ನಾವೇಕೆ ಕಳೆದುಕೊಳ್ಳುತ್ತೇವೆ ದೊಡ್ಡವರಾದಂತೆ ಇಂತಹ ಸಣ್ಣ ಸಣ್ಣ ಖುಷಿಯ ಖಜಾನೆಯ..?…ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಚದುರಿವೆ ಬಣ್ಣಬಣ್ಣದ
ಹೊಳೆಯುವ ಬ್ಯಾಗಡೆಗಳ ಚೂರುಗಳು
ನೆಲದ ಮೇಲೆ
ಯಾವುದೋ
ಸಂಭ್ರಮದ ಕತೆಯ ಹೇಳುತ್ತಾ….
ಮಗುವೊಂದು ಕಂಡ ಕನಸಿನ
ಬಣ್ಣದ ಚಿತ್ತಾರ ಚದುರಿದಂತೆ
ಯಾವುದೀ ಆಚರಣೆ…
ಈಡೇರದ ಕನಸುಗಳ
ಛಿದ್ರ ಸ್ವರೂಪವೇ…
ಅರಕೆಗಳಿಗೆ ನ್ಯಾಯವೊದಗಿಸುವ ತುಡಿತದಿ ಒಸರಿದ ಚಿಲುಮೆಯೇ…
ಅಥವಾ ಸವಿದ ಪ್ರೀತಿಯ ಸುಧಾವಾಹಿನಿಗೆ ಹರಿಯಬಿಟ್ಟ
ವಾಸ್ತವದ ಕನಸುಗಳ ತೇಲುದೋಣಿಗಳೇ…
ತನ್ನವರ ಒಡಗೂಡಿ
ಖುಷಿಯೂಡಿ ಕ್ಷಣಕೆ
ಎದೆಯಂಗಳದಲ್ಲಿ ಬರೆದ
ಚೆಲುವಿನ ಚಿತ್ತಾರವೇ…
ಹೇಗೆ ಗುಡಿಸಿ ಬಿಡಲಿ ಕಂದಾ
ನೂರು ನಿರೀಕ್ಷೆಗಳಿಗೆ
ಗಾಳ ಹಾಕಿ
ಹಿಡಿದು ಮಿಡಿದ ಭಾವಗಳ
ರಂಗವಲ್ಲಿಯ..
ಈಗ ತ್ಯಾಜ್ಯವಾದಂತೆ ಕಂಡರೂ
ಪೂಜ್ಯವೆನಿಸುವ ಸಂಸ್ಕಾರದ ಪ್ರತೀಕವಾದ ಈ ಹರುಷದ ಆಚರಣೆಯ ಕೊಡುಗೆಯ
ನೆಲದೊಂದಿಗೆ ಹೃದಯದಲೂ ರಂಗಾಗಿ ಉಳಿದ ಹಸುಳೆತನದ
ನಿರಂತರ ವ್ಯಾಖ್ಯಾನವ
ನಾವೇಕೆ ಕಳೆದುಕೊಳ್ಳುತ್ತೇವೆ
ದೊಡ್ಡವರಾದಂತೆ ಇಂತಹ
ಸಣ್ಣ ಸಣ್ಣ ಖುಷಿಯ
ಖಜಾನೆಯ..?
- ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕಿ, ಕೊಡಗು
