“ಧನ್ವಂತರಿ” ಮಂತ್ರದ ಶಕ್ತಿ

ನಮಗೆ ಮಾನಸಿಕ, ದೈಹಿಕ ರೋಗದಿಂದ ಗೊಂದಲ ಉಂಟಾದಲ್ಲಿ “ಧನ್ವಂತರಿ”ನಾಮಕ ದೇವರನ್ನು ಸ್ತುತಿಸಬೇಕು. ಧನ್ವಂತರಿ ನಾಮಕ ಪರಮಾತ್ಮನ ಕರುಣೆಯ ಸ್ವರೂಪ. ಸ್ತುತಿಸುವದರಲ್ಲಿ ಎರಡು ವಿಧ. ತಪ್ಪದೆ ಮುಂದೆ ಓದಿ ಸಂಧ್ಯಾ ಟಿ ಅವರ ಲೇಖನ…

ಹುಟ್ಟಿಸಿದ ದೇವರು ಹುಲ್ಲು ಕೊಡದೆ ಇರುವನೇ? ಇದು ಹಿರಿಯರ ಅನುಭವದ ಮಾತು. ಪರಮಾತ್ಮನು ನಮಗೆ ಎಲ್ಲವನ್ನೂ ಕೊಟ್ಟು ಸಾಧನೆಗಾಗಿ ಭೂಮಿಗೆ ಕಳಿಸಿದ್ದಾನೆ. ಉಪಯೋಗಿಸುವುದು ಅವರವರ ಯೋಗ್ಯತೆಗೆ ಅನುಗುಣವಾಗಿ. ಇದರಂತೆ ಸುಖ ದುಃಖಗಳನ್ನು ಕೊಟ್ಟು ಜೊತೆಗೆ ಪರಿಹಾರವನ್ನು ಸೂಚಿಸಿದ್ದಾನೆ. ಅವುಗಳಲ್ಲಿ ನಂಬಿಕೆ , ವಿಶ್ವಾಸ ಇಟ್ಟು ಆಚರಿಸಬೇಕು.

ಅಕ್ಷರಗಳು ಎಂದೂ ಕ್ಷರವಾಗುವುದಲ್ಲ. ಈ ಅಕ್ಷರಗಳಿಂದಲೆ ನಮ್ಮ ಬದುಕು ಸಾಗುತ್ತದೆ. ಆಹಾರವು ದೇಹದ ಬೆಳವಣಿಗೆಗೆ, ಆದರೆ ಅಕ್ಷರಗಳು ಜ್ಞಾನದ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಪೌಷ್ಟಿಕ, ಸಾತ್ವಿಕ ಆಹಾರ ಬೇಕು. ಅದರಲ್ಲಿ ಹುಳಿ, ಖಾರ, ಸಿಹಿ ಎಲ್ಲವು ಬೇಕು. ಆದರೆ ಸಮತೋಲನವಾಗಿರಬೇಕು. ವಯಸ್ಸಿಗೆ, ಸಮಯಕ್ಕೆ ಸರಿಯಾಗಿ ಸ್ವೀಕರಿಸಬೇಕು. ಹಾಗೆಯೇ ಅಕ್ಷರಗಳಲ್ಲಿಯ ಶಕ್ತಿ, ಬಲ ವಿನಯ ತಿಳಿದು ಉಪಯೋಗಿಸಿದರೆ ಜ್ಞಾನ ಸಿಗುವುದು. ಈ ಎರಡು ನುಡಿಗಳು ಹಿರಿಯರ ಗುರುಗಳ ಜ್ಞಾನಿಗಳ ನುಡಿಗಳು ನಾವು ಇವುಗಳನ್ನು ಅನುಸರಿಸ ಬೇಕು.

ವರ್ಣಾಕ್ಷರಗಳಲ್ಲಿ ಸ್ವರಗಳಲ್ಲಿ ಏಳನೇ ಅಕ್ಷರವಾದ “ಋ” ಋಣಾತ್ಮಕವಾದದ್ದು.”ಅಂ” ಇದು ಬಿಂದು ಎನಿಸುವದು.”ಆ:” ಇದು ವಿಸರ್ಗ ಎನಿಸುವುದು. ಈ ಎರಡು ಅಕ್ಷರಗಳು ಯೋಗವಾಹಗಳು ಅಂದರೆ ಜೊತೆಗೂಡಿ ಹೋಗುವುದು ಎಂದು ಅರ್ಥ. ವ್ಯಂಜನಗಳಲ್ಲಿ ಕೊನೆಯ “ಕ್ಷ, ಜ್ಞ” ಇವೆರಡು ಸಂಯುಕ್ತಾಕ್ಷರಗಳೆನಿಸಿವೆ. ಇದು ಆಶ್ಚರ್ಯ ಎನಿಸಿದರೂ ಸತ್ಯ ಅಲ್ವಾ. ಈ ಐವತ್ತೊಂದು ಅಕ್ಷರಗಳಿಂದ ಎಷ್ಟು ಶಬ್ದಗಳು, ಎಷ್ಟು ಅರ್ಥಗಳು ಹೊರ ಬರುವವು ಯೋಚಿಸಿ. ಅವುಗಳೆಲ್ಲವು ಒಂದು ವಿಶಿಷ್ಟವಾದ ಋಣಾತ್ಮಕವಾದ ಯೋಗ ಅದನ್ನು ಸುಯುಕ್ತಿಯಿಂದ ಪರಿಪಾಲಿಸಿದರೆ ಅಕ್ಷರಗಳು ಎಂಜಲವೆನಿಸದೆ ಶುದ್ಧವಾಗಿ ಸಂಯುಕ್ತದಿಂದ ಯಾರು ಅಕ್ಷರಗಳ ಸೂತ್ರಧಾರರೋ ಅವರಿಗೆ ನಮ್ಮ ಶಬ್ದಗಳು ಪ್ರಾರ್ಥನೆಯಾಗಿ ಸಲ್ಲುತ್ತದೆ. ಸೂತ್ರಧಾರಿಯ ಅನುಗ್ರಹದಿಂದ ಜ್ಞಾನ ಮಾರ್ಗ ಕಾಣಿಸುವುದು. ವಿಶಿಷ್ಟವಾದುದ್ದನ್ನು ಪರಮಾತ್ಮನಲ್ಲಿ ವಿಶ್ವಾಸದಿಂದ ಕೇಳಿಕೊಳ್ಳುವುದೆ ಪ್ರಾರ್ಥನೆ. ಯೋಗ್ಯವಾದ ಸಾತ್ವಿಕವಾದದ್ದನ್ನೆ ನಾವು ಪರಮಾತ್ಮನಿಗೆ ಸಮರ್ಪಿಸಿ ಫಲ ಪಡೆಯುವದೆ ಅಕ್ಷರ ಸಮೂಹಗಳಿಂದ. ಹೀಗೆ ಪರಮಾತ್ಮನ ಅನುಸಂಧಾನ ಪೂರ್ವಕ ಕರ್ಮಗಳ ಮಾಡಿ ಜೀವನ ಸಾರ್ಥಕಗೊಳಿಸಬೇಕೆಂಬುದೆ ಗುರುಗಳ ಸಂದೇಶ.

ಜೀವ ಶಕ್ತಿ ಇದು ಸೂಕ್ಷ್ಮ ದೇಹ. ಲಿಂಗದೇಹ ಇದು ವಿಚಾರ ವಿನಿಮಯ ಮಾಡುವುದು. ಅನಿರುದ್ಧ ದೇಹ ಜಯ ಕೊಡುವ ದೇಹ ಕಾಣುವ ದೇಹವು ಸ್ಥೂಲದೇಹ. ವರ್ಣಾಕ್ಷರಗಳಿಂದ ವೇದ್ಯನಾದ ಶ್ರೀಹರಿಯು ನಾಲ್ಕು ದೇಹಗಳ ತುಂಬಾ ವ್ಯಾಪಿಸಿದ್ದು, ಫಲ ನೀಡಿ ಸಂರಕ್ಷಿಸುವನು ಎಂಬ ಅನುಸಂಧಾನ ನಮ್ಮದಾಗಬೇಕು.

ನಮಗೆ ಮಾನಸಿಕ, ದೈಹಿಕ ರೋಗದಿಂದ ಗೊಂದಲ ಉಂಟಾದಲ್ಲಿ “ಧನ್ವಂತರಿ” ನಾಮಕ ದೇವರನ್ನು ಸ್ತುತಿ ಸಬೇಕು. ಅಮೃತವೆನಿಸಿದ ಧನಾತ್ಮಕ ಗಣಿಯನ್ನಿಟ್ಟು ನಕಾರಾತ್ಮಕದಿಂದ ರಕ್ಷಿಸುವನು. ಇದು ಧನ್ವಂತರಿ ನಾಮಕ ಪರಮಾತ್ಮನ ಕರುಣೆಯ ಸ್ವರೂಪ. ಸ್ತುತಿಸುವದರಲ್ಲಿ ಎರಡು ವಿಧ. ಎರಡು ಹಸ್ತ ಜೋಡಿಸಿ ಮಂತ್ರ ಜಪಮಾಡಿ ಆ ಹಸ್ತಗಳಲ್ಲಿ ಶ್ವಾಸ ಊದಿ ಹಸ್ತಗಳಿಂದ ತಲೆ, ಭುಜ ಮುಖ ಗಳಿಗೆ ಸ್ಪರ್ಶಿಸಿಕೊಳ್ಳುವದು.

ಎರಡನೇಯದು ಚಿಕ್ಕ ಬಟ್ಟಲಗಳಲ್ಲಿ ನೀರನ್ನು ತೆಗೆದುಕೊಂಡು ಹಸ್ತಗಳಿಂದ ಮೇಲೆ ಕೆಳಗೆ ಮುಚ್ಚಿ ಮಂತ್ರ ಜಪಿಸಿ ಆಮೇಲೆ ಮೇಲಿನ ಹಸ್ತ ತೆಗೆದು ನೀರಿಗೆ ಶ್ವಾಸ ಊದಿ ಆ ನೀರನ್ನು ಕುಡಿಯುವುದು. ಹೀಗೆ ಅಭಿಮಂತ್ರಿಸಿದರೆ ರೋಗದ ಮೂಲ ಪರಿಹಾರ ಆಗುವುದು.  ಮಂತ್ರವನ್ನು ಭಕ್ತಿ, ಶ್ರದ್ಧೆಯಿಂದ ಜಪಿಸಬೇಕು.

(ಮಂತ್ರ)

ಅಚ್ಯುತಾನಂತ ಗೋವಿಂದ ಸ್ಮೃತಿ ಮಾತ್ರಾರ್ತಿ ನಾಶನ:/
ರೋಗಾನ್ಮೇ ನಾಶ ಯಾ ಶೇಷಾನ್ ಅಶು ಧನ್ವಂತರೇ ಹರಿ://

ದೋಷ ದೂರನಾದ, ಸರ್ವೋತ್ತಮನಾದ ಅಚ್ಯುತ, ಸರ್ವವ್ಯಾಪ್ತನಾದ ಅಪರಿಮಿತನಾದ ಅನಂತಾ, ಜ್ಞಾನ ಸಂಪತ್ತಿಗೆ ಒಡೆಯಳಾದ ಮಹಾಲಕ್ಷ್ಮೀಯಿಂದ ಸೇವಿಪನಾದ ಗೋವಿಂದ ಆದಿ ದೈವಿಕ, ಆದಿ ಭೌತಿಕ, ಅಧ್ಯಾತ್ಮಿಕ ಈ ಮೂರು ತಾಪತ್ರಯಗಳಿಂದ ರಕ್ಷಿಸು ನಿನ್ನಲ್ಲಿ ಮನಸ್ಸು ನಿಲ್ಲುವಂತೆ ಮಾಡು ಶ್ರೀ ಹರಿ.

ಮೃತ್ಯು ಎಂದರೆ ಅಧ್ಯಾತ್ಮಿಕದಲ್ಲಿ ಸಾವಿನ ಶಯ್ಯೆಯಲ್ಲಿ ಇರುವಂತಹ ತಾಪತ್ರಯಗಳು.ಅಂದರೆ ದೇಹ ಸಹಕರಿಸುವದನ್ನು ನಿಲ್ಲಿಸಿದಾಗ,ಚೇತರಿಕೆಯ ಯಾವ ಸಾಧ್ಯತೆಯಿಲ್ಲದಾಗ ಮೃತ್ಯುಂಜಯನನ್ನು ಸ್ತುತಿಸಬೇಕು.ಮರಣವು ಸಹಜವಾದ ಅನವಾರ್ಯವಾದ ಕ್ರಿಯೆಯಾಗಿರುವದು.ಇದು ಒಂದು ಮಿತಿಯುಳ್ಳ ವ್ಯವಸ್ಥೆ.ಅದರಲ್ಲಿ ವಿಶಿಷ್ಟವಾದ ಪ್ರಮಾಣದ ಜೀವಶಕ್ತಿ ಇರುವುದು.ಇದು ಸೂಕ್ಷ್ಮ ದೇಹ ವಾಗಿರುತ್ತದೆ.ಇದು ಮನಸ್ಸು, ಬುದ್ಧಿ, ಸ್ಮೃತಿ ಚೇತನದಿಂದ ಕೂಡಿರುವದು.ಸೂಕ್ಷ್ಮ ದೇಹವೇ ಜೀವ ಶಕ್ತಿಗೆ ದ್ವಾರ.ಆತ್ಮವೆನ್ನುವ ಜೀವಶಕ್ತಿಗೆ ಮುಂದಿನ ಪಯಣಕ್ಕಾಗಿ ದ್ವಾರವನ್ನು ತೆಗೆಯುವ ಕೀ ಅನಂತನಾದ ಸ್ವತಂತ್ರನಾದ ಪರಮಾತ್ಮನದು.ಮನದ ಚ್ಯುತಿ ಏನಿದ್ದರೂ ಅದನ್ನು ಪರಿಹರಿಸಿ ಮೃತ್ಯು ಭಯದಿಂದ ಪಾರುಮಾಡು.ಎಂದು ಶಿವನನ್ನು ಭಕ್ತಿಯಿಂದ ವಿಶ್ವಾಸದಿಂದ ಪ್ರಾರ್ಥಿಸುತ್ತೇನೆ.ಎಂದು ಅನುಸಂಧಾನದಿಂದ ಮಂತ್ರವನ್ನು ಒಮ್ಮೆ ನೋಡಿ ಕಾಗದದಲ್ಲಿ ಬರೆದು ಮಡಿಚಿ ಮರಣಶಯ್ಯೆಯಲ್ಲಿದ್ದವರ ತಲೆಯ ಹತ್ತಿರ ಇಡಬೇಕು.

ಮೃತ್ಯುಂಜಯ ಮಂತ್ರ

ಓಂ ತ್ರ್ಯಂಬಕಂ ಯಜಾಮಹೇ/ಸುಗಂಧಿಂ ಪುಷ್ಟಿವರ್ಧನಂ//
ಉರ್ವಾರುಕಮಿವ ಬಂಧನಾನ್ಮೃರ್ತ್ಯೋ_/ರ್ಮುಕ್ಷೀಯ ಮಾಮೃತಾತ್//
ಓಂ ಮೃತ್ಯುಂಜಯ ನಮಃ
ಶ್ರೀ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ಪ್ರೀತ್ಯರ್ಥ ಶ್ರೀ ಕೃಷ್ಣಾರ್ಪಣ ಮಸ್ತು.

ಕರ್ಮ ಶೇಷ
ಪರಮಾತ್ಮನ ಶಯ್ಯೆಯೆ ಆದಿಶೇಷ
ಜೀವಾತ್ಮನ ಶಯ್ಯೆಯೆ ಕರ್ಮಶೇಷ
ಸತ್ಯ ಕರ್ಮಗಳ ಸಂಹಿತೆಯ ಸಂಬಂಧ
ನಿತ್ಯ ನೂತನ ಪರಿಮಿತಾನುಬಂಧ
ಪ್ರೀತಿ ನೀತಿ ಸಂಬಂಧದ ಕುರುಹು
ಭಕ್ತಿ ಶ್ರದ್ಧೆ ಬೇಕದಕೆ ಗುರುವು
ನುಡಿ ಶ್ರವಣ ಅಗ್ನಿ ಜಲ ಸಂಬಂಧ
ನಡೆ ನೀತಿ ತೀರ್ಥಯಾತ್ರೆ ಸಂಬಂಧ
ಶಾಸ್ತ್ರ ಬದ್ಧ ಯೋಚನೆ ಧ್ಯಾನ
ಅರ್ಥ ಬದ್ಧ ಕಾರ್ಯ ಮಾನ್ಯ
ಸಾರ್ಥಕ ಪರಸುಖ ಮಹಾ ಪುಣ್ಯ
ಅಸ್ತ್ರವೇ ಕಾಣೋ ಅಶುಭ ಶೂನ್ಯ


  • ಸಂಧ್ಯಾ ಟಿ – ಕವಿ, ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading