯಾತಿ ಗಳಿಸಿದಾಗ ಕುರುಬದಿರಿ. ಅದರಿಂದ ಹತಾಶೆ, ನೋವನ್ನು ನಿಮ್ಮದಾಗಿಸಿಕೊಳ್ಳುವುದನ್ನು ಬಿಟ್ಟು ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿ. ಆಗ ಮತ್ತೆ ನಿಮ್ಮ ಬದುಕು ಸುಂದರವಾಗುತ್ತದೆ.

* ಜೀವನದ ಯಾವುದೋ ಒಂದು ಹಂತದಲ್ಲಿ ಸೋತವರು ‘ಒಳ್ಳೆಯತನಕ್ಕೆ ಬೆಲೆಯಿಲ್ಲ, ಸತ್ಯವಂತರಿಗಿದು ಕಾಲವಲ್ಲ’ ಎಂದು ಹತಾಶರಾಗಿ ಕೂತುಬಿಡುತ್ತಾರೆ. ಅವರ ಮುಂದೆಯೇ ಮೋಸ, ವಂಚನೆಗಳಿಂದ ಬದುಕನ್ನು ಸಂಭ್ರಮಿಸುವವರನ್ನು ಕಂಡಾಗ ಹಾಗೆನಿಸುವುದು ಸಹಜ. ಆದರೆ ಹಾಗೆಂದು ನಿಮ್ಮ ಪ್ರಯತ್ನವನ್ನು ಮುಂದುವರೆಸದೇ ಕುಳಿತರೆ ನಿಮ್ಮ ಸಾಧನೆ ಹೇಗಾಗುತ್ತದೆ? ತಡವಾಗಿಯಾದರೂ ಪ್ರಾಮಾಣಿಕ ಪ್ರಯತ್ನಕ್ಕೆ ಫಲ ಸಿಕ್ಕೇಸಿಗುತ್ತದೆ. ಅಡ್ಡದಾರಿಗಳಿಂದ ಸಾಧಿಸಿದ ಯಶಸ್ಸಿಗೆ ಆಯಸ್ಸು ಕಡಿಮೆ. ಆದರೆ ಕಾದು ಸಿಗುವ ಫಲಿತಾಂಶಕ್ಕೆ ಬೆಲೆಯೂ ಬಹಳ ಮತ್ತದು ಬಹುಕಾಲ ಉಳಿಯುತ್ತದೆ. ಪ್ರಯತ್ನದಲ್ಲಿ ನಂಬಿಕೆ ಇರಲಿ.

* ಯಾರನ್ನಾದರೂ ಅತಿಯಾಗಿ ಹಚ್ಚಿಕೊಂಡು ಅವರಲ್ಲಿ ನಂಬಿಕೆ ಇಟ್ಟವರಿಗೆ ಅದೇ ವ್ಯಕ್ತಿ ಹಿಂದಿನಿಂದ ಲೇವಡಿ ಮಾಡುವುದೋ, ವ್ಯಕ್ತಿತ್ವದ ಬಗ್ಗೆ ಹಗುರವಾಗಿ ಮಾತಾಡುವುದೋ ಮಾಡಿದ್ದು ಗೊತ್ತಾದಾಗ ಮನಸ್ಸಿಗೆ ಹೇಗಾಗಬೇಡ! ಇಂಥವರ ಬಗ್ಗೆ ಗೊತ್ತಾದ ಕೂಡಲೇ ಅವರಿಂದ ದೂರವಿರುವುದು ಒಳಿತು. ಇಂಥ ತೋರಿಕೆಯ ಹತ್ತು ಜನರಿಗಿಂತ, ಇಂಥವರೊಬ್ಬರಿದ್ದರೆ ಸಾಕು ಎನ್ನುವಂತೆ ನೈಜ ಪ್ರೀತಿ ಇರುವವರನ್ನು ನಂಬಿ. ಉಪ್ಪು ಅಡುಗೆಗೆ ಬೇಕೇಬೇಕು. ಆದರೆ ಉಪ್ಪು ಹೆಚ್ಚಾಗಿ ಬಳಸಿ ಅಥವಾ ಕುಡಿಯುವ ನೀರಿಗೂ ಉಪ್ಪು ಹಾಕಿಕೊಂಡು ಕುಡಿಯಲು ಸಾಧ್ಯವಿಲ್ಲ.

ಇಂತಹ ಇನ್ನೂ ಉತ್ತಮ ನುಡಿಗಳ ಸಂಗ್ರಹವೇ ಈ ಪುಸ್ತಕ. ಕಳೆದ ವರ್ಷ ಶ್ವೇತಾರವರ ಈ ಪುಸ್ತಕ ಬಿಡುಗಡೆಯ ಸಮಾರಂಭದ ಪ್ರೀತಿಯ ಆಹ್ವಾನಕ್ಕೆ ತಲೆಬಾಗಿ ಸಮಾರಂಭಕ್ಕೆ ಹೋದ ನನಗೆ ಅಚ್ಚರಿ ಕಾದಿತ್ತು. ಅವರ ಕುಟುಂಬದವರ ಉಪಸ್ಥಿತಿಯಲ್ಲಿ..ನನ್ನನ್ನು ವೇದಿಕೆಗೆ ಕರೆದು ಪುಸ್ತಕದ ಮೊದಲ ಪ್ರತಿಯನ್ನು ಶ್ರೀ ಜಮೀಲ್ ಸಾವಣ್ಣರವರು ಮತ್ತು ಶ್ರೀ ಜೋಗಿಯವರು ನನಗೆ ನೀಡುವುದರ ಮೂಲಕ ಬಿಡುಗಡೆ ಮಾಡಿದಾಗ ಅಕ್ಷರಶಃ ಮೂಕಳಾಗಿದ್ದೆ.

ಅಂದಿನಿಂದಲೂ ಆಗಾಗ ಒಂದೊಂದೇ ಲೇಖನವನ್ನೋದುತ್ತಿದ್ದರೂ ಪರಿಚಯ‌ ಲೇಖನವನ್ನು ಬರೆದಿರಲಿಲ್ಲ. ‘ನನ್ನ ಇಷ್ಟದ ಪುಸ್ತಕ’ದ ಇಂದಿನ ಅಭಿಯಾನಕ್ಕಾಗಿ ಇದೇ ಪುಸ್ತಕವನ್ನು ಆರಿಸಿಕೊಂಡಿದ್ದು ನನ್ನ ಮನಸ್ಸಿನ ಸಂತೋಷಕ್ಕಾಗಿ. ಶ್ವೇತಾ ಭಿಡೆಯವರಿಂದ ಇನ್ನೂ ಹೆಚ್ಚು ಉತ್ತಮ ಕೃತಿಗಳು ಪ್ರಕಟಗೊಳ್ಳಲಿ ಎಂದು ಹಾರೈಸುತ್ತೇನೆ.


  • ಶೋಭಾ ಮೂರ್ತಿ

 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW